ಒಳಗೂ ಹೊರಗೂ ‘ಮಲ್ಲಿನಾಥನ ಧ್ಯಾನ’

“ಬೊಗಸೆ ತುಂಬಾ ನೋವ ಹೂವು / ನೆನಪುಗಳು ಬೇಕು ನಡೆಯುವುದ ನಿಲ್ಲಿಸಿ ನಿರಾಳವಾಗಲು./ ಚಿಂತೆಯಾಗಿ, ಚಿತೆಯಾಗಿ ಕಾಡಿ / ಕೊನೇ ಪಕ್ಷ ಸಾವಿಗೆ ಶರಣಾಗಲು.”

 ಇವು `ನೆನಪುಗಳು ಬೇಕು’ ಪದ್ಯದ ಸಾಲುಗಳು. ಇದೇ ರೀತಿಯ ಭಾವತೀವ್ರತೆಯ ದಟ್ಟ ಅನುಭವ, ಜಾತ್ರೆಯ ಮುದಿಮರ, ತಾಲ್ ಸೆ ತಾಲ್ ಮಿಲಾ, ಸಹಾರಾದ ಮರಳು, ಹಳ್ಳಿಯ ಚಿತ್ರಗಳೆಲ್ಲವೂ ಮಲ್ಲಿಕಾರ್ಜುನ ಗೌಡ ತೂಲಹಳ್ಳಿ ಅವರ `ಶರೀಫನ ಬೊಗಸೆ’ಯಲ್ಲಿವೆ. ಇವರ ಕವಿತೆಗಳನ್ನು ಓದುವುದೇ ಖುಷಿ. ಇಲ್ಲಿ ಕಾಣುವ ಆಪ್ತ ಪ್ರತಿಮೆಗಳು ನಮ್ಮನ್ನು ಸೆಳೆಯುತ್ತವೆ. `ಶರೀಫನ ಬೊಗಸೆ’ಯಲ್ಲಿ ಅನೇಕ ಅನುಭವಗಳನ್ನು ತುಂಬಿಕೊಂಡು ಕವಿ ಮನಸ್ಸುಗಳ ಮಧ್ಯೆ ನಿಂತವರು ಮಲ್ಲಿಕಾರ್ಜುನ. ಆ ಬೊಗಸೆ ತುಂಬಾ ನಮ್ಮನ್ನು ಕಾಡುವ ಚಿತ್ರಗಳಿವೆ. ಪಾತ್ರಗಳಿವೆ. ಕಳೆದುಕೊಂಡು ಪಡೆಯುವುದೇ ಹೆಚ್ಚಂತೆ. ಹಾಗಾದರೆ ಈ ಕವಿ ಪಡೆದುಕೊಂಡದ್ದು ಏನು? ಎಂಬ ಪ್ರಶ್ನೆಗೆ ಇವರ ಪ್ರತಿ ಪದ್ಯದ ಸಾಲುಗಳೇ ಉತ್ತರವಾಗಿ ನಿಲ್ಲುತ್ತವೆ. ಕವಿತೆಗಳನ್ನು ಅಕ್ಷರಗಳಲ್ಲಿ ಮೊಗೆಯದೇ, ಅಂತಾರಾತ್ಮದ ಚಿಲುಮೆ ಮುಂದೆ ಬೊಗಸೆ ಒಡ್ಡಿ ನಿಂತಿರುವ ಕಾವ್ಯಧ್ಯಾನ ಅವರ ಕವನಗಳಲ್ಲಿದೆ. ಸದ್ಯ ರಾಣೆಬೆನ್ನೂರು ಸಮೀಪದ ಸುಣಕಲ್ ಬಿದರಿಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮತ್ತೊಂದು ಬೊಗಸೆ ಕವಿತೆಯೊಂದಿಗೆ ಬರುವವರಿದ್ದಾರೆ. ಇದೇ ನೆಪದಲ್ಲಿ ಮಾತಿನ ಮೊಗೆತ..

 

:sOgemane:

 

ನೀವು ಕವಿಯಾಗಿದ್ದು ಹೇಗೆ? ಕವಿತೆಯೊಂದಿಗೆ ಸಂಬಂಧ ಬೆಳೆದದ್ದು ಯಾವಾಗ?

ನಾನು ಪಿಯುಸಿ ಫೇಲಾಗಿ ಮನೆಯಲ್ಲಿದ್ದಾಗ. ಅಣ್ಣ ಬಸವರಾಜ್ ಅಂಗಡಿ ವ್ಯಾಪಾರ ಮಾಡ್ತಾನೇ ಮಾರ್ಕ್ಸ್, ಏಂಗೆಲ್ಸ್, ಷೇಕ್ಸ್ ಪಿಯರ್ ಅಂತೆಲ್ಲಾ ಓದ್ತಾ ಇದ್ದ. ಕಾದಂಬರಿ ಬರೆಯೋದು, ನಾಟಕ ಆಡೋದು ಮಾಡ್ತಿದ್ದ. ಮೊದಲಿನಿಂದಲೂ ಒಂಟಿತನ ಅಂದ್ರೆ ನಂಗಿಷ್ಟ. ಹೊಲ ತಿರುಗೋದು, ಜೀರಂಗಿ ಹಿಡಿಯೋದು, ಮಾಡ್ತಾನೆ ಬೆಳಿತಿದ್ದವನಿಗೆ ಅಣ್ಣನ ಮಾತು, ಚರ್ಚೆ, ಸಾಹಿತ್ಯದ ಪುಸ್ತಕಗಳು ಆಸಕ್ತಿ ಹುಟ್ಟಿಸಿದವು. ಅಷ್ಟೊತ್ತಿಗಾಗಲೇ ಊರಲ್ಲಿ ಗ್ರಾಮಪಂಚಾಯ್ತಿ ರಾಜಕೀಯವಾಗಿ ಬಲವಾಗ್ತಿದ್ದವು. ವ್ಯವಸಾಯ ಮಾಡ್ತಲೇ ರಾಜಕೀಯದಲ್ಲಿ ತಲೆ ಹಾಕುತ್ತಿದ್ದ ಅಪ್ಪ, ಆತನ ಮೂಲಕ ಮನೆ ತನಕ, ಮನದ ತನಕ ನುಗ್ಗಿ ಬರುತ್ತಿದ್ದ ಸಮಸ್ಯೆಗಳು, ಜನರ ಕಷ್ಟಗಳು ನನ್ನನ್ನು ಕಲಕುತ್ತಿದ್ದವು. ಅನ್ಯಾಯಗಳನ್ನು ಪ್ರಶ್ನಿಸಿ, ಅಸಹಾಯಕನಾಗಿ ಒದ್ದಾಡೋದು, ಅವಮಾನ ಅನುಭವಿಸೋದು ಮನೆಯೊಳಗಿನ ಕಷ್ಟಗಳನ್ನು, ಜಗಳಗಳನ್ನೆಲ್ಲಾ ತಲೆಗೆ ತುಂಬಿಕೊಂಡು, ಒಬ್ಬನೇ ಅಳೋದು, ಹೀಗೆ ಆಗ್ತಿದ್ದಾಗ ಯಾಕೋ ಏನನ್ನೋ ಬರೆಯಬೇಕೆನಿಸಿತು. ಕತೆ ಬರ್ಯೋಕೆ ಪ್ರಯತ್ನ ಮಾಡಿದೆ. ಆಗ್ಲಿಲ್ಲ. ಪದ್ಯ ಬರೆದೆ. ಇಂಥದ್ದೇ… ಕಾಲ ಕಾಲಕ್ಕೆ ಕಾಡುವ ನೋವುಗಳು… ಕವಿತೆಗಳು..

ಫ್ಯಾಷನ್ ಟೀವಿ, ರೆಹಮಾನ್ ಹಾಡು, ಸೆಪ್ಟೆಂಬರ್ 11, ಹಿಂದಿ ಹಾಡು ಇಂಥ ಹಲವು ಚಿತ್ರಗಳು ನಿಮ್ಮ ಪದ್ಯಗಳಲ್ಲಿವೆ. ಇವು ಯಾವುದಕ್ಕೆ ಸಂವಾದಿಯಾಗಿ ನಿಮ್ಮ ಕಾವ್ಯದಲ್ಲಿ ಕಾಣಿಸಿಕೊಳ್ಳುತ್ತವೆ?

ಅಮೆರಿಕಕ್ಕೆ ನೆಗಡಿ ಬಂದರೂ ಸಾಕು ಅದೊಂದು ದೊಡ್ಡ ಸುದ್ದಿ. ಜಗತ್ತಿನ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಅಮೆರಿಕ, ಬಿನ್ ಲಾಡೆನ್ ಮಹಾ ವಿಲನ್ ಅಂತೆಲ್ಲಾ ಮಾತು. ಅದರಾಚೆಗಿನ ಸೂಕ್ಷ್ಮಗಳ ಬಗ್ಗೆ ಮಾತಾಡೋರು ಯಾರೋ ಕೆಲವರು. ಸೆಪ್ಟೆಂಬರ್ 11ರ ಘಟನೆ ಟೀವಿ, ಪತ್ರಿಕೆಗಳನ್ನು ಆವರಿಸಿಕೊಂಡಾಗ ನನ್ನನ್ನು ತೀವ್ರವಾಗಿ ಕಾಡಲಾರಂಭಿಸಿತು. ಅದರ ಬಗ್ಗೆ ಏನು ಮಾತಾಡುವುದಕ್ಕೂ ಗೊಂದಲವಾಗುತ್ತಿತ್ತು. ಅಂಥ ಅನುಭವವನ್ನು ಕವಿತೆ ಮಾಡಿದೆ. ಇನ್ನು ನೀವು ಪ್ರಸ್ತಾಪಿಸುತ್ತಿರುವ ಹಳ್ಳಿ ಅನುಭವ, ರೆಹಮಾನ್ ಸಂಗೀತ, ಫ್ಯಾಶನ್ ಟೀವಿ, ಎಂಟೀವಿ ಚಿತ್ರಗಳನ್ನು ಕಾವ್ಯದಲ್ಲಿ ತಂದಿದ್ದೀನಿ. ಅವುಗಳನ್ನು ಯಾಕ್ ತಂದಿದ್ದೀನಿ ಅನ್ನೋದನ್ನು ಒಬ್ಬ ಓದುಗ ಹೇಳಿದ್ರೆ ಚೆನ್ನಾಗಿರುತ್ತೆ. ಆ ಕವಿತೆಯಲ್ಲಿ ಹೊರನೋಟಕ್ಕೆ ತುಂಬಾ ಆಕರ್ಷಕವಾಗಿ ಕಾಣುವ ಮನೆಯೊಳಗಿನ ಸಮಸ್ಯೆಗಳು, ಅವುಗಳ ನಡುವೆ ಸಂಭ್ರಮಗಳಿಲ್ಲದೆ ಒದ್ದಾಡ್ತಾ ಇರೋ ಯುವಕ ತತ್ಕಾಲದ ಬಿಡುಗಡೆಗಾದ್ರೂ ಆಥರದ ಚಾನೆಲ್ಗಳಲ್ಲಿ ಲೀನವಾಗುವ ಮನಸ್ಥಿತಿ, ಇವುಗಳಿಗೆ ಸಂವಾದಿಯಾಗಿ ಆ ಚಿತ್ರಗಳನ್ನು ತಂದಿದ್ದೀನಷ್ಟೆ.

ನಿಮ್ಮ ಕವಿತೆಗಳಲ್ಲಿ ಕಾಣುವ, ಕಾಡುವ `ಅಪ್ಪ’ನ ಬಗ್ಗೆ ಹೇಳಿ…

ಚಿಕ್ಕವನಿದ್ದಾಗ ಪ್ರತಿ ರಾತ್ರಿ ಅಪ್ಪನ ಜೊತೇನೇ ನಾನು ಮಲಗ್ತಾ ಇದ್ದಿದ್ದು, ನನ್ನೆಲ್ಲಾ ನೋವು, ಸಂಕಟಗಳಿಗೆ, ಸುಖ ಸಂಭ್ರಮಗಳಿಗೆ ಯಾವಾಗ್ಲೂ ಸಾಕ್ಷಿಯಾಗುತ್ತಾ ಇದ್ದಿದ್ದು ಅಪ್ಪ (ಕರಿಬಸವನಗೌಡ). ಊರಲ್ಲಿ ನಡೆಯುವ ಅನ್ಯಾಯಗಳನ್ನು ಅವಡುಗಚ್ಚಿ ಪ್ರಶ್ನಿಸಿ, ಕೋರ್ಟು, ಕಚೇರಿ ಅಂತೆಲ್ಲಾ ಅಲೆದು, ದುಗುಡದಲ್ಲಿದ್ದಾಗ್ಲೂ, ನಮ್ಮ ಹೊಟ್ಟೆ ಹಸಿದ್ಹಂಗೆ ನೋಡಿಕೊಳ್ತಿದ್ದ. ನಾನು ದೊಡ್ಡವನಾಗ್ತಾ, ನನ್ನಲ್ಲೂ ಹೊಸ ರೀತಿಯ ರಾಜಕೀಯ ಪ್ರಶ್ನೆ ಮೂಡುತ್ತಿದ್ದಾಗ ಅಪ್ಪ ಒಮ್ಮೆ ಸರಿಯಾಗಿ ಕಂಡ್ರೆ ಮತ್ತೊಮ್ಮೆ ನಿಗೂಢವಾಗ್ತಿದ್ದ. ಊರಿನ ರಾಡಿನೆಲ್ಲಾ ಮೈಮೇಲೆ ಸುರ್ಕೊಂಡು, ಒದ್ದಾಡ್ತಿರೋ ಅಪ್ಪನ ಜತೆಗೆ ಅಮ್ಮನ ನಿತ್ಯ ತಕರಾರುಗಳು ಕೆಲವೊಮ್ಮೆ ಸರಿ ಅನ್ನಿಸದರೆ, ಹಲವು ಬಾರಿ ಅಪ್ಪನೇ ಸರಿ ಕಾಣಿಸ್ತಿದ್ದ. ಅಪ್ಪನ ಒಳಹೊರಗುಗಳು ಅರ್ಥ ಮಾಡಿಕೊಳ್ತಾನೇ, ನನ್ನ ಸುತ್ತಲ ಘಟನೆಗಳನ್ನು ನೋಡ್ಲಿಕ್ಕೆ ಶುರು ಮಾಡಿದೆ. ನನ್ನ ಓದಿಗೆ ಕಾಲ ಬದುಕಿರೋಲ್ಲ, ಅಂತ್ಹೇಳಿ, ಸಣ್ಣ ಮುಖ ಮಾಡಿಕೊಂಡಾಗೆಲೆಲ್ಲಾ ಭಾರವಾಗ್ತಿದ್ದ ಎದೆ ಆತನೆಡೆ ಸೆಳೆತವನ್ನು ಮತ್ತೂ ಜಾಸ್ತಿ ಮಾಡ್ತು. ಅಪ್ಪನಾಗಿ ಜೊತೆಗಿದ್ದು ಕೊಂಡೆ, ಹೊಲವನ್ನು, ಜೀರಂಗಿಯನ್ನು ಊರನ್ನ, ಅಲ್ಲಿನ ನೋವುಗಳನ್ನು ಅನ್ಯಾಯಗಳನ್ನು ರಾಜಕೀಯವನ್ನು ಎಲ್ಲ ತೋರಿಸಿದವನು ಅಪ್ಪ. ಹಾಗಾಗಿ ಕಾವ್ಯದಲ್ಲೂ ಕಾಡ್ತಾನೆ….

ನಿಮಗೆ ಯಾವಾಗ್ಲಾದ್ರೂ ಭಾವಗೀತೆ ಬರಿಬೇಕು ಅಂತಾ ಅನ್ಸುತ್ತಾ..?

ತನುವು ನಿನ್ನದು ಮನವು ನಿನ್ನದು.. ನೀ ಹಿಂಗ ನೋಡಬ್ಯಾಡ, ಅಳುವ ಕಡಿಲಿನಲ್ಲಿ, ಎಲ್ಲೋ ಹುಡುಕಿದೆ ಇಲ್ಲದ ದೇವರ ಇಂಥ ಭಾವಗೀತೆಗಳನ್ನು ಕೇಳಿ ಸುಖಿಸ್ತೀನಿ. ಜಯಂತ್ ಸಿನಿಮಾಕ್ಕೆ ಬರಿತಿರೋ ಹಾಡುಗಳನ್ನು ಕೇಳಿಯೂ ಸಂತೋಷ ಪಡ್ತೀನಿ ಅಂತಾ ಪ್ರಯತ್ನ ಮಾಡ್ಬೇಕು ಅಂತಾ ನನಗಂತೂ ಆಗಾಗ ಅನ್ನಿಸುತ್ತೆ. ಆದರೆ ನಮ್ಮನ್ನು ತಲೆ ತಿನ್ನೋವು ಇವತ್ತಿನ ವಿಷಯಗಳೇ. ಅಪ್ರಾಮಾಣಿಕ ರಾಜಕೀಯ, ನೆರೆಪೀಡಿತರ ನೋವು, ಹುಸಿ ದೇಶಾಭಿಮಾನ, ಸಾಮಾನ್ಯನ ಅಸಹಾಯಕತೆ, ವೈಯಕ್ತಿಕ ಸಂಘರ್ಷಗಳು…

ಇಂದಿನ ಕವಿಯ ಮುಂದಿನ ಸವಾಲು..

ಜನಸಾಮಾನ್ಯರ ಬದುಕಿರುವ ಪ್ರತಿಯೊಂದು ಸವಾಲುಗಳೇ ಇವತ್ತಿನ ಕವಿಗಿರುವ ಸವಾಲು ಅಂತಾ ಭಾವಿಸಿದ್ದೀನಿ… ಬದಲಾಗಿರೋ ಸಾಂಸ್ಕೃತಿಕ ಮತ್ತು ರಾಜಕೀಯ ಸನ್ನಿವೇಶದ ಈ ಹೊತ್ತಿನಲ್ಲಿ, ವ್ಯಕ್ತಿ ಮತ್ತು ಸಾಮಾಜಿಕ ಬದುಕಿನ ಒಳಸೂಕ್ಷ್ಮಗಳನ್ನ, ವ್ಯಕ್ತಿ ಮತ್ತು ಪ್ರಕೃತಿಯ ಸಂಬಂಧದ ಅಂತರಲಯಗಳನ್ನ, ಆಳವಾಗಿ ಗ್ರಹಿಸಿ ಬರೀಬೇಕು ನಾವೆಲ್ಲ. ನಮ್ಮ ಭಾಷೆ, ನುಡಿಗಟ್ಟು, ಕಾವ್ಯದ ಆಕೃತಿ, ನಮ್ಮ ಸಾಹಿತ್ಯ ಪರಂಪರೆಯಿಂದ ಶಕ್ತಿ ಪಡೆದುಕೊಳ್ತಾ ಹೊಸದಾಗಬೇಕು. ಹೊಸ ತಲೆಮಾರಿನ ನನ್ನ ಸ್ನೇಹಿತರನೇಕರಿಗೆ ಖಂಡಿತ ಈ ಶ್ರದ್ಧೆ ಇದೆ.

ನಿಮ್ಮನ್ನು ಕಾಡುವ ಕವಿ…

ಕಾವ್ಯದ ಸಮ್ಮೋಹಕತೆಯಲ್ಲಿ ಬೇಂದ್ರೆ, ಬಂಧದಲ್ಲಿ ಅಡಿಗ, ವೈಚಾರಿಕತೆಯಲ್ಲಿ ಕುವೆಂಪು. ಒಬ್ಬ ಕವಿಯನ್ನು ಗುರುತಿಸುವುದು ಕಷ್ಟ. ಆದರೆ ಇವತ್ತಿಗೂ ಕಾವ್ಯವನ್ನು ಅತಿ ಹೆಚ್ಚು ಪ್ರೀತಿಸ್ತೀನಿ ಅಂದ್ರೆ, ಅಲ್ಲಮನಿಂದಾಗಿ…

*****

ಹಗಲ ಕತ್ತಲಲಿ ನಕ್ಷತ್ರ ನಗುವುದಿಲ್ಲ

ರಾತ್ರಿಯೆಂದರೆ ಕತ್ತಲಲ್ಲ

****

ಗುಡಿಗುಂಡಾರಗಳಿಗೆ

ಕತ್ತಿಮಸೆವ

ಅಡಿಗಲ್ಲುಗಳೇ

ಬನ್ನಿ

ನಿಮ್ಮೆಲ್ಲರಿಗೆ

ಅಲ್ಲಮನ ಬಯಲು ತೋರುವೆ

****

ಲೆಕ್ಕಿಲ್ಲ, ಬುಕ್ಕಿಲ್ಲ

ಬ್ಯಾಂಕ್ನಾಗ್ ಖಾತಿಲ್ಲ

ನರ್ನ್ಯಾಗ್ ಬರೀ ಸೊನ್ನಿ ಬರೀತೀವಿ ರೀ

ಹುಡುಗೂರುಪ್ಡೀ ಕಳಿಸಿ

ತಂಗಳನ್ನ ಬೇಡೀಸಿ

ತುತ್ ತಿಂದು ಹೊತ್ತನ್ನ ನೂಕ್ತೀವಿ ರೀ

ಹಳ್ಳಿಯ ಜನ ನಾವು..

(ಬೊಗಸೆಯಿಂದ ತೆಗೆದ ಸಾಲುಗಳು)

ವಾರಗೆಯ ‘ಒಳಗೂ… ಹೊರಗೂ…’ ಬ್ಲಾಗ್ ನಿಂದ ಈ ಲೇಖನ ಕಡ ತರಲಾಗಿದೆ. ಈ ಬ್ಲಾಗ್ ಮತ್ತು ಆಗಾಗ ಅಲ್ಲಿಂದ ಇಂದಿನ ಬರಹಗಾರರ ಪರಿಚಯ- ಸಂದರ್ಶನಗಳನ್ನು ತಂದು ಬಡಿಸುವ ಬಗ್ಗೆ ಹಿಂದಿನ ಪೋಸ್ಟೊಂದರಲ್ಲಿ ಹೇಳಿದ್ದೇವೆ.