ಎರಡು ಭಾರತಗಳು- ಡಿ.ಆರ್.ನಾಗರಾಜ್ ಮರು ಓದು

ಸಂಪೂರ್ಣವಾಗಿ ಒಳಗಿನಿಂದ ಬರೆಯುವ ಆಧುನಿಕ ಲೇಖಕನಿಗೆ ಇವೆರಡೂ ಬೇರೆ ಬೇರೆಯಾಗಿಯೇ ಉಳಿಯಬೇಕಿಲ್ಲ……….. ಚರಿತ್ರೆಯ ವರ್ತಮಾನದಲ್ಲಿ ಮಾತ್ರ ನಿಂತಿರುವವರಿಗೆ ಆತಂಕ ಸಹಜವಾದ, ಅಧಿಕೃತವಾದ ಅನುಭವ. ಚರಿತ್ರೆಯ ಭೂತದಲ್ಲಿ ಮಾತ್ರ ಹುದುಗಿಹೋಗಿರುವವರಿಗೆ ಸಹಜವಾಗಿಯೇ ಆನಂದ, ರೋಮಾಂಚನ ಅಧಿಕೃತ ಅನುಭವ. ಭೂತ ವರ್ತಮಾನಗಳೆರಡೂ ಭವಿಷ್ಯದ ಕಡೆಗೆ ನಡೆಯುವಂಥದು ಎಂದು ತಿಳಿದವರಿಗೆ ಆತಂಕ- ಆನಂದಗಳೆರಡೂ ಒಟ್ಟಿಗೆ ಹೋಗುತ್ತವೆ. ಅಂಥ ಭಾರತ ಗ್ರಹಿಕೆಗಾಗಿ ನಾವು ಕಲಿಯಬೇಕಾಗಿದೆ.

ಡಿ.ಅರ್. ನಾಗರಾಜ್ ನಾನು ಮತ್ತೆ ಮತ್ತೆ ಓದಿಕೊಳ್ಳುವ ಲೇಖಕ. ಇವರನ್ನು ನಮ್ಮ ಪೀಳಿಗೆಯ ನಾವೆಲ್ಲ ಓದಿಕೊಳ್ಳಬೇಕು, ಬಹಳಷ್ಟು ಕಾರಣಗಳಿಗೆ. ಹೆಚ್ಚು ಹೇಳಿದರೆ ನನ್ನ ಅಭಿಮಾನದ ಅಭಿಪ್ರಾಯವನ್ನು ಹೇರಿದಂತಾಗುತ್ತದೇನೋ. ಇಲ್ಲಿ ನೀಡಿರುವ ಬರಹ ಇಂದಿನ ಹೊಸ ಬರಹಗಾರರ ಪ್ರಶ್ನೆಗಳಿಗೆ ಉತ್ತರ ಕೊಡಬಹುದೆನ್ನುವುದು ಆಶಯ. ಡಿ.ಆರ್. ಬಗ್ಗೆ ಉಳಿದ ಮಾತು, ಮುಂದೆಂದಾದರೂ…

ಎರಡು ಭಾರತಗಳು

ಭರತ ಖಂಡದ ಬಗೆಗೆ ಕಳೆದ ಇನ್ನೂರು ವರ್ಷಗಳಲ್ಲಿ ಎರಡು ರೀತಿಯ ಪ್ರತಿಕ್ರಿಯೆಗಳು ಬೆಳೆದಿವೆ. ಮೊದಲನೆಯ ಪ್ರತಿಕ್ರಿಯೆ ದಿಗ್ಭ್ರಮೆ, ಭೀತಿ, ಆತಂಕ, ಅಸಹನೆಗಳಿಂದ ತುಂಬಿರುವಂಥದು. ಎರಡನೆಯದು ಆರಾಧನೆ, ಆನಂದ, ರೋಮಾಂಚನದಿಂದ ತುಂಬಿರುವಂಥದು. ಈ ಎರಡೂ ಪಂಗಡಗಳಲ್ಲಿ ರಾಜಕಾರಣಿಗಳು, ಕವಿಗಳು, ತತ್ತ್ವಜ್ಞಾನಿಗಳು, ಸಂಶೋಧಕರು, ಕಾದಂಬರಿಕಾರರು ಸಮನಾಗಿ ಹರಿದುಹಂಚಿ ಹೋಗಿದ್ದಾರೆ. ಈಗ ತಕ್ಷಣ ನೆನಪಿಗೆ ಬರುತ್ತಿರುವ ಹೆಸರುಗಳಲ್ಲಿ ಒಂದೆರಡನ್ನು ಹೇಳುತ್ತೇನೆ. ಮೊದಲನೆಯ ಗುಂಪಿನ ಸಮರ್ಥ ಪ್ರತಿನಿಧಿ ನೈಪಾಲ್. ಈಚಿನ ವರ್ಷಗಳಲ್ಲಿ ಭಾರತ ಭಜನೆದಾಸರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿಬಿಟ್ಟಿದೆ. ಹೀಗಾಗಿ ನೈಪಾಲರ ಮಟ್ಟದ ಲೇಖಕ ಭಜನೆದಾಸರಲ್ಲಿ ಯಾರೂ ಇಲ್ಲ. ಆದರೂ, ಆ ದೃಷ್ಟಿಕೋನ ಮಾಯವಾಗಿಲ್ಲ. ಸಾಯಿಬಾಬಾರಿಂದ ಹಿಡಿದು ಚಿಲ್ಲರೆ ಗುರುಗಳ ಆಶ್ರಮಗಳತನಕ ಹಬ್ಬಿರುವ ಪಶ್ಚಿಮ ಪಂಥಿಗಳೇ ಇದಕ್ಕೆ ಸಾಕ್ಷಿ. ಆದರೆ, ಒಟ್ಟಾರೆಯಾಗಿ ಈ ಗುಂಪಿನ ಪ್ರತಿನಿಧಿ ರಾಜಾರಾವ್.

ಮೊದಲನೆಯ ಆತಂಕಕೇಂದ್ರಿತರ ಬಗ್ಗೆ ಈ ನಾಡಿನಲ್ಲಿ ಸಹಜವಾಗಿ ಅಂಥ ಗೌರವವೇನೂ ಇಲ್ಲ. ಸಾರ್ವಜನಿಕವಾಗಿ ಹುಳುಕನ್ನು ಎತ್ತಿಹಿಡಿಯುವ ಮಂದಿಯನ್ನು ಯಾರು ತಾನೇ ಇಷ್ಟಪಡುತ್ತಾರೆ? ಗಾಂಧೀಜಿಯೇ ಇಂಥದೊಂದು ಪುಸ್ತಕವನ್ನು ‘ಚರಂಡಿ ಇನ್ಸ್ ಪೆಕ್ಟರರ ಪುಸ್ತಕ ಎಂದು ವರ್ಣಿಸಿದ್ದರು. ಈ ಆತಂಕಕೇಂದ್ರಿತರಿಗೆ ಭಾರತದ ವರ್ತಮಾನವೇ ಹೆಚ್ಚು ನಿಜ. ಅದರ ದೈನಂದಿನ ಜೀವನದ ಕೊಳಕುಗಳಿಂದ ಹಿಡಿದು ಉನ್ನತ ಮಟ್ಟದ ರಾಜಕೀಯ ಪ್ರಕ್ರಿಯೆಗಳ ಭಯಾನಕ ರೂಪಗಳತನಕ ಅವರ ಭೀತಿ, ಅಸಹ್ಯ ಬೆಳೆದು ನಿಲ್ಲುತ್ತದೆ. ಯಾಮಾರಿದರೆ, ತತ್ತರಿಸುವ ದೇಶ ಭಾರತ ಎಂಬುದು ಇವರ ನಂಬಿಕೆ. ವರ್ತಮಾನದ ಭಾರತೀಯರ ಬದುಕಿನ ಕುರೂಪಿ ಮುಖವನ್ನು ಕಂಡವರು, ಒಂದು ಕಾಲದಲ್ಲಿ ಇದು ಸುಂದರವಾಗಿತ್ತು, ಭವ್ಯವಾಗಿತ್ತು ಎಂದು ನಂಬುವುದು ಹೇಗೆ? ನಾವು ಕೂಡ ನಂಬುವುದಿಲ್ಲವಲ್ಲ!

ಸ್ವತಃ ಮ್ಯಾಕ್ಸ್ ಮುಲ್ಲರಿಗೂ ಸಮಕಾಲೀನ ಭಾರತದ ಬಗ್ಗೆ ಅಪಾರ ಭೀತಿಯಿತ್ತೆಂದು ಹೇಳುವ ಅನೇಕ ಪ್ರಸಂಗಗಳು ಸಿಗುತ್ತವೆ. ನಿಜವಾದ ಭಾರತ ಎಂದೋ ಸತ್ತು ಹೋಯಿತೆಂದು ತಿಳಿಸಿ, ಈಗಿನ ಭಾರತಕ್ಕೆ ಕಾಲಿಡಬರದೆಂದು ತಮ್ಮ ಶಿಷ್ಯರಿಗೆ ಅವರು ಕಟ್ಟಪ್ಪಣ್ಣೆ ಮಾಡಿದ್ದರಂತೆ! ಇಂಥ ದಂತಕಥೆಯೊಂದು ಇದೆಯೆಂದು ಆಶೀಶ್ ನಂದಿ ತಮ್ಮ ‘ಇಂಟಿಮೇಟ್ ಎನಿಮಿ’ ಪುಸ್ತಕದಲ್ಲಿ ಬರೆಯುತ್ತಾರೆ. ಹೀಗಾಗಿ, ‘ಇತ್ತು’ಗಳ ಧ್ವಜವ ಹಿಡಿದೆತ್ತಿ ನಿಲ್ಲುವ ಮಂದಿಗೂ ‘ಇದೆ’ಯ ಹೃದಯ ದ್ರಾವದ ಬಗೆಗೆ ಸಹಜವಾಗಿಯೇ ತಿರಸ್ಕಾರ, ಭಯ.

ಈ ಆತಂಕ ಕೇಂದ್ರಿತರಿಗೆ ಕಂಡಿರುವ ಭಾರತದ ರೂಪ ಎಷ್ಟರಮಟ್ಟಿಗೆ ನಿಜ, ಎಷ್ಟರಮಟ್ಟಿಗೆ ಅಧಿಕೃತ? ಇವರು ಹೇಳುವ ಶುದ್ಧ ಅತಿರೇಕದ ಕಥೆಗಳಲ್ಲಿ ಸತ್ಯದ ಮೂಲರೂಪ ಇದ್ದೇಇರುತ್ತದೆ ಅನಿಸುತ್ತದೆ. ಉದಾಹರಣೆಗೆ ಕಿಪ್ಲಿಂಗ್ ನ ‘ಕಿಮ್’ ಕಾದಂಬರಿಯ ಕೆಲವು ಪ್ರಸಂಗಗಳನ್ನೇ ಇದಕ್ಕೆ ಸಾಕ್ಷಿಯಾಗಿ ಹೆಸರಿಸಬಹುದು. ರೇಲ್ವೇ ಸ್ಟೇಷನ್ನೊಂದರಲ್ಲಿ ದೂರದೂರಿಗೆ ಟಿಕೆಟ್ ಕೊಳ್ಳುವ ಪ್ರಸಂಗ. ಟಿಕೆಟ್ ಕೊಡುವ ವ್ಯಕ್ತಿ ಜಾಣ ಅಥವಾ ಮೋಸಗಾರ (ಅಥವಾ ಭಾರತದ ಸಾಮಾಜಿಕ ಜೀವನದಲ್ಲಿ ಅನೇಕ ಸಾರಿ ಈ ಎರಡರ ನಡುವೆ ವ್ಯತ್ಯಾಸವೇ ಇರುವುದಿಲ್ಲ). ಅವನು ಮುಂದಿನ ಸ್ಟೇಷನ್ನಿಗೆ ಟಿಕೆಟ್ ಕೊಟ್ಟು ಮೋಸ ಮಾಡಲು ಪ್ರಯತ್ನಿಸುತ್ತಾನೆ. ಅನಕ್ಷರಸ್ಥ ಹಳ್ಳಿಗರಿಗೆ ಹಾಗೆ ಮಾಡಿ ಮಾಡಿ ಅಭ್ಯಾಸ. ಇಂಥ ಸಣ್ಣಪುಟ್ಟ ವಿಷಯಗಳ ಬಗೆಗೆ ಮಾತ್ರವಲ್ಲ, ಈ ಬದುಕಿನ ಮೂಲರೂಪಗಳ ಬಗೆಗೂ ಆತಂಕ. ಆತಂಕಕೇಂದ್ರಿತರು ಹೇಳುವ ಮಾತೇ ಹೆಚ್ಚು ನಿಜ, ಅಧಿಕೃತ ಎನಿಸುತ್ತದೆ.

‘ಎನ್ ಏರಿಯಾ ಆಫ್ ಡಾರ್ಕ್ ನೆಸ್’ ಮತ್ತು ‘ದಿ ವೂಂಡೆಡ್ ಸಿವಿಲೈಸೇಷನ್’ ಕೃತಿಗಳಲ್ಲಿ ನೈಪಾಲರ ಭಾರತದರ್ಶನವನ್ನು ನಮ್ಮ ದೊಡ್ಡ ಲೇಖಕರ ಸಾಮಾಜಿಕ ದರ್ಶನದ ಜತೆಗೆ ಹೋಲಿಸಿ. ಆಶ್ಚರ್ಯಕರ ಸಾಮ್ಯಗಳು ಕಾಣಿಸಿಕೊಳ್ಳುತ್ತವೆ. ಅರೆನಿರ್ಮಿತ ಆಧುನಿಕ ಸಮಾಜಗಳ ಅಸಂಬದ್ಧತೆಯನ್ನು ನೈಪಾಲ್ ವೈಚಾರಿಕವಾಗಿ ಎಷ್ಟು ಟೀಕಿಸುತ್ತಾರೋ, ಅಷ್ಟೇ ತೀವ್ರತೆಯಿಂದ ನಮ್ಮ ಲೇಖಕರೂ ಆ ಅನುಭವವನ್ನು ಸಹಿತ್ಯವಾಗಿಸುತ್ತಾರೆ. ನಾವು ಸಮಾಜವನ್ನು ನಿರ್ಮಿಸುತ್ತಿರುವ ಬಗೆಗೆ ಇಬ್ಬರದೂ ಒಂದೇ ತೀವ್ರತೆಯ ಕೋಪ. ಜಾತಿಪದ್ಧತಿ ನಮ್ಮ ಗ್ರಹಿಕೆಯನ್ನು ಮೌಲ್ಯ ಕಲ್ಪನೆಯನ್ನು ಆಳವಾಗಿ ತಿರುಚಿರುವ ಬಗೆಗೆ ನೈಪಾಲ್ ಹೇಳುವ ಒಳನೋಟಗಳನ್ನು ನಮ್ಮ ಆಧುನಿಕ ಸಾಹಿತ್ಯ ಕೃತಿಗಳು ವಿಸ್ತರಿಸುತ್ತವೆ. ಅದರಲ್ಲೂ ತೇಜಸ್ವಿ, ಲಂಕೇಶರ ಬರವಣಿಗೆಗಳು ನೈಪಾಲರ ರೀತಿಯ ನೈತಿಕ ಕೋಪವನ್ನೇ ತೋರಿಸುತ್ತವೆ. ‘ಅವನತಿ’, ‘ಕುಬಿ ಮತ್ತು ಇಯಾಲ’, ‘ತಬರನ ಕಥೆ’ ಮುಂತಾದವುಗಳ ವ್ಯಗ್ರತೆ, ವಿಷಾದ ಮೂಲತಃ ಆತಂಕಕೇಂದ್ರಿತವೇ. ರಮ್ಯ ಚಿತ್ರಗಳಿಂದ ಪುರಾಣಗಳಿಂದ ಮೋಸ ಹೋಗದ ಸೂಕ್ಷ್ಮ ಮನಸ್ಸಿನ ಚಿತ್ರಣ ಕ್ರಮ ಇದು.

ಆದರೆ, ಆರಾಧಕರ ಭಾರತ ಬಹುಮಟ್ಟಿಗೆ ವರ್ತಮಾನಕ್ಕೇ ಮುಖ ತಿರುಗಿಸುವಂಥದು. ಇಲ್ಲಿ ಸಾಮಾನ್ಯವಾಗಿ ಬಡತನ ಒಂದು ಸಮಸ್ಯೆಯೇ ಅಲ್ಲ. ಅಥವಾ ಬಡತನವನ್ನು ಕೂಡ ಇಲ್ಲಿ ಆಧ್ಯಾತ್ಮೀಕರಿಸಲಾಗುತ್ತದೆ. ನೈಪಾಲರ ಭಾರತಕ್ಕೆ ಪೂರ್ಣವಾಗಿ ವಿರುದ್ಧ ದಿಕ್ಕಿನದು ರಾಜಾರಾಯರ ಭಾರತ. ಇಲ್ಲಿ ಎಲ್ಲವೂ ಬ್ರಹ್ಮವೇ. ಗಂಗೆ ಎಂದರೆ ರೋಮಾಂಚನ, ಹಿಮಾಲಯ ಎಂದರೆ ಕಂಪನ. ಈ ಧರೆಯ ಮಣ್ಣೇ ಪವಿತ್ರ. ಭಾರತದ ಆಧ್ಯಾತ್ಮಿ೯ಕತೆಯ ಬಗ್ಗೆ ಎಷ್ಟೇ ಗೌರವವಿದ್ದರೂ ಈ ಬ್ರಹ್ಮ ಸ್ವರೂಪಿ ಬರವಣಿಗೆಯ ಭಾರವನ್ನು ತಡೆದುಕೊಳ್ಳುವುದು ಕಷ್ಟ.

ಈಗ ಸಮಸ್ಯೆ ಇರುವುದು ಈ ಎರಡೂ ಭಾರತಗಳು ಬೇರೆಯೇ ಆಗಿ ಉಳಿಯಬೇಕೇ ಎಂಬಲ್ಲಿ. ಸಂಪೂರ್ಣವಾಗಿ ಒಳಗಿನಿಂದ ಬರೆಯುವ ಆಧುನಿಕ ಲೇಖಕನಿಗೆ ಇವೆರಡೂ ಬೇರೆ ಬೇರೆಯಾಗಿಯೇ ಉಳಿಯಬೇಕಿಲ್ಲ. ಭಾರತವನ್ನು ಜಡ, ಸ್ಥಾವರ ಎಂದು ಹೀಗಳೆಯುವ ಆತಂಕಕೇಂದ್ರಿತರು ಆ ಜಡದ, ಹಿಮ್ಮುಖದ, ಸ್ಥಾವರದ ಸ್ವರೂಪವನ್ನು ಇನ್ನಷ್ಟು ಆತ್ಮೀಯತೆಯಿಂದ ಪರೀಕ್ಷಿಸಬೇಕಾದ ಅಗತ್ಯವಿದೆ. ಅದರಲ್ಲೂ ಜಾಗತಿಕ ಅಭಿವೃದ್ಧಿ ಪಥದ ವಿನಾಶಕಾರಿ ಪಥದ ಪರಿಣಾಮ ಗೊತ್ತಿರುವಂಥವರು ತಮ್ಮ ಆತಂಕದ ಮೂಲ ನೆಲೆಗಳನ್ನು ಸೂಕ್ಷ್ಮವಾದ ನೆಲೆಗಳಲ್ಲಿ ಪರೀಕ್ಷಿಸಿಕೊಳ್ಳಬೇಕಾಗಿದೆ. ನಾವು ಯಾವುದ್ಯಾವುದನ್ನು ಜಡ, ಹಿಮ್ಮುಖಿ ಎನ್ನುತ್ತೇವೆಯೋ, ಅವುಗಳಲ್ಲಿ ಮಾನವ ನಾಗರಿಕತೆಯ ಮೂಲಭೂತ ಸತ್ವಗಳಿವೆಯೇ ಎಂಬುದನ್ನು ನೋಡಬೇಕಾಗಿದೆ.

ಚರಿತ್ರೆಯ ವರ್ತಮಾನದಲ್ಲಿ ಮಾತ್ರ ನಿಂತಿರುವವರಿಗೆ ಆತಂಕ ಸಹಜವಾದ, ಅಧಿಕೃತವಾದ ಅನುಭವ. ಚರಿತ್ರೆಯ ಭೂತದಲ್ಲಿ ಮಾತ್ರ ಹುದುಗಿಹೋಗಿರುವವರಿಗೆ ಸಹಜವಾಗಿಯೇ ಆನಂದ, ರೋಮಾಂಚನ ಅಧಿಕೃತ ಅನುಭವ. ಭೂತ ವರ್ತಮಾನಗಳೆರಡೂ ಭವಿಷ್ಯದ ಕಡೆಗೆ ನಡೆಯುವಂಥದು ಎಂದು ತಿಳಿದವರಿಗೆ ಆತಂಕ- ಆನಂದಗಳೆರಡೂ ಒಟ್ಟಿಗೆ ಹೋಗುತ್ತವೆ. ಅಂಥ ಭಾರತ ಗ್ರಹಿಕೆಗಾಗಿ ನಾವು ಕಲಿಯಬೇಕಾಗಿದೆ.

ಈ ಸಮಸ್ಯೆ ರಾಜಕಾರಣದಲ್ಲೂ ಇಷ್ಟೇ ಆಳವಾಗಿ ಹಬ್ಬಿರುವಂಥದು. ಭಾರತದ ಬಗ್ಗೆ ಸಾರಾಸಗಟಾಗಿ ತಿರಸ್ಕಾರ ಹೊಂದಿರುವ ನಾಯಕರುಗಳ, ವಿಜ್ಞಾನಿಗಳ ಯುಗವಿದು. ಈ ಕತ್ತೆಗಳಿಗೆ ಪಶ್ಚಿಮದ್ದೆಲ್ಲ ಸ್ವರ್ಗವೇ. ಅದೇ ರೀತಿಯಲ್ಲಿ ಇನ್ನೊಂದು ರೀತಿಯ ಗಾರ್ದಭಗಳಿಗೆ ಭಾರತದ್ದೆಲ್ಲವೂ ಸ್ವರ್ಗಸಮಾನವೇ.

ಈ ನಾಡು ಬಹಳ ಬೇಗ ಕಂಗೆಡಿಸಿಬಿಡುತ್ತದೆ. ಸೂಕ್ಷ್ಮವಾಗಿ ಯೋಚಿಸಿದಂತೆಲ್ಲ, ಎಂಥವರೂ ದಿಗ್ಭ್ರಮೆಗೆ ಒಳಗಾಗುತ್ತಾರೆ. ಆಗ, ಅವರು ಒಂದು ಅತಿಗೆ ಹೋಗಿ ನಿಲ್ಲುತ್ತಾರೆ. ಆತಂಕ ಮತ್ತಿ ಆರಾಧನೆಗಳ ಪ್ರತ್ಯೇಕ ಲೋಕಕ್ಕೆ ಹೋಗಿ ಬೀಳುತ್ತಾರೆ.

ಈ ದೃಷ್ಟಿಯಿಂದ, ಕನ್ನಡ ನವೋದಯದ ಕುವೆಂಪು, ಕಾರಂತರಂಥವರೇ ಹೆಚ್ಚು ಗಟ್ಟಿ ನೆಲೆಯಲ್ಲಿದ್ದಾರೆ ಎನಿಸುತ್ತಿದೆ. ಉತ್ಪ್ರೇಕ್ಷಿತ ತಲ್ಲಣಗಳೂ ಇಲ್ಲ, ಹುಂಬ ಪೂಜೆಯೂ ಇಲ್ಲ. ಭಾರತದ ಚರಿತ್ರೆಯ ಬಹಿರಂಗ ಗತಿ ಮತ್ತು ಅಂತರಂಗದ ಲಯಗಳೆರಡಕ್ಕೂ ಹತ್ತಿರವಾಗಿದ್ದ ಪ್ರತಿಭೆಯ ಮುಖ್ಯ ಶಕ್ತಿ ಇದು ಎನ್ನಬಹುದು.

~ ಡಿ.ಆರ್.ನಾಗರಾಜ್

( ನಾವು- ನೀವು ವಾರಪತ್ರಿಕೆಯ ‘ಇಷ್ಟಾರ್ಥ’ ಅಂಕಣದಲ್ಲಿ ಪ್ರಕಟವಾಗಿದ್ದ ಲೇಖನ. ‘ಸಂಸ್ಕೃತಿ ಕಥನ’ ಪುಸ್ತಕದಿಂದ ಇದನ್ನು ಆಯ್ದುಕೊಳ್ಳಲಾಗಿದೆ. ಡಿ.ಆರ್. ಬರಹಗಳ ಈ ಕೃತಿಯ ಸಂಪಾದಕರು ಅಗ್ರಹಾರ ಕೃಷ್ಣಮೂರ್ತಿ)