ಚೈತ್ರನನ್ನು ತರಾಟೆಗೆ ತೆಗೆದುಕೊಂಡಾಗ… – ಒಂದು ಜಿಎಸ್‌ಎಸ್ ಕವಿತೆ

ಇವತ್ತಿನ ಜಿ.ಎಸ್. ಶಿವರುದ್ರಪ್ಪ ಕಾವ್ಯಹಬ್ಬ ‘ಚೈತ್ರೋದಯ’ವೇ ಯಾಕೆ? ಅಂತ ಯೋಚಿಸ್ತಿದ್ದೆ. ಈ ಹಿರಿಯ ಕವಿಗೆ ಚೈತ್ರ ಅಷ್ಟೊಂದು ಪ್ರೀತಿಯದಾ? ಅಂದುಕೊಂಡು ‘ಸುವರ್ಣ ಸಂಪುಟ ತಿರುವಿಹಾಕಿದಾಗ ಈ ‘ಕಂಪ್ಲೇಂಟು’ ಕವಿತೆ ಕಣ್ಣಿಗೆ ಬಿತ್ತು. ಓದೋಣ ಬನ್ನಿ…

ಕಂಪ್ಲೇಂಟು

ಕ್ಯೂ ನಿಂತು ಕಾಯುತ್ತಿದ್ದೇವೆ ನಾವೆಲ್ಲ,
ಬಂದನೇ ಹಿಡಿದು ಬಣ್ಣ ಬಣ್ಣಗಳ ಬಕೆಟ್ಟನು?
ಓ, ಬಂದ. ಗಾಳಿಯ ಕುಂಚವನ್ನದ್ದಿ
ಆಗಲೇ ಬಳಿದಿದ್ದಾನೆ ಹಲವು ಮರಗಳನು!

ಎಷ್ಟು ತಡ, ಏಕೆ ತಡ? ಇವನೊಬ್ಬ ಮುನ್ಸಿಪಲ್ ಕಂಟ್ರಾಕ್ಟರು;
ತನಿಖೆ ಮಾಡುವರಿಲ್ಲ, ಇವನನ್ನು ಕೇಳುವರಿಲ್ಲ ವರದಿ
ಅಲ್ಲರ್ಧ, ಇಲ್ಲರ್ಧ- ಇವನ ಕೆಲಸವೆ ಹೀಗೆ
ಇನ್ನು ಯಾವಾಗಲೋ ನಮ್ಮ ಸರದಿ!

ಸಾಕಪ್ಪ ಸಾಕು; ಕೊರೆವ ಕತ್ತರಿಗಾಳಿ ಹತ್ತರಿ ಹೊಡೆದು,
ಇದ್ದ ತರಗು- ಬರಗನು ತೆಗೆದು ಬತ್ತಲೆ ಮಾಡಿ,
ಛಳಿಯ ಪಾಲಿಷ್ ಹಾಕಿ, ಹೀಗೆ ಬಿರುಬಿಸಿಲಲ್ಲಿ
ನಿಲಿಸಬಹುದೇ ಇವನು ನಮ್ಮ ಮರ್ಯಾದೆಯನು
ಕಾಸಿಗಿಂತಲು ಕೂಡ ಕಡಮೆ ಮಾಡಿ!

ಹಿಂದೆಲ್ಲ ಹೀಗಿರಲಿಲ್ಲ, ಕವಿಗಳೆ ಕೇಳಿ,
ಈಗೀಗಂತು ಹೆಚ್ಚಾಗುತ್ತಿದೆ ಅವ್ಯವಸ್ಥೆ-
ಅರ್ಜಿ ಸಲ್ಲಿಸಿ ನಾವು ಎಷ್ಟು ದಿವಸಗಳಾಯ್ತು, ಏನು ಕತೆ;
ಹೀಗೆಲ್ಲ ಕೆಡಬಾರದಪ್ಪ ಹೆಸರಾದ ಸಂಸ್ಥೆ.

– ಜಿ.ಎಸ್.ಶಿವರುದ್ರಪ್ಪ

‘ಹೆಣ್ಣಿಗೇನು ಬೇಕು?’ ~ ನಮ್ಮ ಉತ್ತರಗಳು…

ಈ ಹಿಂದೆ ’ಹೊಸ ತಲೆಮಾರು’ವಿನಲ್ಲಿ  ಎರಡು ಭಾಗಗಳಾಗಿ ನೀಡಿದ ಕಿಷನ್ ಪಟ್ನಾಯಕ್‌ರವರ ಅನುವಾದಿತ ಲೇಖನ ’ಹೆಣ್ಣಿಗೇನು ಬೇಕು? ಸ್ವಾತಂತ್ರ್ಯವೋ, ಸಮಾನತೆಯೋ?’ಗೆ ಕೆಲವು ಪ್ರತಿಕ್ರಿಯೆಗಳು ಬಂದಿವೆ. ಇಲ್ಲಿ ಬರೆದುಕೊಂಡಿರುವ ಹೆಣ್ಣುಮಕ್ಕಳು ಕಿಷನ್‌ರ ವಾದಕ್ಕೆ ತಮ್ಮತಮ್ಮ ರೀತಿಯಲ್ಲಿ ವ್ಯಾಖ್ಯಾನ ನೀಡಿದ್ದಾರೆ. ದಯವಿಟ್ಟು ನಿಮ್ಮ ಪ್ರತಿಕ್ರಿಯೆಗಳನ್ನು ನಮ್ಮ ಮುಖ್ಯಪುಟದಲ್ಲಿ ನೀಡಲಾಗಿರುವ ಇ-ಮೆಯಿಲ್ ವಿಳಾಸ hosatalemaaru@gmail.comಗೆ ಕಳುಹಿಸಿರಿ. ಅವನ್ನು ಇಲ್ಲಿ ಪ್ರಕಟಿಸಲಾಗುವುದು

ಸುಗುಣಾ ಮಲ್ಲೇಶ್ ಹೇಳುತ್ತಾರೆ:

Hai
Hmm I guess the all that gal want is Freedom to say, to stand, to prove herself (not to anybody but to herself)… she is tied up by so many factors like…. the “loved ones”, or the nasty society or the cruel n nutty people around her or by the responsibility(suitable to this century)…..
if she is given freedom she proves herself… and automatically the equality develops or the respect is gained … but if she is curbed of freedom, she can never become what she is actually, inside. I feel she is always being interrupted by responsibility at a very young age … like a marriage, managing a man, his family or a child….or in some cases her sexuality limits her doing so many things like working, or becoming a leader… etc… I still don’t understand the “reservation system” which is given to woman… its not necessary, if this is a democratic country n secularism is there then it should be equal distribution, let them prove themselves n fetch the seats or positions… what ever it is!!!!….the constitution is very old…need to re-constitute it….

talking abt equality… it’s not an other issue… its linked….. It’s something our own…. it’s with nobody else so as to go n asking for it…. (Mind it all guys…it’s not with u guys… so that u are offering us whenever n whomever u like to, love to ..!!!!!!!he he he jus joking… I know he is referring to society in whole) but we should also consider the point , that this society is built by none other than man (in majority)…..if people respect somebody in particular, its their duty to respect the other person in response…. its very inappropriate, foolishness to say like “u want equality????”… I jus want to say… its with no ones hand to offer it to gals or women… its in t hands of  the individual both guys and gals…. they have to perform, prove themselves deservable n gain that equality….no boy is respected if he is useless and burden….. now the era is different… the citizens now think bit intellectually…

so its the freedom(swathantrya) all gals want…. jus freedom not wise(swachchye)…. guys were given full freedom so they could do everything possible by them n proved them efficient enough and gained equality which woman were curbed earlier , now if the same freedom is given to gals , then I guess we too will reach their heights and can be self – contented…its our show time… we need only chance to participate in by the society.

I feel “freedom” is an opportunity and “equality” is the reward u get after achieving ur goal.!!!!!

So we (at least I want freedom in every sense) so that I can prove myself n gain equality……if we ask for equality its jus a prize with zero effort. Which is not enjoyable…. we too are achievers…. we dont want easy success.

ಸುಪರ್‍ಹಿಟ್ಸ್ 93.5 ರೆಡ್ ಎಫ್.ಎಮ್ ನ ಮೈಸೂರು ಕೇಂಡ್ರದ ರೇಡಿಯೋ ಜಾಕಿ ಚೈತ್ರ ಎನ್. ಹೇಳುತ್ತಾರೆ..

ಲೇಖನ ಬಹಳ ಅರ್ಥಪೂರ್ಣವಾಗಿದೆ.ಲೇಖನದ ತುಂಬ ಕ್ರಾಂತಿಯ ಕಿಡಿ ಹಬ್ಬಿದ್ದು  ಅದು ವಿಚಾರವಂತರ  ದೀಪ ಬೆಳಗುವುದು.ಜೊತೆಗೆ  ಮಡಿವಂತರಿಗೆ ಮೈಲಿಗೆ ಮಾಡುವುದು. ಮೈಲಿಗೆಗು ಸಾತ್ವಿಕತೆಗು ವ್ಯತ್ಯಾಸ   ಅರಿಯದ ಜನರು ಹೆಣ್ಣಿನ ಸ್ವತಂತ್ರವನ್ನ ಮೊಟಕು ಮಾಡಲು “ಆಕ್ರಮಣಕಾರಿ” ನೀತಿ ಅನುಸರಿಸುತ್ತ ಬಂದಿದ್ದಾರೆ. ಭಾವನಾತ್ಮಕವಾಗಿಯೇ ಅವಳ ಆಲೋಚನೆಗಳನ್ನು ಮೊಟಕು ಮಾಡಿದ್ದಾರೆ. ಇಂಥಹ ಸಂದರ್ಭದಲ್ಲಿ ಈ ಲೇಖನ ಸಂದರ್ಭೋಚಿತವಾಗಿತ್ತು. ಈ ಲೇಖನದಲ್ಲಿ ಕೇವಲ ಯಾವುದೊ ಒಂದು ಸಮುದಾಯವನ್ನು ಟೀಕಿಸದೆ ಸಮುದಾಯದ ಹೊಣೆಗಾರಿಕೆ,ಕರ್ತವ್ಯಗಳು,ಪ್ರತಿಕ್ರಿಯೆಗಳ ಬಗ್ಗೆ ಬಹಳ ಪಾರದರ್ಶಕವಾಗಿ ಅಭಿಪ್ರಾಯ ಮೂಡಿ ಬಂದಿದೆ. ಯಾವುದೊ ಒಂದು ಸೈದ್ಧಾಂತಿಕ ನಿಲುವಿಗೆ ಜೋತು ಬಿದ್ದು ಕೇವಲ ಸಿದ್ಧಾಂತದ ಪ್ರತಿಪಾದನೆಯಾಗದೆ ವಿಷಯದ ಸೂಕ್ಷ್ಮತೆ ಮತ್ತು ವಿಷಯಕ್ಕೆ ಸಂಬಂಧಿಸಿದ ಹಾಗೆ ಲೇಖನ ವಸ್ತುನಿಷ್ಟವಾಗಿ  ಮೂಡಿ ಬಂದಿದೆ.ಸ್ವತಂತ್ರ  ಮತ್ತು ಸಮಾನತೆ ಒಂದೇ ನಾಣ್ಯದ ೨ ಮುಖಗಳು  ಎಂಬ ಅಂಶ ಮೆಚುಗೆಯಾಯಿತು. ವಾಸ್ತವಕ್ಕೆ ಹೆಚ್ಹು ಒತ್ತುಕೊಟ್ಟು ಮೂಡಿರುವ ಈ ಲೇಖನದ ಅಂತ್ಯ ಕೊಂಚ ಕಷ್ಟವೇನೋ ಅನಿಸಿದೆ. ಎಲ್ಲ ನಿಯಮಗಳನ್ನ ಮೀರಿ ಸಾಗಬೇಕಾದರೆ ಕೆಲವೊಂದು ಸ್ವಾವಲಂಬನೆ ಅಗತ್ಯವಿದೆ.ಉದಾ :ಅರ್ಥಿಕ,ಶೈಕ್ಷಣಿಕ ….. ಈ ನಿಟ್ಟಿನಲ್ಲಿ ಇದು ಬಹಳ ಸಮಯ ಬೇಡುತ್ತದೆ. ಕ್ರಾಂತಿಯೇ ಹಾಗಲ್ಲವೇ ?ಒಟ್ಟಿನಲ್ಲಿ ತುಂಬ ವಿಚಾರಪೂರ್ಣ ಲೇಖನ. ಮೆಚ್ಹುಗೆ ಯಾಯಿತು.

ಅಭಿನೇತ್ರಿ ಜಯಲಕ್ಷ್ಮಿ ಪಾಟೀಲ್ ಹೇಳುತ್ತಾರೆ:

ನಮಸ್ಕಾರ.
ಬರಹ ತೀಕ್ಷ್ಣ ಮತ್ತು ಕ್ಲೀಷೆಯಾಗಿದೆ ಅನಿಸ್ತು. ಲೇಖನದ ಮೊದಲ ಭಾಗ ತುಂಬಾ ತರ್ಕಬದ್ಧವಾಗಿ ಮೂಡಿ ಬಂದಿದೆ. ಎರಡನೆಯ ಭಾಗದಲ್ಲಿ ಲೇಖಕರು ಹೆಣ್ಣಿನ ಸ್ವಾತಂತ್ರ, ಸಮಾನತೆಯ ಬಗ್ಗೆ ಮಾತಾಡುತ್ತಲೇ ಗಂಡು ಸಂಸಾರ ಬಂಧನಕ್ಕೊಳಗಾಗುವ ಆತಂಕ ವ್ಯಕ್ತಪಡಿಸಿದ್ದು ನೋಡಿದರೆ, ಲೈಂಗಿಕ ಮುಕ್ತತೆಯ ಬಗ್ಗೆ ಹೇಳಿದ್ದನ್ನು ಕಂಡರೆ, ಸಮಾಜ ಪದ್ದತಿಯ ವ್ಯವಸ್ಥೆ ಹದಗೆಡುವುದಿಲ್ಲವೆ ಇದರಿಂದ ಅನ್ನುವ ಪ್ರಶ್ನೆ ಮೂಡುತ್ತದೆ. ಸ್ವಾತಂತ್ರ ಅನ್ನುವುದು ಮಾನವ ಅಥವಾ ಪ್ರತಿಯೊಂದು ಜೀವಿಯೂ ಹುಟ್ಟಿನಿಂದಲೇ ಪಡೆದು ಬಂದಿರುವಂಥದ್ದು. ಅದು ಹೆಣ್ಣೇ ಇರಲಿ, ಗಂಡೇ ಇರಲಿ ಸ್ವಾತಂತ್ರ ಸ್ವೇಚ್ಛೆಯಾಗದಿದ್ದಲ್ಲಿ ಸ್ವಂತದ ಮತ್ತು ಸಮಾಜದ ಆರೋಗ್ಯ ಸ್ವಸ್ಥವಾಗಿರುತ್ತದೆ. ಮನುಷ್ಯ ಸಂಘಜೀವಿ. ಎಷ್ಟೇ ಸ್ವತಂತ್ರವಾಗಿ ಬದುಕುತ್ತೇವೆಂದುಕೊಂಡರೂ ಆಗದು. ಲೈಂಗಿಕ ಬೇಡಿಕೆ ಭಾರತೀಯ ಹೆಣ್ಣಿನ ಮಟ್ಟಿಗೆ(ಉಳಿದ ದೇಶಗಳ ಬಗ್ಗೆ ನನ್ನ ಅರಿವು ಅಷ್ಟಿಲ್ಲವಾದ್ದರಿಂದ ಪ್ರಪಂಚದ ಕುರಿತು ಮಾತಾಡಾಲಾರೆ. ಆದರೆ ಪ್ರಪಂಚದ ಉಳಿದೆಡೆಯೂ ಪ್ರೀತಿ, ಪ್ರೇಮದ ಹೆಸರಲ್ಲಿ ಜಗಳ, ವಿಚ್ಛೇದನ, ಕೊಲೆ ಎಲ್ಲ ನಡೆಯುವುದನ್ನು ಕಂಡರೆ ಪ್ರಪಂಚದ ಯಾವ ಭಾಗದ ಮನುಷ್ಯರಾದರೂ ಭಾವನೆಗಳು ಒಂದೇ ಥರ ಅನ್ನುವುದು ವಿದಿತವಾಗುತ್ತದೆ, ವ್ಯಕ್ತಪಡಿಸುವ ವಿಧಾನಗಳು ಬೇರೆಯಾಗಬಹುದು ಅಷ್ಟೆ.)ಕೇವಲ ದೈಹಿಕವಲ್ಲ. ಬರೀ ದೇಹದ ಕೋರಿಕೆಯೊಂದನ್ನೇ ಗಮನದಲ್ಲಿಟ್ಟುಕೊಂಡು ವರ್ತಿಸುವುದು ಭಾರತೀಯ ಹೆಣ್ಣಿಗೆ ಸಾಧ್ಯವಾದಲ್ಲಿ ನಮ್ಮ ಸಮಾಜ ಹೇಗೆ ಅದನ್ನು ಎದುರಿಸಬಹುದು ಅನ್ನುವುದರ ಬಗ್ಗೆ ಕುತೂಹಲವಿದೆ.ಯಾರೂ ಯಾರ ಗುಲಾಮರೂ ಅಲ್ಲ, ದುರ್ಬಲ ಮನಸ್ಸಿನವರನ್ನು ಯಾರು ಬೇಕಾದರೂ ಗುಲಾಮರನ್ನಾಗಿಸಿಕೊಳ್ಳಬಹುದು. ಅದು ಹೆಣ್ಣೇ ಆಗಬೇಕೆಂದಿಲ್ಲ. ಸಮಾನತೆ ಬೇಕು ಅಂತ ಬೇಡಿಕೊಳ್ಳೋದೇ ಅಸಹ್ಯಕರ ಅನಿಸೋದಿಲ್ವೆ? ಯಾಕೆಂದರೆ ನಮ್ಮಲ್ಲಿ ಯಾವತ್ತು ಕೀಳರಿಮೆ ತುಂಬಿಕೊಳ್ಳುತ್ತೊ ಅಥವಾ ಎಲ್ಲಿಯವರೆಗೆ ಕೀಳರಿಮೆ ಇರುತ್ತದೋ ಆಗ ಅಂಥ ದಯನೀಯ ಬೇಡಿಕೆ ಮುಂದಿಡಲ್ಪಡುತ್ತದೆ. ಜೊತೆಗೆ ಅಸಹಾಯಕತೆ. ಅದೂ ಸಹ ಅಸಮಾನತೆಯ ಅಂತರ ತೋರುವಂತೆ ಮಾಡುತ್ತದೆ. ಅಲ್ಲದೇ ಹುಟ್ಟುತ್ತಲೇ ಯಾರೂ ಯಾರ ಗುಲಾಮರಾಗಿ ಹುಟ್ಟುವುದಿಲ್ಲವಾದ್ದರಿಂದ ನಮ್ಮ ಸ್ಥಿತಿಗತಿಗಳಿಗೆ ನಾವೇ ಕಾರಣರಾಗಿ ಸಮಾನತೆ-ಅಸಮಾನತೆಯ ಸ್ಥಾನಗಳು ಏರ್ಪಡುತ್ತವೆ.
ಭಾರತೀಯ ಹೆಣ್ಣಿಗೆ ಶತಮಾನದ ಹಿಂದಿನವರೆಗೂ ತನ್ನ ಸಾಮರ್ಥ್ಯದ ಅರಿವಿರಲಿಲ್ಲ (ಅಪರೂಪವೆಂಬಂತೆ ಕಾಣ ಸಿಗುವ ಕೆಲ ಸಬಲೆಯರ ಉದಾಹರಣೆಗಳ ಹೊರತಾಗಿ), ಆದರೆ ಈಗ ಅರಿವಾಗುತ್ತಿದೆ. ಮುಂದಿನ ದಿನಗಳಲ್ಲಿ ಹೆಣ್ಣು ಈಗಿರುವ ಸ್ಥಿತಿಯಲ್ಲಿ ಖಂಡಿತ ಇರುವುದಿಲ್ಲ. infact ಈಗಲೇ ಬೇಕಾದಷ್ಟು ಬದಲಾವಣೆಗಳನ್ನು ಮಾಡಿಕೊಳ್ಳತೊಡಗಿದ್ದಾಳೆ ವೈಚಾರಿಕ ನೆಲೆಯಲ್ಲಿ, ತನ್ನ ಬದುಕಿನ ಶೈಲಿಯಲ್ಲಿ.

ಚೈತ್ರೋದಯ… ಜಿಎಸ್‌ಎಸ್‌ ಕಾವ್ಯೋತ್ಸವ

ಕಾವ್ಯಾಸಕ್ತ ಸಮಾನ ಮನಸ್ಕರ ‘ರಸಿಕಾ ಕೇಳೋ’ ತಂಡ ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಸಮ್ಮುಖದಲ್ಲಿ ಕಾವ್ಯದ ಹಣತೆ ಹಚ್ಚುವ ‘ಚೈತ್ರೋದಯ’ ಕಾವ್ಯ ಹಬ್ಬವನ್ನು ಆಯೋಜಿಸಿದೆ. ಡಿಸೆಂಬರ್ ೨೭ರ ಭಾನುವಾರ ಬೆಳಗ್ಗೆ ೧೦ಕ್ಕೆ ಕಾರ್ಯಕ್ರಮ ಆರಂಭಗೊಳ್ಳಲಿದೆ. ಸ್ಥಳ: ರವೀಂದ್ರ ಕಲಾಕ್ಷೇತ್ರ.

ಈ ಕಾರ್ಯಕ್ರಮದಲ್ಲಿ ಕಾವ್ಯದ ಹಣತೆ ಹಚ್ಚುವರು:
ಚನ್ನವೀರ ಕಣವಿ, ಚಂದ್ರಶೇಖರ ಕಂಬಾರ, ಪಂ.ಪರಮೇಶ್ವರ ಹೆಗಡೆ, ಸಿ.ಆರ್.ಸಿಂಹ, ಕೆ.ಎನ್.ಶಾಂತಕುಮಾರ್, ಅಜಯ್ ಕುಮಾರ್ ಸಿಂಗ್, ಉಮಾಶ್ರೀ, ಎಚ್.ಎಸ್.ವೆಂಕಟೇಶ ಮೂರ್ತಿ, ಸುರೇಶ್ ಕುಮಾರ್, ಸಿದ್ಧಲಿಂಗಯ್ಯ, ಬಿ.ಟಿ.ಲಲಿತಾ ನಾಯಕ್, ವಿಶ್ವೇಶ್ವರ ಭಟ್, ಡಾ.ಭುಜಂಗ ಶೆಟ್ಟಿ, ಚಿರಂಜೀವಿ ಸಿಂಗ್, ಟಿ.ಎನ್.ಸೀತಾರಾಂ, ರವಿ ಬೆಳಗೆರೆ, ಜಯಮಾಲಾ, ಕೆ.ಶಿವಸುಬ್ರಹ್ಮಣ್ಯ, ಐ.ಎಂ.ವಿಟ್ಠಲಮೂರ್ತಿ, ಬಿ.ಜಯಶ್ರೀ, ಎಸ್.ದಿವಾಕರ್, ಮಂಡ್ಯ ರಮೇಶ್, ಎಸ್.ಷಡಕ್ಷರಿ, ಶ್ರೀನಿವಾಸ್ ಜಿ.ಕಪ್ಪಣ್ಣ, ಆಂಜನೇಯ, ಜೋಗಿ, ಮನು ಬಳಿಗಾರ್, ಎಸ್.ಆರ್.ರಾಮಕೃಷ್ಣ, ಸುಮಾ ಸುಧೀಂದ್ರ, ಜಹಾಂಗೀರ್, ಮತ್ತು ಯತಿ ಸಿದ್ಧನಕಟ್ಟೆ.

ಬರಹಲೋಕದಲ್ಲಿ ತಮ್ಮನ್ನು ಉತ್ಸಾಹದಿಂದ ತೊಡಗಿಸಿಕೊಂಡಿರುವವರು, ಸಾಹಿತ್ಯಾಸಕ್ತರು (ಅವರು ಯಾರೆಲ್ಲ ಎಂದು ಕೇಳಲಾಗಿ, ಕೇಳಿಸಿಕೊಂಡವರು (ನಾಚಿ) ನಗುತ್ತ ‘ನಾವೇ ಒಂದಿಷ್ಟು ಸಮಾನಾಸಕ್ತ ಗೆಳೆಯರು ’ ಎನ್ನಲಾಗಿ…) ರಸಿಕಾ ಕೇಳೋ ತಂಡದಲ್ಲಿದ್ದಾರೆ. ಈ ತಂಡದ ಹೆಚ್ಚುಗಾರಿಕೆಯು, ಕಾರ್ಯಕ್ರಮಕ್ಕೆ ಕಾವ್ಯ ಹಣತೆ ಹಚ್ಚಲು ಆಹ್ವಾನಿಸಿರುವ ವ್ಯಕ್ತಿಗಳ ಆಯ್ಕೆಯಿಂದಲೇ ತಿಳಿದುಹೋಗುತ್ತದೆ. ಸಾಹಿತ್ಯ, ಪತ್ರಿಕೋದ್ಯಮ, ಉದ್ಯಮ, ಸಿನೆಮಾ, ಆಡಳಿತ, ರಾಜಕೀಯ ಹಾಗೂ ರಂಗಭೂಮಿಯ ಸಾಹಿತ್ಯಾಸಕ್ತರನ್ನು ಅದಕ್ಕಾಗಿ ಕಲೆಹಾಕಿರುವುದು ಅಭಿನಂದನಾರ್ಹ ಹಾಗೂ ಅನುಕರಿಸತಕ್ಕಂಥ ಮಾದರಿ.

ಇಂತಹ ಆಲೋಚನೆಗಳು ಮತ್ತಷ್ಟು ವ್ಯಾಪಕವಾಗಲಿ ಹಾಗೂ ಒಳ್ಳೆಯ ಸಾಹಿತ್ಯಕ ಸಂವಾದಕ್ಕೆ ಹಸಿದಿರುವ ಹೊಸತಲೆಮಾರಿಗೆ ರಸದೌತಣ ಸಿಗಲಿ ಎಂಬುದು ನಮ್ಮ ಬಳಗದ ಹಾರೈಕೆ.

ಹೆಣ್ಣಿಗೇನು ಬೇಕು: ಸ್ವಾತಂತ್ರ್ಯವೋ? ಸಮಾನತೆಯೋ?

ಆದ್ಯತೆ ಅನ್ನುವ ಪದವೇ ಮೊದಲು ಪ್ರತಿಭಟನೆಗೆ ಒಳಗಾಗ ಬೇಕು ಎಂಬ ಶೀರ್ಷಿಕೆಯಡಿ ಪ್ರಕಟಿಸಲಾದ ಬರಹಗಳು ಒಂದೇ ಲೇಖನದ ಎರಡು ಭಾಗಗಳು. (ಭಾಗ-1, ಭಾಗ-2 ಓದಲು ಅವುಗಳ ಮೇಲೆ ಕ್ಲಿಕ್ಕಿಸಿ).  ಅವುಗಳ ಇಂಟ್ರೋದಲ್ಲಿ ಹೇಳಿರುವ ಹಾಗೆ ಚಿಂತಕ ಕಿಶನ್ ಪಟ್ನಾಯಕ್ ಅವರ ಲೇಖನವಿದು. ಈ ಲೇಖನಕ್ಕೆ ಹಲವು ಪ್ರತಿಕ್ರಿಯೆಗಳು ಬಂದಿದ್ದು, ಅದನ್ನು ಮುಂದೆ ಸಂವಾದಕ್ಕಾಗಿ ಇಲ್ಲಿ ಹಾಕಲಾಗುವುದು. ನೀವೂ ಈ ಚರ್ಚೆಯಲ್ಲಿ ಪಾಲ್ಗೊಳ್ಳಬಹುದು.

ಅಂದಹಾಗೆ, ಹೆಣ್ಣಿಗೇನು ಬೇಕು: ಸ್ವಾತಂತ್ರ್ಯವೋ? ಸಮಾನತೆಯೋ? ಅನ್ನುವ ಶಿರೋನಾಮೆಗೆ ಬದಲಾಗಿ ನಾನು ‘ಆದ್ಯತೆ’ ಅನ್ನುವ ಪದವೇ ಪ್ರತಿಭಟನೆಗೆ ಒಳಗಾಗಬೇಕು ಅನ್ನುವ ಅವರ ಹೇಳಿಕೆಯನ್ನೇ ಶಿರೋನಾಮೆಗೆ ಬಳಸಿಕೊಂಡಿದೇನೆ. ಕಾರಣವಿಷ್ಟೇ, ಅದು ನನ್ನ ವೈಯಕ್ತಿಕ ಅನಿಸಿಕೆ ಕೂಡ ಆಗಿದೆ.  ನಾನೂ ಅದನ್ನು ಬಲವಾಗಿ ಪ್ರತಿಪಾದಿಸುತ್ತೇನೆ.

ಜೊತೆಗೆ, ಈ ಲೇಖನದಲ್ಲಿ ಚರ್ಚಿಸಬಹುದಾದ, ಒಪ್ಪದೆ ಇರಬಹುದಾದ ಅನೇಕ ಅಂಶಗಳೂ ಇವೆ. ಎಲ್ಲ ಪ್ರತಿಕ್ರಿಯೆಗಳನ್ನೂ ಕ್ರೋಢೀಕರಿಸಿ ಇದೇ ಚ್ಲಾಗ್ ನಲ್ಲಿ ಪ್ರಕಟಿಸಲಾಗುವುದು.

ಆದ್ಯತೆ ಎನ್ನುವ ಪದವೇ ಪ್ರತಿಭಟನೆಗೆ ಒಳಗಾಗಬೇಕು ~ ೨

ಪ್ರೀತಿ-ನಿರ್ಭೀತಿ, ಪ್ರೊ.ಕಾಳೇಗೌಡ ನಾಗವಾರರ ಲೇಖನ ಮತ್ತು ಅನುವಾದಗಳ ಸಂಕಲನ. ಪ್ರಸ್ತುತ ಲೇಖನವನ್ನು ಈ ಸಂಕಲನದಿಂದಲೇ ಆಯ್ದುಕೊಳ್ಳಲಾಗಿದೆ. ಇದರ ಮೂಲ ಲೇಖಕ, ಸಮಾಜವಾದೀ ಚಿಂತಕ ಕಿಷನ್ ಪಟ್ನಾಯಕ್. ಲೇಖನದ ಮೊದಲ ಭಾಗವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಭಾಗ – 2 –

ಇಂಡಿಯಾದ ಸ್ತ್ರೀವಾದಿಗಳು ಮತ್ತೊಂದು ವಿಲಕ್ಷಣವಾದ ಸಂಪ್ರದಾಯಶರಣತೆಯಿಂದ ನರಳುತ್ತಾರೆ: “ನಾನು ಲೈಂಗಿಕ ಸ್ವಾತಂತ್ರ್ಯವನ್ನು ಸಮರ್ಥಿಸುವುದಿಲ್ಲ…. ಸ್ತ್ರೀಪುರುಷರಿಬ್ಬರಿಗೂ ಗಡಿಗಳಿರಬೇಕೆನ್ನುವವಳು ನಾನು…. ಪ್ರೇಮ, ಮದುವೆ ಮತ್ತು ಲೈಂಗಿಕತೆಗಳಲ್ಲಿನ ಹೊಣೆಗಾರಿಕೆಯು ಇಬ್ಬರಿಗೂ ಒಂದೇ ಆಗಿರಬೇಕು….” ಇತ್ಯಾದಿಯಾಗಿ (ಮ್ಯಾನ್ ಕೈಂಡ್ ಸಂ೧.ಸಂ೬) ಶ್ರೀಮತಿ ಇಂದುಮತಿ ಕೇಳ್ಕರ್ ಬರೆಯುತ್ತರೆ. ಇಲ್ಲೇ ಸಮಸ್ಯೆಯ ಕಗ್ಗಂಟು ಇರುವುದು ಮತ್ತು ಕೇವಲ ಹುತ್ತವನ್ನು ಬಡಿಯುವವರ ಬಂಡವಾಳ  ಇಲ್ಲಿ ಬಯಲಾಗುತ್ತದೆ. ಹೆಣ್ಣಿಗೇನು ಬೇಕು: ಸ್ವಾತಂತ್ರ್ಯವೋ ಇಲ್ಲಾ ಸಮಾನತೆಯೋ? ಕೊಟ್ಟಕೊನೆಗೆ ಸ್ವಾತಂತ್ರ್ಯ ಅಂದರೆ ಸಮಾನತೆ ಅಂತಲೇ ಅರ್ಥ. ಸಮಾನತೆಯು ಗಾಣದೆತ್ತಿನ ಸ್ಥಿತಿಯಾಗಿರಬಹುದು; ಅಥವಾ ಬಲವಂತವಾಗಿ ಹೇರಿದ್ದಾಗಿರಬಹುದು- ಮತ್ತು ಗುಲಾಮೀ ರಾಜ್ಯದಲ್ಲೂ ಇದ್ದಿರಬಹುದು. ಮಹಿಳೆಯರು ಗಂಡಿನೊಡನೆ ಸಮಾನತೆಯನ್ನು ಅಪೇಕ್ಷಿಸುವರೆಂದರೆ ಅದು ಅವರ ಸ್ತ್ರೀಸಹಜವಾದ ಹಠಮಾರಿತನ ಅಷ್ಟೆ. ಅವರು, ತಾವು ನಿರಾಳವಾಗಿರುವುದನ್ನು ಬಯಸಬೇಕು. ಸಮಾನತೆಯ ಬಗೆಗಿನ ಅವರ ಆಕಾಂಕ್ಷೆ ನಿಜಕ್ಕೂ ಗಟ್ಟಿಯಾದುದ್ದೇ ಹೌದಾದರೆ ಸ್ವಾತಂತ್ರ್ಯವು ಅದನ್ನು ಅವರ ಕಲಬುಡಕ್ಕೇ ತಂದಿಕ್ಕುತ್ತದೆ. ಯಾವುದು ಆರ್ಥಿಕ ಸರಣಿಯ ಸಮಾನತೆಯಾಗಿದೆಯೋ ಆ ಸಮಾನತೆಯು ಎಲ್ಲೆಲ್ಲೂ ತನ್ನ ಅಬದ್ಧ ಧ್ಯೇಯಾದರ್ಶಗಳನ್ನು ಬಿತ್ತಕೂಡದು.

ಭಾರತೀಯ ಮಹಿಳೆಯು ಲೈಂಗಿಕ ಸ್ವಾತಂತ್ರ್ಯವನ್ನು ಏಕೆ ಬಯಸಬಾರದು? ವೈಧವ್ಯ ಮತ್ತು ಘೋಷಾ ಪದ್ಧತಿಯನ್ನು ಎಲ್ಲ ಕಾಲಕ್ಕೂ ಉಳಿಸಿಕೊಳ್ಳಬೇಕೆಂಬ ಬಯಕೆ ಅವಳಿಗಿದೆಯೇ? ಎಲ್ಲಿಯವರೆಗೆ ಹೆಣ್ಣು ತನ್ನ ಲೈಂಗಿಕ ಆಕಾಂಕ್ಷೆಗಳ ಬಯಕೆಯ ಬಂಧದಲ್ಲಿ ತಾನು ಸ್ವತಂತ್ರ್ಯಳಲ್ಲವೋ  ಅಲ್ಲಿಯತನಕ ಆಕೆಯ ಮೇಲಿನ ಗಂಡಿನ ಶೋಷಣೆಯು ಮುಂದುವರೆಯುತ್ತದೆ. ಗಂಡಿನ ಲೈಂಗಿಕ ಸ್ವಾತಂತ್ರ್ಯಕ್ಕೆ ಅಡೆತಡೆಗಳಿರಬೇಕೆಂದು ಹಾರೈಸುತ್ತಾ ಕೂರುವುದರಿಂದ ಏನೂ ಪ್ರಯೋಜನವಿಲ್ಲ. ಹಾಗಾದರೆ ಮುಂದೇನು? ಅದು ಪೀನಲ್ ಕೋಡಿನ ಕಲಂಗಳನ್ನು ಲಕ್ಷ್ಯವಿಟ್ಟು ಪರಿಷ್ಕರಿಸುವುದರಿಂದ ಖಂಡಿತವಾಗಿಯೂ ಆಗುವುದಿಲ್ಲ! ಹೆಂಗಸರಿಗೆ ಲೈಂಗಿಕ ಸ್ವಾತಂತ್ರ್ಯ ಇಲ್ಲದಿದ್ದಲ್ಲಿ ಗಂಡಸರು ವಿಷಯಲಂಪಟರಾಗುತ್ತಾರೆ. ಸ್ತ್ರೀಪುರುಷರಿಬ್ಬರೂ ಲೈಂಗಿಕವಾಗಿ ಸ್ವತಂತ್ರರಾಗಿದ್ದಲ್ಲಿ ಅವರ ನೈತಿಕ ವರ್ತನೆಯು ಸಮಾಜವಾದಿ ಸಮಾಜವೊಂದರಲ್ಲಿ ಸಮಸ್ಥಿತಿಯನ್ನು ತಲುಪುತ್ತದೆ!

ಯಾವ ಸಮಾಜದಲ್ಲಿ ವಿವಾಹ ವಿಚ್ಚೇದನ ಮತ್ತು ವಿಧವಾ ವಿವಾಹಗಳು ನೈತಿಕವಲ್ಲವೋ ಅಲ್ಲಿ ಲೈಂಗಿಕ-ನೈತಿಕತೆಯನ್ನು ಒಂದೇ ವ್ಯಕ್ತಿಗೆ ವಿಧೇಯರಾಗಿರುವುದು ಎಂದು ಅರ್ಥೈಸಿ ಲಕ್ಷ್ಮಣ ರೇಖೆಯನ್ನು ಎಳೆಯದೆ, ಲೈಂಗಿಕತೆಯ ಆರೋಗ್ಯಕರ ಬಳಕೆ ಮತ್ತು ಆತ್ಮಸಂಯಮವೆಂದು ಸಮಾಜವಾದಿಗಳು ಮತ್ತು ಭಾರತೀಯ ಮಹಿಳೆಯರು ಮನಗಾಣಬೇಕು. ಈ ಸ್ಥಿತಿಯಲ್ಲಿ ಸ್ತ್ರೀ ಪುರುಷರ ಕುಟುಂಬ ಹಿತ ಅಥವಾ ಆ ಸಂಸ್ಥೆಯ ಸಂಬಂಧದ ಹೊಣೆಗರಿಕೆಯು ಸಂಪೂರ್ಣವಾಗಿ ಸಹಜ ಪ್ರವೃತ್ತಿಯನ್ನು ಅವಲಂಬಿಸುತ್ತದೆ. ಹೆಂಗಸರು ಸಮಾನತೆಗಾಗಿ ಕೂಗಾಡುವಾಗ ತಾವು, ತಮಗೆ ಸರಿಹೊಂದದ ಅಸಹಜ ಪ್ರವೃತ್ತಿಯೊಂದನ್ನು ಬಯಸುವುದಷ್ಟೆ ಅಲ್ಲದೆ, ಗಂಡಸರು ಕೂಡ ಅವರಿಗೆ ಸರಿಹೊಂದದ ಪ್ರವೃತ್ತಿಯೊಂದನ್ನು ಅಸಹಜವಾಗಿ ರೂಡಿಸಿಕೊಳ್ಳಬೇಕೆಂದು ಹೇಳುತ್ತಾರೆ. ಆರ್ಥಿಕವಾಗಿ ತಬ್ಬಲಿಗಳಾದ ಮಕ್ಕಳು ಹುಟ್ಟುವುದಿಲ್ಲವೆ? ಅಂತಹ ಮಕ್ಕಳ ಬಗ್ಗೆ ಸಾಮಾನ್ಯವಾಗಿ ಹೆಂಗಸರಿಗಿಂತ ಕಡಿಮೆ ಆಸಕ್ತಿಯನ್ನು ಗಂಡಸರು ತಾಳುತ್ತಾರೆ. ಸಮಾಜವಾದಿ ಸಮಾಜವೊಂದರಲ್ಲಿ ಮಕ್ಕಳೂ ಆರ್ಥಿಕವಾಗಿ ನಿರ್ಗತಿಕರಾಗಿರುವುದಿಲ್ಲ. ಇವತ್ತು ನೀವು ಒಬ್ಬನನ್ನು ಅಪ್ಪ ಅಂತ ಕರೆದು, ಆತನಿಗೆ ಕುಟುಂಬದ ತಲೆಯಾಳಿನ ಪಟ್ಟ ಕಟ್ಟುತ್ತೀರಿ. ಈ ಸುಳ್ಳು- ಅಗ್ಗಳಿಕೆಯಿಂದ ಬೀಗುತ್ತ ಹಿರಿಹಿಗ್ಗುವ ಆ ಮೂರ್ಖ, ತನ್ನ ಸಂತಾನದ ಭವಿಷ್ಯದ ಬಗ್ಗೆ ಯಾವ ಮುಂದಾಲೋಚನೆಯೂ ಇಲ್ಲದೆ, ಕೇವಲ ಮಕ್ಕಳನ್ನು ಬೆಳೆಸುವ ಕಾಯಕದ ಬಲಿಪೀಠಕ್ಕೆ ತನ್ನ ಇಡೀ ಜೀವಮಾನವನ್ನೆ ಅರ್ಪಿಸುತ್ತಾನೆ. ಯಾವತ್ತು ಮಕ್ಕಳು ತಮ್ಮ ಅಪ್ಪ ಅಮ್ಮಂದಿರಿಗೆ ಆರ್ಥಿಕವಾಗಿ ಆಶ್ರಿತರಲ್ಲವೋ ಅವತ್ತೇ ಈ ಅಪ್ಪನಾದವನ ಅಂತಸ್ತೆಲ್ಲ ತಂತಾನೆ ಜರ್ರನೆ ಇಳಿಯಲ್ಪಟ್ಟು, ಆತ ಕುಟುಂಬಕ್ಕೆ ಬರಿಯ ಒಬ್ಬ ಸಂಬಂಧಿಕನೋ ಅಥವಾ ಒಬ್ಬ ಸಹಾಯಕನೋ ಇಲ್ಲಾ ಒಬ್ಬ ಶಾಶ್ವತವಾದ ಅತಿಥಿಯೋ ಆಗುತ್ತಾನೆ. ಗಂಡನಾದವನೂ ಸಹ ಆಗ ಬಿಡುಗಡೆಯ ನಿಟ್ಟುಸಿರು ಬಿಡುತ್ತಾ “ಮುಂದಿನ ತಲೆಮಾರಿನ ಬೆಲೆಯೇನೆಂದೂ ತಿಳಿಯದ ನೀನು ಅದಕ್ಕಾಗಿ ಬದುಕುತ್ತಾ ಯಜಮಾನನಾಗಿರುವ ಬದಲು ಕುಟುಂಬದಲ್ಲಿ ಹೀಗೆ, ಅತಿಥಿಯಾಗಿರುವುದೇ ಮೇಲು” ಎಂದು ಹೇಳಿಕೊಳ್ಳುತ್ತಾನೆ. ಹೀಗೆ ಗಂಡು, ಕುಟುಂಬದ ಸೆರೆಯಿಂದ ಎಷ್ಟರಮಟ್ಟಿನ ಬಿಡುಗಡೆ ಸಿಗುತ್ತದೆಯೋ ಅಷ್ಟನ್ನೂ ಪಡೆಯಲು ಹಾತೊರೆಯುತ್ತಾನೆ. ಮಕ್ಕಳ ಪಾಲನೆ ಪೋಷಣೆಯು ಮೊಟ್ಟಮೊದಲ ಕರ್ತವ್ಯ; ಪ್ರೀತ್ಯಾದರಪೂರಿತ ಮತ್ತು ಭಾವನಾತ್ಮಕವಾದ ಆಶ್ರಯವನ್ನು ತನ್ನ ಸದಸ್ಯರಿಗೆ ನೀಡುವುದು ಅದರ ಗೌಣವೆನ್ನಬಹುದಾದಕೆಲಸವಾಗಿದೆ. ದೊಡ್ಡ ಪ್ರಮಾಣದಲ್ಲಿನ ಹೆಂಗಸರು ತಮ್ಮ ಮಕ್ಕಳ ಕಾರಣದಿಂದಾಗಿ ಕುಟುಂಬ ಜೀವನಕ್ಕೆ ಬಹುಮಟ್ಟಿಗೆ ಆಕರ್ಷಿತರಾಗುತ್ತಾರೆ. ಆದರೆ, ಹೆಚ್ಚಿನ ಗಂಡಸರು ಅಲ್ಲಿನ ಸರ್ವಸಾಮಾನ್ಯವಾದ ಪ್ರೀತ್ಯಾದರ ಮತ್ತು ಭಾವನಾತ್ಮಕ ಸಂಬಂಧದ ಕಾರಣಕ್ಕಾಗಿ ಅಲ್ಲಿರುತ್ತಾರೆ. ಆದ್ದರಿಂದ ಸಹಜವಾಗಿಯೇ ಹೆಣ್ಣು, ಮಕ್ಕಳ ಬಗೆಗಿನ ತನ್ನ ತುಂಬು ಹೃದಯದ ಮತ್ತು ಸ್ಥಿರವಾದ ಪ್ರೀತಿ ವಾತ್ಸಲ್ಯಗಳ ಮೂಲಕ ಮನೆಯಲ್ಲಿ ಪ್ರಧಾನವಾದ ವ್ಯಕ್ತಿತ್ವವನ್ನು ಗಳಿಸಿಕೊಳ್ಳುತ್ತಾಳೆ. ಅದೇ ಹೊತ್ತಲ್ಲಿ ಗಂಡು ಜೀವನೋಪಾಯಕ್ಕಾಗಿ ದುಡಿಯಬೇಕಾದ ತನ್ನ ಬೆರಗುಬಡಿದ ಕೆಲಸದ ಹೊರತು ಮತ್ತೇನೂ ಇಲ್ಲದೆ ಆತ ಬರಿಯ ಒಬ್ಬ ಸಹಾಯಕನಾಗಿ ಮಾತ್ರ ನಿಲ್ಲುತ್ತಾನೆ. ಮುಕ್ತ ಸಮಾಜದಲ್ಲಿನ ಮಾತೃಪ್ರಧಾನ ಕುಟುಂಬದ ಹೊರತಾಗಿ ಸದ್ಯಕ್ಕೆ ಮತ್ತೇನನ್ನೂ ನಾನು ಕಲ್ಪಿಸಿಕೊಳ್ಳಲಾರೆ. ತನ್ನ ಸಂತಾನಾಪೇಕ್ಷೆಯ ಬಗ್ಗೆ ಹೆಣ್ಣಿಗಿರುವ ಸಹಜಪ್ರವೃತ್ತಿಯು ಗಂಡಿನದರ ರೀತಿಯಲ್ಲಿ ದುರ್ಬಲಗೊಂಡಲ್ಲಿ ಮಾತ್ರ- ೧.ಒಂದೋ ಕುಟುಂಬ ವ್ಯವಸ್ಥೆಯೇ ಇಲ್ಲವಾಗುತ್ತದೆ ೨.ಅಥವಾ ಅದು ತನ್ನ ಪಾಲುದಾರರೆಲ್ಲರಿಗೂ ಸಮಾನ ಲಾಭಾಂಶವನ್ನು ನೀಡುತ್ತ ಉಳಿಯುತ್ತದೆ. ಈ ಮೇಲಿನ ಪರಿಸ್ಥಿತಿಯಲ್ಲಿ “ಮಾನವತಾವಾದಿ ಸಮಾಜದಲ್ಲಿ ನೆಮ್ಮದಿ ನೆಲೆಗೊಂಡಾಗ ಮತ್ತು ಸ್ವಾತಂತ್ರ್ಯ ತಾಂಡವವಾಡುವಾಗ, ಸಾಧಾರಣ ಗಂಡಸೊಬ್ಬನು ತಾನು ತನ್ನ ಸಹಬಾಳ್ವೆಯ ನಡುವೆ ಮಹತ್ವಪೂರ್ಣವಾದ್ದನ್ನು ನಿರ್ವಹಿಸದಿದ್ದಲ್ಲಿ, ಆ ಜನಜಾತ್ರೆಯ ಕಣ್ಣಲ್ಲಿ ಆತ ‘ತಾಯಿ’ಯಾದವಳಿಗಿಂತ ಕೆಳಮಟ್ಟದ ಜೀವಿಯಾಗಿ ಪರಿಗಣಿಸಲ್ಪಡುತ್ತಾನೆ” ಎಂದು ಭಾವಿಸುವುದು ವಿಚಿತ್ರತರವಾದ ಅನುಮಾನವಾಗುತ್ತದಲ್ಲವೆ?

ಸಮಾಜವಾದಿ ಸಮಾಜಕ್ಕೂ ಮೊದಲಿನ ಹಂತದ ಈ ಸ್ಥಿತಿಯಲ್ಲೂ ಹೆಣ್ಣು ತನ್ನ ಕರ್ತವ್ಯವನ್ನು ನೆರವೇರಿಸುವುದು ಕಷ್ಟವೇನಲ್ಲ. ತನ್ನ ಸಾಹಸಪೂರ್ಣಕೆಲಸಕಾರ್ಯಗಳ ಜೊತೆಜೊತೆಗೆ ಆಕೆ ಭವಿಷ್ಯದ ಬಗ್ಗೆ ಮುಂದಾಲೋಚನೆಯುಳ್ಳವಳಾಗಬೇಕು. ಮನಸ್ಸಿನ ಕೀಳರಿಮೆಯನ್ನು ಕಿತ್ತೊಗೆಯುತ್ತಾ ಆಕೆ ಆತ್ಮಗೌರವವನ್ನು ವೃದ್ಧಿಪಡಿಸಿಕೊಳ್ಳಬೇಕು ಮತ್ತು ತನ್ನ ಶಾರೀರಿಕ ಪರಿಣಾಮಗಳನ್ನೇ ಮುಂದೊಡ್ಡಿ ಅವುಗಳಾನ್ನೆಲ್ಲ ಒಲ್ಲದ ಗಂಡಿನ ಮೇಲೆ ಹೇರಲು ಯತ್ನಿಸಬಾರದು. ತಮ್ಮ ಪ್ರಿಯಕರರಾದವರು ತಮ್ಮನ್ನು ಮದುವೆಯಾಗಲು ಒಪ್ಪದಿದ್ದ ಸಂದರ್ಭದಲ್ಲಿ ಕೂಡ- ಕೊನೆಯಪಕ್ಷ ನಮ್ಮ ವಿದ್ಯಾವಂತ ಹಾಗೂ ಮುಂದುವರಿದ ಮಹಿಳೆಯರಲ್ಲಿ ಕೆಲವರಾದರೂ, ತಾವು ಮಕ್ಕಳಾನ್ನು ಹಡೆಯಲು ಹಿಂದೆಗೆಯದಿರುವುದನ್ನು ಮತ್ತು ಸಾರ್ವಜನಿಕವಾಗಿಯೇ ಆ ಹಸುಳೆಗಳ ಲಾಲನೆಪಾಲನೆಗಳಲ್ಲಿ ತೊಡಗುವುದನ್ನು ಕಣ್ಣಾರೆ ಕಾಣಬೇಕೆಂದು ನಾನು ಸದಾ ಕುತೂಹಲಿಯಾಗಿ ಇದ್ದೇನೆ. ಇಲ್ಲವೆ, ಈ ನೀತಿಹೀನ ಜಗತ್ತಿಗೆ ಆಘಾತವನ್ನುಂಟು ಮಾಡುವ ಸಲುವಾಗಿಯಾದರೂ ಒಂದು ಹೆಣ್ಣು ಮದುವೆಯಾಗಲು ಒಪ್ಪದೆ, ಮಗುವನ್ನು ಹಡೆದು, ತನ್ನ ಬದುಕಿನ ಪುನಶ್ಚೈತನ್ಯಕ್ಕಾಗಿ ಗಾಂಭೀರ್ಯ ಹಾಗೂ ಅಸಾಧಾರಣ ವೈಶಿಷ್ಟ್ಯಗಳಿಂದ ಬದುಕಬೇಕು. ಆ ಬಗೆಯ ಹೆಂಗಸು ತನ್ನ ದೃಢಸಂಕಲ್ಪ ಶಕ್ತಿಯ ಒತ್ತಾಯದಿಂದಲೇ ಯವತ್ತೋ ಒಂದು ದಿನ ಸಾರ್ವಜನಿಕ ಜೀವನದಲ್ಲಿನ ಉನ್ನತ ಮಟ್ಟದ ಮಹಿಳೆ, ಸಚಿವೆ, ಲೇಖಕಿ ಅಥವಾ ವಿಜ್ಞಾನಿಯಾಗಿ ಕಾಣಿಸಿಕೊಂಡಾಗ- ನಮ್ಮ ಈ ಒಳ್ಳು ‘ನೈತಿಕ’ ಪದ್ಧತಿಗಳನ್ನೆಲ್ಲ ಗಾಳಿಗೆ ತೂರುವ ಕೆಲಸ ಪೂರ್ಣಗೊಳ್ಳುತ್ತದೆ. ಈ ಹೆಣ್ಣನ್ನು ನಾನು ಹೊಸಮಹಿಳೆಯೆಂದು ಕರೆಯುತ್ತೇನೆ. ಆಕೆಗಾಗಿ ಆಂದೋಲನ ನಡೆಸುವ ಆತುರದಲ್ಲಿ ನಾನಿದ್ದೇನೆ. ನಮ್ಮ ಕೆಲವು ಸಮರ್ಥ ಸಮಾಜವಾದಿ ಮಹಿಳೆಯರಾದರೂ ಈ ಜಾಡು ಹಿಡಿಯಬಲ್ಲರೆ?

ಆದ್ಯತೆ ಅನ್ನುವ ಪದವೇ ಪ್ರತಿಭಟನೆಗೆ ಒಳಗಾಗಬೇಕು!

ಬಹಳ ದಿನಗಳಿಂದ ಬಹಳ ಜನ ಕಿಷನ್ ಪಟ್ನಾಯಕರ ‘ಹೆಣ್ಣಿಗೇನು ಬೇಕು: ಸ್ವಾತಂತ್ರ್ಯವೋ? ಸಮಾನತೆಯೋ?’ ಲೇಖನ ಓದಿದ್ದೀರಾ ಕೇಳ್ತಿದ್ದರು. ಇಲ್ಲ, ಇಲ್ಲವೆನ್ನುತ್ತಲೇ ಇದ್ದಾಗೆ ಗೆಳೆಯರೊಬ್ಬರು ತಾವೇ ಅದರ ಪ್ರತಿಯನ್ನು ಕಳುಹಿಸಿಯೂ ಕೊಟ್ಟರು. ಅದರಲ್ಲೇನಿದೆ ಎಂದು ನೋಡಿದಾಗ….

(ಕಿಷನ್ ಪಟ್ನಾಯಕರ ಈ ಲೇಖನವು ಬಹಳ ಹಿಂದೆ ಆಂಗ್ಲ ಭಾಷೆಯಲ್ಲಿ, ಮ್ಯಾನ್ ಕೈಂಡ್ ಪತ್ರಿಕೆಯಲ್ಲಿ ಪ್ರಕಟಗೊಂಡಿದ್ದಾಗಿದೆ.  ಕನ್ನಡಾನುವಾದವನ್ನು ‘ಪ್ರೀತಿ ಮತ್ತು ನಿರ್ಭೀತಿ’ಯಿಂದ ಎತ್ತಿಕೊಂಡುದಾಗಿದೆ.)

ಹೆಣ್ಣಿಗೇನು ಬೇಕು: ಸ್ವಾತಂತ್ರ್ಯವೋ? ಸಮಾನತೆಯೋ?

ಹೆಣ್ಣಿನ ನಿಜವಾದ ಸಮಸ್ಯೆಯು ಆಕೆಯ ಸ್ವಾತಂತ್ರ್ಯದ ಸಮಸ್ಯೆಯೇ ಆಗಿದೆ. ಸಾದೃಶ್ಯ (ಆಕೆ ಇದನ್ನೇ ಸಮಾನತೆ ಅನ್ನುತ್ತಾಳೆ)ದ ಬಗೆಗಿನ ಅವಳ ಗೀಳು ನಗೆಗೀಡಾಗಿದೆ. ಹೆಣ್ಣಿನ ಸ್ವಾತಂತ್ರ್ಯ ಅಂದರೆ ಮೂಲತಃ ಅವಳ ಲೈಂಗಿಕ ಸ್ವಾತಂತ್ರ್ಯ.

ಸ್ತ್ರೀಯರ ರಾಜಕೀಯ, ಸಾಮಾಜಿಕ ಮತ್ತು ಮಾನಸಿಕ ಅಸಮಾನತೆಯ ವಿರುದ್ಧದ ಕೆಲವರ ಉತ್ಕಟೇಚ್ಛೆ ನಿಜಕ್ಕೂ ಸ್ತುತ್ಯರ್ಹ. ಆದರೆ, ಅವರ ಈ ಆತಂಕವು ಹೆಣ್ಣಿನ ಗುಲಾಮಗಿರಿಯ ಮೂಲಸ್ಥಾನಕ್ಕೇ ಮತ್ತೆ ಮೊರೆಯಿಡುವಂತಾಗಿದೆ. ಹೆಂಗಸರ ಮೇಲಿನ ತಮ್ಮ ಹಿಡಿತ ಸಡಿಲಗೊಳ್ಲದಂತೆ ಗಂದಸರು ಹುಟ್ಟುಹಕಿರುವ ಸಾಮಾಜಿಕ ಮೌಲ್ಯಗಳನ್ನೇ ಹೆಣ್ಣು ಎತ್ತಿಹಿಡಿಯುವುದದಲ್ಲಿ- ಸ್ತ್ರೀಸಮಾನತೆಯ ಆಕ್ರಂದನದ ಜೊತೆಯಲ್ಲೇ ಸುಳಿದಾಡುವ ವ್ಯಂಗ್ಯಕ್ಕೆ ಇಲ್ಲಿ ಹೆಚ್ಚಿನ ಒತ್ತು ಬೀಳುತ್ತದೆ.

ಹೆಂಗಸರಿಗೆ ನೀಡಲಾಗುವ ವಿಶೇಷಾದ್ಯತೆಯ ನಡಾವಳಿಯ ಪ್ರಶ್ನೆಯಲ್ಲಿನ ಪ್ರಾಸಂಗಿಕ ಆಕ್ಷೇಪವೊಂದರ ಬಳಿಕ ನಾನು ಮುಖ್ಯ ವಿಷಯಕ್ಕೆ ಹಿಂದಿರುಗುತ್ತೇನೆ. ‘ಆದ್ಯತೆ’ ಅನ್ನುವ ಪದವೇ ಪ್ರತಿಭಟನೆಗೆ ಒಳಗಾಗಬೇಕು.
ಅದರಲ್ಲಿ ಸ್ವಲ್ಪಮಟ್ಟಿಗೆ ಕನಿಕರ ಭಾವ ತುಂಬಿರುತ್ತದೆ. ಕನಿಕರವು ಅತ್ಯಾಚಾರದಷ್ಟೇ ಹೇಸಿಗೆ ಹುಟ್ಟಿಸುವಂಥದ್ದು. ಅತ್ಯಾಚಾರದಿಂದ ನೀವು ಇನ್ನೊಬ್ಬರ ಸ್ವಂತದ ಘನತೆಯನ್ನು ನಾಶ ಮಾಡುತ್ತೀರಿ. ಕನಿಕರದಿಂದ ನೀವು ಮತ್ತೊಬ್ಬರ ಆತ್ಮಗೌರವವನ್ನು ನಾಶ ಮಾದುತ್ತೀರಿ. ಒಂದು ವೇಳೆ ಅದು ಆತ ಅಥವಾ ಆಕೆಯಲ್ಲಿ ಇದ್ದಾಗ ಆತ್ಮಗೌರವವು ಸ್ವಂತದ ಘನತೆಗಿಂತ ಹೆಚ್ಚು ಬೆಲೆಯುಳ್ಳದ್ದು. ಆದ್ದರಿಂದ ಕನಿಕರವು ಅತ್ಯಾಚಾರಕ್ಕಿಂತ ಹೀನಾಯವಾದದ್ದು ಮತ್ತು ಪ್ರತಿ ಮಹಿಳೆಯೂ ಕನಿಕರದೊಂದಿಗೆ ಸೆಣೆಸಬೇಕು. ಅದು ಸಾಮಾಜಿಕವಾಗಿ ರೂಪುಗೊಂಡಿರುವ ಧಾರ್ಮಿಕ ಸಂಘಸಂಸ್ಥೆಗಳ ರೂಪದಲ್ಲಿರಲಿ, ಇಲ್ಲಾ ವೈಯಕ್ತಿಕವಾಗಿ ಅಭಿವ್ಯಕ್ತಿಗೊಂಡ  ಉದಾರ ಮನಸ್ಕರ ಭಾವನೆಯಾಗಿರಲಿ, ಪುರುಷರವತಿಯಿಂದ ಬರುವ ಸಜ್ಜನಿಕೆಯ ಹಾರೈಕೆಗಳು, ಸಮಾಜದ (ಅಂದರೆ ಗಂಡಸಿನ) ಕ್ರೌರ್ಯದಿಂಡ ಹೆಂಗಸರನ್ನು ಪಾರುಗೊಳಿಸುವ ಹಾದಿಯಲ್ಲಿ ಸ್ವಲ್ಪಮಟ್ಟಿಗೆ ಏಳಿಗೆಯನ್ನು ಸಾಧಿಸಬಲ್ಲವು. ಇಂಡಿಯಾದಂಥ ದೇಶಗಳಲ್ಲಿನ ಸ್ತ್ರೀಯರ ಅಭದ್ರತೆಯ ಸಮಸ್ಯೆಗೆ ಇರುವ ಏಕೈಕ ಪರಿಹಾರವೆಂದರೆ- ಎಂದೂ ಹತ್ತಿಕ್ಕಲಾಗದ ಆತ್ಮಗೌರವದ ವಿವೇಕವನ್ನು ಅವರಲ್ಲಿ ಅರಳಿಸುವುದೇ ಆಗಿದೆ. ಅತ್ಯಾಚರಕ್ಕೆ ಒಳಗಾದ ಮಹಿಳೆಗೆ ನನ್ನ ಹಿತವಚನ ಇಷ್ಟೆ: “ಹತಾಶಲಾಗಬೇಡ! ನಿನ್ನ ಘನತೆಯ ಮೇಲೆ ದಾಳಿ ನಡೆದಾಗ ಕೂಡ ಆತ್ಮಗೌರವವನ್ನು ಕಾಯ್ದಿಟ್ಟುಕೋ”. ಎಲ್ಲ ಧರ್ಮಿಕ ಸಂಘಸಂಸ್ಥೆಗಳು ಸ್ತ್ರೀಸಂಕುಲವನ್ನು ವಿಮೋಚನೆಗೊಳಿಸುತ್ತವೆನ್ನುವುದು ಬೂಟಾಟಿಕೆ. ಅವು ಏನನ್ನೂ ಸಾಧಿಸಲಾರವು. ಆದರೆ, ಅವು ಕೀಳರಿಮೆಯ ಸ್ಥಿತಿಯನ್ನು ಇಮ್ಮಡಿಗೊಳಿಸುತ್ತವೆ. ಮತ್ತು ಸಾಮಾಜಿಕ ಹಾಗೂ ವೈಯಕ್ತಿಕ ವಕ್ರತೆಯನ್ನು ನಾಲ್ಮಡಿಗೊಳಿಸುತ್ತವೆ. ಹೆಣ್ಣಿನ ಜೊತೆ ಇರಬೇಕಾದ ರಕ್ಷಣಾಸ್ತ್ರ ಯಾವುದೆಂದರೆ, ಉಗುರುಗಳೋ ಹಲ್ಲುಗಳೋ ಅಲ್ಲ, ಪಿಸ್ತೂಲು ಕೂಡ ಅಲ್ಲ, ಆಕೆಯ ಬಳಿ ಇರಬೇಕಾದ್ದು ಅತ್ಯಂತ ತೀಕ್ಷ್ಣವಾದ ಆತ್ಮಗೌರವದ ಪ್ರಜ್ಞೆ. ಮಿಕ್ಕಿದ್ದೆಲ್ಲ ಅವಳಿಗೆ ತಂತಾನೇ ಸ್ಪಷ್ಟಗೊಳ್ಳುತ್ತದೆ. ಹೆಣ್ಣು ತನ್ನ ಹಕ್ಕುಗಳಿಗಾಗಿ ಹೋರಾಡಬೇಕು; ಅವಳ ಆಶ್ರಯದಾತರು ಆಕೆಯನ್ನು ಹೇಳಿದಂತೆ ಕೇಳುವ ಸ್ಥಿತಿಗೆ ನೂಕಿದ್ದಾರೆ.

ಆದರೆ ಈ ಸಮಾನತೆಯ ಗೀಳು, ನಿಜವಾದ ವ್ಯತ್ಯಾಸಗಳನ್ನು ಅರಿಯುವ ದಿಕ್ಕಿನಲ್ಲಿ ನಮ್ಮನ್ನು ಕುರುಡುಗೊಳಿಸಕೂಡದು. ‘ಶಾರೀರಿಕ ಮತ್ತು ಭೌತಿಕ ವ್ಯತ್ಯಾಸಗಳಿದ್ದೂ ಕೂಡ’ ಹೆಣ್ಣು ಗಂಡಿಗೆ ಸಾಮರ್ಥ್ಯಕ್ಕೆ ಅಳವಡಬಹುದಾದ್ದನ್ನೆಲ್ಲಾ ತಾನೂ ಮಾಡಬಲ್ಲಳು- ಎನ್ನುವುದು ಪ್ರಶ್ನಾರ್ಹವಾಗುತ್ತದೆ. ಶಾರೀರಿಕ ಮತ್ತು ಭೌತಿಕವಾದ ವ್ಯತ್ಯಾಸಗಳಿಂದಾಗಿ ಹೆಣ್ಣು ಹೆಣ್ಣೇ ಆಗಿದ್ದಾಳೆ. ಇವುಗಳಿಲ್ಲದಿದ್ದರೆ ಆಕೆ ಗಂಡೇ ಆಗಿರುತ್ತಿದ್ದಳು. ಮತ್ತು ಸಮಾನತೆಯ ಸಮಯೆಯು ತಂತಾನೇ ಪರಿಹಾರವಾಗುತ್ತಿತ್ತು. ಶಾರೀರಿಕ ಮತ್ತು ಭೌತಿಕ ವ್ಯತ್ಯಾಸಗಳನ್ನು ಒಮ್ಮೆ ಒಪ್ಪಿಕೊಂಡಲ್ಲಿ- ಈ ನಡುವೆ ಮಾನಸಿಕ ವ್ಯತ್ಯಾಸವು ಕೂಡಿಕೊಳ್ಳುತ್ತದೆ. ಮತ್ತು ಸ್ವಾಭಾವಿಕ ವ್ಯತ್ಯಾಸಗಳು ಅನಿವಾರ್ಯವಾಗಿ ಕಾಣಿಸಿಕೊಳ್ಳುತ್ತವೆ. ಹೆಣ್ಣು ಗಂಡಿಗಿಂತ ಬೇರೆಯೇ ಆಗಿದ್ದಾಳೆ. ವ್ಯತ್ಯಾಸಾತ್ಮಕ ನಡವಳಿಕೆಯು ಕೂಡ ಆಗ ತಾರ್ಕಿಕ ಪರಿಣಾಮವಾಗಿತ್ತದೆ. ಹೆಣ್ಣಿಗೆ ಸಂಬಂಧಿಸಿದ ಈ ವ್ಯತ್ಯಾಸಾತ್ಮಕ ನಡವಳಿಕೆಯು ಕೂಡ ಆಗ ತಾರ್ಕಿಕ ಪರಿಣಾಮವಾಗುತ್ತದೆ. ಹೆಣ್ಣಿಗೆ ಸಂಬಂಧಿಸಿದಂತೆ ಈ ವ್ಯತ್ಯಾಸಾತ್ಮಕ ಭಾವವು ಯಾವ ಬಗೆಯಲ್ಲಿ ರಾಜಕೀಯ ಮತ್ತು ಕಾನೂನು ಸಂಹಿತೆಗಳಲ್ಲಿ ಪ್ರತಿಫಲನಗೊಂಡಿದೆ ಎಂಬುದು ಸಂಪೂರ್ಣವಾಗಿ ಬೇರೆಯಾದ ಪ್ರಶ್ನೆಯಾಗಿದೆ; ಆದರೆ ಮೂಲಭೂತ ಸಂಗತಿ ಮಾತ್ರ ತಳ್ಳಿ ಹಾಕುವಂಥದಲ್ಲ.

ಹೆಣ್ಣು ಗಂಡಿಗಿಂತ ಬೇರೆಯಾಗಿದ್ದಾಳೆಂದು ನಾವು ಹೇಳಿದಾಗ- ಹೆಣ್ಣಿನಲ್ಲಿ ಕೀಳರಿಮೆಯ ಪ್ರಜ್ಞೆ ಮತ್ತು ಗಂಡಿನಲ್ಲಿ ಮೇಲರಿಮೆಯ ಪ್ರಜ್ಞೆ ವೃದ್ಧಿಗೊಂಡು, ವ್ಯತ್ಯಾಸವು ಗಂಡಿಗೆ ಅನುಕೂಲಕರವಾಗಿ ಹಾಗೂ ಹೆಣ್ಣಿಗೆ ಹಾನಿಕರವಾಗಿಯೂ ಪರಿಣಮಿಸಬಹುದು. ಗಂಡಿಗಿಂತ ತಾನು ಭಿನ್ನವಾಗಿರುವ ಬಗ್ಗೆ ಹೆಣ್ಣು ಏಕೆ ತಾನೆ ಗೊಣಗುಟ್ಟಬೇಕೆಂದು ನಾನು ಕೆಲವು ಸಲ ಸಿಟ್ಟಾಗಿ ಚಕಿತಗೊಂಡಿದ್ದೇನೆ! ಮಹಿಳೆಯು ನಿಜಕ್ಕೂ ತನ್ನ ಪುರುಷ ಜೋಡಿಗಿಂತಲೂ ಉತ್ತಮ ಜೀವಿಯೆಂಬುದನ್ನು ಸ್ವಲ್ಪಕಾಲಾನಂತರ ಮಾನವ ಚರಿತ್ರೆಯು ಸದ್ಯದಲ್ಲಿಯೆ ರುಜುವಾತುಪಡಿಸುತ್ತದೆ. ಯಾವ ಉತ್ಪ್ರೇಕ್ಷೆಯೂ ಇಲ್ಲದೆ ಹೇಳಬೇಕೆಂದರೆ, ತತ್ತ್ವಜ್ಞಾನಿ ಅಥವಾ ಕಲಾವಿದ ಹೀಗೆ ಕೆಲವು ವಿಷಯಗಳಲ್ಲಿ ಹೊರತಾಗಿ ಉಳಿದೆಲ್ಲ ಕಡೆಗಳಲ್ಲೂ ಗಂಡು ಹೆಣ್ಣಿಗಿಂತ ಕೆಳಮಟ್ಟದ ಜೀವಿಯಾಗಿದ್ದಾನೆಂದು ನಾನು ಈಗಾಗಲೇ ನಂಬಿದ್ದೇನೆ. ಮಿಲಿಟರಿ ಕಮ್ಯಾಂಡರ್ ಅಥವಾ ದಬ್ಬಾಳಿಕೆ ಅಧಿಕಾರಿಗಳಾಗಲು ಹೆಂಗಸರು ಹಾತೊರೆಯಬೇಕೇ? ಸಮಾಜದ ಈ ಕೀಳುಕಸುಬುಗಳಿಗೆ ಹೊಂದುವ ವಿಶೇಷ ಯೋಗ್ಯತೆಯನ್ನು ಅವರೇ ಪಡೆದಿರುವವರಾದರೆ ಇವುಗಳನ್ನು ಗಂಡುಕುಲಕ್ಕೇ ಯಾಕೆ ಬಿಟ್ಟುಕೊಡಬಾರದು? ಹೆಣ್ಣು ಔನ್ನತ್ಯದ ಗೆರೆಯನ್ನು ತಲುಪಿರುವ ತನ್ನ ಕ್ಷೇತ್ರಗಳಲ್ಲಿ, ಇನ್ನೂ ಚಿಂತನಶೀಲ ತತ್ತ್ವಶಾಸ್ತ್ರ ಮತ್ತು ನಾಟಕದ ರಚನೆಗೆ ಸಂಬಂಧಿಸಿದಂತೆ ತನ್ನ ಯೋಗ್ಯತೆಯನ್ನು ಪ್ರಕಟಿಸಿಲ್ಲ. ಈ ಸ್ಥಿತಿಯು ಅವಕಾಶದ ಕೊರತೆಯಿಂದ ಉಂಟಾದುದಲ್ಲ. ಮಹಿಳೆಯರಲ್ಲಿ ಉತ್ತಮ ಸಾಮಾಜಿಕ ಚಿಂತನಶೀಲರು ಮತ್ತು ಶ್ರೇಷ್ಠ ಕಾದಂಬರಿಕಾರ್ತಿಯರು ಇದ್ದಾರೆ. ಆದರೆ ಒಬ್ಬರಾದರೂ ಮಹಿಳಾ ತತ್ತ್ವಜ್ಞಾನಿಯನ್ನಾಗಲೀ  ಅಥವಾ ನಾಟಕಕರ್ತೃವನ್ನಾಗಲೀ ವಿಶ್ವದಾಖಲೆಯ ಮಟ್ತದಲ್ಲಿ ನೀವು ಕಾಣಲಾರಿರಿ. ಸಂಪೂರ್ಣ ವಾಸ್ತವಿಕತೆಯನ್ನು ಗ್ರಹಿಸಲಾಗದ ಹೆಣ್ಣಿನ ಮಾನಸಿಕ ಅಶಕ್ತತೆಯಿಂದಾಗಿ ಬಹುಶಃ ಈ ಸ್ಥಿತಿ ಉಂಟಾಗಿರಬಹುದು. ಆಕೆ ತನ್ನ ಚಿಂತನೆಯಲ್ಲಿ ಹೆಚ್ಚು ಸ್ವಂತದ್ದನ್ನು ಪರಿಭಾವಿಸುತ್ತಾಳೆ. ನಿಶ್ಚಯವಾಗಿಯೂ ಹೆಣ್ಣು ಗಂಡಿನೊಡನೆ ಅಸಂಗತವಾಗಿ ಸಮಾನತೆಯ ಮಾತನಾಡುತ್ತಾಳೆ. ಆಕೆಯು ತಾನು ತತ್ತ್ವಜ್ಞಾನಿ ಅಥವಾ ನಾಟಕಕರ್ತೃ ಆಗಬೇಕಾದ ಬಗ್ಗೆ ಯೋಚಿಸುವುದಿಲ್ಲ. ಆಕೆ ಕೇವಲ ಒಬ್ಬ ವ್ಯಾಪಾರಿ, ಒಬ್ಬ ದರ್ಪದ ಅಧಿಕಾರಿ, ಅಥವಾ ಒಬ್ಬ ಮಿಲಿಟರಿ ಆಫಿಸರ್ ಮಾತ್ರ ಆಗಲು ಬಯಸುತ್ತಾಳೆ! ಯಾವುದೇ ಮಹಿಳೆ ಅದನ್ನು ಅಲ್ಲಗಳೆಯಬಲ್ಲಳೆ? ಮಕ್ಕಳನ್ನು ಬೆಳೆಸುವ, ಶಾಲೆಯನ್ನು ನಡೆಸುವ ಅಥವಾ ಪ್ರನಾಳ ಪರೀಕ್ಷೆಯಂಥ ಕೆಲಸಗಳಿಗಿಂತಲೂ ಉತ್ತಮವಾದುದನ್ನು ಮಾಡಬಲ್ಲ ಸಾಮರ್ಥ್ಯವಿಲ್ಲದ ಆತ ಅಥವಾ ಆಕೆಯ ಹೊರತಾಗಿ, ಬುದ್ಧಿ ನೆಟ್ಟಗಿರುವ ಮತ್ತಾವ ಮಾನವಜೀವಿಯೂ ಈ ಬಗೆಯ ಕೆಲಸಕಾರ್ಯಗಳಿಗೆ ಆಸೆಪಡುವುದಿಲ್ಲ. ಹೆಣ್ಣು-ಗಂಡಿನ ನಡುವಣ ಮೂಲಭೂತ ವ್ಯತ್ಯಾಸಗಳನ್ನು ನಿರಾಕರಿಸುವಮಟ್ಟಿನ ಈ ಅಸಂಗತ ನಿಲುವನ್ನು ಹೆಣ್ಣಿನ ಕೇವಲ ಕೀಳರಿಮೆಯ ಪ್ರಜ್ಞೆಯು ಮಾತ್ರ ಹುಟ್ಟುಹಾಕಿದೆ.
(ಮುಂದುವರಿಯುತ್ತದೆ….)

ಆಲೂರು ದೊಡ್ಡನಿಂಗಪ್ಪ ಜೊತೆ ನಾಲ್ಕು ಮಾತು…

 `ಕವಿತೆ ಯಾಕೆ ಬರೆಯುತ್ತಿದ್ದೀರಾ?’ ಎಂಬ ಪ್ರಶ್ನೆಗೆ ಉತ್ತರಗೊತ್ತಿದ್ದೂ ಹೇಳಲಾಗದ ಮುಜುಗರದಿಂದಾಗಿ ಕವಿಗೋಷ್ಠಿಗಳಿಂದ ದೂರು ಉಳಿಯುತ್ತಿದ್ದೆ ಎನ್ನುವ ಕವಿ ಆಲೂರು ದೊಡ್ಡ ನಿಂಗಪ್ಪ. ನಾಲ್ಕನೇ ತರಗತಿಗೆ ಶಾಲೆ ಬಿಟ್ಟು, ನೇಕಾರಿಕೆ, ಎಳನೀರು ವ್ಯಾಪಾರ, ಒಂಟಿತನ, ಅಲೆಮಾರಿತನಗಳಿಂದ ಮಾಗಿದ ಇವರು ಮತ್ತೆ ಅಕ್ಷರಗಳನ್ನು ತಮ್ಮದೇ ಆದ ರೀತಿಯಲ್ಲಿ ಕಲಿಯುತ್ತಾ, ಗ್ರಹಿಸುತ್ತಾ ಬೆಳೆದವರು. ಈ ಜೀವನಾನುಭವ ಇವರ ಕವಿತೆಗಳ ಮೂಲಕ ಓದುಗನಿಗೆ ದಾಟುತ್ತದೆ. ತಾಯಿ, ಮಗು ಹಾಗೂ ಕರುಳ ಬಳ್ಳಿಯಂತೆ ಓದುಗನನ್ನು ತಟ್ಟುತ್ತವೆ. ಅಖಂಡ ನೋವುಂಡು ಜನ್ಮ ನೀಡುವ ತಾಯಿ, ಕಿಲಕಿಲ ನಗುವಿನ ಬೆಳಕು ಹೊತ್ತ ಮಗು, ಇವೆರಡನ್ನೂ ಬೆಸೆಯುವ ಕರುಳಬಳ್ಳಿ ಬಿಸುಪು ಆಲೂರು ಅವರ ಕವಿತೆಗಳ ಓದಿನಿಂದ ದಕ್ಕುವ ಅನುಭವ. ಕತ್ತಲೆ ಜಗತ್ತಿನ ಕವಿ ನಾನು ಹೇಳುತ್ತಲೆ, `ತೇಲಿ ತೇಲಿ ಬರಲಿ/ ಚಂದಿನ ಚೂರು/ ನಮ್ಮ ಕೇರಿಗೂ’ ಎಂಬ ಸಣ್ಣ ಬೆಳಕಿನ ಕಿಡಿಗಾಗಿ ಧ್ಯಾನಿಸುವ ಸಂವೇದನಶೀಲ ನಿಂಗಪ್ಪ ಅವರು `ನೇಕಾರ’ ಎಂಬ ಸಂಕಲನ ಮೂಲಕ ಕಾವ್ಯಾಸಕ್ತರ ನಡುವೆ ನಿಂತಿದ್ದರು. ಈಗ `ಮುಟ್ಟು’ ಸಂಕಲನದೊಂದಿಗೆ ಕವಿ ಮನಸ್ಸು ಮುಟ್ಟುತ್ತಿದ್ದಾರೆ. ಇವರು ಸದ್ಯ ರಂಗಾಯಣದಲ್ಲಿ ಉದ್ಯೋಗಿ.

ನಿಮ್ಮನ್ನು ರೂಪಿಸಿದ ಅಸ್ತ್ರವೆಂದರೆ ಕಾವ್ಯವೆನ್ನುತ್ತೀರಿ, ಹೇಗೆ?

ಕಾವ್ಯದ ಜಗತ್ತು ಒಂದು ಪಕ್ಷ ದೊರಕದಿದ್ದರೆ ನನ್ನೊಳಗಿದ್ದ ಅಸೂಯೆ, ಸಂಕಟ, ನೋವು, ತಲ್ಲಣಗಳು ನನ್ನನ್ನು ಬಲಿತೆಗೆದುಕೊಡು ಬಿಡುತ್ತಿತ್ತೇನೋ? ಹಾಗಾಗಿ ಕಾವ್ಯದ ಜಗತ್ತು ನನ್ನ ಕಣ್ತೆರೆಸಿದ ಅಸ್ತ್ರವಾಗಿದೆ. ಓದಿದ್ದು ಕಡಮೆಯಾದರೂ ನನ್ನೊಳಗಿದನ್ನು ಹೇಳಿಕೊಳ್ಳೋಕೆ ಹೇಗೆ ಸಾಧ್ಯವಾಯಿತು ಎಂದು ನನಗೆ ಸೋಜಿಗವಾಗಿದೆ. ನೇಯ್ದು ಬಂದ ನನಗೆ ಜೋಗುಳ ಹಾಡಿದ ತತ್ವಪದಕಾರರು, ವಚನಕಾರರು ಬದುಕಿನ ಹಲವು ಮಗ್ಗುಲು ಬಿಚ್ಚಿಟ್ಟು ಬರೆಯುವಂತೆ ಮಾಡಿದ್ದಾರೆ.

ಹತ್ತು ವರ್ಷಗಳ ನಂತರ ಎರಡನೇ ಸಂಕಲನ `ಮುಟ್ಟು’ ಬರುತ್ತಿದೆ. ಈ ಹತ್ತು ವರ್ಷ ಕವಿತೆ ಎಲ್ಲಿತ್ತು? ಹೇಗಿತ್ತು?

ಇದುವರೆಗೂ ನನ್ನೊಳಗೆ ಮುಕ್ಕಾಗದಂತೆ ಕಾಪಾಡಿಕೊಂಡಿದ್ದೆ. ಸುಂದರ ಗಾಜಿನ ಬೊಂಬೆಯಂತೆ..

ಅಖಂಡ ವೇದನೆ ಮತ್ತು ಬೆಳಕು ನಿಮ್ಮ ಎಲ್ಲ ಕವಿತೆಗಳನ್ನು ಆವರಿಸಿಕೊಂಡಿವೆ. ನೋವು ಎಂಥದ್ದು? ಬೆಳಕು ಯಾವುದು?

ನನ್ನ ನೋವಿನ ಬಗ್ಗೆ ಮಾತನಾಡಬೇಕು ಎಂದರೆ ಬಹಳ ಹಿಂದಕ್ಕೆ ಹೋಗಿ ಮಾತನಾಡಬೇಕು ಎಂಬ ಮುಜಗರ. ನಾನು ಕತ್ತಲೆ ಜಗತ್ತಿನಿಂದ ಬಂದವನಾಗಿರುವುದರಿಂದ ಬೆಳಕಿನಷ್ಟೇ ಕತ್ತಲೆಗೂ ಮಹತ್ವ ಕೊಡುತ್ತೇನೆ. ಹಾಗಾಗಿ ಮುಟ್ಟು ಕವನ ಸಂಕಲನದಲ್ಲಿ ಇವೆರಡೂ ಆವರಿಸಿರುವುದು ಸಹಜವಿರಬಹುದು.
ಈ ಹೊತ್ತಿನ ಕವಿತೆಗಳಲ್ಲಿ ಅಂತರಾಳವೇ ಇಲ್ಲ ಎನ್ನುವುದು ಆರೋಪ ನೀವೇನಂತೀರಿ..
 
ಕವಿತೆ ಹುಟ್ಟೋದೇ ಅಂತರಾಳದಿಂದ ಈ ಹೊತ್ತಿನ ಕವಿತೆಗಳಲ್ಲಿ ಅಂತರಾಳವೇ ಇಲ್ಲ ಎಂದು ಹೇಳಲಾಗದು. ಒಳಗಿನಿಂದ ಹುಟ್ಟಿದ್ದೂ ಮಾತ್ರ ಕಾವ್ಯ ಎನ್ನಿಸಿಕೊಳ್ಳುತ್ತೆ. ಚೆನ್ನಾಗಿದೆ ಎನಿಸಿಕೊಂಡ ಕಾವ್ಯ ಒಳಗಿನಿಂದಲೇ ಬಂದಿರುತ್ತದೆ. ಅಂತರಾಳದಿಂದ ಬರೆಯುತ್ತಿರುವ ಸವಿತಾ ನಾಗಭೂಷಣ, ಎಸ್. ಮಂಜುನಾಥ್, ಅಂಕೂರ್, ಎನ್.ಕೆ.ಹನುಮಂತಯ್ಯ, ಸುಬ್ಬು ಹೊಲೆಯಾರ್, ಹೆಚ್.ಆರ್. ರಮೇಶ್. ಇವರ ಕವಿತೆಗಳಲ್ಲಿ ಇರುವ ತೀವ್ರತೆ ಅದರ ಅಂತಃಶಕ್ತಿಯನ್ನು ಸಾರುತ್ತದೆ.
ನೀವು ಕವಿತೆಯ ಕೈ ಹಿಡಿದ ನಂತರ ಇನ್ನೆಂದೂ ಮರೆಯಲಾಗದು ಎಂಬ ಸಂದರ್ಭ..
 
ನನ್ನ ಕವನ ಸಂಕಲನಕ್ಕೆ ದೇವನೂರು ಮಹಾದೇವ ಅವರು ಬೆನ್ನುಡಿ ಬರೆದದ್ದು ಮತ್ತು ನನಗೆ ರಂಗಾಯಣದಲ್ಲಿ ನೌಕರಿ ದೊರೆತು ಮೈಸೂರಿನಲ್ಲಿ ನೆಲೆಯೂರಿದ್ದು.
ನಿಮ್ಮ ಬದುಕನ್ನು ಕಾವ್ಯದ ಹಾಗೆ ನೋಡುವುದಾದರೆ, ಅದರ ಬಗ್ಗೆ ನಾಲ್ಕು ಮಾತು..
ನಾನು ಬೆಳೆದ ಪರಿಸರದಿಂದ ನನ್ನೊಳಗೆ ಮಾಗಿದ ನೆನಪುಗಳು ಕವಿತೆಗಳಾಗಿವೆ. ನನ್ನ ಕವಿತೆಗಳಲ್ಲಿ ವ್ಯಕ್ತವಾಗುವ ತಣ್ಣನೆಯ ಭಾವನೆಗಳಂತೆಯೇ ನನ್ನ ಬದುಕಿದೆ.
(ಕೃಪೆ:   ‘ಅಲೆಮಾರಿ’  ಕುಮಾರ್)

ಕುರಿ ಕಾಯೊ ರಂಗನ ಕತೆ~ 1

ಟಿ.ಎಸ್.ಗೊರವರ ಹೊಸತಲೆಮಾರಿನ ಭರವಸೆಯ ಕಥೆಗಾರರಲ್ಲಿ ಒಬ್ಬರು. ಇವರದು ಬಹುತೇಕ ಗ್ರಾಮ ಕೇಂದ್ರಿತ ಕಥಾವಸ್ತು. ಅನುಭವದಿಂದ ಗಟ್ಟಿಗೊಂಡ ಇವರ ಕಥೆಗಳಲ್ಲಿಯೂ ಆ ದಟ್ಟತೆಯನ್ನು ಕಾಣಬಹುದು. ಇವರು ಕಟ್ಟಿಕೊಡುವ ವಿವರಗಳಲ್ಲಿ ನಮಗೆ ಪರಿಚಯವಿಲ್ಲದೊಂದು ಜೀವನಕ್ರಮದ ಕಲ್ಪನೆ ತಕ್ಕಮಟ್ಟಿಗೆ ಸಾಧ್ಯವಾಗುವುದು ನಿಜ. ಹೀಗೇಕೆ ಹೇಳುತ್ತೇನೆಂದರೆ, ನಾವು ನಮ್ಮ ಅಜ್ಞಾನವನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುವುದಾದರೆ, ಕಂಫರ್ಟ್ ಜೋನಿನಲ್ಲೇ ಇರುವ ನಮ್ಮ ಬಹುತೇಕರಿಗೆ ಖಂಡಿತ ಊರಾಚೆಗಿನ, ನಮ್ಮ ಸೀಮೆಯಾಚೆಗಿನ ಜನರ ಬಗ್ಗೆ ತಿಳಿಯುವ ವ್ಯವಧಾನವಾಗಲೀ ಕುತೂಹಲವಾಗಲೀ ಇಲ್ಲ. ಹಾಗೆ ಎಲ್ಲರಿಗೂ ಎಲ್ಲವೂ ಗೊತ್ತಿರಲೇಬೇಕೆಂಬ ನಿಯಮವೇನೂ ಇಲ್ಲವಾದ್ರಿಂದ ತಪ್ಪೇನೂ ಇಲ್ಲ ಸರಿ, ಆದರೂ ಬರೀ ಓದಿನ ಸುಖದಾಚೆಗೂ ಸಾಹಿತ್ಯ ಚಾಚಿಕೊಳ್ಳಬೇಕೆಂದರೆ ನಮ್ಮ ವ್ಯಾಪ್ತಿ ವಿಸ್ತರಣೆ ಅಗತ್ಯವಾಗುತ್ತದೆ. ಕನ್ನಡದ್ದೇ ಬೇರೆ ಬೇರೆ ಬಗೆಗಳನ್ನು ಅರಿಯುವ, ನಮ್ಮಾಚೆಗಿನ ವ್ಯವಹಾರಗಳನ್ನೂ ತಿಳಿಯುವ ಇಂತಹ ಪ್ರಯತ್ನ ಒಳ್ಳೆಯ ಕಥೆಯ ಮೂಲಕ ನೆರವೇರುವುದಾದರೆ ಅದಕ್ಕಿಂತ ಒಳ್ಳೆಯದು ಮತ್ತೇನಿದ್ದೀತು!?

ಭಾಗ- ೧

ಕಾರಬಾರಿ ಮಲ್ಲಪ್ಪನ ಎರಿ ಹೊಲದಾಗ ಹಾಕಿದ್ದ ಕುರಿಗಾರ ಭೀಮಪ್ಪನ ಕುರಿ ಹಟ್ಟಿಯ ಸುತ್ತ ಕತ್ತಲು ಗಸ್ತು ಹೊರಟಿತ್ತು.

 ಜರಿಯಾಗಿ ಸುರಿಯತೊಡಗಿದ್ದ ಕತ್ತಲೊಳಗೆ ಧ್ಯಾನಸ್ಥವಾಗಿ ಗಾಳಿ ಮೆಲ್ಲಗೆ ತನ್ನ ಸೆರಗು ಬೀಸತೊಡಗಿತ್ತು. ಆಗೊಂದು ಈಗೊಂದು ಮಿಂಚು, ಗುಡುಗು ಕಣ್ಣಗಲಿಸಿ ಕುರಿ ಹಟ್ಟಿಯ ನೋಡಿ ಕಣ್ತುಂಬಿಕೊಂಡು ಮಾಯವಾಗುತ್ತಿದ್ದವು. ಹಟ್ಟಿಯೊಳಗೆ ಕುರಿಗಳು ಮೆಲಕು ಹಾಕುತ್ತಾ ಅದೇನನ್ನೊ ಧ್ಯಾನಿಸುತ್ತಾ ಮಲಗಿದ್ದವು. ಹಟ್ಟಿಯೂ ಆ ಧ್ಯಾನದೊಳಗೆ ಮಗ್ನವಾದಂತೆ ತೋರತೊಡಗಿತ್ತು.

ಕ್ಷಣ ಹೊತ್ತು ಕಳೆದಿರಬಹುದು. ಬೆದೆ ಬಂದ ಕುರಿಯನ್ನು ಟಗರು ಬೆನ್ನು ಹತ್ತಿ ಹಟ್ಟಿಯ ತುಂಬಾ ಅಲೈ ಬುಲೈ ಆಡಿಸತೊಡಗಿತ್ತು. ಹಟ್ಟಿಗೆ ಜೀವ ಬಂದಂಗಾತು. ಕತ್ತಲೊಳಗೆ ಕುರಿ ಚಹರೆ ಸರಿಯಾಗಿ ತೋರದಿದ್ದರೂ ಎದೆಯಾಗಿನ ವಿರಹದುರಿಗೆ ಗಾಳಿ ಬೀಸಿದಂಗಾಗಿ ಅದು ಮತ್ತಷ್ಟು ಹೊತ್ತಿಕೊಂಡು ತಡೆದುಕೊಳ್ಳದ ಟಗರು ಕುರಿಗೆ ತುಟಿಮುತ್ತು ಕೊಡಲು ಹವಣಿಸತೊಡಗಿತ್ತು. ಕುರಿಯ ದುಬ್ಬದ ಮ್ಯಾಲೆ ಟಗರು ಕಾಲು ಹಾಕಿದಂತೆಲ್ಲಾ ಕುರಿ ತಪ್ಪಿಸಿಕೊಳ್ಳುವುದು ನಡದೇ ಇತ್ತು. ಇವೆರಡರ ಅಪ್ಪ, ಅವ್ವನ ಆಟದಿಂದಾಗಿ ಆದೆಷ್ಟೋ ದಿನದಿಂದ ಮಾತು ಕಳೆದುಕೊಂಡವನಿಗೆ ಮತ್ತೆ ಮಾತು ಮರುಕಳಿಸಿದ ಗೆಲವು ಹಟ್ಟಿಯೊಳಗೆ ಮೂಡತೊಡಗಿತ್ತು.

ಹಟ್ಟಿಯ ಸುತ್ತ ಕಾವಲು ಕಾಯಲು ಅಲ್ಲೊಬ್ಬರು ಇಲ್ಲೊಬ್ಬರು ಕುರಿ ಕಾಯುವ ಆಳುಗಳು ಮಲಗಿ ಗೊರಕೆ ತೆಗೆದಿದ್ದರು. ಕುರಿಗಳ ಗದ್ದಲದ ಬ್ಯಾ ಎನ್ನುವ ದನಿ ಆಳು ರಂಗನ ಕಿವಿಗಪ್ಪಳಿಸಿ ಬೆಚ್ಚಿಬಿದ್ದ. ತ್ವಾಳ ಬಂದಿರಬಹುದೆಂದು ಮನದಲ್ಲಿ ಎಣಿಕೆ ಹಾಕಿದ. ಗಾಳಿ ಸಣ್ಣಗೆ ಸೆರಗು ಬೀಸತೊಡಗಿದ್ದರೂ ಕುದಿಗೊಂಡ. ಕುರಿ ಮಾಲಕನ ಮೈ ತುಂಬಾ ಬಾಸುಂಡೆ ಏಳುವಂತೆ ಹೊಡೆಯುವ ಹೊಡೆತ, ಸೊಂಟದ ಕೆಳಗಿನ ಅವಾಚ್ಯ ಬೈಯ್ಗಳ ನೆಪ್ಪಾಗಿ ಮೈಯೆಲ್ಲಾ ಬೆವತು ನಡುಗತೊಡಗಿದ. ರಂಗನ ಕಣ್ಣೊಳಗಿನ ನಿದ್ದೆ ಆಗಲೇ ಮಾರು ದೂರ ಓಟಕಿತ್ತಿತ್ತು. ಕಂದೀಲ ಬುಡ್ಡಿಯನ್ನು ತುಸು ಎತ್ತರಿಸಿ ಹಟ್ಟಿಯೊಳಗೆ ಬೆಳಕು ಮಾಡಿ ಇಣುಕಿ ನೋಡಿದ. ರಂಗನ ನಿರೀಕ್ಷೆ ಹುಸಿಗೊಂಡಿತ್ತು. ಅವನ ಮುಖದ ಮ್ಯಾಲೆ ಹೊನ್ನಂಬರಿ ಹೂವಿನಂತ ನಗೆ ಅರಳಿ ಲಾಸ್ಯವಾಡಿತು. ತ್ವಾಳ ಬಂದಿರಬಹುದೆಂದು ಭಾವಿಸಿ ಭಯಗೊಂಡು ನಿದ್ದೆ ಕೊಡವಿಕೊಂಡು ಎದ್ದ ರಂಗನಿಗೆ ಹೋದ ಜೀವ ಬಂದಂಗಾಗಿ ನಿರಾಳವೆನಿಸಿ ಮತ್ತೆ ಕೌದಿಯೊಳಗೆ ತೂರಿಕೊಂಡು ಮೈ ಚಾಚಿದ.

ಮಲಗಿರುವ ರಂಗನಿಗೆ ಇನ್ನೂ ನಿದ್ದೆಯ ಜೊಂಪು ಹತ್ತಿರಲಿಲ್ಲ. ಮಳೆ ಹನಿ ಹನಿಯಾಗಿ ಒಂದೇ ಸಮನೆ ಹುಯ್ಯತೊಡಗಿತ್ತು. ಬಯಲನ್ನೇ ಮನೆ ಮಾಡಿಕೊಂಡಿದ್ದ ಕುರಿ ಆಳುಗಳ ಎದೆಯೊಳಗೆ ಕ್ಷಣ ಹೊತ್ತು ಆತಂಕ ಹೆಡೆಯಾಡಿತು. ಇದ್ದೊಂದ್ದು ಹಾಳಿ ಚೀಲವನ್ನು ತಲೆಯ ಮ್ಯಾಲೆ ಹೊದ್ದುಕೊಂಡು, ಅದರೊಳಗೆ ಗುಡಿಸಿಕೊಂಡು ಕುಳಿತರು. ಈಗ ಮನಸ್ಸು ನೆಮ್ಮದಿಯ ಉಸಿರು ಬಿಡತೊಡಗಿತ್ತು. ಮಳೆ ಮಾತ್ರ ಇದ್ಯಾವುದರ ಪರಿವೇ ಇಲ್ಲದೆ ಹಾಳಿ ಚೀಲದ ಮ್ಯಾಲೆ ಮನಸ್ಸಿಗೆ ಬಂದಂತೆ ಹುಯ್ಯತೊಡಗಿತು. ಹಟ್ಟಿಯೊಳಗೆ ಕುರಿಗಳು ಗುಂಪುಗೂಡಿ ಒಂದರ ಬುಡಕ್ಕೊಂದು ತಲೆ ತೂರಿ ಮಳೆಗೆ ಮೈಯೊಡ್ಡಿ ನಿಂತಿದ್ದವು.

ತಾಸು ಹೊತ್ತು ಬಿಟ್ಟು ಬಿಡದೆ ಜಡಿದ ಮಳೆ ದಣಿವಾರಿಸಿಕೊಳ್ಳಲು ತನ್ನ ಗುಡಿಸಲ ಕಡೆ ಪಾದವ ಬೆಳೆಸಿತು. ಮಳೆ ವರಪುಗೊಂಡಿದ್ದೆ ತಡ, ಕುರಿ ಆಳುಗಳು ಖುಷಿಗೊಂಡವು. ಬೆಳಕು ಹರಿಯಲು ಇನ್ನೂ ವ್ಯಾಳೆ ಬಾಳ ಇದ್ದುದರಿಂದ ಅವರ ಹಣೆಯ ಮ್ಯಾಲೆ ಚಿಂತೆಯ ಗೆರೆಗಳು ಮೂಡಲು ಸ್ಪರ್ಧೆಗಿಳಿದವು. ಕಣ್ಣೊಳಗೆ ನಿದ್ದೆ ಸುಳಿದಿರುಗಿ ಮಲಗಲು ಮನಸು ಹಟ ಹಿಡಿಯಿತು. ಮಲಗಬೇಕೆಂದರೆ ಎರಿ ಹೊಲದ ಮಣ್ಣು ರಜ್ಜಾಗಿ ಕಿತಿ ಕಿತಿ ಅನ್ನತೊಡಗಿತ್ತು. ಬೆಳಕು ಹರಿಯುವ ತನಕ ಕುಕ್ಕರಗಾಲಲ್ಲಿ ಕುಳಿತು ಕಾಲ ಕಳೆಯುವುದನ್ನು ನೆಪ್ಪಿಸಿಕೊಂಡು ದಿಗಿಲುಗೊಂಡರು. ಮಳೆಯಿಂದಾಗಿ ಥಂಡಿ ಗಾಳಿ ಬೀಸಿ ಬಂದು ಮೈ ಸವರಿ ನಡುಗಿಸತೊಡಗಿತು. ತಲಾ ಒಂದೊಂದು ಚಪ್ಪಡಿ ಬೀಡಿ ಸೇದಿ ಎದೆ ಬೆಚ್ಚಗೆ ಮಾಡಿಕೊಂಡು ಕುಳಿತ ಭಂಗಿಯಲ್ಲಿ ತೂಕಡಿಸತೊಡಗಿದರು.ದೀಡು ತಾಸು ಕಳೆದಿರಬಹುದು. ರಂಗ ತಲೆಯ ಮ್ಯಾಲೆ ಹೊದ್ದುಕೊಂಡಿದ್ದ ಹಾಳಿ ಚೀಲ ತೆಗೆದು ಆಕಾಶ ದಿಟ್ಟಿಸಿದ. ಮೈ ತುಂಬಾ ದೀಪದ ಅಂಗಿ ತೊಟ್ಟು ಸಿಂಗಾರಗೊಂಡಿದ್ದ ಬೆಳ್ಳಿ ಚಿಕ್ಕಿ ಮೂಡತೊಡಗಿತ್ತು. ತನ್ನ ದಿನಚರಿ ನೆಪ್ಪಾಗಿ ನಿದ್ದೆ ಕೊಸರಿದ.

ಅವತ್ತು ರಂಗನದು ದಿನಪೂರ್ತಿ ಹಟ್ಟಯೊಳಗೆ ಉಳಿಯುವ ಮರಿಗಳಿಗೆ ತಪ್ಪಲು ತರುವ ಪಾಳಿ ಇತ್ತು. ಅಂವ ಕೋತ, ಕೊಡಲಿ ತಗೊಂಡು ತಪ್ಪಲು ತರಲು ಹೆಜ್ಜೆ ಬೆಳೆಸಿದ. ಗೌಡರ ಹೊಲದ ಹತ್ತಿರ ಬಂದಾಗ ಒಳಗೊಳಗೆ ದಿಗಿಲು ಮಿಸುಗಾಡತೊಡಗಿತು.”ಆಗ್ಲೆ ಬೆಳಕು ಹರಿಯಾಕತ್ತೈತಿ. ಇನ್ನೇನು ಗೌಡ್ರ ಹೊಲಕ್ಕ ಯಾರಾದ್ರೂ ಬಂದ್ರು ಬರಬಹುದು. ಅವ್ರು ಬರೋದ್ರೊಳ್ಗ ತಪ್ಪಲು ಕೊಯ್ಕೊಂಡು ಇಲ್ಲಿಂದ ಕಾಲ್ಕೀಳಬೇಕು. ತಪ್ಲ ಕೊಯ್ಯಾಗ ಏನರ ಸಿಕ್ಕ ಬಿದ್ರ ನನ್ನ ಚರ್ಮಾನ ಸುಲಿತಾರವ್ರು….’ ಎಂದು ರಂಗ ಮನಸೊಳಗೆ ಮಾತಾಡಿಕೊಂಡ.

ಬದುವಿನಲ್ಲಿ ಬೆಳೆದು ಹಚ್ಚಗೆ ನಗತೊಡಗಿದ್ದ ಬೇವಿನ ಗಿಡ, ಬನ್ನಿಗಿಡ, ಕರಿಜಾಲಿ, ಬಾರಿಗಿಡದ ತಪ್ಪಲನ್ನು ಅವಸರದಿಂದ ಕೊಯ್ದುಕೊಂಡು, ವಜ್ಜೆ ಹೊರೆಯನ್ನು ತಲೆ ಮ್ಯಾಲೆ ಹೊತ್ತು ಹಟ್ಟಿಯ ಕಡೆ ಮುಖ ಮಾಡಿದ.

ತಲೆ ಮ್ಯಾಲಿನ ತಪ್ಪಲದ ಹೊರೆ ಹೆಣ ಭಾರವಾಗಿ ಹಟ್ಟಿ ಅದ್ಯಾವಾಗ ಬಂದಿತೋ ಅನಿಸತೊಡಗಿತ್ತು. ಮುಂಜಾನೆಯ ಥಂಡಿಯಲ್ಲೂ ಗಂಟಲು ಒಣಗಿ ಉಗುಳು ಅಂಟಂಟಾಗಿ ಹಿಂಸೆಯಾಗತೊಡಗಿತ್ತು. ಮೈಯಲ್ಲಿ ಬೆವರಿನ ಉಟೆ ಕೀಳತೊಡಗಿತ್ತು. ಸಣ್ಣಗೆ ತಂಗಾಳಿ ಬೀಸಿ ಬಂದು ಮೈ ಸವರಿದಾಗ ಕೊಂಚ ನೆಮ್ಮದಿಯಾಗುತ್ತಿತ್ತು. ಕಾಲಿನ ಮೀನ ಖಂಡದೊಳಗೆ ನೋವು ಪತರುಗುಟ್ಟತೊಡಗಿತ್ತು. ಉಸುಕಿನ ಹೊಲದಲ್ಲಿ ದಪ್ಪನೆಯ ಕೊಡ್ಡ ಕೆರವು ಮೆಟ್ಟಿದ್ದ ರಂಗನ ಕಾಲುಗಳು ಪಾದವ ಎತ್ತಿ ಇಡಬೇಕಾದರೆ ನಡುಗಿ ಹೋಗುತ್ತಿದ್ದವು. ದೋತರದ ಕಚ್ಚಿ ಸಡಿಲಗೊಂಡಿದ್ದರಿಂದ ಅದೆಲ್ಲಿ ಬಿಚ್ಚುವುದೋ ಎಂದು ಆತಂಕವಾಗಿತ್ತು.

ಅನತಿ ದೂರದಲ್ಲಿ ಹಟ್ಟಿ ಗೋಚರಿಸತೊಡಗಿತು. ರಂಗನೊಳಗೆ ಇದ್ದಕ್ಕಿದ್ದಂತೆ ಉತ್ಸಾಹದ ಸೆಲೆಯೊಡೆಯಿತು. ತಲೆ ಮ್ಯಾಲಿನ ಹೊರೆಯನ್ನು ಹಟ್ಟಿಯ ಹತ್ತಿರ ರಭಸದಿಂದ ಒಗೆದ. ತಪ್ಪಲು ನೋಡಿದ ಕುರಿಗಳು ದೃಷ್ಟಿಯನ್ನು ಚೂಪುಗೊಳಿಸಿದವು. ತಲೆ ಮ್ಯಾಲಿನ ಯಮಭಾರ ಹಗುರಾದಂತಾಗಿ ರಂಗನಿಗೆ ನಿರಮ್ಮಳವೆನಿಸಿತು. ಕ್ಷಣ ಹೊತ್ತು ಕಾಲು ಚಾಚಿ ಹಟ್ಟಿಗೆ ಆತುಕೊಂಡು ಕುಳಿತ. ಮೈಯೊಳಗೆ ನಿಧಾನವೆನಿಸಿತು. ತಂಬಿಗೆ ನೀರು ಕುಡಿದ. ಎದೆಯೊಳಗೆ ಖುಷಿ ಕುಣಿದಂತಾಯಿತು.

ಜೊತೆಗಾರರು ಒಂದು ಅಳತೆಯ ಮೂರು ಕಲ್ಲನ್ನು ನೀಟಾಗಿ ಜೋಡಿಸಿ ಒಲೆ ಮಾಡಿ, ಅದರೊಳಗೆ ತೊಗರಿ ಕಟ್ಟಿಗೆ ಇಟ್ಟು ಉರಿ ಹಚ್ಚಿ ಜ್ವಾಳದ ಸಂಕಟಿ ಮಾಡಿ, ಕುರಿ ಹಾಲು ಕಾಸುತ್ತಿರುವುದನ್ನು ದಿಟ್ಟಿಸಿದ. ರಂಗನ ಹೊಟ್ಟೆ ಹಸಿದು ಕರಡಿ ಮಜಲು ಬಾರಿಸತೊಡಗಿತ್ತು. ತಲಾಗೊಂದೊಂದು ಪರಾತ ಅಗಲದ ತಾಟು ತಗೊಂಡು, ತಾಟಿನ ತುಂಬಾ ಸಂಕಟಿ ಹಾಲು ಹಾಕ್ಕೊಂಡು ಗಡದ್ದಾಗಿ ಉಂಡರು. ಮ್ಯಾಲೆ ಒಂದೊಂದು ತಾಟು ಹಾಲು ಕುಡಿದು ತೇಗು ಬಿಟ್ಟರು.

ಕುರಿ ಮೇಯಲು ಬಿಡುವ ಹೊತ್ತಾದ್ದರಿಂದ ರಂಗನ ಜೊತೆಗಾರರು ಹಟ್ಟಿಯ ತಡಿಕೆ ತೆಗೆದು ಕುರಿಗಳನ್ನು ಹೊರಗೆ ಬಿಟ್ಟರು. ಧೋತರವನ್ನು ಜೋಳಿಗೆಯಂತೆ ಮಾಡಿ ಅದರೊಳಗೆ ಬುತ್ತಿ ಇಟ್ಟುಕೊಂಡು, ಹೆಗಲಿಗೊಂದು ಕಂಬಳಿ ನೇತು ಹಾಕ್ಕೊಂಡು ಕುರಿ ಕಾಯಲು ಸಜ್ಜುಗೊಂಡು ಗುಡ್ಡದ ಕಡೆ ಹೊರಟರು.

*******

ದೂರದಲ್ಲಿ ಕೆರಗೆ ಹೋಗಿ ನೀರು ತಂದ ರಂಗ ಮರಿಗಳಿಗೆ ಕುಡಿಸಿ ಹಟ್ಟಿ ತಡಿಕೆಗೆ ತಪ್ಪಲು ನೇತು ಬಿಟ್ಟ. ತಪ್ಪಲು ತಿಂದ ಮರಿಗಳು ಹಟ್ಟಿಯೊಳಗೆ ಚಿನ್ನಾಟಿಗೆ ತೆಗೆದಿದ್ದವು. ಒಂದೊಂದು ಮರಿಗಳನ್ನು ಹಿಡಿದು ಅವುಗಳ ಮೈ ಮ್ಯಾಲೆ ಪೊದೆಯಾಗಿ ಬೆಳೆದ ಕೂದಲನ್ನು ಕತ್ತರಿಯಿಂದ ನೀಟಾಗಿ ಕತ್ತರಿಸತೊಡಗಿದ. ಕಿವಿಸಂದಿ, ತೊಡೆಸಂದಿಗಳಲ್ಲಿ ಸಂಸಾರ ಹೂಡಿದ್ದ ಉಣ್ಣೆಗಳನ್ನು ಕಿತ್ತು ಕಲ್ಲಿಗೆ ಒರೆಯುವ ಕಾಯಕ ನಡೆಸಿದ. ಒರೆದಾಗ ಉಣ್ಣೆಯ ಹೊಟ್ಟೆಯಿಂದ ಬರುವ ರಕ್ತದಿಂದ ಅಂವ ಕಲ್ಲ ಮ್ಯಾಲೆ ಎಳೆದ ಗೆರೆಗಳು ಬಿಸಿಲಿಗೆ ಒಣಗಿ ನವ್ಯ ಕಲಾಕೃತಿ ಹಾಂಗ ಗೋಚರಿಸತೊಡಗಿದ್ದವು.

ಮರಿಗಳ ಕರಾಪು ಮಾಡಿ ಅವುಗಳೊಗೆ ಉತ್ಸಾಹ ತುಂಬಿದ ರಂಗ ತಪ್ಪಲು ಆದಾಗೊಮ್ಮೆ ತಪ್ಪಲು ನೇತು ಬಿಡುತ್ತಾ, ನೀರು ಕುಡಿಸುತ್ತಾ ಅವುಗಳ ದೇಖರೇಖಿ ಮಾಡುವುದರೊಳಗೆ ಸಂಜೆಯ ಮುಗಿಲು ಉಣ್ಣೆಯ ರಕುತ ಬಳಿದುಕೊಂಡಿತ್ತು.ಇಡೀ ದಿನ ಉಲ್ಲಾಸದಿಂದ ಪ್ರತಿ ಕ್ಷಣಗಳನ್ನು ಮರಿಗಳ ದೇಖರೇಖಿಯಲ್ಲಿ ಕಳೆದ ರಂಗನಿಗೆ ಅದ್ಯಾಕೊ ಸುಸ್ತೆನಿಸತೊಡಗಿತ್ತು. ತಲೆಯೊಳಗೆ ಗುಡ್ಡದ ಕಲ್ಲು ಕುಂತಂಗಾಗಿ ಭಾರವೆನಿಸತೊಡಗಿತ್ತು. ಕೈ ಕಾಲುಗಳು ಸೋತಂತೆನಿಸಿ, ಬಾಯೊಳಗೆ ಉಪ್ಪುಪ್ಪು ನೀರು ಆಡತೊಡಗಿತು. ಮೈ ಮುಟ್ಟಿ ನೋಡಿಕೊಂಡ. ಅದು ಕಾದ ಹಂಚಾಗಿತ್ತು. ಮರಿಯೊಂದು ರಂಗನ ದುಬ್ಬದ ಮ್ಯಾಲೆ ಕಾಲು ಕೊಟ್ಟು ನಿಲ್ಲುವುದು, ಓಡುವುದು ಮಾಡತೊಡಗಿತ್ತು. ಕೆಂಡದ ಬಣ್ಣಕ್ಕೆ ತಿರುಗಿದ್ದ ಭಾರವಾದ ಕಣ್ಣುಗಳಿಂದ ಮರಿಯನ್ನು ದಿಟ್ಟಿಸಿ ಪ್ರೀತಿ ತೋರಿದ.

ಮೈಯೊಳಗೆ ಥಂಡಿ ಹೊಕ್ಕಂಗಾಗಿ ಮೈಯಂತ ಮೈಯೆಲ್ಲ ನಡುಗತೊಡಗಿತು. ಮೈತುಂಬಾ ಕೌದಿ ಹೊದ್ದ ಕುಳಿತ. ಕುರಿ ಮೇಸಲು ಹೋಗಿದ್ದ ಜೊತೆಗಾರರು ಕೌದಿ ಹೊದ್ದ ರಂಗನ ಅವತಾರ ನೋಡಿ ದಿಗಿಲುಗೊಂಡರು. ಇವನನ್ನು ಮನಿಗೆ ಕಳುಹಿಸಿ ಅಲ್ಲಿ ಡಾಕ್ಟರರಿಗೆ ತೋರಿಸಿದರಾಯಿತೆಂದು ಗೆಣಿಕೆ ಹಾಕಿ ಊರಿಗೆ ಕಳಿಸಲು ಜೊತೆಗಾರನೊಬ್ಬ ತಯಾರುಗೊಂಡ.ಕತ್ತಲು ಹೆಜ್ಜೆ ಹಾಕತೊಡಗಿದ್ದ ಕಳ್ಳಿದಾರಿ ಹಿಡಿದು ಇಬ್ಬರೂ ಊರ ಕಡೆ ಮುಖ ಮಾಡಿದರು. ರಂಗನ ಕಾಲುಗಳು ಕಸುವು ಕಳೆದುಕೊಂಡು ನಿತ್ರಾಣವೆನಿಸಿ ಸೋತಂತೆನಿಸತೊಡಗಿದ್ದವು. ದಾರಿಯಲ್ಲಿ ನಾಕೈದು ಸಲ ಕುಂತ. ತುಸು ಆರಾಮವೆನಿಸಿದಾಗ ಮತ್ತೆ ಪಾದ ಬೆಳೆಸಿದ. ತ್ರಾಸು ಮಾಡಿಕೊಂಡು ಊರು ತಲುಪಿದ. ರಂಗನ ಜೊತೆಗಾರನಿಗೆ ಹಟ್ಟಿಗೆ ಹೋಗಲು ಹೊತ್ತಾಗತೊಡಗಿದ್ದರಿಂದ ಅಂವ ರಂಗನನ್ನು ಊರು ಮುಟ್ಟಿಸಿ ಹಟ್ಟಿಗೆ ಹೊರಟು ಹೋದ.

(ಮುಂದುವರೆದಿದೆ….)

ಕುರಿ ಕಾಯೊ ರಂಗನ ಕತೆ~ 2

ಟಿ.ಎಸ್.ಗೊರವರ ಅನುಭವಗಳಿಂದ ಗಟ್ಟಿಗೊಂಡ ಕಥೆಗಾರ. ಸಾಮಾನ್ಯ ಜನಜೀವನ ಹಾಗೂ ಹಾಗೂ ಗ್ರಾಮೀಣ ಹಿನ್ನೆಲೆಯ ಕಥೆಗಳನ್ನು ಇವರು ಮನಮುಟ್ಟುವ ಹಾಗೆ ಕಥೆಯಲ್ಲಿ ತರುತ್ತಾರೆ. ಈಗಾಗಲೇ ಕೆಲವು ಕಥಾಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಪಡೆದಿರುವ ಗೊರವರ ಅವರ ‘ಕುರಿ ಕಾಯೋ ರಂಗನ ಕಥೆ’ ಕೂಡ ಸಂಕ್ರಾಂತಿ ಕಥಾ ಸ್ಪರ್ಧೆಯಲ್ಲಿ ಮೆಚ್ಚುಗೆ ಬಹುಮಾನಕ್ಕೆ ಪಾತ್ರವಾಗಿದೆ.

ಭಾಗ- ೨

ರಂಗ ಊರು ತಲುಪಿದಾಗ ಅದು ಕತ್ತಲ ಚಾದರ ಹೊದ್ದು ಕೊಂಡಿತ್ತು. ಅಲ್ಲೊಂದು ಇಲ್ಲೊಂದು ಮೆನಯಲ್ಲಿ ಬುಡ್ಡಿ ಚಿಮಣಿ ಪಿಳಿ ಪಿಳಿ ಕಣ್ಣು ಬಿಡತೊಡಗಿದ್ದವು. ಅದ್ಯಾರದೋ ಮನೆಯ ರೇಡಿಯೊದಲ್ಲಿ ರಾಜಕುಮಾರ ಹಾಡತೊಡಗಿದ್ದ. ಕುಡಿದ ವ್ಯಕ್ತಿಯೊಂದು ಜೋಲಿ ಹೊಡೆಯುತ್ತಾ, ಇಳಿಜಾರಿನಲ್ಲಿ ಬ್ರೇಕು ತಪ್ಪಿದ ಗಾಡಿಯಂತೆ ಬರತೊಡಗಿದ್ದ. ಹುಚ್ಚು ಹಿಡಿದ ಮುದುಕಿಯೊಂದು ತಿಪ್ಪೆಯ ನೆತ್ತಿಯ ಮ್ಯಾಲೆ ಕುಂತು ಅದೇನನ್ನೋ ಬಯ್ಯತೊಡಗಿತ್ತು. ರಂಗ ಹೊಸ ಲೋಕದೊಳಗೆ ಕಾಲಿಟ್ಟಂತೆ ಆ ಕಡೆ ಈ ಕಡೆ ದೃಷ್ಟಿ ಬೀರುತ್ತಾ ಮನೆ ತಲುಪಿದ.

ಮನೆಯಂದರೆ ಅದು ತೊಲೆಗಂಬದ ಮಡಿಗೆ ಮನೆಯಲ್ಲ. ಮ್ಯಾಲೆ ತಗಡು ಹೊದೆಸಿ ಸುತ್ತಲೂ ಗೋಡೆಯಂತೆ ನುಗ್ಗೆ ಕಟ್ಟಿಗೆಯ ತಡಿಕೆ ಹೆಣೆದು, ಅದಕ್ಕೆ ಸೆಗಣಿಯನ್ನು ಅಳಕು ಮಾಡಿ ಮೆತ್ತಿ, ಅದರ ಮ್ಯಾಲೆ ನೀಟಾಗಿ ಸುಣ್ಣ ಬಳೆದ ಮನೆಯದು.

ಒಳಗೆ ರಂಗನ ಅವ್ವ ದ್ಯಾಮವ್ವ ಒಲೆ ಊದುತ್ತಿರುವ ಸದ್ದು ಕೇಳಿಸತೊಡಗಿತ್ತು. ಹೊರಗಡೆ ಅದ್ಯಾರೊ ಮಾತಾಡುತ್ತಿರುವ ದನಿ ಕೇಳಿ ದ್ಯಾಮವ್ವ ಊದುಗೋಳಿ ಇಟ್ಟು ಎದ್ದು ಹೊರ ಬಂದಳು. ಕೌದಿ ಹೊದ್ದುಕೊಂಡಿರುವವನನ್ನು ನೋಡಿ ಭಯಗೊಂಡ ದ್ಯಾಮವ್ವ ಚಿಟ್ಟಿಕ್ಕು ಚೀರಿದಳು. ರಂಗ ಮೈ ಮ್ಯಾಲಿನ ಕೌದಿ ಸರಿಸಿ ಮುಖ ತೋರಿದ. ದ್ಯಾಮವ್ವನ ಎದೆಯಾಗ ಹೆದರಿಕೆಯ ಬಿರುಗಾಳಿ ಬೀಸಿದಂಗಾತು. ಮಗನಿಗೆ ಅದೇನಾಗಿದೆಯೊ ಎಂದು ಕಣ್ಣಲ್ಲಿ ನೀರು ತಂದುಕೊಂಡಳು. ಅವನ ಮೈ ಮುಟ್ಟಿ ನೋಡಿದಳು. ಎಳ್ಳು ಸಿಡಿಯುವಷ್ಟು ಬೆಚ್ಚಗಿತ್ತು. ದ್ಯಾಮವ್ವನಿಗೆ ಆತಂಕವಾಗಿ ದೊಡ್ಡ ಮಸೂತಿ ಹತ್ತಿರದ ಆರ್‌ಎಂಪಿ ಡಾಕ್ಟರ್ ಎಸ್.ಎಲ್.ಉಕ್ಕಿಸಲ ಅವರ ದವಾಖಾನಿಗೆ ತೋರಿಸಲು ಕರಕೊಂಡು ಹೋದಳು.

ಡಾಕ್ಟರು ರಂಗನನ್ನು ಚೆಕ್ಕು ಮಾಡಿ ಯಾಡು ಸೂಜಿ ಚುಚ್ಚಿ ಕ್ಷಣ ಹೊತ್ತು ಅಲ್ಲೇ ಮಲಗಿಸಿ ರೆಸ್ಟು ಮಾಡಲು ಹೇಳಿದರು. ದ್ಯಾಮವ್ವ ರಂಗನಿಗೆ ಒಂದೀಟು ತಡೆದು ಬರಲು ಹೇಳಿ, ತಾನು ಅಡಗಿ ಮಾಡುವುದಾಗಿ ಹೇಳಿ ಮನೆಗೆ ಬಂದಳು.

ಒಂದೀಟು ಹೊತ್ತಿನ ನಂತರ ಮೈ ಬಿಸಿ ಕಡಿಮೆ ಆದಂಗಾಗಿ ಆರಾಮೆನಿಸಿ ಡಾಕ್ಟರು ಕೊಟ್ಟ ಗುಳಿಗೆ ತಗೊಂಡು ಮನೆ ಕಡೆ ಹೆಜ್ಜೆ ಬೆಳೆಸಿದ.

ದವಾಖಾನಿಯಿಂದ ತಮ್ಮ ಮನೆಗೆ ಹೋಗುವ ದಾರಿ ಸಿಗದೆ ರಂಗ ಅಗಸಿವಾರಿ ಹತ್ತಿರದ ಹಾಲಿನ ಕೇಂದ್ರದ ಮುಂದೆ ಅತ್ತ ಇತ್ತ ನೋಡುತ್ತಾ ಜಾತ್ರೆಯೊಳಗೆ ಕಳೆದುಕೊಂಡ ಹುಡುಗನಂತೆ ಅಸಹಾಯಕನಾಗಿ ನಿಂತಿದ್ದ.

ಅದ್ಯಾರದೊ ಮನೆಗೆ ಪೇಸೆಂಟು ನೋಡಲು ಹೋಗಿದ್ದ ಡಾಕ್ಟರು ರಂಗನನ್ನು ನೋಡಿ ಸಿಟ್ಟಾಗಿ ” ರೆಸ್ಟು ಮಾಡೋ ಮಾರಾಯ. ನೀನಿಲ್ಲೆ ನಿಂತು ಆಗಲೇ ಚೈನಿ ಹೊಡಿಯಾಕತ್ತಿ ಅಲ…’ ಎಂದರು.

ರಂಗನಿಗೆ ಏನು ಹೇಳಬೇಕೆನ್ನುವುದೇ ತಿಳಿಯಲಿಲ್ಲ. ನಿರ್ವಾ ಇಲ್ಲದೆ ” ಸಾಹೆಬ್ರ, ನಮ್ಮ ಮನಿ ದಾರಿ ಯಾಕಡೆ ಅಂತ ಸ್ವಲ್ಪ ಹೇಳ್ರಿ. ನಾನು ಬಾಳ ದಿನ ಆತ್ರಿ, ಊರಿಗೆ ಬಂದೇ ಇಲ್ಲ. ಅದಕ್ಕ ನಮ್ಮನಿ ಯಾಕಡೆ ಅಂತ ಗೊತ್ತಾಗವಲ್ದು….’ ಎಂದ.

ರಂಗನ ಕಾಡುತನಕ್ಕೆ ಡಾಕ್ಟರು ಅಚ್ಚರಿಗೊಂಡರು. ಪಾಪ ಅನಿಸಿ ದಾರಿ ತೋರಿಸಿದರು. ಆ ಓಣಿಯ ದಾರಿ ಹಿಡಿದು ಮನೆಗೆ ಬಂದಾಗ ಅವರವ್ವ ಕರಸಿದ್ದಪ್ಪನ ಅಂಗಡಿಯಿಂದ ತಂದಿದ್ದ ಅಕ್ಕಿಯ ಬಿಸಿ ಅನ್ನ ಮಾಡಿ ಇಟ್ಟಿದ್ದಳು. ನಿತ್ಯ ಜ್ವಾಳದ ಸಂಕಟಿ ಉಣ್ಣುತ್ತಿದ್ದ ಅಂವ ಅನ್ನ ಉಂಡು ಅದೆಷ್ಟೋ ದಿನವಾಗಿತ್ತು. ಅವ್ವ ಬಡಿಸಿದ ಅನ್ನ, ತೊಗರಿ ಬ್ಯಾಳಿ ಸಾರು, ಅದ್ಯಾರದೊ ಮನೆಯಿಂದ ಇಸಕೊಂಡು ಬಂದಿದ್ದ ಹುಂಚಿ ಟಕ್ಕು ಸೀಪುತ್ತಾ ಊಟ ಮುಗಿಸಿ, ಗುಳಿಗೆ ತಗೊಂಡು ನಿದ್ದೆಗೆ ಜಾರಿದ.

********

ಮುಂಜಾನೆದ್ದು ರಂಗ ಅನತಿ ದೂರದ ತಿಪ್ಪೆಯಲ್ಲಿ ಉಚ್ಚೆ ಹೋದ. ಅವು ಹಳದಿ ಬಣ್ಣಕ್ಕೆ ತಿರುಗಿದ್ದವು. ರಂಗನಿಗೆ ಗಾಬರಿ ಅನಿಸಿತು. ಅದ್ಯಾವುದೋ ದೊಡ್ಡ ಜಡ್ಡು ಇದೆ ಎಂದು ಭಾವಿಸಿದ. ರಾತ್ರಿ ಡಾಕ್ಟರು ಹೇಳಿದ ಮಾತು ನೆಪ್ಪಾಗಿ ಇದು ಗುಳಿಗೆ ಮಹಿಮೆ ಎಂದುಕೊಂಡು ನಿರಮ್ಮಳನಾದ.

ಈಗ ತುಸು ಜ್ವರ ಕಡಿಮೆಯಾಗಿ ಮೈ ಹಗುರ ಅನಿಸತೊಡಗಿತ್ತು. ಮನಿ ಮುಂದೆ ಲೈಟಿನ ಕಂಬಕ್ಕಿಂತ ಎತ್ತರ ಬೆಳೆದು ನಿಂತಿದ್ದ ಬೇನಗಿಡದ ಕೊಂಗಲಿ ಮುರಕೊಂಡು ಹಲ್ಲು ತಿಕ್ಕಿದ. ಅವ್ವ ಕಾಸಿ ಕೊಟ್ಟ ಡಿಕಾಸಿ ಚಾ ಕುಡಿದ. ಬ್ಯಾರೆ ಕೆಲಸ ಇಲ್ಲದಂತಾಗಿ ಮನಿ ಕಟ್ಟಿ ಮ್ಯಾಲೆ ಕುಂತು ಆ ಕಡೆ ಈ ಕಡೆ ಹೋಗರ‍್ನ ಬರೋರ‍್ನ ಕಣ್ಣು ತುಂಬಿಕೊಂಡು, ಅವರ ಬಟ್ಟೆಬರೆ ದಿಟ್ಟಿಸಿ ವಿಸ್ಮಯಗೊಳ್ಳುತ್ತಾ ಕುಳಿತ.

ಕಾಲೇಜಿಗೆ ಹೊರಟಿದ್ದ ಹುಡುಗಿಯನ್ನು ದಿಟ್ಟಿಸಿದ. ಅದು ಚಿಕ್ಕವಳಿದ್ದಾಗಿ ಎತ್ತಿ ಆಡಿಸಿ, ಗಲ್ಲಕ್ಕೆ ಬೆಲ್ಲ ಕೊಡುತ್ತಿದ್ದ ಮಗ್ಗುಲ ಮನೆಯ ಮಂಜುಳಾ. ಆಕೆಯನ್ನು ನೋಡಿ ತುಸು ಹೊತ್ತು ಕಣ್ಣಿಗೆ ಚಕ್ರ ಬಂದಾಗಾತು. ಮೈ ಕೈ ತುಂಬಾ ಹರೆಯ ತುಂಬಿಕೊಂಡು, ನೀಟಾಗಿ ಬೈತಲೆ ತಕ್ಕೊಂಡು ಜೋಡು ಜಡೆ ಬಿಟ್ಟಿದ್ದ, ಕಡು ನೀಲಿ ಚೂಡಿದಾರ ಧರಿಸಿದ್ದ ಮಂಜುಳಾಳನ್ನು ಮತ್ತೆ ಮತ್ತೆ ನೋಡಬೇಕೆನಿಸಿತು.

ಮಾಮ ಎಂದು ಬೆನ್ನು ಬೀಳುತ್ತಿದ್ದ ಹುಡುಗಿ ಈಗ ಕ್ಯಾರೆ ಎನ್ನದೆ ಅಪರಿಚಿತಳಂತೆ ಹೋಗುತ್ತಿರುವುದನ್ನು ನೋಡಿ ಸೋಜಿಗವೆನಿಸಿತು. ಕುರಿ ಮೇಸಲು ಗುಡ್ಡಕ್ಕೆ ಹೋದಾಗ ಅಲ್ಲಿಗೆ ಕಟ್ಟಿಗೆಗೆ ಬರುತ್ತಿದ್ದ ದಾವಣಿ ಲಂಗದ ಲಂಬಾಣಿ ಹುಡುಗಿಯರನ್ನು ಮಾತ್ರ ನೋಡಿದ್ದ ರಂಗನಿಗೆ ಮಂಜುಳಾ ಜಾತ್ರೆಯಲ್ಲಿ ಆಡುತ್ತಿದ್ದ ನಾಟಕದ ಹುಡುಗಿಯಂತೆ ಮೋಹಕವಾಗಿ ತೋರಿದಳು.

ಅವಳ ಹಿಂದೆ ತಾನು ಬಸ್‌ಸ್ಟಾಂಡ್ ಕಡೆ ಹೋದ. ಅಲ್ಲಿ ಕಾಲೇಜಿಗೆ ಹೋರಡಲು ಜಮೆಯಾಗಿದ್ದ ಹುಡುಗ, ಹುಡುಗಿಯರ ದೊಡ್ಡ ಗುಂಪು ನೆರೆದಿತ್ತು. ರಂಗನಿಗೆ ತಾನು ಅದ್ಯಾವುದೋ ಮಾಯಕದ ಜಗತ್ತಿನೊಳಗೆ ಬಂದಿರುವ ಡೌಟು ಕಾಡಿತು. ಹುಡುಗಿಯರ ಗುಂಪು ದಿಟ್ಟಿಸಿದ. ಜಾತ್ರೆಯೊಳಗಿನ ತರಹೇವಾರಿ ಬಣ್ಣದ ಗೊಂಬೆಗಳಂತೆ ಕಂಡರು. ಬಣ್ಣ ಮೆತ್ತಿಕೊಂಡು ರಂಗುಗೊಂಡಿದ್ದ ಮೋಹಕ ತುಟಿ, ಅವರ ಕಣ್ಣೊಳಗಿನ ಬುಡ್ಡಿ ಚಿಮಣಿಯ ಬೆಳಕು, ಚೂಡಿದಾರದ ಎದೆಗೆ ಒದೆಯುತ್ತಿರುವ ಮೊಲೆ ರಂಗನೊಳಗೆ ಹಲಗೆ ಬಾರಿಸತೊಡಗಿದ್ದವು.

ರಂಗನ ಮಗ್ಗುಲ ನಿಂತಿದ್ದ ಕಾಲೇಜು ಹುಡುಗನೊಬ್ಬ ಮೊಬೈಲಿನ ವಿಡಿಯೋ ದಿಟ್ಟಿಸತೊಡಗಿದ್ದ. ರಂಗ ಅಚ್ಚರಿಗೊಂಡ. ಅವನೊಳಗೆ ಹುಚ್ಚಾಳಂಬೆಯಂತೆ ಪುದು ಪುದು ನೂರೆಂಟು ಪ್ರಶ್ನೆಗಳು ಎದ್ದವು. ಜೇಬಿನಲ್ಲಿಟ್ಟುಕೊಳ್ಳುವ ಟಿ.ವಿ. ಎಂದು ಭಾವಿಸಿ ಆ ಹುಡುಗನನ್ನು, ಮೊಬೈಲನ್ನು ಇನ್ನಿಲ್ಲದ ಕೂತುಹಲದಿಂದ ದಿಟ್ಟಿಸತೊಡಗಿದ.

ಕನ್ನಡ ಸಾಲೆಯ ಟೀಚರು ನಡಿಗೆಗೆ ಅವಸರ ತುಂಬಿ ರಂಗನ ಮುಂದೆ ಸುಳಿದು ಬಸ್ ಹತ್ತಲು ಹೋದರು. ಆ ಟೀಚರ್ ಮೈಯಿಂದ ಹೊರಟ ಸೇಂಟಿನ ಘಮ ರಂಗನ ಮೂಗಿನ ಹೊಳ್ಳೆ ಅರಳಿಸಿ ಸೋಜಿಗಗೊಂಡ. ಕುರಿ ಉಚ್ಚೆಯ ಗಬ್ಬು ನಾತಕ್ಕೆ ಒಗ್ಗಿ ಹೋಗಿದ್ದ ರಂಗ ಟೀಚರ್ ಮೈಯಿಂದ ಬಂದ ಘಮ ಅವರೊಳಗೆ ಅದ್ಹೇಗೆ ಬಂದಿರಬಹುದು ಎಂದು ಊಹಿಸಲು ಅಸಾಧ್ಯವೆನಿಸಿ ಮನೆಯ ದಾರಿ ತುಳಿದ.

******

ಊರಿಗೆ ಹೋಗಿ ಬಂದಾಗಿನಿಂದ ಕುರಿ ಕಾಯುವಾಗ ರಂಗನ ಮನಸು ಮೊದಲಿನಂತಿರದೆ ಅದ್ಯಾಕೊ ಒಳಗೊಳಗೆ ಭೋರಿಟ್ಟು ಅಳುತ್ತಿದೆ. ಮುಂಜಾನೆಯಾದರೆ ಸಾಕು. ಬಸ್‌ಸ್ಟ್ಯಾಂಡಿನ ಕಡೆ ಹೋಗಬೇಕೆನಿಸುತ್ತದೆ. ಬಣ್ಣದ ಗೊಂಬೆಯಂತ ಹುಡುಗಿಯರು, ಜೇಬಿನಲ್ಲಿಟ್ಟುಕೊಳ್ಳುವ ಟಿವಿ, ಟೀಚರ್ ಮೈ ಘಮ, ತಾನು ಗಲ್ಲಕ್ಕೆ ಬೆಲ್ಲ ಕೊಟ್ಟಿದ್ದ ಹುಡುಗಿ ಕನಸಾಗಿ ಕಾಡಿ ಜೀವ ಹಿಂಡತೊಡಗಿದ್ದವು.

*****

ಹಟ್ಟಿಯ ಸುತ್ತ ಕತ್ತಲು ಕಳ್ಳಬೆಕ್ಕಿನಂತೆ ಹೆಜ್ಜೆ ಇಡತೊಡಗಿತ್ತು. ರಂಗ ಮೈ ಮುಟ್ಟಿ ನೋಡಿಕೊಂಡ. ಜ್ವರ ಬಂದಂತೆನಿಸಿತು. ಖುಷಿಯಾಗಿ ಕೌದಿ ಹೊದ್ದು, ಕುರಿ ಮೇಸಲು ಹೋದ ಜೊತೆಗಾರರು ಬರುವ ದಾರಿ ನಿರುಕಿಸುತ್ತ ಕುಳಿತ.

– ಟಿ.ಎಸ್.ಗೊರವರ

‘ನಾನೂ ನಿಮ್ಮ ಹಾಗೆ ಅನ್ನ ತಿನ್ನುವ ನರ ಮನುಷ್ಯ’!

೯ ಮೇ, ೨೦೦೭ರ ಲಂಕೇಶ್ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಪೂರ್ಣಚಂದ್ರ ತೇಜಸ್ವಿ ಸಂದರ್ಶನದ ಮುಂದುವರಿದ ಭಾಗ. ಹಿಂದಿನ ಪ್ರಶ್ನೋತ್ತರಕ್ಕೆ ಇಲ್ಲಿ ಭೇಟಿ ನೀಡಿ.

ಪ್ರಶ್ನೆ: ವಿಜ್ಞಾನದ ವಿದ್ಯಾರ್ಥಿಯಲ್ಲದ ನೀವು ವಿಜ್ಞಾನದ ವಿಸ್ಮಯಗಳಿಗೆ ಗಂಟುಬಿದ್ದಿದ್ದು ಹೇಗೆ?

ಪೂಚಂತೇ: ವಿಜ್ಞಾನದ ವಿಸ್ಮಯಗಳಿಗೆ ನಾನು ಗಂಟು ಬಿದ್ದಿದ್ದೀನನ್ನೋದು ಸಂಪೂರ್ಣ ತಪ್ಪು. ಅಲ್ಲಯ್ಯ! ತನ್ನ ಪಾಡಿಗೆ ತಾನಿರುವ, ಇದ್ದುದನ್ನು ಇದ್ದ ಹಾಗೆ, ಕಂಡುದನ್ನು ಕಂಡ ಹಾಗೆ ನೋಡುವ ಮತ್ತು ಹೇಳುವ ಮನುಷ್ಯ ಇರಬೇಕಾದುದೇ ಹೀಗಲ್ಲವೆ? ಬೋಗಸ್ ಜನಿವಾರ, ಉಡುದಾರ, ಶಿವದಾರಗಳನೆಲ್ಲ ಮಹಾಮಹಾ ಸಂಕೇತಗಳೆಂದು ಕತೆ ಬರೆಯುವವರಿಗೆ ಬೇಕಿದ್ದರೆ ಗಂಟುಬಿದ್ದವರೆಂದು ಹೇಳು. ನಾನು ನಿನ್ನ ಹಾಗೇ ಅನ್ನ ತಿನ್ನುವ ನರ ಮನುಷ್ಯ. ನನ್ನ ಅನುಭವಗಳನ್ನೂ, ನನ್ನ ಅನುಭವಕ್ಕೆ ನಿಲುಕಿದ ಸತ್ಯಗಳನ್ನೂ ನಿನಗೆ ಹೇಳುತ್ತಿದ್ದೇನಷ್ಟೇ ಹೊರತು, ನನ್ನ ಬರವಣಿಗೆಗೆ ಒಂದು ಹಣೆಪಟ್ಟಿ ಖಂಡಿತ ಅನವಶ್ಯಕ. ನಾನು ವೈಜ್ಞಾನಿಕ ಬರಹಗಾರನಂತೂ ಅಲ್ಲ. ನನ್ನಂಥ ಕಥೆಗಾರನೊಬ್ಬ ಮಿಸ್ಸಿಂಗ್ ಲಿಂಕ್ ನಂಥ ಮಾನವಶಾಸ್ತ್ರದ ಪುಸ್ತಕವನ್ನಾಗಲೀ ವಿಸ್ಮಯದಂಥ ಇಕಾಲಜಿ ಮೇಲಿನ ಪುಸ್ತಕವಾಗಲೀ ಬರೆಯಬೇಕಾಗಿ ಬಂದದ್ದು ಕನ್ನಡ ಸಾಹಿತ್ಯದ ದುರಂತ ಪರಿಸ್ಥಿತಿಯನ್ನು ತೋರಿಸುತ್ತದೆ. ಆಯಾ ಕ್ಷೇತ್ರಗಳಲ್ಲಿರುವ ಪ್ರತಿಭಾವಂತರಿಗೆ ತಮ್ಮ ಕ್ಷೇತ್ರದ ಜ್ಞಾನವನ್ನು ಇತರರೊಡನೆ ಹಂಚಿಕೊಳ್ಳಬೇಕೆಂಬ ದೊಡ್ಡತನ ಇಲ್ಲ. ಅವರ ತಲೆಯೆಲ್ಲಾ ಹೇಗಾದರೂ ಮಾಡಿ ವೀಸಾ ಗಿಟ್ಟಿಸಿ ವಿದೇಶಕ್ಕೆ ಹೋಗಿ ನೆಲೆಸುವುದರ ಕಡೆಗೇ ಇರುತ್ತದೆ. ಹೀಗಾಗಿ ಅವರಂತೂ ಪುಸ್ತಕ ಬರೆಯುವುದಿಲ್ಲ. ಮಿಕ್ಕ ಎರಡನೇ ಮೂರನೇ ದರ್ಜೆಯವರಿಗೆ ಅವರಿಗೇ ಅವರ ವಿಷಯಗಳಾಲ್ಲಿ ಆಸಕ್ತಿ ಇರುವುದಿಲ್ಲ. ಇನ್ನು ಇತರರಿಗೆ ಆಸಕ್ತಿ ಹುಟ್ಟುವಂತೆ ಹೇಗೆ ತಾನೆ ಅವರು ಬರೆಯುತ್ತಾರೆ? ಇದರಿಂದಾಗಿಯೇ ಕೆಟ್ಟ ವೈಜ್ಞಾನಿಕ ಪುಸ್ತಕಗಳ ಗೊಬ್ಬರದ ಗುಂಡಿಯೇ ನಮ್ಮಲ್ಲಿ ನಿರ್ಮಾಣವಾಗಿದೆ. ಸರ್ಕಾರಿ ಸ್ಕೀಮುಗಳು, ಬಲ್ಕ್ ಪರ್ಚೇಸ್‌ಗಳು, ಇಲ್ಲಿಗೆ ಇವನ್ನೆಲ್ಲ ಸುರಿದು ಅಧಿಕಾರಿಗಳೂ ಪ್ರಕಾಶಕರೂ ಕೊಳ್ಳೆ ಹಂಚಿಕೊಳ್ಳುತ್ತಾ ಕಾಲಾಯಾಪನೆ ಮಾದುತ್ತಿದ್ದಾರೆ. ಈ ಲೋಫರ್‌ಗಳ ಬಳಗಕ್ಕೆ ಸೇರುವುದರ ಬದಲು ಹಸ್ತ ಸಾಮುದ್ರಿಕ, ಪಂಚಾಂಗ ಬರೆದು ಬದುಕುವುದು ಒಳಿತು.