‘ನಾನೂ ನಿಮ್ಮ ಹಾಗೆ ಅನ್ನ ತಿನ್ನುವ ನರ ಮನುಷ್ಯ’!

೯ ಮೇ, ೨೦೦೭ರ ಲಂಕೇಶ್ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಪೂರ್ಣಚಂದ್ರ ತೇಜಸ್ವಿ ಸಂದರ್ಶನದ ಮುಂದುವರಿದ ಭಾಗ. ಹಿಂದಿನ ಪ್ರಶ್ನೋತ್ತರಕ್ಕೆ ಇಲ್ಲಿ ಭೇಟಿ ನೀಡಿ.

ಪ್ರಶ್ನೆ: ವಿಜ್ಞಾನದ ವಿದ್ಯಾರ್ಥಿಯಲ್ಲದ ನೀವು ವಿಜ್ಞಾನದ ವಿಸ್ಮಯಗಳಿಗೆ ಗಂಟುಬಿದ್ದಿದ್ದು ಹೇಗೆ?

ಪೂಚಂತೇ: ವಿಜ್ಞಾನದ ವಿಸ್ಮಯಗಳಿಗೆ ನಾನು ಗಂಟು ಬಿದ್ದಿದ್ದೀನನ್ನೋದು ಸಂಪೂರ್ಣ ತಪ್ಪು. ಅಲ್ಲಯ್ಯ! ತನ್ನ ಪಾಡಿಗೆ ತಾನಿರುವ, ಇದ್ದುದನ್ನು ಇದ್ದ ಹಾಗೆ, ಕಂಡುದನ್ನು ಕಂಡ ಹಾಗೆ ನೋಡುವ ಮತ್ತು ಹೇಳುವ ಮನುಷ್ಯ ಇರಬೇಕಾದುದೇ ಹೀಗಲ್ಲವೆ? ಬೋಗಸ್ ಜನಿವಾರ, ಉಡುದಾರ, ಶಿವದಾರಗಳನೆಲ್ಲ ಮಹಾಮಹಾ ಸಂಕೇತಗಳೆಂದು ಕತೆ ಬರೆಯುವವರಿಗೆ ಬೇಕಿದ್ದರೆ ಗಂಟುಬಿದ್ದವರೆಂದು ಹೇಳು. ನಾನು ನಿನ್ನ ಹಾಗೇ ಅನ್ನ ತಿನ್ನುವ ನರ ಮನುಷ್ಯ. ನನ್ನ ಅನುಭವಗಳನ್ನೂ, ನನ್ನ ಅನುಭವಕ್ಕೆ ನಿಲುಕಿದ ಸತ್ಯಗಳನ್ನೂ ನಿನಗೆ ಹೇಳುತ್ತಿದ್ದೇನಷ್ಟೇ ಹೊರತು, ನನ್ನ ಬರವಣಿಗೆಗೆ ಒಂದು ಹಣೆಪಟ್ಟಿ ಖಂಡಿತ ಅನವಶ್ಯಕ. ನಾನು ವೈಜ್ಞಾನಿಕ ಬರಹಗಾರನಂತೂ ಅಲ್ಲ. ನನ್ನಂಥ ಕಥೆಗಾರನೊಬ್ಬ ಮಿಸ್ಸಿಂಗ್ ಲಿಂಕ್ ನಂಥ ಮಾನವಶಾಸ್ತ್ರದ ಪುಸ್ತಕವನ್ನಾಗಲೀ ವಿಸ್ಮಯದಂಥ ಇಕಾಲಜಿ ಮೇಲಿನ ಪುಸ್ತಕವಾಗಲೀ ಬರೆಯಬೇಕಾಗಿ ಬಂದದ್ದು ಕನ್ನಡ ಸಾಹಿತ್ಯದ ದುರಂತ ಪರಿಸ್ಥಿತಿಯನ್ನು ತೋರಿಸುತ್ತದೆ. ಆಯಾ ಕ್ಷೇತ್ರಗಳಲ್ಲಿರುವ ಪ್ರತಿಭಾವಂತರಿಗೆ ತಮ್ಮ ಕ್ಷೇತ್ರದ ಜ್ಞಾನವನ್ನು ಇತರರೊಡನೆ ಹಂಚಿಕೊಳ್ಳಬೇಕೆಂಬ ದೊಡ್ಡತನ ಇಲ್ಲ. ಅವರ ತಲೆಯೆಲ್ಲಾ ಹೇಗಾದರೂ ಮಾಡಿ ವೀಸಾ ಗಿಟ್ಟಿಸಿ ವಿದೇಶಕ್ಕೆ ಹೋಗಿ ನೆಲೆಸುವುದರ ಕಡೆಗೇ ಇರುತ್ತದೆ. ಹೀಗಾಗಿ ಅವರಂತೂ ಪುಸ್ತಕ ಬರೆಯುವುದಿಲ್ಲ. ಮಿಕ್ಕ ಎರಡನೇ ಮೂರನೇ ದರ್ಜೆಯವರಿಗೆ ಅವರಿಗೇ ಅವರ ವಿಷಯಗಳಾಲ್ಲಿ ಆಸಕ್ತಿ ಇರುವುದಿಲ್ಲ. ಇನ್ನು ಇತರರಿಗೆ ಆಸಕ್ತಿ ಹುಟ್ಟುವಂತೆ ಹೇಗೆ ತಾನೆ ಅವರು ಬರೆಯುತ್ತಾರೆ? ಇದರಿಂದಾಗಿಯೇ ಕೆಟ್ಟ ವೈಜ್ಞಾನಿಕ ಪುಸ್ತಕಗಳ ಗೊಬ್ಬರದ ಗುಂಡಿಯೇ ನಮ್ಮಲ್ಲಿ ನಿರ್ಮಾಣವಾಗಿದೆ. ಸರ್ಕಾರಿ ಸ್ಕೀಮುಗಳು, ಬಲ್ಕ್ ಪರ್ಚೇಸ್‌ಗಳು, ಇಲ್ಲಿಗೆ ಇವನ್ನೆಲ್ಲ ಸುರಿದು ಅಧಿಕಾರಿಗಳೂ ಪ್ರಕಾಶಕರೂ ಕೊಳ್ಳೆ ಹಂಚಿಕೊಳ್ಳುತ್ತಾ ಕಾಲಾಯಾಪನೆ ಮಾದುತ್ತಿದ್ದಾರೆ. ಈ ಲೋಫರ್‌ಗಳ ಬಳಗಕ್ಕೆ ಸೇರುವುದರ ಬದಲು ಹಸ್ತ ಸಾಮುದ್ರಿಕ, ಪಂಚಾಂಗ ಬರೆದು ಬದುಕುವುದು ಒಳಿತು.

‘ಅಕ್ಷರ ದೀಪ’ದಲ್ಲಿ ಸಂದೀಪ ನಾಯಕ

ಇವತ್ತಿನ, ನಮ್ಮ ಜತೆಯ ಬರಹಗಾರರ ಪರಿಚಯ ನಾನು ಮಾಡಿಕೊಳ್ಳಬೇಕನ್ನುವ ಇಚ್ಚೆಯಿಂದ, ಸಾಧ್ಯವಾದ ಮಟ್ಟಿಗೆ ಎಷ್ಟು ಸಿಗುತ್ತದೋ ಅಷ್ಟು ಒಳ್ಳೆಯ ಸಾಹಿತ್ಯ, ಸಾಹಿತಿಗಳನ್ನ ಕೈಗೆಟಕುವ ಜಾಲತಾಣದಲ್ಲೂ ದಾಖಲಿಸಬೇಕೆನ್ನುವ ಉದ್ದೇಶದಿಂದ ‘ಹೊಸ ತಲೆಮಾರು’ ಬ್ಲಾಗ್ ಆರಂಭಿಸಿದ್ದು ನಿಮಗೆ ಗೊತ್ತೇ ಇದೆ. ಈ ಆಶಯಕ್ಕೆ ಪೂರಕವಾಗಿ ಕಂಡುಬಂದಿದ್ದು ‘ಒಳಗೂ-ಹೊರಗೂ’ ಬ್ಲಾಗ್.  ಇದರ ಬಗ್ಗೆ ಹಿಂದೆ ಬರೆಯಲಾಗಿದೆ. ಇಲ್ಲಿದೆ, ಈ ಬಾರಿಯ ‘ಸನ್ನಿಧಾನ’ದ ವಿಶೇಷ. ಕಥೆಗಾರ ಸಂದೀಪ್ ನಾಯಕ್ ಅವರ ಸಂದರ್ಶನ….

ವಾಚಾಳಿಯಾಗಿಸಬಹುದಾದ `ಕತೆ’, ಮಾತುಮರೆಸುವ ಕವಿತೆ; ಇವುಗಳ ನಡುವೆ ಸಂಯಮದ ಉತ್ಸಾಹಿ ಸಂದೀಪ ನಾಯಕ. ಅವಸರದ ಸಾಹಿತ್ಯ ಸೃಷ್ಟಿಸುವ ಪತ್ರಕರ್ತನ ವೃತ್ತಿಯಲ್ಲಿದ್ದು ಒಳತೋಟಿಗಳಿಗೆ, ಸೂಕ್ಷ್ಮಗಳಿಗೆ ಸ್ಪಂದಿಸುವಷ್ಟು ಸಂವೇದನೆ ಉಳಿಸಿಕೊಂಡಿರುವ ಕತೆಗಾರ, ಕವಿ. ರೇಜಿಗೆ ಹುಟ್ಟಿಸುವಷ್ಟು ಅಕ್ಷರಲೋಕದಲ್ಲಿ ಮುಳುಗೇಳುತ್ತಿದ್ದರೂ, ಇವರ ಕತೆ, ಕವಿತೆಗಳಲ್ಲಿ ಅಪ್ಪಟ ಶಿರಸಿಯ ದಟ್ಟ ಕಾಡು, ಮಳೆ, ನೀರು ಪಸೆಪಸೆಯಾಗಿ ಓದುಗನನ್ನು ಆದ್ರ್ರಗೊಳಿಸುತ್ತದೆ. `ಕಾವ್ಯ ಮುಟ್ಟಿ ಮಾತಾಡಿಸಿದರೆ ಫಲ ಕೊಡುವ ಮಾಂತ್ರಿಕ ವೃಕ್ಷ’ ಎಂದೇ ನಂಬಿರುವ ಸಂದೀಪ, `ಅಗಣಿತ ಚಹರೆ’ ಎಂಬ ಕವಿತೆಗಳ ಸಂಕಲನವನ್ನು, `ಗೋಡೆಗೆ ಬರೆದ ನವಿಲು’ ಎಂಬ ಕಥಾ ಸಂಕಲನವನ್ನು ಪ್ರಕಟಿಸಿದ್ದಾರೆ. ಎರಡು ಭಿನ್ನ ಸಾಹಿತ್ಯ ಪ್ರಕಾರಗಳಲ್ಲಿ ಕ್ರಿಯಾಶೀಲರಾಗಿರುವ ಸಂದೀಪ ಇವತ್ತಿನ ಸನ್ನಿಧಾನದಲ್ಲಿ…

ಪತ್ರಕರ್ತ, ಕವಿ, ಕತೆಗಾರ, ಎಲ್ಲೆಡೆ ಅಕ್ಷರ ಸಾಂಗತ್ಯ. ಇದು ಹೇಗೆ ಶುರುವಾಯ್ತು?

ನಾನು ಅಕ್ಷರದ ಸೆಳೆತಕ್ಕೆ ಸಿಕ್ಕಿದ್ದು ಬಹಳ ಹಿಂದೆ. ಬಹುಶಃ ಹೈಸ್ಕೂಲಿನಲ್ಲಿದ್ದಾಗ ಎಂದು ಕಾಣುತ್ತದೆ. ಆಗಲೇ ನಾನು `ಚಂದಮಾಮ’ದ ಕಥೆಗಳಿಂದ ಪ್ರಭಾವಿತನಾಗಿ, ಅವುಗಳನ್ನು ಅನುಕರಿಸಿ ಕಥೆಗಳನ್ನು ಬರೆಯುತ್ತಿದ್ದೆ. ಆಮೇಲಷ್ಟೇ ಪ್ರಬಂಧ, ಕವಿತೆಗಳನ್ನು ಬರೆಯಲು ಶುರುಮಾಡಿದ್ದು, ಆನಂತರ ಕಥೆಗಳನ್ನು ಬರೆಯಲು ಶುರುಮಾಡಿದ್ದು ಇತ್ತೀಚೆಗಷ್ಚೇ. ಪ್ರೀತಿ, ಹರೆಯ ಹೇಗೆ ಶುರುವಾಯಿತು ಎಂದು ಹೇಳಲು ಸಾಧ್ಯವಿಲ್ಲವೋ ಹಾಗೆಯೇ ಅಕ್ಷರದ ಮೋಡಿಗೆ ಸಿಲುಕಿಕೊಂಡದ್ದನ್ನು ಹೇಳುವುದು ಅಸಾಧ್ಯ.
ಒಂದು ಹಂತ ದಾಟಿದ ಮೇಲೆ ಬರವಣಿಗೆ ಎನ್ನುವುದು ಅನಿವಾರ್ಯವಾಗುತ್ತದೆ. ಅದರ ಹಿಡಿತದಿಂದ ಬಿಡಿಸಿಕೊಳ್ಳುವುದು ಕಷ್ಟ. ಬರವಣಿಗೆ ಖುಷಿಗೆ ತಮ್ಮನ್ನು ಕೊಟ್ಟುಕೊಂಡ ಎಲ್ಲ ಲೇಖಕರ ಪಾಡು ಕೂಡ ಬಹುಷಃ ಇದೇ.

ವ್ಯವಧಾನವೇ ಇಲ್ಲದ ವೃತ್ತಿ, ಧ್ಯಾನಬಯಸುವ ಪ್ರವೃತ್ತಿ, ಇವುಗಳ ನಡುವೆ ನಿಮ್ಮನ್ನು ನೀವು ಹೇಗೆ ಕಾಣುತ್ತೀರಿ?

ಸಂತೆಯಲ್ಲಿ ಸಂತನಾಗುವುದೆಂದರೆ ಇದೇ ಇರಬೇಕು! ತೀವ್ರ ಚಡಪಡಿಕೆಯ ಮನಸ್ಥಿತಿ ಇದ್ದಾಗಲೇ ನಿಮಗೆ ಒಳ್ಳೆಯದನ್ನು ಬರೆಯಲು ಸಾಧ್ಯ. ವ್ಯವಧಾನ ಇಲ್ಲದ ಈ ವೃತ್ತಿಯ ನಡುವೆಯೇ ನನ್ನದೇ ಆದ ಸ್ಪೇಸ್ ಅನ್ನು, ಜಗತ್ತನ್ನು, ಸಮಯವನ್ನು ಕಲ್ಪಿಸಿಕೊಳ್ಳುವುದೇ ಧ್ಯಾನಸ್ಥನಾಗುವುದಕ್ಕೆ ಒಳ್ಳೆಯ ದಾರಿ, ಉಪಾಯ ಎಂದು ನನಗನಿಸುತ್ತದೆ. ಹಾಗೆಂದು ಪೂರ್ತಿ ಬಿಡುವು ಸಾಕಷ್ಟು ಸಮಯ ನಿಮಗಿದೆ ಎಂದರೂ ಬರೆಯಲು ಸಾಧ್ಯವಾಗುತ್ತದೆಯೇ ಎಂಬುದು ನನಗೆ ಅನುಮಾನ. ದೈನಿಕದ ಕೆಲಸಗಳ ನಡುವೆಯೇ ಬೇರೆ ಏನನ್ನೂ ಮೂಡಿಸಲು ಪ್ರಯತ್ನಿಸುವುದು ಒಬ್ಬ ಪತ್ರಕರ್ತನ ವೃತ್ತಿಯಲ್ಲಿರುವ ಬರಹಗಾರನಿಗೆ ಸಾಧ್ಯವಾಗಬೇಕು. ಹಾಗಿದ್ದಾಗಲೇ ಬದುಕಿನಿಂದ ಹೊರತಾಗಿರುವ ಸಾಹಿತ್ಯ ಬರುತ್ತದೆ

ನಿಮ್ಮ ಕವಿತೆಗಳನ್ನು ಓದುವಾಗ ಮುಖಕ್ಕೆ ಮಂಜು ಮುತ್ತಿದ ಹಿತ. ಅಷ್ಟೊಂದು ಆದ್ರ್ರತೆಗೆ ಕಾರಣವೇನು?

ನನ್ನ ಕವಿತೆ ನನ್ನ ಹಾಗೆ ಎನ್ನಬಹುದು. ಅಂಥ ನಿದರ್ಿಷ್ಟ ಕಾರಣವೇನೂ ಇಲ್ಲ, ನಾನು ಕವಿತೆಗಳಲ್ಲಿ ಪ್ರಯೋಗಗಳನ್ನು ನಡೆಸುತ್ತಿದ್ದಾಗ ನೀವು ಹೇಳುವ ಆದ್ರ್ರತೆ ಎನ್ನುವುದು ಕವಿತೆಗಳ ಒಂದು ಲಕ್ಷಣವಾಗಿ ಬಂದಿರಬಹುದೇನೋ.

ಕವಿತೆ ಒಂದು ರೂಪಕ ಅನ್ನೋದಾದರೆ, ಕತೆ ಏನು ಅನ್ನಿಸುತ್ತೆ?

ಕವಿತೆಯನ್ನು ಕೇವಲ ರೂಪಕ್ಕೆ ಸೀಮಿತಗೊಳಿಸುವುದು ಬೇಡ. ಆದರೂ ಕವಿತೆ ಜಗತ್ತಿಗೆ ರೂಪಕವಾದರೆ, ಕಥೆ ಎನ್ನುವುದು ಬದುಕಿಗೆ ಪ್ರತಿಮೆ ಎನ್ನಬಹುದು.

ಕನ್ನಡ ಕತೆಗಳಲ್ಲಿ ಏನಾದರೂ ಹೊಸತನ ಕಾಣಿಸುತ್ತಿದೆಯೇ?

ಕನ್ನಡ ಕಥೆಗಳಲ್ಲಿ ಅಂಥ ಹೊಸತನ ನನಗೆ ಕಾಣುತ್ತಿಲ್ಲ. ಏಕೆಂದರೆ, ಸರಳವಾಗಿ ಹೇಳಬೇಕಂದರೆ ಈ ಕಥೆಗಳಲ್ಲಿ ಬೇರೆಯ ಅನುಭವದ ಜಗತ್ತಿದೆ. ಇದನ್ನು ಓದದಿದ್ದರೆ ಬೇರೆ ಏನನ್ನೂ ಕಳೆದುಕೊಳ್ಳುತ್ತೇನೆ ಎಂಬಂಥ ತೀವ್ರವಾಗಿ ಓದಲೇ ಬೇಕೆನಿಸುವ ಹೊಸಕಥೆಗಳು ನನಗೆ ಕಾಣುತ್ತಿಲ್ಲ. ಹೊಸತನ ಎನ್ನುವುದು ಬೇರೆಯದೇ ಆದ ಅನುಭವದ ಮಂಡನೆ, ಅಭಿವ್ಯಕ್ತಿ ಕ್ರಮದಿಂದ ಬರುತ್ತದೆ ಎಂದುಕೊಂಡಿದ್ದೇನೆ. ಈಗಲೂ ನಾನು ಓದುವುದು ಮಾಸ್ತಿ, ಚಿತ್ತಾಲ, ಲಂಕೇಶ್, ತೇಜಸ್ವಿ, ಶಾಂತಿನಾಥ ದೇಸಾಯಿ, ಜಯಂತ ಕಾಯ್ಕಿಣಿ ಈ ಲೇಖಕರನ್ನೇ. ಅಂದರೆ ಈಗಲೂ, ಪ್ರತಿ ಬಾರಿ ಓದಿದಾಗಲೂ ಈ ಲೇಖಕರು ಮಂಡಿಸುವ ಲೋಕ ಹೊಸತಾಗಿಯೇ ನನಗೆ ಕಾಣುತ್ತದೆ. ಆದರೆ ಇತ್ತೀಚಿನ ಲೇಖಕರ ಕಥೆಗಳು ಇತ್ತೀಚೆಗೆ ಬರೆದವು ಎನ್ನುವುದನ್ನು ಬಿಟ್ಟರೆ ಹೊಸತಾಗೇನೂ ಕಂಡಿಲ್ಲ.

ಇವತ್ತಿನ ಬರಹಗಾರರನ್ನು ತೀವ್ರವಾಗಿ ಕಾಡುವ ಸಂಗತಿ ಯಾವುದಿರಬಹುದು?

ಯಾವ ಯಾವ ಲೇಖಕರಿಗೆ ಏನೇನು ಕಾಡುತ್ತದೆ ಎಂಬುದನ್ನು ನಾನು ಹೇಗೆ ಹೇಳುವುದು! ಎಲ್ಲರಿಗೂ ಅವರಿಗೆ ಪ್ರೀತಿಯುಂಟು ಮಾಡುವಂಥದ್ದು ಈ ಒಂದೇ ಬದುಕಿನಲ್ಲಿ ಕಾಡುವಂಥಾಗಲಿ, ಅದನ್ನು ತಮ್ಮ ಬರಹಗಳ ಮೂಲಕ ನಮ್ಮಂಥ ಓದುಗರಿಗೆ ಅವರು ಹೇಳುವಂತಾಗಲಿ.

ನಿಮ್ಮ ಕತೆ, ಕವಿತೆಗಳಲ್ಲಿ ಮಾರ್ದನಿಸುವ ಒಂದು ದನಿ…

ನನ್ನ ಕಥೆ ಕವಿತೆಗಳಲ್ಲಿ ಮಾರ್ದನಿಸುವ ಒಂದೇ ದನಿ ಯಾವುದೆಂದು ಹೇಳುವುದು ಸದ್ಯಕ್ಕೆ ಕಷ್ಟವಾಗುತ್ತದೆ. ಏಕೆಂದರೆ ಅವನ್ನೆಲ್ಲ ನಾನು ಒಟ್ಟಾಗಿ ಓದಿಲ್ಲದಿರುವುದರಿಂದ ಈ ಪ್ರಶ್ನೆಗೆ ಅವುಗಳನ್ನು ಓದಿ ಉತ್ತರ ಹೇಳಬೇಕಾಗುತ್ತದೆನೋ!

ಥಟ್ಟನೆ ಕತೆ ಎಂದರೆ ಏನು ನೆನಪಾಗುತ್ತೆ? ಕವಿತೆ ಎಂದರೆ ಯಾರು ನೆನಪಾಗುತ್ತಾರೆ?

ಕಥೆ ಎಂದರೆ… ಪಾತಿ ದೋಣಿ, ಹೊಳೆ ದಾಟುವ ತಾರಿ, ಬೇಣ, ಹಕ್ಕಲು, ಅಂಕೋಲೆ ಬಂಡಿಹಬ್ಬ, ಊರಿನ ಓಣಿಗಳು, ಮೀನು, ಪೇಟೆ, ಗನರ್ಾಲು ಸಾಹೇಬ, ಹೆದ್ದಾರಿಯಲ್ಲಿ ಹಾಯುತ್ತಲೇ ಇರುವ ವಾಹನಗಳು, ಮಳೆಗಾಲದಲ್ಲಿ ರುಮುಗುಡುವ ಸಮುದ್ರ ಜನರ ಮಾತೇ ಕೇಳಿಸದ ಮನೆಗಳು ಇನ್ನೂ ಏನೇನೋ ನೆನಪಾಗುತ್ತದೆ. ಕವಿತೆ ಎಂದೊಡನೆ ದಿನಕರ ದೇಸಾಯಿ, ಗಂಗಾಧರ ಚಿತ್ತಾಲ, ಜಯಂತ ಕಾಯ್ಕಿಣಿ ನೆನಪಾಗುತ್ತಾರೆ.

ತುಂಬಾ ಇಷ್ಟಪಡುವ ನಿಮ್ಮದೇ ಪದ್ಯ..

ಈವರೆಗೆ ಬರೆದವುಗಳಲ್ಲಿ ಬಹುಶಃ ಯಾವುದೂ ಇಲ್ಲ ಎಂದು ಕಾಣುತ್ತದೆ. ಮುಂದೆ ನಾನು ಬರೆಯಲಿರುವ ಕವಿತೆಯೇ ನನಗೆ ಇಷ್ಚವಾಗಬಹುದಾದ ಕವಿತೆ. ಅಂದರೆ, ನನಗೆ ಪ್ರಿಯವಾಗುವ ಕವಿತೆ ಭವಿಷ್ಯದಲ್ಲಿದೆ.