ನಾವು ಪ್ರೀತಿಸೋದು ನಮ್ಮದೇ ಖುಷಿಗಾಗಿ. ಹೀಗಿರುವಾಗ….

ನಾವು ಯಾರದೋ ಉಪಕಾರಕ್ಕಾಗಿ ಬದುಕೋದಿಲ್ಲ. ಯಾರು ಕೂಡಾ. ನಾವು ಹುಟ್ಟಿದ್ದು ನಾವು ಬದುಕಲಿಕ್ಕೆ ಮತ್ತು ನಮ್ಮ ಸಾವನ್ನು ನಾವೇ ಸಾಯಲಿಕ್ಕೆ. ಪ್ರೀತಿಸುವುದು ಕೂಡ ಆ ಪ್ರೀತಿ ನಮ್ಮಲ್ಲಿ ಉಂಟು ಮಾಡುವ ಹಿತಾನುಭವವನ್ನ ಪಡೆಯಲಿಕ್ಕಷ್ಟೆ. 

ಬಹಳ ಹಿಂದೆ ಒಂದು ಕಥೆ ಓದಿದ್ದ ನೆನಪು.
ಒಂದು ಆಚಾರವಂತ ಕುಟುಂಬದಲ್ಲಿ, ಆ ಮನೆಯ ಗೃಹಿಣಿಯ ದೇಹಾಂತವಾಗುತ್ತೆ. ಗಂಭೀರೆ, ಜಾಣೆಯಾದ ಸುಸಂಸ್ಕೃತ ಮಗಳು ತೀವ್ರ ನೋವಿಗೆ ಒಳಗಾಗ್ತಾಳೆ. ಅವಳಪ್ಪ ದಿನಾ ಅವಳನ್ನ ಕೂರಿಸಿಕೊಂಡು ಭಗವದ್ಗೀತೆ ಓದಿ ಅದರ ಅರ್ಥವಿವರಣೆ ಮಾಡ್ತಾರೆ. ಅಮ್ಮನ್ನ ಕಳಕೊಂಡ ಮಗಳಿಗೆ ದೇಹಾತ್ಮಗಳ ಸಂಗತಿಯನ್ನೆಲ್ಲ ಬಿಡಿಸಿಬಿಡಿಸಿ ಹೇಳ್ತಾನೆ ಅಪ್ಪ. ಅದೇ ಸಮಯಕ್ಕೆ ಅವಳಿಗೆ ಪರಿಚಯವಾಗುವ ಯುವಕ, ಆಕೆಯ ನೋವಿಗೆ ಸ್ಪಂದಿಸ್ತಾನೆ. ಜೊತೆಯಾಗ್ತಾನೆ, ಅವಳ ನಗುವಾಗ್ತಾನೆ. ಅಮ್ಮ ಸತ್ತ ವರ್ಷದೊಳಗೆ ಅವರಿಬ್ಬರು ಮದುವೆಯಾಗ್ತಾರೆ ಅಂತೇನೋ ಮುಗಿದಿತ್ತಿರಬೇಕು. ಈ ಪ್ರಕ್ರಿಯೆಯಲ್ಲಿ ಶಾಸ್ತ್ರಿಗಳು ಮಗಳ ನಡತೆ ಬಗ್ಗೆ ಅಚ್ಚರಿಯನ್ನೂ ಗಾಬರಿಯನ್ನೂ ಪಟ್ಟಿದ್ದರು ಅನ್ನೋದು ಕಥೆಯೊಳಗಿದೆ. ಹಾಗೇ ಆ ಹುಡುಗ ಬೇರೆ ಜಾತಿಯವನಿರಬೇಕು.
ಕೆಲ ಸಲ ಹೀಗಾಗತ್ತೆ. ಅದು ಕಥೆಯೋ ಸಿನೆಮಾವೋ… ನಮ್ಮನ್ನ ಯಾವ ಅಂಶ ಸೆಳೆಯುತ್ತೋ ಅದು ಕಣ್ಣಿಗೆ ಕಟ್ಟಿದ ಹಾಗೆ ಉಳಿದುಕೊಳ್ಳುತ್ತೆ. ಮಿಕ್ಕಂತೆ ಯಾವ ವಿವರವೂ ನೆನಪಿರೋದಿಲ್ಲ. ಈ ಕಥೆಯ ಮಟ್ಟಿಗೆ ನನ್ನ ನೆನಪಲ್ಲಿ ಉಳಿದುಹೋಗಿದ್ದು, ಕಳಕೊಂಡ ನೋವಲ್ಲಿ ನರಳುವಾಗ ಭಗವದ್ಗೀತೆ ಓದುವ ಅಪ್ಪ ಮತ್ತು ಆ ಕ್ಷಣದ ನಗುವಾಗಿ ಒದಗಿದ ಯುವಕ.
~
ಯಾರಾದರೂ ಸತ್ತಾಗ ನಾವ್ಯಾಕೆ ಅಳ್ತೀವಿ? ಅವರ ಅನುಪಸ್ಥಿತಿ ನಮಗೆ ನೋವು ತರುವುದರಿಂದ. ನಾವು ಮಿಸ್‌ ಮಾಡ್ಕೊಳ್ಳುವುದರಿಂದಲೇ ಹೊರತು ಸತ್ತವರಿಗಾಗಿ ಅಲ್ಲ. ಇಲ್ಲವಾದವರು ಇದ್ದಿದ್ದರೆ ಏನೇನೋ ಮಾಡ್ತಿದ್ದರು, ಇಲ್ಲವಾಗಿಬಿಟ್ಟಿದ್ದಾರೆ – ಸರಿ. ಇಲ್ಲವಾಗಿರುವ ವಸ್ತುವಿಗೆ ನೋವೂ ಇರೋದಿಲ್ಲ. ನಾವು ಅಳೋದು, ಆ ಖಾಲಿ ನಮ್ಮನ್ನು ಕಾಡುವುದರಿಂದಲಷ್ಟೆ. ನಮ್ಮ ಮನೋಬುದ್ಧಿಗಳಲ್ಲಿ ಒಂದು ಕುಳಿ ಬೀಳುತ್ತೆ. ಅದನ್ನ ಹೊಸ ನೀರು, ಹೊಸ ಮಣ್ಣು ಭರಿಸುವತನಕ ದುಃಖ ನಮ್ಮನ್ನ ಕಾಡುತ್ತೆ. ಸತ್ತವರು ವೈತರಣಿ ದಾಟುತ್ತಾರೋ ಇಲ್ಲವೋ… ಅವರ ಆತ್ಮ ಮುಕ್ತಿ ಪಡೆಯುತ್ತೋ ಇಲ್ಲವೋ… ವಿಷಯ ಅದಲ್ಲ. “ಅಂಗಿ ಬಿಚ್ಚಿ ಬಿಸಾಕಿದ ಹಾಗೆ ಆತ್ಮವು ದೇಹವನ್ನ ಬಿಸುಟು ಹೊರಡುತ್ತದೆ” – ಭಗವದ್ಗೀತೆಯ ಪಾಠ. ಈ ತಿಳಿವು ನಮ್ಮ ನೋವನ್ನು ಉಪಶಮನ ಮಾಡೋದಿಲ್ಲ. ಯಾಕಂದರೆ ನಾವು ಬಿಸಾಡಲ್ಪಟ್ಟ ಅಂಗಿಗಾಗಿ ಅಳುತ್ತಿಲ್ಲ. ನಾವು ಅಳ್ತಿರೋದು ಆ ಅಂಗಿ ತೊಟ್ಟು ನಮ್ಮೆದುರು ನಡೆದಾಡ್ತಿದ್ದ ಆತ್ಮ ಇನ್ನು ನಮಗೆ ಕಾಣಿಸೋದಿಲ್ಲವಲ್ಲ ಅಂತ. ಇಲ್ಲಿ ಸಾಹಚರ್ಯ ಕಳಕೊಂಡ ನಮ್ಮ ಬಗೆಗಷ್ಟೆ ನಮ್ಮ ಅನುಕಂಪ.
~
ಆ ಹುಡುಗಿಗೆ ಅವಳಮ್ಮ ಗೆಳತಿಯಂತಿದ್ದಳು. ಅವಳ ವಿಸ್ತರಣೆಯಂತಿದ್ದಳು. ಅವಳ ಜೀವನದಲ್ಲಿ ಕಂಡ ಏಕೈಕ ಆಪ್ತಳಾಗಿದ್ದಳು. ಅವಳು ಇಲ್ಲವಾದಾಗ ಉಂಟಾದ ದೊಡ್ಡ ಕೊರತೆಯನ್ನು ತಿಳಿವು ತುಂಬಲಿಲ್ಲ. ಸತ್ತವರು ಮತ್ತೆ ಬರೋದಿಲ್ಲ ಅನ್ನೋದನ್ನ ಅರ್ಥ ಮಾಡಿಕೊಳ್ಳದವರು ಬಹಳ ಕಡಿಮೆ ಜನ. ಮಿತಿಮೀರಿದ ವ್ಯಾಮೋಹದಿಂದ ಮಾನಸಿಕ ಸ್ವಾಸ್ಥ್ಯ ಕಳಕೊಂಡವರಷ್ಟೆ ಸತ್ತವರು ಮತ್ತೆ ಬರುತ್ತಾರೆ ಅಂದುಕೊಳ್ಳೋದು. ಅಂಥವರಷ್ಟೆ, ಹಾಗೆ ಬರಲಿ ಅನ್ನುವ ನಿರೀಕ್ಷೆ ಇಟ್ಟುಕೊಳ್ಳೋದು…. ಇಲ್ಲವಾದರೆ ಬುದ್ಧ ಗೋತಮಿಗೆ ಸಾಸಿವೆ ತರಲು ಹೇಳ್ತಿರಲಿಲ್ಲ. ಮಗನನ್ನ ಬದುಕಿಸಿಕೊಡು ಅಂತ ಬಂದವಳಿಗೆ ಬುದ್ಧ ಧಮ್ಮೋಪದೇಶ ಮಾಡುತ್ತ ಕೂರಬಹುದಿತ್ತು. ಆದರೆ ಆತ ಆಕೆಗೂ ಗೊತ್ತಿರುವ ಸಂಗತಿಯನ್ನೇ ಸ್ವತಃ ಕಂಡುಕೊಳ್ಳಲು ಬಿಟ್ಟ. ಅವಳ ಮನೋಸ್ವಾಸ್ಥ್ಯವನ್ನ ಸರಿಪಡಿಸುವುದು ಮುಖ್ಯವಾಗಿತ್ತು ಬುದ್ಧನಿಗೆ.
ಪಟಾಚಾರಾ ತನ್ನ ಗಂಡನನ್ನೂ ಇಬ್ಬರು ಮಕ್ಕಳನ್ನೂ ಒಟ್ಟಿಗೆ ಕಳೆದುಕೊಂಡಳು. ಅವರು ಅವಳ ಜೀವನದ ಸಂತಸವಾಗಿದ್ದವರು. ಅಪಘಾತಗಳಲ್ಲಿ ಆ ಮೂವರನ್ನೂ ಕಳಕೊಂಡ ಪಟಾಚಾರಾ ಕೂಡ ಬುದ್ಧನ ಬಳಿ ಬಂದಳು. ಅವಳು ಅವರನ್ನು ಬದುಕಿಸಿಕೊಡೆಂದು ಕೇಳಲಿಲ್ಲ. ಅವರೆಲ್ಲರ ಅಗಲಿಕೆಯಿಂದ ಆಗಿರುವ ನೋವನ್ನು ಭರಿಸಿಕೊಡೆಂದು ಬಂದಳು. ಬುದ್ಧ ಅವಳಿಗೆ ನಿಸ್ಸಂಗತ್ವವನ್ನು ಬೋಧಿಸಿದ. ಆಕೆ ತನ್ನೊಂದಿಗೆ ತಾನಿರುವುದನ್ನು ಕಲಿತುಕೊಂಡಳು, ಬಿಕ್ಖುಣಿಯಾದಳು.
~
ನಾವು ಯಾರದೋ ಉಪಕಾರಕ್ಕಾಗಿ ಬದುಕೋದಿಲ್ಲ. ಯಾರು ಕೂಡಾ. ನಾವು ಹುಟ್ಟಿದ್ದು ನಾವು ಬದುಕಲಿಕ್ಕೆ ಮತ್ತು ನಮ್ಮ ಸಾವನ್ನು ನಾವೇ ಸಾಯಲಿಕ್ಕೆ. ನಾವು ಪ್ರೀತಿಸುವುದು ಕೂಡ ಆ ಪ್ರೀತಿ ನಮ್ಮಲ್ಲಿ ಉಂಟು ಮಾಡುವ ಹಿತಾನುಭವವನ್ನ ಪಡೆಯಲಿಕ್ಕೆ. ಅಮ್ಮ ಮಗುವನ್ನ ಪ್ರೀತಿಸೋದು ಕೂಡ ತಾಯ್ತನದ ಅನುಭೂತಿಗಾಗಿಯೇ ಹೊರತು ಅದು ಕೂಡ ನಿಸ್ವಾರ್ಥವಲ್ಲ. ತನ್ನ ನಿರಂತರತೆಯಾಗಿರುವ ಕಾರಣದಿಂದಲೇ ತಾಯಿ ತನ್ನ ಮಗುವನ್ನ ಪ್ರೀತಿಸ್ತಾಳೆ. ವಾತ್ಸಲ್ಯದ ಆನಂದ ಅವಳಿಗೆ ಲಭಿಸುತ್ತದೆ. ಆ ಅನುಭೂತಿಗಾಗಿ ಅವಳು ತ್ಯಾಗದ ಔನ್ನತ್ಯವನ್ನೂ ಸುಲಭದಲ್ಲಿ ಸಾಧಿಸಬಲ್ಲವಳಾಗುತ್ತಾಳೆ. ಮಗು ತಾಯಿಗೆ ನೀಡುವ ಸಂತೋಷ ಅಷ್ಟು ಉನ್ನತವಾದದ್ದು.
ನಮ್ಮ ಮೋಹ – ನಿರ್ಮೋಹಗಳು ನಮ್ಮ ಸಂತೋಷದ ಸಲುವಾಗಿಯೇ ನಮ್ಮಲ್ಲಿ ಬೆಳೆದುಕೊಂಡಿರುತ್ತವೆ. ಸಂತರ ಸಾಲಿನ ಬಹುತೇಕರು ಸಂಸಾರ ಬಿಟ್ಟು ಹೊರಡುವಾಗ ದುಃಖಿಸಲಿಲ್ಲ. ಯಾಕಂದರೆ ಅವರು ತಮ್ಮನ್ನು (ತಮ್ಮ ಸ್ವಯಂ ಅನ್ನು, ಆತ್ಮವನ್ನು) ಕುಟುಂಬದ ಜನರಿಗಿಂತ ಹೆಚ್ಚು ಪ್ರೀತಿಸುತ್ತಿದ್ದರು. ಅವರು ದೃಗ್ಗೋಚರ ದೇಹಕ್ಕಿಂತ ಅದರೊಳಗಿನ ಸೂಕ್ಷ್ಮವನ್ನು ಹೆಚ್ಚು ಪ್ರೀತಿಸುತ್ತಿದ್ದರು. ಬಿಟ್ಟು ಬಂದ ಮಗು, ಹೆಂಡತಿ ಮೊದಲಾದವರ ಮೇಲೆ ಪ್ರೀತಿ ಕಡಿಮೆಯಾಯ್ತೆಂದಲ್ಲ, ಅಂಥಾ ಸಂತರು ಆ ಎಲ್ಲ ದೇಹಗಳೊಳಗಿನ ಸತ್ವವನ್ನು ಪ್ರೀತಿಸ್ತಿದ್ದರು. ಅದರಲ್ಲಿ ಅವರಿಗೆ ಹೆಚ್ಚಿನ ಆನಂದ ದೊರೆಯುತ್ತಿತ್ತು.
ತ್ಯಾಗ, ನಿರ್ಲಿಪ್ತಿ, ವೈರಾಗ್ಯಗಳು ಕೂಡ ಸ್ವಯಂನ ಆನಂದಕ್ಕಾಗಿಯೇ ಇವೆ. ಜ್ಞಾನೋದಯವನ್ನ ಪಡೆಯೋದು ಅಂದರೆ ದಿವ್ಯಾನಂದದಲ್ಲಿ ತೇಲೋದು ಅನ್ನುತ್ತಾರೆ ಬಲ್ಲವರು. ಜ್ಞಾನೋದಯ ಕೂಡ, ಬ್ರಹ್ಮದ ಅರಿವು ಪಡೆಯುವ ಪ್ರಕ್ರಿಯೆ ಕೂಡ ನಮ್ಮನ್ನ ತಲುಪಿಸೋದು ನಾವು ಕುಂದಿಲ್ಲದ ಆನಂದದ ರುಚಿ ಸವಿಯಲಿಕ್ಕೇ ಅಂತಾದ ಮೇಲೆ, ನಮ್ಮ ಪ್ರೀತಿ ಪ್ರೇಮಗಳನ್ನ ನಿಸ್ವಾರ್ಥವೆಂದು ಸಾಧಿಸಿಕೊಳ್ಳುವ ಹಠ ಯಾಕೆ?
~
ಎಲ್ಲವೂ ಅಷ್ಟೇ. ನಮಗೆ ಬೇಕಾದಾಗ ಮಾತ್ರ ನಾವದನ್ನ ಮಾಡ್ತೀವಿ. ಮೇಲನೋಟಕ್ಕೆ, ಯಾರದೋ ಉಪಕಾರಕ್ಕೆ ನಾವು ನಮಗಿಷ್ಟವಿಲ್ಲದ ಕೆಲಸ ಮಾಡಿದಂತೆ ಕಂಡರೂ, ಹಾಗೆ ನಮಗಿಷ್ಟವಿಲ್ಲದ್ದನ್ನು ಮಾಡುವ ಮೂಲಕ ಅವರ ಮೆಚ್ಚುಗೆಗೋ/ ಕೃಪೆಗೋ/ ಪ್ರೀತಿಗೋ ಪಾತ್ರರಾಗುವ ಲಾಭದಿಂದಲೇ ನಾವದನ್ನ ಮಾಡಿರ‍್ತೀವಿ. ತಾನು ಬಯಸದ ಯಾವ ಕೆಲಸವನ್ನೂ ಒಂದು ಕೀಟ ಕೂಡ ಮಾಡುವುದಿಲ್ಲ. ಹೀಗಿರುವಾಗ ಮನುಷ್ಯ ತಾನೆ ಹೊರತು ಹೇಗಾದಾನು?
ಪರಸ್ಪರ ಪ್ರೀತಿ, ಅವರವರ ಖುಷಿಗಾಗಿಯೇ. ಹೀಗಿರುವಾಗ ಪ್ರೇಮಿ ಹೀಗೇ ಇರಬೇಕು, ಹಾಗೇ ಇರಬೇಕೆಂಬ ತಾಕೀತುಗಳು ಸುಖದ ಹಾಲಿಗೆ ಹಿಂಡುವ ಹುಳಿಯಂತಾಗುತ್ತದೆ ಅಷ್ಟೆ. “ನಿನ್ನನ್ನ ಪ್ರೀತಿಸೋದು ನನ್ನ ಖುಷಿಗಾಗಿ. ನನ್ನ ಖುಷಿ ಉಳಿಸಲು ನೀನು ನನ್ನ ಬಯಕೆಯಂತಿರಬೇಕು” ಅಂತ ಬಯಸತೊಡಗಿದರೆ, ಆ ಕ್ಷಣದಿಂದಲೇ ನಮ್ಮ ಪ್ರೀತಿಸುವ ಆನಂದ ಕಳೆಯುತ್ತಾ ಹೋಗುತ್ತದೆ. ಇದು ಎಲ್ಲ ಸಂಬಂಧಗಳಿಗೂ ಅನ್ವಯ.
ಸ್ವಾರ್ಥ, ಜೀವನದ ಪರಮ ಸತ್ಯ. ಆದರೆ ಅದು ಮತ್ತೊಬ್ಬರ ಸ್ವಾರ್ಥಕ್ಕೆ ಧಕ್ಕೆಯಂತೆ ಇರಬಾರದು. ಎಲ್ಲ ಸಾತ್ವಿಕ ಸ್ವಾರ್ಥಗಳೂ ಜಗತ್ತಿನ ಖುಷಿಯಲ್ಲಿ ಸ್ವಂತದ ಖುಷಿಯನ್ನ ಕಾಣ್ತವೆ ಮತ್ತು ಆ ಖುಷಿಯ ಅನುಭವಕ್ಕಾಗಿ ತ್ಯಾಗಕ್ಕೆ ಮುಂದಾಗುತ್ತವೆ. ಎಲ್ಲ ತಾಮಸಿಕ ಸ್ವಾರ್ಥಗಳು ತನ್ನ ಖುಷಿಯೇ ಜಗತ್ತಿನ ಖುಷಿಯಾಗಬೇಕೆಂದು ಬಯಸುತ್ತಾ, ಅದಕ್ಕೆ ಜಗತ್ತಿನ ಬಲಿ ಕೇಳ್ತವೆ. ಪ್ರೇಮದಲ್ಲೂ ಹೀಗೇನೇ….
~
ಅಂದಹಾಗೆ;
ನಾವು
ಕಳೆದುಹೋದವರನ್ನ
ಹೆಚ್ಚು ಪ್ರೀತಿಸೋದು
ಅವರು
ಮತ್ತೆ ಸಿಗೋದಿಲ್ಲೆಂಬ
ನೋವಿನಿಂದಲಾ?
ಖಾತ್ರಿಯಿಂದಲಾ!?

– ನಮ್ಮ ನಮ್ಮ ನಿಜ, ನಮನಮಗೆ ಗೊತ್ತು!

ಮಂಪರು ಮಧ್ಯಾಹ್ನದಲ್ಲಿ ರಾಜಕಾರಣದ ಚಿಂತೆ!

ರಾಜಕಾರಣ ಯಾವತ್ತೂ ನನ್ನಲ್ಲೊಂದು ಭಯ, ಕುತೂಹಲ ಮತ್ತು ಅಸಹ್ಯಗಳನ್ನು ಮೂಡಿಸಿರುವ ಕ್ಷೇತ್ರ. ಅದರ ದೂರವಿರುತ್ತಲೇ ಹತ್ತಿರುವಿರುವಂಥ ಸೆಳೆತ. ವಾರಾಂತ್ಯ ಮಧ್ಯಾಹ್ನದ ಮಂಪರಿನಲ್ಲಿ ಹೀಗೊಂದು ಸ್ವಗತ ಹರಟಿದಾಗ…..

ತಾಪಮಾನದಲ್ಲಿ ಹೆಚ್ಚಳವಾಗಿರೋದು ಬೇಸಗೆಯ ಕಾವಿಂದಲೋ ಚುನಾವಣೆಯ ಕಾವಿಂದಲೋ ಅನ್ನುವಷ್ಟು ಗೊಂದಲ.
ಅದ್ಯಾಕೋ ಈ ಸಲದ ಚುನಾವಣೆಯಲ್ಲಿ ಗೆಲ್ಲುವ ಕುದುರೆಗಳೇ ಹೆಚ್ಚು ಬೆವರುತ್ತಿರುವಂತೆ ಅನ್ನಿಸುತ್ತಿದೆ. ಹ್ಯಾಟ್ರಿಕ್‌ ಹೀರೋಗಳು ಮೇಲಿಂದ ಮೇಲೆ ‘ಈ ಸಲವೂ ನಾನೇ’ ಅನ್ನುತ್ತಿದ್ದರೂ ‘ಆಪ್‌’ ಕ್ರಾಂತಿ ಎಲ್ಲಿ ಸೆಡ್ಡು ಹೊಡೆಯುವುದೋ ಅನ್ನುವ ಅಳುಕು ಇದ್ದಂತಿದೆ.
ಚಾಯ್ ಪೆ ಚರ್ಚಾ ಪರ್‌ ಚರ್ಚಾ ನಡೆಸಿ ಮೋದಿ ಸುಸ್ತಾಗಿದ್ದಾರೆ. ಅವರ ಹೆಸರಿಗಂಟಿದ ಕಲೆ ತೊಳೆಯಲು ಇನ್ನೂ ಯಾವ ತೀರ್ಥವೂ ಉದ್ಭವವಾಗಿಲ್ಲ. ಬಹುಶಃ ಆ ಭಯದಿಂದಲೇ ಎರಡೆರಡು ಕಡೆಯಿಂದ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ.
ರಾಹುಲ್‌ ಗಾಂಧಿ ಭಾಷಣಗಳನ್ನು ಉರುಹೊಡೆದೇ ಮುಗಿದಿಲ್ಲವೆಂಬಂತೆ ಅನ್ನಿಸುತ್ತೆ.
ತೃತೀಯ ರಂಗ ಪ್ರತಿ ಚುನಾವಣೆ ಸಮಯದಲ್ಲಿ ಎದ್ದು ಮೈಕೊಡವಿ, ಹಾವು – ಏಣಿ ಆಡಿ ಮತ್ತೆ ದೀರ್ಘ ನಿದ್ದೆಗೆ ಜಾರುತ್ತೆ. ಈ ಸಲವೂ ಅದು ಪೋಷಕ ಪಾತ್ರಕ್ಕೆ ಸಿದ್ಧತೆ ನಡೆಸುತ್ತಿದೆ.
ಜೊತೆಗೆ ‘ಕ್ರೇಜೀವಾಲ್’ ಅಂತ ಕರೆಸಿಕೊಳ್ತಿರುವ ಕೇಜ್ರೀವಾಲ್, ತಮ್ಮ ಕ್ರೇಜೀತನದಿಂದಲೇ ಸ್ಥಾಪಿತ ಪಕ್ಷಗಳಲ್ಲಿ ಆತಂಕ ಹುಟ್ಟಿಸಿದ್ದಾರೆ. ಎಲ್ಲಿ ಏನು ಬೇಕಾದರೂ ಫಲಿತಾಂಶ ಬರಬಹುದು ಅನ್ನುವ ಆತಂಕ ಅದು.
*
ಈ ಎಲ್ಲದರ ನಡುವೆ ಬೆವರಿನ ಜೊತೆ ಮೇಕಪ್ಪನ್ನೂ ಒರೆಸಿಕೊಂಡು ಬವಣೆ ಪಡುತ್ತಿರುವ ಗುಂಪೊಂದು ಕಾಣಿಸಿಕೊಳ್ತಿದೆ. ಕ್ರಿಕೆಟ್‌ನಲ್ಲಿ ಚೀರ್‌ ಗರ್ಲ್ಸ್ ಇದ್ದಂತೆ ಪೊಲಿಟಿಕ್ಸ್‌ನಲ್ಲಿ ನಟ ನಟಿಯರ ಉಪಸ್ಥಿತಿ. ಕೆಲವರು ಹಣ ಪಡೆದೇ ಪ್ರಚಾರಕ್ಕೆ ಬಂದರೆ, ಕೆಲವರು ಅಧಿಕಾರಕ್ಕಾಗಿ ಪಕ್ಷಗಳ ಜೊತೆ ಗುರುತಿಸಿಕೊಂಡಿದ್ದಾರೆ. ಇವರು ಪ್ರಚಾರಕ್ಕೆ ಹೋದಲ್ಲೆಲ್ಲ ಜನ ಮುಗಿ ಬೀಳುತ್ತಾರೆ. ವೋಟು ಹಾಕುತ್ತಾರೋ ಇಲ್ಲವೋ, ಅವರನ್ನು ನೋಡುವ, ಜೊತೆಗಿರುವ ಸಂಭ್ರಮವನ್ನು ಮಾತ್ರ ಕಳೆದುಕೊಳ್ಳೋದಿಲ್ಲ. ಇದು ಸಿನೆಮಾ ಮಾತ್ರವಲ್ಲ, ಕಿರುತೆರೆಯ ನಟ ನಟಿಯರಿಗೂ ಅನ್ವಯ. ಜನರ ಈ ಕ್ರೇಜನ್ನೇ ಬಂಡವಾಳ ಮಾಡಿಕೊಂಡು ರಾಜಕೀಯ ಪಕ್ಷಗಳು ತಮ್ಮ ತಮ್ಮ ಜಾಹೀರಾತಿಗಾಗಿ ಹಣ ತೆತ್ತು ಅವರನ್ನು ಬರಮಾಡಿಕೊಳ್ಳುತ್ತಿವೆ. ಈ ನಡುವೆ ನಿಜವಾದ ಕಳಕಳಿಯುಳ್ಳ ನಟ ನಟಿಯರು ಇಲ್ಲವೆಂದಲ್ಲ. ರಾಜಕಾರಣ ಮಾಡಲೆಂದೇ ಅಥವಾ ಜನಪರ ದನಿಯಾಗಿ ನಿಲ್ಲಲೆಂದೇ ಈ ಕ್ಷೇತ್ರಕ್ಕೆ ಕಾಲಿಟ್ಟವರೂ ಇದ್ದಾರೆ. ವಿಷಯ ಅದಲ್ಲ…. ವಿಶೇಷವಾಗಿ ಪರದೆ ಮೇಲೆ ಕಾಣಿಸಿಕೊಳ್ಳುವವರನ್ನು ನಾವು ಆದರಿಸುವ ಬಗೆ ವಿಸ್ಮಯ ಹುಟ್ಟಿಸುತ್ತದೆ.
*
ಬಹುಶಃ ಭಾರತೀಯರು ನಟರ ಬಗ್ಗೆ ಬೆಳೆಸಿಕೊಂಡಿರುವಷ್ಟು ವ್ಯಾಮೋಹವನ್ನು ಜಗತ್ತಿನ ಮತ್ತೆಲ್ಲೂ ನೋಡಲಾರೆವು. ಇಲ್ಲಿ ನಟರೆಂದರೆ ದೇವದೂತರು. ಮನೆ ಮಕ್ಕಳು. ದಕ್ಷಿಣ ಭಾರತದಲ್ಲಿ ಹಲವಾರು ನಟರು ರಾಜಕಾರಣ ಸೇರಿ ಯಶ ಪಡೆದಿದ್ದು, ಮುಖ್ಯಮಂತ್ರಿ ಗಾದಿಗೇರಿ ಆಡಳಿತ ನಡೆಸಿದ್ದೆಲ್ಲ ಈಗ ಹಳೆ ಸುದ್ದಿ. ಉತ್ತರದಲ್ಲಿಯೂ ಕೆಲವು ನಟರು ಸಕ್ರಿಯ ರಾಜಕಾರಣದಲ್ಲಿದ್ದಾರೆ. ಅವರು ಕಾಲಿಟ್ಟಲ್ಲೆಲ್ಲ ಜನ ಸಾಗರವೇ ಅವರೊಂದಿಗೆ ಹರಿಯುತ್ತ ಇರುತ್ತದೆ. ಉತ್ತರಕ್ಕಿಂತ ದಕ್ಷಿಣದಲ್ಲಿ ಇದು ಹೆಚ್ಚು.
ಭಾರತೀಯರ ಈ ವ್ಯಾಮೋಹಕ್ಕೆ ಕಾರಣವಿಲ್ಲದಿಲ್ಲ. ಹೇಳಿಕೇಳಿ ಇದು ಸಂಪ್ರದಾಯವಾದಿ ರಾಷ್ಟ್ರ. ಪ್ರೀತಿ, ಪ್ರೇಮ, ಪ್ರಣಯಗಳಿಗೆ ಇರುವ ಕಟ್ಟುಪಾಡುಗಳು, ವಿಪರೀತ ಎನ್ನಿಸುವ ನೈತಿಕ ಚೌಕಟ್ಟುಗಳು, ಆ ಎಲ್ಲವನ್ನೂ ಸಾಧ್ಯ ಮಾಡಿಕೊಳ್ಳುವ ಮಿಥ್ಯಾ ಜಗತ್ತು ಮತ್ತದರ ಪಾತ್ರಧಾರಿಗಳ ಮೂಲಕ ತಮ್ಮನ್ನು ತಾವು ನೋಡಿಕೊಳ್ಳುವಂತೆ ಮಾಡುತ್ತವೆ. ಕೇವಲ ನಟನೆ ಅಥವಾ ಸೌಂದರ್ಯಗಳೇ ಇಲ್ಲಿ ಮೆಚ್ಚುಗೆಗೆ ಮಾನದಂಡವಿರಲಾರವು. ಈ ಪರಿಯ ವ್ಯಾಮೋಹ, ಸ್ವಂತದ ಒಂದು ಎಳೆ ಬೆಸುಗೆ ಇಲ್ಲದೆ ಮೂಡುವಂಥದಲ್ಲ. ಈ ಭಾವುಕ ಕಾರಣವನ್ನು ರಾಜಕೀಯ ಪಕ್ಷಗಳು ಚೆನ್ನಾಗಿಯೇ ಬಳಸಿಕೊಳ್ತಿವೆ.
ಅದೇನೇ ಇರಲಿ, ಚುನಾವಣೆಯಿಂದಲಾದರೂ ನಮ್ಮ ಜನರು ಆಗಸದ ತಾರೆಗಳನ್ನು ಕೈಯೆಟುಕಿನ ದೂರದಲ್ಲಿ ಕಾಣುವ ಭಾಗ್ಯ ಪಡೆದಂತಾಗಿದೆ. ಹಾಗೆ ಕೈಗೆ ಎಟುಕಿಸಿಕೊಳ್ಳಲು ಹೋಗಿ ಪೆಟ್ಟು ತಿಂದವರೂ ಇದ್ದಾರೆ. ಒಟ್ಟಾರೆ ಫಲಿತಾಂಶ ಏನಾಗುತ್ತೋ….. ಈ ಸಾರ್ತಿ ಜನ ಸಾಮಾನ್ಯರು ಹೆಚ್ಚು ಕುತೂಹಲದಿಂದ ಇರುವಂತೆ ಅನ್ನಿಸ್ತಿದೆ. ಕ್ರಿಕೆಟ್‌ ವಿಶ್ವಕಪ್‌ನಲ್ಲಿ ಭಾರತ – ಪಾಕಿಸ್ತಾನ ಫೈನಲ್‌ ಮ್ಯಾಚ್‌ ನಡೆಯುವಾಗ ಇರುವಂಥದ್ದೇ ಸಮೂಹ ಸನ್ನಿಯಂಥ ಕುತೂಹಲ, ನಿರೀಕ್ಷೆ, ಉದ್ವೇಗಗಳು ಮೊದಲ ಬಾರಿಗೆ ಕ್ರಿಕೆಟೇತರ ಸಂಗತಿಯಲ್ಲಿ ಕಾಣಿಸ್ಕೊಳ್ತಿದೆಯೆಂದರೆ, ಬಹುಶಃ ಅದು ಈ ಚುನಾವಣೆಯಲ್ಲಿಯೇ!
*
“ಯಾರು ಬಂದರೆ ನಮಗೇನು? ನಮ್ಮ ಹಣೆಬರಹ ಇಷ್ಟೇ ತಾನೆ?” ಅನ್ನುವ ಉಡಾಫೆ ಈ ಸಲದ ಚುನಾವಣೆಗೆ ಅನ್ವಯವಲ್ಲ. ಸರಿಯಾದ ಆಯ್ಕೆ ನಡೆಯದೇ ಹೋದರೆ, ನಮ್ಮ ದೇಶ ‘ಭಾರತ ಮತ್ತು ಇಂಡಿಯಾ’ ಎಂಬೆರಡು ಭಾಗಗಳಲ್ಲಿ ಮತ್ತೊಮ್ಮೆ ವಿಭಜನೆಯಾಗುವ ಆತಂಕ ಎದ್ದು ಕಾಣುತ್ತಿದೆ…..

 

ಒಂದು ಸಿನೆಮಾ ಕಥೆ ~ ಜುಕ್ತಿ ಟಕೋ ಆರ್‌ ಗಪ್ಪೋ…

ಋತ್ವಿಕ್ ಘಟಕ್ ಭಾರತೀಯ ಚಿತ್ರರಂಗ ಕಂಡ ಒಬ್ಬ ಅತ್ಯುತ್ತಮ ನಿರ್ದೇಶಕ.  ಭಾರತೀಯ ಸಿನಿಮಾ ಮಾದರಿಯನ್ನು ಬೆಳೆಸಿದವ. ಅಂದರೆ ನಮ್ಮದೇ ನೀರು…ನಮ್ಮದೇ ನೆಲ…ನಮ್ಮದೇ ಬೀಜ…ಹಾಗೂ ನಮ್ಮ ಅಂಗಳದಲ್ಲೇ ಅರಳಿದ ಮಲ್ಲಿಗೆ. ಅವರ ಜೀವನ ಚರಿತ್ರೆಯೂ ಎನ್ನಬಹುದಾದ  “ಜುಕ್ತಿ ಟಕೋ ಆರ್ ಗಪ್ಪೋ’ ಸಿನೆಮಾದ ಕಥೆ ಇಲ್ಲಿದೆ…. ~ ಋತಾ

ಜುಕ್ತಿ, ಟಕೋ ಆರ್ ಗಪ್ಪೋ. ಅಂದರೆ- ಕಾರಣ, ವಾದ, ಮತ್ತು ಕಥೆ. ಈ ಶೀರ್ಷಿಕೆ, ಈ ಸಿನೆಮಾವನ್ನು ನೋಡಬಹುದಾದ ಆಯಾಮಗಳನ್ನು ಸೂಚ್ಯವಾಗಿ ತಿಳಿಸುತ್ತದೆ.
‘…. ಆರ್ ಗಪ್ಪೋ’ ಬಂಗಾಳದ ಇಂಟಲೆಕ್ಚುಯಲ್ ನಿರ್ದೇಶಕ ಋತ್ವಿಕ್ ಘಟಕ್ ಅವರ ಕೊನೆಯ ಪ್ರಸ್ತುತಿ. ಆಂಶಿಕವಾಗಿ ಅವರ ಬಯಾಗ್ರಫಿ ಕೂಡಾ.
~
ಬಂಗಾಳ ವಿಭಜನೆಯ ನೋವನ್ನು ಎದೆಯಲ್ಲಿ ಹೊತ್ತ, ಕುಡಿತದ ಚಟಕ್ಕೆ ದಾಸನಾಗಿ ತನ್ನನ್ನು ತಾನೇ ನಾಶ ಮಾಡಿಕೊಳ್ಳುವ ನೀಲಕಂಠ ಒಂದು ಕಾಲದ ಚಿಂತಕ ಹಾಗೂ ಬುದ್ಧಿಜೀವಿ. ಅವನ ಅಲೆಮಾರಿತನ ಮತ್ತು ಚಟಗಳಿಂದ ಬೇಸತ್ತ ಪತ್ನಿ ದುರ್ಗಾ ಮನೆ ಖಾಲಿ ಮಾಡಿ, ತನ್ನ ಮಗನನ್ನು ಕರೆದುಕೊಂಡು ಊರು ಬಿಟ್ಟು ಹೊರಡುವ ದೃಶ್ಯದೊಂದಿಗೆ ಸಿನೆಮಾ ಶುರುವಾಗುತ್ತದೆ.
ನೀಲಕಂಠನ ಪಾಲಿಗೆ ಕುಡಿತ ಚಟವಲ್ಲ. ಅದು ಅವನ ಜೀವನವೇ ಎನ್ನುವಷ್ಟು ಅನಿವಾರ್ಯ. ಅವನ ದೇಖರೇಖಿಗೆ ಆತನ ಶಿಷ್ಯ, ನಿರುದ್ಯೋಗಿ ನಚಿಕೇತ ಜೊತೆನಿಲ್ಲುತ್ತಾನೆ. ಅವರು ಆ ಖಾಲಿ ಮನೆಯನ್ನು ಬಿಟ್ಟು ಹೊರಡುವ ಮುನ್ನ ಅಲ್ಲಿಗೊಬ್ಬಳು ಯುವತಿಯ ಪ್ರವೇಶವಾಗುತ್ತದೆ. ಬಾಂಗ್ಲಾ ದೇಶದ ಉದಯದೊಂದಿಗೆ ನಿರಾಶ್ರಿತಳಾಗುವ ಹುಡುಗಿ ಬಂಗಬಾಲಾ ನೀಲಕಂಠನಲ್ಲಿ ಆಶ್ರಯ ಬೇಡುತ್ತಾಳೆ. ನೆಲೆ ಕಳೆದುಕೊಂಡ ನೀಲಕಂಠ ಆಕೆಯ ರಕ್ಷಣೆಯ ಭಾರ ಹೊರುತ್ತಾನೆ!

ಅದಾಗಲೇ ಮಾರಾಟವಾಗಿರುವ ಮನೆ ತೊರೆದು ಹೊರಡುವ ಮೂವರು ಗಲ್ಲಿ ಗಲ್ಲಿಗಳಲ್ಲಿ ಅಲೆಯುತ್ತ ದಿನ ದೂಡುತ್ತಾರೆ. ಇದೇ ಸಂದರ್ಭದಲ್ಲಿ ಸಂಸ್ಕೃತ ಪಂಡಿತ ಜಗನ್ನಾಥನ ಪರಿಚಯವಾಗುತ್ತದೆ. ಈತ ಕೂಡ ನೆಲೆ ಇಲ್ಲದ ಮತ್ತೊಬ್ಬ ನಿರಾಶ್ರಿತ. ಈ ನಾಲ್ಕು ಜನರ ತಂಡ ಕಲ್ಕತ್ತೆ ತೊರೆದು ಹೊರಡುತ್ತದೆ. ತನ್ನ ಪತ್ನಿಯ ಮನೆರುವ ಕಾಂಚನಪುರಕ್ಕೆ ನೀಲಕಂಠ ಅವರೆಲ್ಲರನ್ನೂ ಕರೆದುಕೊಂಡು ಹೊರಡುತ್ತಾನೆ.
ಅವರ ಈ ಪ್ರಯಾಣ ಒಂದು ಅದ್ಭುತ ಅನುಭವ. ನೀಲಕಂಠನ ಬಯಕೆಯ ಬಾಂಗ್ಲಾ ಅವರು ಸಾಗುವ ಹಳ್ಳಿಗಳಲ್ಲಿ ಅನಾವರಣಗೊಳ್ಳುತ್ತ ಹೋಗುವಂತೆ ತೋರುತ್ತದೆ. ಹೀಗೇ ಅವರು ಹಳ್ಳಿಯೊಂದರ ಮನೆಯಲ್ಲಿ ಆಶ್ರಯ ಕೋರುತ್ತಾರೆ. ಅದು, ಛೌ ನೃತ್ಯಕ್ಕೆ ಮುಖವಾಡಗಳನ್ನು ತಯಾರಿಸುವ ಪಂಚಾನನ ಉಸ್ತಾದನ ಮನೆ. ಆತನ ಮನೆಯಲ್ಲಿ ತಂಗಿದ್ದು, ದುರ್ಗೆ ದುಷ್ಟರನ್ನು ಸಂಹರಿಸುವ ನೃತ್ಯವನ್ನು ನೋಡಿಕೊಂಡು ಮುಂದೆ ಹೊರಡುತ್ತಾರೆ. ಅಲ್ಪ ಕಾಲದ ಅವರ ನಡು”ನ ಬಾಂಧವ್ಯ ಅಗಲಿಕೆಯ ಸಂದರ್ಭದಲ್ಲಿ ತನ್ನ ಗಾಢತೆಯನ್ನು ತೋರಿಸಿಕೊಡುತ್ತದೆ. ತಮ್ಮ ನೆಲವನ್ನು, ತಮ್ಮ ಜನರನ್ನು ಕಳೆದುಕೊಂಡ ಅವರು, ಎರಡು ದಿನಗಳ ಬಂಧು ಉಸ್ತಾದನನ್ನು ಅಗಲುವಾಗ ಬಿಕ್ಕಿ ಬಿಕ್ಕಿ ದುಃಖಿಸುತ್ತಾರೆ. ನೃತ್ಯದ ದುರ್ಗೆಯ ಮುಖವಾಡ ಬಂಗಬಾಲಾಳಲ್ಲಿ ಆವೇಶ ಹುಟ್ಟುಹಾಕಿರುತ್ತದೆ.

ಮುಂದುವರೆದ ಪ್ರಯಾಣದಲ್ಲಿ, ಹಳ್ಳಿಯ ಮುಖಂಡನೊಬ್ಬನ ಬಂದೂಕಿಗೆ ಜಗನ್ನಾಥ ಅನಿರೀಕ್ಷಿತವಾಗಿ ಬಲಿಯಾಗುವ ಪ್ರಸಂಗ ಒದಗಿಬರುತ್ತದೆ. ಬಂಗಬಾಲಾಳ ಆವೇಶ ಅದಕ್ಕೆ ಕಾರಣವಾಗುವುದು ವಿಪರ್ಯಾಸ. ಸಹಪಯಣಿಗನ ಸಾವಿನಿಂದ ಪ್ರಯಾಣವೇನೂ ನಿಲ್ಲುವುದಿಲ್ಲ. ಕೊನೆಗೂ ಉಳಿದ ಮೂವರು ಕಾಂಚನ ಪುರವನ್ನು ಬಂದು ತಲಪುತ್ತಾರೆ.

ಪತ್ನಿಯನ್ನು ಅರಸಿ ಬರುವ ನೀಲಕಂಠನ ಗಮ್ಯ ಅದಲ್ಲ. ಜೊತೆಗೆ ದುರ್ಗಾ ಕೂಡ ಅವನಿಗೆ ಮರಳಿ ಹೋಗುವಂತೆ ತಾಕೀತು ಮಾಡುತ್ತಾಳೆ. ನೀಲಕಂಠ ಅಲ್ಲಿಂದ ಹೊರಡುವ ಮುನ್ನ, ಮರುದಿನ ಮುಂಜಾನೆ ಮಗನನ್ನು ಸಮೀಪದ ಕಾಡಿಗೆ ಕರೆತರುವಂತೆ ಕೇಳಿಕೊಳ್ಳುತ್ತಾನೆ. ಮೊದಲ ಸೂರ್ಯ ರಶ್ಮಿಯೊಂದಿಗೆ ಮಗನ ಮುಖ ನೋಡಬೇಕೆನ್ನುವ ಬಯಕೆ ಅವನದು. ಕಾಡಿಗೆ ತೆರಳುವ ನೀಲಕಂಠನ ತಂಡಕ್ಕೆ ನಕ್ಸಲೀಯರ ಗುಂಪು ಎದುರಾಗುತ್ತದೆ. ಆತ ಅವರೊಂದಿಗೆ ಸಮಸ್ಯೆಗಳ ಕುರಿತು ಸುದೀರ್ಘವಾಗಿ ಮಾತನಾಡುತ್ತಾನೆ. ಇರುಳು ಕಳೆಯುತ್ತದೆ.-

ಮರುದಿನ ಮುಂಜಾನೆ ದುರ್ಗಾ ಮಗನನ್ನು ಕರೆದುಕೊಂಡು ಕಾಡಿಗೆ ಬರುತ್ತಾಳೆ. ಅದೇ ವೇಳೆಗೆ ಪೋಲಿಸರು ಮುತ್ತಿಗೆ ಹಾಕಿ ನಕ್ಸಲೀಯರ ಮೇಲೆ ದಾಳಿ ನಡೆಸುತ್ತಾರೆ. ಗುಂಡಿನ ಚಕಮಕಿಯ ಸದ್ದಡಗುತ್ತಿದ್ದಂತೆ ನೀಲಕಂಠ ಎದ್ದುನಿಲ್ಲುತ್ತಾನೆ, ಪೋಲಿಸನೊಬ್ಬನ ಪಿಸ್ತೂಲಿಗೆ ಬಲಿಯಾಗುತ್ತಾನೆ.
~
ಈ ಚಿತ್ರದುದ್ದಕ್ಕೂ ನೀಲಕಂಠನ ನೆಲದ ಹಂಬಲ, ಸೋಲು, ಹತಾಶೆಗಳು ಸೂಕ್ಷ್ಮವಾಗಿ ಅನಾವರಣಗೊಳ್ಳುತ್ತ ಸಾಗಿದೆ. ಇದು, ಬೇರ್ಪಡಿಕೆಯ ನೋವು. ಚಿತ್ರದ ಆರಂಭದಲ್ಲಿ ಪತಿ ಪತ್ನಿಯ ಬೇರ್ಪಡಿಕೆಯ ದೃಶ್ಯವಿದ್ದರೂ ನೀಲಕಂಠನಲ್ಲಿ ನೆಲದಿಂದ ಬೇರ್ಪಟ್ಟ ದುಃಖವನ್ನೇ ನಾವು ಮುಖ್ಯವಾಗಿ ಕಾಣುತ್ತೇವೆ. ಬಾಂಗ್ಲಾದ ಒಗ್ಗೂಡುವಿಕೆಯ ಕನಸು ಕಾಣುವ ನೀಲಕಂಠ ತನ್ನ ಪತ್ನಿಯೊಂದಿಗೆ ಒಗ್ಗೂಡಲು ಸಾಧ್ಯವಾಗದೆ ಹೋಗುವುದೊಂದು ವಿಡಂಬನೆ. ತನ್ನ ಅಸ್ತಿತ್ವ ನಾಶದ ಕಾರಣದಿಂದಾಗಿ ಉಂಟಾದ ಚಡಪಡಿಕೆಂದಲೇ ಆತನ ಅಸ್ತಿತ್ವ ಕುಡಿತದಲ್ಲಿ ಕರಗುತ್ತ ಹೋಗುತ್ತದೆ. ಆದರೆ ಆತ, ಜೀವನಕ್ಕಾಗಿ ತಾನಲ್ಲದ ಮತ್ತೊಂದು ಪಾತ್ರವನ್ನು ಅಭಿನುಸಲು ತಯಾರಿಲ್ಲದ ಪ್ರಾಮಾಣಿಕ. ಇದು, ಆತ ಶತ್ರುಜಿತ್ ಎನ್ನುವ ಮತ್ತೊಬ್ಬ ಮಾಜಿ ಚಿಂತಕನೊಂದಿಗೆ ನಡೆಸುವ ಸಂಭಾಷಣೆಯಲ್ಲಿ ನಿರೂಪಿತವಾಗಿದೆ.
ಈ ಸಿನೆಮಾ ನೆಲೆ ಕಳೆದುಕೊಂಡವರ ಹುಡುಕಾಟವನ್ನು ಬಿಂಬಿಸುತ್ತದೆ. ಇಲ್ಲಿ ನೀಲಕಂಠ ಎರಡೂ ಬಗೆಯಲ್ಲಿ ನೆಲೆ ಕಳೆದುಕೊಂಡವನಾಗಿದ್ದಾನೆ. ಅವನ ಪ್ರಯಾಣ ಬಾಹ್ಯ ನೆಲೆಯನ್ನು ಹುಡುಕುವುದಕ್ಕಾದರೆ, ಕುಡಿತದ ಮೈಮರೆವು ಒಳಗಿನ ಹುಡುಕಾಟದ ಪ್ರಕ್ರಿಯೆಯಂತೆ ತೋರುತ್ತದೆ.
ಅವನ ನಿರುದ್ಯೋಗಿ ಮತ್ತು ನಿರಾಶ್ರಿತ ಸಾಥಿಗಳು ಅವನ ಅಲೆಮಾರಿತನದ ಅನಾಥಪ್ರಜ್ಞೆಯನ್ನು ಕೊಂಚ ಮಟ್ಟಿಗೆ ಕಡಿಮೆ ಮಾಡುತ್ತಾರೆ. ಕಾಡಿನಲ್ಲಿ ಅವಿತು ನೆಲಕ್ಕಾಗಿ ಹೋರಾಡುವ ನಕ್ಸಲರನ್ನು ಆತ ಭೇಟಿಯಾಗುವುದು ಕೂಡ ಒಂದು ಸಂಕೇತವೇ.

ಜುಕ್ತಿ, ಟಕೋ ಆರ್ ಗಪ್ಪೋ… ಕಾರಣ, ವಾದ ಮತ್ತು ಕಥೆ; ಇದು ತರ್ಕವನ್ನು ಮೀರಿದ ಸಿನೆಮಾ. ಪ್ರತಿ ಬಾರಿ ನೋಡಿದಾಗಲೂ ಭಿನ್ನ ಅನುಭವಗಳನ್ನು ಕಟ್ಟಿಕೊಡುತ್ತ, ನಮ್ಮನ್ನೂ ತನ್ನಲ್ಲಿ ಒಳಗೊಳ್ಳುತ್ತ ಸಾಗುತ್ತದೆ. ಸಿನೆಮಾದ ಕಥೆಯ ಸಂದರ್ಭ ನಾಲ್ಕು ದಶಕ ಹಿಂದಿನದಾದರೂ ಅದರ ಭಾವ ಸದಾ ಕಾಲಕ್ಕೂ ಸಲ್ಲುತ್ತದೆ.
~ ~

ಭಾಷೆ: ಬಂಗಾಳಿ
ಇಸವಿ : ೧೯೭೪
ನಿರ್ದೇಶನ: ಋತ್ವಿಕ್ ಘಟಕ್
ಮುಖ್ಯ ತಾರಾಗಣ: ನೀಲ ಕಂಠ- ಋತ್ವಿಕ್ ಘಟಕ್
ನಚಿಕೇತ- ಸೌಗತ ಬರ್ಮನ್
ಬಂಗ ಬಾಲಾ- ಸಾಂವ್ಲಿ ಮಿತ್ರ
ದುರ್ಗಾ- ತೃಪ್ತಿ ಮಿತ್ರ
ಸತ್ಯ- ಋತಬನ್ ಘಟಕ್

ಶಿಶಿರ ನನ್ನ ಹೆಸರು…

ಹೊಸ ವರ್ಷದ ಶುಭಾಶಯಗಳು ಎಲ್ಲರಿಗೂ. ಹೆಚ್ಚು ಮಾತಿಲ್ಲದೆ, ಒಂದು ಚೆಂದದ ಕವಿತೆಯೊಂದಿಗೆ ‘ಹೊಸತಲೆಮಾರು’ ಹೊಸ ವರ್ಷವನ್ನು ಬರಮಾಡಿಕೊಳ್ಳುತ್ತದೆ. ಕವಿ ಚಂದ್ರು ತುರವೀಹಾಳರಿಗೆ ಆಭಾರಿ.

 

:sOgemane:

ಗುರುತು

ಮಾಗಿ ತನ್ನ ಹೃದಯದಲ್ಲಿ ವಸಂತವಿದೆ ಎಂದರೆ
ಯಾರು ತಾನೆ ಅದನ್ನು ನಂಬಲು ಸಾಧ್ಯ?
  -ಖಲೀಲ್ ಗಿಬ್ರಾನ್

ಒಂದು ವಸಂತದಿಂದ  ಮತ್ತೊಂದು ವಸಂತದೆಡೆಗೆ
ನೀ ನಡೆದು ಹೋಗಲು ಕಣ್ಣೆಲೆಗಳ ಉದುರಿಸಿದ
ಒಂದು ಋತು ನಾನು, ಶಿಶಿರ ನನ್ನ ಹೆಸರು

ಕಪ್ಪು ಕಲೆಗಳಿವೆ ಎಂದು ದೂರಿದರೂ ಚಂದ್ರನ
ಲಕ್ಷ ನಕ್ಷತ್ರಗಳ ನಡುವೆ  ನಗುತ್ತ ಸಾಗಿ
ತನ್ನ ತೋರಿ ತಾಯಂದಿರುಣಿಸುವ ಅನ್ನವನೆಂದೂ ವಿಷವಾಗಿಸಲಿಲ್ಲ

ನೀ ನೀಡಿದ ಪೆಟ್ಟು ಪಕ್ಕಡೆಯೊಳಗೆ ಹೊತ್ತು
ಮುಗಿಲಿಗೆ ಕಣ್ಣಿಟ್ಟು ನಾ ಮಳೆಗರೆದೆನೆ ಹೊರತು
ನೆಲದೊಳಗೆ ನೋವಿಟ್ಟು ಕೀವು ತುಂಬಲಿಲ್ಲ

ಹಸಿರು ಅಮಲನು ಕಂಡು ಹಾಡುವ
ನಿನ್ನ ಕಣ್ಣ ಕೋಗಿಲೆಗೆ ನಾ ಮಾಗಿಯ ಚೆಲುವ ತೋರಲೆಂತು?

ಅವನು- ಇವನೆನ್ನುವ
ನಿನ್ನ ಬದುಕಿನ  ವಸಂತನಗಳ ನಡುವೆ
ಬಂದು ಹೋದ ಒಂದು ಶಿಶಿರ ನಾನು
ಬಯಲೆಂಬುದು ನನ್ನ ಗುರುತು.

-ತುರುವೀಹಾಳ ಚಂದ್ರು

ಚೈತ್ರೋದಯ… ಜಿಎಸ್‌ಎಸ್‌ ಕಾವ್ಯೋತ್ಸವ

ಕಾವ್ಯಾಸಕ್ತ ಸಮಾನ ಮನಸ್ಕರ ‘ರಸಿಕಾ ಕೇಳೋ’ ತಂಡ ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಸಮ್ಮುಖದಲ್ಲಿ ಕಾವ್ಯದ ಹಣತೆ ಹಚ್ಚುವ ‘ಚೈತ್ರೋದಯ’ ಕಾವ್ಯ ಹಬ್ಬವನ್ನು ಆಯೋಜಿಸಿದೆ. ಡಿಸೆಂಬರ್ ೨೭ರ ಭಾನುವಾರ ಬೆಳಗ್ಗೆ ೧೦ಕ್ಕೆ ಕಾರ್ಯಕ್ರಮ ಆರಂಭಗೊಳ್ಳಲಿದೆ. ಸ್ಥಳ: ರವೀಂದ್ರ ಕಲಾಕ್ಷೇತ್ರ.

ಈ ಕಾರ್ಯಕ್ರಮದಲ್ಲಿ ಕಾವ್ಯದ ಹಣತೆ ಹಚ್ಚುವರು:
ಚನ್ನವೀರ ಕಣವಿ, ಚಂದ್ರಶೇಖರ ಕಂಬಾರ, ಪಂ.ಪರಮೇಶ್ವರ ಹೆಗಡೆ, ಸಿ.ಆರ್.ಸಿಂಹ, ಕೆ.ಎನ್.ಶಾಂತಕುಮಾರ್, ಅಜಯ್ ಕುಮಾರ್ ಸಿಂಗ್, ಉಮಾಶ್ರೀ, ಎಚ್.ಎಸ್.ವೆಂಕಟೇಶ ಮೂರ್ತಿ, ಸುರೇಶ್ ಕುಮಾರ್, ಸಿದ್ಧಲಿಂಗಯ್ಯ, ಬಿ.ಟಿ.ಲಲಿತಾ ನಾಯಕ್, ವಿಶ್ವೇಶ್ವರ ಭಟ್, ಡಾ.ಭುಜಂಗ ಶೆಟ್ಟಿ, ಚಿರಂಜೀವಿ ಸಿಂಗ್, ಟಿ.ಎನ್.ಸೀತಾರಾಂ, ರವಿ ಬೆಳಗೆರೆ, ಜಯಮಾಲಾ, ಕೆ.ಶಿವಸುಬ್ರಹ್ಮಣ್ಯ, ಐ.ಎಂ.ವಿಟ್ಠಲಮೂರ್ತಿ, ಬಿ.ಜಯಶ್ರೀ, ಎಸ್.ದಿವಾಕರ್, ಮಂಡ್ಯ ರಮೇಶ್, ಎಸ್.ಷಡಕ್ಷರಿ, ಶ್ರೀನಿವಾಸ್ ಜಿ.ಕಪ್ಪಣ್ಣ, ಆಂಜನೇಯ, ಜೋಗಿ, ಮನು ಬಳಿಗಾರ್, ಎಸ್.ಆರ್.ರಾಮಕೃಷ್ಣ, ಸುಮಾ ಸುಧೀಂದ್ರ, ಜಹಾಂಗೀರ್, ಮತ್ತು ಯತಿ ಸಿದ್ಧನಕಟ್ಟೆ.

ಬರಹಲೋಕದಲ್ಲಿ ತಮ್ಮನ್ನು ಉತ್ಸಾಹದಿಂದ ತೊಡಗಿಸಿಕೊಂಡಿರುವವರು, ಸಾಹಿತ್ಯಾಸಕ್ತರು (ಅವರು ಯಾರೆಲ್ಲ ಎಂದು ಕೇಳಲಾಗಿ, ಕೇಳಿಸಿಕೊಂಡವರು (ನಾಚಿ) ನಗುತ್ತ ‘ನಾವೇ ಒಂದಿಷ್ಟು ಸಮಾನಾಸಕ್ತ ಗೆಳೆಯರು ’ ಎನ್ನಲಾಗಿ…) ರಸಿಕಾ ಕೇಳೋ ತಂಡದಲ್ಲಿದ್ದಾರೆ. ಈ ತಂಡದ ಹೆಚ್ಚುಗಾರಿಕೆಯು, ಕಾರ್ಯಕ್ರಮಕ್ಕೆ ಕಾವ್ಯ ಹಣತೆ ಹಚ್ಚಲು ಆಹ್ವಾನಿಸಿರುವ ವ್ಯಕ್ತಿಗಳ ಆಯ್ಕೆಯಿಂದಲೇ ತಿಳಿದುಹೋಗುತ್ತದೆ. ಸಾಹಿತ್ಯ, ಪತ್ರಿಕೋದ್ಯಮ, ಉದ್ಯಮ, ಸಿನೆಮಾ, ಆಡಳಿತ, ರಾಜಕೀಯ ಹಾಗೂ ರಂಗಭೂಮಿಯ ಸಾಹಿತ್ಯಾಸಕ್ತರನ್ನು ಅದಕ್ಕಾಗಿ ಕಲೆಹಾಕಿರುವುದು ಅಭಿನಂದನಾರ್ಹ ಹಾಗೂ ಅನುಕರಿಸತಕ್ಕಂಥ ಮಾದರಿ.

ಇಂತಹ ಆಲೋಚನೆಗಳು ಮತ್ತಷ್ಟು ವ್ಯಾಪಕವಾಗಲಿ ಹಾಗೂ ಒಳ್ಳೆಯ ಸಾಹಿತ್ಯಕ ಸಂವಾದಕ್ಕೆ ಹಸಿದಿರುವ ಹೊಸತಲೆಮಾರಿಗೆ ರಸದೌತಣ ಸಿಗಲಿ ಎಂಬುದು ನಮ್ಮ ಬಳಗದ ಹಾರೈಕೆ.

ಕುರಿ ಕಾಯೊ ರಂಗನ ಕತೆ~ 1

ಟಿ.ಎಸ್.ಗೊರವರ ಹೊಸತಲೆಮಾರಿನ ಭರವಸೆಯ ಕಥೆಗಾರರಲ್ಲಿ ಒಬ್ಬರು. ಇವರದು ಬಹುತೇಕ ಗ್ರಾಮ ಕೇಂದ್ರಿತ ಕಥಾವಸ್ತು. ಅನುಭವದಿಂದ ಗಟ್ಟಿಗೊಂಡ ಇವರ ಕಥೆಗಳಲ್ಲಿಯೂ ಆ ದಟ್ಟತೆಯನ್ನು ಕಾಣಬಹುದು. ಇವರು ಕಟ್ಟಿಕೊಡುವ ವಿವರಗಳಲ್ಲಿ ನಮಗೆ ಪರಿಚಯವಿಲ್ಲದೊಂದು ಜೀವನಕ್ರಮದ ಕಲ್ಪನೆ ತಕ್ಕಮಟ್ಟಿಗೆ ಸಾಧ್ಯವಾಗುವುದು ನಿಜ. ಹೀಗೇಕೆ ಹೇಳುತ್ತೇನೆಂದರೆ, ನಾವು ನಮ್ಮ ಅಜ್ಞಾನವನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುವುದಾದರೆ, ಕಂಫರ್ಟ್ ಜೋನಿನಲ್ಲೇ ಇರುವ ನಮ್ಮ ಬಹುತೇಕರಿಗೆ ಖಂಡಿತ ಊರಾಚೆಗಿನ, ನಮ್ಮ ಸೀಮೆಯಾಚೆಗಿನ ಜನರ ಬಗ್ಗೆ ತಿಳಿಯುವ ವ್ಯವಧಾನವಾಗಲೀ ಕುತೂಹಲವಾಗಲೀ ಇಲ್ಲ. ಹಾಗೆ ಎಲ್ಲರಿಗೂ ಎಲ್ಲವೂ ಗೊತ್ತಿರಲೇಬೇಕೆಂಬ ನಿಯಮವೇನೂ ಇಲ್ಲವಾದ್ರಿಂದ ತಪ್ಪೇನೂ ಇಲ್ಲ ಸರಿ, ಆದರೂ ಬರೀ ಓದಿನ ಸುಖದಾಚೆಗೂ ಸಾಹಿತ್ಯ ಚಾಚಿಕೊಳ್ಳಬೇಕೆಂದರೆ ನಮ್ಮ ವ್ಯಾಪ್ತಿ ವಿಸ್ತರಣೆ ಅಗತ್ಯವಾಗುತ್ತದೆ. ಕನ್ನಡದ್ದೇ ಬೇರೆ ಬೇರೆ ಬಗೆಗಳನ್ನು ಅರಿಯುವ, ನಮ್ಮಾಚೆಗಿನ ವ್ಯವಹಾರಗಳನ್ನೂ ತಿಳಿಯುವ ಇಂತಹ ಪ್ರಯತ್ನ ಒಳ್ಳೆಯ ಕಥೆಯ ಮೂಲಕ ನೆರವೇರುವುದಾದರೆ ಅದಕ್ಕಿಂತ ಒಳ್ಳೆಯದು ಮತ್ತೇನಿದ್ದೀತು!?

ಭಾಗ- ೧

ಕಾರಬಾರಿ ಮಲ್ಲಪ್ಪನ ಎರಿ ಹೊಲದಾಗ ಹಾಕಿದ್ದ ಕುರಿಗಾರ ಭೀಮಪ್ಪನ ಕುರಿ ಹಟ್ಟಿಯ ಸುತ್ತ ಕತ್ತಲು ಗಸ್ತು ಹೊರಟಿತ್ತು.

 ಜರಿಯಾಗಿ ಸುರಿಯತೊಡಗಿದ್ದ ಕತ್ತಲೊಳಗೆ ಧ್ಯಾನಸ್ಥವಾಗಿ ಗಾಳಿ ಮೆಲ್ಲಗೆ ತನ್ನ ಸೆರಗು ಬೀಸತೊಡಗಿತ್ತು. ಆಗೊಂದು ಈಗೊಂದು ಮಿಂಚು, ಗುಡುಗು ಕಣ್ಣಗಲಿಸಿ ಕುರಿ ಹಟ್ಟಿಯ ನೋಡಿ ಕಣ್ತುಂಬಿಕೊಂಡು ಮಾಯವಾಗುತ್ತಿದ್ದವು. ಹಟ್ಟಿಯೊಳಗೆ ಕುರಿಗಳು ಮೆಲಕು ಹಾಕುತ್ತಾ ಅದೇನನ್ನೊ ಧ್ಯಾನಿಸುತ್ತಾ ಮಲಗಿದ್ದವು. ಹಟ್ಟಿಯೂ ಆ ಧ್ಯಾನದೊಳಗೆ ಮಗ್ನವಾದಂತೆ ತೋರತೊಡಗಿತ್ತು.

ಕ್ಷಣ ಹೊತ್ತು ಕಳೆದಿರಬಹುದು. ಬೆದೆ ಬಂದ ಕುರಿಯನ್ನು ಟಗರು ಬೆನ್ನು ಹತ್ತಿ ಹಟ್ಟಿಯ ತುಂಬಾ ಅಲೈ ಬುಲೈ ಆಡಿಸತೊಡಗಿತ್ತು. ಹಟ್ಟಿಗೆ ಜೀವ ಬಂದಂಗಾತು. ಕತ್ತಲೊಳಗೆ ಕುರಿ ಚಹರೆ ಸರಿಯಾಗಿ ತೋರದಿದ್ದರೂ ಎದೆಯಾಗಿನ ವಿರಹದುರಿಗೆ ಗಾಳಿ ಬೀಸಿದಂಗಾಗಿ ಅದು ಮತ್ತಷ್ಟು ಹೊತ್ತಿಕೊಂಡು ತಡೆದುಕೊಳ್ಳದ ಟಗರು ಕುರಿಗೆ ತುಟಿಮುತ್ತು ಕೊಡಲು ಹವಣಿಸತೊಡಗಿತ್ತು. ಕುರಿಯ ದುಬ್ಬದ ಮ್ಯಾಲೆ ಟಗರು ಕಾಲು ಹಾಕಿದಂತೆಲ್ಲಾ ಕುರಿ ತಪ್ಪಿಸಿಕೊಳ್ಳುವುದು ನಡದೇ ಇತ್ತು. ಇವೆರಡರ ಅಪ್ಪ, ಅವ್ವನ ಆಟದಿಂದಾಗಿ ಆದೆಷ್ಟೋ ದಿನದಿಂದ ಮಾತು ಕಳೆದುಕೊಂಡವನಿಗೆ ಮತ್ತೆ ಮಾತು ಮರುಕಳಿಸಿದ ಗೆಲವು ಹಟ್ಟಿಯೊಳಗೆ ಮೂಡತೊಡಗಿತ್ತು.

ಹಟ್ಟಿಯ ಸುತ್ತ ಕಾವಲು ಕಾಯಲು ಅಲ್ಲೊಬ್ಬರು ಇಲ್ಲೊಬ್ಬರು ಕುರಿ ಕಾಯುವ ಆಳುಗಳು ಮಲಗಿ ಗೊರಕೆ ತೆಗೆದಿದ್ದರು. ಕುರಿಗಳ ಗದ್ದಲದ ಬ್ಯಾ ಎನ್ನುವ ದನಿ ಆಳು ರಂಗನ ಕಿವಿಗಪ್ಪಳಿಸಿ ಬೆಚ್ಚಿಬಿದ್ದ. ತ್ವಾಳ ಬಂದಿರಬಹುದೆಂದು ಮನದಲ್ಲಿ ಎಣಿಕೆ ಹಾಕಿದ. ಗಾಳಿ ಸಣ್ಣಗೆ ಸೆರಗು ಬೀಸತೊಡಗಿದ್ದರೂ ಕುದಿಗೊಂಡ. ಕುರಿ ಮಾಲಕನ ಮೈ ತುಂಬಾ ಬಾಸುಂಡೆ ಏಳುವಂತೆ ಹೊಡೆಯುವ ಹೊಡೆತ, ಸೊಂಟದ ಕೆಳಗಿನ ಅವಾಚ್ಯ ಬೈಯ್ಗಳ ನೆಪ್ಪಾಗಿ ಮೈಯೆಲ್ಲಾ ಬೆವತು ನಡುಗತೊಡಗಿದ. ರಂಗನ ಕಣ್ಣೊಳಗಿನ ನಿದ್ದೆ ಆಗಲೇ ಮಾರು ದೂರ ಓಟಕಿತ್ತಿತ್ತು. ಕಂದೀಲ ಬುಡ್ಡಿಯನ್ನು ತುಸು ಎತ್ತರಿಸಿ ಹಟ್ಟಿಯೊಳಗೆ ಬೆಳಕು ಮಾಡಿ ಇಣುಕಿ ನೋಡಿದ. ರಂಗನ ನಿರೀಕ್ಷೆ ಹುಸಿಗೊಂಡಿತ್ತು. ಅವನ ಮುಖದ ಮ್ಯಾಲೆ ಹೊನ್ನಂಬರಿ ಹೂವಿನಂತ ನಗೆ ಅರಳಿ ಲಾಸ್ಯವಾಡಿತು. ತ್ವಾಳ ಬಂದಿರಬಹುದೆಂದು ಭಾವಿಸಿ ಭಯಗೊಂಡು ನಿದ್ದೆ ಕೊಡವಿಕೊಂಡು ಎದ್ದ ರಂಗನಿಗೆ ಹೋದ ಜೀವ ಬಂದಂಗಾಗಿ ನಿರಾಳವೆನಿಸಿ ಮತ್ತೆ ಕೌದಿಯೊಳಗೆ ತೂರಿಕೊಂಡು ಮೈ ಚಾಚಿದ.

ಮಲಗಿರುವ ರಂಗನಿಗೆ ಇನ್ನೂ ನಿದ್ದೆಯ ಜೊಂಪು ಹತ್ತಿರಲಿಲ್ಲ. ಮಳೆ ಹನಿ ಹನಿಯಾಗಿ ಒಂದೇ ಸಮನೆ ಹುಯ್ಯತೊಡಗಿತ್ತು. ಬಯಲನ್ನೇ ಮನೆ ಮಾಡಿಕೊಂಡಿದ್ದ ಕುರಿ ಆಳುಗಳ ಎದೆಯೊಳಗೆ ಕ್ಷಣ ಹೊತ್ತು ಆತಂಕ ಹೆಡೆಯಾಡಿತು. ಇದ್ದೊಂದ್ದು ಹಾಳಿ ಚೀಲವನ್ನು ತಲೆಯ ಮ್ಯಾಲೆ ಹೊದ್ದುಕೊಂಡು, ಅದರೊಳಗೆ ಗುಡಿಸಿಕೊಂಡು ಕುಳಿತರು. ಈಗ ಮನಸ್ಸು ನೆಮ್ಮದಿಯ ಉಸಿರು ಬಿಡತೊಡಗಿತ್ತು. ಮಳೆ ಮಾತ್ರ ಇದ್ಯಾವುದರ ಪರಿವೇ ಇಲ್ಲದೆ ಹಾಳಿ ಚೀಲದ ಮ್ಯಾಲೆ ಮನಸ್ಸಿಗೆ ಬಂದಂತೆ ಹುಯ್ಯತೊಡಗಿತು. ಹಟ್ಟಿಯೊಳಗೆ ಕುರಿಗಳು ಗುಂಪುಗೂಡಿ ಒಂದರ ಬುಡಕ್ಕೊಂದು ತಲೆ ತೂರಿ ಮಳೆಗೆ ಮೈಯೊಡ್ಡಿ ನಿಂತಿದ್ದವು.

ತಾಸು ಹೊತ್ತು ಬಿಟ್ಟು ಬಿಡದೆ ಜಡಿದ ಮಳೆ ದಣಿವಾರಿಸಿಕೊಳ್ಳಲು ತನ್ನ ಗುಡಿಸಲ ಕಡೆ ಪಾದವ ಬೆಳೆಸಿತು. ಮಳೆ ವರಪುಗೊಂಡಿದ್ದೆ ತಡ, ಕುರಿ ಆಳುಗಳು ಖುಷಿಗೊಂಡವು. ಬೆಳಕು ಹರಿಯಲು ಇನ್ನೂ ವ್ಯಾಳೆ ಬಾಳ ಇದ್ದುದರಿಂದ ಅವರ ಹಣೆಯ ಮ್ಯಾಲೆ ಚಿಂತೆಯ ಗೆರೆಗಳು ಮೂಡಲು ಸ್ಪರ್ಧೆಗಿಳಿದವು. ಕಣ್ಣೊಳಗೆ ನಿದ್ದೆ ಸುಳಿದಿರುಗಿ ಮಲಗಲು ಮನಸು ಹಟ ಹಿಡಿಯಿತು. ಮಲಗಬೇಕೆಂದರೆ ಎರಿ ಹೊಲದ ಮಣ್ಣು ರಜ್ಜಾಗಿ ಕಿತಿ ಕಿತಿ ಅನ್ನತೊಡಗಿತ್ತು. ಬೆಳಕು ಹರಿಯುವ ತನಕ ಕುಕ್ಕರಗಾಲಲ್ಲಿ ಕುಳಿತು ಕಾಲ ಕಳೆಯುವುದನ್ನು ನೆಪ್ಪಿಸಿಕೊಂಡು ದಿಗಿಲುಗೊಂಡರು. ಮಳೆಯಿಂದಾಗಿ ಥಂಡಿ ಗಾಳಿ ಬೀಸಿ ಬಂದು ಮೈ ಸವರಿ ನಡುಗಿಸತೊಡಗಿತು. ತಲಾ ಒಂದೊಂದು ಚಪ್ಪಡಿ ಬೀಡಿ ಸೇದಿ ಎದೆ ಬೆಚ್ಚಗೆ ಮಾಡಿಕೊಂಡು ಕುಳಿತ ಭಂಗಿಯಲ್ಲಿ ತೂಕಡಿಸತೊಡಗಿದರು.ದೀಡು ತಾಸು ಕಳೆದಿರಬಹುದು. ರಂಗ ತಲೆಯ ಮ್ಯಾಲೆ ಹೊದ್ದುಕೊಂಡಿದ್ದ ಹಾಳಿ ಚೀಲ ತೆಗೆದು ಆಕಾಶ ದಿಟ್ಟಿಸಿದ. ಮೈ ತುಂಬಾ ದೀಪದ ಅಂಗಿ ತೊಟ್ಟು ಸಿಂಗಾರಗೊಂಡಿದ್ದ ಬೆಳ್ಳಿ ಚಿಕ್ಕಿ ಮೂಡತೊಡಗಿತ್ತು. ತನ್ನ ದಿನಚರಿ ನೆಪ್ಪಾಗಿ ನಿದ್ದೆ ಕೊಸರಿದ.

ಅವತ್ತು ರಂಗನದು ದಿನಪೂರ್ತಿ ಹಟ್ಟಯೊಳಗೆ ಉಳಿಯುವ ಮರಿಗಳಿಗೆ ತಪ್ಪಲು ತರುವ ಪಾಳಿ ಇತ್ತು. ಅಂವ ಕೋತ, ಕೊಡಲಿ ತಗೊಂಡು ತಪ್ಪಲು ತರಲು ಹೆಜ್ಜೆ ಬೆಳೆಸಿದ. ಗೌಡರ ಹೊಲದ ಹತ್ತಿರ ಬಂದಾಗ ಒಳಗೊಳಗೆ ದಿಗಿಲು ಮಿಸುಗಾಡತೊಡಗಿತು.”ಆಗ್ಲೆ ಬೆಳಕು ಹರಿಯಾಕತ್ತೈತಿ. ಇನ್ನೇನು ಗೌಡ್ರ ಹೊಲಕ್ಕ ಯಾರಾದ್ರೂ ಬಂದ್ರು ಬರಬಹುದು. ಅವ್ರು ಬರೋದ್ರೊಳ್ಗ ತಪ್ಪಲು ಕೊಯ್ಕೊಂಡು ಇಲ್ಲಿಂದ ಕಾಲ್ಕೀಳಬೇಕು. ತಪ್ಲ ಕೊಯ್ಯಾಗ ಏನರ ಸಿಕ್ಕ ಬಿದ್ರ ನನ್ನ ಚರ್ಮಾನ ಸುಲಿತಾರವ್ರು….’ ಎಂದು ರಂಗ ಮನಸೊಳಗೆ ಮಾತಾಡಿಕೊಂಡ.

ಬದುವಿನಲ್ಲಿ ಬೆಳೆದು ಹಚ್ಚಗೆ ನಗತೊಡಗಿದ್ದ ಬೇವಿನ ಗಿಡ, ಬನ್ನಿಗಿಡ, ಕರಿಜಾಲಿ, ಬಾರಿಗಿಡದ ತಪ್ಪಲನ್ನು ಅವಸರದಿಂದ ಕೊಯ್ದುಕೊಂಡು, ವಜ್ಜೆ ಹೊರೆಯನ್ನು ತಲೆ ಮ್ಯಾಲೆ ಹೊತ್ತು ಹಟ್ಟಿಯ ಕಡೆ ಮುಖ ಮಾಡಿದ.

ತಲೆ ಮ್ಯಾಲಿನ ತಪ್ಪಲದ ಹೊರೆ ಹೆಣ ಭಾರವಾಗಿ ಹಟ್ಟಿ ಅದ್ಯಾವಾಗ ಬಂದಿತೋ ಅನಿಸತೊಡಗಿತ್ತು. ಮುಂಜಾನೆಯ ಥಂಡಿಯಲ್ಲೂ ಗಂಟಲು ಒಣಗಿ ಉಗುಳು ಅಂಟಂಟಾಗಿ ಹಿಂಸೆಯಾಗತೊಡಗಿತ್ತು. ಮೈಯಲ್ಲಿ ಬೆವರಿನ ಉಟೆ ಕೀಳತೊಡಗಿತ್ತು. ಸಣ್ಣಗೆ ತಂಗಾಳಿ ಬೀಸಿ ಬಂದು ಮೈ ಸವರಿದಾಗ ಕೊಂಚ ನೆಮ್ಮದಿಯಾಗುತ್ತಿತ್ತು. ಕಾಲಿನ ಮೀನ ಖಂಡದೊಳಗೆ ನೋವು ಪತರುಗುಟ್ಟತೊಡಗಿತ್ತು. ಉಸುಕಿನ ಹೊಲದಲ್ಲಿ ದಪ್ಪನೆಯ ಕೊಡ್ಡ ಕೆರವು ಮೆಟ್ಟಿದ್ದ ರಂಗನ ಕಾಲುಗಳು ಪಾದವ ಎತ್ತಿ ಇಡಬೇಕಾದರೆ ನಡುಗಿ ಹೋಗುತ್ತಿದ್ದವು. ದೋತರದ ಕಚ್ಚಿ ಸಡಿಲಗೊಂಡಿದ್ದರಿಂದ ಅದೆಲ್ಲಿ ಬಿಚ್ಚುವುದೋ ಎಂದು ಆತಂಕವಾಗಿತ್ತು.

ಅನತಿ ದೂರದಲ್ಲಿ ಹಟ್ಟಿ ಗೋಚರಿಸತೊಡಗಿತು. ರಂಗನೊಳಗೆ ಇದ್ದಕ್ಕಿದ್ದಂತೆ ಉತ್ಸಾಹದ ಸೆಲೆಯೊಡೆಯಿತು. ತಲೆ ಮ್ಯಾಲಿನ ಹೊರೆಯನ್ನು ಹಟ್ಟಿಯ ಹತ್ತಿರ ರಭಸದಿಂದ ಒಗೆದ. ತಪ್ಪಲು ನೋಡಿದ ಕುರಿಗಳು ದೃಷ್ಟಿಯನ್ನು ಚೂಪುಗೊಳಿಸಿದವು. ತಲೆ ಮ್ಯಾಲಿನ ಯಮಭಾರ ಹಗುರಾದಂತಾಗಿ ರಂಗನಿಗೆ ನಿರಮ್ಮಳವೆನಿಸಿತು. ಕ್ಷಣ ಹೊತ್ತು ಕಾಲು ಚಾಚಿ ಹಟ್ಟಿಗೆ ಆತುಕೊಂಡು ಕುಳಿತ. ಮೈಯೊಳಗೆ ನಿಧಾನವೆನಿಸಿತು. ತಂಬಿಗೆ ನೀರು ಕುಡಿದ. ಎದೆಯೊಳಗೆ ಖುಷಿ ಕುಣಿದಂತಾಯಿತು.

ಜೊತೆಗಾರರು ಒಂದು ಅಳತೆಯ ಮೂರು ಕಲ್ಲನ್ನು ನೀಟಾಗಿ ಜೋಡಿಸಿ ಒಲೆ ಮಾಡಿ, ಅದರೊಳಗೆ ತೊಗರಿ ಕಟ್ಟಿಗೆ ಇಟ್ಟು ಉರಿ ಹಚ್ಚಿ ಜ್ವಾಳದ ಸಂಕಟಿ ಮಾಡಿ, ಕುರಿ ಹಾಲು ಕಾಸುತ್ತಿರುವುದನ್ನು ದಿಟ್ಟಿಸಿದ. ರಂಗನ ಹೊಟ್ಟೆ ಹಸಿದು ಕರಡಿ ಮಜಲು ಬಾರಿಸತೊಡಗಿತ್ತು. ತಲಾಗೊಂದೊಂದು ಪರಾತ ಅಗಲದ ತಾಟು ತಗೊಂಡು, ತಾಟಿನ ತುಂಬಾ ಸಂಕಟಿ ಹಾಲು ಹಾಕ್ಕೊಂಡು ಗಡದ್ದಾಗಿ ಉಂಡರು. ಮ್ಯಾಲೆ ಒಂದೊಂದು ತಾಟು ಹಾಲು ಕುಡಿದು ತೇಗು ಬಿಟ್ಟರು.

ಕುರಿ ಮೇಯಲು ಬಿಡುವ ಹೊತ್ತಾದ್ದರಿಂದ ರಂಗನ ಜೊತೆಗಾರರು ಹಟ್ಟಿಯ ತಡಿಕೆ ತೆಗೆದು ಕುರಿಗಳನ್ನು ಹೊರಗೆ ಬಿಟ್ಟರು. ಧೋತರವನ್ನು ಜೋಳಿಗೆಯಂತೆ ಮಾಡಿ ಅದರೊಳಗೆ ಬುತ್ತಿ ಇಟ್ಟುಕೊಂಡು, ಹೆಗಲಿಗೊಂದು ಕಂಬಳಿ ನೇತು ಹಾಕ್ಕೊಂಡು ಕುರಿ ಕಾಯಲು ಸಜ್ಜುಗೊಂಡು ಗುಡ್ಡದ ಕಡೆ ಹೊರಟರು.

*******

ದೂರದಲ್ಲಿ ಕೆರಗೆ ಹೋಗಿ ನೀರು ತಂದ ರಂಗ ಮರಿಗಳಿಗೆ ಕುಡಿಸಿ ಹಟ್ಟಿ ತಡಿಕೆಗೆ ತಪ್ಪಲು ನೇತು ಬಿಟ್ಟ. ತಪ್ಪಲು ತಿಂದ ಮರಿಗಳು ಹಟ್ಟಿಯೊಳಗೆ ಚಿನ್ನಾಟಿಗೆ ತೆಗೆದಿದ್ದವು. ಒಂದೊಂದು ಮರಿಗಳನ್ನು ಹಿಡಿದು ಅವುಗಳ ಮೈ ಮ್ಯಾಲೆ ಪೊದೆಯಾಗಿ ಬೆಳೆದ ಕೂದಲನ್ನು ಕತ್ತರಿಯಿಂದ ನೀಟಾಗಿ ಕತ್ತರಿಸತೊಡಗಿದ. ಕಿವಿಸಂದಿ, ತೊಡೆಸಂದಿಗಳಲ್ಲಿ ಸಂಸಾರ ಹೂಡಿದ್ದ ಉಣ್ಣೆಗಳನ್ನು ಕಿತ್ತು ಕಲ್ಲಿಗೆ ಒರೆಯುವ ಕಾಯಕ ನಡೆಸಿದ. ಒರೆದಾಗ ಉಣ್ಣೆಯ ಹೊಟ್ಟೆಯಿಂದ ಬರುವ ರಕ್ತದಿಂದ ಅಂವ ಕಲ್ಲ ಮ್ಯಾಲೆ ಎಳೆದ ಗೆರೆಗಳು ಬಿಸಿಲಿಗೆ ಒಣಗಿ ನವ್ಯ ಕಲಾಕೃತಿ ಹಾಂಗ ಗೋಚರಿಸತೊಡಗಿದ್ದವು.

ಮರಿಗಳ ಕರಾಪು ಮಾಡಿ ಅವುಗಳೊಗೆ ಉತ್ಸಾಹ ತುಂಬಿದ ರಂಗ ತಪ್ಪಲು ಆದಾಗೊಮ್ಮೆ ತಪ್ಪಲು ನೇತು ಬಿಡುತ್ತಾ, ನೀರು ಕುಡಿಸುತ್ತಾ ಅವುಗಳ ದೇಖರೇಖಿ ಮಾಡುವುದರೊಳಗೆ ಸಂಜೆಯ ಮುಗಿಲು ಉಣ್ಣೆಯ ರಕುತ ಬಳಿದುಕೊಂಡಿತ್ತು.ಇಡೀ ದಿನ ಉಲ್ಲಾಸದಿಂದ ಪ್ರತಿ ಕ್ಷಣಗಳನ್ನು ಮರಿಗಳ ದೇಖರೇಖಿಯಲ್ಲಿ ಕಳೆದ ರಂಗನಿಗೆ ಅದ್ಯಾಕೊ ಸುಸ್ತೆನಿಸತೊಡಗಿತ್ತು. ತಲೆಯೊಳಗೆ ಗುಡ್ಡದ ಕಲ್ಲು ಕುಂತಂಗಾಗಿ ಭಾರವೆನಿಸತೊಡಗಿತ್ತು. ಕೈ ಕಾಲುಗಳು ಸೋತಂತೆನಿಸಿ, ಬಾಯೊಳಗೆ ಉಪ್ಪುಪ್ಪು ನೀರು ಆಡತೊಡಗಿತು. ಮೈ ಮುಟ್ಟಿ ನೋಡಿಕೊಂಡ. ಅದು ಕಾದ ಹಂಚಾಗಿತ್ತು. ಮರಿಯೊಂದು ರಂಗನ ದುಬ್ಬದ ಮ್ಯಾಲೆ ಕಾಲು ಕೊಟ್ಟು ನಿಲ್ಲುವುದು, ಓಡುವುದು ಮಾಡತೊಡಗಿತ್ತು. ಕೆಂಡದ ಬಣ್ಣಕ್ಕೆ ತಿರುಗಿದ್ದ ಭಾರವಾದ ಕಣ್ಣುಗಳಿಂದ ಮರಿಯನ್ನು ದಿಟ್ಟಿಸಿ ಪ್ರೀತಿ ತೋರಿದ.

ಮೈಯೊಳಗೆ ಥಂಡಿ ಹೊಕ್ಕಂಗಾಗಿ ಮೈಯಂತ ಮೈಯೆಲ್ಲ ನಡುಗತೊಡಗಿತು. ಮೈತುಂಬಾ ಕೌದಿ ಹೊದ್ದ ಕುಳಿತ. ಕುರಿ ಮೇಸಲು ಹೋಗಿದ್ದ ಜೊತೆಗಾರರು ಕೌದಿ ಹೊದ್ದ ರಂಗನ ಅವತಾರ ನೋಡಿ ದಿಗಿಲುಗೊಂಡರು. ಇವನನ್ನು ಮನಿಗೆ ಕಳುಹಿಸಿ ಅಲ್ಲಿ ಡಾಕ್ಟರರಿಗೆ ತೋರಿಸಿದರಾಯಿತೆಂದು ಗೆಣಿಕೆ ಹಾಕಿ ಊರಿಗೆ ಕಳಿಸಲು ಜೊತೆಗಾರನೊಬ್ಬ ತಯಾರುಗೊಂಡ.ಕತ್ತಲು ಹೆಜ್ಜೆ ಹಾಕತೊಡಗಿದ್ದ ಕಳ್ಳಿದಾರಿ ಹಿಡಿದು ಇಬ್ಬರೂ ಊರ ಕಡೆ ಮುಖ ಮಾಡಿದರು. ರಂಗನ ಕಾಲುಗಳು ಕಸುವು ಕಳೆದುಕೊಂಡು ನಿತ್ರಾಣವೆನಿಸಿ ಸೋತಂತೆನಿಸತೊಡಗಿದ್ದವು. ದಾರಿಯಲ್ಲಿ ನಾಕೈದು ಸಲ ಕುಂತ. ತುಸು ಆರಾಮವೆನಿಸಿದಾಗ ಮತ್ತೆ ಪಾದ ಬೆಳೆಸಿದ. ತ್ರಾಸು ಮಾಡಿಕೊಂಡು ಊರು ತಲುಪಿದ. ರಂಗನ ಜೊತೆಗಾರನಿಗೆ ಹಟ್ಟಿಗೆ ಹೋಗಲು ಹೊತ್ತಾಗತೊಡಗಿದ್ದರಿಂದ ಅಂವ ರಂಗನನ್ನು ಊರು ಮುಟ್ಟಿಸಿ ಹಟ್ಟಿಗೆ ಹೊರಟು ಹೋದ.

(ಮುಂದುವರೆದಿದೆ….)

‘ಮುಟ್ಟು’~ ಒಂದು ಹೊಸ ಪುಸ್ತಕ

ಬರಹಗಾರ ಮಿತ್ರ ಆಲೂರು ದೊಡ್ಡನಿಂಗಪ್ಪ ಅವರ ಹೊಸ ಪುಸ್ತಕ ಡಿಸೆಂಬರ್ 6ರಂದು ಬಿಡುಗಡೆಯಾಗುತ್ತಿದೆ. ಮೈಸೂರಿನಲ್ಲಿ ಸಂಜೆ 4:30ರಿಂದ ಕಾರ್ಯಕ್ರಮಗಳಿರುತ್ತವೆ. ನಿಮಗೆಲ್ಲರಿಗೂ ಆಲೂರರ ಪರವಾಗಿ ಹೊಸತಲೆಮಾರುವಿನ ಅದರದ ಆಹ್ವಾನ. ಬನ್ನಿ… ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿ…  

‘ಒಂದು ಹುಲ್ಲಿನ ಕ್ರಾಂತಿ’ಗೆ ಚಿಕ್ಕ ಇಂಟ್ರೋ…

“ಸರಿಯಾದ ದಿಕ್ಕು ದೆಸೆಯಿಲ್ಲದ ಈ ತಲೆಮಾರಿನ ಮನಸ್ಸು ಮತ್ತು ಚಿಂತನೆಯ ಮೇಲೆ ಪ್ರಭಾವ ಬೀರುವಲ್ಲಿ ಕೇವಲ ಕೆಲವೇ ಪುಸ್ತಕಗಳು ಯಶಸ್ವಿಯಾಗಿವೆ. ಅಂತಹ ಕೆಲವೇ ಪುಸ್ತಕಗಳಲ್ಲಿ ‘ಒಂದು ಹುಲ್ಲಿನ ಕ್ರಾಂತಿ’ ವಿಶೇಷವಾದದ್ದು" ಎನ್ನುತ್ತದೆ ಮಸನೊಬು ಫುಕುವೊಕಾ ರ ಒಂದು ಹುಲ್ಲಿನ ಕ್ರಾಂತಿ ಪುಸ್ತಕದ ಬೆನ್ನುಡಿ. ಇಂಗ್ಲೀಶಿನ ‘ಒನ್ ಸ್ಟ್ರ್‍ಆ ರೆವಲೂಶನ್’ ಅನ್ನು ಸಂತೋಷ ಕೌಲಗಿಯವರು ಕನ್ನಡಕ್ಕೆ ಅನುವಾದಿಸಿದ್ದು ೧೯೮೮ರಲ್ಲಿ. ಅಂದಿನಿಂದ ಇಂದಿನವರೆಗೆ ಇದು ಒಟ್ಟು ಏಳು ಬಾರಿ ಮುದ್ರಣಗೊಂಡಿದೆ. ಪುಸ್ತಕ ಮಾರಾಟದ ಸಂಖ್ಯೆಯೊಂದೇ ಅದರ ಗುಣಮಟ್ಟಕ್ಕೆ ಅಥವಾ ಜನಪ್ರಿಯತೆಗೆ ಸಾಕ್ಷಿಯಲ್ಲವಾದರೂ ಕೃಷಿಗೆ ಸಂಬಂಧಿಸಿದ ಪುಸ್ತಕವೊಂದು ಇಷ್ಟು ಸಂಖ್ಯೆಯಲ್ಲಿ, ಕನ್ನಡದಲ್ಲಿ ಮಾರಾಟಗೊಂಡಿದ್ದು ವಿಶೇಷವೆನಿಸುತ್ತದೆ.

ಒಂದು ಹುಲ್ಲಿನ ಕ್ರಾಂತಿ ಎನ್ನುವ ಹೆಸರು ಕೇಳಿದಾಕ್ಷಣ ಇದು ರೈತರಿಗೆ ಮೀಸಲಾದ ಪುಸ್ತಕ ಅಂದುಕೊಳ್ಳಬೇಕಿಲ್ಲ. ಒನ್ ಸ್ಟ್ರಾ ರೆವಲೂಶನ್ ಗೆ ಮುನ್ನುಡಿ ಬರೆದಿದ್ದ ಅಮೆರಿಕಾದ ಖ್ಯಾತ ಚಿಂತಕ ವೆಂಡಲ್ ಬೆರಿ ಇದರ ಕುರಿತು ಹೇಳಿರುವುದು ಹೀಗೆ;

“ಈ ಪುಸ್ತಕ ಕೃಷಿಯ ಬಗ್ಗೆ ಎಂದು ನಿರೀಕ್ಷಿಸಿದವರಿಗೆ ಇದು ಆಹಾರ, ಆರೋಗ್ಯ, ಸಾಂಸ್ಕೃತಿಕ ಮೌಲ್ಯಗಳನ್ನು ಕುರಿತಾಗಿರುವ ಗ್ರಂಥವೆಂದು ಕಂಡುಬಂದರೆ ಆಶ್ಚರ್ಯವಿಲ್ಲ. ತಾತ್ತ್ವಿಕ ವಿಚಾರಧಾರೆ ಎಂಬ ವದಂತಿ ಕೇಳಿ ಈ ಪುಸ್ತಕ ಹುಡುಕುವವರಿಗೆ ಇಲ್ಲಿ ತರಕಾರಿ, ಭತ್ತ, ಕಿತ್ತಳೆ ಬೆಳೆಯ ಕುರಿತ ವಿವರಗಳೂ ಕಂಡುಬಂದಾವು"

ಈ ಕೃತಿಯ ಕನ್ನಡ ಅವತರಣಿಕೆಗೆ ಮುನ್ನುಡಿ ಬರೆದಿರುವ ನಾಗೇಶ್ ಹೆಗಡೆ ಕೂಡ ಇಂಥದೇ ಅಭಿಪ್ರಾಯ ವ್ಯಕ್ತಪಡಿಸುತ್ತಾ “ಇದು ರೈತರಿಗಷ್ಟೆ ಅಲ್ಲ, ‘ಮಣ್ಣಿನ ವಾಸನೆ’ಯಲ್ಲಿ ಅಭಿರುಚಿ ಇರುವ ಎಲ್ಲರಿಗೂ ತೀರ ಪ್ರಸ್ತುತವಾಗಿದೆ" ಎಂದಿದ್ದಾರೆ.

ಬಹಳಷ್ಟು ಜನರಿಗೆ ಯಾವುದೇ ಪುಸ್ತಕದ ಮುನ್ನುಡಿ, ಬೆನ್ನುಡಿ ಇತ್ಯಾದಿಗಳನ್ನು ಓದುವ ಅಭ್ಯಾಸ ಇರುವುದಿಲ್ಲ. ಕೆಲವು ಪುಸ್ತಕಗಳಲ್ಲಿ ಈ ಸ್ಪೇಸ್ ಲೇಖಕರ ಬೆನ್ನು ಚಪ್ಪರಿಸಲು ಮೀಸಲಾಗಿರುವುದೇ ಇದಕ್ಕೆ ಕಾರಣವಿರಬಹುದೇನೋ. ಆದರೆ ಈ ಅಭ್ಯಾಸದಿಂದ ಹಲವು ಬಾರಿ ಬಹಳ ಒಳ್ಳೆಯ ಓದು/ಒಳನೋಟಗಳು ಕೈತಪ್ಪಿ ಹೋಗುತ್ತವೆ. ಈ ಮಾತು ‘ಒಂದು ಹುಲ್ಲಿನ ಕ್ರಾಂತಿ’ಗೂ ಅನ್ವಯ. ಈ ಪುಸ್ತಕದ ಓದಿಗೆ ಪ್ರವೇಶಿಕೆಯಂತೆ ಕನ್ನಡದಲ್ಲಿ ನಾಗೇಶ್ ಹೆಗಡೆಯವರ, ಮೂಲ ಕೃತಿಗೆ ಬರೆಯಲಾಗಿದ್ದ ಬೆರಿ ಅವರ ಮುನ್ನುಡಿಗಳಿವೆ. ಇವನ್ನು ಯಾವ ಕಾರಣಕ್ಕೂ ಮಿಸ್ ಮಾಡಿಕೊಳ್ಳುವಂತೆಯೇ ಇಲ್ಲ.

‘ಒಂದು ಹುಲ್ಲಿನ ಕ್ರಾಂತಿ’ಯನ್ನು ನಾವು ಯಾಕೆ ಓದಬೇಕು ಅನ್ನುವುದಕ್ಕೆ ಉತ್ತರವಾಗಿ ಮುಂದಿನ ಪೋಸ್ಟ್ ನಲ್ಲಿ ಒಂದು ಅಧ್ಯಾಯವನ್ನು ನೀಡಲಿದ್ದೇನೆ. ಇದನ್ನೆಲ್ಲ ಓದುತ್ತ ಫುಕುವೊಕಾರ “ಕೃಷಿಯ ಅಂತಿಮ ಗುರಿ ಬೆಳೆ ಬೆಳೆಯುವುದಲ್ಲ. ಬದಲು ಮನುಷ್ಯನ ಬೆಳವಣಿಗೆ" ಅನ್ನುವ ಮಾತು ಎಷ್ಟೊಂದು ನಿಜ ಅನಿಸುತ್ತದೆ. ಹಾಗಂದುಕೊಳ್ಳುತ್ತಲೇ ಯಾಕೋ ನಮ್ಮೆಲ್ಲರ ಪ್ರೀತಿಯ ಪೂರ್ಣಚಂದ್ರ ತೇಜಸ್ವಿ ನೆನಪಾಗುತ್ತಾರೆ.

ಅಂದ ಹಾಗೆ, ಈ ಕೃತಿಯನ್ನು ಜನಪದ ಸೇವಾ ಟ್ರಸ್ಟ್ ಪ್ರಕಾಶನ ಪ್ರಕಟಿಸಿದೆ. ಬೆಲೆ ಕೇವಲ ನೂರು ರುಪಾಯಿಗಳು.