ಭ್ರಷ್ಟ ಜಯಲಲಿತಾ ಯಾವೆಲ್ಲದರ ಫಲಿತಾಂಶ?

ಅಧಿಕೃತವಾಗಿ ತನ್ನ ಸ್ವಂತದವರೆಂದು ಹೇಳಿಕೊಳ್ಳಲು ಮತ್ತೊಂದು ಜೀವ ಜೊತೆಗಿರದ ಜಯಲಲಿತಾ ಇವೆಲ್ಲವನ್ನೂ ಮಾಡಿಟ್ಟಿದ್ದು ಯಾಕಾಗಿ? ತನ್ನ ನೆಲದ ಬಡ ಜನರಿಗೆ ರೂಪಾಯಿಗೊಂದು ಇಡ್ಲಿ, ಕುಡಿಯುವ ನೀರು, ಸೂರು ಎಂದೆಲ್ಲ ಜನಪರ – ಜನಪ್ರಿಯ ಯೋಜನೆಗಳನ್ನು ರೂಪಿಸಿದ ಜಯಲಲಿತಾ ಅದೇ ಜನರ ತೆರಿಗೆ ಹಣವನ್ನು ನುಂಗಿ ಕೂತಿರುವುದು ಯಾಕೆ? ನಿಜಕ್ಕೂ ಈ ಪರಿಯ ಹಪಾಹಪಿ ಅವರಲ್ಲಿದೆಯೇ? ತುಸು ಜಂಭದ, ಆದರೆ ಅಪ್ರಮಾಣಿಕತೆ ಕಾಣದ ಅವರ ಮುಖ ಹಾಗೂ ನಿಲುವಿನಲ್ಲಿ ಮೋಸವಿದೆಯೇ? ಇಂದು ನಾವು ನೋಡುತ್ತಿರುವ ಭ್ರಷ್ಟ ರಾಜಕಾರಣಿ ಜಯಲಲಿತಾ ರೂಪುಗೊಂಡಿದ್ದು ಹೇಗೆ?

ಬದುಕನ್ನು ಗಂಡು – ಹೆಣ್ಣೆಂಬ ಭೇದ ಮೀರಿದ ದೃಷ್ಟಿಕೋನದಿಂದ ನೋಡಬೇಕೆನ್ನುವುದು ನಿಜವಾದರೂ ಅದರ ಹೊರಳಾಟಗಳನ್ನು ನೋಡುವಾಗ ಈ ಭೇದದ ಊರುಗೋಲು ಅಗತ್ಯವಾಗಿಬಿಡುತ್ತದೆ. ಏಕೆಂದರೆ, ಬದುಕು ಒಂದೇ ಆದರೂ ಅದನ್ನು ಹೆಣ್ಣು ಎದುರುಗೊಳ್ಳುವ ಬಗೆಯೇ ಬೇರೆ ಮತ್ತು ಗಂಡು ಒಳಗೊಳಿಸಿಕೊಳ್ಳುವ ಬಗೆ ಬೇರೆ. ಏಕೆಂದರೆ, ನಾಗರಿಕತೆಯ ಆರಂಭಕಾಲದಿಂದಲೂ ಗಂಡು ಹೆಣ್ಣಿಗೆ ಕೊಡಲಾಗಿರುವ ಅವಕಾಶಗಳು ಹಾಗಿವೆ.

ಎಂಜಿಆರ್ ಜೊತೆ

ಎಂಜಿಆರ್ ಜೊತೆ

ಸದ್ಯದ ಭಾರತೀಯ ರಾಜಕಾರಣದ ಮುಖ್ಯಧಾರೆಯಲ್ಲಿರುವ ಐವರು ಹೆಣ್ಣುಗಳ ಬದುಕು ಮತ್ತು ಸಾಧನೆಗಳು ವಿಶಿಷ್ಟವೇ. ಅವರ ಹಗರಣಗಳೂ ಕೂಡಾ. ಭ್ರಷ್ಟಾಚಾರದ ವಿಷಯಕ್ಕೆ ಬಂದಾಗ ಅಲ್ಲಿ ಕೂಡ ಲಿಂಗ ತಾರತಮ್ಯ ಇರುವುದಿಲ್ಲ. ವಿಚಾರಣೆ, ಶಿಕ್ಷೆ, ಪರಿಣಾಮಗಳಿಗೆ ಸಂಬಂಧಿಸಿದಂತೆ ಅದನ್ನು ತರತಮವಿಲ್ಲದೆಯೇ ನೋಡಬೇಕಾಗುತ್ತದೆ. ಈ ಸಾಮಾಜಿಕ ಆಯಾಮವನ್ನು ಮೀರಿ, ಮಾನಸಿಕ ಸ್ತರದಲ್ಲಿ ನೋಡುವಾಗ, ಮಾನವೀಯ ಚಿಂತನೆಗೆ ಹಚ್ಚಿ ನೋಡುವಾಗ ಬಿಚ್ಚಿಕೊಳ್ಳುವ ದೃಶ್ಯಗಳೂ ಬೇರೆಯೇ ಇರುತ್ತವೆ. ಅಲ್ಲಿ ಮಾಯಾವತಿಯ ಮೂರ್ತಿಗಳಿಗೆ, ಚಿನ್ನದ ಕತ್ತಿಗಳಿಗೆ ಬೇರೆಯೇ ಅರ್ಥ ಕಾದಿರುತ್ತದೆ. ಹಿಂಜಿಹೋದ ಕಾಟನ್‌ ಸೀರೆಯನ್ನಷ್ಟೆ ಉಡುವ ಮಮತಾ ಬ್ಯಾನರ್ಜಿಯ ಹೆಸರು ಯಾಕೆ ಚೀಟಿ ವ್ಯವಹಾರದಂಥದರಲ್ಲಿ ಕಾಣಿಸುತ್ತದೆ ಎಂಬುದರ ಅರಿವಾಗುತ್ತದೆ. ಯಾಕೆ ಉಮಾ ಭಾರತಿ ಹಾಗೆ ರಚ್ಚೆ ಹಿಡಿದ ಮಗುವಿನಂತಾಡುತ್ತಾರೆ ಎಂದರೆ ಅವರ ಸೋತ ಹೃದಯದ ನೋವು ಕೇಳಿಸುತ್ತದೆ. ಸೋನಿಯಾರ ನಗುವಿಲ್ಲದ ಮುಖವೂ ಅವರ ಪರಿವಾರದೊಂದಿಗೆ ಹೆಣೆದುಕೊಂಡ ಹಗರಣಗಳು, ಹಣದ ವ್ಯವಹಾರಗಳು ಮತ್ತೊಂದೇ ಕಥೆ ಹೇಳತೊಡಗುತ್ತವೆ. ಈ ಎಲ್ಲವನ್ನು ಆ ಎಲ್ಲರ ಅಪರಾಧಗಳ ಸಮರ್ಥನೆಗಾಗಿ ಖಂಡಿತ ಬಳಸಬಾರದು. ಆದರೆ ಅರ್ಥೈಸಿಕೊಳ್ಳಲು ಮತ್ತು ನಮ್ಮನಮ್ಮ ಸ್ತರಗಳಲ್ಲಿ ಅವನ್ನು ಅನ್ವಯಿಸಿಕೊಂಡು ನೋಡಲು ಇವು ಬೇಕಾಗುತ್ತವೆ.
ಜಯಲಲಿತಾ ಬೇಲ್‌ಗೆ ಅರ್ಜಿ ಹಾಕಿಕೊಂಡು ಕೂತಿದ್ದಾರೆ. ಅವರ ಚಪ್ಪಲಿ ಸಂಖ್ಯೆಗಳ, ಸೀರೆಗಳ, ಚಿನ್ನ ಭಂಡಾರದ ಚರ್ಚೆ ನಡೆಯುತ್ತ ಆಕೆಯ ಭ್ರಷ್ಟತೆಯ ಚರ್ಚೆ ಸಾಗುತ್ತಿದೆ. ಇವುಗಳಾಚೆ ಜಯಲಲಿತ ಸಾವಿರಾರು ಎಕರೆ ಭೂಮಿ, ಸ್ಥಿರ – ಚರಾಸ್ತಿಗಳನ್ನು ಮಾಡಿಟ್ಟುಕೊಂಡಿದ್ದಾರೆ. ಅಧಿಕೃತವಾಗಿ ತನ್ನ ಸ್ವಂತದವರೆಂದು ಹೇಳಿಕೊಳ್ಳಲು ಮತ್ತೊಂದು ಜೀವ ಜೊತೆಗಿರದ ಜಯಲಲಿತಾ ಇವೆಲ್ಲವನ್ನೂ ಮಾಡಿಟ್ಟಿದ್ದು ಯಾಕಾಗಿ? ತನ್ನ ನೆಲದ ಬಡ ಜನರಿಗೆ ರೂಪಾಯಿಗೊಂದು ಇಡ್ಲಿ, ಕುಡಿಯುವ ನೀರು, ಸೂರು ಎಂದೆಲ್ಲ ಜನಪರ – ಜನಪ್ರಿಯ ಯೋಜನೆಗಳನ್ನು ರೂಪಿಸಿದ ಜಯಲಲಿತಾ ಅದೇ ಜನರ ತೆರಿಗೆ ಹಣವನ್ನು ನುಂಗಿ ಕೂತಿರುವುದು ಯಾಕೆ? ನಿಜಕ್ಕೂ ಈ ಪರಿಯ ಹಪಾಹಪಿ ಅವರಲ್ಲಿದೆಯೇ? ತುಸು ಜಂಭದ, ಆದರೆ ಅಪ್ರಮಾಣಿಕತೆ ಕಾಣದ ಅವರ ಮುಖ ಹಾಗೂ ನಿಲುವಿನಲ್ಲಿ ಮೋಸವಿದೆಯೇ? ಇಂದು ನಾವು ನೋಡುತ್ತಿರುವ ಭ್ರಷ್ಟ ರಾಜಕಾರಣಿ ಜಯಲಲಿತಾ ರೂಪುಗೊಂಡಿದ್ದು ಹೇಗೆ?
~

ಅಮ್ಮನ ಜೊತೆ ಪುಟ್ಟ ಜಯಲಲಿತಾ

ಅಮ್ಮನ ಜೊತೆ ಪುಟ್ಟ ಜಯಲಲಿತಾ

ಜಯಲಲಿತಾ ಅಪ್ಪಟ ಜೀವನ ಪ್ರೀತಿಯ ಹೆಣ್ಣಾಗಿದ್ದವರು. ಬಿಷಪ್‌ ಕಾಟನ್ಸ್‌ನಲ್ಲಿ ಓದುತ್ತಿದ್ದ ಕಾಲಕ್ಕೆ ಬಹಳ ಬುದ್ಧಿವಂತೆ ಮತ್ತು ಪಠ್ಯೇತರ ಪುಸ್ತಕಗಳನ್ನೂ ಓದುವ ಆಸಕ್ತಿ ಇದ್ದವರು. ಹಾಡು, ನೃತ್ಯ, ಆಟ ಎಲ್ಲದರಲ್ಲು ಸದಾ ಪುಟಿಯುವ ಉತ್ಸಾಹ. ಅವತ್ತಿನ ಕ್ರಿಕೆಟಿಗ ಪಟೌಡಿಯ ಮೇಲೆ ಕ್ರಶ್ ಬೆಳೆಸಿಕೊಂಡಿದ್ದ ಜಯಾ, ಅವರನ್ನ ನೋಡಲಿಕ್ಕೆಂದೇ ಕ್ರಿಕೆಟ್‌ಗೆ ಹೋಗ್ತಿದ್ದರಂತೆ!
ಅವರಮ್ಮ ಸಂಧ್ಯಾ ನಟಿಯಾಗಿ ಮಗಳನ್ನು ಸಲಹುತ್ತಿದ್ದ ಕಾಲಕ್ಕೆ ಒಮ್ಮೆ ಜಯಲಲಿತಾ ಸುಮ್ಮನೆ ಮೇಕಪ್‌ ಬಾಕ್ಸಿನಿಂದ ಏನೆಲ್ಲ ತೆಗೆದು ಮುಖಕ್ಕೆ ಹಚ್ಚಿಕೊಂಡಿದ್ದರಂತೆ. ಆಗ ಅವರಮ್ಮ “ನನ್ನದಂತೂ ಹೀಗಾಯಿತು, ನೀನು ಮಾತ್ರ ಇದನ್ನೆಲ್ಲ ಮಾಡೋದು ಬೇಡ” ಅಂದಿದ್ದರಂತೆ. ಆದರೆ ಇದೇ ಅಮ್ಮ ಕೆಲವೇ ವರ್ಷಗಳ ನಂತರ ಮಗಳನ್ನು ನಟನೆಗೆ ಒತ್ತಾಯಿಸಬೇಕಾಗಿ ಬಂದಿದ್ದು ದುರಂತ. ಆ ಹೊತ್ತಿಗೆ ಜಯಾ ಶಾಲೆಯಲ್ಲಿ ಒಳ್ಳೆಯ ಅಂಕ ಪಡೆದು ಮುಂದಿನ ಓದಿಗೆ ಸ್ಕಾಲರ್‌ಶಿಪ್ಪನ್ನೂ ಪಡೆದಿದ್ದರು. ಆದರೆ ಕುಟುಂಬ ಹೊರೆಯುವ ಅನಿವಾರ್ಯತೆ ಅವರನ್ನ ನಟನೆಗೆ ನೂಕಿತ್ತು. ವಿ.ವಿ.ಗಿರಿಯವರ ಮಗ ತೆಗೆದ ಇಂಗ್ಲಿಶ್‌ ಸಿನೆಮಾ ಒಂದರಲ್ಲಿ ಅಭಿನಯಿಸುವ ಮೂಲಕ ಭರ್ಜರಿ ಓಪನಿಂಗ್ ಶುರು ಮಾಡಿದರು ಜಯಲಲಿತಾ. ಆಗ ಅವರಿಗೆ ಕೇವಲ ಹದಿನೈದು ವರ್ಷ ವಯಸ್ಸು.
ಮುಂದೆ ತೆಲುಗು, ತಮಿಳು, ಕನ್ನಡ, ಒಂದೆರಡು ಹಿಂದಿ ಚಿತ್ರಗಳು ಎಂದೆಲ್ಲ ಹಿಟ್‌ ಸಿನೆಮಾಗಳಲ್ಲಿ ಅಭಿನಯಿಸಿ ಅಕ್ಷರಶಃ ಚಿತ್ರರಂಗವನ್ನು ಆಳತೊಡಗುತ್ತಾರೆ. ಕೇವಲ ಸೌಂದರ್ಯವಷ್ಟೆ ಅಲ್ಲ, ಬುದ್ಧಿವಂತಿಕೆಯೂ ಇದ್ದ ಈ ಹುಡುಗಿ ಅವತ್ತಿನ ದಕ್ಷಿಣ ಭಾರತದ ಸೂಪರ್‌ ಸ್ಟಾರ್‌ ಎಂಜಿಆರ್‌ ಕಣ್ಣು ಕುಕ್ಕಲಿಕ್ಕೆ ಹೆಚ್ಚಿನ ಸಮಯ ಬೇಕಾಗುವುದಿಲ್ಲ. ಮೆಲ್ಲಗೆ ರಾಜಕಾರಣದಲ್ಲೂ ತೊಡಗಿಸಿಕೊಳ್ಳುತ್ತಿದ್ದ ಎಂಜಿಆರ್‌ ಜಯಲಲಿತಾರಿಗೆ ತಮ್ಮ ಜೊತೆ ನಟಿಸಲು ಅವಕಾಶ ಕೊಡುತ್ತ, ತಮ್ಮೊಡನೆಯೇ ಇರಿಸಿಕೊಂಡು ಪ್ರಮೋಟ್ ಮಾಡುತ್ತಾರೆ. ಆಕೆಯ ಆಕರ್ಷಕ ವ್ಯಕ್ತಿತ್ವ, ಸ್ನೇಹಪರತೆ ಮತ್ತು ಮಾತುಗಾರಿಕೆ ತನಗೆ ಲಾಭವಾಗುತ್ತದೆಂದು ಪಕ್ಷದೊಳಕ್ಕೂ ಬಿಟ್ಟುಕೊಳ್ತಾರೆ. ಅಲ್ಲಿಂದ ಮುಂದೆ ಜಯಲಲಿತಾ ಎಂಜಿಆರ್‌ ಚಿತ್ರಗಳ ಖಾಯಂ ನಾಯಕಿ ಎಂದಾಗಿಬಿಡುತ್ತದೆ.

ಶೋಭನ್ ಬಾಬು ಜೊತೆ

ಶೋಭನ್ ಬಾಬು ಜೊತೆ

ಆದರೆ ಎಂಜಿಆರ್‌ ಏಳು ಕೆರೆಯ ನೀರು ಕುಡಿದವರು. ಜಯಲಲಿತಾ ಅವರಿಗೊಂದು ಆಯ್ಕೆ ಅಷ್ಟೇ. ಹಾಗೆಂದೇ ಇದ್ದಕ್ಕಿದ್ದಂತೆ ತಮ್ಮ ಒಂದು ಸಿನೆಮಾಕ್ಕೆ ಬೇರೆ ನಾಯಕಿಯನ್ನ ಹಾಕಿಕೊಳ್ತಾರೆ. ಜಯಲಲಿತಾರ ಸ್ವಾಭಿಮಾನ ಹಾಗೂ ಆತ್ಮಗೌರವದ ಪರಿಚಯ ಆಗೋದು ಆವಾಗಲೇ. ಹೆಚ್ಚೂಕಡಿಮೆ ತನ್ನನ್ನು ಪ್ರೇಯಸಿಯಂತೆಯೇ ನಡೆಸಿಕೊಳ್ತಿದ್ದ ಎಂಜಿಆರ್‌ ವಿರುದ್ಧ ಸಿಡಿದು ಬೀಳುವ ಜಯಾ ತೆಲುಗಿನತ್ತ ಮುಖ ಮಾಡುತ್ತಾರೆ. ಅಲ್ಲಿನ ಸೂಪರ್‌ ಸ್ಟಾರ್‌ ಶೋಭನ್‌ ಬಾಬುವಿನ ಜೊತೆ ನಟಿಸತೊಡಗುತ್ತಾರೆ. ಅವರೊಂದಿಗೆ ಲಿವ್‌ಇನ್‌ ಬದುಕು ಆರಂಭಿಸುವ ಜಯಲಲಿತಾ ಅವರನ್ನು ಇನ್ನಿಲ್ಲದಂತೆ ಪ್ರೇಮಿಸುತ್ತಾರೆ ಕೂಡಾ. ಬಹುಶಃ ಜಯಾ ಬದುಕಿನ ಮೊದಲ ಮತ್ತು ಕೊನೆಯ ಪ್ರೇಮ ಅದೊಂದೇ. ಎಂಜಿಆರ್‌ ಜೊತೆ ಅವರಿಗೆ ಇದ್ದದ್ದು ಮುಲಾಜು ಮಾತ್ರ.

ಇದೇ ಮುಲಾಜು ಮತ್ತೆ ಅವರಿಬ್ಬರನ್ನು ಒಂದುಗೂಡಿಸುತ್ತದೆ. ಎಂಜಿಆರ್‌ ಜಯಲಲಿತಾರನ್ನು ಪುಸಲಾಯಿಸಿ ಮತ್ತೆ ತಮ್ಮತ್ತ ಸೆಳೆದುಕೊಳ್ಳುತ್ತಾರೆ. ಅವರ ಪಕ್ಷಕ್ಕೆ ಕೆಲಸ ಮಾಡುತ್ತ ಪುನಃ ಎಂಜಿಆರ್‌ ಕಡೆ ವಾಲುವ ಜಯಾ ಶೋಭನ್‌ ಬಾಬುವನ್ನು ಶಾಶ್ವತವಾಗಿ ಕಳೆದುಕೊಳ್ಳುತ್ತಾರೆ.

“ನನ್ನ ಬದುಕಲ್ಲಿ ಬಂದ ಯಾವ ಗಂಡಸೂ ನನ್ನನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ” ಎಂದು ಒಂದೆಡೆ ಹೇಳಿಕೊಳ್ಳುವ ಜಯಲಲಿತಾ ಎಂಜಿಆರ್‌ರಿಂದ ಹೊಡೆತ ತಿಂದಿದ್ದೂ ಇದೆ. ಈಕೆಯ ಹಿಂದೆ ಗೂಢಚಾರರನ್ನು ಬಿಟ್ಟು ಪ್ರತಿ ದಿನದ ಅಪ್‌ಡೇಟ್ಸ್ ತರಿಸಿಕೊಳ್ತಿದ್ದರಂತೆ ಎಂಜಿಆರ್‌. ಆ ಮನುಷ್ಯ ಈಕೆಯನ್ನು ಪ್ರಮೋಟ್‌ ಮಾಡಿದ್ದಕ್ಕಿಂತ ಗೋಳಾಡಿಸಿದ್ದೇ ಹೆಚ್ಚು. ಬಹುಶಃ ಈ ಕಾರಣದಿಂದಲೇ ಜಯಲಲಿತಾ ಶಶಿಕಲಾರನ್ನು ತಮ್ಮ ಅಂತರಂಗಕ್ಕೆ ಬಿಟ್ಟುಕೊಳ್ಳುವುದು ಮತ್ತು ತಮ್ಮ ಸಂಪೂರ್ಣ ಜವಾಬ್ದಾರಿಯನ್ನು ಅವರ ಹೆಗಲಿಗೆ ಹೊರಿಸುವುದು.
ಈಗ ಜಯಾ ಆಪ್ತ ಸಹಾಯಕಿ ಎಂದೇ ಬಿಂಬಿತವಾಗುತ್ತಿರುವ ಶಶಿಕಲಾ ಮೊದಲು ಬಂದಿದ್ದು ಈಕೆಯ ವಿರುದ್ಧ ಸ್ಪೈ ಮಾಡಲೆಂದೇ. ಸ್ವತಃ ಎಂಜಿಆರ್‌ ಆಕೆಯನ್ನು ಅದಕ್ಕಾಗಿ ಕರೆಸಿದ್ದರೆಂದು ಹೇಳಲಾಗುತ್ತದೆ.

ಶಶಿಕಲಾ...

ಶಶಿಕಲಾ…

ವಿಡಿಯೋ ಪಾರ್ಲರ್ ಒಂದನ್ನು ನಡೆಸುತ್ತಿದ್ದ ಶಶಿಕಲಾ ಏಕಾಏಕಿ ಜಯಾ ಬದುಕಿನ ಸೂತ್ರಗಳೆಲ್ಲವನ್ನು ತನ್ನ ಮುಷ್ಟಿಯಲ್ಲಿ ಹಿಡಿದು, ತಾನಿಲ್ಲದೆ ಆಕೆಯ ಕೆಲಸಗಳ್ಯಾವುದೂ ನಡೆಯದು ಎನ್ನುವ ಮಟ್ಟಕ್ಕೆ ತಂದಿಡುತ್ತಾರೆ. ಇದು ಕೇವಲ ಗೃಹಕೃತ್ಯಗಳಿಗಷ್ಟೇ ಅಲ್ಲ, ಜಯಾ ರಾಜಕಾರಣಕ್ಕೂ ಹರಡುತ್ತದೆ. ಜಯಾರಿಗಿರುವ ಶಶಿಕಲಾ ಮೇಲಿನ ಅವಲಂಬನೆ ಮತ್ತು ಅದರಿಂದಾಗುತ್ತಿರುವ ಅನಾಹುತಗಳ ಕುರಿತು ಎಚ್ಚರಿಸಿದವರನ್ನೆಲ್ಲ ದೂರ ಮಾಡುತ್ತ ಬರುತ್ತಾರೆ ಜಯಲಲಿತಾ. ಸಾಕಷ್ಟು ಸ್ನೇಹ ಸಂಪಾದಿಸಿದ ಮೇಲೆ ಒಂದು ದಿನ ಶಶಿಕಲಾ ತನ್ನ ತವರು ಮನ್ನಾರ್‌ಗುಡಿಯಿಂದ ನಲವತ್ತು ಜನರನ್ನು ಕಟ್ಟಿಕೊಂಡು ಜಯಲಲಿತಾರ ಬಂಗಲೆಯ ಮುಂದೆ ಬಂದಿಳಿಯುತ್ತಾರೆ. ಅಲ್ಲಿದ್ದವರನ್ನೆಲ್ಲ ಓಡಿಸಿ, ಅಡುಗೆಮನೆಯಿಂದ ಹಿಡಿದು ಗೇಟು ಕಾಯುವವರೆಗೆ ಎಲ್ಲ ಕಡೆಯಲ್ಲೂ ತನ್ನ ಜನರೇ ಇರುವಂತೆ ನೋಡಿಕೊಳ್ಳುತ್ತಾರೆ. ಅಧಿಕಾರದ ಆಯಕಟ್ಟಿನ ಜಾಗಗಳಲ್ಲಿ ತನ್ನ ಪರಿವಾರದವರನ್ನು ಕೂರಿಸಿ ಹಣ ದೋಚಲು ಶುರುವಿಡುತ್ತಾರೆ. ೧೯೯೬ ವೇಳೆಗೆ ಶಶಿಕಲಾ ಮಾತ್ರವಲ್ಲ, ಆಕೆಯ ವಂಶದ ಕಟ್ಟಕಡೆಯ ಸದಸ್ಯನೂ ಕೋಟ್ಯಧೀಶ್ವರನಾಗುವಂತೆ ನೋಡಿಕೊಳ್ಳುತ್ತಾರೆ ಶಶಿಕಲಾ. ಕೆಲವು ವರ್ಷಗಳ ಹಿಂದೆ ಜಯಲಲಿತಾ ಶಶಿಕಲಾ ಮತ್ತವರ ಪರಿವಾರದಿಂದ ಉಸಿರುಗಟ್ಟಿ, ಎಲ್ಲ ಕಡೆಯಿಂದಲೂ ಬುದ್ಧಿಮಾತು ಕೆಳಿ ಜ್ಞಾನೋದಯವಾದಂತಾಗಿ ಆಕೆಯನ್ನು ಹೊರಗಟ್ಟುತ್ತಾರೆ. ಪಕ್ಷದಿಂದಲೂ ಮನೆಯಿಂದಲೂ ಆಚೆ ಇಡುತ್ತಾರೆ. ಆದರೆ ಈ ಮುನಿಸು ಬಹಳ ಕಾಲ ಬಾಳಲಿಲ್ಲ. ಜಯಲಲಿತಾರ ಅನಾಥಪ್ರಜ್ಷೆ, ಅಸಹಾಯಕತೆ, ದೌರ್ಬಲ್ಯಗಳೆಲ್ಲವನ್ನು ನಿಭಾಯಿಸುತ್ತ ಆಕೆಯನ್ನು ವಶೀಕರಣ ಮಾಡಿಕೊಂಡಂತೆ ಇದ್ದ ಶಶಿಕಲಾರನ್ನು ಕೇವಲ ಒಂದೇ ವರ್ಷದಲ್ಲಿ ಮರಳಿ ಕರೆಸಿಕೊಳ್ತಾರೆ ಜಯಾ. ಬಹುಶಃ ಜಯಲಲಿತಾರ ಇಂದಿನ ಸ್ಥಿತಿಗೆ ಶಶಿಕಲಾ ಮತ್ತು ಸುಬ್ರಮಣಿಯನ್‌ ಸ್ವಾಮಿ ಹೇಳುವಂತೆ ಆಕೆಯ ಮನ್ನಾರ್‌ಗುಡಿ ಗ್ಯಾಂಗ್‌ ಮುಖ್ಯ ಕಾರಣ.
~

ಕಾಯುತ್ತಲೇ ಇದೆ ಕನ್ನಡಿ, ನಿಜದ ಮುಖ ಮರಳಿ ಬರುವುದಕ್ಕಾಗಿ...

ಕಾಯುತ್ತಲೇ ಇದೆ ಕನ್ನಡಿ,
ನಿಜದ ಮುಖ ಮರಳಿ ಬರುವುದಕ್ಕಾಗಿ…

ಜಯಲಲಿತಾ ಇಷ್ಟೆಲ್ಲ ದೂರ ಕ್ರಮಿಸಿದ್ದು ಹೂವಿನ ದಾರಿಯ ನಡಿಗೆಯಿಂದಲ್ಲ. ಎಂಜಿಆರ್‌ ಆಕೆಯನ್ನು ಬೆಳೆಸಿದಂತೆ ಕಂಡರೂ ಆತ ಆಕೆಯನ್ನು ಬಳಸಿಕೊಂಡಿದ್ದೇ ಹೆಚ್ಚು. ತನ್ನ ಪ್ರೇಮವನ್ನೂ ಮುರಿದುಕೊಂಡು ಅವರಿಗೆ ಯೀಲ್ಡ್‌ ಆದ ಜಯಲಲಿತಾ ಅದಕ್ಕೆ ತಕ್ಕ ಪ್ರತಿಫಲವನ್ನು ಬಯಸಿದರು. ಎಂಜಿಆರ್‌ ಸ್ಟ್ರೋಕ್‌ ಹೊಡೆದು ಹಾಸಿಗೆ ಹಿಡಿದಾಗ ದೆಹಲಿಗೆ ತೆರಳಿದ ಜಯಲಲಿತಾ, ಅವರ ಅಸಾಮರ್ಥ್ಯದ ಕಾರಣ ನೀಡಿ ತಮ್ಮನ್ನೆ ಮುಖ್ಯಮಂತ್ರಿಯಾಗಿ ನೇಮಿಸುವಂತೆ ಕೇಳಿಕೊಂಡಿದ್ದರು! ಇದರಿಂದ ಕೆಂಡಾಮಂಡಲರಾದ ಎಂಜಿಆರ್‌ ಆಕೆಯನ್ನು ತರಾಟೆಗೆ ತೆಗೆದುಕೊಂಡರು. ಅದಕ್ಕೆ ಜಯಾ ಕೊಟ್ಟ ಉತ್ತರ ಸ್ಪಷ್ಟವಿತ್ತು. “ಇಂದು ನಾನು ಬೆಳೆದು ನಿಂತ ಪ್ರತ್ಯೇಕ ವ್ಯಕ್ತಿ. ನನ್ನಲ್ಲಿ ರಾಜ್ಯ ನಡೆಸುವ ಸಾಮರ್ಥ್ಯವಿದೆ. ನಿಮ್ಮ ಈ ವರೆಗಿನ ಸಹಾಯಕ್ಕೆ ವೈಯಕ್ತಿಕವಾಗಿ ಕೃತಜ್ಞಳಾಗಿದ್ದೇನೆ, ಮುಂದೆಯೂ ಆಗಿರುತ್ತೇನೆ. ಆದರೆ ನನ್ನ ಬೆಳವಣಿಗೆಯ ಹಾದಿಯಲ್ಲಿ ನಾನೇ ಹೆಜ್ಜೆ ಇಡುವುದು ಅಗತ್ಯವಿದೆ”.
ಇದಾದ ನಂತರ ಎಂಜಿಆರ್‌ ಬಹಳ ವರ್ಷ ಬದುಕಲಿಲ್ಲ. ಅವರು ಇಲ್ಲವಾದ ಕಾಲಕ್ಕೆ ಅವರ ಹೆಂಡತಿ ಜಾನಕಿ ಅಧಿಕಾರಕ್ಕೆ ಬಂದರು. ಅವರ ವಿರುದ್ಧ ಸೆಟೆದುಬಿದ್ದ ಜಯಾ ಎಂಜಿಆರ್‌ ಮೇಲೆ ತಮಗಿದ್ದ ಹಕ್ಕನ್ನು ಪ್ರತಿಪಾದಿಸುತ್ತಾ ಮತ್ತೊಂದು ಬಣ ಹುಟ್ಟುಹಾಕಿದರು. ಅಪಾರ ಬೆಂಬಲಿಗರೊಂದಿಗೆ ಛಲಕ್ಕೆ ಬಿದ್ದು ಮೂರ್ನಾಲ್ಕು ವರ್ಷಗಳಲ್ಲಿ ಮುಖ್ಯಮಂತ್ರಿಯಾಗಿಯೂ ಬಿಟ್ಟರು.
ಈ ಎಲ್ಲ ಸಂದರ್ಭಗಳಲ್ಲೂ ಅವರ ಜೊತೆಗಿದ್ದರು ಶಶಿಕಲಾ. ಅಧಿಕಾರ ಹಿಡಿದ ನಾಲ್ಕೇ ವರ್ಷಗಳಲ್ಲಿ ಹಗರಣಗಳ ಸರಮಾಲೆ ಜಯಾ ಕೊರಳನ್ನು ಸುತ್ತಿತು. ಅನಂತರದ ಚುನಾವಣೆಗಳಲ್ಲಿ ಹೇವು ಏಣಿಯಾಟ ಆಡಿದರು ಜಯಲಲಿತಾ. ಜಿದ್ದು – ಸೇಡಿನ ರಾಜಕಾರಣಗಳು ನಡೆದವು. ಇವುಗಳ ನಡುವೆ ಒಂದೂವರೆ ಲಕ್ಷ ಅಥಿತಿಗಳಿಗೆ ಉಣಬಡಿಸಿ ತಮ್ಮ ಸಾಕುಮಗನಿಗೆ ಅದ್ದೂರಿಯ ಮದುವೆ ಮಾಡಿ ಗಿನ್ನಿಸ್‌ ಪುಸ್ತಕದಲ್ಲೂ ದಾಖಲೆಯಾದರು ಜಯಲಲಿತಾ.
ವಿಧಾನ ಸಭೆಯಲ್ಲಿ ಕಿಡಿಗೇಡಿಗಳು ಆಕೆಯ ಸೀರೆ ಎಳೆದರೆಂದು ಗೌನ್‌ ಹಾಕಿಕೊಂಡು ಓಡಾಡತೊಡಗಿದರು. ಕರುಣಾನಿಧಿ ಅಧಿಕಾರಕ್ಕೆ ಬಂದಾಗ ತಮ್ಮ ಆಭರಣಗಳನ್ನು ಸೀಜ್‌ ಮಾಡಿದರೆಂದು ಕೋಪಿಸಿಕೊಂಡ ಜಯಾ ಹದಿನಾಲ್ಕು ವರ್ಷಗಳ ಕಾಲ ಆಭರಣವನ್ನ ತೊಟ್ಟಿರಲಿಲ್ಲ! ಅವರು ಮತ್ತೆ ಚಿನ್ನ ಮುಟ್ಟಿದ್ದು ಮತ್ತೆ ಅಧಿಕಾರದ ಗಾದಿ ಏರಿದಾಗಲೇ.
~
ಸ್ವಾಭಿಮಾನ, ಗರ್ವ, ಮಹತ್ವಾಕಾಂಕ್ಷೆ, ಹೊಡೆತಗಳು, ಮೇಲ್ನೋಟದ ಗೆಲುವು ಹಾಗೂ ಅಂತರಂಗದ ಸೋಲುಗಳು, ಪ್ರೇಮದ ಹಪಾಹಪಿ, ಮುಖವಾಡಗಳಲ್ಲೆ ಮುಚ್ಚಿಹೋದ ಮುಖದ ನೋವು – ಈ ಎಲ್ಲವೂ ಯಾವುದೇ ವ್ಯಕ್ತಿಯನ್ನು ವಂಚಕನನ್ನಾಗಿ ರೂಪಿಸುತ್ತದೆ. ಅದರಲ್ಲಿಯೂ ವಂಚನೆಗೊಳಗಾದ, ದಬಾವಣೆಗೊಳಪಟ್ಟ ಹೆಣ್ಣನ್ನು ಹಟಮಾರಿಯನ್ನಾಗಿಸುತ್ತದೆ. ಭ್ರಷ್ಟ ಜಯಲಲಿತಾ ಈ ಎಲ್ಲದರ ಫಲಿತಾಂಶ ಎಂದನ್ನಿಸುತ್ತದೆಯಲ್ಲವೆ?
~
ಅಂದ ಹಾಗೆ, ನಮ್ಮ ನಮ್ಮ ನೆಲೆಗೆ ಅನ್ವಯಿಸಿಕೊಂಡಾಗ ನಾವು ಎಲ್ಲೆಲ್ಲಿ ಭ್ರಷ್ಟರಾಗಿದ್ದೇವೆ? ನಮನಮಗೆ ಸಿಕ್ಕ ಅವಕಾಶಗಳಲ್ಲಿ?

ವೇಶ್ಯಾವಾಟಿಕೆ ಎಂಬ ವೃತ್ತಿ ಮತ್ತು ವಂಚನೆ

ವೇಶ್ಯಾವಾಟಿಕೆ ಭಾರತಕ್ಕೆ ಹೊಸತೇನಲ್ಲ. ಪೌರಾಣಿಕ ಅಪ್ಸರೆಯರ ಕಾಲದಿಂದಲೂ ಈ ಕಾಯಕ ಅಸ್ತಿತ್ವದಲ್ಲಿರುವಂಥದ್ದೇ. ಆದರೆ ಅಂದಿಗೂ ಇಂದಿಗೂ ವೇಶ್ಯಾವಾಟಿಕೆಯ ವಿಷಯ ಬಂದಾಗ ಅದರಲ್ಲಿ ತೊಡಗಿರುವ ಹೆಣ್ಣಿಗೇ ಕಳಂಕ ಮೆತ್ತುವುದು ನಮ್ಮ’ಸಂಸ್ಕೃತಿ’ಯ ಪರಿಪಾಠ. ಇಂಥದೊಂದು ಕಾಯಕ ಗಂಡಸಿನದೇ ಸೃಷ್ಟಿ. ತಾನು ಅನುಭೋಗಿಸಲು ತನ್ನ ಸಂಸಾರದಾಚೆಗಿನ ಒಂದು ಹೆಣ್ಣು ಬೇಕಾದ ಸಂದರ್ಭದಲ್ಲಿ ಆತ ವೇಶ್ಯಾವಾಟಿಕೆಯನ್ನು ಹುಟ್ಟು ಹಾಕಿದ. ಪೌರಾಣಿಕ ಇಂದ್ರಾದಿಗಳು ತಮ್ಮ ಸ್ವರ್ಗ ಲೋಕದ ವಿಸಿಟ್‌ಗೆ ಬರುವ ಋಷಿಮುನಿಗಳು, ರಾಜಾಧಿರಾಜರ ‘ಮನರಂಜನೆ’ಗೆ ಅಪ್ಸರೆಯರನ್ನು ನೇಮಿಸಿ ‘ಸಕಲ ಸೇವೆ’ಗೆ ಬಿಡುತ್ತಿದ್ದಂತೆಯೇ ನಮ್ಮ ನೆಲದಲ್ಲೂ ಸ್ವಂತ ದೇಹದ ತಣಿವಿಗೆ, ಅಥಿತಿ ಸತ್ಕಾರಕ್ಕೆ, ರಾಜಕಾರಣಕ್ಕೆ, ವ್ಯವಹಾರಕ್ಕೆ ಕೊನೆಗೆ ದೇವರ ಸೇವೆಗೂ ಹೆಣ್ಣು ಬೇಕಾಗಿ ‘ನಗರ ವಧು’ಗಳನ್ನೂ ‘ದೇವದಾಸಿ’ಯರನ್ನೂ ಸೃಷ್ಟಿ ಮಾಡಿ, ವೇಶ್ಯಾವಾಟಿಕೆ ಕಾಯಕಕ್ಕೆ ನಾಂದಿ ಹಾಡಿದ್ದು ಹೆಣ್ಣನ್ನು ಕೇವಲ ಭೋಗ ವಸ್ತುವಾಗಿ ಕಂಡ ಪುರುಷ ಸಮುದಾಯವೇ. ಹೀಗಿರುವಾಗ ನಮ್ಮ ಸಮಾಜ ವೇಶ್ಯಾವಾಟಿಕೆಗೆ ಹಚ್ಚಿದ ಗಂಡಸರನ್ನು ‘ವೀರ್ಯವಂತ’ರಂತೆ ಕಂಡು, ಅದರ ಕಾಯಕಕ್ಕಿಳಿದ ಹೆಂಗಸರನ್ನು ಹೀನವಾಗಿ ಕಾಣುತ್ತ ಆ ಒಂದು ಸಮುದಾಯವನ್ನೆ ದೂರವಿಡುತ್ತ ಬಂದಿರುವುದು ಮನುಷ್ಯ ಸಮುದಾಯದ ದೊಡ್ಡ ವ್ಯಂಗ್ಯ. ಬೇಕಿದ್ದರೆ ಗಮನಿಸಿ. ವೇಶ್ಯೆಯರ ಸಹವಾಸ ಮಾಡುವ ಗಂಡಸನ್ನು ಆತನ ಕುಟುಂಬದವರು ಹೇಗೋ ಸಹಿಸಿಕೊಂಡುಬಿಡುತ್ತಾರೆ. ಊರಿನಲ್ಲಿ ಅದು ಆತನ ಪ್ರತಿಷ್ಠೆಯ ಸಂಗತಿಯಾಗಿರುತ್ತದೆ. ಅದೇ ಆತನಿಗೆ ಒದಗುವ ವೇಶ್ಯೆಯನ್ನು ಆಕೆಯ ಕುಟುಂಬ ಮನೆಯೊಳಗೂ ಇಟ್ಟುಕೊಂಡಿರುವುದಿಲ್ಲ. ವಾಸ್ತವದಲ್ಲಿ ಆಕೆಗೊಂದು ಸಂಸಾರ ಎಂಬುದೇ ಉಳಿದಿರುವುದಿಲ್ಲ. ಊರಿನಲ್ಲಂತೂ ಅಂಥವಳಿಗೆ ಬಹಿಷ್ಕಾರವೇ ಸರಿ. ಇಂಥದೊಂದು ಸಾಮುದಾಯಿಕ ಮನಸ್ಥಿತಿ ಹುಟ್ಟಿಕೊಂಡಿದ್ದು ಹೇಗೆ? ವೇಶ್ಯಾವಾಟಿಕೆಯೇ ಒಂದು ಅನೈತಿಕ ಸಂಗತಿ ಎಂದಾದಲ್ಲಿ, ಅದರಲ್ಲಿ ತೊಡಗುವ ಗಂಡು ಮತ್ತು ಹೆಣ್ಣುಗಳಿಬ್ಬರೂ ಸಮಾನ ದೋಷಿಗಳಾಗಬೇಕಿತ್ತು. ರೈಡ್‌ಗಳಾದಾಗ ಸೆರೆಮನೆಗಟ್ಟುವ ಕಾನೂನಿನ ಹೊರತಾಗಿ, ಸಾಮಾಜಿಕವಾಗಿ ಯೋಚಿಸುವಾಗ ಪರಿಣಾಮದಲ್ಲಿ ವ್ಯತ್ಯಾಸವಾಗಲು ಕಾರಣವೇನು? ಎಲ್ಲಕ್ಕಿಂತ ಮುಖ್ಯ ಪ್ರಶ್ನೆ, ವೇಶ್ಯೆಯರ ಜೊತೆ ಸಂಪರ್ಕ ಬೆಳೆಸುವವರು ಸಮಾಜದಲ್ಲಿ ಎಲ್ಲರ ಜೊತೆ ಕುಳಿತೆದ್ದು ಗೌರವ ಪಡೆದುಕೊಂಡೇ ಇರುತ್ತಾರೆ. ಆದರೆ ಇದರಲ್ಲಿ ತೊಡಗಿದ ಹೆಣ್ಣುಗಳಿಗೆ ಮಾತ್ರ ಅಂತಹ ಗೌರವವನ್ನೂ ಸಮಾನತೆಯನ್ನೂ ನಿರಾಕರಿಸಲಾಗುತ್ತದೆ. ಈ ತಾರತಮ್ಯ ಹುಟ್ಟುಹಾಕಿದ್ದರ ಹಿನ್ನೆಲೆಯನ್ನು ಅರಿತರೆ ಪುರುಷನ ಸ್ವಾರ್ಥ ಕಣ್ಣಿಗೆ ರಾಚುತ್ತದೆ.

ಗಂಡಸರ ತೀರ್ಪುಗಳಿಂದ ಹೊರಬಂದು ಯೋಚಿಸಿದಾಗ ಹೆಣ್ಣು ಯಾವತ್ತಿಗೂ ಹೆಣ್ಣಿಗೆ ಶತ್ರುವಾಗಿರುವುದಿಲ್ಲ. ಗಂಡಸು ತನ್ನ ಬೇಳೆ ಬೇಯಿಸಿಕೊಳ್ಳಲಿಕ್ಕಾಗಿ ಎರಡು ಹೆಣ್ಣುಗಳ ನಡುವೆ ವೈಮನಸ್ಯ ತಂದಿಡುತ್ತಾನೆ. ಅದು ತನ್ನ ಹೆಂಡತಿ ಹಾಗೂ ಪ್ರೇಯಸಿಯ ನಡುವೆಯೇ ಇರಬಹುದು, ಹೆಂಡತಿ ಹಾಗೂ ತಾಯಿ ಅಥವಾ ಸಹೋದರಿಯರ ನಡುವೆಯೇ ಇರಬಹುದು. ಆತನಿಗೆ ಹೆಣ್ಣುಗಳ ಒಗ್ಗಟ್ಟಿನ ಬಲದ ಅರಿವು ಇರುವುದರಿಂದಲೇ ಅವರನ್ನು ಸಾಧ್ಯವಾದಷ್ಟು ದೂರ ಇಡಲು ಸಾಹಸಪಡುತ್ತಾನೆ. ವೇಶ್ಯೆಯರ ವಿಷಯದಲ್ಲಿಯೂ ಆಗಿದ್ದು ಹೀಗೇ. ನಮ್ಮದೇ ಹಿಂದೆರಡು ತಲೆಮಾರುಗಳನ್ನು ಕೆದಕಿ ನೋಡಿದರೆ ನಮ್ಮ ಮುತ್ತಜ್ಜಿಯರು ಅವರ ಗಂಡಂದಿರ ‘ಚಿಕ್ಕ ಮನೆ’ಗೆ ಸಹಾಯ ಮಾಡುತ್ತಿದ್ದುದು ಕಂಡುಬರುತ್ತದೆ. ವೇಶ್ಯೆ ಅನ್ನಿಸಿಕೊಂಡವಳನ್ನು ಹೊರಬಾಯಲ್ಲಿ ದೂರಿದರೂ ಅಂತರಂಗದಲ್ಲಿ ಆಕೆಯ ಬಗೆಗೊಂದು ಮೃದು ಭಾವನೆ ಇದ್ದುದು ಎದ್ದು ತೋರುತ್ತದೆ. ಹಾಗೆಂದೇ ಗಂಡಸರ ಎಷ್ಟೆಲ್ಲ ಕಟ್ಟುನಿಟ್ಟಿನ ನಡುವೆಯೂ ಗೃಹಿಣಿಯರು ಕೆಲವು ಪೂಜೆ ಪುನಸ್ಕಾರಗಳಿಗೆ ವೇಶ್ಯೆಯರನ್ನು ಕರೆಸುವ ರೂಢಿ ಹುಟ್ಟುಹಾಕಿಕೊಂಡಿದ್ದರು. ಕ್ರಿಸ್ತ ಪೂರ್ವ ಎರಡನೇ ಶತಮಾನದ ಕಾಲದಲ್ಲೇ ಶೂದ್ರಕ ಎಂಬ ನಾಟಕಕಾರನು ತನ್ನ ಮೃಚ್ಛಕಟಿಕ ನಾಟಕದಲ್ಲಿ ಇಂಥ ಸನ್ನಿವೇಶಗಳನ್ನು ಪರಿಣಾಮಕಾರಿಯಾಗಿ ದಾಖಲಿಸಿದ್ದಾನೆ. ಗಂಡಸಿನ ಮಟ್ಟಿಗೆ ಲೈಂಗಿಕತೆ ಕೇವಲ ಲಿಂಗ ಸಂಬಂಧಿಯಲ್ಲ. ಅದು ಕೇವಲ ಅಂಗವೊಂದರ ಅನಿವಾರ್ಯತೆ ಅಲ್ಲ. ಅದು ಆತನ ಪ್ರತಿಷ್ಠೆಯ, ಮೇಲರಿಮೆಯ, ಧೀರತನದ ಪ್ರಶ್ನೆ. ಅದು ಅಪ್ಪಟ ಪುರುಷ ಧೋರಣೆ. ಇಂತಹ ಧೋರಣೆಯ ಗಂಡಸರು ತಮ್ಮ ವಿವಾಹೇತರ ಸಂಬಂಧಕ್ಕೆ ಪತ್ನಿಯ ಸಮ್ಮತಿ ದೊರಕಿಬಿಟ್ಟರೆ ಅದರ ಸ್ವಾರಸ್ಯ ಕಳೆದುಕೊಂಡುಬಿಡುತ್ತಾರೆ. ಅವರು ವಿದ್ರೋಹದಲ್ಲೆ ಸುಖಿಸುವವರು. ಆದ್ದರಿಂದಲೇ ಅಂಥವರಿಗೆ ವೇಶ್ಯಾವಾಟಿಕೆಗೆ ಮುಕ್ತವಿರುವ ಕೆಂಪುದೀಪ ಅಥವಾ ಸೋನಾಕಾಚಿ ಸಾಕಾಗುವುದಿಲ್ಲ. ನಗರದ ನಡುವೆಯೇ ಕದ್ದುಮುಚ್ಚಿ ವೇಶ್ಯೆಯರ ಸಹವಾಸ ಮಾಡುವುದರಲ್ಲಿ ಅವರಿಗೆ ಹೆಚ್ಚಿನ ತೃಪ್ತಿ ದೊರಕುತ್ತದೆ. ದೇಹ ತೃಪ್ತಿಗೊಳಿಸಲು ಮತ್ತೊಂದು ದೇಹ ಸಾಕು. ಅದರ ಜೊತೆಗೆ ಅಹಂಕಾರವೂ ತೃಪ್ತಿಗೊಳ್ಳಬೇಕೆಂದರೆ ಭಾರೀ ಸವಾಲುಗಳೇ ಇರಬೇಕು! ಬಹುಶಃ ಈ ಕಾರಣದಿಂದಲೇ ವೇಶ್ಯಾವಾಟಿಕೆಯನ್ನು ಸೃಷ್ಟಿಸಿದ ಗಂಡಸು ಅದನ್ನು ನೈತಿಕತೆಯ ಹೊರಗಿಟ್ಟು ‘ಸಮಾಜ ಬಾಹಿರ’ವೆಂದು ಘೋಷಿಸಿದ್ದು.

ಹೆಚ್ಚೂಕಡಿಮೆ ಮದುವೆ ಅನ್ನುವ ಕಟ್ಟುಪಾಡು ಹುಟ್ಟಿಕೊಂಡ ಆಜೂಬಾಜು ಅವಧಿಯಲ್ಲೇ ವೇಶ್ಯಾವಾಟಿಕೆ ಎಂಬ ಕಾಯಕವೂ ಹುಟ್ಟಿಕೊಂಡಿದೆ. ಒಂದು ರೀತಿಯಿಂದ ನೋಡಿದರೆ ಇದು ಜಗತ್ತಿನಲ್ಲೇ ಅತ್ಯಂತ ಪುರಾತನ ಉದ್ಯೋಗ. ಹೆಣ್ಣಿನ ದೃಷ್ಟಿಯಿಂದ ನೋಡುವಾಗ ಈ ಕಾಯಕಕ್ಕೆ ‘ಉದ್ಯೋಗ’ ಎನ್ನುವ ಮನ್ನಣೆ ನೀಡುವ ಅಗತ್ಯವಿದೆ. ಗಂಡಿನ ನಿಟ್ಟಿನಲ್ಲಿ ಇದೊಂದು ವಂಚನಾಜಾಲ. ಏಕೆಂದರೆ ಯಾವ ಹೆಣ್ಣೂ ತಾನಾಗಿಯೇ ಬಯಸಿ ವೇಶ್ಯಾವಾಟಿಕೆಗೆ ಇಳಿಯುವುದಿಲ್ಲ. ಒಬ್ಬ ಹೆಣ್ಣು ಈ ವೃತ್ತಿಗೆ ಇಳಿಯಬೇಕು ಎಂದಾದರೆ, ಅವಳ ದೇಹವನ್ನು ‘ಖರೀದಿಸುವ’ ಒಬ್ಬ ಗಿರಾಕಿ ಇರಲೇ ಬೇಕಾಗುತ್ತದೆ. ಮತ್ತು ದೇಹ ಮಾರುವವಳ ಹಾಗೂ ಕೊಳ್ಳುವವನ ನಡುವೆ ದಲ್ಲಾಳಿಗಳೂ ಬೇಕಾಗುತ್ತಾರೆ. ಈ ದಲ್ಲಾಳಿಗಳು ಹಣ ಮಾಡುವ ದುರುದ್ದೇಶದಿಂದ ಹೆಣ್ಣು ಕದಿಯುವ ಹೀನ ಕೆಲಸಕ್ಕೆ ಕೈಹಾಕುತ್ತಾರೆ. ಆಗ ವೇಶ್ಯಾವಾಟಿಕೆಯ ಕ್ರೂರ ಅಧ್ಯಾಯಗಳು ತೆರೆದುಕೊಳ್ಳುತ್ತವೆ. ಇಂದು ಈ ವೃತ್ತಿ ಭೂಮಿಯ ಮೇಲಿನ ಅತ್ಯಂತ ಹೊಲಸು ವೃತ್ತಿಯಾಗಿ ಪರಿಣಮಿಸಿರುವುದು ಈ ದಲ್ಲಾಳಿಗಳಿಂದಲೇ. ಲೋಭಿಗಳಾದ ಇವರು ಅಸಹಾಯಕ ಪರಿಸ್ಥಿತಿಯಲ್ಲಿರುವ ಹೆಣ್ಣುಗಳನ್ನು ವೇಶ್ಯಾವಾಟಿಕೆಗೆ ಸೆಳೆಯುತ್ತಾರೆ. ಚಿಕ್ಕ ಮಕ್ಕಳೂ ಬಿಡದಂತೆ ಹೆಣ್ಣುಗಳನ್ನು ಅಪಹರಿಸುವ ಧಂಧೆಗೆ ಕೈಹಾಕುತ್ತಾರೆ. ಕೆಲವರು ಬಡ ತಾಯ್ತಂದೆಯರಿಂದಲೋ ಸಂಬಂಧಿಗಳಿಂದಲೋ ದುಡ್ಡು ತೆತ್ತು ಖರೀದಿಸಿ ತರುವುದೂ ಇದೆ. ಆದ್ದರಿಂದ ‘ವೇಶ್ಯಾವಾಟಿಕೆ’ಯ ಮಾತು ಬಂದಾಗ ಅದರಲ್ಲಿ ತೊಡಗಿರುವ ಹೆಣ್ಣು ಕೇವಲ ಸಲಕರಣೆಯಾಗಿರುತ್ತಾಳೆ ಅನ್ನುವುದನ್ನು ನೆನಪಿನಲ್ಲಿಡಬೇಕು. ಆಕೆ ತನ್ನ ವೃತ್ತಿ ಮಾಡುತ್ತಿರುವಳಷ್ಟೇ. ಆ ವೃತ್ತಿಯನ್ನು ಕಲ್ಪಿಸಿದವರು, ಅದರ ಸೇವೆ ಹಾಗೂ ಲಾಭಗಳನ್ನು ಪಡೆಯುತ್ತಿರುವವರು ಇಲ್ಲಿ ನಿಜವಾದ ದೋಷಿಗಳಾಗಿರುತ್ತಾರೆ.

ಇತ್ತೀಚೆಗೆ ಲೈಮ್‌ಲೈಟ್‌ ಹೆಣ್ಣುಮಕ್ಕಳು ಮತ್ತೆ ಸೆಕ್ಸ್‌ ರಾಕೆಟ್‌ನಲ್ಲಿ ಸುದ್ದಿಯಾಗುತ್ತಿದ್ದಾರೆ. ಆಗಿಂದಾಗ ಇಂಥ ಪ್ರಕರಣಗಳು ಸದ್ದು ಮಾಡಿ ಆ ಎಲ್ಲ ಹೆಣ್ಣುಮಕ್ಕಳ ಹೆಸರುಗಳು ನೆನಪಲ್ಲಿ ಉಳಿಯುವಂತಾಗಿದೆ. ಆಶ್ಚರ್ಯವೆಂದರೆ, ಅವರು ಯಾರಿಗಾಗಿ ಆ ಕೆಲಸ ಮಾಡುತ್ತಿದ್ದರು, ಹಿಡಿಯಲ್ಪಟ್ಟಾಗ ಯಾರ ಜೊತೆ ಇದ್ದರು ಅನ್ನುವುದೆಲ್ಲ ಇವತ್ತಿಗೂ ತೆರೆಮರೆಯಲ್ಲೇ ಇರುವುದು! ಇತ್ತೀಚಿನ ಶ್ವೇತಾ ಬಸು ಪ್ರಸಾದ್‌ ಪ್ರಕರಣದಲ್ಲಂತೂ ಈ ತಾರತಮ್ಯ ಅಸಹ್ಯವೆನ್ನಿಸುವಷ್ಟು ಪ್ರಮಾಣದಲ್ಲಿದೆ. ಸ್ಟಿಂಗ್‌ ಆಪರೇಷನ್ ನಡೆಸಿದ ಮಂದಿ ಆಕೆಯ ಫೋಟೋ ಮತ್ತು ಹೆಸರನ್ನು ಬೊಬ್ಬಿರಿದು ಪ್ರಚಾರ ಮಾಡಿದರೇ ಹೊರತು, ಅವರೊಂದಿಗೆ ಇದ್ದವರು ಯಾರು ಅನ್ನುವ ಸುಳಿವನ್ನೂ ಬಿಟ್ಟುಕೊಟ್ಟಿಲ್ಲ. ಈತನಕದ ಮಾಹಿತಿಯಂತೆ ಶ್ವೇತಾ ಪೊಲೀಸರ ಬಳಿ ತಮ್ಮ ಹೈಪ್ರೊಫೈಲ್ಡ್‌ ಗಿರಾಕಿಗಳ ಹೆಸರನ್ನು ಹೇಳಿಕೊಂಡಿದ್ದಾರೆ. ಆದರೆ ಮುಂದೆ ನ್ಯಾಯಾಲಯದಲ್ಲೂ ಅವರು ಬಹಿರಂಗಪಡಿಸುತ್ತಾರಾ ಅನ್ನುವ ಖಾತ್ರಿ ಇಲ್ಲ. ಏಕೆಂದರೆ ಶ್ವೇತಾ ಗಿರಾಕಿಗಳ ಲಿಸ್ಟಿನಲ್ಲಿ ಚಿತ್ರ ನಟರು, ರಾಜಕಾರಣಿಗಳು, ಉದ್ಯಮಿಗಳು ಹೀಗೆ ಭಾರೀ ಜನರೇ ಇದ್ದಾರೆಂಬ ಊಹೆಯಿದೆ. ಅವರೆಲ್ಲರ ಪ್ರಭಾವದಿಂದ ಈ ಪ್ರಕರಣ ಆಕೆಯ ಹೆಸರಿಗೊಂದು ಕಪ್ಪು ಚುಕ್ಕೆ ಇಟ್ಟು ಮುಗಿದುಹೋಗುತ್ತದೆಯಾ ಅನ್ನುವ ಅನುಮಾನವೂ ಇದೆ. ಇಲ್ಲಿ ಏನು ಬೇಕಾದರೂ ಆಗಬಹುದು. ಏಕೆಂದರೆ ಇದು ಗಂಡು ಪ್ರಾಬಲ್ಯದ ಜಗತ್ತು. ಇಲ್ಲಿ ಇತಿಹಾಸ ನಿರ್ಮಿಸಿದವರು ಯಾರೇ ಇದ್ದರೂ ಬರೆಯುವವರು ಮಾತ್ರ ಅವರೇ. ಅಪರಾಧ, ನೈತಿಕತೆ ಎಲ್ಲದರ ಮಾನದಂಡವನ್ನು ನಿರ್ಧರಿಸುವವರೂ ಅವರೇ. ವೇಶ್ಯಾವಾಟಿಕೆಯ ಕಪ್ಪುಕುಳಿಯನ್ನು ತೋಡಿ ಹೆಣ್ಣುಗಳನ್ನು ಅದರಾಳಕ್ಕೆ ದೂಕುತ್ತಾ, ಜಾರಿ ಬಿದ್ದ ‘ಜಾರಿಣಿ’ ಎಂದು ದೂಷಿಸುವ ಈ ಸಹಜೀವಿಗಳ ಅಂತರಂಗದಲ್ಲಿ ಹೆಣ್ತನ ಚಿಗುರಿದ ಕಾಲಕ್ಕಷ್ಟೆ ಎಲ್ಲವೂ ಬದಲಾಗಬಹುದೆಂಬ ಆಶಯ ಕೊನೆಗೆ.

ಶಂಭೂಕನ ಮಕ್ಕಳು ಹಾಗೂ ಸೀತೆಯ ಹೆಣ್ಣುಗಳು ಕೈಜೋಡಿಸಿ ನಡೆದರೆ….

“ಅಂಕ ವಾಣಿ” ಸಾಂಸ್ಕೃತಿಕ ಪತ್ರಿಕೆ ಜುಲೈ ತಿಂಗಳ ಅಂಬೇಡ್ಕರ್‍ ವಿಶೇಷಾಂಕದಲ್ಲಿ ಪ್ರಕಟಿತ ಲೇಖನ. ~ ಋತಾ 
ಶಂಭೂಕರು ಮತ್ತು ಸೀತೆಯರನ್ನು
 ಗೋಳಾಡಿಸುವ ನೆಲಕ್ಕೆ
ನೆಮ್ಮದಿ ಮರೀಚಿಕೆ.
ರಾಮನಿಗಾಗಿ ಇಟ್ಟಿಗೆ ಹೊರುವವರಿಗೆ ತಾವು
ದೇಶದ ಗೋರಿ ಕಟ್ಟುವ ತಯಾರಿಯಲ್ಲಿರೋದು ಗೊತ್ತಿಲ್ಲವಾ?
– ಪ್ರಶ್ನೆ ಕಾಡುತ್ತದೆ. ಸಂಖ್ಯೆಯಲ್ಲಿ ಬಹಳವಿಲ್ಲದ ಒಂದು ಸಮುದಾಯ ಹೆಣ್ಣನ್ನೂ ಹಿಂದುಳಿದವರನ್ನೂ (ಹಿಂದುಳಿಸಲಾಗಿದೆ ಇವರನ್ನು) ಅಷ್ಟು ಸುಲಭವಾಗಿ ಶೋಷಿಸಿಕೊಂಡು ಬರಲು ಹೇಗೆ ಸಾಧ್ಯವಾಗಿದೆ?
ಸಿರಾಜುದ್ದೌಲನನ್ನುರಾಬರ್ಟ್‌ ಕ್ಲೈವನ ಚಿಕ್ಕ ತುಕಡಿ ಸೋಲಿಸುತ್ತದೆ. ಅನಂತರದಲ್ಲಿ ಬಂಗಾಳದ ಮುಖ್ಯ ಬೀದಿಯಲ್ಲಿ ಪಥ ಸಂಚಲನ ಮಾಡುತ್ತದೆ. ಜನರೆಲ್ಲ ಬಾಗಿಲ ಹಿಂದೆ ಅವಿತು ನೋಡುತ್ತಾರೆ. ಯಾರೂ ಬೀದಿಗೆ ಇಳಿಯುವ ಸಾಹಸ ಮಾಡುವುದಿಲ್ಲ. ಸ್ವತಃ ರಾಬರ್ಟ್‌ ಕ್ಲೈವನಿಗೆ ಇದು ಅಚ್ಚರಿ. ತನ್ನ ಗೆಲುವನ್ನು ಆತ ಆತನಕ ನಂಬಿಕೊಂಡಿರಲಿಲ್ಲ. ಈಗ ಖಾತ್ರಿಯಾಗುತ್ತದೆ. ಕ್ಲೈವ್‌ ತನ್ನ ಡೈರಿಯಲ್ಲಿ ಬರೆಯುತ್ತಾನೆ, “ಈ ಭಾರತದ ಜನ ಎಂಥವರಿದ್ದಾರೆ! ನಾವು ಎಲ್ಲಿಂದಲೋ ಬಂದ ಹಿಡಿಯಷ್ಟು ಸೈನಿಕರು ಅಷ್ಟು ದೊಡ್ಡ ಸಾಮ್ರಾಜ್ಯವನ್ನು ಸೋಲಿಸಿದೆವು. ನಾವು ಪಥ ಸಂಚಲನ ಮಾಡುವಾಗ ಅಲ್ಲಿನ ಮನೆಗಳಿಂದ ಒಬ್ಬೊಬ್ಬರು ಒಂದೊಂದು ಕಲ್ಲು ಬೀಸಿದರೂ ಸಾಕಿತ್ತು, ನಾವು ನಿರ್ನಾಮವಾಗುತ್ತಿದ್ದೆವು. ಈ ಜನ ಅದೆಷ್ಟು ಮೂಢರಿದ್ದಾರೆ!”  ವಾಸ್ತವದಲ್ಲಿ ಆ ಯುರೋಪಿಯನ್ನರೇನೂ ಬುದ್ಧಿವಂತರಿರಲಿಲ್ಲ. ಶೂರರೂ ಆಗಿರಲಿಲ್ಲ. ಅವರಿಗಿದ್ದುದು ಮೈಬಣ್ಣ ಮತ್ತು ಕುಟಿಲ ಬುದ್ಧಿಗಳಷ್ಟೆ. ಅವುಗಳನ್ನೆ ಮುಂದಿಟ್ಟುಕೊಂಡು ಜಗತ್ತಿನ ಇತರ ಭಾಗಗಳ ಜನರಲ್ಲಿ ಕೀಳರಿಮೆ ಮೂಡುವಂತೆ ಮಾಡಿ ಬಾವುಟ ನೆಟ್ಟರು.
ಆದರೆ ಈ ಭಾರತದ ಜನ ಕ್ಲೈವ್ ಅಂದುಕೊಂಡಂತೆ ಮೂಢರೇನೂ ಇರಲಿಲ್ಲ. ಅವರು ತಮ್ಮೊಳಗಲ್ಲಿ ಅವನು ಮಾಡಿದ್ದ ಕೆಲಸವನ್ನೇ ಮಾಡುತ್ತಿದ್ದರು. ತಮ್ಮ ಕೆಲವು ಗುಣಲಕ್ಷಣಗಳನ್ನೆ ಶ್ರೇಷ್ಠವೆಂಬಂತೆ ಬಿಂಬಿಸಿಕೊಂಡು ‘ಮೇಲ್ವರ್ಗ’ ಎಂಬ ಪಂಗಡವನ್ನು ಸೃಷ್ಟಿಸಿಕೊಂಡಿದ್ದರು. ಅವರ ಕುಟಿಲತೆಗೆ ಪಕ್ಕಾದ ಮುಗ್ಧ, ದುಡಿಯುವ ಸಮುದಾಯವು ತಮ್ಮನ್ನು ‘ಕೆಳ ವರ್ಗ’ ಎಂದು ಒಪ್ಪಿಕೊಂಡು ಬಾಗಿಲಾಚೆ ನಿಂತಿದ್ದರು. ಪುರುಷ ಮನಸ್ಥಿತಿ ಹೆಣ್ಣು ಮಕ್ಕಳ ಮೇಲೆ ಎಸಗಿದ್ದೂ ಇದೇ ವಂಚನೆಯನ್ನೇ. ಹೀಗೆ ಕೀಳರಿಮೆಯನ್ನು ಹೇರಿಸಿಕೊಂಡ ದಲಿತರು ಮತ್ತು ಹೆಣ್ಣು ಮಕ್ಕಳು ಈ ಹುನ್ನಾರವನ್ನೀಗ ಅರಿತಿದ್ದಾರೆ. ಕೊಂಚ ಕೊಂಚವಾಗಿ ಅದರಿಂದ ಹೊರಬಂದು ಕೈಯಲ್ಲಿ ಕಲ್ಲು ಹಿಡಿಯುವ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
~
ಹೆಣ್ಣುಮಕ್ಕಳು ಅದು ಹೇಗೆ ದಲಿತರು? ಗೆಳೆಯರು ಕೇಳುತ್ತಾರೆ. ಮುಟ್ಟಾಗಿ ಕುಳಿತ ಮೂರು ದಿನವನ್ನು ಇಂದಿಗೂ ‘ಹೊಲೆ’ ಎಂದು ಕರೆಯುವವರು ಇಲ್ಲವೆ? ಅದಿರಲಿ, ನನ್ನ ಪ್ರಕಾರ ಯಾರ ಮೇಲೆ ಸಹಜ ಬದುಕಿಗೆ ನಿಷೇಧ ಹೇರಲಾಗಿರುತ್ತದೆಯೋ ಅವರು ದಲಿತರು. ಕೆಳಗೆ ತಳ್ಳಲ್ಪಟ್ಟ ಸಮುದಾಯದಲ್ಲಿ ಹುಟ್ಟಿದ್ದಾರೆ ಅನ್ನುವ ಕಾರಣದಿಂದದಲೇ ಒಂದು ವರ್ಗ ಶೋಷಣೆಗೆ ಒಳಗಾಗುತ್ತದೆಯಲ್ಲವೆ? ಹಾಗೆಯೇ ಹೆಣ್ಣುಗಳು ಕೂಡ ಅವರು ಹೆಣ್ಣಾಗಿ ಹುಟ್ಟಿದ್ದಾರೆ ಅನ್ನುವ ಕಾರಣಕ್ಕೆ ಶೋಷಣೆಗೆ ಒಳಗಾಗುತ್ತಾರೆ. ಸ್ವತಃ ನಾನೂ ಇದನ್ನು ಅನುಭವಿಸಿದ್ದೇನೆ. ನನ್ನ ದಲಿತ ಗೆಳೆಯರು ಅವರು ಮನೆ ಹುಡುಕಲು ಪಡುವ ಪಾಡನ್ನು ಹೇಳಿಕೊಳ್ಳುತ್ತಾರೆ. ಹೆಣ್ಣಾಗಿ ಸಿಂಗಲ್ ಇರುವ ಕಾರಣಕ್ಕೇ ಮನೆ ನಿರಾಕರಿಸಲ್ಪಟ್ಟ ಅನುಭವ ನನ್ನದೂ ಆಗಿದ್ದು, ಆ ಗೆಳೆಯರು ಪಟ್ಟಿರಬಹುದಾದ ನೋವು ನನ್ನನ್ನೂ ತಾಕುತ್ತದೆ. ಇಲ್ಲಿ ನಾವಿಬ್ಬರೂ ಒಂದೇ ಅನ್ನಿಸಿಬಿಡುತ್ತದೆ. . ಇದೊಂದು ತೀರ ಚಿಕ್ಕ, ಲಘುವಾದ ಉದಾಹರಣೆಯಷ್ಟೇ
ಹೇಗೆ ಈ ನನ್ನ ಸಮಾನ ಸಹ ಸಮುದಾಯಕ್ಕೆ ಅಪಚಾರವಾದರೆ, ನೋವಾದರೆ, ಅವಮಾನವಾದರೆ, ಜಾತಿ ಹೆಸರಲ್ಲಿ ದೂಷಣೆಯಾದರೆ ಅವರು ನ್ಯಾಯಾಲಯದಲ್ಲಿ ಪ್ರಶ್ನಿಸಬಹುದೋ ಹಾಗೆಯೇ ಹೆಣ್ಣೆಂಬ ಕಾರಣಕ್ಕೆ ನಡೆಯುವ ಅಪಚಾರ, ದೂಷಣೆಗಳನ್ನು ಪ್ರಶ್ನಿಸಲೂ ಅಷ್ಟೇ ಕಠಿಣವಾದ ಕಾನೂನು ಬರಬೇಕೆಂದು ಅನ್ನಿಸುತ್ತದೆ.
ಹೀಗೆ ನಮಗೆ ಅನ್ಯಾಯವಾಗುತ್ತಿದೆಯೆಂದೂ ಅದನ್ನು ಪ್ರಶ್ನಿಸಲು, ಸರಿ ಪಡಿಸಲು ಕಾನೂನು ಬರಬೇಕೆಂದೂ ಅಂದುಕೊಳಳುವಷ್ಟು ನಮ್ಮೊಳಗೆ ಸಾಮರ್ಥ್ಯವನ್ನು ತುಂಬಿದವರು ಯಾರು? ಅನ್ಯಾಯದ ಅರಿವು ಮತ್ತು ಬಂಡಾಯ ದೌರ್ಜನ್ಯ ಹುಟ್ಟಿಕೊಂಡ ಕಾಲದಿಂದಲೂ ಪ್ರಮಾಣವ್ಯತ್ಯಯದ ನಡುವೆಯೂ ಚಾಲ್ತಿಯಲ್ಲಿದೆ. ಆದರೆ ಕಾನೂನಿನ ಮಾತು ಕೇಳಿಬರುತ್ತಿದ್ದು ಬಹಳ ಬಹಳ ಕಡಿಮೆ. ದಲಿತರಲ್ಲಾಗಲೀ ಹೆಣ್ಣುಗಳಲ್ಲಾಗಲೀ  ಸಾಮಾಜಿಕ ಹಕ್ಕು, ಆರ್ಥಿಕ ಹಕ್ಕು, ಆಸ್ತಿ ಹಕ್ಕು ಇತ್ಯಾದಿಗಳ ಚಿಂತನೆ ಮೂಡಿ ವ್ಯಾಪಕಗೊಂಡಿದ್ದು ಅಂಬೇಡ್ಕರರಿಂದಲೇ ಅನ್ನುವುದು ಬಹುಶಃ ಯಾರೂ ಅಲ್ಲಗಳೆಯಲಾರದ ಮಾತು. ಹೆಣ್ಣು ಮತ್ತು ತಳಸಮುದಾಯಗಳ ಕುರಿತು ಆತ್ಯಂತಿಕವಾಗಿ ಚಿಂತಿಸಿ ಅದಕ್ಕೊಂದು ಸಂವಿಧಾನಾತ್ಮಕ ಕಾನೂನು ಚೌಕಟ್ಟು ಒದಗಿಸಿಕೊಟ್ಟವರು ಅಂಬೇಡ್ಕರ್. ಭಾರತ ಬ್ರಿಟಿಷ್ ಆಡಳಿತದಿಂದ ಮುಕ್ತಗೊಳ್ಳುವ ಸಂದರ್ಭದಲ್ಲಿ ಅಂಬೇಡ್ಕರ್‌ ಇಲ್ಲದಿದ್ದರೆ ಬಹುಶಃ ಈ ದೇಶದ ತಳ ಸಮುದಾಯಗಳು ಹಾಗೂ ಮಹಿಳೆಯರಿಗೆ ಸ್ವಾತಂತ್ರ‍್ಯ ದೊರೆಯುವುದು ಇನ್ನೂ ಒಂದು ಶತಮಾನದಷ್ಟು ಕಾಲ ವಿಳಂಬವಾಗುತ್ತಿತ್ತೇನೋ. ಇಷ್ಟೆಲ್ಲ ಕಾನೂನು, ಹಕ್ಕುಗಳ ನಡುವೆಯೂ ಈ ಎರಡು ವರ್ಗ ಶೋಷಣೆಯಲ್ಲಿ ನರಳುತ್ತಿವೆ. ಇಂದಿಗೂ ಕಾಪ್‌ ಪಂಚಾಯ್ತಿಗಳಲ್ಲಿ ದಲಿತರು ಮತ್ತು ಹೆಣ್ಣು ಮಕ್ಕಳಿಗೆ ವಿಧಿಸಲಾಗುತ್ತಿರುವ ಶಿಕ್ಷೆಗಳ ಕ್ರೌರ್ಯ ನೆನೆದರೆ ಆತಂಕವಾಗುತ್ತದೆ. ಅಕಸ್ಮಾತ್‌ ಅಂಬೇಡ್ಕರ್‌ ಈ ಎರಡು ಸಮುದಾಯಗಳಿಗೆ ರಕ್ಷಣೆ ಒದಗಿಸುವ, ಬದುಕುವ ಹಕ್ಕು ನೀಡುವ ಕಾನೂನುಗಳನ್ನು ಅಳವಡಿಸದೆ ಹೋಗಿದ್ದಿದ್ದರೆ, ಈ ದೇಶದ ನೆಲದ ತುಂಬೆಲ್ಲ ಕಾಪ್‌ ಪಂಚಾಯ್ತಿಗಳ ಅಟ್ಟಹಾಸವೇ ಇರುತ್ತಿತ್ತಲ್ಲವೆ?
~
ನನಗೆ ಅಂಬೇಡ್ಕರ್‌ ಮೊದಲ ಬಾರಿಗೆ ಪರಿಚಿತರಾಗಿದ್ದು ಯಾವಾಗ ಮತ್ತು ಹೇಗೆ? ನಾನು ಯೋಚಿಸುತ್ತೇನೆ. ನಟರಾಜ್‌ ಹುಳಿಯಾರ್‌ ಕಥೆಯೊಂದರಲ್ಲಿ ಬರೆಯುವ ಹಾಗೆ, ನಾನೂ ಮೊದಲ ಸಲ ಬಿಗು ನಗುವಿನ, ಮೇಕಪ್ ಮುಖದ, ನೇರ ಕುತ್ತಿಗೆಯ ಅಂಬೇಡ್ಕರರನ್ನು ಚೌಕಟ್ಟಿನೊಳಗೆ ನೋಡಿದ್ದೆ. ಬಹುಶಃ ಅಪ್ಪನ ಆಫೀಸಿನಲ್ಲಿ. ಆಮೇಲೆ ಸ್ಟ್ಯಾಚು ಆಟ ಆಡುವಾಗೆಲ್ಲ ಕೈಬೆರಳೆತ್ತಿಕೊಂಡುನಿಲ್ಲುತ್ತಿದ್ದ ತಮ್ಮನಿಗೆ  ‘ಅಂಬೇಡ್ಕರ್‌’ ಪೋಸ್‌’ ಅಂತ ರೇಗಿಸುತ್ತಿದ್ದೆವು. ಬಾಲ್ಯ ಕಾಲದ ಅಂಬೇಡ್ಕರ್‌ ಪರಿಚಯ ಇವಿಷ್ಟೇ. ಜೊತೆಗೆ ಪ್ರಾಥಮಿಕ ತರಗತಿಗಳಲ್ಲಿ ಕಲಿಯುತ್ತಿದ್ದ “ಸಂವಿಧಾನದ ಶಿಲ್ಪಿ” ಪಾಠಗಳು ಅವರೊಬ್ಬ ದೊಡ್ಡ ವ್ಯಕ್ತಿ ಅನ್ನುವಷ್ಟನ್ನು ತಿಳಿಸಿದ್ದವು.  ಆ ದಿನಗಳಲ್ಲಿ ಜಾತೀಯ ಮೇಲು ಕೀಳುಗಳು ಗೊತ್ತಿರದೆ ಇದ್ದುದರಿಂದಲೂ ನಾವು ಹೊರ ಜಗತ್ತಿಗೆ ಅಷ್ಟಾಗಿ ತೆರೆದುಕೊಂಡಿರದಿದ್ದರಿಂದಲೂ ಹರಿಜನ, ಹಿಂದುಳಿದವರು – ಇತ್ಯಾದಿಗಳು ಕೇವಲ ಉರು ಹೊಡೆಯುವ ಪದಗಳಷ್ಟೆ ಆಗಿದ್ದವು. ನನಗೆ ನನ್ನ ಯೌವನದ ದಿನಗಳಲ್ಲಿ ಮೊದಲ ಸಲಕ್ಕೆ ಅಂಬೇಡ್ಕರರನ್ನು ಬೇರೊಂದು ದೃಷ್ಟಿಕೋನದಲ್ಲಿ ಪರಿಚಯಿಸಿದ್ದು ನನ್ನ ಅಮ್ಮನೆಂಬ ಅದ್ಭುತ ಹೆಣ್ಣು.
ಬಹುಶಃ ಅದು ಹೆಣ್ಣು ಮಕ್ಕಳಿಗೆ ಆಸ್ತಿಯಲ್ಲಿ ಇಂತಿಷ್ಟು ಪಾಲು ಸಿಗಬೇಕೆಂಬ ಕಾನೂನು ಅಧಿಕೃತಗೊಂಡ ಕಾಲಮಾನ. ಸದಾ ಸೊಂಟಕ್ಕೆ ಸೆರಗು ಸಿಕ್ಕಿಸಿಕೊಂಡೇ ಇರುತ್ತಿದ್ದ ನನ್ನಮ್ಮ ಸಂಸತ್ತಿನಿಂದ ಗ್ರಾಮ ಪಂಚಾಯ್ತಿವರೆಗೆ ನೂರಾ ಒಂದು ಮಾತಾಡಿದ್ದಳು. ಆವರೆಗೆ ಅಂಬೇಡ್ಕರ್‌ ಬರೆದ ಸಂವಿಧಾನ ಪುಸ್ತಕ ರಾಜಕಾರಣಿಗಳು ಓದಿಕೊಂಡು ರಾಜ್ಯಭಾರ ಮಾಡಲಿಕ್ಕೆ ಅಂದುಕೊಂಡಿದ್ದ ನಾನು ಮೊಟ್ಟಮೊದಲ ಬಾರಿಗೆ ಕಾನೂನು, ಹಕ್ಕು ಇತ್ಯಾದಿ ಪದಗಳನ್ನು ಜನಸಾಮಾನ್ಯಳ ಬಾಯಲ್ಲಿ ಕೇಳುತ್ತಿದ್ದೆ. ಜೊತೆಗೆ ಅಮ್ಮ ‘ಆ ಪುಣ್ಯಾತ್ಮ ಮಾಡಿದ್ದಕ್ಕೆ ಸರಿಹೋಯ್ತು, ಅದನ್ನೂ ಬ್ರಾಮಣ್ರ ಕೈಗೆ ಕೊಟ್ಟಿದ್ದಿದ್ರೆ ಮುಂಡಾ ಮೋಚ್ತಿದ್ರು’ ಅಂದಳು. ಯಾವುದು, ಎಲ್ಲಿಗೆ, ಹೇಗೆ ಲಿಂಕ್ ಆಗಿದೆ ಅನ್ನುವುದೊಂದೂ ಗೊತ್ತಾಗದೆ, ಆಕೆ ದೇವಸ್ಥಾನದಲ್ಲಿ ಪೂಜೆ ಮಾಡುವ ಸಮುದಾಯವನ್ನು ಬೈತಿದ್ದಾಳೆ ಅನ್ನುವುದೊಂದು ಗೊತ್ತಾಗಿತ್ತು. ನನ್ನ ಆ ದಿನಗಳಲ್ಲಿ ಬ್ರಾಹ್ಮಣರು ಅಂದರೆ ಪೂಜೆ ಮಾಡುವವರು ಅಂತಷ್ಟೆ ನನ್ನ ತಿಳಿವಳಿಕೆ ಇದ್ದುದು. ಅಮ್ಮ ಮತ್ತೂ ಅನ್ನುತ್ತಿದ್ದಳು…. “ಇಲ್ಲೂ ಬುದ್ಧಿ ಬಿಡೋದಿಲ್ಲ ನೋಡು! ಆ ಮನುಷ್ಯ ಸಹಜವಾಗಿ ಬುದ್ಧಿವಂತ ಇರಬಾರದಾ? ಅದಕ್ಕೂ ಯಾರೋ ಬ್ರಾಮಣ ಮೇಷ್ಟರನ್ನ ತಳಕು ಹಾಕ್ತಾರೆ. ಅವ್ರು ಸಹಾಯ ಮಾಡಿದ್ದಿರಬಹುದು ಪುಣ್ಯಾತ್ಮರು. ಇವರಲ್ಲಿ ಯೋಗ್ಯತೆ ಇದ್ದುದಕ್ಕೆ ತಾನೆ ಬೆಳೆದಿದ್ದು? ಹೆಂಗಸ್ರಿಗೆ, ಹೊಲೇರಿಗೆ ಅವರ ಬುದ್ಧಿವಂತಿಕೇಲಿ ಬೆಳೆಯುವ ಯೋಗ್ಯತೆಯೇ ಇಲ್ಲ ಅಂದುಕೊಂಡುಬಿಟ್ಟಿದಾರೆ”.
ಅಮ್ಮ ಮಾತಿನ ಓಘದಲ್ಲಿ ಹೇಳಿದ ಸತ್ಯ ಮತ್ತು ಅವಳ ಸಾತ್ತ್ವಿಕ ಆಕ್ರೋಶ ನನ್ನನ್ನು ಪುರುಷ ಹಾಗೂ ಪುರೋಹಿತಷಾಹಿಯ ಪ್ರತಿ ನಡೆಯನ್ನೂ ಅನುಮಾನದಿಂದ ನೋಡಲು ಪ್ರೇರೇಪಸಿದವು. ಅಲ್ಲಿಂದ ಮುಂದೆ ನನ್ನ ಮನಸ್ಸಿನಲ್ಲಿ ಅಂಬೇಡ್ಕರ್‌ ಒಬ್ಬ ಶುದ್ಧ ಮನುಷ್ಯ ಸಂವೇದನೆಯ ಸ್ವಾಭಿಮಾನಿ ಜ್ಞಾನಿಯಾಗಿ ರೂಪುಗೊಳ್ಳತೊಡಗಿದರು. ಅವರು ಒಂದು ಸುಪ್ರಸಿದ್ಧ ಪ್ರತಿಮೆಗಿಂತಲೂ ಸಂವಿಧಾನ ಶಿಲ್ಪಿ ಅನ್ನುವುದಕ್ಕಿಂತಲೂ ಬೇರೆಯಾಗಿ, ರೂಪವನ್ನು ಮೀರಿದ ವಿಶಿಷ್ಟ ದನಿಯಾಗಿ ಕೇಳಿಸತೊಡಗಿದರು. ಅಂಬೇಡ್ಕರ್‌ ಅವರನ್ನು ನಾನು ಓದಿರುವುದು, ಅವರ ಬದುಕನ್ನು ತಿಳಿದಿರುವುದು ಅತ್ಯಂತ ಕಡಿಮೆ. ಆದರೆ ಅವರ ಸತ್ವ ಮತ್ತು ಬುದ್ಧ ದಾರಿ ತುಳಿದ ಮಾನವೀಯ ಸಂವೇದನೆ ನನ್ನಂಥ ನೂರಾರು ಹೆಣ್ಣುಗಳಲ್ಲಿ ಆತ್ಮವಿಶ್ವಾಸ ತುಂಬಿದೆ ಎಂದು ವಿನೀತಳಾಗಿ ಹೇಳಬಲ್ಲೆ. ಇಂದು ನನ್ನೊಳಗೆ ಇರುವುದು ಪ್ರತ್ಯೇಕವಾಗಿ ನನ್ನ ಅರಿವಿನ ಅಂಬೇಡ್ಕರ್. ನನ್ನೊಳಗಿನ ಈತ ಒಬ್ಬ ರಾಜನೀತಿಜ್ಞನಿಗಿಂತ, ಹೋರಾಟಗಾರನಿಗಿಂತ ಹೆಚ್ಚಾಗಿ ಸ್ತ್ರೀ ಸಂವೇದನೆಯ ಬುದ್ಧಾನುಯಾಯಿ.
~
ಮೊನ್ನೆ ಒಂದು ಚರ್ಚೆ ಏರ್ಪಟ್ಟಿತು. ಯಾಕೆ ಎಲ್ಲ ಬಂಡಾಯ ಪದ್ಯಗಳಲ್ಲೂ ರಾಮನನ್ನು ಬೈಯುತ್ತೀರಿ? ಅಂತ ಕೇಳುತ್ತಿದ್ದರು. ಎಲ್ಲಿಯವರೆಗೆ ರಾಮನನ್ನು ಭಾರತೀಯ ಸಂಸ್ಕೃತಿಯ ಐಕಾನ್ ಆಗಿ ನೋಡಲಾಗುತ್ತದೆಯೋ ಹಾಗೂ ಎಲ್ಲಿಯವರೆಗೆ ರಾಮನ ಹೆಸರು ಹೇಳಿಕೊಂಡು ಶೋಷಣೆ ಮಾಡಲಾಗುತ್ತದೆಯೋ, ಎಲ್ಲಿಯವರೆಗೆ ಆ ಪಾತ್ರವನ್ನು ಒಂದು ಆದರ್ಶವೆಂಬಂತೆ ಬಿಂಬಿಸಲಾಗುತ್ತದೆಯೋ ಅಲ್ಲಿಯವರೆಗೆ ರಾಮನನ್ನು ಪ್ರತಿಭಟಿಸುವುದು ಸಹಜ ಮತ್ತು ಅನಿವಾರ್ಯ. ಕ್ಷಾತ್ರ ಹಾಗೂ ಪುರುಷ ಮೇಲರಿಮೆಯ ರಾಮ ಹೆಣ್ಣಾದ ಸೀತೆಯನ್ನು ಕಾಡಿಗಟ್ಟುತ್ತಾನೆ. ಇದಕ್ಕೆ ಅವನು ಕೊಡುವ ಹೆಸರು ಪ್ರಜಾರಂಜನೆ. ಪ್ರಜಾರಂಜಕನೆಂದು ಹೆಸರು ಪಡೆದ ಈ ಮಹಾನುಭಾವ ಅವರನ್ನು ‘ರಂಜಿಸು’ವುದಕ್ಕೋಸ್ಕರ ಮಡದಿಯನ್ನು ಕಾಡುಪಾಲು ಮಾಡುತ್ತಾನೆ. ತನ್ನ ಪ್ರತಿಷ್ಠೆಗೆ ಸುಲಭದ ತುತ್ತಾಗಬೇಕಾದ ದಾಸಿ ಆಕೆ ಅನ್ನುವ ಮನೋಭಾವ ಅಲ್ಲಿ ಕೆಲಸ ಮಾಡುತ್ತದೆ. ಹಾಗೆಯೇ ಒಬ್ಬ ಬ್ರಾಹ್ಮಣನ ಮಗ ಅಕಾಲದಲ್ಲಿ ಸತ್ತರೆ ಅದಕ್ಕೆ ಶೂದ್ರ ತಪಸ್ವಿಯೊಬ್ಬನನ್ನು ಹೊಣೆಯಾಗಿಸಲಾಗುತ್ತದೆ. ಮತ್ತೊಮ್ಮೆ ಆತ ತನ್ನ ಪ್ರತಿಷ್ಠಗಾಗಿ ಶಂಭೂಕನ ಬಲಿ ತೆಗೆದುಕೊಳ್ಳುತ್ತಾನೆ. ಹೆಣ್ಣು ಮತ್ತು ಹಿಂದುಳಿದವರನ್ನು ರಾಮ ನಡೆಸಿಕೊಂಡ ಬಗೆ ನಮ್ಮ ಸೋ ಕಾಲ್ಡ್‌ ಸಂಸ್ಕೃತಿಗೆ ಹಿಡಿದ ಕನ್ನಡಿಯಾಗಿದೆ. ಹೀಗಿರುವಾಗ ಪ್ರತಿಭಟನೆ ಇಂದು ಹಬ್ಬಿರುವ ವಿಷವೃಕ್ಷದ ಮೂಲ ಬೀಜದ ವಿರುದ್ಧವೇ ಇರಬೇಕಾದುದು ಅಗತ್ಯವಲ್ಲವೆ?
ಈ ಪ್ರಶ್ನೆಗಳನ್ನು ಎತ್ತಲು ಮತ್ತು ಚರ್ಚಿಸಲು ನಮ್ಮಲ್ಲಿಂದು ದನಿಯಿದೆ. ಸಾಂವಿಧಾನಿಕ ಹಕ್ಕು ಕೊಡಲಾಗಿದೆ. ಅದರ ಬಳಕೆಯಾಗಬೇಕು. ಬಾಬಾ ನಮಗೆ ಹೋರಾಟಕ್ಕೊಂದು ಸರ್ವಸಮ್ಮತ ದಾರಿ ಹಾಕಿಕೊಟ್ಟಿದ್ದಾರೆ. ಆ ದಾರಿಯಲ್ಲಿ ನಡೆಯುತ್ತ ಶಂಭೂಕನ ಮಕ್ಕಳು ಹಾಗೂ ಸೀತೆಯ ಹೆಣ್ಣುಗಳು ಕೈಜೋಡಿಸಿದರೆ, ಹಿಡಿಯಷ್ಟಿರುವ ಮೇಲರಿಮೆಯ ಸಮುದಾಯದ ಮೇಲಾಟ ಕೊನೆಗೊಳ್ಳುವ ದಿನ ದೂರವೇನಿಲ್ಲ ಅನ್ನಿಸುತ್ತದೆ.

ಗಂಡಸು ಮಾತ್ರ ಮಾಡಬಹುದಾದ ವಿಕೃತಿ ಮತ್ತು ಹೆಣ್ಣು ಮಾತ್ರ ಅನುಭವಿಸಬಹುದಾದ ಸಂಕಟ….

ಗಂಡಸು ಮಾಡುವ ಲೈಂಗಿಕ ಶೋಷಣೆ ಹೆಣ್ಣಿನ ಪಾವಿತ್ರ‍್ಯಕ್ಕೆ ಹಾನಿ ಎಸಗಲು ಸಾಧ್ಯವಿಲ್ಲ, ಇಷ್ಟಕ್ಕೂ ಹೆಣ್ಣಿನ ಅಸ್ಮಿತೆಯನ್ನು ಕದಡಲು ಗಂಡಸಿಗೆ ಯಾವ ರೀತಿಯ ಅರ್ಹತೆಯಾಗಲೀ ಸಾಮರ್ಥ್ಯವಾಗಲೀ ಇಲ್ಲ ಅನ್ನುವ ಮಾತನ್ನ ಮನದಟ್ಟು ಮಾಡುವ ಅಗತ್ಯ ಎಲ್ಲಕ್ಕಿಂತ ಮೊದಲು ಇದೆ. ಮತ್ತು ಅತ್ಯಾಚಾರ ಪ್ರಕರಣಗಳನ್ನು ತಗ್ಗಿಸಲು ಇರುವ ಎರಡನೇ ವಿಧಾನ ಕಠಿಣ ಶಿಕ್ಷೆ. ಕಠಿಣ ಅನ್ನುವುದಕ್ಕಿಂತ ಅವಮಾನಕರ ಶಿಕ್ಷೆ. ಅಥವಾ ಒಂದು ಕೆಲಸ ಮಾಡಬಹುದು. ಇದು ಮನಸು ಗಿನಸಿನದಲ್ಲ, ಪೂರಾ ಲೈಂಗಿಕ ಸಂಗತಿಯೇ ಅನ್ನುವ ಹಾಗಿದ್ದರೆ – ಬೀದಿಬೀದಿಯಲ್ಲಿ ಸುಲಭ ಶೌಚಾಲಯಗಳಿರುವ ಹಾಗೆಯೇ ‘ಈಸಿ ಫಕ್ ಸೆಂಟರ್‌’ಗಳನ್ನ ಸ್ಥಾಪಿಸಬಹುದು. ಚೀನಾದಿಂದ ಏನೇನೋ ತರಿಸುತ್ತಿರುವಂತೆಯೇ ಸೆಕ್ಸ್‌ ಡಾಲ್‌ಗಳನ್ನ ತರಿಸಿ ಇಡಬಹುದು. ಹಳ್ಳಿ, ಪಟ್ಟಣ, ನಗರಗಳಲ್ಲಿ ಈ ವ್ಯವಸ್ಥೆ ಇರುವಂತಾಗಬೇಕು. ಸರ್ಕಾರಗಳಿಗೆ ಕೊಂಚ ಹಣ ಖರ್ಚಾಗುತ್ತದೆ. ಅಂಥವರ ನರದೌರ್ಬಲ್ಯಕ್ಕೆ ಬಲಿಯಾಗುವ ಹೆಣ್ಣುಗಳ ಜೀವಕ್ಕಿಂತ ಅದು ಹೆಚ್ಚೇನಲ್ಲ.

ಪ್ರತಿಸಲವೂ (ನಾನು) ಬೇಸರ, ನೋವು, ಹತಾಶೆ, ತಾತ್ಸಾರಗಳಿಂದ ’ಗಂಡಸು’ ಅಂತ ಬರೆವಾಗ ಅಲ್ಲಿ ಬುದ್ಧಿ, ಮೆದುಳು, ಹೃದಯಾದಿ ಅಂತಃಕರಣದಿಂದ ಯೋಚಿಸುವ ಹಾಗೂ ನಡೆದುಕೊಳ್ಳುವ ‘ಮನುಷ್ಯ’ ಇರುವುದಿಲ್ಲ. ಬದಲಿಗೆ, ಕೇವಲ ತನ್ನ ಲಿಂಗ ಮತ್ತು ಅದರ ವಿಕೃತ ಸಾಧ್ಯತೆಗಳಿಂದಷ್ಟೆ ಯೋಚಿಸುವ ಜೀವಿ ಇರುತ್ತಾನೆ. ಇದು ಬರೀ ಲೈಂಗಿಕತೆಗೆ ಸಂಬಂಧಿಸಿದ ದುರಹಂಕಾರವಲ್ಲ. ಅದರ ಮೂಲಕ ತಾನು ಉಂಟು ಮಾಡುವ ದಬ್ಬಾಳಿಕೆ ಕೂಡ.
ಕೋಮು ದ್ವೇಷ, ಜಾತೀಯ ಮೇಲರಿಮೆ, ಹಣದ ಮದ, ರಾಜಕಾರಣ – ಇದೇನೇ ಇದ್ದರೂ ಗಂಡಸು ತನ್ನ ಎದುರಾಳಿ ಹೆಣ್ಣಿನ ‘ಕೊಬ್ಬು ಇಳಿಸಲು’ ಬಳಸುವ ಸುಲಭ ತಂತ್ರ ಇದೊಂದೇ ಆಗಿರುತ್ತದೆ. ಲೈಂಗಿಕವಾಗಿ ಹೆಣ್ಣಿನ ಮೇಲೆರಗುವುದು ಅವನ ಪಾಲಿಗೆ ಅವನು ವಿಧಿಸುವ ‘ಶಿಕ್ಷೆ’. ಆತ ಹೆಣ್ಣಿಗೆ ಮಾಡುವ ‘ಶಾಸ್ತಿ’. ಗಂಡಸು ಅತ್ಯಾಚಾರ ಮಾಡುತ್ತಾನೆಂದರೆ ಅಲ್ಲಿ ಕೇವಲ ಲೈಂಗಿಕ ವಾಂಛೆ ಇರುವುದಿಲ್ಲ. ತೀರ ಕೆಟ್ಟದಾಗಿ ಮಾತಾಡಬೇಕಾಗುತ್ತದೆ ಕೆಲ ಸಾರ್ತಿ – ಅಂತಹ ಹಸಿವನ್ನು ತಣಿಸಿಕೊಳ್ಳಲೇಬೇಕು ಅಂತಿದ್ದರೆ ಒಂದು ಚಿಕ್ಕ ರಂಧ್ರ ಸಾಕಾಗುತ್ತದೆ, ಹೆಣ್ಣು ಬೇಕೆಂದೇನಿಲ್ಲ. ಅವನು ತನ್ನ ದುರಹಂಕಾರದ ತೃಪ್ತಿಗಾಗಿ, ತನ್ನ ಮದವನ್ನು ತಾನು ಸಾಬೀತುಪಡಿಸಿಕೊಳ್ಳಲಿಕ್ಕಾಗಿಯಷ್ಟೆ ಅತ್ಯಾಚಾರ ಎಸಗುವುದು. ಅದು ಆತನ ಲೈಂಗಿಕ ವಿಕೃತಿಯಲ್ಲ, ಮಾನಸಿಕ ವಿಕೃತಿ. ಆತ್ಮ ವಿಕೃತಿಯಷ್ಟೆ.
ಗಂಡಸು ಮಾಡುವ ಲೈಂಗಿಕ ಶೋಷಣೆ ಹೆಣ್ಣಿನ ಪಾವಿತ್ರ‍್ಯಕ್ಕೆ ಹಾನಿ ಎಸಗಲು ಸಾಧ್ಯವಿಲ್ಲ, ಇಷ್ಟಕ್ಕೂ ಹೆಣ್ಣಿನ ಅಸ್ಮಿತೆಯನ್ನು ಕದಡಲು ಗಂಡಸಿಗೆ ಯಾವ ರೀತಿಯ ಅರ್ಹತೆಯಾಗಲೀ ಸಾಮರ್ಥ್ಯವಾಗಲೀ ಇಲ್ಲ ಅನ್ನುವ ಮಾತನ್ನ ಮನದಟ್ಟು ಮಾಡುವ ಅಗತ್ಯ ಎಲ್ಲಕ್ಕಿಂತ ಮೊದಲು ಇದೆ. ಮತ್ತು ಅತ್ಯಾಚಾರ ಪ್ರಕರಣಗಳನ್ನು ತಗ್ಗಿಸಲು ಇರುವ ಎರಡನೇ ವಿಧಾನ ಕಠಿಣ ಶಿಕ್ಷೆ. ಕಠಿಣ ಅನ್ನುವುದಕ್ಕಿಂತ ಅವಮಾನಕರ ಶಿಕ್ಷೆ. ಅಥವಾ ಒಂದು ಕೆಲಸ ಮಾಡಬಹುದು. ಇದು ಮನಸು ಗಿನಸಿನದಲ್ಲ, ಪೂರಾ ಲೈಂಗಿಕ ಸಂಗತಿಯೇ ಅನ್ನುವ ಹಾಗಿದ್ದರೆ – ಬೀದಿಬೀದಿಯಲ್ಲಿ ಸುಲಭ ಶೌಚಾಲಯಗಳಿರುವ ಹಾಗೆಯೇ ‘ಈಸಿ ಫಕ್ ಸೆಂಟರ್‌’ಗಳನ್ನ ಸ್ಥಾಪಿಸಬಹುದು. ಚೀನಾದಿಂದ ಏನೇನೋ ತರಿಸುತ್ತಿರುವಂತೆಯೇ ಸೆಕ್ಸ್‌ ಡಾಲ್‌ಗಳನ್ನ ತರಿಸಿ ಇಡಬಹುದು. ಹಳ್ಳಿ, ಪಟ್ಟಣ, ನಗರಗಳಲ್ಲಿ ಈ ವ್ಯವಸ್ಥೆ ಇರುವಂತಾಗಬೇಕು. ಸರ್ಕಾರಗಳಿಗೆ ಕೊಂಚ ಹಣ ಖರ್ಚಾಗುತ್ತದೆ. ಅಂಥವರ ನರದೌರ್ಬಲ್ಯಕ್ಕೆ ಬಲಿಯಾಗುವ ಹೆಣ್ಣುಗಳ ಜೀವಕ್ಕಿಂತ ಅದು ಹೆಚ್ಚೇನಲ್ಲ.

ಮರಕ್ಕೆ ಗೋಣು ತೂಗಿಸಿಕೊಂಡು ನೇತಾಡುತ್ತಿರುವ ಅಕ್ಕ ತಂಗಿಯರ ಶವದ ಚಿತ್ರಗಳನ್ನು ನೋಡಿ ಅಸಹನೀಯ ನೋವು. ಕೇವಲ ಹೆಣ್ಣು ಅನ್ನುವ ಕಾರಣಕ್ಕೆ ಅನುಭವಿಸುವ ಯಾತನೆ. ಯಾವ ಹೊತ್ತು ಯಾವ ಗಂಡಸು ಹೇಗೆ ನಡೆದುಕೊಳ್ಳುತ್ತಾನೆ ಅನ್ನುವ ಆತಂಕದಲ್ಲಿ ಕಾಲ ತಳ್ಳಬೇಕು. ಎರಡು ತಿಂಗಳ ಹಿಂದೆ ಓದಿದ್ದ ಒಂದು ವರದಿ ಇನ್ನೂ ಕಾಡುತ್ತಲೇ ಇರುವಾಗ ಈ ಮತ್ತೊಂದು ಸುದ್ದಿ. ಉತ್ತರ ಭಾರತದ ಕೆಲ ಹಳ್ಳಿಗಳಲ್ಲಿ ಅಪ್ಪಂದಿರೇ ಹೆಣ್ಣುಮಕ್ಕಳನ್ನ ಲೈಂಗಿಕವಾಗಿ ಬಳಸಿಕೊಳ್ಳುವ ಬಗ್ಗೆ…. ತಾಯಂದಿರಿಗೆ ಇದು ಗೊತ್ತಿದ್ದೂ ಎದುರಾಡಲಾಗದ, ಮಗಳನ್ನು ರಕ್ಷಿಸಲಾಗದ ಅಸಹಯಾಕತೆಯ ಬಗ್ಗೆ… ಇನ್ನೂ ಮುಂದುವರೆದು ಕೆಲವರು ಅದನ್ನು ಒಪ್ಪಿಕೊಂಡು ಮಗಳನ್ನೇ ಸವತಿಯಾಗಿ ಕಾಣುವ ಬಗ್ಗೆ….

ಗೆಳತಿ ಹೇಳಿದ್ದ ಮತ್ತೂ ಒಂದು ಘಟನೆ ನೆನಪಾಗುತ್ತಿದೆ… ದಕ್ಷಿಣ ಕನ್ನಡದಲ್ಲಿ ನಡೆದಿದ್ದು. ಆ ಹುಡುಗಿಯ ಮೇಲೆ ಲೈಂಗಿಕ ಶೋಷಣೆ ನಡೆಸಿ ಮರಕ್ಕೆ ನೇತು ಹಾಕಿ, ಕೊಂಬೆಯಲ್ಲಿದ್ದ ಜೇನು ಗೂಡಿಗೆ ಕಲ್ಲು ಹೊಡೆದು ಆಕೆ ನರಳಿ ಸಾಯುವಂತೆ ಮಾಡಿದ್ದರಂತೆ! ಇದು ಸುದ್ದಿಯಿರಲಿ, ಸದ್ದೂ ಆಗಲಿಲ್ಲ. ಸಾಮಾನ್ಯ ಕುಟುಂಬ, ಮಾತಾಡಲೂ ಭಯಪಟ್ಟು ಸುಮ್ಮನೆ ಉಳಿದಿದೆ. ಅತ್ಯಾಚಾರ ಅಂದ ಕೂಡಲೆ ಎಳುವ ವಾದ ವಿವಾದಗಳು ಅಸಹ್ಯ ಹುಟ್ಟಿಸುತ್ತವೆ. ಹೆಣ್ಣುಮಕ್ಕಳ ಬಟ್ಟೆ, ನಡೆನುಡಿಗಳ ಬಗ್ಗೆ ಭಾಷಣಗಳಾಗುತ್ತವೆ. ಈ ಎಲ್ಲ ಹರಟುವ ಸಂಸ್ಕೃತಿ ವಕ್ತಾರರಿಗೆ ಹೇಳಬೇಕು, ನಮ್ಮ ಪುರಾಣಗಳನ್ನು ಓದಲು. ಗಂಡಸಿನೊಟ್ಟಿಗೇ ಆತನ ಈ ವಿಕೃತಿಯೂ ಹುಟ್ಟಿಕೊಂಡಿದೆ. ಗರತಿಯಾಗಿದ್ದ ತುಳಸಿಯ ಪಾವಿತ್ರ‍್ಯವನ್ನು ಸ್ವತಃ ಭಗವಂತ ಅನ್ನಿಸಿಕೊಂಡವನು ಕೆಡಿಸುವ ಕಥೆಯೇ ನಮ್ಮಲ್ಲಿ ಇಲ್ಲವೆ? ಮತ್ತವರು ಬಟ್ಟೆಯ ಬಗ್ಗೆ ಮಾತಾಡುತ್ತಾರೆ!!
~

ಪುರಾಣ ಕಂತೆಗಳನ್ನು ಬಿಡಿ. ಬಹುಶಃ ಅತ್ಯಾಚಾರ ಕುರಿತಂತೆ ಇರುವ ಮೊದಲ ಐತಿಹಾಸಿಕ ದಾಖಲೆ ಇದು. ಧಮ್ಮಪದ ಗಾಥಾ ಪ್ರಸಂಗಗಳು ಕೃತಿಯು ಈ ಕುರಿತು ಹೇಳುತ್ತದೆ.
ಶ್ರಾವಸ್ತಿಯ ಶ್ರೀಮಂತನೊಬ್ಬನಿಗೆ ಅತ್ಯಂತ ಸುಂದರಿಯಾದ ಮಗಳೊಬ್ಬಳು ಇರುತ್ತಾಳೆ. ಅವಳ ಹೆಸರು ಉತ್ಪಲಾವರ್ಣ. ಅವಳನ್ನ ಮೆಚ್ಚಿ ಮದುವೆಯಾಗಲು ಅನೇಕ ರಾಜಕುಮಾರರು ಮುಂದೆ ಬರುತ್ತಾರೆ. ಆದರೆ ಅವಳು ವಿರಾಗಿಣಿ. ಸಂಸಾರದಲ್ಲಿ ಅನಾಸಕ್ತೆ. ಬುದ್ಧನ ಬೋಧನೆಗಳಲ್ಲಿ ಹೃದಯವಿಟ್ಟವಳು. ಅಪ್ಪನ ಮನವೊಲಿಸಿ ತಾನೂ ಬಿಕ್ಖುಣಿಯಾಗುವೆ ಅನ್ನುತ್ತಾಳೆ. ಆ ಶ್ರೀಮಂತನೂ ಬುದ್ಧಾನುಯಾಯಿ. ಸಂಭ್ರಮದಿಂದಲೇ ಆಕೆಗೆ ಅನುಮತಿ ಇತ್ತು ಕಳಿಸಿಕೊಡುತ್ತಾನೆ. ಬಿಕ್ಖುಣಿ ಸಂಘ ಸೇರುವ ಉತ್ಪಲಾ ವರ್ಣ, ಸತತ ಸಾಧನೆಯಿಂದ ಅರಹಂತೆಯೂ ಆಗುತ್ತಾಳೆ.
ಒಮ್ಮೆ ಅವಳು ಕಾಡಿನಲ್ಲಿ ಧ್ಯಾನಕ್ಕೆ ಕುಳಿತಿದ್ದಾಗ ಆಕೆಯ ಚಿಕ್ಕಪ್ಪನ ಮಗ ಬರುತ್ತಾನೆ. ತನ್ನ ದಾಯಾದಿ ಹೀಗೆ ಬಿಕ್ಖುಣಿಯಾಗಿದ್ದು ಅವನಲ್ಲಿ ಮತ್ಸರ ಹುಟ್ಟುಹಾಕಿರುತ್ತದೆ. ಉತ್ಪಲಾವರ್ಣ ಏಕಾಂಗಿಯಾಗಿ ತಪೋನಿರತಳಾಗಿದ್ದ ವೇಳೆಯಲ್ಲಿ ಅವಳ ಮೇಲರಗುತ್ತಾನೆ. ಅತ್ಯಾಚಾರಕ್ಕೆಳಸುತ್ತಾನೆ. ಕಾಡಿನಿಂದ ಮರಳಿದ ಉತ್ಪಲೆ ಈ ಸಂಗತಿಯನ್ನು ಸಹಬಿಕ್ಖುಣಿಯರಲ್ಲಿ ಹೇಳಿಕೊಳ್ಳುತ್ತಾಳೆ. ವಿಷಯ ಬುದ್ಧನ ಕಿವಿ ತಲಪುತ್ತದೆ.
ಬುದ್ಧನ ಚಿಂತನೆ ಅದೆಷ್ಟು ಉದಾತ್ತ ನೋಡಿ…. “ಮತ್ತೊಬ್ಬರ ವಿಕೃತಿಗೆ ಈಕೆಯ ಪಾವಿತ್ರ‍್ಯ ಕೆಡುವುದು ಹೇಗೆ? ಈಕೆಯದೇನೂ ದೋಷವಿಲ್ಲ. ಉತ್ಪಲಾವರ್ಣ ಹಿಂದಿನಂತೆಯೆ ಪರಿಶುದ್ಧಳು” ಅನ್ನುತ್ತಾನೆ. ಮತ್ತು ಆಕೆಯನ್ನು ಎಂದಿನಂತೆಯೇ ಸಂಘದಲ್ಲಿ ಮುಂದುವರೆಯಲು ಹೇಳುತ್ತಾನೆ.

ಅತ್ಯಾಚಾರದ ವಿರುದ್ಧ ಮಾತಾಡುವವರ ಬಾಯ್ಮುಚ್ಚಿಸುತ್ತ ಹೆಣ್ಣಿನ ನಡತೆ ಬಗ್ಗೆ ಪಾಠ ಹೇಳುವವರು ಧ್ಯಾನಸ್ಥಳಾದ ಹೆಣ್ಣನ್ನೂ ಬಯಸುವಂಥ ವಿಕೃತ ಮನಸ್ಥಿತಿಯನ್ನ ಬೆಂಬಲಿಸುವಂಥರೇ ಆಗಿರುತ್ತಾರೆ.
ಇದು ಶಾಶ್ವತ ಪರಿಹಾರವಿಲ್ಲದ ಅನ್ಯಾಯ ಎಂದು ನಿಡುಸುಯ್ಯುವುದಷ್ಟೆ ಉಳಿಯುವುದೇ ಕೊನೆಗೆ?

ಊರು ಸುಟ್ಟರೂ ಹನುಮಪ್ಪ ಹೊರಗೆ! ~ ಹನುಮಂತ ಹಾಲಿಗೇರಿ ಹೊಸ ನಾಟಕ…

“ರವೀಂದ್ರ ಕಲಾಕ್ಷೇತ್ರ 150 ಸುವರ್ಣ ಸಂಭ್ರಮ ಸಮಿತಿಯವರು ನಾಟಕ ಸ್ಪರ್ಧೆ ಏರ್ಪಡಿಸಿದ್ದನ್ನು ಕೇಳಿ ಪಟ್ಟಾಗಿ ಕುಳಿತು ಒಂದು ವಾರದಲ್ಲಿಯೇ ಈ ನಾಟಕ ಬರೆದು ಪೋಸ್ಟ್ ಮಾಡಿದ್ದೆ. ಆದರೆ, ಬರೆದಾದ ಮೇಲೆ ಸುಮ್ಮನಿರಲಿಕ್ಕಾಗದೆ ಓದಿಗಾಗಿ ಗೆಳೆಯ ಮಹಾದೇವ ಹಡಪದ ಅವರಿಗೆ ಕಳಿಸಿದ್ದೆ. ಮಹಾದೇವ ಓದಿ ಇಷ್ಟಪಟ್ಟು ತಮ್ಮ ಆಟಮಾಟ ತಂಡದಿಂದಲೇ ಪ್ರದರ್ಶಿಸಲು ಏರ್ಪಾಟುಮಾಡಿಕೊಂಡಿದ್ದರು. ಇಂದು ನಾಟಕ ಗದಗಿನಲ್ಲಿ 12ನೆ ಪ್ರದರ್ಶನ ಕಾಣುತ್ತಿರುವ ಸಂದ‍ರ್ಭದಲ್ಲಿಯೇ ನಾಟಕ ಬೆಂಗ್ಳೂರು ಸಮಿತಿಯ ರಂಗಕರ್ಮಿ ಶಶಿಧರ ಭಾರಿಘಾಟ್‍ ನಾಟಕ ರಚನಾ ಸ್ಪರ್ಧೆಯಲ್ಲಿ ಬಹುಮಾನ ಪಡೆದ ಸಂಭ್ರಮದ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಸಮಿತಿಯವರೆ ನಾಟಕ ಕೃತಿಯನ್ನು ಪ್ರಕಟಿಸಿ ಬಿಡುಗಡೆ ಮಾಡುತ್ತಿರುವುದರಿಂದ ನನ್ನಿಂದ ಅತ್ಯಂತ ಕಡಿಮೆ ಶ್ರಮ ಮತ್ತು ಸಮ ತಿಂದು ಹೊರಬರುತ್ತಿರು ಕೃತಿ ಇದು” – ಎನ್ನುತ್ತಾರೆ ಹನುಮಂತ ಹಾಲಿಗೇರಿ. ಈ ನಾಟಕದ ಎರಡು ದೃಶ್ಯಗಳು ನಿಮಗಾಗಿ…. ಉಳಿದವನ್ನ ಮಾತ್ರ ನೀವೇ ನೋಡಿ ಆನಂದಿಸಬೇಕು!

 

ನಾಟಕದ ಒಂದು ನೋಟ

ನಾಟಕದ ಒಂದು ನೋಟ

ದೃಶ್ಯ: ೧
(ಬೆಳದಿಂಗಳ ರಾತ್ರಿ, ರಂಗಭೂ”ಯು ನಡು”ನ ಹನುಮನ ಮೂರ್ತಿಯ ಮೇಲೆ ನಿಧಾನಕ್ಕೆ ಬಿದ್ದು ಮೂರ್ತಿಯ ಮುಖ ಬೆಳಗುತ್ತದೆ. ಬೆಳಕು ಸ್ಪಷ್ಟಗೊಳ್ಳುತ್ತಾ ಹೋದಂತೆಲ್ಲ ಹನುಮನ ಮೂರ್ತಿಯ ಮುಖದಲ್ಲಿ ವ್ಯಂಗ್ಯ ಇದ್ದು ಇಲ್ಲದಂತೆ ಗೋಚರಿಸುತ್ತದೆ. ಅದರ ಪಕ್ಕದಲ್ಲಿರುವ ದೀಪಸ್ಥಂಭದ ಮೇಲೆ ದೀಪ ಉರಿತಾ ಇದೆ.
ದೇವಸ್ಥಾನದ ಮುಂದೆ ಸುತ್ತಮುತ್ತ ಯಾವದೋ ಕಾಲದಲ್ಲಿ ಕಟ್ಟಿದ ಮನೆಗಳ ಪಳಿಯುಳಿಕೆಗಳು ಕಲಾಚಿತ್ರಗಳಂತೆ ಕಾಣುತ್ತಿವೆ. ಎಡಗಡೆಗೆ ಒಂದಿಷ್ಟು ಮನೆಗಳು, ಮನೆಗಳ ಮುಂದೆ ಆಲದ ಮರದ ಕಟ್ಟೆ. ಮರಕ್ಕೆ ವಜ್ರಮಟ್ಟಿ ಎಂಬ ಬೋರ್ಡು ತೂಗು ಹಾಕಲಾಗಿದೆ. ದೇವಸ್ಥಾನದ ಬಲಗಡೆ ಅದೇ ತರಹದ ಒಂದಿಷ್ಟು ಮನೆಗಳು. ಆಲದ ಕಟ್ಟೆ. ಮರಕ್ಕೆ ಧರೆಗಟ್ಟಿ ಎಂಬ ಬೋರ್ಡು.
ದೂರದಲ್ಲೆಲ್ಲೋ ಟ್ಯಾಕ್ಟರ್ ಬಂದು ನಿಂತ ಶಬ್ದ ಕೇಳುತ್ತದೆ. ಒಬ್ಬ ಕಂಬಳಿ ಹೊದ್ದು ಅತ್ತಿತ್ತ ನೋಡುತ್ತಾ ಕಳ್ಳಹೆಜ್ಜೆ ಇಟ್ಟು ರಂಗಭೂಮಿ ಪ್ರವೇಶಿಸುತ್ತಾನೆ. ಗುಡಿಯ ಅಕ್ಕಪಕ್ಕ ಸ್ವಲ್ಪ ದೂರ ಗಮನಿಸುತ್ತಾನೆ. ತೆಂಗಿನ ಗಿಡ ಏರಿದಂತೆ ಸ್ವಲ್ಪ ದೂರ ಸ್ಥಂಭ ಏರಿ ಯಾರೂ ಇಲ್ಲ ಎಂದು ಮನಗಂಡು ಜೋರಾಗಿ ಸಿಳ್ಳು ಹೊಡೆಯುತ್ತಾನೆ.
ಕಂಬಳಿ ಹೊದ್ದ ಎಳೆಂಟು ಜನ ಅವಸರಿಸಿ ಕಳ್ಳಹೆಜ್ಜೆ ಇಡುತ್ತಾ ಬರುತ್ತಾರೆ. ಅವರಲ್ಲೊಬ್ಬ ದೇವಸ್ಥಾನದ ಬಾಗಿಲು ತೆರೆದು ಊದುಬತ್ತಿ ಬೆಳಗಿ ಎನೇನೋ ಮಂತ್ರ ಫಠಿಸುತ್ತಾ ಪೂಜೆ ಮಾಡುತ್ತಾನೆ. ಅದಾದ ಮೇಲೆ ಮೂರ್ತಿ ಸ್ಥಾಪಿಸಿದ ಕಲ್ಲುಮಂಟಪವನ್ನು ಹಾರೆ ಗುದ್ದಲಿಗಳಿಂದ ಹಡ್ಡುತ್ತಾರೆ, ‘ಸಾವಕಾಶ, ಮೂರ್ತಿ ಮುಕ್ಕಮಾಡಬ್ಯಾಡ್ರಿ’ ಎಂಬ ಕಿವಿ ಮಾತುಗಳು ಕೇಳಿ ಬರುತ್ತವೆ. ಕೊನೆಗೊಮ್ಮೆ ಆ ನಿಶಬ್ದದಲ್ಲಿ ಜೈ ಶ್ರೀ ಹನುಮಾನ್ ಎಂಬ ಉದ್ಘೋಷದೊಂದಿಗೆ ಮೂರ್ತಿ ಮೇಲೇಳುತ್ತದೆ.
‘ಸಾವಕಾಶ ತುಗೊಂಡು ಬರ್ರಿ, ಅಲ್ಲಿ ಟ್ಯಾಕ್ಟರ್‍ನೊಳಗ ಇಡೋಣು’ ಅಂತ ಗುಂಪಿನಲ್ಲಿದ್ದ ಹಿರಿಕರು ಹೇಳುತ್ತಿರುವಾಗಲೇ ಜೈ ಹನುಮ ಜೈ ಜೈ ಹನುಮ ಎಂದುಕೊಳ್ಳುತ್ತಾ ಮೂರ್ತಿಯನ್ನು ಹೊತ್ತೊಯ್ಯುತ್ತಾರೆ. ಅವರು ಹೊತ್ತೊಯ್ದ ಸ್ವಲ್ಪ ಹೊತ್ತಿನಲ್ಲೆ ಟ್ರ್ಯಾಕ್ಟರ್ ಪ್ರಾರಂಭವಾದ ಶಬ್ದ ಕೇಳುತ್ತದೆ.
ನಿಧಾನಕ್ಕೆ ಗುಡಿಯ ಅಂಗಳದಲ್ಲಿ ಬೆಳಕು ಚಲ್ಲುತ್ತದೆ. ಅಲ್ಲೊಂದು ಗೋಣಿ ಚೀಲದ ಮೇಲೆ ಹುಚ್ಚಮಲ್ಲ ಮಲಗಿದ್ದಾನೆ. ದೇವರು ಕಳ್ಳತನವಾಗೋದನ್ನು ನೋಡಿ ಜೋರಾಗಿ ನಗುತ್ತಾನೆ.)

ಹುಚ್ಚಮಲ್ಲ: ಹಹ್ಹಹ್ಹಾ, ದೇವರು ನನ್ನ ಕಾಪಾಡುತಾನು ಅನ್ಕೊಂಡು ನಾನು ಇಲ್ಲಿ ಬಂದು ಮಲಕೋತಿದ್ದಿನಿ. ಈಗ ನೋಡಿದರ ದೇವರು ತನ್ನನ್ನು ತಾನ$ ಕಾಪಾಡಿಕೊಳ್ಳಲಿಲ್ಲ. ಅಂವನ್ನ ಹೊತ್ತುಗೊಂಡು ಹೋಗಿಬಿಟ್ರು. ಹುಚ್ಚ ಸೂಳಿ ಮಕ್ಳು, ದೇವರು ಸರ್ವ ಶಕ್ತ. ನಮ್ಮನ್ನೆಲ್ಲ ಕಾಪಾಡೋನು ಅಂತ ಏನೇನಾರ ಹೇಳ್ತಾರ. ಮತ್ ಅಂವನ ಕಳ್ಳತನ ಮಾಡಾತಾರ. ಇನ್ನ ನನ್ನನ್ನು ಯಾರು ಕಾಪಾಡೋರು, ಯಾರು ಕಾಪಾಡೋರು… (ಚೀರುತ್ತಾ ಓಡಿ ಹೋಗುವನು).

ದೃಶ್ಯ: ೨

(ನಿಧಾನಕ್ಕೆ ತೆರೆ ಕೆಂಪುಗಾಗುತ್ತಾ ಸೂರ್ಯನ ಉದಯವನ್ನು ಸಾರುತ್ತದೆ. ಹಕ್ಕಿಗಳ ಚಿಲಿಪಿಲಿ, ಅದರ “ಂದೆಯೇ “ಏಳು ಏಳಯ್ಯಾ ಶ್ರೀ ಮಾರುತೇಶಾ, ಶ್ರೀ ಹನುಮದೇವಾ ಏಳಯ್ಯಾ” ಎಂಬ ಹಾಡು ಕೇಳಿ ಬರುತ್ತದೆ. ವಜ್ರಗಟ್ಟಿಯಲ್ಲಿ ಮ”ಳೆಯರು ತಂಬಿಗೆ ತುಗೊಂಡು ಇದ್ದಿಲು ತಿಕ್ಕುತ್ತಾ ಹೊರಗಡೆ ಹೋಗುವರು, ಕೆಲವರು ಅಂಗಳ ಕಸ ಗೂಡಿಸುತ್ತಿರುವರು. ಎಳೆ ಮಕ್ಕಳು ನಿದ್ದೆಗಣ್ಣಲ್ಲಿ ಎದ್ದು ಉಚ್ಚೆ ಹೊಯ್ಯುತ್ತಿರುವರು. ಒಂದಿಷ್ಟು ಮಂದಿ ಅಂಗಳದಲ್ಲಿ ಉರಿ ಕಾಸಿಕೊಳ್ಳುತ್ತಿದ್ದಾರೆ.
ತೋಯ್ದ ಮೈಯಲ್ಲಿರುವ ಪೂಜಾರಿ ಹಿತ್ತಾಳೆ ಕೊಡ ಹೊತ್ತು ಮಂತ್ರ ಮಣಮಣಿಸುತ್ತಾ ಇವರ ನಡುವೆ ದಾರಿ ಮಾಡಿಕೊಂಡು ದೇವಸ್ಥಾನದ ಕಡೆ ಹೊಗುತ್ತಾನೆ. ದೇವಸ್ಥಾನದಲ್ಲಿ ದೇವರು ಇಲ್ಲದಿರುವುದು ಗಮನಕ್ಕೆ ಬಂದೊಡನೆ ಹೊತ್ತ ಕೊಡವನ್ನು ಒಗೆದು “ಗುಡಿಯಾನ ಹನುಮಪ್ಪ ಕಳುವಾಗ್ಯಾನಪೋ’ ಅಂತ ಜನರ ಮಧ್ಯೆ ಹಾಯ್ದು ಓಡಿಬರುತ್ತಾನೆ. ಜನರೂ ಅವನನ್ನು ಬೆನ್ನಟ್ಟುತ್ತಾರೆ. ಈ ಗುಂಪು ರಂಗಭೂಮಿಯನ್ನು ಒಂದು ಸುತ್ತು ಹಾಕುತ್ತದೆ. ಗುಂಪು ಮತ್ತೆ ಪ್ರವೇಶಿಸುವ ಮುಂಚೆಯೇ ವಜ್ರಮಟ್ಟಿಯ ಆಲದ ಮರದ ಕಟ್ಟೆಯ ಮೇಲೆ ಗೌಡರು ಆಸೀನರಾಗಿದ್ದಾರೆ. ಗುಂಪು ಸಭೆಯಾಗಿ ಮಾರ್ಪಡುತ್ತದೆ. ಪೂಜಾರಿ ಇನ್ನು ರೊಯ್ಯ ಅಂತ ಅಳ್ಳುತ್ತಲೇ ಇದ್ದಾನೆ.)
ಗೌಡ: ರೀ ಪುಜಾರ್ರೆ, ಬಾ ಮುಚ್ರಿ ಸಾಕು (ಪೂಜಾರಿ ಬಾ ಮುಚ್ಚಿಕೊಂಡು ದುಖಿಃಸುವುನು)
ಗಂಗ್ಯಾ: ನೀವು ಏನಾದ್ರೂ ತುಡುಗ ಮಾಡಿರೇನ್ರಿ.
(ಪುಜಾರಿ ಬಾ ಮುಚ್ಚಿಕೊಂಡೆ ದುಖಿಸುತ್ತಾ ಇಲ್ಲವೆಂದು ಗೋಣು ಹಾಕುವನು)
ಗೌಡ: ಮತ್ಯಾಕ ಹೆದರಕೊಂಡು ಅಳ್ಳಾಕ
(ಪುಜಾರಿ ಬಾ ಮುಚ್ಚಿಕೊಂಡೆ ಜೋರಾಗಿ ಸೌಂಡು ಮಾಡುವನು)
ಗೌಡ: ರ್ರಿ ಏನಾತು ಅಂತ ಬೊಗಳ್ರಿ, ಯಾಕ ಬಾ ಮುಚ್ಚಕೊಂಡು ಒಂದೆ ಅಂತಿರಿ
ಪುಜಾರಿ: ನೀವು ಬಾ ಮುಚ್ಚಿ ಅಂದಿದ್ರೆಲ್ಲ, ಅದಕ್ಕ ಮುಚ್ಚಿದ್ದೆ.
ಗೌಡ: ತುಗೊರೆಪಾ, ನಮಗ ಎಂಥ ಪುಜಾರಿ ಗಂಟ ಬಿದ್ದಾನ ನೋಡ್ರಿ, ರಿ ಇದ್ದದ್ದ ಇದ್ದಂಗ ಹೇಳಿದ್ರಿ ಪಾಡಾತು. ಇಲ್ಲಂದ್ರ ನೀವು ತುಡುಗ ಮಾಡಿರಿ ಅಂತ ಕೇಸ್ ಜಡದ ಬಿಡ್ತೇನು.
ಪೂಜಾರಿ: ಯಪ್ಪಾ ಗೌಡ್ರ ಯಾವ ಮಾತಂತ ಆಡತಿರಿ, ಒಳ್ತು ಅನ್ರಿ. ದಿನಾ ಅಂವನ ಮೈ ತೊಳದು ಹೂ ಎರಿಸಿ ಸ್ವಂತ ಮಗನ್ನ ಜ್ವಾಪಾನ ಮಾಡಿದಂಗ ಮಾಡತಿದ್ದೆ. ಈಗ ನೋಡಿದರ ಅಂವನ ಇಲ್ಲ. ಪುಜಾರಿ ಮತ್ತೆ ರೊಂಯ್ಯ ಅಂತ ಅಳ್ಳಲು ಶುರುಹಚ್ಚಿಕೊಳ್ಳುವಷ್ಟರಲ್ಲೆ ಗೌಡ ಸಿಟ್ಟಿಲೇ ನೋಡಿದ್ದರಿಂದ ತೆಪ್ಪಗಾಗುವನು)
ಗೌಡ: (ಚಿಂತಿತನಾಗಿ) ಈ ಮನುಷ್ಯ ಜೀವ ಯಾದಕ್ಕ ಹುಟ್ಟೇತಿ. ತಪ್ಪು ಮಾಡಾಕ ಹುಟ್ಟೇತಿ. ಪರಪಂಚದಾಗ ನನ್ನೂ ಸೇರಿಸಿಕೊಂಡು ರಗಡ ಜನಾ ತೆಪ್ಪು ಮಾಡ್ತಿವಿ. ತೆಪ್ಪ ಮಾಡಿದಾಗ ನಾನು ಇದೊಮ್ಮೆ ಹೊಟ್ಯಾಗ ಹಾಕ್ಕೋ ಹನುಮಪ್ಪ ಅಂತ ಕೈ ಮುಗಿತಿದ್ದೆ. ಅಷ್ಟಕ್ಕ ಅದು ಮಾಫ್ ಆಕ್ಕಿತ್ತು. ಆಮ್ಯಾಲ ಯಥಾ ಪ್ರಕಾರ ಮುಂದಿನ ತೆಪ್ಪ ಮಾಡಾಕ ದಾರಿ ಆಕ್ಕಿತ್ತು. ಈಗ ಹನುಮಪ್ಪ ಗುಡಿಯಾಗ ಇಲ್ಲ ಅಂದ್ರ ಮುಂದಿನ ತೆಪ್ಪು ಮಾಡಾಕ ದಾರಿನೆ ಇಲ್ಲ. ಎಲ್ಲ ಊರ ಗುಡಿಯಾಗ ದೇವರು ಇರೋದ್ಯಾವುದಕ್ಕ, ಆ ಊರ ಮಂದಿ ಮಾಡೋ ತೆಪ್ಪಗಳನ್ನು ಹೊಟ್ಯಾಗ ಹಾಕ್ಕೊಳುದಕ್ಕ. ನಮ್ಮಂಥ ನರಮನುಷ್ಯರ ತೆಪ್ಪಗಳನ್ನು ಹೊಟ್ಯಾಗ ಹಾಕ್ಕೊಳು ಆ ದೇವರ$ ಈಗ ಕಳುವಾಗ್ಯಾನಂದ್ರ ಎಂಥ ಕಾಲ ಬಂತು ಅಂತ…
(ಪುಜಾರಿ ಮತ್ತೆ ಅಳು ಜೋರು ಮಾಡುವನು)
ಗಪ್ ಇರು, ಈಗಾರ ಸ್ವಲ್ಪ ಸುಮ್ಮನಾಗಿ ಏನಾಗೇತಿ ಅಂತ ಹೇಳು
ಪೂಜಾರಪ್ಪ: (ಅಳ್ಳುತ್ತಾ) ದಿನಾ ಹೊದಂಗ ಗುಡಿಗೆ ಹ್ವಾದ್ನಿರಿ. ಆದ್ರ ಅಲ್ಲಿ ಹನುಮಪ್ಪನ ಇರಲಿಲ್ಲ. ನಮ್ಮನ್ನೆಲ್ಲ ಕಾಪಾಡೋ ಆ ದೇವರನ್ನು ನಾವು ಕಾಪಾಡಲಿಲ್ಲಲಾ ಅಂತ ನನಗ ಅಳೂ ಬಂತ್ರಿ. ಹಂಗ ಓಡಿ ಬಂದ ಬಿಟ್ನಿ. (ಮುಸಿ ಮುಸಿ ಅಳ್ಳುತ್ತಾ)
ಭರಮ್ಯಾ: ಅವರೌರ ಆದರೆಗಟ್ಟಿ ಮಂದಿನ ನಮ್ಮ ದೇವರನ್ನು ಹೊತ್ತುಗೊಂಡು ಹೋಗ್ಯಾರ್ರಿ ಗೌಡ್ರ.
ಗೌಡ: ಅದೆಂಗ ಹೇಳ್ತಿ?
ಭರಮ್ಯಾ: ನಾನು ನಿನ್ನೆ ರಾತ್ರಿ ಗುಡಿ ಹಿಂದಿನ ಹೊಲದಾಗ ಕಬ್ಬಿಗೆ ನೀರು ಬಿಟ್ಟಿದ್ನಿ. ಆಗ ಧರೆಗಟ್ಟಿ ಕಡೆಂದ ಡರ್‌ರ್‌ರರ್ ಅಂತ ಟ್ಯಾಕ್ಟರ್ ಬಂತರಿ. ಬಂದವರ ಹನುಮಪ್ಪಗ ಪೂಜಿ ಮಾಡಿ ಹಾರಿ ಗುದ್ದಲಿಂದ ಮಂಟಪ ಒಡ್ದು ಹನುಮಪ್ಪನ್ನ ಅನಾಮತ್ತಾಗಿ ಎತ್ತಿಕೊಂಡು ಟ್ಯಾಕ್ಟರ್‌ಗೆ ಹಾಕ್ಕೊಂಡು ಹೋಗಿಬಿಟ್ರು. ಪಾಪ, ನಮ್ಮ ಹನುಮಪ್ಪ ತಂಡ್ಯಾಗ ನಡುಗಕೋತ ದೇವರಂಗ ಟ್ಯಾಕ್ಟರ್‌ನ್ಯಾಗ ಸುಮ್ಮನ ಕುಂತಿದ್ದ.
ಗೌಡ: ನಿನೇನ್ ಮಾಡ್ತಿದ್ಯೋ ಅಲ್ಲಿ. ಅವರನ್ನ ನಿನ್ನ ಜೀವ ಕೊಟ್ಟಾದ್ರೂ ತಡಿಬೇಕಿತ್ತು.
ಭರಮ್ಯಾ: ಎಪ್ಪಾ, ನಾ ಉಳದ್ರ ಮುಂದ ದೇವರು ದಿಂಡರು ಎಲ್ಲ, ನಾನ ಹೋಗಿಬಿಟ್ರ ಏನು ಮಾಡೂದೈತಿ ಅನಕೊಂಡು ಸುಮ್ಮನ ಕುಂತಿದ್ನಿರಿ.
ರವಿ: ಅಪ್ಪಾ. ಭರಮಪ್ಪ ಹೇಳೂದ್ರಲ್ಲಿ ಖರೆ ಐತಿ. ಈ ಕಾಲದಲ್ಲಿ ಕಲ್ಲು ದೇವರ ಬಗ್ಗೆ ನಾವಿಷ್ಟು ತಲೆ ಕೆಡಿಸಿಕೊಳ್ಳಬಾರದು ಅನಿಸುತ್ತೆ. ಅದು ಹೋದರೆ ಹೋಗಲಿ ಬೇರೆ ಮೂರ್ತಿ ತಂದು ಪ್ರತಿಷ್ಠಾಪಿಸೋಣು.
ಗೌಡ: ಅಬಬಾಬಾ, ನೋಡ್ರೆಪಾ, ಮಗ ನನಗೆ ಬುದ್ಧಿ ಹೇಳಾಕ ಬಂದ. ನೋಡು ಮಗನೆ ನೀನು ಪ್ಯಾಟ್ಯಾಗ ಓದಿಕೊಂಡು ಬಂದಿ. ನಿನಗ ಇದೆಲ್ಲ ತಿಳಿದುಲ್ಲ, ಸ್ವಲ್ಪ ಸುಮ್ಮನ ಮುಚ್ಚಕೊಂಡು ಕೂಡು. (ಜನರತ್ತ ತಿರುಗಿ) ಮುಂದ ಏನು ಮಾಡೂದು ಅಂತಿರಿ?
ಒಬ್ಬ: ಸೀಮೆಹನುಮಪ್ಪನ ಕಳ್ಳತನ ಮಾಡಬೇಕಂತ ಧರೆಗಟ್ಟಿ ಹುಂಬರು ಬಾಳ ಸಲ ಪ್ರಯತ್ನ ಮಾಡ್ತಾ ಇದ್ರು. ಈ ಸಲ ಗೆದ್ದುಬಿಟ್ಟಾರ. ಸೀಮೆ ಹನುಮಪ್ಪನ ಮ್ಯಾಲ ಅವರಿಗೆ ಎಷ್ಟು ಹಕ್ಕು ಇದೆಯೋ ಅಷ್ಟ ಹಕ್ಕು ನಮಗೂ ಐತಿ. ನಾವು ಸುಮ್ಮನಿರಬಾರದು ಇನ್ನ.
ಇನ್ನೊಬ್ಬ: ನಾವೇನು ಬಳಿ ತೊಟ್ಟಿಲ್ಲ, ಕೊಡ್ಲಿ ಕುಡಗೋಲು ತುಗೊರಿ, ಸೀವಿ ಹನುಮಪ್ಪನ ಹೊತಗೊಂಡು ಬರೂಣು,
ಒಬ್ಬ: ಸಮಾಧಾನ, ಮೊದಲು ಸರಳ ರೀತಿಯೊಳಗ ಕೇಳಿ ನೋಡೂಣು. ಆಮ್ಯಾಲ ಇದ್ದ ಐತೆಲ್ಲ ದಂಡಂ ದಶಗುಣಂ.
ಮತ್ತೊಬ್ಬ: ನಾವು ದಂಡ ತುಗೊಂಡಾಗ ಅವರೆನೂ ಸುಮ್ಮನ ನಿಂತಿರೂದಿಲ್ಲ. ಈಗ ಅದೆಲ್ಲ ನಡೆಯೋದಿಲ್ಲ. ಕಾನೂನು ಕೈಗೆ ತುಗೊಳ್ಳೋದು ಸರಿಯಲ್ಲ. ಪೊಲೀಸ್ ಕಂಪ್ಲೇಂಟ್ ಕೊಡೋದು ಒಳ್ಳೆದಂತ ಕಾಣಿಸತೈತಿ.
ರವಿ: ನಾನೊಂದು ಹೇಳ್ಲಾ, ನನ್ನ ಮಾತು ನೀವು ಕಿವಿಯಾಗ ಹಾಕ್ಕೊಳಂಗಿಲ್ಲ. ಆದ್ರೂ ಹೇಳೂದು ನನ್ನ ಕರ್ಮ. ತನ್ನನ್ನು ತಾನ ರಕ್ಷಿಸಿಕೊಳ್ಳಲಾಗದ ಕಲ್ಲು ದೇವರಿಗಾಗಿ ಯಾಕ ಇಷ್ಟೊಂದು ತೆಲಿ ಕೆಡಿಸಿಕೋತಿರಿ. ಅದರ ಬದ್ಲಿ ಇನ್ನೊಂದು ಕಲ್ಲ ತಂದು ಇಟ್ಟರ ಮುಗಿತು.
ಇನ್ನೊಬ್ಬ: ರವಿಗೌಡ್ರ ನೀವು ಊರ ಗೌಡ್ರ ವಂಶದವರಾಗಿ ಊರು ಕಾಯೋ ಕೆಲಸ ಮಾಡಬೇಕು. ಅದು ಬಿಟ್ಟು ದೇವರಿಗೆ ಕಲ್ಲು ಮಣ್ಣು ಅಂತಿರಲ್ರಿ. ಇದು ಬೇಸಿ ಅಲ್ಲ ನೋಡ್ರಿ.
ಒಬ್ಬ: ಜಾಸ್ತಿ ಸಾಲಿ ಓದಿದ್ರ ಹಿಂಗ ಆಗೋದು, ಸಣ್ಣಗೌಡ್ರೆ ದೇವರನ್ನ ಹಿಂಗ ಆಡಕೊಂಡ್ರ, ಮುಂದ ಊರ ಉಡಾಳ ಹುಡ್ರು ಇನ್ನೆಷ್ಟು ಆಡಕೋಬಾರದು. ದೇವರು, ದೊಡ್ಡವರು ಸಡ್ಲ ಆಗಿ ಮಾತಾಡಬಾರದು. ಈಗಿನ ಹುಡುಗರಿಗೆ ಒಟ್ಟ ಗೌರವ ಇಲ್ಲ.
ತುಳಸಿ: ಅಣ್ಣ ನೀ ಸುಮ್ನ ಕೂಡ್ರು. ನಿನಗ ಏನು ಗೊತ್ತಾಗಂಗಿಲ್ಲ. ಒಳಗ ಹೋಗಿ ಓದಕೋ ಹೂಗು, ನಿನ್ನ ಪುಸ್ತಕ ಕರಿಯಾಕ ಹತ್ಯಾವು, ಹೋಗು.
ಹುಚ್ಚಮಲ್ಲ: (ಚೀರುತ್ತಾ ಬಂದು) ದೇವರು ಹ್ವಾದ. ಇನ್ನ ನಮ್ಮನ್ನ ಯಾರು ಕಾಪಾಡೋರಿಲ್ಲ, ನಮ್ಮನ್ನು ನಾವು ಕಾಪಾಡಕೋಬೇಕು. ಅಯ್ಯಯ್ಯೋ ದೇವರು ಸತ್ತ. ದೇವರು ಸತ್ತ.
ಜನರು: ಏ ಆ ಹುಚ್ಚ ನನ್ನ ಮಗ ಇಲ್ಲಿಗ್ಯಾಕ ಬಂದ. ಆ ಕಡೆ ಒದ್ದ ಕಳಿಸ್ರೋ ಅವನ್ನ. (ಒಂದಿಷ್ಟು ಜನ ಅವನನ್ನು ನೂಕಲು ಬರುವರು.)
ಹುಚ್ಚಮಲ್ಲ: (ಕೊಸರಿಕೊಂಡು) ಏ ಕೈ ಬಿಡ್ರೋ, ನಂದೊಂದು ಪ್ರಶ್ನಿ ಐತಿ. ಅದಕ್ಕ ಉತ್ತರ ಕೊಟ್ರ ನಾ ಸುಮ್ಮಕ ಹೊಕ್ಕಿನಿ
(ಜನರು ಅವಕ್ಕಾಗಿ ನೋಡುವರು)
ಹುಚ್ಚಮಲ್ಲ: ದೇವರು ಸರ್ವ ಶಕ್ತ ಹೌದಿಲ್ಲೋ?
ಜನ: ಹೌದು.
ಹುಚ್ಚ: ಸಕಲ ಪಂಡಿತ ಹೌದಲ್ಲೋ?
ಜನ: ಹೌದು.
ಹುಚ್ಚ: ಭೂತ, ಭವಿಷತ್ತು, ವರ್ತಮಾನಗಳನ್ನು ಅರಿತವ ಹೌದಲ್ಲೋ?
ಜನ: ಏ ಮುಂದ ಹೇಳಲೇ
ಹುಚ್ಚ: ದುಷ್ಟ ಶಿಕ್ಷಕ ಶಿಷ್ಟ ರಕ್ಷಕ ಹೌದಲ್ಲೋ?
ಜನ: ಹೌದು ಹೌದು ಹೌದು, ಮುಂದ ಹೇಳ್ತಿಯೋ ಏನ್( ಹೊಡೆಯಲು ಹೋಗುವರು)
ಗೌಡ: ಏ ಅಂವ ಹೇಳಿ ಕೇಳಿ ಹುಚ್ಚ. ಅಂವನ ಮಾತ ಏನ್ ಕೇಳ್ತಿರಿ ಕಳಿಸ್ರಿ ಅಂವನ್ನ
ಹುಚ್ಚ: ತಡಿರಿ ಗೌಡ್ರ, ಈಗ ಬಂತು ಪ್ರಶ್ನೆ, ಪ್ರಶ್ನೆ ಕೇಳಿದ್ರ ನಿಮ್ಮದು ಹಂಗ ಅಳಗಾಡಬೇಕು.
(ಜನ ಹೋ ಎಂದು ಕೈ ಮಾಡುವರು)
ಹುಚ್ಚ: ಸಬ್‌ಕೋ ಗಪಚುಪ್( ಎಲ್ಲರೂ ಮೌನ) ಸರ್ವಶಕ್ತ, ಸಕಲ ಪಾರಂಗತ, ದುಷ್ಟ ಶಿಕ್ಷಕ ಶಿಷ್ಟ ರಕ್ಷಕನಾದ ದೇವರು ಅಲಿಯಾಸ್ ಹನುಮಪ್ಪನ್ನನ್ನು ಕದ್ದು ಹೊತ್ತುಗೊಂಡ ಹ್ವಾದ್ರು ಯಾಕ್ ಸುಮ್ಮನಿದ್ದ? ದೇವರು ತನ್ನನ್ನು ತಾನು ರಕ್ಷಣೆ ಮಾಡಕೊಳ್ಳಬೇಕೋ ಬೇಡೋ, ಕಳ್ಳತನ ಮಾಡೋ ದುಷ್ಟರಿಗೆ ಶಿಕ್ಷಾ ಕೋಡಬೇಕೋ ಬ್ಯಾಡೋ?
ಗೌಡ: ಏ ಹುಚ್ಚ ಸೂಳಿ ಮಗನ್ನ ಕೂಡ ಏನ್ ಮಾತಾಡಿತಿರೋ. ಊರ ಹನುಮಪ್ಪ ಕಳುವಾಗಿರೋದು ಮರ್‍ಯಾದಿ ಪ್ರಶ್ನಿ ಐತಿ. ಮೊದಲ ಅಂವನ್ ಹುಡುಕೋ ಕೆಲಸ ಮಾಡೋನು
ಹುಚ್ಚ: ಗೌಡ್ರ, ಮೊದಲು ಆ ನಿಮ್ಮ ದೇವರಿಗೆ ಮರ್‍ಯಾದಿಲ್ಲ. ಕಳ್ಳರ ಹೆಗಲ ಮ್ಯಾಲ ಕುಂತುಗೊಂಡು ಓಡಿ ಹ್ವಾದ. ಇನ್ನ ಊರ ಮರ್‍ಯಾದಿ ಪ್ರಶ್ನಿ ಎಲ್ಲಿಂದ ಬಂತು. ಇಲ್ಲಿ ನೀವು ಭಕ್ತರು ಪೇಚಾಡಕ ಹತ್ತಿರಿ. ಅಲ್ಲಿ ಅಂವ ಒಂಕ ಮೋತಿ ಹನುಮಪ್ಪ ಕಳ್ಳರ ಕೂಡ ಸುಮ್ಮನ ಕುಂತಿರ್‍ತಾನ. ಅಂತ ದೇವರು ನಮಗ ಬೇಕಾ. ಹೋಗಲಿ ಬಿಟ್ಟ ಬಿಡ್ರಿ ಅಂವನ, ಅಂವನೌನ.
ಗೌಡ: (ಸಿಟ್ಟಿಗೆದ್ದು) ಏ ಮುಖ ಏನ್ ನೋಡ್ತಿರಿ, ಒದ್ದು ಓಡಿಸರಲೇ ಅಂವನ್ನ (ಜನ ಎಲ್ಲ ಮುಗಿ ಬಿಳುವರು ಕಳ್ಳನನ್ನು ಹೊಡೆಯುವರು.) ರವಿಗೌಡ ಬಿಡಿಸುವನು. ಹುಚ್ಚ ಜೋರಾಗಿ ಇವರಿಗೆ ಬೈಯುತ್ತಾ ಓಡಿ ಹೋಗುವನು.)
ರವಿಗೌಡ: ಇದ್ದುದು ಹೇಳಿದ್ರ ಎದ್ದು ಬಂದು ಎದಿಗೆ ಒದ್ರಂತ. ಪಾಪ, ಅಂವ ಖರೆನ ಹೇಳ್ಯಾನ. ಅಂವ ಶುದ್ಧ ಅದಾನ. ನೀವೆಲ್ಲ ಹುಚ್ಚ ಇದ್ದಿರಿ. ಅಂವಗ ಇರುವಷ್ಟು ಬುದ್ದಿ ನಿಮಗ ಇಲ್ಲ.
ಜನ: ಗೌಡ್ರ, ಸಣ್ಣಗೌಡ್ರ ಸುಮ್ಮನಿರಾಕ ಹೇಳ್ರಿ, ನಿಮ್ಮ ಮುಖ ನೋಡ್ಕೊಂಡು ಅವರನ್ನು ಬಿಟ್ಟಿ”. ಇಲ್ಲಂದ್ರ ಹುಚ್ಚಗ ಬಿದ್ದಂಗ ಇವರಿಗೂ ಹೊಡ್ತ ಬಿಳ್ತಾವು.
ಗೌಡ್ರು: ಏ ಹೋಗ್ಲಿ ಬಿಡ್ರ್ಯೋ. ಆ ಹುಡುಗಂದೂ ತೆಲಿಗೆ ಹಚಗೋಬ್ಯಾಡ್ರಿ. ಮುಂದ ಏನು ಮಾಡೋದು ಅಷ್ಟ ಹೇಳಿ.
ಮತ್ತೊಬ್ಬ: ನಾವು ಯಾಕ ಎಂಎಲ್ಲೆಎಗೆ ಒಂದು ಮಾತು ಕೇಳಬಾರದು. ಎರಡು ಊರಿಗೂ ಸಂಬಂಧಪಡತಾರು ಅವರು.
ಗೌಡ್ರು: ಇದು ಒಳ್ಳೆ ಐಡಿಯಾ(ಮೊಬೈಲ್ ತೆಗೆದು ಫೋನ್ ಮಾಡುವರು)ಸಾಹೆಬರ ನಮಸ್ಕಾರ, ನಾನು ವಜ್ರಮಟ್ಟಿ ದಾನಪ್ಪಗೌಡ.
ಎಂಎಲ್ಲೆ: ಓಹೋ ವಜ್ರಮಟ್ಟಿ ಗೌಡ್ರು, ಈಗಷ್ಟ ನಿಮ್ಮೂರಲ್ಲಿ ಕೊಳವೆಬಾ” ತೆಗೆಸೋದ್ರ ಬಗ್ಗೆ ಜಡ್‌ಪಿ ಸಿಇಓಗೆ ಫೊನ್ ಹಚ್ಚಿದ್ದೆ. ಈಗ ನೋಡಿದ್ರ ನಿಮ್ಮ ಫೋನ್ ಬಂತು. ಹೇಳ್ರಿ ಎನ್ “ಷಯ?
ಗೌಡ: ಇಲ್ಲೊಂದು ಪ್ರಾಬ್ಲಂ ಆಗೇತ್ರಿ ಸಾಹೆಬ್ರ, ನಮ್ಮೂರು ಸೀ” ಹನುಮಪ್ಪನ್ನ ದರೆಗಟ್ಟಿ ಜನ ಕಳ್ಳತನ ಮಾಡಕೊಂಡು ಹೋಗ್ಯಾರ. ನಿಮಗ ಗೊತ್ತಲ, ನಮ್ಮೂರು ಹುಡ್ರು ಬಾಳ ಬೆರಕಿ, ಕೊಡ್ಲಿ ಕುಡಗೋಲು ಅನ್ನಾಕ ಹತ್ಯಾರ. ಅದಕ್ಕ ನೀವ ಸ್ವಲ್ಪ ಬಂದು ಬಗಿಹರಿಸಬೇಕಿತ್ತು.
ಎಂಎಲ್ಲೆ: (ಗಾಬರಿಯಾಗಿ) ಏನು, ಗುಡಿಯಾನ ಹನುಮಪ್ಪನ ತುಡುಗು ಮಾಡಕೊಂಡು ಹೋಗ್ಯಾರಾ? ಅವಕ್ಕೇನು ದೆವ್ವ ಬಡಿದೈತ್ರಿ ಗೌಡ್ರ. ಯಾಕಂತ?
ಗೌಡ: ನಿಮಗ ಗೊತ್ತು ಇರೂದ ಐತೆಲ್ಲ. ಸೀಮೆ ಹನುಮಪ್ಪ ಜಗಳ.
ಎಂಎಲ್ಲೆ ಹೌದೌದು, ತಡ್ರಿ ತಡ್ರಿ, ಧರೆಗಟ್ಟಿಯೊಳಗ ನಮ್ಮ ಪಕ್ಷದ ಮುಖಂಡ ಇದ್ದಾನಲ್ಲ ಪಡದಯ್ಯ. ಅಂವಗ ಹೇಳ್ತಿನಿ. ಅವರ ಊರು ಹುಡ್ರುಗೆ ಬುದ್ದಿ ಮಾತು ಹೇಳಿಸಿ ದೇವರನ್ನು ಹೊಳ್ಳಿ ತಂದು ಕೊಡುವಂಗ ಮಾಡ್ತೇನಿ.
ಗೌಡ: ಅಷ್ಟ ಮಾಡಿ ಪುಣ್ಯ ಕಟಕೋರಿ.
ಎಂಎಲ್ಲೆ: ಅಂದಂಗ ಅದು ಸೀಮಿ ಹನುಮಪ್ಪನ ಗುಡಿ ಹಳಿದಾಗೈತೆಲ್ಲ.
ಗೌಡ: ಹೌದ್ರಿ ಸಾಹೆಬ್ರ, ನಿಮಗ ಒಂದು ಅರ್ಜಿ ಕೊಟ್ಟಿದ್ದಿವು. ಜೀರ್ಣೋದ್ಧಾರ ಮಾಡಿಸಬೇಕು ಅಂತ. ನೀವು ಸ್ವಲ್ಪ ಮನಸ್ಸು ಮಾಡಿದ್ರ ದೇವರಿಗೆ ಚಲೋತಂಕ ನೆಳ್ಳ ಮಾಡಬಹುದಿತ್ತು.
ಎಂಎಲ್ಲೆ: ನಾನು ಅದನ್ನ ಹೇಳೋನಾಂತಿದ್ದೆ. ಗುಡಿನ ಭರ್ಜರಿಯಾಗಿ ರಿಪೇರಿ ಮಾಡಿಸಿ ಅದಕ್ಕ ಒಪ್ಪುವಂಥ ಹೊಸ ಮೂರ್ತಿ ತಂದು ಪ್ರತಿಷ್ಠಾಪನಾ ಮಾಡೋಣು. ಸುಮ್ಮನೆ ಯಾಕ ಜಗಳ. ಆ ಧರೆಗಟ್ಟಿ ಹುಡುಗರು ಅಷ್ಟ ಸರಿ ಇಲ್ಲ. ಗಾಳಿ ಗುದ್ದಿ ಯಾಕ ಮೈ ನೂಸುಕೊಳ್ಳೋದು ಅಂತ.
ಗೌಡ: ಸಾಹೇಬ್ರ ಇದೊಂದು ಬಿಟ್ಟು ಬೇಕಾದ್ದು ಕೇಳ್ರಿ, ನಮಗ ಮೂಲ ದೇವರು ಆಗಬೇಕು, ಇಲ್ಲಂದ್ರ ನಿಮ್ಮೂರಿಗೆ ಕಂಟಕ ಐತಿ ಅಂತ ಸ್ವಾಮಿಗೊಳು ಹೇಳಿಕಿ ಹೇಳ್ಯಾರ.
ಎಂಎಲ್ಲೆ: ಹಂಗಾರ, ಆತು ತೊಗೋರಿ, ಅವರನ್ನು ಒಂದು ಮಾತು ಕೇಳಿ ಹೇಳ್ತಿನಿ. ಇವತ್ತು ಅಲ್ಲಿಗೆ ಹೋಗಿ ವಿಚಾರಿಸ್ತಿನಿ. ನೋಡೂಣು ಏನಾಗತ್ತಂತ. (ಫೋನ್ ಕಟ್ಟ ಆಗುವುದು)
ಗೌಡ: ಎಂಎಲ್ಲೆ ಎಲ್ಲ ಸರಿ ಮಾಡ್ತಿನಿ ಅಂತ ಹೇಳ್ಯಾರ. ನೋಡೂನು ಏನಾಗತ್ತಂತ, ರಂಗ್ಯಾ ನೀನು ಭರ್‍ಮಪ್ಪನ ಕರಕೊಂಡು ಧರೆಗಟ್ಟಿಯೊಳಗ ಏನ್ ಪರಿಸ್ಥಿತಿ ಐತಿ ಅಂತ ನೋಡಕೊಂಡು ಬಾ.
ರಂಗ: ಆತ್ರಿ.
(ಎಲ್ಲರೂ ಗುಸು ಗುಸು ಮಾತಾಡುತ್ತಾ ಸಭೆಂದ ನಿರ್ಗಮಿಸುವರು. ರವಿ ಅಲ್ಲೆ ಕುಳಿತಿದ್ದಾನೆ. ಎಲ್ಲ ಹೋದ ಮೇಲೆ ಎದ್ದು ಬಂದು)
ರವಿ: ಈ ಹಾಳಾದ ಜನರಿಗೆ ಯಾವತ್ತು ಬುದ್ದಿ ಬರುತ್ತೋ. ಪಾಪ, ಸತ್ಯ ಮಾತಾಡಿದ ಆ ಮಲ್ಲಂಗೂ ಹುಚ್ಚಮಲ್ಲ ಅಂದು ಹೊಡ್ದು ಕಳಿಸಿದ್ರು. ಒಂದು ಕಲ್ಲು ಮೂರ್ತಿಗೆ ಇಷ್ಟೊಂದು ಜಗಳ ಮಾಡೋದು ನೋಡಿದ್ರ ನಮ್ಮ ದೇಶದ ಭವಿಷ್ಯದ ಬಗ್ಗೆ ಭಯವಾಗುತ್ತೆ. ಬುದ್ಧ ಬಸವಣ್ಣ ಚಾರ್ವಾಕರು ಹುಟ್ಟಿ ಬಂದ ನಾಡಿನಲ್ಲಿಯೆ ಸ್ಥಾವರಗಳು ಇಷ್ಟೊಂದು ವಿಜೃಂಭಿಸುತ್ತಿವೆ ಎಂದರೆ ಅವರು ಹುಟ್ಟದಿದ್ದರೆ ಇನ್ನೇನು ಗತಿ ಇತ್ತೋ,. ಏನು ಮಾಡುವುದು, ಕಾಯುತ್ತಿದ್ದೇನೆ ಕಾಲ ಮಾಗುವುದಕ್ಕಾಗಿ. ಕಾಯುತ್ತಲೇ ಇರುತ್ತೇನೆ…

ತೆರೆ ಬೀಳುವುದು

 

ವಿಮುಖ ~ ಸೌಮ್ಯಾ ಕಲ್ಯಾಣ್‌ಕರ್‌

ವಿಜಯ ನೆಕ್ಸ್ಟ್‌ ಯುಗಾದಿ ಕಥಾ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪಡೆದ ಕಥೆ ಇದು. ಮೊದಲ ಪ್ರಯತ್ನದಲ್ಲೆ ಯಶಸ್ವಿಯಾದ ಸೌಮ್ಯಾ ಕಲ್ಯಾಣ್‌ಕರ್‌ ಗೆ ಅಭಿನಂದನೆಗಳು. 

ಕಲ್ಕತ್ತಾದಿಂದ ಎರಡುವರ್ಷದ ಹಿಂದೆ ಬಂದಿದ್ದ ವಿಮುಖ ದಾಸ್ ಗೆ ಈಗಬೆಂಗಳೂರು ಅಪರಿಚಿತವಾಗಿಯೇನೂ ಉಳಿದಿರಲಿಲ್ಲ. ತನ್ನ ರಾಜಾಜಿನಗರದರಾಮಮಂದಿರದ ಬಳಿಯಿರುವ ರೂಮಿನಿಂದ ಇಂದಿರಾ ನಗರದ ನೂರಡಿಯರಸ್ತೆಯಲ್ಲಿರುವ ಆಫೀಸನ್ನು ಮುಟ್ಟುವಷ್ಟರಲ್ಲಿ ನಡುವೆ ಬರುವ ಎಲ್ಲಾ ಸ್ಟಾಪ್ಗಳನ್ನೂ ಬಸ್ಸಿನ ಕಿಟಕಿ ರಾಡಿಗೆ ತಲೆಯೊರಗಿಸಿಕೊಂಡು ಕಣ್ಣುಮುಚ್ಚಿಯೇಹೇಳಬಲ್ಲವನಾಗಿದ್ದ. ಅದೂ ಅಲ್ಲದೇ ವಾರಕ್ಕೋ ಎರಡು ವಾರಕ್ಕೋ ಒಮ್ಮೆ ಎಂಬಂತೆ ಆಫೀಸಿನಿಂದ ಬೇಗ ಹೊರಟು ಬಸ್ ನಿಲ್ದಾಣಕ್ಕೆ ಬಂದು ಸಿಕ್ಕಿದ ಬಸ್ಸು ಹತ್ತಿ, ಎಲ್ಲೋ ಇಳಿದು, ಎಲ್ಲೋ ತಿರುಗಿ ನಡುರಾತ್ರಿ ಮನೆ ಮುಟ್ಟುತ್ತಿದ್ದದ್ದೂ ಉಂಟು. ಹಾಗಾಗಿ ಬೆಂಗಳೂರಿನ ಸಾಕಷ್ಟು ಏರಿಯಾಗಳು ಅವನಿಗೆ ಗೊತ್ತಿದ್ದವು. ಇಂದಿರಾನಗರದಲ್ಲೇ ಮನೆ ಹುಡುಕಬಹುದಾಗಿದ್ದರೂ ಅವನ ಬಸ್ಸು ಪ್ರಯಾಣದ ಪ್ರೀತಿ, ಮನೆಯ ಬಳಿಯಿರುವ ಅವನಿಷ್ಟದ ರಾಮಮಂದಿರ ಮತ್ತು ಇಂದಿರಾನಗರದ ದುಬಾರಿ ಬಾಡಿಗೆ ಅವನನ್ನು ರಾಜಾಜಿನಗರದಲ್ಲೇ ಉಳಿಯುವಂತೆ ಮಾಡಿದ್ದವು.

ಬಾಲ್ಯದಲ್ಲೇ ತಾಯಿಯ ಬೆಚ್ಚಗಿನ ಆಶ್ರಯ ಬಿಟ್ಟು ಬೋರ್ಡಿಂಗ್ ಸ್ಕೂಲಲ್ಲೇಬೆಳೆದಿದ್ದ ವಿಮುಖ. ಆಗಾಗ ಹೊಸ ಹೊಸ ಮನುಷ್ಯರೊಂದಿಗೆ ಬರುತ್ತಿದ್ದಅವನು ‘ಅಮ್ಮು’ ಎಂದು ಕರೆಯುತ್ತಿದ್ದ ಅವನ ತಾಯಿಯನ್ನು ನೋಡುವಾಗಲೆಲ್ಲಾ ಅವನಿಗೆ ಅವಳ ಕಣ್ಣು, ಮೂಗು, ಹುಬ್ಬು ಎಂದೂ ಕಣ್ಣಿಗೆ ಬಿದ್ದದ್ದೇ ಇಲ್ಲ. ಬದಲು ಅವಳ ಕೆಂಪು ದೊಡ್ಡ ಬಿಂದಿ, ಅದಕ್ಕಿಂತ ಕೆಂಪಾಗಿತುಟಿಗೆ ಢಾಳಾಗಿ ಬಳಿದಿದ್ದ  ಬಣ್ಣ, ಅವೆರಡಕ್ಕೂ ಜೊತೆಯಾಗುವಂತೆ ಬೈತಲೆತುಂಬ ಮೆತ್ತಿಕೊಂಡ ರಕ್ತಗೆಂಪು ಸಿಂಧೂರವೇ ಕಾಣುತ್ತಿದದ್ದು. ಅವನಿಗೆಅಮ್ಮು ಎಂದಾಕ್ಷಣ ತಲೆಯಲ್ಲಿ ಬರುತ್ತಿದ್ದದ್ದು ಸಿಗ್ನಲ್ಲಿನ ಕೆಂಪು ದೀಪ. ಸ್ಕೂಲುಮುಗಿದ ಮೇಲೂ ತನ್ನ ಮುಂದಿನ ಶಿಕ್ಷಣವನ್ನು ಹಾಸ್ಟೆಲಿನ ಗೋಡೆಗಳನಡುವೆಯೇ ಕಳೆದುಬಿಟ್ಟ. ಯಾರೊಂದಿಗೂ ಬೆರೆಯದ ವಿಮುಖನಿಗೆ ಹೊಸಜನರನ್ನು ಕಾಣುವುದೂ, ಮಾತನಾಡುವುದೂ ಎಲ್ಲಿಲ್ಲದತಳಮಳ,ಸಂಕಟಗಳನ್ನು ಹುಟ್ಟಿ ಹಾಕುತ್ತಿತ್ತು. ಪದವಿ ಮುಗಿಸಿದ ಕೂಡಲೇಅಮ್ಮುವಿಗೆ ಒಂದೂ ಮಾತೂ ಹೇಳದೇ ಅವನು ಬಂದ ಸಮಯಕ್ಕೆ ಸರಿಯಾಗಿ ಸ್ಟೇಶನ್ ಅಲ್ಲಿ ನಿಂತಿದ್ದ ಹೌರಾ-ಯಶವಂತಪುರ ಟ್ರೇನ್ ಹತ್ತಿ ಬೆಂಗಳೂರಿಗೆ ಬಂದು ಬಿಟ್ಟಿದ್ದ. ಅಮ್ಮು ಕೊಡಿಸಿದ್ದ ಬಟ್ಟೆ, ಅವಳು ಕೊಟ್ಟು, ಇವನು ಖರ್ಚು ಮಾಡದೇ ಕೂಡಿಟ್ಟ ದುಡ್ಡು ಅವನನ್ನು ಸರಿ ಸುಮಾರು ಎರಡೂವರೆ ತಿಂಗಳು, ಕಾಪಾಡಿದ್ದವು. ಯಾವಾಗ ಕೆಲಸ ಸಿಕ್ಕಿತೋ, ಆ ಕ್ಷಣದಿಂದ ಬೆಂಗಳೂರಿನ ಜನಸಾಗರದ ನಡುವೆ ಒಂದು ಉಪ್ಪಿನ ಕಣದಂತೆ ವಿಮುಖ ಬೆರೆತುಹೋಗಿದ್ದ.

ಅವನು ಕೆಲಸ ಮಾಡುತ್ತಿದ್ದದು ಗಾಜಿನ ವಿವಿಧ ವಿನ್ಯಾಸದ, ಆಕಾರದ ವಿಸ್ಕಿ,ವೈನ್ ಗ್ಲಾಸ್ ಗಳನ್ನು ಮಾರಾಟ ಮಾಡುತ್ತಿದ್ದ ಕಂಪೆನಿಯೊಂದಕ್ಕೆ. ಅವರಿಗೆಬರುತ್ತಿದ್ದ ಪಾರ್ಸೆಲ್ ಗಳ ಲೆಕ್ಕ ಬರೆಯುವುದು, ಅದನ್ನು ತೆಗೆದುಕೊಂಡುಹೋಗುವ ಅಂಗಡಿಗಳ ಹೆಸರು, ಅವರೊಂದಿಗಿನ ವ್ಯವಹಾರ, ಲೆಕ್ಕಾಚಾರಇವಿಷ್ಟು ವಿಮುಖನ ಕೆಲಸಗಳು. ಕೆಲಸಕ್ಕೆ ಸೇರಿದ ಕೆಲದಿನಗಳಲ್ಲೇ ವಿಮುಖ ತೊಂದರೆ ಎದುರಿಸಬೇಕಾಯಿತು. ಅಲ್ಲಿ ಕೆಲಸ ಮಾಡುತ್ತಿದ್ದ ಮೇಲ್ ರಿಸೆಪ್ಷನಿಸ್ಟ್ ಕೆಲಸ ಬಿಟ್ಟುಬಿಟ್ಟ, ಹಾಗಾಗಿ ಆಫೀಸಿಗೆ ಬರುತ್ತಿದ್ದ ಫೋನುಕರೆಗಳಿಗೆ ಇವನೇ ಉತ್ತರಿಸಬೇಕಾಯಿತು. ವಿಮುಖನ ಇಂಗ್ಲೀಷ್ ಕೂಡಬೆಂಗಾಲಿ ಉಚ್ಚಾರದಲ್ಲಿ ಇದ್ದದ್ದರಿಂದ ಎಷ್ಟೇ ಸಲ ವಿವರಿಸಿದರೂ ಫೋನಿನ ಆತುದಿಯ ವ್ಯಕ್ತಿಗೆ ಇವನೇನು ಅನ್ನುತ್ತಿದ್ದಾನೆ ಎಂಬುದೇ ತಿಳಿಯುತ್ತಿರಲಿಲ್ಲ.ವಿಮುಖನ ದಕ್ಷತೆ, ಪ್ರಾಮಾಣಿಕತೆಗೆ ಅದರ ಮಾಲೀಕ ಪುಟ್ಟಸ್ವಾಮಿ ಇಡೀ ಆಫೀಸಿನ ಲೆಕ್ಕಾಚಾರವನ್ನು ಈತನಿಗೊಪ್ಪಿಸಿ ತನ್ನ ಇನ್ನೊಂದು ಕಸುಬಾದರಿಯಲ್ ಎಸ್ಟೇಟ್ ದಂಧೆಗೆ ಕೈ ಹಾಕಾಗಿತ್ತು. ಅವನಿಗೆ ಈ ಸಮಸ್ಯೆಯ ಬಗ್ಗೆ ಹೇಳಿದರೆ ಅರ್ಥ ಮಾಡಿಕೊಳ್ಳುವ ಪ್ರಯತ್ನವೇ ಮಾಡುತ್ತಿರಲಿಲ್ಲ. ಆ ಪುಟ್ಟಆಫೀಸಿನಲ್ಲಿ ಇದ್ದ ಉಳಿದ ಮೂವರೂ ಹೆಚ್ಚು ಓದಿಕೊಂಡವರೇನಲ್ಲ , ಬರೇಪಾರ್ಸಲ್ ತರುವುದು, ಕೊಡುವುದು, ಲೆಕ್ಕ ಹೇಳುವುದನ್ನಷ್ಟೇಮಾಡಿಕೊಂಡಿದ್ದವರು, ಕನ್ನಡವನ್ನಷ್ಟೇ ಮಾತನಾಡುತ್ತಿದ್ದರು. ಒಂದು ದಿನವಂತೂ ಸೂಪರ್ ಮಾರ್ಕೇಟ್ ಒಂದರಿಂದ ಸುಮಾರು ಎಂಭತ್ತು ಸಾವಿರ ರೂಪಾಯಿ ಮೌಲ್ಯದ ವೈನ್ ಗ್ಲಾಸುಗಳು ತಾವು ಕೇಳಿದ ಆಕಾರ, ಗಾತ್ರದಲ್ಲಿಲ್ಲವೆಂದು ವಾಪಾಸಾದವು.

ಮರುದಿನ ಎರಡು ಪ್ರಮುಖ ಸಂಗತಿಗಳು ಜರುಗಿದವು. ‘ಲೋಕಲ್ಲ್ಯಾಂಗ್ವೇಜ್’ ಎಂದು ದೂರವೇ ಇರಿಸಿದ್ದ ಕನ್ನಡವನ್ನು ವಿಮುಖ ಕಲಿಯಲೇಬೇಕಾಯ್ತು ಹಾಗೂ ಗಂಡಸರೇ ಇದ್ದ ಆ ಆಫೀಸಿಗೆ ಸುಂದರ ಹೆಣ್ಣೋರ್ವಳಆಗಮನವಾಯಿತು. ಹಾಗೆ ಬಂದವಳೇ ಮಂಜನಿ ಜೋಸ್, ಮಲಯಾಳಿಹುಡುಗಿ. ಪುಟ್ಟಸ್ವಾಮಿಯೇ ಅವಳನ್ನು ಕರೆದುಕೊಂಡು ಬಂದಿದ್ದ. ನೋಡಿದ ಕೂಡಲೇ ಕಣ್ಸೆಳೆಯುವ ರೂಪದ ಮುಖ, ಅದಕ್ಕೆ ಸರಿಯಾದ ಮೇಕಪ್ಪಿನೊಂದಿಗೆ ಮಂಜನಿ ಬಂದಾಗ ಅಲ್ಲಿದ್ದ ಎಲ್ಲರೂ ಹುಬ್ಬೇರಿಸಿದ್ದರು.ಬೇರೆ ಯಾರೂ ಸಿಗಲಿಲ್ಲವೇ, ಅದೂ ಹೋಗಿ ಹೋಗಿ ಮಲೆಯಾಳಿ ಬೇರೆ,ಇಂಗ್ಲೀಷ್ ಮಾತಾಡಿದರೆ ಮಲಯಾಳಂ ಮಾತಾಡಿದಂತಿರುತ್ತದೆ ಎಂದುವಿಮುಖನನ್ನು ಬಿಟ್ಟು ಉಳಿದ ಮೂವರು ಮಾತನಾಡಿಕೊಂಡಾಗಿತ್ತು.  ಆದರೆಇರುವ ನಾಲ್ಕೂ ಜನರ ಮನಸ್ಸನ್ನೂ ತನ್ನ ಶುದ್ಧ ಇಂಗ್ಲೀಷ್, ಕನ್ನಡ, ಹಿಂದಿಹೀಗೆ ಮೂರೂ ಭಾಷೆಗಳಷ್ಟೇ ಅಲ್ಲದೇ ನಗು, ಮಾತುಗಳನ್ನೂ ಸೇರಿಸಿ ಆಕೆಎಲ್ಲರ ಮನಸ್ಸನ್ನೂ ಗೆದ್ದಿದ್ದಳು.

ಮೊದಲ ಅಂತಸ್ತಿನಲ್ಲಿದ್ದ ಆ ಆಫೀಸಿನ ಕೆಳಭಾಗದಲ್ಲಿದ್ದದ್ದು ಅದರ ಮಾಲೀಕ, ಓರ್ವ ಮಿಲಟರಿ ಮನುಷ್ಯ, ಪೊನ್ನಪ್ಪ. ಆವಾಗಾವಾಗ ತಮ್ಮ ಲ್ಯಾಬ್ರಡಾರ್ ಜಾತಿಯ ನಾಯಿ ಶ್ಯಾಡೋದೊಂದಿಗೆ ಬರುತ್ತಿದ್ದ ಆ ಸುರದ್ರೂಪಿ ಅಜ್ಜ ಇವನು ಮಾತಾಡಲೀ ಬಿಡಲಿ ಬೆನ್ನು ತಟ್ಟಿ, “ ನೊಮೊಸ್ಕಾರ್, ಬೆಂಗಾಲಿ ಬಾಬು, ತುಮಿ ಕೆಮೋನ್ ಅಚ್ಚೋ” ಎಂದು ತನಗೆ ಬರುತ್ತಿದ್ದ ಒಂದೇ ಒಂದು ಬೆಂಗಾಲಿ ಸಾಲನ್ನು ಹೇಳುತ್ತಿದ್ದರು. ಮೊದ ಮೊದಲು ಕಾಟಾಚಾರಕ್ಕಷ್ಟೇ, ಅನಂತರ ತನಗಲ್ಲವೇ ಅಲ್ಲ ಎಂಬಂತೆ, ತದನಂತರ ಅವರ ನಿರ್ಮಲ ನಗು, ವಿಶ್ವಾಸಕ್ಕೆ ಕಟ್ಟು ಬಿದ್ದು ವಿಮುಖನೂ ನಕ್ಕು ತನ್ನ ಅರೆಬರೆ ಕನ್ನಡದಲ್ಲೇ ಉತ್ತರಿಸುತ್ತಿದ್ದ. ದಿನಗಳುರುಳಿದಂತೆ ಅವರ ಮಧ್ಯೆ ಹೆಚ್ಚಿನ ಸ್ನೇಹವಿರದಿದ್ದರೂ ಅವರ ಮುಖ ಹಾಗೂ ಶ್ಯಾಡೋವನ್ನು ನೋಡಿದರೆ ಏನೋ ಖುಷಿಯ ಅನುಭೂತಿ ಅವನಿಗೆ. ಅವರನ್ನು ದಾದು ಎಂದು ಕರೆಯಲಾರಂಭಿಸಿದ್ದ ಹಾಗೂ ಆ ಸಂಭೋದನೆ ಪೊನ್ನಪ್ಪನವರಿಗೂ ಅಸಾಧ್ಯ ಖುಷಿ ಕೊಡುತ್ತಿತ್ತು ಎಂಬುದನ್ನು ಅವರ ನಗುಮುಖವೇ ಸಾರುತ್ತಿತ್ತು. ದಿನೇ ದಿನೇ ಅಡ್ಡಡ್ಡ ಬೆಳೆಯುತ್ತಿದ್ದ ಶ್ಯಾಡೋವಾದರೂ ಇವನನ್ನು ನೋಡಿದಾಗಲೆಲ್ಲಾ ಬಾಲವನ್ನಾಡಿಸಿ, ನೆಕ್ಕಿ, ಮೈ ಮೇಲೆ ಹಾರಿ ತನ್ನ ಪ್ರೀತಿ ತೋರಿಸುತ್ತಿತ್ತು. ದಾದು, ಶ್ಯಾಡೋ ಇಬ್ಬರೂ ಒಂದೇ, ಅವರೀರ್ವರ ಭಾವವೂ ಒಂದೇ ಎಂದೆನಿಸುತ್ತಿತ್ತು ವಿಮುಖನಿಗೆ. ಆದರೆ ಮಂಜನಿಯ ಜೊತೆ ಮಾತು ಹೋಗಲಿ, ಅವಳು ಮಾತನಾಡಿದರೂ ಅವಳತ್ತ ನೋಡದೇ ಹೋಗಿ ಬಿಡುತ್ತಿದ್ದರು ದಾದು. ದಾದೂನಂತೆ ಶ್ಯಾಡೋ ಕೂಡಾ ಅವಳತ್ತ ಸ್ನೇಹವನ್ನು ತೋರದೆ ತನ್ನ ಚೂಪು ಹಲ್ಲುಗಳನ್ನು ಪ್ರದರ್ಶಿಸುತ್ತಿತ್ತು. ಎಲ್ಲರೊಂದಿಗೂ ನಕ್ಕು ಮಾತನಾಡುವ ಮಂಜನಿಯೂ ಅವರಿಬ್ಬರನ್ನು ಕಂಡರೆ ಸಪ್ಪಗಾಗುತ್ತಿದ್ದಳು.

ಅದೊಂದು ಶನಿವಾರ. ಪ್ರತೀ ಶನಿವಾರ ಮಧ್ಯಾಹ್ನ ಅಫೀಸು ಮುಗಿಸಿ ಸಮೀಪದ ಕಲ್ಕತ್ತಾ ವಿಕ್ಟೋರಿಯಾ ಚಾಟ್ ಗೆ ಹೋಗಿ ತನ್ನಿಷ್ಟದ ಅಲೂ ಪರಾಟಾ, ಚನಾ ಸಬ್ಜಿ ಮತ್ತು ಮನಸ್ಸು ತುಂಬುವವರೆಗೆ ತನ್ನ ಪ್ರೀತಿಯ ಜಿಲೇಬಿ ತಿಂದು ರಾಜಾಜಿನಗರದ ಕಡೆಗಿನ ಬಸ್ಸು ಹತ್ತುತ್ತಿದ್ದ ವಿಮುಖ. ಆ ದಿನ ಕಾರಣವಿಲ್ಲದೆಯೇ ಮಂಜನಿಯನ್ನೂ ಊಟಕ್ಕೆ ಕರೆಯೋಣ ಅನಿಸಿತು ಅವನಿಗೆ. ಮರುಕ್ಷಣವೇ ತನಗೆ ಹಾಗನಿಸಿದ್ದರ ಬಗ್ಗೆ ಅಚ್ಚರಿಯೂ ಹುಟ್ಟಿತು, ಕೂತು ಅವಳನ್ನು ಯಾಕೆ ಕರೆಯಬೇಕು ಎಂದು ಯೋಚಿಸಿದ, ಊಹೂಂ, ಕಾರಣ ಹೊಳೆಯಲಿಲ್ಲ. ಸರಿ ಅನಿಸಿತಲ್ಲ, ಕೇಳೋಣ ಎಂದು ತನ್ನ ಸೀಟಿನಿಂದ ಎದ್ದು ನಿಂತ. ಆದರೆ ಅವಳ ಹತ್ತಿರ ಹೋಗಲು ಧೈರ್ಯ ಸಾಲದೇ, ಕಾರಣವಿಲ್ಲದಿದ್ದರೂ ರೆಸ್ಟ್ ರೂಮಿಗೆ ಹೋಗಿ ಕನ್ನಡಿಯಲ್ಲಿ ಇಣುಕಿದ. ಇಷ್ಟು ವರ್ಷಗಳಿಂದ ಚಿರಪರಿಚಿತನಾಗಿ ಕಾಣುತ್ತಿದ್ದ ವಿಮುಖ ಅವನಿಗೆ ಕನ್ನಡಿಯಲ್ಲಿ ಕಾಣಸಿಗಲಿಲ್ಲ. ಗಲಿಬಿಲಿಯಾಯಿತು ಅವನಿಗೆ. ಹೋದ ತಪ್ಪಿಗೆ ಸುಮ್ಮನೇ ಫ಼್ಲಶ್ ಮಾಡಿ ಹೊರಬಂದು ಫೋನಿನಲ್ಲಿ ನಗುತ್ತಾ ಹರಟುತ್ತಿದ್ದ ಮಂಜನಿಯನ್ನೇ ಕಣ್ಣೂ ಮುಚ್ಚದೇ ದಿಟ್ಟಿಸಿದ. ಅರೆ, ಹೌದಲ್ಲಾ! ಯಾವಾಗಲೂ ಅವಳನ್ನು ಹತ್ತಿರದಿಂದ ನೋಡಿದ್ದೇ ಇಲ್ಲ, ಆ ಗಾಜಿನ ಪುಟ್ಟ ಕ್ಯಾಬಿನ್ ಒಳಗಷ್ಟೇ ನೋಡಿದ್ದು. ಹತ್ತಿರ ಹೋಗಿ ಮಾತನಾಡಿಸುವ ಅವಕಾಶಗಳು ಬಂದಿದ್ದರೂ ಇರುವ ಮೂವರನ್ನೇ ಕರೆದು ಅವರಿಗೇ ಮಾತನಾಡುವಂತೆ ತಿಳಿಸುತ್ತಿದ್ದ ಹೊರತು ತಾನಾಗಿಯೇ ಮಾತೇ ಆಡಿಲ್ಲವಲ್ಲ ಎಂದೆನಿಸಿತು. ಆ ಗಾಜಿನ ಕ್ಯಾಬಿನ್ನಿನಲ್ಲಿ ಮಂಜನಿ ಶೋಕೇಸಿನ ಪುಟ್ಟ ಗೊಂಬೆಯಂತೆ ಕಾಣಿಸುತ್ತಿದ್ದಳು.

ಯಾಕೋ ಆ ಗಳಿಗೆಗೆ ತನ್ನ ಅಮ್ಮುವಿನ ನೆನಪು ಹಾರಿಬಂತು ಅವನಿಗೆ. ತನ್ನ ಸೀಟಿಗೆ ಬಂದು ಕೂತರೂ ಯಾವ ಕೆಲಸವನ್ನೂ ಮಾಡಲಾಗದೇ ಕೈಗೆ ಸಿಕ್ಕಿದ ಹಾಳೆಯ ಮೇಲೆ ಗೀಚಲಾರಂಭಿಸಿದ.  ಆ ಸಮಯಕ್ಕೆ ಬಂದ ದಾದು ಅವನ ಬೆನ್ನು ತಟ್ಟಿದವರು ಇನ್ನೇನು ಮಾತನಾಡಬೇಕು, ಅಷ್ಟರಲ್ಲಿಯೇ ಇಷ್ಟು ದಿನಗಳಲ್ಲಿ ಎಂದೂ ಇನ್ನೊಂದು ಮಾತನ್ನು ಹೇಳದಿರುವವರು, ಇವತ್ತು, “ ಬೇಡ ಬಾಬು, ನೋವಾಗುತ್ತದೆ ನಿನಗೆ“ ಎಂದು ತಮ್ಮದಲ್ಲವೇ ಅಲ್ಲದ ಗೊಗ್ಗರು ಸ್ವರದಲ್ಲಿ ಉದ್ಗರಿಸಿ ದುರ್ದಾನ ತೆಗೆದುಕೊಂಡವರಂತೆ ನಡೆದು ಬಿಟ್ಟರು. ಶ್ಯಾಡೋ ಸುಮ್ಮನೆ ಅವನನ್ನರೆಗಳಿಗೆ ನೋಡಿ ದಾದುವನ್ನು ಹಿಂಬಾಲಿಸಿತು. ಯಾಕೆ ದಾದು ಹೀಗೆ ವರ್ತಿಸಿದರೆಂದು ದಿಗ್ಬ್ರಾಂತನಾಗಿ ಕೂತವನಿಗೆ ಅದರುತ್ತರ ಹೊಳೆದದ್ದು ತನ್ನ ಕೈಲಿರುವ ಹಾಳೆಯನ್ನು ನೋಡಿದ ಮೇಲೆಯೇ. ಇಡೀ ಹಾಳೆಯ ತುಂಬಾ ಗೀಚಿಹಾಕಿದ್ದ ಹೆಸರು ‘ಮಂಜನಿ’. ತನ್ನ ಕೈ ಮೀರಿ ಆದ ಅಚಾತುರ್ಯಕ್ಕೆ ಮೈ ಒಂದು ಕ್ಷಣ ನಡುಗಿದರೂ ಸಾವರಿಸಿಕೊಂಡು ಆ ಕಾಗದವನ್ನೆತ್ತಿ ಚೂರು ಚೂರಾಗಿ ಹರಿದು ಕಾಲಿನಡಿಯಿಟ್ಟಿದ್ದ ಕಸದಬುಟ್ಟಿಗೆ ಎಸೆದುಬಿಟ್ಟ. ಟೇಬಲ್ ಮೇಲಿಟ್ಟಿದ್ದ ನೀರು ಎತ್ತಿ ಗಟಗಟ ಕುಡಿದವನು ತನ್ನ ಎದೆಯಬಡಿತ ಸ್ಥಿಮಿತಕ್ಕೆ ತಂದುಕೊಳ್ಳಲು ಒದ್ದಾಡಿಹೋದ. ಏನೂ ಮಾಡಿದರೂ ಸರಿಯಾಗದಾಗ ಮೇಜಿನ ಮೇಲಿದದ್ದನ್ನೆಲ್ಲಾ ಒಂದು ಮೂಲೆಗೆ ಸರಿಸಿ ಅದರ ಮೇಲೆ ತಲೆಯನ್ನಾನಿಸಿ ಮಲಗಿಬಿಟ್ಟ.

ಎಷ್ಟು ಹೊತ್ತು ಹಾಗೇ ಮಲಗಿದನೋ ಗೊತ್ತಿಲ್ಲ, ಯಾರೋ ಮೈಮುಟ್ಟಿ ಎಚ್ಚರಿಸಿದಂತಾಗಿ ಕಣ್ಣು ಬಿಟ್ಟರೆ ಅತೀ ಹತ್ತಿರದಲ್ಲಿ ನಿಂತಿದ್ದಾಳೆ ಮಂಜನಿ! ಎಂದೂ ಅವಳನ್ನು ಇಷ್ಟು ಹತ್ತಿರದಿಂದ ನೋಡದವನಿಗೆ ಸಂಪೂರ್ಣ ಕಕರು ಮಕರು ಹಿಡಿದಂತಾಯಿತು. ಮೊದಲು ಅವನರಿವಿಗೆ ಬಂದಿದ್ದು ಉಸಿರುಗಟ್ಟಿಸುವಷ್ಟು ಘಾಟು ವಾಸನೆಯ ಸುಗಂಧ. ನಂತರ ಅವಳನ್ನೇ ನಿರುಕಿಸಿದವನಿಗೆ ಕಂಡದ್ದು ವರುಷಾನುಗಟ್ಟಲೇ ನೋಡಿದ್ದ ರಕ್ತಗೆಂಪು ಸಿಂಧೂರ, ಹಣೆಯ ಕುಂಕುಮ ಹಾಗೂ ರಕ್ತದಲ್ಲೇ ಅದ್ದಿ ತೆಗೆಯಲಾಗಿವೆಯೋ ಅನ್ನುವ ತುಟಿಗಳು. ಏನೂ ಮಾತನಾಡಲಾಗದೇ ಸುಮ್ಮನಿದ್ದ ವಿಮುಖನನ್ನು ಮತ್ತೆ ಮೈಮುಟ್ಟಿ ಎಚ್ಚರಿಸಿದ ಮಂಜನಿ ಬೀಗದ ಕೈಯನ್ನು ಅವನ ಟೇಬಲ್ ಮೇಲಿಟ್ಟು ಹಾರುತ್ತಿದ್ದಾಳೋ ಎಂಬಂತೆ ಓಡಿ ಧಡಬಡ ಮೆಟ್ಟಿಲಿಳಿದದ್ದೂ ಆಯಿತು. ಯಾಕೋ ಕುತೂಹಲವುಕ್ಕಿ ಕಿಟಕಿಯ ಬಳಿ ಬಂದು ನಿಂತ ವಿಮುಖನಿಗೆ ಕೆಳಗಡೆ ಕಂಡಿದ್ದು ಹೆಗಲ ಮೇಲೆಯೇ ನಿದ್ದೆ ಹೋದ ನಾಲ್ಕೈದು ವರ್ಷದ ಮಗುವನ್ನೆತ್ತಿಕೊಂಡು ನಿಂತಿದ್ದ ಓರ್ವ ಹಿರಿಯ ಹೆಂಗಸು. ಮಂಜನಿ ಹೋದವಳೇ ಮಗುವಿನ ಹಣೆ ಮುಟ್ಟಿ ನೋಡಿ, ಆ ಮಗುವನ್ನು ತಾನೆತ್ತಿಕೊಂಡಳು. ಅವರೀರ್ವರು ಕಿಟಕಿಗೆ ಬೆನ್ನು ಹಾಕಿ ನಡೆದಂತೆ ವಿಮುಖನಿಗೆ ಮಲಗಿದ್ದ ಆ ಮಗುವಿನ ಮುಖ ಸ್ಪಷ್ಟವಾಗಿ ಕಾಣಿಸಲಾರಂಭಿಸಿತು. ಜ್ವರದ ತಾಪಕ್ಕೆ ಕೆಂಪಾಗಿ ಬಾಡಿದಂತಿದ್ದ ಆ ಮಗುವಿನ ಮುಖ ಸಾಕಷ್ಟು ಚಿರಪರಿಚಿತ ಅನಿಸಲಾರಂಭಿಸಿತು.

ತಿರುಗುತ್ತಿದ್ದ ಫ್ಯಾನು, ಲೈಟು ಎಲ್ಲವನ್ನೂ ಅದರದರ ಪಾಡಿಗೇ ಬಿಟ್ಟು ವಿಮುಖ ತನ್ನಿಂದಾದಷ್ಟು ಸಾಧ್ಯವಾದ ವೇಗದಲ್ಲಿ ಕೆಳಗಿಳಿದು ಬಂದ. ರಸ್ತೆ ದಾಟಲೆಂದು ಕಾದು ನಿಂತಿದ್ದ ಮಂಜನಿಯನ್ನು ಕರೆದ, ಅವಳಿಗದು ಕೇಳಿಸಲಿಲ್ಲ. ತನ್ನ ಜೀವಮಾನದಲ್ಲೇ ಮೊದಲ ಬಾರಿಗೆ ವಿಮುಖ ಗಟ್ಟಿಯಾಗಿ ಹೆಸರು ಹಿಡಿದು ಕೂಗಿದ. ನಿಂತು ತಿರುಗಿದ ಮಂಜನಿಯ ಬಳಿಸಾರಿ, ಅವಳ ಕಂದು ಕಪ್ಪು ಕಣ್ಣುಗಳನ್ನೇ ನೋಡಿ ತನ್ನ ಅರೆ ಬರೆ ಕನ್ನಡದಲ್ಲಿ “ ಬೇಬಿಗೆ ಹುಷಾರಿಲ್ಲ?, ನಾನೂ ಹೆಲ್ಪ್ ? “ ಎಂದ. ಮಂಜನಿ ಮಗುವನ್ನು ನಿಧಾನವಾಗಿ ಅವನ ಹೆಗಲಿಗೆ ವರ್ಗಾಯಿಸಿದಳು, ಮೂವರೂ ರಸ್ತೆ ದಾಟಿದರು.

ನಾವು ಪ್ರೀತಿಸೋದು ನಮ್ಮದೇ ಖುಷಿಗಾಗಿ. ಹೀಗಿರುವಾಗ….

ನಾವು ಯಾರದೋ ಉಪಕಾರಕ್ಕಾಗಿ ಬದುಕೋದಿಲ್ಲ. ಯಾರು ಕೂಡಾ. ನಾವು ಹುಟ್ಟಿದ್ದು ನಾವು ಬದುಕಲಿಕ್ಕೆ ಮತ್ತು ನಮ್ಮ ಸಾವನ್ನು ನಾವೇ ಸಾಯಲಿಕ್ಕೆ. ಪ್ರೀತಿಸುವುದು ಕೂಡ ಆ ಪ್ರೀತಿ ನಮ್ಮಲ್ಲಿ ಉಂಟು ಮಾಡುವ ಹಿತಾನುಭವವನ್ನ ಪಡೆಯಲಿಕ್ಕಷ್ಟೆ. 

ಬಹಳ ಹಿಂದೆ ಒಂದು ಕಥೆ ಓದಿದ್ದ ನೆನಪು.
ಒಂದು ಆಚಾರವಂತ ಕುಟುಂಬದಲ್ಲಿ, ಆ ಮನೆಯ ಗೃಹಿಣಿಯ ದೇಹಾಂತವಾಗುತ್ತೆ. ಗಂಭೀರೆ, ಜಾಣೆಯಾದ ಸುಸಂಸ್ಕೃತ ಮಗಳು ತೀವ್ರ ನೋವಿಗೆ ಒಳಗಾಗ್ತಾಳೆ. ಅವಳಪ್ಪ ದಿನಾ ಅವಳನ್ನ ಕೂರಿಸಿಕೊಂಡು ಭಗವದ್ಗೀತೆ ಓದಿ ಅದರ ಅರ್ಥವಿವರಣೆ ಮಾಡ್ತಾರೆ. ಅಮ್ಮನ್ನ ಕಳಕೊಂಡ ಮಗಳಿಗೆ ದೇಹಾತ್ಮಗಳ ಸಂಗತಿಯನ್ನೆಲ್ಲ ಬಿಡಿಸಿಬಿಡಿಸಿ ಹೇಳ್ತಾನೆ ಅಪ್ಪ. ಅದೇ ಸಮಯಕ್ಕೆ ಅವಳಿಗೆ ಪರಿಚಯವಾಗುವ ಯುವಕ, ಆಕೆಯ ನೋವಿಗೆ ಸ್ಪಂದಿಸ್ತಾನೆ. ಜೊತೆಯಾಗ್ತಾನೆ, ಅವಳ ನಗುವಾಗ್ತಾನೆ. ಅಮ್ಮ ಸತ್ತ ವರ್ಷದೊಳಗೆ ಅವರಿಬ್ಬರು ಮದುವೆಯಾಗ್ತಾರೆ ಅಂತೇನೋ ಮುಗಿದಿತ್ತಿರಬೇಕು. ಈ ಪ್ರಕ್ರಿಯೆಯಲ್ಲಿ ಶಾಸ್ತ್ರಿಗಳು ಮಗಳ ನಡತೆ ಬಗ್ಗೆ ಅಚ್ಚರಿಯನ್ನೂ ಗಾಬರಿಯನ್ನೂ ಪಟ್ಟಿದ್ದರು ಅನ್ನೋದು ಕಥೆಯೊಳಗಿದೆ. ಹಾಗೇ ಆ ಹುಡುಗ ಬೇರೆ ಜಾತಿಯವನಿರಬೇಕು.
ಕೆಲ ಸಲ ಹೀಗಾಗತ್ತೆ. ಅದು ಕಥೆಯೋ ಸಿನೆಮಾವೋ… ನಮ್ಮನ್ನ ಯಾವ ಅಂಶ ಸೆಳೆಯುತ್ತೋ ಅದು ಕಣ್ಣಿಗೆ ಕಟ್ಟಿದ ಹಾಗೆ ಉಳಿದುಕೊಳ್ಳುತ್ತೆ. ಮಿಕ್ಕಂತೆ ಯಾವ ವಿವರವೂ ನೆನಪಿರೋದಿಲ್ಲ. ಈ ಕಥೆಯ ಮಟ್ಟಿಗೆ ನನ್ನ ನೆನಪಲ್ಲಿ ಉಳಿದುಹೋಗಿದ್ದು, ಕಳಕೊಂಡ ನೋವಲ್ಲಿ ನರಳುವಾಗ ಭಗವದ್ಗೀತೆ ಓದುವ ಅಪ್ಪ ಮತ್ತು ಆ ಕ್ಷಣದ ನಗುವಾಗಿ ಒದಗಿದ ಯುವಕ.
~
ಯಾರಾದರೂ ಸತ್ತಾಗ ನಾವ್ಯಾಕೆ ಅಳ್ತೀವಿ? ಅವರ ಅನುಪಸ್ಥಿತಿ ನಮಗೆ ನೋವು ತರುವುದರಿಂದ. ನಾವು ಮಿಸ್‌ ಮಾಡ್ಕೊಳ್ಳುವುದರಿಂದಲೇ ಹೊರತು ಸತ್ತವರಿಗಾಗಿ ಅಲ್ಲ. ಇಲ್ಲವಾದವರು ಇದ್ದಿದ್ದರೆ ಏನೇನೋ ಮಾಡ್ತಿದ್ದರು, ಇಲ್ಲವಾಗಿಬಿಟ್ಟಿದ್ದಾರೆ – ಸರಿ. ಇಲ್ಲವಾಗಿರುವ ವಸ್ತುವಿಗೆ ನೋವೂ ಇರೋದಿಲ್ಲ. ನಾವು ಅಳೋದು, ಆ ಖಾಲಿ ನಮ್ಮನ್ನು ಕಾಡುವುದರಿಂದಲಷ್ಟೆ. ನಮ್ಮ ಮನೋಬುದ್ಧಿಗಳಲ್ಲಿ ಒಂದು ಕುಳಿ ಬೀಳುತ್ತೆ. ಅದನ್ನ ಹೊಸ ನೀರು, ಹೊಸ ಮಣ್ಣು ಭರಿಸುವತನಕ ದುಃಖ ನಮ್ಮನ್ನ ಕಾಡುತ್ತೆ. ಸತ್ತವರು ವೈತರಣಿ ದಾಟುತ್ತಾರೋ ಇಲ್ಲವೋ… ಅವರ ಆತ್ಮ ಮುಕ್ತಿ ಪಡೆಯುತ್ತೋ ಇಲ್ಲವೋ… ವಿಷಯ ಅದಲ್ಲ. “ಅಂಗಿ ಬಿಚ್ಚಿ ಬಿಸಾಕಿದ ಹಾಗೆ ಆತ್ಮವು ದೇಹವನ್ನ ಬಿಸುಟು ಹೊರಡುತ್ತದೆ” – ಭಗವದ್ಗೀತೆಯ ಪಾಠ. ಈ ತಿಳಿವು ನಮ್ಮ ನೋವನ್ನು ಉಪಶಮನ ಮಾಡೋದಿಲ್ಲ. ಯಾಕಂದರೆ ನಾವು ಬಿಸಾಡಲ್ಪಟ್ಟ ಅಂಗಿಗಾಗಿ ಅಳುತ್ತಿಲ್ಲ. ನಾವು ಅಳ್ತಿರೋದು ಆ ಅಂಗಿ ತೊಟ್ಟು ನಮ್ಮೆದುರು ನಡೆದಾಡ್ತಿದ್ದ ಆತ್ಮ ಇನ್ನು ನಮಗೆ ಕಾಣಿಸೋದಿಲ್ಲವಲ್ಲ ಅಂತ. ಇಲ್ಲಿ ಸಾಹಚರ್ಯ ಕಳಕೊಂಡ ನಮ್ಮ ಬಗೆಗಷ್ಟೆ ನಮ್ಮ ಅನುಕಂಪ.
~
ಆ ಹುಡುಗಿಗೆ ಅವಳಮ್ಮ ಗೆಳತಿಯಂತಿದ್ದಳು. ಅವಳ ವಿಸ್ತರಣೆಯಂತಿದ್ದಳು. ಅವಳ ಜೀವನದಲ್ಲಿ ಕಂಡ ಏಕೈಕ ಆಪ್ತಳಾಗಿದ್ದಳು. ಅವಳು ಇಲ್ಲವಾದಾಗ ಉಂಟಾದ ದೊಡ್ಡ ಕೊರತೆಯನ್ನು ತಿಳಿವು ತುಂಬಲಿಲ್ಲ. ಸತ್ತವರು ಮತ್ತೆ ಬರೋದಿಲ್ಲ ಅನ್ನೋದನ್ನ ಅರ್ಥ ಮಾಡಿಕೊಳ್ಳದವರು ಬಹಳ ಕಡಿಮೆ ಜನ. ಮಿತಿಮೀರಿದ ವ್ಯಾಮೋಹದಿಂದ ಮಾನಸಿಕ ಸ್ವಾಸ್ಥ್ಯ ಕಳಕೊಂಡವರಷ್ಟೆ ಸತ್ತವರು ಮತ್ತೆ ಬರುತ್ತಾರೆ ಅಂದುಕೊಳ್ಳೋದು. ಅಂಥವರಷ್ಟೆ, ಹಾಗೆ ಬರಲಿ ಅನ್ನುವ ನಿರೀಕ್ಷೆ ಇಟ್ಟುಕೊಳ್ಳೋದು…. ಇಲ್ಲವಾದರೆ ಬುದ್ಧ ಗೋತಮಿಗೆ ಸಾಸಿವೆ ತರಲು ಹೇಳ್ತಿರಲಿಲ್ಲ. ಮಗನನ್ನ ಬದುಕಿಸಿಕೊಡು ಅಂತ ಬಂದವಳಿಗೆ ಬುದ್ಧ ಧಮ್ಮೋಪದೇಶ ಮಾಡುತ್ತ ಕೂರಬಹುದಿತ್ತು. ಆದರೆ ಆತ ಆಕೆಗೂ ಗೊತ್ತಿರುವ ಸಂಗತಿಯನ್ನೇ ಸ್ವತಃ ಕಂಡುಕೊಳ್ಳಲು ಬಿಟ್ಟ. ಅವಳ ಮನೋಸ್ವಾಸ್ಥ್ಯವನ್ನ ಸರಿಪಡಿಸುವುದು ಮುಖ್ಯವಾಗಿತ್ತು ಬುದ್ಧನಿಗೆ.
ಪಟಾಚಾರಾ ತನ್ನ ಗಂಡನನ್ನೂ ಇಬ್ಬರು ಮಕ್ಕಳನ್ನೂ ಒಟ್ಟಿಗೆ ಕಳೆದುಕೊಂಡಳು. ಅವರು ಅವಳ ಜೀವನದ ಸಂತಸವಾಗಿದ್ದವರು. ಅಪಘಾತಗಳಲ್ಲಿ ಆ ಮೂವರನ್ನೂ ಕಳಕೊಂಡ ಪಟಾಚಾರಾ ಕೂಡ ಬುದ್ಧನ ಬಳಿ ಬಂದಳು. ಅವಳು ಅವರನ್ನು ಬದುಕಿಸಿಕೊಡೆಂದು ಕೇಳಲಿಲ್ಲ. ಅವರೆಲ್ಲರ ಅಗಲಿಕೆಯಿಂದ ಆಗಿರುವ ನೋವನ್ನು ಭರಿಸಿಕೊಡೆಂದು ಬಂದಳು. ಬುದ್ಧ ಅವಳಿಗೆ ನಿಸ್ಸಂಗತ್ವವನ್ನು ಬೋಧಿಸಿದ. ಆಕೆ ತನ್ನೊಂದಿಗೆ ತಾನಿರುವುದನ್ನು ಕಲಿತುಕೊಂಡಳು, ಬಿಕ್ಖುಣಿಯಾದಳು.
~
ನಾವು ಯಾರದೋ ಉಪಕಾರಕ್ಕಾಗಿ ಬದುಕೋದಿಲ್ಲ. ಯಾರು ಕೂಡಾ. ನಾವು ಹುಟ್ಟಿದ್ದು ನಾವು ಬದುಕಲಿಕ್ಕೆ ಮತ್ತು ನಮ್ಮ ಸಾವನ್ನು ನಾವೇ ಸಾಯಲಿಕ್ಕೆ. ನಾವು ಪ್ರೀತಿಸುವುದು ಕೂಡ ಆ ಪ್ರೀತಿ ನಮ್ಮಲ್ಲಿ ಉಂಟು ಮಾಡುವ ಹಿತಾನುಭವವನ್ನ ಪಡೆಯಲಿಕ್ಕೆ. ಅಮ್ಮ ಮಗುವನ್ನ ಪ್ರೀತಿಸೋದು ಕೂಡ ತಾಯ್ತನದ ಅನುಭೂತಿಗಾಗಿಯೇ ಹೊರತು ಅದು ಕೂಡ ನಿಸ್ವಾರ್ಥವಲ್ಲ. ತನ್ನ ನಿರಂತರತೆಯಾಗಿರುವ ಕಾರಣದಿಂದಲೇ ತಾಯಿ ತನ್ನ ಮಗುವನ್ನ ಪ್ರೀತಿಸ್ತಾಳೆ. ವಾತ್ಸಲ್ಯದ ಆನಂದ ಅವಳಿಗೆ ಲಭಿಸುತ್ತದೆ. ಆ ಅನುಭೂತಿಗಾಗಿ ಅವಳು ತ್ಯಾಗದ ಔನ್ನತ್ಯವನ್ನೂ ಸುಲಭದಲ್ಲಿ ಸಾಧಿಸಬಲ್ಲವಳಾಗುತ್ತಾಳೆ. ಮಗು ತಾಯಿಗೆ ನೀಡುವ ಸಂತೋಷ ಅಷ್ಟು ಉನ್ನತವಾದದ್ದು.
ನಮ್ಮ ಮೋಹ – ನಿರ್ಮೋಹಗಳು ನಮ್ಮ ಸಂತೋಷದ ಸಲುವಾಗಿಯೇ ನಮ್ಮಲ್ಲಿ ಬೆಳೆದುಕೊಂಡಿರುತ್ತವೆ. ಸಂತರ ಸಾಲಿನ ಬಹುತೇಕರು ಸಂಸಾರ ಬಿಟ್ಟು ಹೊರಡುವಾಗ ದುಃಖಿಸಲಿಲ್ಲ. ಯಾಕಂದರೆ ಅವರು ತಮ್ಮನ್ನು (ತಮ್ಮ ಸ್ವಯಂ ಅನ್ನು, ಆತ್ಮವನ್ನು) ಕುಟುಂಬದ ಜನರಿಗಿಂತ ಹೆಚ್ಚು ಪ್ರೀತಿಸುತ್ತಿದ್ದರು. ಅವರು ದೃಗ್ಗೋಚರ ದೇಹಕ್ಕಿಂತ ಅದರೊಳಗಿನ ಸೂಕ್ಷ್ಮವನ್ನು ಹೆಚ್ಚು ಪ್ರೀತಿಸುತ್ತಿದ್ದರು. ಬಿಟ್ಟು ಬಂದ ಮಗು, ಹೆಂಡತಿ ಮೊದಲಾದವರ ಮೇಲೆ ಪ್ರೀತಿ ಕಡಿಮೆಯಾಯ್ತೆಂದಲ್ಲ, ಅಂಥಾ ಸಂತರು ಆ ಎಲ್ಲ ದೇಹಗಳೊಳಗಿನ ಸತ್ವವನ್ನು ಪ್ರೀತಿಸ್ತಿದ್ದರು. ಅದರಲ್ಲಿ ಅವರಿಗೆ ಹೆಚ್ಚಿನ ಆನಂದ ದೊರೆಯುತ್ತಿತ್ತು.
ತ್ಯಾಗ, ನಿರ್ಲಿಪ್ತಿ, ವೈರಾಗ್ಯಗಳು ಕೂಡ ಸ್ವಯಂನ ಆನಂದಕ್ಕಾಗಿಯೇ ಇವೆ. ಜ್ಞಾನೋದಯವನ್ನ ಪಡೆಯೋದು ಅಂದರೆ ದಿವ್ಯಾನಂದದಲ್ಲಿ ತೇಲೋದು ಅನ್ನುತ್ತಾರೆ ಬಲ್ಲವರು. ಜ್ಞಾನೋದಯ ಕೂಡ, ಬ್ರಹ್ಮದ ಅರಿವು ಪಡೆಯುವ ಪ್ರಕ್ರಿಯೆ ಕೂಡ ನಮ್ಮನ್ನ ತಲುಪಿಸೋದು ನಾವು ಕುಂದಿಲ್ಲದ ಆನಂದದ ರುಚಿ ಸವಿಯಲಿಕ್ಕೇ ಅಂತಾದ ಮೇಲೆ, ನಮ್ಮ ಪ್ರೀತಿ ಪ್ರೇಮಗಳನ್ನ ನಿಸ್ವಾರ್ಥವೆಂದು ಸಾಧಿಸಿಕೊಳ್ಳುವ ಹಠ ಯಾಕೆ?
~
ಎಲ್ಲವೂ ಅಷ್ಟೇ. ನಮಗೆ ಬೇಕಾದಾಗ ಮಾತ್ರ ನಾವದನ್ನ ಮಾಡ್ತೀವಿ. ಮೇಲನೋಟಕ್ಕೆ, ಯಾರದೋ ಉಪಕಾರಕ್ಕೆ ನಾವು ನಮಗಿಷ್ಟವಿಲ್ಲದ ಕೆಲಸ ಮಾಡಿದಂತೆ ಕಂಡರೂ, ಹಾಗೆ ನಮಗಿಷ್ಟವಿಲ್ಲದ್ದನ್ನು ಮಾಡುವ ಮೂಲಕ ಅವರ ಮೆಚ್ಚುಗೆಗೋ/ ಕೃಪೆಗೋ/ ಪ್ರೀತಿಗೋ ಪಾತ್ರರಾಗುವ ಲಾಭದಿಂದಲೇ ನಾವದನ್ನ ಮಾಡಿರ‍್ತೀವಿ. ತಾನು ಬಯಸದ ಯಾವ ಕೆಲಸವನ್ನೂ ಒಂದು ಕೀಟ ಕೂಡ ಮಾಡುವುದಿಲ್ಲ. ಹೀಗಿರುವಾಗ ಮನುಷ್ಯ ತಾನೆ ಹೊರತು ಹೇಗಾದಾನು?
ಪರಸ್ಪರ ಪ್ರೀತಿ, ಅವರವರ ಖುಷಿಗಾಗಿಯೇ. ಹೀಗಿರುವಾಗ ಪ್ರೇಮಿ ಹೀಗೇ ಇರಬೇಕು, ಹಾಗೇ ಇರಬೇಕೆಂಬ ತಾಕೀತುಗಳು ಸುಖದ ಹಾಲಿಗೆ ಹಿಂಡುವ ಹುಳಿಯಂತಾಗುತ್ತದೆ ಅಷ್ಟೆ. “ನಿನ್ನನ್ನ ಪ್ರೀತಿಸೋದು ನನ್ನ ಖುಷಿಗಾಗಿ. ನನ್ನ ಖುಷಿ ಉಳಿಸಲು ನೀನು ನನ್ನ ಬಯಕೆಯಂತಿರಬೇಕು” ಅಂತ ಬಯಸತೊಡಗಿದರೆ, ಆ ಕ್ಷಣದಿಂದಲೇ ನಮ್ಮ ಪ್ರೀತಿಸುವ ಆನಂದ ಕಳೆಯುತ್ತಾ ಹೋಗುತ್ತದೆ. ಇದು ಎಲ್ಲ ಸಂಬಂಧಗಳಿಗೂ ಅನ್ವಯ.
ಸ್ವಾರ್ಥ, ಜೀವನದ ಪರಮ ಸತ್ಯ. ಆದರೆ ಅದು ಮತ್ತೊಬ್ಬರ ಸ್ವಾರ್ಥಕ್ಕೆ ಧಕ್ಕೆಯಂತೆ ಇರಬಾರದು. ಎಲ್ಲ ಸಾತ್ವಿಕ ಸ್ವಾರ್ಥಗಳೂ ಜಗತ್ತಿನ ಖುಷಿಯಲ್ಲಿ ಸ್ವಂತದ ಖುಷಿಯನ್ನ ಕಾಣ್ತವೆ ಮತ್ತು ಆ ಖುಷಿಯ ಅನುಭವಕ್ಕಾಗಿ ತ್ಯಾಗಕ್ಕೆ ಮುಂದಾಗುತ್ತವೆ. ಎಲ್ಲ ತಾಮಸಿಕ ಸ್ವಾರ್ಥಗಳು ತನ್ನ ಖುಷಿಯೇ ಜಗತ್ತಿನ ಖುಷಿಯಾಗಬೇಕೆಂದು ಬಯಸುತ್ತಾ, ಅದಕ್ಕೆ ಜಗತ್ತಿನ ಬಲಿ ಕೇಳ್ತವೆ. ಪ್ರೇಮದಲ್ಲೂ ಹೀಗೇನೇ….
~
ಅಂದಹಾಗೆ;
ನಾವು
ಕಳೆದುಹೋದವರನ್ನ
ಹೆಚ್ಚು ಪ್ರೀತಿಸೋದು
ಅವರು
ಮತ್ತೆ ಸಿಗೋದಿಲ್ಲೆಂಬ
ನೋವಿನಿಂದಲಾ?
ಖಾತ್ರಿಯಿಂದಲಾ!?

– ನಮ್ಮ ನಮ್ಮ ನಿಜ, ನಮನಮಗೆ ಗೊತ್ತು!

ಮಂಪರು ಮಧ್ಯಾಹ್ನದಲ್ಲಿ ರಾಜಕಾರಣದ ಚಿಂತೆ!

ರಾಜಕಾರಣ ಯಾವತ್ತೂ ನನ್ನಲ್ಲೊಂದು ಭಯ, ಕುತೂಹಲ ಮತ್ತು ಅಸಹ್ಯಗಳನ್ನು ಮೂಡಿಸಿರುವ ಕ್ಷೇತ್ರ. ಅದರ ದೂರವಿರುತ್ತಲೇ ಹತ್ತಿರುವಿರುವಂಥ ಸೆಳೆತ. ವಾರಾಂತ್ಯ ಮಧ್ಯಾಹ್ನದ ಮಂಪರಿನಲ್ಲಿ ಹೀಗೊಂದು ಸ್ವಗತ ಹರಟಿದಾಗ…..

ತಾಪಮಾನದಲ್ಲಿ ಹೆಚ್ಚಳವಾಗಿರೋದು ಬೇಸಗೆಯ ಕಾವಿಂದಲೋ ಚುನಾವಣೆಯ ಕಾವಿಂದಲೋ ಅನ್ನುವಷ್ಟು ಗೊಂದಲ.
ಅದ್ಯಾಕೋ ಈ ಸಲದ ಚುನಾವಣೆಯಲ್ಲಿ ಗೆಲ್ಲುವ ಕುದುರೆಗಳೇ ಹೆಚ್ಚು ಬೆವರುತ್ತಿರುವಂತೆ ಅನ್ನಿಸುತ್ತಿದೆ. ಹ್ಯಾಟ್ರಿಕ್‌ ಹೀರೋಗಳು ಮೇಲಿಂದ ಮೇಲೆ ‘ಈ ಸಲವೂ ನಾನೇ’ ಅನ್ನುತ್ತಿದ್ದರೂ ‘ಆಪ್‌’ ಕ್ರಾಂತಿ ಎಲ್ಲಿ ಸೆಡ್ಡು ಹೊಡೆಯುವುದೋ ಅನ್ನುವ ಅಳುಕು ಇದ್ದಂತಿದೆ.
ಚಾಯ್ ಪೆ ಚರ್ಚಾ ಪರ್‌ ಚರ್ಚಾ ನಡೆಸಿ ಮೋದಿ ಸುಸ್ತಾಗಿದ್ದಾರೆ. ಅವರ ಹೆಸರಿಗಂಟಿದ ಕಲೆ ತೊಳೆಯಲು ಇನ್ನೂ ಯಾವ ತೀರ್ಥವೂ ಉದ್ಭವವಾಗಿಲ್ಲ. ಬಹುಶಃ ಆ ಭಯದಿಂದಲೇ ಎರಡೆರಡು ಕಡೆಯಿಂದ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ.
ರಾಹುಲ್‌ ಗಾಂಧಿ ಭಾಷಣಗಳನ್ನು ಉರುಹೊಡೆದೇ ಮುಗಿದಿಲ್ಲವೆಂಬಂತೆ ಅನ್ನಿಸುತ್ತೆ.
ತೃತೀಯ ರಂಗ ಪ್ರತಿ ಚುನಾವಣೆ ಸಮಯದಲ್ಲಿ ಎದ್ದು ಮೈಕೊಡವಿ, ಹಾವು – ಏಣಿ ಆಡಿ ಮತ್ತೆ ದೀರ್ಘ ನಿದ್ದೆಗೆ ಜಾರುತ್ತೆ. ಈ ಸಲವೂ ಅದು ಪೋಷಕ ಪಾತ್ರಕ್ಕೆ ಸಿದ್ಧತೆ ನಡೆಸುತ್ತಿದೆ.
ಜೊತೆಗೆ ‘ಕ್ರೇಜೀವಾಲ್’ ಅಂತ ಕರೆಸಿಕೊಳ್ತಿರುವ ಕೇಜ್ರೀವಾಲ್, ತಮ್ಮ ಕ್ರೇಜೀತನದಿಂದಲೇ ಸ್ಥಾಪಿತ ಪಕ್ಷಗಳಲ್ಲಿ ಆತಂಕ ಹುಟ್ಟಿಸಿದ್ದಾರೆ. ಎಲ್ಲಿ ಏನು ಬೇಕಾದರೂ ಫಲಿತಾಂಶ ಬರಬಹುದು ಅನ್ನುವ ಆತಂಕ ಅದು.
*
ಈ ಎಲ್ಲದರ ನಡುವೆ ಬೆವರಿನ ಜೊತೆ ಮೇಕಪ್ಪನ್ನೂ ಒರೆಸಿಕೊಂಡು ಬವಣೆ ಪಡುತ್ತಿರುವ ಗುಂಪೊಂದು ಕಾಣಿಸಿಕೊಳ್ತಿದೆ. ಕ್ರಿಕೆಟ್‌ನಲ್ಲಿ ಚೀರ್‌ ಗರ್ಲ್ಸ್ ಇದ್ದಂತೆ ಪೊಲಿಟಿಕ್ಸ್‌ನಲ್ಲಿ ನಟ ನಟಿಯರ ಉಪಸ್ಥಿತಿ. ಕೆಲವರು ಹಣ ಪಡೆದೇ ಪ್ರಚಾರಕ್ಕೆ ಬಂದರೆ, ಕೆಲವರು ಅಧಿಕಾರಕ್ಕಾಗಿ ಪಕ್ಷಗಳ ಜೊತೆ ಗುರುತಿಸಿಕೊಂಡಿದ್ದಾರೆ. ಇವರು ಪ್ರಚಾರಕ್ಕೆ ಹೋದಲ್ಲೆಲ್ಲ ಜನ ಮುಗಿ ಬೀಳುತ್ತಾರೆ. ವೋಟು ಹಾಕುತ್ತಾರೋ ಇಲ್ಲವೋ, ಅವರನ್ನು ನೋಡುವ, ಜೊತೆಗಿರುವ ಸಂಭ್ರಮವನ್ನು ಮಾತ್ರ ಕಳೆದುಕೊಳ್ಳೋದಿಲ್ಲ. ಇದು ಸಿನೆಮಾ ಮಾತ್ರವಲ್ಲ, ಕಿರುತೆರೆಯ ನಟ ನಟಿಯರಿಗೂ ಅನ್ವಯ. ಜನರ ಈ ಕ್ರೇಜನ್ನೇ ಬಂಡವಾಳ ಮಾಡಿಕೊಂಡು ರಾಜಕೀಯ ಪಕ್ಷಗಳು ತಮ್ಮ ತಮ್ಮ ಜಾಹೀರಾತಿಗಾಗಿ ಹಣ ತೆತ್ತು ಅವರನ್ನು ಬರಮಾಡಿಕೊಳ್ಳುತ್ತಿವೆ. ಈ ನಡುವೆ ನಿಜವಾದ ಕಳಕಳಿಯುಳ್ಳ ನಟ ನಟಿಯರು ಇಲ್ಲವೆಂದಲ್ಲ. ರಾಜಕಾರಣ ಮಾಡಲೆಂದೇ ಅಥವಾ ಜನಪರ ದನಿಯಾಗಿ ನಿಲ್ಲಲೆಂದೇ ಈ ಕ್ಷೇತ್ರಕ್ಕೆ ಕಾಲಿಟ್ಟವರೂ ಇದ್ದಾರೆ. ವಿಷಯ ಅದಲ್ಲ…. ವಿಶೇಷವಾಗಿ ಪರದೆ ಮೇಲೆ ಕಾಣಿಸಿಕೊಳ್ಳುವವರನ್ನು ನಾವು ಆದರಿಸುವ ಬಗೆ ವಿಸ್ಮಯ ಹುಟ್ಟಿಸುತ್ತದೆ.
*
ಬಹುಶಃ ಭಾರತೀಯರು ನಟರ ಬಗ್ಗೆ ಬೆಳೆಸಿಕೊಂಡಿರುವಷ್ಟು ವ್ಯಾಮೋಹವನ್ನು ಜಗತ್ತಿನ ಮತ್ತೆಲ್ಲೂ ನೋಡಲಾರೆವು. ಇಲ್ಲಿ ನಟರೆಂದರೆ ದೇವದೂತರು. ಮನೆ ಮಕ್ಕಳು. ದಕ್ಷಿಣ ಭಾರತದಲ್ಲಿ ಹಲವಾರು ನಟರು ರಾಜಕಾರಣ ಸೇರಿ ಯಶ ಪಡೆದಿದ್ದು, ಮುಖ್ಯಮಂತ್ರಿ ಗಾದಿಗೇರಿ ಆಡಳಿತ ನಡೆಸಿದ್ದೆಲ್ಲ ಈಗ ಹಳೆ ಸುದ್ದಿ. ಉತ್ತರದಲ್ಲಿಯೂ ಕೆಲವು ನಟರು ಸಕ್ರಿಯ ರಾಜಕಾರಣದಲ್ಲಿದ್ದಾರೆ. ಅವರು ಕಾಲಿಟ್ಟಲ್ಲೆಲ್ಲ ಜನ ಸಾಗರವೇ ಅವರೊಂದಿಗೆ ಹರಿಯುತ್ತ ಇರುತ್ತದೆ. ಉತ್ತರಕ್ಕಿಂತ ದಕ್ಷಿಣದಲ್ಲಿ ಇದು ಹೆಚ್ಚು.
ಭಾರತೀಯರ ಈ ವ್ಯಾಮೋಹಕ್ಕೆ ಕಾರಣವಿಲ್ಲದಿಲ್ಲ. ಹೇಳಿಕೇಳಿ ಇದು ಸಂಪ್ರದಾಯವಾದಿ ರಾಷ್ಟ್ರ. ಪ್ರೀತಿ, ಪ್ರೇಮ, ಪ್ರಣಯಗಳಿಗೆ ಇರುವ ಕಟ್ಟುಪಾಡುಗಳು, ವಿಪರೀತ ಎನ್ನಿಸುವ ನೈತಿಕ ಚೌಕಟ್ಟುಗಳು, ಆ ಎಲ್ಲವನ್ನೂ ಸಾಧ್ಯ ಮಾಡಿಕೊಳ್ಳುವ ಮಿಥ್ಯಾ ಜಗತ್ತು ಮತ್ತದರ ಪಾತ್ರಧಾರಿಗಳ ಮೂಲಕ ತಮ್ಮನ್ನು ತಾವು ನೋಡಿಕೊಳ್ಳುವಂತೆ ಮಾಡುತ್ತವೆ. ಕೇವಲ ನಟನೆ ಅಥವಾ ಸೌಂದರ್ಯಗಳೇ ಇಲ್ಲಿ ಮೆಚ್ಚುಗೆಗೆ ಮಾನದಂಡವಿರಲಾರವು. ಈ ಪರಿಯ ವ್ಯಾಮೋಹ, ಸ್ವಂತದ ಒಂದು ಎಳೆ ಬೆಸುಗೆ ಇಲ್ಲದೆ ಮೂಡುವಂಥದಲ್ಲ. ಈ ಭಾವುಕ ಕಾರಣವನ್ನು ರಾಜಕೀಯ ಪಕ್ಷಗಳು ಚೆನ್ನಾಗಿಯೇ ಬಳಸಿಕೊಳ್ತಿವೆ.
ಅದೇನೇ ಇರಲಿ, ಚುನಾವಣೆಯಿಂದಲಾದರೂ ನಮ್ಮ ಜನರು ಆಗಸದ ತಾರೆಗಳನ್ನು ಕೈಯೆಟುಕಿನ ದೂರದಲ್ಲಿ ಕಾಣುವ ಭಾಗ್ಯ ಪಡೆದಂತಾಗಿದೆ. ಹಾಗೆ ಕೈಗೆ ಎಟುಕಿಸಿಕೊಳ್ಳಲು ಹೋಗಿ ಪೆಟ್ಟು ತಿಂದವರೂ ಇದ್ದಾರೆ. ಒಟ್ಟಾರೆ ಫಲಿತಾಂಶ ಏನಾಗುತ್ತೋ….. ಈ ಸಾರ್ತಿ ಜನ ಸಾಮಾನ್ಯರು ಹೆಚ್ಚು ಕುತೂಹಲದಿಂದ ಇರುವಂತೆ ಅನ್ನಿಸ್ತಿದೆ. ಕ್ರಿಕೆಟ್‌ ವಿಶ್ವಕಪ್‌ನಲ್ಲಿ ಭಾರತ – ಪಾಕಿಸ್ತಾನ ಫೈನಲ್‌ ಮ್ಯಾಚ್‌ ನಡೆಯುವಾಗ ಇರುವಂಥದ್ದೇ ಸಮೂಹ ಸನ್ನಿಯಂಥ ಕುತೂಹಲ, ನಿರೀಕ್ಷೆ, ಉದ್ವೇಗಗಳು ಮೊದಲ ಬಾರಿಗೆ ಕ್ರಿಕೆಟೇತರ ಸಂಗತಿಯಲ್ಲಿ ಕಾಣಿಸ್ಕೊಳ್ತಿದೆಯೆಂದರೆ, ಬಹುಶಃ ಅದು ಈ ಚುನಾವಣೆಯಲ್ಲಿಯೇ!
*
“ಯಾರು ಬಂದರೆ ನಮಗೇನು? ನಮ್ಮ ಹಣೆಬರಹ ಇಷ್ಟೇ ತಾನೆ?” ಅನ್ನುವ ಉಡಾಫೆ ಈ ಸಲದ ಚುನಾವಣೆಗೆ ಅನ್ವಯವಲ್ಲ. ಸರಿಯಾದ ಆಯ್ಕೆ ನಡೆಯದೇ ಹೋದರೆ, ನಮ್ಮ ದೇಶ ‘ಭಾರತ ಮತ್ತು ಇಂಡಿಯಾ’ ಎಂಬೆರಡು ಭಾಗಗಳಲ್ಲಿ ಮತ್ತೊಮ್ಮೆ ವಿಭಜನೆಯಾಗುವ ಆತಂಕ ಎದ್ದು ಕಾಣುತ್ತಿದೆ…..

 

ಒಂದು ಸಿನೆಮಾ ಕಥೆ ~ ಜುಕ್ತಿ ಟಕೋ ಆರ್‌ ಗಪ್ಪೋ…

ಋತ್ವಿಕ್ ಘಟಕ್ ಭಾರತೀಯ ಚಿತ್ರರಂಗ ಕಂಡ ಒಬ್ಬ ಅತ್ಯುತ್ತಮ ನಿರ್ದೇಶಕ.  ಭಾರತೀಯ ಸಿನಿಮಾ ಮಾದರಿಯನ್ನು ಬೆಳೆಸಿದವ. ಅಂದರೆ ನಮ್ಮದೇ ನೀರು…ನಮ್ಮದೇ ನೆಲ…ನಮ್ಮದೇ ಬೀಜ…ಹಾಗೂ ನಮ್ಮ ಅಂಗಳದಲ್ಲೇ ಅರಳಿದ ಮಲ್ಲಿಗೆ. ಅವರ ಜೀವನ ಚರಿತ್ರೆಯೂ ಎನ್ನಬಹುದಾದ  “ಜುಕ್ತಿ ಟಕೋ ಆರ್ ಗಪ್ಪೋ’ ಸಿನೆಮಾದ ಕಥೆ ಇಲ್ಲಿದೆ…. ~ ಋತಾ

ಜುಕ್ತಿ, ಟಕೋ ಆರ್ ಗಪ್ಪೋ. ಅಂದರೆ- ಕಾರಣ, ವಾದ, ಮತ್ತು ಕಥೆ. ಈ ಶೀರ್ಷಿಕೆ, ಈ ಸಿನೆಮಾವನ್ನು ನೋಡಬಹುದಾದ ಆಯಾಮಗಳನ್ನು ಸೂಚ್ಯವಾಗಿ ತಿಳಿಸುತ್ತದೆ.
‘…. ಆರ್ ಗಪ್ಪೋ’ ಬಂಗಾಳದ ಇಂಟಲೆಕ್ಚುಯಲ್ ನಿರ್ದೇಶಕ ಋತ್ವಿಕ್ ಘಟಕ್ ಅವರ ಕೊನೆಯ ಪ್ರಸ್ತುತಿ. ಆಂಶಿಕವಾಗಿ ಅವರ ಬಯಾಗ್ರಫಿ ಕೂಡಾ.
~
ಬಂಗಾಳ ವಿಭಜನೆಯ ನೋವನ್ನು ಎದೆಯಲ್ಲಿ ಹೊತ್ತ, ಕುಡಿತದ ಚಟಕ್ಕೆ ದಾಸನಾಗಿ ತನ್ನನ್ನು ತಾನೇ ನಾಶ ಮಾಡಿಕೊಳ್ಳುವ ನೀಲಕಂಠ ಒಂದು ಕಾಲದ ಚಿಂತಕ ಹಾಗೂ ಬುದ್ಧಿಜೀವಿ. ಅವನ ಅಲೆಮಾರಿತನ ಮತ್ತು ಚಟಗಳಿಂದ ಬೇಸತ್ತ ಪತ್ನಿ ದುರ್ಗಾ ಮನೆ ಖಾಲಿ ಮಾಡಿ, ತನ್ನ ಮಗನನ್ನು ಕರೆದುಕೊಂಡು ಊರು ಬಿಟ್ಟು ಹೊರಡುವ ದೃಶ್ಯದೊಂದಿಗೆ ಸಿನೆಮಾ ಶುರುವಾಗುತ್ತದೆ.
ನೀಲಕಂಠನ ಪಾಲಿಗೆ ಕುಡಿತ ಚಟವಲ್ಲ. ಅದು ಅವನ ಜೀವನವೇ ಎನ್ನುವಷ್ಟು ಅನಿವಾರ್ಯ. ಅವನ ದೇಖರೇಖಿಗೆ ಆತನ ಶಿಷ್ಯ, ನಿರುದ್ಯೋಗಿ ನಚಿಕೇತ ಜೊತೆನಿಲ್ಲುತ್ತಾನೆ. ಅವರು ಆ ಖಾಲಿ ಮನೆಯನ್ನು ಬಿಟ್ಟು ಹೊರಡುವ ಮುನ್ನ ಅಲ್ಲಿಗೊಬ್ಬಳು ಯುವತಿಯ ಪ್ರವೇಶವಾಗುತ್ತದೆ. ಬಾಂಗ್ಲಾ ದೇಶದ ಉದಯದೊಂದಿಗೆ ನಿರಾಶ್ರಿತಳಾಗುವ ಹುಡುಗಿ ಬಂಗಬಾಲಾ ನೀಲಕಂಠನಲ್ಲಿ ಆಶ್ರಯ ಬೇಡುತ್ತಾಳೆ. ನೆಲೆ ಕಳೆದುಕೊಂಡ ನೀಲಕಂಠ ಆಕೆಯ ರಕ್ಷಣೆಯ ಭಾರ ಹೊರುತ್ತಾನೆ!

ಅದಾಗಲೇ ಮಾರಾಟವಾಗಿರುವ ಮನೆ ತೊರೆದು ಹೊರಡುವ ಮೂವರು ಗಲ್ಲಿ ಗಲ್ಲಿಗಳಲ್ಲಿ ಅಲೆಯುತ್ತ ದಿನ ದೂಡುತ್ತಾರೆ. ಇದೇ ಸಂದರ್ಭದಲ್ಲಿ ಸಂಸ್ಕೃತ ಪಂಡಿತ ಜಗನ್ನಾಥನ ಪರಿಚಯವಾಗುತ್ತದೆ. ಈತ ಕೂಡ ನೆಲೆ ಇಲ್ಲದ ಮತ್ತೊಬ್ಬ ನಿರಾಶ್ರಿತ. ಈ ನಾಲ್ಕು ಜನರ ತಂಡ ಕಲ್ಕತ್ತೆ ತೊರೆದು ಹೊರಡುತ್ತದೆ. ತನ್ನ ಪತ್ನಿಯ ಮನೆರುವ ಕಾಂಚನಪುರಕ್ಕೆ ನೀಲಕಂಠ ಅವರೆಲ್ಲರನ್ನೂ ಕರೆದುಕೊಂಡು ಹೊರಡುತ್ತಾನೆ.
ಅವರ ಈ ಪ್ರಯಾಣ ಒಂದು ಅದ್ಭುತ ಅನುಭವ. ನೀಲಕಂಠನ ಬಯಕೆಯ ಬಾಂಗ್ಲಾ ಅವರು ಸಾಗುವ ಹಳ್ಳಿಗಳಲ್ಲಿ ಅನಾವರಣಗೊಳ್ಳುತ್ತ ಹೋಗುವಂತೆ ತೋರುತ್ತದೆ. ಹೀಗೇ ಅವರು ಹಳ್ಳಿಯೊಂದರ ಮನೆಯಲ್ಲಿ ಆಶ್ರಯ ಕೋರುತ್ತಾರೆ. ಅದು, ಛೌ ನೃತ್ಯಕ್ಕೆ ಮುಖವಾಡಗಳನ್ನು ತಯಾರಿಸುವ ಪಂಚಾನನ ಉಸ್ತಾದನ ಮನೆ. ಆತನ ಮನೆಯಲ್ಲಿ ತಂಗಿದ್ದು, ದುರ್ಗೆ ದುಷ್ಟರನ್ನು ಸಂಹರಿಸುವ ನೃತ್ಯವನ್ನು ನೋಡಿಕೊಂಡು ಮುಂದೆ ಹೊರಡುತ್ತಾರೆ. ಅಲ್ಪ ಕಾಲದ ಅವರ ನಡು”ನ ಬಾಂಧವ್ಯ ಅಗಲಿಕೆಯ ಸಂದರ್ಭದಲ್ಲಿ ತನ್ನ ಗಾಢತೆಯನ್ನು ತೋರಿಸಿಕೊಡುತ್ತದೆ. ತಮ್ಮ ನೆಲವನ್ನು, ತಮ್ಮ ಜನರನ್ನು ಕಳೆದುಕೊಂಡ ಅವರು, ಎರಡು ದಿನಗಳ ಬಂಧು ಉಸ್ತಾದನನ್ನು ಅಗಲುವಾಗ ಬಿಕ್ಕಿ ಬಿಕ್ಕಿ ದುಃಖಿಸುತ್ತಾರೆ. ನೃತ್ಯದ ದುರ್ಗೆಯ ಮುಖವಾಡ ಬಂಗಬಾಲಾಳಲ್ಲಿ ಆವೇಶ ಹುಟ್ಟುಹಾಕಿರುತ್ತದೆ.

ಮುಂದುವರೆದ ಪ್ರಯಾಣದಲ್ಲಿ, ಹಳ್ಳಿಯ ಮುಖಂಡನೊಬ್ಬನ ಬಂದೂಕಿಗೆ ಜಗನ್ನಾಥ ಅನಿರೀಕ್ಷಿತವಾಗಿ ಬಲಿಯಾಗುವ ಪ್ರಸಂಗ ಒದಗಿಬರುತ್ತದೆ. ಬಂಗಬಾಲಾಳ ಆವೇಶ ಅದಕ್ಕೆ ಕಾರಣವಾಗುವುದು ವಿಪರ್ಯಾಸ. ಸಹಪಯಣಿಗನ ಸಾವಿನಿಂದ ಪ್ರಯಾಣವೇನೂ ನಿಲ್ಲುವುದಿಲ್ಲ. ಕೊನೆಗೂ ಉಳಿದ ಮೂವರು ಕಾಂಚನ ಪುರವನ್ನು ಬಂದು ತಲಪುತ್ತಾರೆ.

ಪತ್ನಿಯನ್ನು ಅರಸಿ ಬರುವ ನೀಲಕಂಠನ ಗಮ್ಯ ಅದಲ್ಲ. ಜೊತೆಗೆ ದುರ್ಗಾ ಕೂಡ ಅವನಿಗೆ ಮರಳಿ ಹೋಗುವಂತೆ ತಾಕೀತು ಮಾಡುತ್ತಾಳೆ. ನೀಲಕಂಠ ಅಲ್ಲಿಂದ ಹೊರಡುವ ಮುನ್ನ, ಮರುದಿನ ಮುಂಜಾನೆ ಮಗನನ್ನು ಸಮೀಪದ ಕಾಡಿಗೆ ಕರೆತರುವಂತೆ ಕೇಳಿಕೊಳ್ಳುತ್ತಾನೆ. ಮೊದಲ ಸೂರ್ಯ ರಶ್ಮಿಯೊಂದಿಗೆ ಮಗನ ಮುಖ ನೋಡಬೇಕೆನ್ನುವ ಬಯಕೆ ಅವನದು. ಕಾಡಿಗೆ ತೆರಳುವ ನೀಲಕಂಠನ ತಂಡಕ್ಕೆ ನಕ್ಸಲೀಯರ ಗುಂಪು ಎದುರಾಗುತ್ತದೆ. ಆತ ಅವರೊಂದಿಗೆ ಸಮಸ್ಯೆಗಳ ಕುರಿತು ಸುದೀರ್ಘವಾಗಿ ಮಾತನಾಡುತ್ತಾನೆ. ಇರುಳು ಕಳೆಯುತ್ತದೆ.-

ಮರುದಿನ ಮುಂಜಾನೆ ದುರ್ಗಾ ಮಗನನ್ನು ಕರೆದುಕೊಂಡು ಕಾಡಿಗೆ ಬರುತ್ತಾಳೆ. ಅದೇ ವೇಳೆಗೆ ಪೋಲಿಸರು ಮುತ್ತಿಗೆ ಹಾಕಿ ನಕ್ಸಲೀಯರ ಮೇಲೆ ದಾಳಿ ನಡೆಸುತ್ತಾರೆ. ಗುಂಡಿನ ಚಕಮಕಿಯ ಸದ್ದಡಗುತ್ತಿದ್ದಂತೆ ನೀಲಕಂಠ ಎದ್ದುನಿಲ್ಲುತ್ತಾನೆ, ಪೋಲಿಸನೊಬ್ಬನ ಪಿಸ್ತೂಲಿಗೆ ಬಲಿಯಾಗುತ್ತಾನೆ.
~
ಈ ಚಿತ್ರದುದ್ದಕ್ಕೂ ನೀಲಕಂಠನ ನೆಲದ ಹಂಬಲ, ಸೋಲು, ಹತಾಶೆಗಳು ಸೂಕ್ಷ್ಮವಾಗಿ ಅನಾವರಣಗೊಳ್ಳುತ್ತ ಸಾಗಿದೆ. ಇದು, ಬೇರ್ಪಡಿಕೆಯ ನೋವು. ಚಿತ್ರದ ಆರಂಭದಲ್ಲಿ ಪತಿ ಪತ್ನಿಯ ಬೇರ್ಪಡಿಕೆಯ ದೃಶ್ಯವಿದ್ದರೂ ನೀಲಕಂಠನಲ್ಲಿ ನೆಲದಿಂದ ಬೇರ್ಪಟ್ಟ ದುಃಖವನ್ನೇ ನಾವು ಮುಖ್ಯವಾಗಿ ಕಾಣುತ್ತೇವೆ. ಬಾಂಗ್ಲಾದ ಒಗ್ಗೂಡುವಿಕೆಯ ಕನಸು ಕಾಣುವ ನೀಲಕಂಠ ತನ್ನ ಪತ್ನಿಯೊಂದಿಗೆ ಒಗ್ಗೂಡಲು ಸಾಧ್ಯವಾಗದೆ ಹೋಗುವುದೊಂದು ವಿಡಂಬನೆ. ತನ್ನ ಅಸ್ತಿತ್ವ ನಾಶದ ಕಾರಣದಿಂದಾಗಿ ಉಂಟಾದ ಚಡಪಡಿಕೆಂದಲೇ ಆತನ ಅಸ್ತಿತ್ವ ಕುಡಿತದಲ್ಲಿ ಕರಗುತ್ತ ಹೋಗುತ್ತದೆ. ಆದರೆ ಆತ, ಜೀವನಕ್ಕಾಗಿ ತಾನಲ್ಲದ ಮತ್ತೊಂದು ಪಾತ್ರವನ್ನು ಅಭಿನುಸಲು ತಯಾರಿಲ್ಲದ ಪ್ರಾಮಾಣಿಕ. ಇದು, ಆತ ಶತ್ರುಜಿತ್ ಎನ್ನುವ ಮತ್ತೊಬ್ಬ ಮಾಜಿ ಚಿಂತಕನೊಂದಿಗೆ ನಡೆಸುವ ಸಂಭಾಷಣೆಯಲ್ಲಿ ನಿರೂಪಿತವಾಗಿದೆ.
ಈ ಸಿನೆಮಾ ನೆಲೆ ಕಳೆದುಕೊಂಡವರ ಹುಡುಕಾಟವನ್ನು ಬಿಂಬಿಸುತ್ತದೆ. ಇಲ್ಲಿ ನೀಲಕಂಠ ಎರಡೂ ಬಗೆಯಲ್ಲಿ ನೆಲೆ ಕಳೆದುಕೊಂಡವನಾಗಿದ್ದಾನೆ. ಅವನ ಪ್ರಯಾಣ ಬಾಹ್ಯ ನೆಲೆಯನ್ನು ಹುಡುಕುವುದಕ್ಕಾದರೆ, ಕುಡಿತದ ಮೈಮರೆವು ಒಳಗಿನ ಹುಡುಕಾಟದ ಪ್ರಕ್ರಿಯೆಯಂತೆ ತೋರುತ್ತದೆ.
ಅವನ ನಿರುದ್ಯೋಗಿ ಮತ್ತು ನಿರಾಶ್ರಿತ ಸಾಥಿಗಳು ಅವನ ಅಲೆಮಾರಿತನದ ಅನಾಥಪ್ರಜ್ಞೆಯನ್ನು ಕೊಂಚ ಮಟ್ಟಿಗೆ ಕಡಿಮೆ ಮಾಡುತ್ತಾರೆ. ಕಾಡಿನಲ್ಲಿ ಅವಿತು ನೆಲಕ್ಕಾಗಿ ಹೋರಾಡುವ ನಕ್ಸಲರನ್ನು ಆತ ಭೇಟಿಯಾಗುವುದು ಕೂಡ ಒಂದು ಸಂಕೇತವೇ.

ಜುಕ್ತಿ, ಟಕೋ ಆರ್ ಗಪ್ಪೋ… ಕಾರಣ, ವಾದ ಮತ್ತು ಕಥೆ; ಇದು ತರ್ಕವನ್ನು ಮೀರಿದ ಸಿನೆಮಾ. ಪ್ರತಿ ಬಾರಿ ನೋಡಿದಾಗಲೂ ಭಿನ್ನ ಅನುಭವಗಳನ್ನು ಕಟ್ಟಿಕೊಡುತ್ತ, ನಮ್ಮನ್ನೂ ತನ್ನಲ್ಲಿ ಒಳಗೊಳ್ಳುತ್ತ ಸಾಗುತ್ತದೆ. ಸಿನೆಮಾದ ಕಥೆಯ ಸಂದರ್ಭ ನಾಲ್ಕು ದಶಕ ಹಿಂದಿನದಾದರೂ ಅದರ ಭಾವ ಸದಾ ಕಾಲಕ್ಕೂ ಸಲ್ಲುತ್ತದೆ.
~ ~

ಭಾಷೆ: ಬಂಗಾಳಿ
ಇಸವಿ : ೧೯೭೪
ನಿರ್ದೇಶನ: ಋತ್ವಿಕ್ ಘಟಕ್
ಮುಖ್ಯ ತಾರಾಗಣ: ನೀಲ ಕಂಠ- ಋತ್ವಿಕ್ ಘಟಕ್
ನಚಿಕೇತ- ಸೌಗತ ಬರ್ಮನ್
ಬಂಗ ಬಾಲಾ- ಸಾಂವ್ಲಿ ಮಿತ್ರ
ದುರ್ಗಾ- ತೃಪ್ತಿ ಮಿತ್ರ
ಸತ್ಯ- ಋತಬನ್ ಘಟಕ್

ಶಿಶಿರ ನನ್ನ ಹೆಸರು…

ಹೊಸ ವರ್ಷದ ಶುಭಾಶಯಗಳು ಎಲ್ಲರಿಗೂ. ಹೆಚ್ಚು ಮಾತಿಲ್ಲದೆ, ಒಂದು ಚೆಂದದ ಕವಿತೆಯೊಂದಿಗೆ ‘ಹೊಸತಲೆಮಾರು’ ಹೊಸ ವರ್ಷವನ್ನು ಬರಮಾಡಿಕೊಳ್ಳುತ್ತದೆ. ಕವಿ ಚಂದ್ರು ತುರವೀಹಾಳರಿಗೆ ಆಭಾರಿ.

 

:sOgemane:

ಗುರುತು

ಮಾಗಿ ತನ್ನ ಹೃದಯದಲ್ಲಿ ವಸಂತವಿದೆ ಎಂದರೆ
ಯಾರು ತಾನೆ ಅದನ್ನು ನಂಬಲು ಸಾಧ್ಯ?
  -ಖಲೀಲ್ ಗಿಬ್ರಾನ್

ಒಂದು ವಸಂತದಿಂದ  ಮತ್ತೊಂದು ವಸಂತದೆಡೆಗೆ
ನೀ ನಡೆದು ಹೋಗಲು ಕಣ್ಣೆಲೆಗಳ ಉದುರಿಸಿದ
ಒಂದು ಋತು ನಾನು, ಶಿಶಿರ ನನ್ನ ಹೆಸರು

ಕಪ್ಪು ಕಲೆಗಳಿವೆ ಎಂದು ದೂರಿದರೂ ಚಂದ್ರನ
ಲಕ್ಷ ನಕ್ಷತ್ರಗಳ ನಡುವೆ  ನಗುತ್ತ ಸಾಗಿ
ತನ್ನ ತೋರಿ ತಾಯಂದಿರುಣಿಸುವ ಅನ್ನವನೆಂದೂ ವಿಷವಾಗಿಸಲಿಲ್ಲ

ನೀ ನೀಡಿದ ಪೆಟ್ಟು ಪಕ್ಕಡೆಯೊಳಗೆ ಹೊತ್ತು
ಮುಗಿಲಿಗೆ ಕಣ್ಣಿಟ್ಟು ನಾ ಮಳೆಗರೆದೆನೆ ಹೊರತು
ನೆಲದೊಳಗೆ ನೋವಿಟ್ಟು ಕೀವು ತುಂಬಲಿಲ್ಲ

ಹಸಿರು ಅಮಲನು ಕಂಡು ಹಾಡುವ
ನಿನ್ನ ಕಣ್ಣ ಕೋಗಿಲೆಗೆ ನಾ ಮಾಗಿಯ ಚೆಲುವ ತೋರಲೆಂತು?

ಅವನು- ಇವನೆನ್ನುವ
ನಿನ್ನ ಬದುಕಿನ  ವಸಂತನಗಳ ನಡುವೆ
ಬಂದು ಹೋದ ಒಂದು ಶಿಶಿರ ನಾನು
ಬಯಲೆಂಬುದು ನನ್ನ ಗುರುತು.

-ತುರುವೀಹಾಳ ಚಂದ್ರು