ಸನ್ನಿಧಾನದಲ್ಲಿ ಜಗದೀಶ್ ಕೊಪ್ಪ

1942ರಲ್ಲಿ ನಮ್ಮೂರು ಕೊಪ್ಪದಲ್ಲಿ ಪೊಲೀಸ್ ಸ್ಟೇಷನ್ ಆರಂಭವಾಗಿದ್ದು. ಇದುವರೆಗೂ ಅಲ್ಲಿ ಜಾತಿ ಹೆಸರಿನಲ್ಲಿ ಗಲಾಟೆ, ಸಂಘರ್ಷ ಅಂತ ಒಂದು ಕೇಸೂ ದಾಖಲಾಗಿಲ್ಲ. ನನ್ನೂರಿನ ಜನ ಜಾತಿ, ಧರ್ಮ ಎಲ್ಲ ಮರೆತು ಬೆರೆತು ಬದುಕುತ್ತಿರುವವರು’
ಅಂಥ ಸಾಮರಸ್ಯ, ಸೌಹಾರ್ದತೆಯ ವಾತಾವರಣದಲ್ಲಿ ಬೆಳೆದೆ ಎಂದು ಕವಿ, ಲೇಖಕ ಜಗದೀಶ್ ಕೊಪ್ಪ ನೆನಪಿಸಿಕೊಳ್ಳುತ್ತಾರೆ. ಇದೇ ಕಾರಣಕ್ಕೆ ಇವರ ಸಂವೇದನೆ ಮನುಷ್ಯತ್ವವನ್ನು ಹುಡುಕಾಡುತ್ತದೆ. ಪ್ರೀತಿಯೊಂದೇ ಎಲ್ಲವನ್ನು ಬೆಸೆಯುತ್ತದೆ ಎಂದು ಪ್ರತಿಪಾದಿಸುತ್ತದೆ. ಕಾಶ್ಮೀರದ ಹಾಡುಗಳು, ಉಮರ್ ಖಯ್ಯಾಮನ ಪದ್ಯಗಳು, ಮಿಜರ್ಾ ಗಾಲಿಬ್ ಕಥನ-ಕಾವ್ಯ ಕೃತಿಗಳು ಅಂಥದ್ದೇ ಪ್ರಯತ್ನದ ಫಲ. ಗ್ರಾಮಗಳು ಮಾತ್ರ ಎಲ್ಲ ಎಲ್ಲೆಯನ್ನು ಮೀರಿ ನಿಲ್ಲುತ್ತವೆ ಎಂದು ನಂಬಿರುವ ಕೊಪ್ಪ ಅಕ್ಷರ ಕಲಿತವರ ಸಂಕುಚಿತತೆಯ ಬಗ್ಗೆ ಬೇಸರ ವ್ಯಕ್ತಪಡಿಸುತ್ತಾರೆ. ಕೊಪ್ಪ ಅವರ ಕೊಪ್ಪರಿಗೆ ತುಂಬಾ ತುಂಬಿರುವ ಸಮಾಜಮುಖಿ ಸಂವೇದನೆಯ ಬಗ್ಗೆ, ಕವಿತೆಗಳ ಬಗ್ಗೆ ನಾಲ್ಕು ಮಾತು…

ನೀವೇಕೆ ಬರೆಯುತ್ತೀರಿ?
ಬರವಣಿಗೆಯಿಂದ ಜಗತ್ತೇ ಬದಲಾಗಬಲ್ಲದು ಎಂಬ ಭ್ರಮೆ ನನಗಿಲ್ಲ. ಆದರೆ ಸಮಾನ ಮನಸ್ಕ ಓದುಗರೊಂದಿಗೆ ಆಪ್ತ ಸಂವಾದ ಸಾಧ್ಯ ಎಂದು ನಂಬಿದವನು.

ಇಷ್ಟು ದಿನಗಳಿಂದ ಬರೆಯುತ್ತಿದ್ದೀರಿ. ಆಗಾಗ್ಗೆ ನೆನಪಾಗುವ ಹಾಗೂ ಇಂದಿಗೂ ಕಾಡುತ್ತಲೇ ಇರುವ ಒಂದು ಘಟನೆ?
ಅದು 1986ರ ಜುಲೈ ತಿಂಗಳು. ವಾರ ಪತ್ರಿಕೆಯೊಂದರ ಉಪಸಂಪಾದಕನಾಗಿದ್ದೆ. ಅಹಮದಾಬಾದ್ ನಗರದ ರಥಯಾತ್ರೆಯ ಸಂದರ್ಭದಲ್ಲಿ ಕೋಮುಗಲಭೆ ಸಂಭವಿಸಿ 17 ಮಂದಿ ಗೋಲಿಬಾರ್ನಲ್ಲಿ ಮೃತಪಟ್ಟಿದ್ದರು. ಒಂದು ವಾರ ವಿಧಿಸಿದ ನಿಷೇಧಾಜ್ಞೆಯಲ್ಲಿ ನಾನು ಸಿಕ್ಕಿಕೊಂಡಿದ್ದೆ. ಅಲ್ಲಿನ ರಿಪ್ಲಿಕಾ ರಸ್ತೆಯೊಂದರ ಹನುಮಾನ್ ದೇವಸ್ಥಾನದ ಬಳಿ ಎಣ್ಣೆ ತುಂಬಿದ ಮಣ್ಣಿನ ಹಣತೆ ಮತ್ತು ಬತ್ತಿ ಮಾರುತ್ತಿದ್ದ ಮುಸ್ಲಿಂ ವೃದ್ಧನನ್ನು ಪೊಲೀಸರು ಹೊಡೆದು ಓಡಿಸುತ್ತಿದ್ದರು. ಆ ಸಂದರ್ಭದಲ್ಲಿ ಪೊಲೀಸರನ್ನು ತಡೆದು, ಗಲಭೆಯ ವೇಳೆಯಲ್ಲಿ ಇಂಥ ಸಾಹಸವೇಕೆ ಎಂದು ನಾನು ಆ ವೃದ್ಧನನ್ನು ಪ್ರಶ್ನಿಸಿದೆ, ಆತ ಕೊಟ್ಟರ ಉತ್ತರ ಹೀಗಿತ್ತು:
`ಸಾಬ್ ಇಡೀ ನನ್ನ ಕುಟುಂಬ ತಲೆ ತಲಾಂತರಗಳಿಂದ ಈ ದೇವಸ್ಥಾನದ ಬಳಿ ಎಣ್ಣೆ, ಬತ್ತಿ ಮಾರಿ ಬದುಕುಕಟ್ಟಿಕೊಂಡಿದೆ. ಐದು ದಿನಗಳಿಂದ ಮನೆಯಲ್ಲಿ ಒಲೆ ಹಚ್ಚಿಲ್ಲ. ಬಾಣಂತಿ ಮಗಳಿದ್ದಾಳೆ. ಇವುಗಳನ್ನು ಇಲ್ಲಿ ಮಾರಬೇಡವೆಂದರೆ ನಾನು ಎಲ್ಲಿಗೆ ಹೋಗಲಿ?’. 23 ವರ್ಷಗಳ ಹಿಂದೆ ಆತ ಕೇಳಿದ ಪ್ರಶ್ನೆಗೆ ನಾನು ಇನ್ನೂ ಉತ್ತರ ಕಂಡುಕೊಂಡಿಲ್ಲ.

ಧರ್ಮದ ಬಗ್ಗೆ, ಜಾತಿಯ ಬಗ್ಗೆ ಮಾತನಾಡುವುದು ಅಪಮಾನಕರ ಎಂಬ ಕ್ಷಣಗಳಲ್ಲಿದ್ದೇನೆ ಎಂದು ನಿಮ್ಮ ಕೃತಿಯೊಂದರಲ್ಲಿ ಹೇಳಿಕೊಂಡಿದ್ದೀರಿ. ಇಂಥ ಹೊತ್ತಲ್ಲಿ ಉಮರ್ ಖಯ್ಯಾಮ್, ಮಿಜರ್ಾ ಗಾಲಿಬ್ ಅನುವಾದ ಮಹತ್ವ ಏನು?
ಸದ್ಯದ ಸ್ಥಿತಿಯಲ್ಲಿ ಜಾತಿ ಮತ್ತು ಧರ್ಮಕ್ಕೂ, ಮಾರಾಟದ ಸರಕುಗಳಿಗೂ ಅಂಥ ವ್ಯತ್ಯಾಸಗಳಿಲ್ಲ. ಮನುಷ್ಯನ ವಿಕಾರ ಮತ್ತು ವಿಕೃತಿಗಳಿಗೆ ಇವು ಈಗ ಗುರಾಣಿಯಾಗಿವೆ. ಇಂಥ ಸ್ಥಿತಿಯಲ್ಲಿ ಧರ್ಮ ಮತ್ತು ಜಾತಿಯ ಗಡಿರೇಖೆಯನ್ನು ಉಲ್ಲಂಘಿಸಿದ ಉಮರ್ ಖಯ್ಯಾಮ್, ಮಿರ್ಜಾ ಗಾಲಿಬ್, ಇವರ ಮೂಲಕ ಧರ್ಮದಾಚೆಗೂ ಕೂಡ ಬದುಕಬಹುದಾದ ಅರ್ಥಪೂರ್ಣ ಬದುಕಿದೆ ಎಂಬುದನ್ನು ಕಂಡುಕೊಳ್ಳುವ ಪ್ರಯತ್ನವೇ ಈ ಅನುವಾದ.

ಉಪಮೆ, ರೂಪಕಗಳಿಂದ ಕೂಡಿದ ಕಾವ್ಯ ಎಲ್ಲದಕ್ಕೂ ಉತ್ತರವಾಗಬಲ್ಲದೆ? ನಿಮಗೆ ಹಾಗನ್ನಿಸುವುದೇ?
ಕವಿ ಮಿತ್ರ ಪೀರ್ ಬಾಷಾನ ಕವಿತೆಯ ಈ ಸಾಲುಗಳು ನಿಮ್ಮ ಪ್ರಶ್ನೆಗೆ ಉತ್ತರವಾಗಬಲ್ಲದು…
ಅಕ್ಕ ಸೀತಾ ನಿನ್ನಂತೆ ನಾನು ಶಂಕಿತನೆ
ನೀನು ಪಾತಿವ್ರತ್ಯಕ್ಕೆ, ನಾನು ದೇಶ ಭಕ್ತಿಗೆ
ಪ್ರತಿ ದಿನ ಇಲ್ಲಿ ಕೊಂಡ ಹಾಯಬೇಕು..

ಸದ್ಯದ ಪದ್ಯಗಳ ಬಗ್ಗೆ ನಿಮ್ಮ ಮಾತು..
ಭಾಷೆಯ ಬೇಧವಿಲ್ಲದೆ ವರ್ತಮಾನದ ತಲ್ಲಣಗಳಿಗೆ ಪರಿಣಾಮಕಾರಿಯಾಗಿ ಪ್ರತಿಕ್ರಿಯಿಸುತ್ತಿರುವ ಸಾಹಿತ್ಯದ ಪ್ರಕಾರಗಳಲ್ಲಿ ಕಾವ್ಯ ಮುಂಚೂಣಿಯಲ್ಲಿದೆ. ಯಾಕಂದ್ರೆ ಕಾವ್ಯ ಅತಿ ಬೇಗ, ಅತ್ಯಂತ ಪರಿಣಾಮಕಾರಿಯಾಗಿ ಸ್ಪಂದಿಸುತ್ತದೆ.

ಕವಿತೆ ಅಂದರೆ ನಿಮ್ಮ ಪಾಲಿಗೆ…
ಹೃದಯದ ಗಾಯಕ್ಕೆ ತಣ್ಣನೆಯ ಮುಲಾಮು…
*****

ಆಯ್ದ ಸಾಲುಗಳು…

ನಿಜ ಹೇಳಬೇಕೆಂದರೆ
ನಾನು ಮಸೀದಿಗೆ ಬಂದದ್ದು
ದೇವರ ಪ್ರಾರ್ಥನೆಗಲ್ಲ
ಇಲ್ಲಿಂದ ಕದ್ದೊಯ್ದಿದ್ದ
ಹಾಸುಗಂಬಳಿ ಈಗ
ಹಳತಾಗಿದೆ ಅದಕೆ..
(ಉಮರ್ ಖಯ್ಯಾಮ್)

ದಯಾಮಯನಾದ
ಓ ಸೃಷ್ಟಿಕರ್ತನೆ
ನೀನು ಕುಡಿಯಲಿಲ್ಲ
ಇತರರಿಗೂ ಕುಡಿಸಲಿಲ್ಲ
ಸ್ವರ್ಗ ಲೋಕದಲ್ಲಿರುವ
ನಿನ್ನ ಮಧುರಸಕ್ಕೆ
ಪಾವಿತ್ರ್ಯತೆ ಎಲ್ಲಿಂದ ಬಂತು?
(ಗಾಲಿಬ್)

(ಇದು ಅಲೆಮಾರಿಯ ಸನ್ನಿಧಾನದಿಂದ ಹೆಕ್ಕಿ ತಂದ ಸಂದರ್ಶನ)

ಏ ಗಾಳಿ, ಆ ಕಥೆಯನೊರೆದು ಮುಂದಕೆ ತೆರಳು…

ಈ ಕೆಳಗೆ ನೀಡಲಾಗಿರುವುದು ಯರ್ಮುಂಜ ರಾಮಚಂದ್ರರ ಕವಿತೆ. ‘ಸುವರ್ಣ ಸಂಪುಟ’ದಲ್ಲಿ ಇವರ ಬಗ್ಗೆ ಯರ್ಮುಂಜ ರಾಮಚಂದ್ರ, 9.02.1933- 10.1.1955 , ವಿದಾಯ ಮತ್ತು ಚಿಕಿತ್ಸೆಯ ಹುಚ್ಚು ಮತ್ತು ಇತರ ಕಥೆಗಳು ಪ್ರಮುಖ ಕೃತಿಗಳು ಎಂದಷ್ಟೆ ಇದೆ.  ಉಳಿದ ಮಾಹಿತಿ ಕಲೆಹಾಕುವಲ್ಲೆ ಸೋತೆ.

ಯಾರಿಲ್ಲಿ ಬಂದರು ಕಳೆದಿರುಳು !?

ಯಾರಿಲ್ಲಿಗೆ ಬಂದರು ಕಳೆದಿರುಳು
ಏ ಗಾಳಿ,

ಆ ಕಥೆಯನೊರೆದು ಮುಂದಕೆ ತೆರಳು
ನೆನೆದು ನೆನೆದು ತನು ಪುಳಕಗೊಳ್ಳುತಿದೆ
ನುಡಿವೆನೆ ದನಿ ನಡಗುತಿದೆ.
ಸ್ಮೃತಿ ವಿಸ್ಮೃತಿಗಳ ಕಂಬನಿ ಮಾಅಲೆ
ಎಲ್ಲೆಲ್ಲೂ ತೂಗುತಿದೆ
ಕಳೆದಿರುಳಿನ ಬೆಳದಿಂಗಳ ಮರೆಯಲಿ
ಏನೂ ಅರಿಯದ ಮುಗ್ಧೆಯ ಕಿವಿಯಲಿ
ಯಾರೇನನು ಪಿಸು ನುಡಿದರು ಹೇಳು
ಏ ಗಾಳಿ,

ಆ ಕಥೆಯನೊರೆದು ಮುಂದಕೆ ತೆರಳು.
ನಸುಕಿನ ಬೆಳಕಿನೊಳೆಂಥ ಬಳಲಿಕೆ
ಮೂಡಲ ಹಣೆ ಕಡುಗೆಂಪು!
ಮರ ಮರದೆಡೆಯಲಿ ಕೂಕು ಆಟ
ಭೂಮಿಗೆ ಮೈಮರೆವು
ಅಲ್ಲಿ ಇಲ್ಲಿ ಗಿಡಬಳ್ಳಿ ಮರಗಳು
ಯಾವ ನೆನಪಿನಲೊ ಮೈಮರೆತಿಹವು
ಹೃದಯದೊಳೇನನು ಎರೆದರು ಕೊರೆದರು?
ಏ ಗಾಳಿ,

ಆ ಕಥೆಯನೊರೆದು ಮುಂದಕೆ ತೆರಳು.
ಮೈಯೆಲ್ಲ ಗಡಗುಟ್ಟುತಲಿದೆಯೇ
ಬೆದರಿಸಿದವರಾರು?
ಮುಖ ತೊಯ್ದಿದೆ, ಕಣ್ಣೀರಿನ ಹನಿಯನು
ಹರಿಯಿಸಿದವರಾರು?
ಯಾರೂ ಕಾಣದ ಆ ಮರೆಯೊಳಗೆ
ಕುಲುಕುಲು ಎನುತಿದೆ ಮೆಲುನಗೆಯ ನೊರೆ
ನಿನ್ನೆಯ ಹಾಡಿನ ದನಿಯಿನ್ನೂ ಗುಣು-
ಗುಣಿಸುವ ಮಾಯೆಯಿದೆಂಥದು ಹೇಳು
ಏ ಗಾಳಿ,
ಆ ಕಥೆಯನೊರೆದು ಮುಂದಕೆ ತೆರಳು.

ತೇಜಸ್ವಿ ಚಿಂತನೆಗಳು

ಪೂರ್ಣಚಂದ್ರ ತೇಜಸ್ವಿ, ಇಂದಿನ ತಲೆಮಾರಿನ ಬಹುತೇಕ ಬರಹಗಾರರ ಹಾಗೇ ಓದುಗರ ಅತ್ಯಂತ ಪ್ರೀತಿಯ ಲೇಖಕ. ಸುಮ್ಮನೆ ಅಲ್ಲ, ಈ ಜನಪ್ರೀತಿಗೆ ಅವರು ತಕ್ಕವರು ಕೂಡ. ತೇಜಸ್ವಿ ಚಿಂತನೆಗಳು, ನೇರವಂತಿಕೆ, ಜೀವನೋತ್ಸಾಹ, ಪ್ರಯೋಗಶೀಲತೆ, ಬರಹದ ಧಾಟಿ- ಎಲ್ಲವೂ ವಿಶಿಷ್ಟ ಮತ್ತು ಆಪ್ತ. ಭಾರೀ ಭಾರೀ ಶಬ್ದಗಳ ವಜೆಯಿಲ್ಲದೆ ಸಾಮಾನ್ಯರಿಗೂ ಸುಲಭವಾಗಿ ಅರ್ಥವಾಗಬಲ್ಲಷ್ಟು ಸರಾಗ.

ತೇಜಸ್ವಿ ಲೇಖನಗಳು ಹಾಗೂ ಸಂದರ್ಶನಗಳ ಸಂಕಲನ ‘ವಿಮರ್ಶೆಯ ವಿಮರ್ಶೆ’ ಓದುವಾಗ, ಅದರಲ್ಲಿನ ಕೆಲ ಭಾಗಗಳನ್ನು ಇಲ್ಲಿ ಹಾಕಿದರೆ ಚೆನ್ನ ಎನಿಸಿತು.  ಅದರಲ್ಲೂ ಸಂದರ್ಶನದ ಭಾಗಗಳನ್ನು. ಸಾಹಿತ್ಯ ಎಂದರೆ, ಸಾಹಿತಿ ಎಂದರೆ ಕೇವಲ ಕಥೆ- ಕವನಗಳ ಓದು ಮತ್ತು ಬರಹವಲ್ಲ ಅನ್ನೋದು ನನ್ನ ಆಲೋಚನೆ. ಸಮಾಜಮುಖಿಯೂ ಪ್ರಗತಿಶೀಲವೂ ಆಗಿರುವ ಕಳಕಳಿಯುಳ್ಳ ಸಾಹಿತ್ಯ ದೀರ್ಘಕಾಲ ಬಾಳುತ್ತದೆ ಮತ್ತು ಅಂಥ ಸಾಹಿತಿ ದೀರ್ಘಾಯುಷಿಯಾಗಿರುತ್ತಾನೆ. ನಮ್ಮ ನಮ್ಮ ಓದಿನ ಸುಖಕ್ಕೆ, ಆ ಹೊತ್ತಿನ ಸಂತೋಷಕ್ಕೆ ಬರೆದುಕೊಳ್ಳುವುದು ತಪ್ಪೇನಲ್ಲ. ಆದರೆ, ಅದರ ಒಟ್ಟಾರೆ ಕೊಡುಗೆ ಬಹಳ ದಿನ ಉಳಿಯುವಂಥದಲ್ಲ ಎಂದೆಲ್ಲ ಚಿಂತಿಸುವ ಈ ಭಾಷಣ ಒತ್ತಟ್ಟಿಗಿರಲಿ, ತೇಜಸ್ವಿಯವರ ಸಂದರ್ಶನದ ಈ ಭಾಗವನ್ನೋದಿ. ಕಂತುಗಳಲ್ಲಿ ಇದರ ಪೂರ್ಣ ಪಾಠವನ್ನು ಹಾಕಲಾಗುವುದು.

(9 ಮೇ, 2007ರ ಲಂಕೇಶ್ ಪತ್ರಿಕೆಯಲ್ಲಿ ಪ್ರಕಟವಾದ ಸಂದರ್ಶನ)

ಪ್ರ: ಕಾರಂತರ ಜೀವನ, ‘ಕುವೆಂಪು ಕಲಾ ಸೃಷ್ಟಿ’, ಲೋಹಿಯಾರ ತತ್ತ್ವ ಚಿಂತನೆ- ಈ ಮೂರು ನಿಮ್ಮ ಬರವಣಿಗೆಗೆ ಸಹಾಯಕವಾಗುವ ದಿಕ್ಸೂಚಿಗಳು ಅಂದಿದ್ದೀರಿ. ಇವತ್ತಿಗೂ ಈ ಅಂಶಗಳನ್ನು ಸಮರ್ಥಿಸುತ್ತೀರ?

ಪೂಚಂತೇ: ಕಾರಂತರ ಜೀವನದ ಪ್ರಯೋಗಶೀಲತೆ, ಕುವೆಂಪುರವ್ರ ಕಲಾ ಸೃಷ್ಟಿ, ಲೋಹಿಯಾ ತತ್ತ್ವ ಚಿಂತನೆ. ಇವು ಮೂರೂ ನನ್ನ ಮುಂದಿನ ಬರವಣಿಗೆಯ ದಿಕ್ಸೂಚಿಗಳೆಂದು ಅವತ್ತು ನಾನು ಹೇಳಿದ್ದು. ಈ ಮೂರು ಅಂಶಗಳ ಪ್ರಭಾವ ನನ್ನ ಬರವಣಿಗೆಯಲ್ಲೂ, ಬದುಕಿನಲ್ಲೂ ಇವತ್ತಿಗೂ ನೀವು ಕಾಣಬಹುದಲ್ಲವೆ? ಭಾರತದ ತತ್ತ್ವಶಾಸ್ತ್ರ ಪರಂಪರೆ ಆಯಾ ಜಾತಿಯಲ್ಲ್ ಮತ್ತು ಮಠಗಳ ದೆಸೆಯಿಂದ ಬಹು ಹಿಂದೆಯೇ ಕೊನೆಯುಸಿರೆಳೆದವು. ರಾಧಾಕೃಷ್ಣನ್, ಹಿರಿಯಣ್ಣಯ್ಯ ಇವರನ್ನೆಲ್ಲ ತತ್ತ್ವಜ್ಞಾನಿಗಳೆಂದು ಹೊಗಳುತ್ತಾರೆ. ಇವರನ್ನೆಲ್ಲ ಬಾಷ್ಯಕಾರರೆಂದು ಕರೆಯಬಹುದೆ ವಿನಾ ತತ್ತ್ವ ಮೀಮಾಂಸಕರೆಂದು ಕರೆಯಲು ಸಾಧ್ಯವಿಲ್ಲ. ಭಾರತದ ಈಚಿನ ವರ್ಷಗಳಲ್ಲಿ ಸೃಷ್ಟಿಸಿದ ಒರಿಜಿನಲ್ ತತ್ತ್ವ ಮೀಮಾಂಸಕ ಎಂದರೆ ಲೋಹಿಯಾ ಎಂದೇ ನನ್ನ ಭಾವನೆ. ಗಾಂಧೀಜಿಯ ಧ್ಯೇಯ ಧೋರಣೆಗಳನ್ನು ತಾತ್ತ್ವಿಕ ದೃಷ್ಟಿ ಕೋನದಿಂದ ಚರ್ಚಿಸಿ ಅದಕ್ಕೊಂದು ಸೈದ್ಧಾಂತಿಕ ದೃಷ್ಟಿಕೋನ ನೀಡಿದ್ದೇ ಲೋಹಿಯಾ. ನಮ್ಮ ದೇಶದ ಕಳ್ಳ ಗಾಂಧೀವಾದಿಗಳನ್ನೇ ಗಾಂಧೀ ವಕ್ತಾರರೆಂದು ತಿಳಿದಿದ್ದ ನನಗೆ ಲೋಹಿಯಾ ಓದುವವರೆಗೂ ಗಾಂಧಿ ಬಗ್ಗೆ ಅಪಾರ ತಿರಸ್ಕಾರವೇ ಇತ್ತು. ಹಾಗಾಗಿ ಗಾಂಧಿ ಬಗ್ಗೆ ಇವತ್ತು ಮಾಯಾವತಿಯಾಗಲೀ ಕಾನ್ಶೀರಾಮ್ ಆಗಲೀ ತಿರಸ್ಕಾರದ ಮಾತಾಡಿದರೆ ಅದು ಸಹಜವೇ ಅನಿಸುತ್ತದೆ.

(ಮುಂದುವರೆಯುವುದು…)

ಆ ದಶಕದ ಸುತ್ತ… ~ ಅಕ್ಷತಾಳ ಹೊಸ ಪ್ರಯೋಗ

‘ಆ ದಶಕ’ ಬಿಡುಗಡೆಯಾಗಿದೆ. ನಿತ್ಯವೂ ಒಂದಲ್ಲ ಒಂದು ಹೊಸ ಪುಸ್ತಕ ಬಿಡುಗಡೆಯಾಗುವ ಈ ದಿನಗಳಲ್ಲಿ ಯಾಕೆ ಇದಕ್ಕೆ ಇಷ್ಟೊಂದು ಜಾಹೀರಾತು ಅಂದುಕೊಳ್ಳುತ್ತೀರೇನೋ? ಇದಕ್ಕೆ ಕೊಡಬಹುದಾದ  ಕಾರಣಗಳು ಮೂರು. ಮೊದಲನೆಯದಾಗಿ, ನಮಗೆ ದೊರೆಯುವ ಮಾಹಿತಿಯ ಮೇಲೆ ನಾವು ಅವಲಂಬಿತರಾಗಿರುವುದು; ಎರಡನೆಯದು ಈ ಪುಸ್ತಕದ ಮಹತ್ವ ಮತ್ತು ಕರ್ನಾಟಕ ಕಂಡ ಮಹತ್ವದ ಚಳವಳಿಯೊಂದರ ಏಳು ಬೀಳುಗಳ ಬಗ್ಗೆ ಅದರಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ವ್ಯಕ್ತಿಯೊಬ್ಬನ ಲೇಖನ ಹಾಗೂ ಪತ್ರಗಳ ಮುಖಾಂತರ ತಿಳಿದುಕೊಳ್ಳುವ ಸದವಕಾಶ; ಮೂರನೆಯದಾಗಿ ಇದು ಚಳವಳಿಗಳ ಬಗ್ಗೆ, ಹಿಂದಿನ ದಿನಗಳ ಚಳವಳಿಗಾರರ ಬಗ್ಗೆ ಏನೂ ಅರಿತಿಲ್ಲದ ಹೊಸತಲೆಮಾರಿಗೆ ಇದು ಸ್ವಾರಸ್ಯ ಧಾಟಿಯಲ್ಲೇ ಕೆಲವಷ್ಟು ಮಾಹಿತಿಗಳನ್ನು ಸಫಲವಾಗಿ ದಾಟಿಸಬಲ್ಲಂತಿದೆ ಎನ್ನುವುದು.

ಈ ಪುಸ್ತಕದ ಬೆಲೆ ಕೇವಲ 75ರುಪಾಯಿಗಳು. ಬೆಂಗಳೂರಿನಲ್ಲಿ- ಧಾರಿಣಿ, 17/18-2, ಮೊದಲನೆ ಮುಖ್ಯ ರಸ್ತೆ, ಮಾರೇನ ಹಳ್ಳಿ, ವಿಜಯನಗರ- ಇಲ್ಲಿ ದೊರೆಯುತ್ತದೆ.

ಇಲ್ಲೀಗ, ಅಹರ್ನಿಶಿಯ ಪರವಾಗಿ, ‘ಆ ದಶಕ’ ಪುಸ್ತಕದಲ್ಲಿ ಅಕ್ಷತಾ ಹೇಳಿಕೊಂಡಿರುವ ಮಾತುಗಳನ್ನು ನೀಡಲಾಗಿದೆ.

ಆ ದಶಕದ ಸುತ್ತ…

:ಮುಖಪುಟ ವಿನ್ಯಾಸ~ ಅಪಾರ:

‘ಆ ದಶಕ ಇದೊಂದು ಪ್ರಯೋಗ. ಒಂದು ದಶಕವನ್ನು ಆ ಸಂದರ್ಭದಲ್ಲಿ ಕ್ರಿಯಾಶೀಲವಾಗಿದ್ದ ವ್ಯಕ್ತಿತ್ವಗಳ ಮತ್ತು ಬರಹಗಳ ಮೂಲಕ ಕಟ್ಟಿಕೊಡುವ ಒಂದು ಪ್ರಯತ್ನ. ಇದೊಂದು ಪರಿಪೂರ್ಣ ಪ್ರಯೋಗ ಎಂದು ಹೇಳಲಾರೆ.
ಆದರೆ ನಾವು ಇದ್ದ ದಶಕದಲ್ಲಿ, ನಾವು ಹುಟ್ಟಿದ ದಶಕದಲ್ಲಿ, ನಾವಿನ್ನೂ ಹುಟ್ಟೇ ಇರದ ದಶಕದಲ್ಲಿ ಈ ಎಲ್ಲ ಚಳುವಳಿಗಳು, ಹೋರಾಟಗಳು, ವಾಗ್ವಾದ, ತಾತ್ವಿಕ ಸಂಘ?, ಕ್ಷುಲ್ಲಕ ಜಗಳ, ತಪ್ಪು ತಿಳುವಳಿಕೆಗಳು ಸಂಭವಿಸಿದ್ದವು ಎಂದು ಇಲ್ಲಿನ ಬರಹಗಳು ವಿವಿಧ ತಲೆಮಾರುಗಳಿಗೆ ನಿರೂಪಿಸುತ್ತಾ, ಆ ಸಂದರ್ಭದ ಸೊಬಗನ್ನು ಕಾಣಿಸುತ್ತವೆ ಎಂಬುದರಲ್ಲಿ ಅನುಮಾನವಿಲ್ಲ.

ದಿನಪತ್ರಿಕೆಗಳ ಕೃಷಿ ಪುರವಣಿ ಮತ್ತು ವಾಚಕರ ವಾಣಿಗಳಿಗೆ ಸಹ ಕಂಪ್ಯೂಟರ್‌ನಲ್ಲಿ ಟೈಪ್ ಮಾಡಿ ಮೇಲ್ ಮಾಡಿದರೆ ಮಾತ್ರ ಪರಿಗಣಿಸುತ್ತೇವೆ ಎಂಬ ‘ಈ ದಶಕದಲ್ಲಿ ನಾವು ಎಂಬತ್ತರ ದಶಕದ ಕಡೆ ಕಣ್ಣಾಡಿಸಿದಾಗ ‘ಆ ದಶಕದ ದೊಡ್ಡ ಸೊಬಗಾಗಿ ಕಾಣುವುದು ಕಡಿದಾಳು ಶಾಮಣ್ಣ ಎಂಬ ಹಳ್ಳಿಗಾಡಿನ (ಇವತ್ತಿಗೂ ಇವರಿರುವ ಭಗವತಿಕೆರೆ ಎಂಬ ಹಳ್ಳಿಗೆ ಓಡಾಡುವುದು ಒಂದೇ ಬಸ್. ಅದು ಸಹ ದಿನಕ್ಕೆ ಎರಡೇ ಟ್ರಿಪ್. ದಿನಪತ್ರಿಕೆ ಸಹ ಕೈಗೆ ಸಿಗುವುದು ಬೆಳಿಗ್ಗೆ ೯ ಗಂಟೆಗೆ. ಅದೂ ಬಸ್ಸಿನ ಡ್ರೈವರ್ ಕೃಪೆ ತೋರಿಸಿದರೆ. ಇಲ್ಲದಿದ್ದರೆ ಆ ದಿನದ ದಿನ ಪತ್ರಿಕೆ ಇಲ್ಲ. ಇವರ ಮನೆಯ ಸ್ಥಿರದೂರವಾಣಿ ತಿಂಗಳಲ್ಲಿ ೨೦ ದಿನ ದುರಸ್ತಿಯಲ್ಲೇ ಇರುತ್ತದೆ.)

ರೈತ, ರೈತ ಹೋರಾಟಗಾರರೊಬ್ಬರು ಆ ಸಂದರ್ಭದ ಜನಪ್ರಿಯ ಪತ್ರಿಕೆಯೊಂದಕ್ಕೆ ತಾವು ಕಂಡದ್ದನ್ನು, ತಮ್ಮ ಹೋರಾಟವನ್ನು, ತಮ್ಮ ಪರಿಸರದಲ್ಲಿ ಗ್ರಹಿಸಿದ್ದನ್ನು ಎಲ್ಲವನ್ನು ಕುರಿತು ತಮ್ಮ ಹಳ್ಳಿಯಲ್ಲೇ ಕುಳಿತೇ ನಿಯಮಿತವಾಗಿ ಬರೆಯುತ್ತಿದ್ದುದು ಮತ್ತು ಅತ್ಯುತ್ತಮವಾದ ಒಳನೋಟಗಳನ್ನುಳ್ಳ ಸಂಪಾದಕ ಲಂಕೇಶ್ ‘ಎಲ್ಲರ ವ್ಯಕ್ತಿತ್ವಗಳ ಅಭಿವ್ಯಕ್ತಿ ಇಲ್ಲಿ ಆಗಬೇಕಾಗಿದೆ ಎಂಬ ಆಶಯದೊಂದಿಗೆ ಆ ಬರಹಗಳನ್ನು ವಿಶೇಷ ಆಸ್ಥೆಯೊಂದಿಗೆ ಪ್ರಕಟಿಸುತ್ತಿದ್ದುದು.

ಈ ಪುಸ್ತಕವು ಲೇಖನ, ಸಂದರ್ಶನ, ಪತ್ರಗಳನ್ನು ಒಳಗೊಂಡಿದ್ದು, ಪ್ರಕಾರಗಳಿಗೆ ಅನುಗುಣವಾಗಿ ವಿಭಾಗಿಸದೇ ಅನುಕ್ರಮವಾಗಿ (ದಿನಾಂಕ ತಿಂಗಳು ವರ್ಷದ ಆಧಾರದಲ್ಲಿ) ಜೋಡಿಸಲಾಗಿದೆ. ಬರಹದ ಮಧ್ಯದಲ್ಲಿ ಪತ್ರವಿದೆ, ಪತ್ರದ ಮಧ್ಯದಲ್ಲಿ ದುತ್ತೆಂದು ಬರಹ ಎದಿರಾಗುತ್ತದೆ. ಪರಸ್ಪರ ಪೂರಕ, ಪ್ರೇರಕ ಮತ್ತು ಪ್ರತಿಕ್ರಿಯಾತ್ಮಕವಾಗಿ ಇಲ್ಲಿನ ಬಹುತೇಕ ಬರಹಗಳು ಪರಸ್ಪರ ಬೆಸೆದಿರುವುದರಿಂದ ಹೀಗೆ ಮಾಡಲಾಗಿದೆ.

ಮೊದಲಿಗೆ ತೇಜಸ್ವಿಗೆ ಬರೆದ ಪತ್ರ ಮತ್ತು ಲಂಕೇಶ್ ಪತ್ರಿಕೆಯಲ್ಲಿ ಪ್ರಕಟವಾದ ಶಾಮಣ್ಣನವರ ಪತ್ರಗಳಲ್ಲಿ ಎದ್ದು ಕಾಣುವ ಉತ್ಸಾಹವಿದೆ, ‘ರೈತ ಚಳುವಳಿಯ ಸೆಡ್ಡಿಗೆ ಸೆಡ್ಡು ವೃತ್ತಾಂತ ಲೇಖನ ತಲುಪಿದ ಕೂಡಲೇ ಮತ್ತು ಅದನ್ನು ಪ್ರಕಟಿಸಿದ ನಂತರದಲ್ಲಿ
ಲಂಕೇಶರು ಬರೆದ ಪತ್ರಗಳು ಮತ್ತು ಆ ಲೇಖನದಲ್ಲಿ ಸೂಚಿತವಾಗಿರುವಂತೆ ಸಂಘಟಿತ ಶಕ್ತಿಯಾಗಿ ರೈತಸಂಘ ತಲುಪಿದ ಉಚ್ಛ್ರಾಯ ಸ್ಥಿತಿಯ ದರುಶನವಿದೆ. ಆದರೆ ೧೯೮೬ರ ಹೊತ್ತಿಗೆ ‘ರೈತಸಂಘ: ಮತ್ತೆ ಚಿಗುರಿದ ಆಸೆ ಎಂದು ಶಾಮಣ್ಣ ಬರೆಯತ್ತಾರೆ. ೧೯೮೯ ರಲ್ಲಿ ರೈತಸಂಘ ಏಕಾಂಗಿಯಾಗಿ ರಾಜಕೀಯ ಶಕ್ತಿಯಾಗಲು ಸಾಧ್ಯವೇ ಇಲ್ಲ ಎಂದು ಶಾಮಣ್ಣನವರೇ ತಮ್ಮ ಸಂದರ್ಶನದಲ್ಲಿ ಹೇಳುತ್ತಾರೆ. ಶಾಮಣ್ಣನವರ ಸಂದರ್ಶನಕ್ಕೆ ತೇಜಸ್ವಿ ಮತ್ತು ಕಟ್ಟಿಮನಿಯವರ ಪತ್ರರೂಪದ ಮೌಲ್ವಿಕವಾದ ಪ್ರತಿಕ್ರಿಯೆಗಳು ಜೊತೆಗೆ ಸಂದರ್ಶನದಲ್ಲಿ ಶಾಮಣ್ಣನವರು ಆಡಿರುವ ಮಾತು ಪಥ್ಯವಾಗದೇ ರೈತಸಂಘದಿಂದ ಅವರನ್ನು ಹೊರಗೆ ಹಾಕಲು ಮಾಡಿದ ಠರಾವು ಪಾಸಿನ ಪತ್ರವೂ ಇದೆ. ಘಟನಾವಳಿಗಳ ಸರಿಯಾದ ಚಿತ್ರಣ ಲಭ್ಯವಾಗುವ ದೃಷ್ಟಿಯಿಂದಲೂ ಕಾಲಾನುಕ್ರಮದಲ್ಲಿ ಬರಹಗಳನ್ನು ಇಡಲಾಗಿದೆ.

‘ಕಡಿದಾಳು ಶಾಮಣ್ಣ ಅವರ ೮೦ರ ದಶಕದ ಬರಹ ಮತ್ತು ಪತ್ರಗಳನ್ನು ಒಳಗೊಂಡಿರುವ ಈ ಪುಸ್ತಕದ ಪ್ರಕಟಣೆಯ ಮೂಲಕ ಈಗಾಗಲೇ ‘ಮತ್ತೆ ಮತ್ತೆ ಸೀರೀಸ್ ಮೂಲಕ ಪಂಪ ಮತ್ತು ಬ್ರೆಕ್ಟ್ ಕಾವ್ಯವನ್ನು ಕೊಡುಗೆ ನೀಡಿದ (ಆ ಕೃತಿಗಳ ಲೇಖಕರಾದ ಜಿ.ಹೆಚ್. ನಾಯಕ್ ಮತ್ತು ಯು.ಆರ್. ಅನಂತಮೂರ್ತಿಯವರಿಗೆ ನಾವು
ಆಭಾರಿಗಳು) ‘ಅಹರ್ನಿಶಿ ಮತ್ತೊಂದು ಪ್ರಯತ್ನಕ್ಕೆ ಕೈ ಹಾಕಲಿದೆ. ರಾಜ್ಯದಲ್ಲಿ ನಡೆದ ಜನಪರ ಚಳುವಳಿ, ಆ ಸಂದರ್ಭದ ಮಹತ್ವದ ವ್ಯಕ್ತಿತ್ವಗಳು, ವಿದ್ಯಮಾನಗಳ ಮೂಲಕ ಆಯಾ ದಶಕವನ್ನು (೬೦, ೭೦, ೯೦ರ ದಶಕ ಹೀಗೆ) ಕಟ್ಟಿಕೊಡುವ ಆಲೋಚನೆ ನಮ್ಮದು. ‘ಆ ದಶಕ ಸೀರೀಸ್‌ನಲ್ಲಿ ಈ ಪುಸ್ತಕಗಳು ಪ್ರಕಟವಾಗುತ್ತವೆ.

ಹಿಚಿನ್ಸ್ ಹೇಳಿದ್ದು ಮತ್ತು ಬೀಚಿ ಭಯಾಗ್ರಫಿ- ಒಂದು ಗ್ರಹಿಕೆ

ಸುಪ್ರೀತ್ ಕೆ.ಎಸ್., ಇಂಜಿನಿಯರಿಂಗ್ ವಿದ್ಯಾರ್ಥಿ. ಈತನ ಓದು, ಗ್ರಹಿಕೆ, ನಿರೂಪಣೆ, ಚಿಂತನೆಗಳೆಲ್ಲವೂ ವಿಭಿನ್ನ ಮತ್ತು ಇವತ್ತಿಗೆ ಅಗತ್ಯವಿರುವಂತೆ ಆರೋಗ್ಯಕರ.  ಯಾವುದೊಂದು ಅತಿರೇಕದ ಹಂಗಿಲ್ಲದೆ ಓದುವವರು, ಬರೆಯುವವರು ಇಂದಿನ ತಲೆಮಾರಿಗೆ ಬೇಕಾಗಿದ್ದಾರೆ. ಈ ನಿಟ್ಟಿನಲ್ಲಿ ಹೊಮ್ಮುತ್ತಿರುವ ಬಹಳಷ್ಟು ಓದುಗ- ಬರಹಗಾರರಲ್ಲಿ ಸುಪ್ರೀತ್ ಒಬ್ಬನೆಂದು ಧಾರಾಳವಾಗಿ ಹೇಳಬಹುದು. ಈ ಹುಡುಗ ‘ಸಡಗರ’ ಎಂಬ ಪತ್ರಿಕೆಯನ್ನು ನಡೆಸುತ್ತಿದ್ದು, ಇಂದಿನ ಸಂದರ್ಭದಲ್ಲಿ ಆರಂಭಗೊಳ್ಳುವ ಎಲ್ಲ ಒಳ್ಳೆಯ ಪತ್ರಿಕೆಗಳೂ ಅಲ್ಪಾಯುಷಿಗಳು ಎಂಬುದನ್ನ ಸಾಬೀತು ಪಡಿಸಿದ್ದಾನೆ. ಅಂದರೆ- ನಿಲ್ಲಿಸಿದ್ದಾನೆ. ಪ್ರಸ್ತುತ, ಸುಪ್ರೀತ್ ಬೀಚಿಯವರ ‘ಭಯಾಗ್ರಫಿ’ ಓದಿ ಹಂಚಿಕೊಂಡ ಅನಿಸಿಕೆಗಳನ್ನ ಇಲ್ಲಿ ನೀಡಲಾಗಿದೆ.

ರುಜುವಾತು ಪಡಿಸಲು ಸಾಕಷ್ಟು ಸಾಕ್ಷಿಗಳು ಇಲ್ಲದ ಸಂದರ್ಭದಲ್ಲಿಯೂ ಒಂದು ಸಂಗತಿಯನ್ನು ಗಾಢವಾಗಿ ನಂಬುವುದಕ್ಕೆ ಶ್ರದ್ಧೆ ಎನ್ನುವರು. ಕೃಷ್ಣ ಎನ್ನುವ ಹತ್ತು ವರ್ಷದೊಳಗಿನ ಬಾಲಕ ತನ್ನ ಕಿರು ಬೆರಳಿನಲ್ಲಿ ಗೋವರ್ಧನ ಎನ್ನುವ ಹೆಸರಿನ ಬೆಟ್ಟವನ್ನು ಎತ್ತಿದ. ಅದರಡಿಯಲ್ಲಿ ಇಡೀ ಯಾದವರ ಊರು ಆಶ್ರಯವನ್ನು ಪಡೆದಿತ್ತು. ಈ ಪುರಾಣದ ಕತೆಯನ್ನು ಮನುಷ್ಯನ ಅದ್ಭುತ ಕಲ್ಪನೆಯ ಸೃಷ್ಟಿಯಾಗಿ, ಒಂದು ಪ್ರತಿಮೆಯಾಗಿ, ಸಂಕೇತವಾಗಿ ಒಪ್ಪಿಕೊಳ್ಳುವುದರಲ್ಲಿ ಯಾವ ತಪ್ಪೂ ಇಲ್ಲ. ಆದರೆ ಇದನ್ನು ಅಕ್ಷರಶಃ ಸತ್ಯವೆಂದು ಯಾವ ಸಾಕ್ಷಿಯೂ ಇಲ್ಲದೆ ನಂಬುವುದು ಶ್ರದ್ಧೆ ಎನ್ನಿಸಿಕೊಳ್ಳುತ್ತದೆ.

 ನಮ್ಮ ಬಹುಪಾಲು ಧಾರ್ಮಿಕ ನಂಬಿಕೆಗಳು ಇಂಥವೇ. ಧರ್ಮ, ದೇವರ ಬಗೆಗೆ ‘ಗಾಡ್ ಈಸ್ ನಾಟ್ ಗ್ರೇಟ್’ ಎಂಬ ಪುಸ್ತಕ ಬರೆದಿರುವ ಕ್ರಿಸ್ಟೋಫರ್ ಹಿಚಿನ್ಸ್ ಒಂದು ಕಡೆ ಹೀಗನ್ನುತ್ತಾನೆ. “ಒಳ್ಳೆಯ ಜನರು ಒಳ್ಳೆಯ ಕೆಲಸಗಳನ್ನು ಮಾಡುತ್ತಾರೆ. ಕೆಟ್ಟವರು ಕೆಟ್ಟ ಕೆಲಸಗಳನ್ನು ಮಾಡುತ್ತಾರೆ. ಆದರೆ ಒಳ್ಳೆಯವ ಜನರ ಕೈಲಿ ಕೆಟ್ಟ ಕೆಲಸವನ್ನು ಮಾಡಿಸಲಿಕ್ಕೆ ಧರ್ಮ ಬೇಕು”.

ಈ ವಿಷಯ ನೆನಪಿಸಿಕೊಳ್ಳಲಿಕ್ಕೆ ಕಾರಣವಾದದ್ದು ನಾನು ಇತ್ತೀಚೆಗೆ ಓದುತ್ತಿರುವ ಬಿಚಿಯವರ ಆತ್ಮಕತೆ ‘ನನ್ನ ಭಯಾಗ್ರಫಿ’ಯಲ್ಲಿನ ಒಂದು ಘಟನೆ. ಬೀಚಿಯವರ ಹೆಂಡತಿ ಸಂಪ್ರದಾಯಬದ್ಧವಾದ ಮಾಧ್ವ ಬ್ರಾಹ್ಮಣರ ಮನೆಯ ಹೆಣ್ಣು. ಬೀಚಿ ತುಂಬಾ ಚಿಕ್ಕ ವಯಸ್ಸಿನಲ್ಲೇ ದೇವರು, ದಿಂಡಿರು, ಜಾತಿಗಳ ಗೊಡವೆಯನ್ನು ತೊರೆದವರು. ಬೀಚಿಯವರ ಮನೆಗೆ ವಾರನ್ನಕ್ಕಾಗಿ ಒಬ್ಬ ಹುಡುಗ ಬರುತ್ತಿರುತ್ತಾನೆ. ಒಮ್ಮೆ ಆತ ಮನೆಗೆ ಬಂದಾಗ ಜ್ವರವಿರುವುದನ್ನು ಕಂಡು ಆತನನ್ನು ತಮ್ಮ ಮನೆಯಲ್ಲಿ ಹದಿನೈದು ದಿನಗಳ ಕಾಲ ಇಟ್ಟುಕೊಂಡು ಆರೈಕೆ ಮಾಡುತ್ತಾರೆ. ಆತ ಬ್ರಾಹ್ಮಣರಲ್ಲೇ ಸ್ಮಾರ್ತ ಪಂಗಡದ ಹುಡುಗ ಎಂದು ತಿಳಿದಾಗ ಅದುವರೆಗೆ ಅತಿ ಮಮತಾಮಯಿಯಾಗಿದ್ದ ಬೀಚಿಯವರ ಹೆಂಡತಿ ಸಿಡಿಮಿಡಿಗುಟ್ಟುತ್ತಾರೆ. ಆ ಹುಡುಗನ ತಂದೆ ತೀರಿಕೊಂಡಾಗ ಆತ ಬೀಚಿಯವರಿಗೆ ಪತ್ರವೊಂದನ್ನು ಬರೆದು ‘ಇನ್ನು ತನಗೆ ನೀವೇ ತಂದೆ’ ಎಂದು ಹೇಳಿದ್ದನ್ನು ಓದಿದಾಗ ಬೀಚಿ ಹಾಗೂ ಅವರ ಮಡದಿ ಇಬ್ಬರೂ ಕಣ್ಣೀರು ಸುರಿಸುತ್ತಾರೆ. ಆದರೆ ಮರುಘಳಿಗೆಯೇ ಬೀಚಿಯವರ ಮಡದಿ, “ಆ ಹುಡುಗ ಕರ್ಮ ಮಾಡಿ ಸೀದ ನಮ್ಮ ಮನೆಗೆ ಬಂದರೆ ಹ್ಯಾಗ್ರೀ? ಉತ್ತರಕ್ರಿಯೆ ಮಾಡಿದವರು ವರ್ಷದ ತನಕ ಬರಬಾರದು” ಎನ್ನುತ್ತಾರೆ. ಬೀಚಿ: “ಬಂದರೇನಾಗ್ತದೆ?” “ಬಂದರೇನಾಗ್ತದೆ! ಮಕ್ಕಳೂ, ಮರಿ ಇರೋ ಮನಿ, ನಮಗೆ ಅರಿಷ್ಟ ಬಡೀತದೆ” “ನಿನಗೆ ಬುದ್ಧಿ ಇದೆಯೇ? ನೀನು ಮನುಷ್ಯಳೇನೆ? ತಂದೆ ಸತ್ತ ಹುಡುಗ, ಮೇಲೆ ನಿರ್ಗತಿಕ, ನೀವೇ ತಂದೆ ಎಂದು ಬರೆದಾನೆ, ನಾನವನ್ನ ಹೋಗೂ ಅನ್ನಲಾ? ಅವನು ಎಲ್ಲಿಗೆ ಹೋಗಬೇಕು?” “ಬ್ಯಾರೆ ಇನ್ಯಾರ ಮನಿಗಾದರೂ ಹೋಗಲಿ. ನಮಗೇನು ಬಂಧು ಅಲ್ಲ, ಬಳಗ ಅಲ್ಲ. ನಮಗೂ ಎರಡು ಮಕ್ಕಳಿವೆ. ಅವಕ್ಕೇನಾದರೂ ಕಂಣೇ ನೋಯಲಿ, ಮೂಗೇ ನೋಯಲಿ…”

ಈ ಘಟನೆಯನ್ನು ಅವಲೋಕಿಸಿದರೆ ಬೀಚಿಯವರ ಮಡದಿ, ತಾಯಿಯೊಬ್ಬಳಿಗೆ ಸಹಜವಾದ ಮುತುವರ್ಜಿಯನ್ನು ತೋರಿದ್ದು ಕಾಣುತ್ತದೆ. ತನ್ನ ಮಕ್ಕಳ ನೆಮ್ಮದಿಯನ್ನು, ರಕ್ಷಣೆಯನ್ನು ಆಕೆ ಪ್ರಥಮ ಆದ್ಯತೆಯಾಗಿ ಕಂಡಿದ್ದು ಕಾಣುತ್ತದೆ. ಆದರೆ, ಸಾಮಾನ್ಯವಾಗಿ ಮಮತಾಮಯಿಯಾದ, ಪರರ ಕಷ್ಟಕ್ಕೆ ಕಣ್ಣೀರುಗರೆಯುವ, ತನ್ನ ಕೈಲಾದ ನೆರವನ್ನು ನೀಡಲು ಸಿದ್ಧಳಾದ ಹೆಣ್ಣು ತನ್ನ ಶ್ರದ್ಧೆಯಿಂದಾಗಿ ಹಠಮಾರಿಯಾಗುವುದು, ಕೆಲವು ಅತಿರೇಕದ ಘಟನೆಗಳಲ್ಲಿ ಸ್ಕೀಝೋಫ್ರೇನಿಕ್ ಆಗಿ ವರ್ತಿಸುವುದು – ಇವಕ್ಕೆಲ್ಲಾ ಧಾರ್ಮಿಕ ಶ್ರದ್ಧೆಯೇ ಕಾರಣ.

ಇದೇ ಘಟನೆಯ ಮುಂದುವರೆದ ಭಾಗದಲ್ಲಿ ಒಂದು ಸಣ್ಣ ತಿರುವು ಎದುರಾಗುತ್ತದೆ. ತಂದೆಯಿಲ್ಲದ ಮಗನನ್ನು ಮನೆಯವರೆಲ್ಲರ ವಿರೋಧದ ನಡುವೆಯೂ ತಮ್ಮ ಜೊತೆ ಇಟ್ಟುಕೊಂಡು ಬೀಚಿ ಸಾಕುತ್ತಾರೆ. ಒಮ್ಮೆ ಆ ಹುಡುಗ ಮನೆಗೆ ಹೋಗುವ ಹಿಂದಿನ ದಿನ ರೇಷನ್ ಅಂಗಡಿಯಿಂದ ತನ್ನ ಊರಿಗೆ ಒಯ್ಯುವುದಕ್ಕಾಗಿ ಕೆಲವು ಸಾಮಾನುಗಳನ್ನು ತಂದಿಟ್ಟುಕೊಂಡಿರುತ್ತಾನೆ, ಬೀಚಿಯವರ ಪೆನ್ನು, ಪುಸ್ತಕಗಳು, ಅವರ ಮ್ಮಕಳ ಶೂಗಳನ್ನೆಲ್ಲ ಕದ್ದು ತನ್ನ ಬ್ಯಾಗಿನಲ್ಲಿ ತುಂಬಿಸಿಕೊಂಡಿರುತ್ತಾನೆ. ಆ ಹುಡುಗನ ಕಳ್ಳತನ ಬೆಳಕಿಗೆ ಬಂದಾಗ ಬೀಚಿಯವರು ನಿರ್ದಾಕ್ಷಿಣ್ಯವಾಗಿ ಆತನನ್ನು ಮನೆಯಿಂದ ಹೊರಗೆ ಹಾಕುತ್ತಾರೆ. “ಮಗನಂತೆ ನಿನ್ನನ್ನು ನೋಡಿಕೊಂಡು ಈಗ ಮಗನನ್ನು ಮನೆಯಿಂದ ಹೊರಗೆ ಹಾಕಿದಂತೆಯೇ ಹಾಕುತ್ತಿರುವೆ” ಎಂದು ಕಡ್ಡಿ ತುಂಡು ಮಾಡಿದಂತೆ ಹೇಳುತ್ತಾರೆ. ಆದರೆ ಆಗ ಅವರ ಮಡದಿ ಹುಡುಗನ ಅಪರಾಧವನ್ನು ಕ್ಷಮಿಸುವಂತೆ ಬೀಚಿಯವರಿಗೆ ವಿನಂತಿಸುತ್ತಾರೆ. ಸಣ್ಣ ಹುಡುಗ ಮಾಡಿದ ತಪ್ಪು, ಮರೆತು ಬಿಡಿ, ಅವನನ್ನು ಮನೆಯಿಂದ ಹೊರಗೆ ಹಾಕಿದರೆ ಆತ ಎಲ್ಲಿಗೆ ಹೋದಾನು ಎಂದು ಕನಿಕರಿಸುತ್ತಾರೆ! ಅವರ ತಾಯಿ ಹೃದಯ ಸಹಜವಾಗಿ ಆ ಹುಡುಗನಿಗಾಗಿ ಮಿಡಿಯುತ್ತದೆ.

ನಿಜ, ಹಿಚಿನ್ಸ್ ಗಮನಿಸಿದ್ದು ಸರಿ ಎನ್ನಿಸುತ್ತದೆ!

ದೇವೇಂದ್ರ ಕುಮಾರ ಹಕಾರಿಯವರ ಒಂದು ಕವಿತೆ

ಡಾ. ದೇವೇಂದ್ರ ಕುಮಾರ ಸಿ. ಹಕಾರಿ , ಜಾನಪದ ತಜ್ಞ ಹಾಗೂ ಸ್ವಾತಂತ್ರ್ಯ ಹೋರಾಟಗಾರರಾಗಿದ್ದವರು . ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲ್ಲೂಕಿನ ಚಿಕ್ಕೇನಕೊಪ್ಪದಲ್ಲಿ 1931ರಲ್ಲಿ ಜನಿಸಿದ ದೇವೇಂದ್ರ ಕುಮಾರ ಅವರು ಗುಲ್ಬರ್ಗದ ಶರಣ ಬಸವೇಶ್ವರ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು.

 1970ರಲ್ಲಿ ಕರ್ನಾಟಕ ವಿಶ್ವ ವಿದ್ಯಾಲಯ ಸೇರಿದ ಹಕಾರಿ 1991ರಲ್ಲಿ ನಿವೃತ್ತರಾಗುವ ವೇಳೆಗೆ ಜಾನಪದ ಕ್ಷೇತದಲ್ಲಿ ಆಳ ಅಧ್ಯಯನ ಮತ್ತು ಬರಹಗಳಿಂದ ಖ್ಯಾತರಾಗಿದ್ದರು. ಕಾಲೇಜಿನ ದಿನಗಳಲ್ಲೇ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದ ಅವರು ಹೈದರಾಬಾದ್ ರಜಾಕಾರರ ವಿರುದ್ಧ ಸಮರ ಸಾರಿದ್ದರು. ಕಾದಂಬರಿ, ಕವನ ಸಂಕಲನ, ವಿಮರ್ಶೆ, ನಾಟಕ, ಜೀವನ ಚರಿತ್ರೆ, ಸಂಪಾದಿತ ಕೃತಿ, ಅನುವಾದ ಕೃತಿ ಸೇರಿ 37 ಪುಸ್ತಕಗಳನ್ನು ಪ್ರಕಟಿಸಿದ್ದರು. (ಈ ಎಲ್ಲ ಮಾಹಿತಿಯನ್ನು ಪರ್ಯಾಯ ಬ್ಲಾಗ್ ನಿಂದ ಎರವಲು ಪಡೆಯಲಾಗಿದೆ).

ಇಲ್ಲೀಗ ನೀಡಿರುವ ಕವಿತೆ, ‘ಸುವರ್ಣ ಸಂಪುಟ’ದಿಂದ ಆಯ್ದದ್ದು… 

 

 

ಗೀತ- ಸುಪ್ರಭಾತ

ಋತುಚಕ್ರದಂತರದ ಶ್ರುತಿ ಸಂಚು ಹೂಡಿ
ಬೀಸಿರಲು ಇಂದ್ರಜಾಲ,
ಬಾನಗೂಡೊಳು ಕುಳಿತು ಕಣ್ಬಿಟ್ಟು ನೋಡುತಿವೆ
ಚಿಕ್ಕೆ- ಹಕ್ಕಿಗಳೆಲ್ಲ ಜೋಡಿ ಜೋಡಿ

ಮೆಲ್ಲಮೆಲ್ಲನೆ ಗುಟುರು ಗುಟುರುಗೂಂ ಗುಟುರುಗೂಂ
ಸಿಂಬಿ ಸುಳಿ ಬಿಚ್ಚಿ,
ಉಲಿವ ತುಪ್ಪುಳನವುರು ಮೈಗೆ ಸೋಕಿ,
ಚುಂಚಿನಿಂಚರದಲ್ಲಿ ಹೊಂಚು ಹಾಕಿ
ಮತ್ತೆ…..
ಮತ್ತೆ ಬೆಚ್ಚನೆ ಮೌನ; ಬಿಚ್ಚಿ ಹೊದೆದು,
ತಂದ್ರಿ ಬಿಚ್ಚಿ ಹೊದೆದು,
ದಿಟ್ಟಿಸುತ, ಹುಲಿಯ ಟಿಕಿ ಟಿಕ್ಕಿಯನು ಹಚ್ಚಿ;
……………………..
ಇರುಳ ಬೇಡನು ಬಿಟ್ಟ ಬಾಣ ಕೊರಳಿಗೆ ನಟ್ಟು
ದೊಪ್ಪೆಂದು ಕೆಡೆಕೆಡೆದು ಕೊರಗಿ ಕೊರಗಿ
ನೆಲದ ತೊಡೆ ಮೇಲೊರಗಿ
ಹೊರಳುತಿರೆ; ಕರಗಿ,
ಕ್ಷಿತಿಜವಾಲ್ಮೀಕಿಯೆದೆಯಿಂದ ಚಿಮ್ಮಿದ ಗೀತ,
ಸುಪ್ರಭಾತ.

~ ದೇವೇಂದ್ರ ಕುಮಾರ ಹಕಾರಿ

 

‘ಅಕ್ಷರ ದೀಪ’ದಲ್ಲಿ ಸಂದೀಪ ನಾಯಕ

ಇವತ್ತಿನ, ನಮ್ಮ ಜತೆಯ ಬರಹಗಾರರ ಪರಿಚಯ ನಾನು ಮಾಡಿಕೊಳ್ಳಬೇಕನ್ನುವ ಇಚ್ಚೆಯಿಂದ, ಸಾಧ್ಯವಾದ ಮಟ್ಟಿಗೆ ಎಷ್ಟು ಸಿಗುತ್ತದೋ ಅಷ್ಟು ಒಳ್ಳೆಯ ಸಾಹಿತ್ಯ, ಸಾಹಿತಿಗಳನ್ನ ಕೈಗೆಟಕುವ ಜಾಲತಾಣದಲ್ಲೂ ದಾಖಲಿಸಬೇಕೆನ್ನುವ ಉದ್ದೇಶದಿಂದ ‘ಹೊಸ ತಲೆಮಾರು’ ಬ್ಲಾಗ್ ಆರಂಭಿಸಿದ್ದು ನಿಮಗೆ ಗೊತ್ತೇ ಇದೆ. ಈ ಆಶಯಕ್ಕೆ ಪೂರಕವಾಗಿ ಕಂಡುಬಂದಿದ್ದು ‘ಒಳಗೂ-ಹೊರಗೂ’ ಬ್ಲಾಗ್.  ಇದರ ಬಗ್ಗೆ ಹಿಂದೆ ಬರೆಯಲಾಗಿದೆ. ಇಲ್ಲಿದೆ, ಈ ಬಾರಿಯ ‘ಸನ್ನಿಧಾನ’ದ ವಿಶೇಷ. ಕಥೆಗಾರ ಸಂದೀಪ್ ನಾಯಕ್ ಅವರ ಸಂದರ್ಶನ….

ವಾಚಾಳಿಯಾಗಿಸಬಹುದಾದ `ಕತೆ’, ಮಾತುಮರೆಸುವ ಕವಿತೆ; ಇವುಗಳ ನಡುವೆ ಸಂಯಮದ ಉತ್ಸಾಹಿ ಸಂದೀಪ ನಾಯಕ. ಅವಸರದ ಸಾಹಿತ್ಯ ಸೃಷ್ಟಿಸುವ ಪತ್ರಕರ್ತನ ವೃತ್ತಿಯಲ್ಲಿದ್ದು ಒಳತೋಟಿಗಳಿಗೆ, ಸೂಕ್ಷ್ಮಗಳಿಗೆ ಸ್ಪಂದಿಸುವಷ್ಟು ಸಂವೇದನೆ ಉಳಿಸಿಕೊಂಡಿರುವ ಕತೆಗಾರ, ಕವಿ. ರೇಜಿಗೆ ಹುಟ್ಟಿಸುವಷ್ಟು ಅಕ್ಷರಲೋಕದಲ್ಲಿ ಮುಳುಗೇಳುತ್ತಿದ್ದರೂ, ಇವರ ಕತೆ, ಕವಿತೆಗಳಲ್ಲಿ ಅಪ್ಪಟ ಶಿರಸಿಯ ದಟ್ಟ ಕಾಡು, ಮಳೆ, ನೀರು ಪಸೆಪಸೆಯಾಗಿ ಓದುಗನನ್ನು ಆದ್ರ್ರಗೊಳಿಸುತ್ತದೆ. `ಕಾವ್ಯ ಮುಟ್ಟಿ ಮಾತಾಡಿಸಿದರೆ ಫಲ ಕೊಡುವ ಮಾಂತ್ರಿಕ ವೃಕ್ಷ’ ಎಂದೇ ನಂಬಿರುವ ಸಂದೀಪ, `ಅಗಣಿತ ಚಹರೆ’ ಎಂಬ ಕವಿತೆಗಳ ಸಂಕಲನವನ್ನು, `ಗೋಡೆಗೆ ಬರೆದ ನವಿಲು’ ಎಂಬ ಕಥಾ ಸಂಕಲನವನ್ನು ಪ್ರಕಟಿಸಿದ್ದಾರೆ. ಎರಡು ಭಿನ್ನ ಸಾಹಿತ್ಯ ಪ್ರಕಾರಗಳಲ್ಲಿ ಕ್ರಿಯಾಶೀಲರಾಗಿರುವ ಸಂದೀಪ ಇವತ್ತಿನ ಸನ್ನಿಧಾನದಲ್ಲಿ…

ಪತ್ರಕರ್ತ, ಕವಿ, ಕತೆಗಾರ, ಎಲ್ಲೆಡೆ ಅಕ್ಷರ ಸಾಂಗತ್ಯ. ಇದು ಹೇಗೆ ಶುರುವಾಯ್ತು?

ನಾನು ಅಕ್ಷರದ ಸೆಳೆತಕ್ಕೆ ಸಿಕ್ಕಿದ್ದು ಬಹಳ ಹಿಂದೆ. ಬಹುಶಃ ಹೈಸ್ಕೂಲಿನಲ್ಲಿದ್ದಾಗ ಎಂದು ಕಾಣುತ್ತದೆ. ಆಗಲೇ ನಾನು `ಚಂದಮಾಮ’ದ ಕಥೆಗಳಿಂದ ಪ್ರಭಾವಿತನಾಗಿ, ಅವುಗಳನ್ನು ಅನುಕರಿಸಿ ಕಥೆಗಳನ್ನು ಬರೆಯುತ್ತಿದ್ದೆ. ಆಮೇಲಷ್ಟೇ ಪ್ರಬಂಧ, ಕವಿತೆಗಳನ್ನು ಬರೆಯಲು ಶುರುಮಾಡಿದ್ದು, ಆನಂತರ ಕಥೆಗಳನ್ನು ಬರೆಯಲು ಶುರುಮಾಡಿದ್ದು ಇತ್ತೀಚೆಗಷ್ಚೇ. ಪ್ರೀತಿ, ಹರೆಯ ಹೇಗೆ ಶುರುವಾಯಿತು ಎಂದು ಹೇಳಲು ಸಾಧ್ಯವಿಲ್ಲವೋ ಹಾಗೆಯೇ ಅಕ್ಷರದ ಮೋಡಿಗೆ ಸಿಲುಕಿಕೊಂಡದ್ದನ್ನು ಹೇಳುವುದು ಅಸಾಧ್ಯ.
ಒಂದು ಹಂತ ದಾಟಿದ ಮೇಲೆ ಬರವಣಿಗೆ ಎನ್ನುವುದು ಅನಿವಾರ್ಯವಾಗುತ್ತದೆ. ಅದರ ಹಿಡಿತದಿಂದ ಬಿಡಿಸಿಕೊಳ್ಳುವುದು ಕಷ್ಟ. ಬರವಣಿಗೆ ಖುಷಿಗೆ ತಮ್ಮನ್ನು ಕೊಟ್ಟುಕೊಂಡ ಎಲ್ಲ ಲೇಖಕರ ಪಾಡು ಕೂಡ ಬಹುಷಃ ಇದೇ.

ವ್ಯವಧಾನವೇ ಇಲ್ಲದ ವೃತ್ತಿ, ಧ್ಯಾನಬಯಸುವ ಪ್ರವೃತ್ತಿ, ಇವುಗಳ ನಡುವೆ ನಿಮ್ಮನ್ನು ನೀವು ಹೇಗೆ ಕಾಣುತ್ತೀರಿ?

ಸಂತೆಯಲ್ಲಿ ಸಂತನಾಗುವುದೆಂದರೆ ಇದೇ ಇರಬೇಕು! ತೀವ್ರ ಚಡಪಡಿಕೆಯ ಮನಸ್ಥಿತಿ ಇದ್ದಾಗಲೇ ನಿಮಗೆ ಒಳ್ಳೆಯದನ್ನು ಬರೆಯಲು ಸಾಧ್ಯ. ವ್ಯವಧಾನ ಇಲ್ಲದ ಈ ವೃತ್ತಿಯ ನಡುವೆಯೇ ನನ್ನದೇ ಆದ ಸ್ಪೇಸ್ ಅನ್ನು, ಜಗತ್ತನ್ನು, ಸಮಯವನ್ನು ಕಲ್ಪಿಸಿಕೊಳ್ಳುವುದೇ ಧ್ಯಾನಸ್ಥನಾಗುವುದಕ್ಕೆ ಒಳ್ಳೆಯ ದಾರಿ, ಉಪಾಯ ಎಂದು ನನಗನಿಸುತ್ತದೆ. ಹಾಗೆಂದು ಪೂರ್ತಿ ಬಿಡುವು ಸಾಕಷ್ಟು ಸಮಯ ನಿಮಗಿದೆ ಎಂದರೂ ಬರೆಯಲು ಸಾಧ್ಯವಾಗುತ್ತದೆಯೇ ಎಂಬುದು ನನಗೆ ಅನುಮಾನ. ದೈನಿಕದ ಕೆಲಸಗಳ ನಡುವೆಯೇ ಬೇರೆ ಏನನ್ನೂ ಮೂಡಿಸಲು ಪ್ರಯತ್ನಿಸುವುದು ಒಬ್ಬ ಪತ್ರಕರ್ತನ ವೃತ್ತಿಯಲ್ಲಿರುವ ಬರಹಗಾರನಿಗೆ ಸಾಧ್ಯವಾಗಬೇಕು. ಹಾಗಿದ್ದಾಗಲೇ ಬದುಕಿನಿಂದ ಹೊರತಾಗಿರುವ ಸಾಹಿತ್ಯ ಬರುತ್ತದೆ

ನಿಮ್ಮ ಕವಿತೆಗಳನ್ನು ಓದುವಾಗ ಮುಖಕ್ಕೆ ಮಂಜು ಮುತ್ತಿದ ಹಿತ. ಅಷ್ಟೊಂದು ಆದ್ರ್ರತೆಗೆ ಕಾರಣವೇನು?

ನನ್ನ ಕವಿತೆ ನನ್ನ ಹಾಗೆ ಎನ್ನಬಹುದು. ಅಂಥ ನಿದರ್ಿಷ್ಟ ಕಾರಣವೇನೂ ಇಲ್ಲ, ನಾನು ಕವಿತೆಗಳಲ್ಲಿ ಪ್ರಯೋಗಗಳನ್ನು ನಡೆಸುತ್ತಿದ್ದಾಗ ನೀವು ಹೇಳುವ ಆದ್ರ್ರತೆ ಎನ್ನುವುದು ಕವಿತೆಗಳ ಒಂದು ಲಕ್ಷಣವಾಗಿ ಬಂದಿರಬಹುದೇನೋ.

ಕವಿತೆ ಒಂದು ರೂಪಕ ಅನ್ನೋದಾದರೆ, ಕತೆ ಏನು ಅನ್ನಿಸುತ್ತೆ?

ಕವಿತೆಯನ್ನು ಕೇವಲ ರೂಪಕ್ಕೆ ಸೀಮಿತಗೊಳಿಸುವುದು ಬೇಡ. ಆದರೂ ಕವಿತೆ ಜಗತ್ತಿಗೆ ರೂಪಕವಾದರೆ, ಕಥೆ ಎನ್ನುವುದು ಬದುಕಿಗೆ ಪ್ರತಿಮೆ ಎನ್ನಬಹುದು.

ಕನ್ನಡ ಕತೆಗಳಲ್ಲಿ ಏನಾದರೂ ಹೊಸತನ ಕಾಣಿಸುತ್ತಿದೆಯೇ?

ಕನ್ನಡ ಕಥೆಗಳಲ್ಲಿ ಅಂಥ ಹೊಸತನ ನನಗೆ ಕಾಣುತ್ತಿಲ್ಲ. ಏಕೆಂದರೆ, ಸರಳವಾಗಿ ಹೇಳಬೇಕಂದರೆ ಈ ಕಥೆಗಳಲ್ಲಿ ಬೇರೆಯ ಅನುಭವದ ಜಗತ್ತಿದೆ. ಇದನ್ನು ಓದದಿದ್ದರೆ ಬೇರೆ ಏನನ್ನೂ ಕಳೆದುಕೊಳ್ಳುತ್ತೇನೆ ಎಂಬಂಥ ತೀವ್ರವಾಗಿ ಓದಲೇ ಬೇಕೆನಿಸುವ ಹೊಸಕಥೆಗಳು ನನಗೆ ಕಾಣುತ್ತಿಲ್ಲ. ಹೊಸತನ ಎನ್ನುವುದು ಬೇರೆಯದೇ ಆದ ಅನುಭವದ ಮಂಡನೆ, ಅಭಿವ್ಯಕ್ತಿ ಕ್ರಮದಿಂದ ಬರುತ್ತದೆ ಎಂದುಕೊಂಡಿದ್ದೇನೆ. ಈಗಲೂ ನಾನು ಓದುವುದು ಮಾಸ್ತಿ, ಚಿತ್ತಾಲ, ಲಂಕೇಶ್, ತೇಜಸ್ವಿ, ಶಾಂತಿನಾಥ ದೇಸಾಯಿ, ಜಯಂತ ಕಾಯ್ಕಿಣಿ ಈ ಲೇಖಕರನ್ನೇ. ಅಂದರೆ ಈಗಲೂ, ಪ್ರತಿ ಬಾರಿ ಓದಿದಾಗಲೂ ಈ ಲೇಖಕರು ಮಂಡಿಸುವ ಲೋಕ ಹೊಸತಾಗಿಯೇ ನನಗೆ ಕಾಣುತ್ತದೆ. ಆದರೆ ಇತ್ತೀಚಿನ ಲೇಖಕರ ಕಥೆಗಳು ಇತ್ತೀಚೆಗೆ ಬರೆದವು ಎನ್ನುವುದನ್ನು ಬಿಟ್ಟರೆ ಹೊಸತಾಗೇನೂ ಕಂಡಿಲ್ಲ.

ಇವತ್ತಿನ ಬರಹಗಾರರನ್ನು ತೀವ್ರವಾಗಿ ಕಾಡುವ ಸಂಗತಿ ಯಾವುದಿರಬಹುದು?

ಯಾವ ಯಾವ ಲೇಖಕರಿಗೆ ಏನೇನು ಕಾಡುತ್ತದೆ ಎಂಬುದನ್ನು ನಾನು ಹೇಗೆ ಹೇಳುವುದು! ಎಲ್ಲರಿಗೂ ಅವರಿಗೆ ಪ್ರೀತಿಯುಂಟು ಮಾಡುವಂಥದ್ದು ಈ ಒಂದೇ ಬದುಕಿನಲ್ಲಿ ಕಾಡುವಂಥಾಗಲಿ, ಅದನ್ನು ತಮ್ಮ ಬರಹಗಳ ಮೂಲಕ ನಮ್ಮಂಥ ಓದುಗರಿಗೆ ಅವರು ಹೇಳುವಂತಾಗಲಿ.

ನಿಮ್ಮ ಕತೆ, ಕವಿತೆಗಳಲ್ಲಿ ಮಾರ್ದನಿಸುವ ಒಂದು ದನಿ…

ನನ್ನ ಕಥೆ ಕವಿತೆಗಳಲ್ಲಿ ಮಾರ್ದನಿಸುವ ಒಂದೇ ದನಿ ಯಾವುದೆಂದು ಹೇಳುವುದು ಸದ್ಯಕ್ಕೆ ಕಷ್ಟವಾಗುತ್ತದೆ. ಏಕೆಂದರೆ ಅವನ್ನೆಲ್ಲ ನಾನು ಒಟ್ಟಾಗಿ ಓದಿಲ್ಲದಿರುವುದರಿಂದ ಈ ಪ್ರಶ್ನೆಗೆ ಅವುಗಳನ್ನು ಓದಿ ಉತ್ತರ ಹೇಳಬೇಕಾಗುತ್ತದೆನೋ!

ಥಟ್ಟನೆ ಕತೆ ಎಂದರೆ ಏನು ನೆನಪಾಗುತ್ತೆ? ಕವಿತೆ ಎಂದರೆ ಯಾರು ನೆನಪಾಗುತ್ತಾರೆ?

ಕಥೆ ಎಂದರೆ… ಪಾತಿ ದೋಣಿ, ಹೊಳೆ ದಾಟುವ ತಾರಿ, ಬೇಣ, ಹಕ್ಕಲು, ಅಂಕೋಲೆ ಬಂಡಿಹಬ್ಬ, ಊರಿನ ಓಣಿಗಳು, ಮೀನು, ಪೇಟೆ, ಗನರ್ಾಲು ಸಾಹೇಬ, ಹೆದ್ದಾರಿಯಲ್ಲಿ ಹಾಯುತ್ತಲೇ ಇರುವ ವಾಹನಗಳು, ಮಳೆಗಾಲದಲ್ಲಿ ರುಮುಗುಡುವ ಸಮುದ್ರ ಜನರ ಮಾತೇ ಕೇಳಿಸದ ಮನೆಗಳು ಇನ್ನೂ ಏನೇನೋ ನೆನಪಾಗುತ್ತದೆ. ಕವಿತೆ ಎಂದೊಡನೆ ದಿನಕರ ದೇಸಾಯಿ, ಗಂಗಾಧರ ಚಿತ್ತಾಲ, ಜಯಂತ ಕಾಯ್ಕಿಣಿ ನೆನಪಾಗುತ್ತಾರೆ.

ತುಂಬಾ ಇಷ್ಟಪಡುವ ನಿಮ್ಮದೇ ಪದ್ಯ..

ಈವರೆಗೆ ಬರೆದವುಗಳಲ್ಲಿ ಬಹುಶಃ ಯಾವುದೂ ಇಲ್ಲ ಎಂದು ಕಾಣುತ್ತದೆ. ಮುಂದೆ ನಾನು ಬರೆಯಲಿರುವ ಕವಿತೆಯೇ ನನಗೆ ಇಷ್ಚವಾಗಬಹುದಾದ ಕವಿತೆ. ಅಂದರೆ, ನನಗೆ ಪ್ರಿಯವಾಗುವ ಕವಿತೆ ಭವಿಷ್ಯದಲ್ಲಿದೆ.

ಡಿ.ಆರ್.ಪರಿಚಯಿಸಿದ ರೂಮಿ

ಬಹಳ ದಿನಗಳಾಯ್ತು ಡಿ.ಆರ್.ರನ್ನು ನೆನೆಸಿಕೊಳ್ಳದೆ. ಈಗ ರೂಮಿಯೊಂದಿಗೆ ಮತ್ತೆ ಅವರನ್ನು ಓದಿಕೊಳ್ಳುವ ಉಮ್ಮೇದು. ಇಲ್ಲಿದನ್ನು ‘ಸಂಸ್ಕೃತಿ ಕಥನ’ದಿಂದ ಎತ್ತಿ ತರಲಾಗಿದೆ. ಮೂಲತಃ ಲಂಕೇಶ್ ಪತ್ರಿಕೆಗಾಗಿ ಬರೆದ ಲೇಖನವಿದು. ಅಂದ ಹಾಗೆ, ಈ ಲೇಖನದ ಮುಂದುವರಿಕೆಯಾಗಿ ‘ಅಲೆಮಾರಿಯ ಹಂಬಲ’ ಎನ್ನುವ ರೂಮಿ ಪದ್ಯದ ಅನುವಾದವೂ ಇದೆ. ಅದನ್ನು ಮುಂದೆ ಪ್ರಕಟಿಸಲಾಗುವುದು.

ಬೆತ್ತಲಾಗು ನೀನು ಎಂದ ಜಲಾಲುದ್ದೀನ ರೂಮಿ

~ ಡಿ.ಆರ್. ನಾಗರಾಜ್

ಜಗತ್ತಿನ ಅತ್ಯಂತ ದೊಡ್ಡ ಕವಿಗಳಲ್ಲಿ ಒಬ್ಬನಾದ ಜಲಾಲುದ್ದೀನ್ ರೂಮಿ ಕ್ರಿ.ಶ. 1207ರಲ್ಲಿ ಬಾಲ್ಕ್ ಎಂಬಲ್ಲಿ ಹುಟ್ಟಿದವನು. ಈಗ ಅದು ಆಫ್ಘಾನಿಸ್ಥಾನದ ಗಡಿ ಪ್ರದೇಶ. ಏಶ್ಯಾಟಿಕ್ ಟರ್ಕಿಯಲ್ಲಿ 1273ರಲ್ಲಿ ಸತ್ತ.  ಸಾಯುವ ಹೊತ್ತಿಗೆ ಪರ್ಶಿಯನ್ ನಗರಿಕತೆಯ ಅತ್ಯುತ್ತಮ ಕವಿ ದರ್ಶನಿಕರಲ್ಲಿ ಒಬ್ಬನಾಗಿದ್ದ.

ರೂಮಿಯ ಜೀವನ ಅನೇಕ ತಲ್ಲಣಗಳಿಂದ, ಎದೆಯೊಡೆಯುವ ಹುಡುಕಾಟಗಳಿಂದ ಕೂಡಿದೆ. ಮೂವತ್ತಮೂರನೆ ವಯಸಿಗೆ ಅತ್ಯಂತ ದೊಡ್ಡ ದಾರ್ಶನಿಕ, ಅಧ್ಯಾಪಕನೆಂದು ಕೀರ್ತಿ ಗಳಿಸಿದ್ದ ವ್ಯಕ್ತಿ ರೂಮಿ. ದೊರೆಗಳು, ವರ್ತಕರು, ಪ್ರತಿಷ್ಟಿತರೆಲ್ಲ ಅವನ ಉಪನ್ಯಾಸಗಳಿಗೆ ಹತೊರೆಯುತ್ತಿದ್ದರು. ಈ ಎಲ್ಲ ಕೀರ್ತಿ ಅವನಿಗೆ ಒಮ್ಮೆಲೆ ವಾಕರಿಕೆ ತರಿಸಿತು. ಮೂವತ್ತೆಂಟನೆ ವಯಸಿನಲ್ಲಿ ತನ್ನೆಲ್ಲ ಕೀರ್ತಿ, ಗೌರವಗಳ ವಿರುದ್ಧವೇ ತಿರುಗಿಬಿದ್ದ. ತನ್ನ ಪ್ರಸಿದ್ಧಿಯ ಭಾರವೇ ಅವನಿಗೆ ತಡೆಯಲಾಗದೆ ಹೋಯಿತು. ಸಾಂಪ್ರದಾಯಿಕ ಮೌಲ್ಯಗಳ ಚೌಕಟ್ಟಲ್ಲೆ ವಿಜೃಂಭಿಸುವುದರಿಂದ ಮಾತ್ರ ತನ್ನ ಸುತ್ತ ಕೀರ್ತಿಯ ಜೇಡರಬಲೆ ಹಬ್ಬುತ್ತಿದೆ ಎಂದು ಅವನಿಗೆ ಖಾತ್ರಿಯಾಯ್ತು. ಕೀರ್ತಿ ಸುತ್ತ ಬೆಳೆದಷ್ಟು ಆತ ಒಳಗೊಳಗೆ ದಿಗ್ಭ್ರಾಂತನಾದ. ಅತೃಪ್ತಿಯಿಂದ ಕುದಿಯತೊಡಗಿದ. ಸಾಂಪ್ರದಯಿಕ ಜೀವನದಲ್ಲಿ ಮುಳುಗುವುದೇ ಮೃತ್ಯು ಎನಿಸಿ ಅದರಾಚೆಗೆ ಹಾರಲು ಒದ್ದಾಡತೊಡಗಿದ. ಅಧ್ಯಯನ, ಅಧ್ಯಾಪನಗಳಿಂದ ಕ್ರಿಯೆ ಮತ್ತು ಅನುಭವಗಳು ಅವನಿಗೆ ವಿಶೇಷ ಆಕರ್ಷಣೆಯಾಗಿ ಕಾಣತೊಡಗಿದವು. ಒಬ್ಬ ಅತ್ಯುತ್ತಮ ದಾರ್ಶನಿಕ- ಅಧ್ಯಾಪಕ ತನ್ನ ಕಸುಬಿನಿಂದಲೇ ತಪ್ಪಿಸಿಕೊಳ್ಳಬಯಸಿದ.

                                       :sOgemane:
 

 

 

ಈ ಹುಡುಕಾಟದಲ್ಲಿ ಅವನ ಆಂತರಿಕ ಜೀವನ ಕೂಡ ಪೂರಾ ಬದಲಾಗಿಬಿಟ್ಟಿತು. ಆತ ತನ್ನ ಅದುವರೆಗಿನ ಶಿಕ್ಷಣ ಮತ್ತು ಸಾಧನೆಗಳ ವಿರುದ್ಧವೇ ಬಂಡೆದ್ದ. ಸೂಫಿ ಅನುಭವಕ್ಕಾಗಿ ಅನೇಕ ಪ್ರಯಾಣಗಳನ್ನು ಮಡಿ ವಾಪಸಾದ. ಈ ಗೊಂದಲದ, ತೀವ್ರ ಹುಡುಕಾಟದ ದಿನಗಳಲ್ಲೇ ಒಬ್ಬ ಸೂಫಿ ಗುರು ಶಂಸ್ ತಬೀಜ್ ಎಂಬಾತನನ್ನು ಭೇಟಿಯಾದ. ಆ ಭೇಟಿ ಒಂದು ಮಹಾನ್ ಸಂಬಂಧದ ಯಾತ್ರೆಯಾಗಿಬಿಟ್ಟಿತು. ದಟ್ಟ ಪ್ರೇಮದ, ದಟ್ಟ ಜ್ಞಾನದ, ದಟ್ಟ ಯಾತನೆಯ, ದೊಡ್ಡ ಸಂಭ್ರಮ ಅದು. ಒಂದು ಮತ್ಟದಲ್ಲಿ ತಬ್ರೀಜ್- ರೂಮಿಯ ಸಂಬಂಧ ಎಲ್ಲ ದೊಡ್ಡ ಸಂಬಂಧಗಳ ಪ್ರತೀಕ. ಅದು ಅಂತಿಮವಾಗಿ ಲಿಂಗ ವ್ಯತ್ಯಾಸಗಳು ಮರೆಯಾಗುವ ರೀತಿಯದು. ಈ ರೀತಿಯ ಸಂಬಂಧಕ್ಕೆ ಮುಜುಗರಪಟ್ಟುಕೊಂಡರೆ ಇದನ್ನು ಸಾಂಪ್ರದಾಯಿಕ ಅರ್ಥದ ಗಮ್ಡು- ಹೆಣ್ಣಿನ ಸಂಬಂಧ ಎಂದರೂ ನಡೆದೀತು. ತನ್ನ ಪ್ರೇಮಿ- ಗುರುವಿನ ಮೇಲೆ ರೂಮಿ 2,500 ಪದ್ಯಗಳ ದಿವಾನ್- ಎ- ಶಂಸ್ ಎಂಬ ಕೃತಿಯನ್ನೇ ಬರೆದ. ಪ್ರೇಮ- ಜ್ಞಾನಗಳೆರಡೂ ಒಂದೇ ಆಗುವ ಸಂಬಂಧ ಅದು. ಆ ಬಗ್ಗೆ ರೂಮಿ ಹೀಗೆ ಹೇಳಿದ- “ನನ್ನ ಒಳ ಮನಸ್ಸಿನ ಸಮುದ್ರದಿಂಡ ತಬ್ರೀಜ್ (ಶಂಸ್‌ನವನು) ನನ್ನನ್ನು ಹೊರಗೆಳೆದ. ಆಗ ಬೆಳಕಿನ ಮಹಾ ಶರೀರವೆದ್ದಿತು. ಶಾಂಸ್‌ನ ತಬ್ರೀಜ್ ಕಣ್ಣಿನ ಬೆಳಕಾದ. ತರ್ಕದ ಸ್ಪಷ್ಟತೆಯಾದ. ಆತ್ಮದ ಪ್ರಖರ ಕಾಂತಿಯಾದ. ಆತ ನನ್ನ ಎಲ್ಲ ಸಂತೋಷಗಳ ಅಂತಿಮ ರೂಪವಾದ.

ಇದರಿಂದ ಉನ್ಮತ್ತನಾದ ರೂಮಿ, ಗೌರವಾರ್ಹ ಪ್ರಾಧ್ಯಾಪಕ ರೂಮಿ, ‘ಸಮಾ’ ಎಂಬ ಕುಣಿತ, ಹಾಡುಗಳ ಕೂಟವನ್ನೇ ಕಟ್ಟಿದ. ತಾಪಸರು ತಪಗುಟ್ಟಿ ಜಿನುಗಿದರೆ ಜನ ಸಹಿಸಬಲ್ಲರು. ಜ್ಞಾನಿಗಳು ಹಾಗೆಯೇ ಇರಬೇಕು. ಆದರೆ ಹುಚ್ಚು ಹರೆಯದವರ ಹಾಗೆ ಒಬ್ಬ ಮಧ್ಯವಯಸ್ಕ ಗುರು ಕುಣಿದರೆ? ಆದರೂ ಹಳೆಯ ಗೌರವದಿಂದ ಸುಮ್ಮನಿದ್ದರು. ಆದರೆ, ತಬ್ರೀಜನ ಸ್ನೇಹದಿಂದ ಉಳಿದ ಲೋಕದಿಂದ ರೂಮಿ ದೂರವಾಗತೊಡಗಿದ. ಇದಕೆಲ್ಲ ತಬ್ರೀಜ್ ಕಾರಣ ಎಂದು ರೂಮಿಯ ಹಳೆಯ ಅಭಿಮಾನಿ ಗಣ ಉರಿದುಬಿದ್ದಿತು. ಅವರ ಕೋಪ ಶಂಸ್‌ನ ಮೇಲೆ ತಿರುಗಿತು. ಒಂದು ದಿನ ಶಂಸ್ ತಬ್ರೀಜ್ ಕಾಣೆಯಾದ. ರೂಮಿಗೆ ತನ್ನ ಪ್ರೇಮ ಮೂಲ ಕಣ್ಮರೆಯಾದಂತೆ, ಜ್ಞಾನ ಮೂಲ ಕಣ್ಮರೆಯಾದಂತೆ ಅನಿಸಿ ಅನಾಥನಾಗಿಬಿಟ್ಟ. ದುಃಖಮೂಲ ಮಾತ್ರ ಉಳಿದು ಹಗಲು ರಾತ್ರಿಗಳು ಹಾಡಿದ, ಕುಣಿದ, ಹುಚ್ಚನಂತಾದ. ತಬ್ರೀಜ್‌ನನ್ನು ಹುಡುಕುತ್ತ ಎಲ್ಲವನ್ನು ಬಿಟ್ಟು ಕಣ್ಮರೆಯಾದ. ತಬ್ರೀಜ್ ಡೆಮಾಸ್ಕಸ್‌ನಲ್ಲಿದ್ದಾನೆಂದು ಹುಡುಕುತ್ತ ಅಲ್ಲಿಗೂ ಹೋದ. ಆದರೆ, ತಬ್ರೀಜ್ ಎಲ್ಲ ಘನ ಪ್ರೇಮದ ಹಾಗೆ ಅಲೆಮಾರಿಯ ಪ್ರತೀಕ. ರೂಮಿ ತನ್ನ ಸೃಜನಶೀಲ ತೀವ್ರತೆಗಳ ಶಿಖರ ಮುಟ್ಟೀದ್ದು ಈ ದಿನಗಳಲ್ಲೇ.

ಅಲೆಮಾರಿಗಾಗಿ ಹಂಬಲಿಸಿ ವಿಹ್ವಲನಾಗಿ ತನ್ನ ಅತ್ಯುತ್ತಮ ಕಾವ್ಯವನ್ನು ರೂಮಿ ಸೃಷ್ಟಿಸಿದ. ಇದರಲ್ಲಿ ಪ್ರೇಮವೆಂಬ ಬೆಂಕಿ ಎಷ್ಟು? ದಾರ್ಶನಿಕ ಅನುಭವವೆಂಬ ಬೆಳಕು ಎಷ್ಟು? ಎಂದು ಬಿಡಿಸಿ ಹೇಳುವುದೇ ಕಷ್ಟ. ಸಂಪ್ರದಾಯವೆಂಬ ಗೋಡೆ ಹಾರಲು ತವಕಿಸುವ ಮನಸುಗಳಿಗೆ ಇದೊಂದು ರೆಕ್ಕೆ. ಎಲ್ಲ ದೊಡ್ಡ ಮಧುರ ಪ್ರೇಮದ ಗರ್ಭದಲ್ಲೇ ಕಟುವಿರಹವೂ ಇರುತ್ತದೆಂಬ ಅನುಭವವನ್ನು ಈ ಕವಿತೆಗಳು ಹೃದಯಸ್ಪರ್ಶಿಯಾಗಿ ಹೇಳುತ್ತವೆ ಮತ್ತು ಅಂತಿಮವಾಗಿ ಆ ಪ್ರಯಾಣದಲ್ಲಿ ದೊಡ್ಡ ಜ್ಞಾನವೂ ಹುಟ್ಟುತ್ತದೆ.

ಒಳಗೂ ಹೊರಗೂ ‘ಮಲ್ಲಿನಾಥನ ಧ್ಯಾನ’

“ಬೊಗಸೆ ತುಂಬಾ ನೋವ ಹೂವು / ನೆನಪುಗಳು ಬೇಕು ನಡೆಯುವುದ ನಿಲ್ಲಿಸಿ ನಿರಾಳವಾಗಲು./ ಚಿಂತೆಯಾಗಿ, ಚಿತೆಯಾಗಿ ಕಾಡಿ / ಕೊನೇ ಪಕ್ಷ ಸಾವಿಗೆ ಶರಣಾಗಲು.”

 ಇವು `ನೆನಪುಗಳು ಬೇಕು’ ಪದ್ಯದ ಸಾಲುಗಳು. ಇದೇ ರೀತಿಯ ಭಾವತೀವ್ರತೆಯ ದಟ್ಟ ಅನುಭವ, ಜಾತ್ರೆಯ ಮುದಿಮರ, ತಾಲ್ ಸೆ ತಾಲ್ ಮಿಲಾ, ಸಹಾರಾದ ಮರಳು, ಹಳ್ಳಿಯ ಚಿತ್ರಗಳೆಲ್ಲವೂ ಮಲ್ಲಿಕಾರ್ಜುನ ಗೌಡ ತೂಲಹಳ್ಳಿ ಅವರ `ಶರೀಫನ ಬೊಗಸೆ’ಯಲ್ಲಿವೆ. ಇವರ ಕವಿತೆಗಳನ್ನು ಓದುವುದೇ ಖುಷಿ. ಇಲ್ಲಿ ಕಾಣುವ ಆಪ್ತ ಪ್ರತಿಮೆಗಳು ನಮ್ಮನ್ನು ಸೆಳೆಯುತ್ತವೆ. `ಶರೀಫನ ಬೊಗಸೆ’ಯಲ್ಲಿ ಅನೇಕ ಅನುಭವಗಳನ್ನು ತುಂಬಿಕೊಂಡು ಕವಿ ಮನಸ್ಸುಗಳ ಮಧ್ಯೆ ನಿಂತವರು ಮಲ್ಲಿಕಾರ್ಜುನ. ಆ ಬೊಗಸೆ ತುಂಬಾ ನಮ್ಮನ್ನು ಕಾಡುವ ಚಿತ್ರಗಳಿವೆ. ಪಾತ್ರಗಳಿವೆ. ಕಳೆದುಕೊಂಡು ಪಡೆಯುವುದೇ ಹೆಚ್ಚಂತೆ. ಹಾಗಾದರೆ ಈ ಕವಿ ಪಡೆದುಕೊಂಡದ್ದು ಏನು? ಎಂಬ ಪ್ರಶ್ನೆಗೆ ಇವರ ಪ್ರತಿ ಪದ್ಯದ ಸಾಲುಗಳೇ ಉತ್ತರವಾಗಿ ನಿಲ್ಲುತ್ತವೆ. ಕವಿತೆಗಳನ್ನು ಅಕ್ಷರಗಳಲ್ಲಿ ಮೊಗೆಯದೇ, ಅಂತಾರಾತ್ಮದ ಚಿಲುಮೆ ಮುಂದೆ ಬೊಗಸೆ ಒಡ್ಡಿ ನಿಂತಿರುವ ಕಾವ್ಯಧ್ಯಾನ ಅವರ ಕವನಗಳಲ್ಲಿದೆ. ಸದ್ಯ ರಾಣೆಬೆನ್ನೂರು ಸಮೀಪದ ಸುಣಕಲ್ ಬಿದರಿಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮತ್ತೊಂದು ಬೊಗಸೆ ಕವಿತೆಯೊಂದಿಗೆ ಬರುವವರಿದ್ದಾರೆ. ಇದೇ ನೆಪದಲ್ಲಿ ಮಾತಿನ ಮೊಗೆತ..

 

:sOgemane:

 

ನೀವು ಕವಿಯಾಗಿದ್ದು ಹೇಗೆ? ಕವಿತೆಯೊಂದಿಗೆ ಸಂಬಂಧ ಬೆಳೆದದ್ದು ಯಾವಾಗ?

ನಾನು ಪಿಯುಸಿ ಫೇಲಾಗಿ ಮನೆಯಲ್ಲಿದ್ದಾಗ. ಅಣ್ಣ ಬಸವರಾಜ್ ಅಂಗಡಿ ವ್ಯಾಪಾರ ಮಾಡ್ತಾನೇ ಮಾರ್ಕ್ಸ್, ಏಂಗೆಲ್ಸ್, ಷೇಕ್ಸ್ ಪಿಯರ್ ಅಂತೆಲ್ಲಾ ಓದ್ತಾ ಇದ್ದ. ಕಾದಂಬರಿ ಬರೆಯೋದು, ನಾಟಕ ಆಡೋದು ಮಾಡ್ತಿದ್ದ. ಮೊದಲಿನಿಂದಲೂ ಒಂಟಿತನ ಅಂದ್ರೆ ನಂಗಿಷ್ಟ. ಹೊಲ ತಿರುಗೋದು, ಜೀರಂಗಿ ಹಿಡಿಯೋದು, ಮಾಡ್ತಾನೆ ಬೆಳಿತಿದ್ದವನಿಗೆ ಅಣ್ಣನ ಮಾತು, ಚರ್ಚೆ, ಸಾಹಿತ್ಯದ ಪುಸ್ತಕಗಳು ಆಸಕ್ತಿ ಹುಟ್ಟಿಸಿದವು. ಅಷ್ಟೊತ್ತಿಗಾಗಲೇ ಊರಲ್ಲಿ ಗ್ರಾಮಪಂಚಾಯ್ತಿ ರಾಜಕೀಯವಾಗಿ ಬಲವಾಗ್ತಿದ್ದವು. ವ್ಯವಸಾಯ ಮಾಡ್ತಲೇ ರಾಜಕೀಯದಲ್ಲಿ ತಲೆ ಹಾಕುತ್ತಿದ್ದ ಅಪ್ಪ, ಆತನ ಮೂಲಕ ಮನೆ ತನಕ, ಮನದ ತನಕ ನುಗ್ಗಿ ಬರುತ್ತಿದ್ದ ಸಮಸ್ಯೆಗಳು, ಜನರ ಕಷ್ಟಗಳು ನನ್ನನ್ನು ಕಲಕುತ್ತಿದ್ದವು. ಅನ್ಯಾಯಗಳನ್ನು ಪ್ರಶ್ನಿಸಿ, ಅಸಹಾಯಕನಾಗಿ ಒದ್ದಾಡೋದು, ಅವಮಾನ ಅನುಭವಿಸೋದು ಮನೆಯೊಳಗಿನ ಕಷ್ಟಗಳನ್ನು, ಜಗಳಗಳನ್ನೆಲ್ಲಾ ತಲೆಗೆ ತುಂಬಿಕೊಂಡು, ಒಬ್ಬನೇ ಅಳೋದು, ಹೀಗೆ ಆಗ್ತಿದ್ದಾಗ ಯಾಕೋ ಏನನ್ನೋ ಬರೆಯಬೇಕೆನಿಸಿತು. ಕತೆ ಬರ್ಯೋಕೆ ಪ್ರಯತ್ನ ಮಾಡಿದೆ. ಆಗ್ಲಿಲ್ಲ. ಪದ್ಯ ಬರೆದೆ. ಇಂಥದ್ದೇ… ಕಾಲ ಕಾಲಕ್ಕೆ ಕಾಡುವ ನೋವುಗಳು… ಕವಿತೆಗಳು..

ಫ್ಯಾಷನ್ ಟೀವಿ, ರೆಹಮಾನ್ ಹಾಡು, ಸೆಪ್ಟೆಂಬರ್ 11, ಹಿಂದಿ ಹಾಡು ಇಂಥ ಹಲವು ಚಿತ್ರಗಳು ನಿಮ್ಮ ಪದ್ಯಗಳಲ್ಲಿವೆ. ಇವು ಯಾವುದಕ್ಕೆ ಸಂವಾದಿಯಾಗಿ ನಿಮ್ಮ ಕಾವ್ಯದಲ್ಲಿ ಕಾಣಿಸಿಕೊಳ್ಳುತ್ತವೆ?

ಅಮೆರಿಕಕ್ಕೆ ನೆಗಡಿ ಬಂದರೂ ಸಾಕು ಅದೊಂದು ದೊಡ್ಡ ಸುದ್ದಿ. ಜಗತ್ತಿನ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಅಮೆರಿಕ, ಬಿನ್ ಲಾಡೆನ್ ಮಹಾ ವಿಲನ್ ಅಂತೆಲ್ಲಾ ಮಾತು. ಅದರಾಚೆಗಿನ ಸೂಕ್ಷ್ಮಗಳ ಬಗ್ಗೆ ಮಾತಾಡೋರು ಯಾರೋ ಕೆಲವರು. ಸೆಪ್ಟೆಂಬರ್ 11ರ ಘಟನೆ ಟೀವಿ, ಪತ್ರಿಕೆಗಳನ್ನು ಆವರಿಸಿಕೊಂಡಾಗ ನನ್ನನ್ನು ತೀವ್ರವಾಗಿ ಕಾಡಲಾರಂಭಿಸಿತು. ಅದರ ಬಗ್ಗೆ ಏನು ಮಾತಾಡುವುದಕ್ಕೂ ಗೊಂದಲವಾಗುತ್ತಿತ್ತು. ಅಂಥ ಅನುಭವವನ್ನು ಕವಿತೆ ಮಾಡಿದೆ. ಇನ್ನು ನೀವು ಪ್ರಸ್ತಾಪಿಸುತ್ತಿರುವ ಹಳ್ಳಿ ಅನುಭವ, ರೆಹಮಾನ್ ಸಂಗೀತ, ಫ್ಯಾಶನ್ ಟೀವಿ, ಎಂಟೀವಿ ಚಿತ್ರಗಳನ್ನು ಕಾವ್ಯದಲ್ಲಿ ತಂದಿದ್ದೀನಿ. ಅವುಗಳನ್ನು ಯಾಕ್ ತಂದಿದ್ದೀನಿ ಅನ್ನೋದನ್ನು ಒಬ್ಬ ಓದುಗ ಹೇಳಿದ್ರೆ ಚೆನ್ನಾಗಿರುತ್ತೆ. ಆ ಕವಿತೆಯಲ್ಲಿ ಹೊರನೋಟಕ್ಕೆ ತುಂಬಾ ಆಕರ್ಷಕವಾಗಿ ಕಾಣುವ ಮನೆಯೊಳಗಿನ ಸಮಸ್ಯೆಗಳು, ಅವುಗಳ ನಡುವೆ ಸಂಭ್ರಮಗಳಿಲ್ಲದೆ ಒದ್ದಾಡ್ತಾ ಇರೋ ಯುವಕ ತತ್ಕಾಲದ ಬಿಡುಗಡೆಗಾದ್ರೂ ಆಥರದ ಚಾನೆಲ್ಗಳಲ್ಲಿ ಲೀನವಾಗುವ ಮನಸ್ಥಿತಿ, ಇವುಗಳಿಗೆ ಸಂವಾದಿಯಾಗಿ ಆ ಚಿತ್ರಗಳನ್ನು ತಂದಿದ್ದೀನಷ್ಟೆ.

ನಿಮ್ಮ ಕವಿತೆಗಳಲ್ಲಿ ಕಾಣುವ, ಕಾಡುವ `ಅಪ್ಪ’ನ ಬಗ್ಗೆ ಹೇಳಿ…

ಚಿಕ್ಕವನಿದ್ದಾಗ ಪ್ರತಿ ರಾತ್ರಿ ಅಪ್ಪನ ಜೊತೇನೇ ನಾನು ಮಲಗ್ತಾ ಇದ್ದಿದ್ದು, ನನ್ನೆಲ್ಲಾ ನೋವು, ಸಂಕಟಗಳಿಗೆ, ಸುಖ ಸಂಭ್ರಮಗಳಿಗೆ ಯಾವಾಗ್ಲೂ ಸಾಕ್ಷಿಯಾಗುತ್ತಾ ಇದ್ದಿದ್ದು ಅಪ್ಪ (ಕರಿಬಸವನಗೌಡ). ಊರಲ್ಲಿ ನಡೆಯುವ ಅನ್ಯಾಯಗಳನ್ನು ಅವಡುಗಚ್ಚಿ ಪ್ರಶ್ನಿಸಿ, ಕೋರ್ಟು, ಕಚೇರಿ ಅಂತೆಲ್ಲಾ ಅಲೆದು, ದುಗುಡದಲ್ಲಿದ್ದಾಗ್ಲೂ, ನಮ್ಮ ಹೊಟ್ಟೆ ಹಸಿದ್ಹಂಗೆ ನೋಡಿಕೊಳ್ತಿದ್ದ. ನಾನು ದೊಡ್ಡವನಾಗ್ತಾ, ನನ್ನಲ್ಲೂ ಹೊಸ ರೀತಿಯ ರಾಜಕೀಯ ಪ್ರಶ್ನೆ ಮೂಡುತ್ತಿದ್ದಾಗ ಅಪ್ಪ ಒಮ್ಮೆ ಸರಿಯಾಗಿ ಕಂಡ್ರೆ ಮತ್ತೊಮ್ಮೆ ನಿಗೂಢವಾಗ್ತಿದ್ದ. ಊರಿನ ರಾಡಿನೆಲ್ಲಾ ಮೈಮೇಲೆ ಸುರ್ಕೊಂಡು, ಒದ್ದಾಡ್ತಿರೋ ಅಪ್ಪನ ಜತೆಗೆ ಅಮ್ಮನ ನಿತ್ಯ ತಕರಾರುಗಳು ಕೆಲವೊಮ್ಮೆ ಸರಿ ಅನ್ನಿಸದರೆ, ಹಲವು ಬಾರಿ ಅಪ್ಪನೇ ಸರಿ ಕಾಣಿಸ್ತಿದ್ದ. ಅಪ್ಪನ ಒಳಹೊರಗುಗಳು ಅರ್ಥ ಮಾಡಿಕೊಳ್ತಾನೇ, ನನ್ನ ಸುತ್ತಲ ಘಟನೆಗಳನ್ನು ನೋಡ್ಲಿಕ್ಕೆ ಶುರು ಮಾಡಿದೆ. ನನ್ನ ಓದಿಗೆ ಕಾಲ ಬದುಕಿರೋಲ್ಲ, ಅಂತ್ಹೇಳಿ, ಸಣ್ಣ ಮುಖ ಮಾಡಿಕೊಂಡಾಗೆಲೆಲ್ಲಾ ಭಾರವಾಗ್ತಿದ್ದ ಎದೆ ಆತನೆಡೆ ಸೆಳೆತವನ್ನು ಮತ್ತೂ ಜಾಸ್ತಿ ಮಾಡ್ತು. ಅಪ್ಪನಾಗಿ ಜೊತೆಗಿದ್ದು ಕೊಂಡೆ, ಹೊಲವನ್ನು, ಜೀರಂಗಿಯನ್ನು ಊರನ್ನ, ಅಲ್ಲಿನ ನೋವುಗಳನ್ನು ಅನ್ಯಾಯಗಳನ್ನು ರಾಜಕೀಯವನ್ನು ಎಲ್ಲ ತೋರಿಸಿದವನು ಅಪ್ಪ. ಹಾಗಾಗಿ ಕಾವ್ಯದಲ್ಲೂ ಕಾಡ್ತಾನೆ….

ನಿಮಗೆ ಯಾವಾಗ್ಲಾದ್ರೂ ಭಾವಗೀತೆ ಬರಿಬೇಕು ಅಂತಾ ಅನ್ಸುತ್ತಾ..?

ತನುವು ನಿನ್ನದು ಮನವು ನಿನ್ನದು.. ನೀ ಹಿಂಗ ನೋಡಬ್ಯಾಡ, ಅಳುವ ಕಡಿಲಿನಲ್ಲಿ, ಎಲ್ಲೋ ಹುಡುಕಿದೆ ಇಲ್ಲದ ದೇವರ ಇಂಥ ಭಾವಗೀತೆಗಳನ್ನು ಕೇಳಿ ಸುಖಿಸ್ತೀನಿ. ಜಯಂತ್ ಸಿನಿಮಾಕ್ಕೆ ಬರಿತಿರೋ ಹಾಡುಗಳನ್ನು ಕೇಳಿಯೂ ಸಂತೋಷ ಪಡ್ತೀನಿ ಅಂತಾ ಪ್ರಯತ್ನ ಮಾಡ್ಬೇಕು ಅಂತಾ ನನಗಂತೂ ಆಗಾಗ ಅನ್ನಿಸುತ್ತೆ. ಆದರೆ ನಮ್ಮನ್ನು ತಲೆ ತಿನ್ನೋವು ಇವತ್ತಿನ ವಿಷಯಗಳೇ. ಅಪ್ರಾಮಾಣಿಕ ರಾಜಕೀಯ, ನೆರೆಪೀಡಿತರ ನೋವು, ಹುಸಿ ದೇಶಾಭಿಮಾನ, ಸಾಮಾನ್ಯನ ಅಸಹಾಯಕತೆ, ವೈಯಕ್ತಿಕ ಸಂಘರ್ಷಗಳು…

ಇಂದಿನ ಕವಿಯ ಮುಂದಿನ ಸವಾಲು..

ಜನಸಾಮಾನ್ಯರ ಬದುಕಿರುವ ಪ್ರತಿಯೊಂದು ಸವಾಲುಗಳೇ ಇವತ್ತಿನ ಕವಿಗಿರುವ ಸವಾಲು ಅಂತಾ ಭಾವಿಸಿದ್ದೀನಿ… ಬದಲಾಗಿರೋ ಸಾಂಸ್ಕೃತಿಕ ಮತ್ತು ರಾಜಕೀಯ ಸನ್ನಿವೇಶದ ಈ ಹೊತ್ತಿನಲ್ಲಿ, ವ್ಯಕ್ತಿ ಮತ್ತು ಸಾಮಾಜಿಕ ಬದುಕಿನ ಒಳಸೂಕ್ಷ್ಮಗಳನ್ನ, ವ್ಯಕ್ತಿ ಮತ್ತು ಪ್ರಕೃತಿಯ ಸಂಬಂಧದ ಅಂತರಲಯಗಳನ್ನ, ಆಳವಾಗಿ ಗ್ರಹಿಸಿ ಬರೀಬೇಕು ನಾವೆಲ್ಲ. ನಮ್ಮ ಭಾಷೆ, ನುಡಿಗಟ್ಟು, ಕಾವ್ಯದ ಆಕೃತಿ, ನಮ್ಮ ಸಾಹಿತ್ಯ ಪರಂಪರೆಯಿಂದ ಶಕ್ತಿ ಪಡೆದುಕೊಳ್ತಾ ಹೊಸದಾಗಬೇಕು. ಹೊಸ ತಲೆಮಾರಿನ ನನ್ನ ಸ್ನೇಹಿತರನೇಕರಿಗೆ ಖಂಡಿತ ಈ ಶ್ರದ್ಧೆ ಇದೆ.

ನಿಮ್ಮನ್ನು ಕಾಡುವ ಕವಿ…

ಕಾವ್ಯದ ಸಮ್ಮೋಹಕತೆಯಲ್ಲಿ ಬೇಂದ್ರೆ, ಬಂಧದಲ್ಲಿ ಅಡಿಗ, ವೈಚಾರಿಕತೆಯಲ್ಲಿ ಕುವೆಂಪು. ಒಬ್ಬ ಕವಿಯನ್ನು ಗುರುತಿಸುವುದು ಕಷ್ಟ. ಆದರೆ ಇವತ್ತಿಗೂ ಕಾವ್ಯವನ್ನು ಅತಿ ಹೆಚ್ಚು ಪ್ರೀತಿಸ್ತೀನಿ ಅಂದ್ರೆ, ಅಲ್ಲಮನಿಂದಾಗಿ…

*****

ಹಗಲ ಕತ್ತಲಲಿ ನಕ್ಷತ್ರ ನಗುವುದಿಲ್ಲ

ರಾತ್ರಿಯೆಂದರೆ ಕತ್ತಲಲ್ಲ

****

ಗುಡಿಗುಂಡಾರಗಳಿಗೆ

ಕತ್ತಿಮಸೆವ

ಅಡಿಗಲ್ಲುಗಳೇ

ಬನ್ನಿ

ನಿಮ್ಮೆಲ್ಲರಿಗೆ

ಅಲ್ಲಮನ ಬಯಲು ತೋರುವೆ

****

ಲೆಕ್ಕಿಲ್ಲ, ಬುಕ್ಕಿಲ್ಲ

ಬ್ಯಾಂಕ್ನಾಗ್ ಖಾತಿಲ್ಲ

ನರ್ನ್ಯಾಗ್ ಬರೀ ಸೊನ್ನಿ ಬರೀತೀವಿ ರೀ

ಹುಡುಗೂರುಪ್ಡೀ ಕಳಿಸಿ

ತಂಗಳನ್ನ ಬೇಡೀಸಿ

ತುತ್ ತಿಂದು ಹೊತ್ತನ್ನ ನೂಕ್ತೀವಿ ರೀ

ಹಳ್ಳಿಯ ಜನ ನಾವು..

(ಬೊಗಸೆಯಿಂದ ತೆಗೆದ ಸಾಲುಗಳು)

ವಾರಗೆಯ ‘ಒಳಗೂ… ಹೊರಗೂ…’ ಬ್ಲಾಗ್ ನಿಂದ ಈ ಲೇಖನ ಕಡ ತರಲಾಗಿದೆ. ಈ ಬ್ಲಾಗ್ ಮತ್ತು ಆಗಾಗ ಅಲ್ಲಿಂದ ಇಂದಿನ ಬರಹಗಾರರ ಪರಿಚಯ- ಸಂದರ್ಶನಗಳನ್ನು ತಂದು ಬಡಿಸುವ ಬಗ್ಗೆ ಹಿಂದಿನ ಪೋಸ್ಟೊಂದರಲ್ಲಿ ಹೇಳಿದ್ದೇವೆ.

‘ಮುಟ್ಟು’~ ಒಂದು ಹೊಸ ಪುಸ್ತಕ

ಬರಹಗಾರ ಮಿತ್ರ ಆಲೂರು ದೊಡ್ಡನಿಂಗಪ್ಪ ಅವರ ಹೊಸ ಪುಸ್ತಕ ಡಿಸೆಂಬರ್ 6ರಂದು ಬಿಡುಗಡೆಯಾಗುತ್ತಿದೆ. ಮೈಸೂರಿನಲ್ಲಿ ಸಂಜೆ 4:30ರಿಂದ ಕಾರ್ಯಕ್ರಮಗಳಿರುತ್ತವೆ. ನಿಮಗೆಲ್ಲರಿಗೂ ಆಲೂರರ ಪರವಾಗಿ ಹೊಸತಲೆಮಾರುವಿನ ಅದರದ ಆಹ್ವಾನ. ಬನ್ನಿ… ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿ…