ಚೈತ್ರನನ್ನು ತರಾಟೆಗೆ ತೆಗೆದುಕೊಂಡಾಗ… – ಒಂದು ಜಿಎಸ್‌ಎಸ್ ಕವಿತೆ

ಇವತ್ತಿನ ಜಿ.ಎಸ್. ಶಿವರುದ್ರಪ್ಪ ಕಾವ್ಯಹಬ್ಬ ‘ಚೈತ್ರೋದಯ’ವೇ ಯಾಕೆ? ಅಂತ ಯೋಚಿಸ್ತಿದ್ದೆ. ಈ ಹಿರಿಯ ಕವಿಗೆ ಚೈತ್ರ ಅಷ್ಟೊಂದು ಪ್ರೀತಿಯದಾ? ಅಂದುಕೊಂಡು ‘ಸುವರ್ಣ ಸಂಪುಟ ತಿರುವಿಹಾಕಿದಾಗ ಈ ‘ಕಂಪ್ಲೇಂಟು’ ಕವಿತೆ ಕಣ್ಣಿಗೆ ಬಿತ್ತು. ಓದೋಣ ಬನ್ನಿ…

ಕಂಪ್ಲೇಂಟು

ಕ್ಯೂ ನಿಂತು ಕಾಯುತ್ತಿದ್ದೇವೆ ನಾವೆಲ್ಲ,
ಬಂದನೇ ಹಿಡಿದು ಬಣ್ಣ ಬಣ್ಣಗಳ ಬಕೆಟ್ಟನು?
ಓ, ಬಂದ. ಗಾಳಿಯ ಕುಂಚವನ್ನದ್ದಿ
ಆಗಲೇ ಬಳಿದಿದ್ದಾನೆ ಹಲವು ಮರಗಳನು!

ಎಷ್ಟು ತಡ, ಏಕೆ ತಡ? ಇವನೊಬ್ಬ ಮುನ್ಸಿಪಲ್ ಕಂಟ್ರಾಕ್ಟರು;
ತನಿಖೆ ಮಾಡುವರಿಲ್ಲ, ಇವನನ್ನು ಕೇಳುವರಿಲ್ಲ ವರದಿ
ಅಲ್ಲರ್ಧ, ಇಲ್ಲರ್ಧ- ಇವನ ಕೆಲಸವೆ ಹೀಗೆ
ಇನ್ನು ಯಾವಾಗಲೋ ನಮ್ಮ ಸರದಿ!

ಸಾಕಪ್ಪ ಸಾಕು; ಕೊರೆವ ಕತ್ತರಿಗಾಳಿ ಹತ್ತರಿ ಹೊಡೆದು,
ಇದ್ದ ತರಗು- ಬರಗನು ತೆಗೆದು ಬತ್ತಲೆ ಮಾಡಿ,
ಛಳಿಯ ಪಾಲಿಷ್ ಹಾಕಿ, ಹೀಗೆ ಬಿರುಬಿಸಿಲಲ್ಲಿ
ನಿಲಿಸಬಹುದೇ ಇವನು ನಮ್ಮ ಮರ್ಯಾದೆಯನು
ಕಾಸಿಗಿಂತಲು ಕೂಡ ಕಡಮೆ ಮಾಡಿ!

ಹಿಂದೆಲ್ಲ ಹೀಗಿರಲಿಲ್ಲ, ಕವಿಗಳೆ ಕೇಳಿ,
ಈಗೀಗಂತು ಹೆಚ್ಚಾಗುತ್ತಿದೆ ಅವ್ಯವಸ್ಥೆ-
ಅರ್ಜಿ ಸಲ್ಲಿಸಿ ನಾವು ಎಷ್ಟು ದಿವಸಗಳಾಯ್ತು, ಏನು ಕತೆ;
ಹೀಗೆಲ್ಲ ಕೆಡಬಾರದಪ್ಪ ಹೆಸರಾದ ಸಂಸ್ಥೆ.

– ಜಿ.ಎಸ್.ಶಿವರುದ್ರಪ್ಪ

ಆದ್ಯತೆ ಎನ್ನುವ ಪದವೇ ಪ್ರತಿಭಟನೆಗೆ ಒಳಗಾಗಬೇಕು ~ ೨

ಪ್ರೀತಿ-ನಿರ್ಭೀತಿ, ಪ್ರೊ.ಕಾಳೇಗೌಡ ನಾಗವಾರರ ಲೇಖನ ಮತ್ತು ಅನುವಾದಗಳ ಸಂಕಲನ. ಪ್ರಸ್ತುತ ಲೇಖನವನ್ನು ಈ ಸಂಕಲನದಿಂದಲೇ ಆಯ್ದುಕೊಳ್ಳಲಾಗಿದೆ. ಇದರ ಮೂಲ ಲೇಖಕ, ಸಮಾಜವಾದೀ ಚಿಂತಕ ಕಿಷನ್ ಪಟ್ನಾಯಕ್. ಲೇಖನದ ಮೊದಲ ಭಾಗವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಭಾಗ – 2 –

ಇಂಡಿಯಾದ ಸ್ತ್ರೀವಾದಿಗಳು ಮತ್ತೊಂದು ವಿಲಕ್ಷಣವಾದ ಸಂಪ್ರದಾಯಶರಣತೆಯಿಂದ ನರಳುತ್ತಾರೆ: “ನಾನು ಲೈಂಗಿಕ ಸ್ವಾತಂತ್ರ್ಯವನ್ನು ಸಮರ್ಥಿಸುವುದಿಲ್ಲ…. ಸ್ತ್ರೀಪುರುಷರಿಬ್ಬರಿಗೂ ಗಡಿಗಳಿರಬೇಕೆನ್ನುವವಳು ನಾನು…. ಪ್ರೇಮ, ಮದುವೆ ಮತ್ತು ಲೈಂಗಿಕತೆಗಳಲ್ಲಿನ ಹೊಣೆಗಾರಿಕೆಯು ಇಬ್ಬರಿಗೂ ಒಂದೇ ಆಗಿರಬೇಕು….” ಇತ್ಯಾದಿಯಾಗಿ (ಮ್ಯಾನ್ ಕೈಂಡ್ ಸಂ೧.ಸಂ೬) ಶ್ರೀಮತಿ ಇಂದುಮತಿ ಕೇಳ್ಕರ್ ಬರೆಯುತ್ತರೆ. ಇಲ್ಲೇ ಸಮಸ್ಯೆಯ ಕಗ್ಗಂಟು ಇರುವುದು ಮತ್ತು ಕೇವಲ ಹುತ್ತವನ್ನು ಬಡಿಯುವವರ ಬಂಡವಾಳ  ಇಲ್ಲಿ ಬಯಲಾಗುತ್ತದೆ. ಹೆಣ್ಣಿಗೇನು ಬೇಕು: ಸ್ವಾತಂತ್ರ್ಯವೋ ಇಲ್ಲಾ ಸಮಾನತೆಯೋ? ಕೊಟ್ಟಕೊನೆಗೆ ಸ್ವಾತಂತ್ರ್ಯ ಅಂದರೆ ಸಮಾನತೆ ಅಂತಲೇ ಅರ್ಥ. ಸಮಾನತೆಯು ಗಾಣದೆತ್ತಿನ ಸ್ಥಿತಿಯಾಗಿರಬಹುದು; ಅಥವಾ ಬಲವಂತವಾಗಿ ಹೇರಿದ್ದಾಗಿರಬಹುದು- ಮತ್ತು ಗುಲಾಮೀ ರಾಜ್ಯದಲ್ಲೂ ಇದ್ದಿರಬಹುದು. ಮಹಿಳೆಯರು ಗಂಡಿನೊಡನೆ ಸಮಾನತೆಯನ್ನು ಅಪೇಕ್ಷಿಸುವರೆಂದರೆ ಅದು ಅವರ ಸ್ತ್ರೀಸಹಜವಾದ ಹಠಮಾರಿತನ ಅಷ್ಟೆ. ಅವರು, ತಾವು ನಿರಾಳವಾಗಿರುವುದನ್ನು ಬಯಸಬೇಕು. ಸಮಾನತೆಯ ಬಗೆಗಿನ ಅವರ ಆಕಾಂಕ್ಷೆ ನಿಜಕ್ಕೂ ಗಟ್ಟಿಯಾದುದ್ದೇ ಹೌದಾದರೆ ಸ್ವಾತಂತ್ರ್ಯವು ಅದನ್ನು ಅವರ ಕಲಬುಡಕ್ಕೇ ತಂದಿಕ್ಕುತ್ತದೆ. ಯಾವುದು ಆರ್ಥಿಕ ಸರಣಿಯ ಸಮಾನತೆಯಾಗಿದೆಯೋ ಆ ಸಮಾನತೆಯು ಎಲ್ಲೆಲ್ಲೂ ತನ್ನ ಅಬದ್ಧ ಧ್ಯೇಯಾದರ್ಶಗಳನ್ನು ಬಿತ್ತಕೂಡದು.

ಭಾರತೀಯ ಮಹಿಳೆಯು ಲೈಂಗಿಕ ಸ್ವಾತಂತ್ರ್ಯವನ್ನು ಏಕೆ ಬಯಸಬಾರದು? ವೈಧವ್ಯ ಮತ್ತು ಘೋಷಾ ಪದ್ಧತಿಯನ್ನು ಎಲ್ಲ ಕಾಲಕ್ಕೂ ಉಳಿಸಿಕೊಳ್ಳಬೇಕೆಂಬ ಬಯಕೆ ಅವಳಿಗಿದೆಯೇ? ಎಲ್ಲಿಯವರೆಗೆ ಹೆಣ್ಣು ತನ್ನ ಲೈಂಗಿಕ ಆಕಾಂಕ್ಷೆಗಳ ಬಯಕೆಯ ಬಂಧದಲ್ಲಿ ತಾನು ಸ್ವತಂತ್ರ್ಯಳಲ್ಲವೋ  ಅಲ್ಲಿಯತನಕ ಆಕೆಯ ಮೇಲಿನ ಗಂಡಿನ ಶೋಷಣೆಯು ಮುಂದುವರೆಯುತ್ತದೆ. ಗಂಡಿನ ಲೈಂಗಿಕ ಸ್ವಾತಂತ್ರ್ಯಕ್ಕೆ ಅಡೆತಡೆಗಳಿರಬೇಕೆಂದು ಹಾರೈಸುತ್ತಾ ಕೂರುವುದರಿಂದ ಏನೂ ಪ್ರಯೋಜನವಿಲ್ಲ. ಹಾಗಾದರೆ ಮುಂದೇನು? ಅದು ಪೀನಲ್ ಕೋಡಿನ ಕಲಂಗಳನ್ನು ಲಕ್ಷ್ಯವಿಟ್ಟು ಪರಿಷ್ಕರಿಸುವುದರಿಂದ ಖಂಡಿತವಾಗಿಯೂ ಆಗುವುದಿಲ್ಲ! ಹೆಂಗಸರಿಗೆ ಲೈಂಗಿಕ ಸ್ವಾತಂತ್ರ್ಯ ಇಲ್ಲದಿದ್ದಲ್ಲಿ ಗಂಡಸರು ವಿಷಯಲಂಪಟರಾಗುತ್ತಾರೆ. ಸ್ತ್ರೀಪುರುಷರಿಬ್ಬರೂ ಲೈಂಗಿಕವಾಗಿ ಸ್ವತಂತ್ರರಾಗಿದ್ದಲ್ಲಿ ಅವರ ನೈತಿಕ ವರ್ತನೆಯು ಸಮಾಜವಾದಿ ಸಮಾಜವೊಂದರಲ್ಲಿ ಸಮಸ್ಥಿತಿಯನ್ನು ತಲುಪುತ್ತದೆ!

ಯಾವ ಸಮಾಜದಲ್ಲಿ ವಿವಾಹ ವಿಚ್ಚೇದನ ಮತ್ತು ವಿಧವಾ ವಿವಾಹಗಳು ನೈತಿಕವಲ್ಲವೋ ಅಲ್ಲಿ ಲೈಂಗಿಕ-ನೈತಿಕತೆಯನ್ನು ಒಂದೇ ವ್ಯಕ್ತಿಗೆ ವಿಧೇಯರಾಗಿರುವುದು ಎಂದು ಅರ್ಥೈಸಿ ಲಕ್ಷ್ಮಣ ರೇಖೆಯನ್ನು ಎಳೆಯದೆ, ಲೈಂಗಿಕತೆಯ ಆರೋಗ್ಯಕರ ಬಳಕೆ ಮತ್ತು ಆತ್ಮಸಂಯಮವೆಂದು ಸಮಾಜವಾದಿಗಳು ಮತ್ತು ಭಾರತೀಯ ಮಹಿಳೆಯರು ಮನಗಾಣಬೇಕು. ಈ ಸ್ಥಿತಿಯಲ್ಲಿ ಸ್ತ್ರೀ ಪುರುಷರ ಕುಟುಂಬ ಹಿತ ಅಥವಾ ಆ ಸಂಸ್ಥೆಯ ಸಂಬಂಧದ ಹೊಣೆಗರಿಕೆಯು ಸಂಪೂರ್ಣವಾಗಿ ಸಹಜ ಪ್ರವೃತ್ತಿಯನ್ನು ಅವಲಂಬಿಸುತ್ತದೆ. ಹೆಂಗಸರು ಸಮಾನತೆಗಾಗಿ ಕೂಗಾಡುವಾಗ ತಾವು, ತಮಗೆ ಸರಿಹೊಂದದ ಅಸಹಜ ಪ್ರವೃತ್ತಿಯೊಂದನ್ನು ಬಯಸುವುದಷ್ಟೆ ಅಲ್ಲದೆ, ಗಂಡಸರು ಕೂಡ ಅವರಿಗೆ ಸರಿಹೊಂದದ ಪ್ರವೃತ್ತಿಯೊಂದನ್ನು ಅಸಹಜವಾಗಿ ರೂಡಿಸಿಕೊಳ್ಳಬೇಕೆಂದು ಹೇಳುತ್ತಾರೆ. ಆರ್ಥಿಕವಾಗಿ ತಬ್ಬಲಿಗಳಾದ ಮಕ್ಕಳು ಹುಟ್ಟುವುದಿಲ್ಲವೆ? ಅಂತಹ ಮಕ್ಕಳ ಬಗ್ಗೆ ಸಾಮಾನ್ಯವಾಗಿ ಹೆಂಗಸರಿಗಿಂತ ಕಡಿಮೆ ಆಸಕ್ತಿಯನ್ನು ಗಂಡಸರು ತಾಳುತ್ತಾರೆ. ಸಮಾಜವಾದಿ ಸಮಾಜವೊಂದರಲ್ಲಿ ಮಕ್ಕಳೂ ಆರ್ಥಿಕವಾಗಿ ನಿರ್ಗತಿಕರಾಗಿರುವುದಿಲ್ಲ. ಇವತ್ತು ನೀವು ಒಬ್ಬನನ್ನು ಅಪ್ಪ ಅಂತ ಕರೆದು, ಆತನಿಗೆ ಕುಟುಂಬದ ತಲೆಯಾಳಿನ ಪಟ್ಟ ಕಟ್ಟುತ್ತೀರಿ. ಈ ಸುಳ್ಳು- ಅಗ್ಗಳಿಕೆಯಿಂದ ಬೀಗುತ್ತ ಹಿರಿಹಿಗ್ಗುವ ಆ ಮೂರ್ಖ, ತನ್ನ ಸಂತಾನದ ಭವಿಷ್ಯದ ಬಗ್ಗೆ ಯಾವ ಮುಂದಾಲೋಚನೆಯೂ ಇಲ್ಲದೆ, ಕೇವಲ ಮಕ್ಕಳನ್ನು ಬೆಳೆಸುವ ಕಾಯಕದ ಬಲಿಪೀಠಕ್ಕೆ ತನ್ನ ಇಡೀ ಜೀವಮಾನವನ್ನೆ ಅರ್ಪಿಸುತ್ತಾನೆ. ಯಾವತ್ತು ಮಕ್ಕಳು ತಮ್ಮ ಅಪ್ಪ ಅಮ್ಮಂದಿರಿಗೆ ಆರ್ಥಿಕವಾಗಿ ಆಶ್ರಿತರಲ್ಲವೋ ಅವತ್ತೇ ಈ ಅಪ್ಪನಾದವನ ಅಂತಸ್ತೆಲ್ಲ ತಂತಾನೆ ಜರ್ರನೆ ಇಳಿಯಲ್ಪಟ್ಟು, ಆತ ಕುಟುಂಬಕ್ಕೆ ಬರಿಯ ಒಬ್ಬ ಸಂಬಂಧಿಕನೋ ಅಥವಾ ಒಬ್ಬ ಸಹಾಯಕನೋ ಇಲ್ಲಾ ಒಬ್ಬ ಶಾಶ್ವತವಾದ ಅತಿಥಿಯೋ ಆಗುತ್ತಾನೆ. ಗಂಡನಾದವನೂ ಸಹ ಆಗ ಬಿಡುಗಡೆಯ ನಿಟ್ಟುಸಿರು ಬಿಡುತ್ತಾ “ಮುಂದಿನ ತಲೆಮಾರಿನ ಬೆಲೆಯೇನೆಂದೂ ತಿಳಿಯದ ನೀನು ಅದಕ್ಕಾಗಿ ಬದುಕುತ್ತಾ ಯಜಮಾನನಾಗಿರುವ ಬದಲು ಕುಟುಂಬದಲ್ಲಿ ಹೀಗೆ, ಅತಿಥಿಯಾಗಿರುವುದೇ ಮೇಲು” ಎಂದು ಹೇಳಿಕೊಳ್ಳುತ್ತಾನೆ. ಹೀಗೆ ಗಂಡು, ಕುಟುಂಬದ ಸೆರೆಯಿಂದ ಎಷ್ಟರಮಟ್ಟಿನ ಬಿಡುಗಡೆ ಸಿಗುತ್ತದೆಯೋ ಅಷ್ಟನ್ನೂ ಪಡೆಯಲು ಹಾತೊರೆಯುತ್ತಾನೆ. ಮಕ್ಕಳ ಪಾಲನೆ ಪೋಷಣೆಯು ಮೊಟ್ಟಮೊದಲ ಕರ್ತವ್ಯ; ಪ್ರೀತ್ಯಾದರಪೂರಿತ ಮತ್ತು ಭಾವನಾತ್ಮಕವಾದ ಆಶ್ರಯವನ್ನು ತನ್ನ ಸದಸ್ಯರಿಗೆ ನೀಡುವುದು ಅದರ ಗೌಣವೆನ್ನಬಹುದಾದಕೆಲಸವಾಗಿದೆ. ದೊಡ್ಡ ಪ್ರಮಾಣದಲ್ಲಿನ ಹೆಂಗಸರು ತಮ್ಮ ಮಕ್ಕಳ ಕಾರಣದಿಂದಾಗಿ ಕುಟುಂಬ ಜೀವನಕ್ಕೆ ಬಹುಮಟ್ಟಿಗೆ ಆಕರ್ಷಿತರಾಗುತ್ತಾರೆ. ಆದರೆ, ಹೆಚ್ಚಿನ ಗಂಡಸರು ಅಲ್ಲಿನ ಸರ್ವಸಾಮಾನ್ಯವಾದ ಪ್ರೀತ್ಯಾದರ ಮತ್ತು ಭಾವನಾತ್ಮಕ ಸಂಬಂಧದ ಕಾರಣಕ್ಕಾಗಿ ಅಲ್ಲಿರುತ್ತಾರೆ. ಆದ್ದರಿಂದ ಸಹಜವಾಗಿಯೇ ಹೆಣ್ಣು, ಮಕ್ಕಳ ಬಗೆಗಿನ ತನ್ನ ತುಂಬು ಹೃದಯದ ಮತ್ತು ಸ್ಥಿರವಾದ ಪ್ರೀತಿ ವಾತ್ಸಲ್ಯಗಳ ಮೂಲಕ ಮನೆಯಲ್ಲಿ ಪ್ರಧಾನವಾದ ವ್ಯಕ್ತಿತ್ವವನ್ನು ಗಳಿಸಿಕೊಳ್ಳುತ್ತಾಳೆ. ಅದೇ ಹೊತ್ತಲ್ಲಿ ಗಂಡು ಜೀವನೋಪಾಯಕ್ಕಾಗಿ ದುಡಿಯಬೇಕಾದ ತನ್ನ ಬೆರಗುಬಡಿದ ಕೆಲಸದ ಹೊರತು ಮತ್ತೇನೂ ಇಲ್ಲದೆ ಆತ ಬರಿಯ ಒಬ್ಬ ಸಹಾಯಕನಾಗಿ ಮಾತ್ರ ನಿಲ್ಲುತ್ತಾನೆ. ಮುಕ್ತ ಸಮಾಜದಲ್ಲಿನ ಮಾತೃಪ್ರಧಾನ ಕುಟುಂಬದ ಹೊರತಾಗಿ ಸದ್ಯಕ್ಕೆ ಮತ್ತೇನನ್ನೂ ನಾನು ಕಲ್ಪಿಸಿಕೊಳ್ಳಲಾರೆ. ತನ್ನ ಸಂತಾನಾಪೇಕ್ಷೆಯ ಬಗ್ಗೆ ಹೆಣ್ಣಿಗಿರುವ ಸಹಜಪ್ರವೃತ್ತಿಯು ಗಂಡಿನದರ ರೀತಿಯಲ್ಲಿ ದುರ್ಬಲಗೊಂಡಲ್ಲಿ ಮಾತ್ರ- ೧.ಒಂದೋ ಕುಟುಂಬ ವ್ಯವಸ್ಥೆಯೇ ಇಲ್ಲವಾಗುತ್ತದೆ ೨.ಅಥವಾ ಅದು ತನ್ನ ಪಾಲುದಾರರೆಲ್ಲರಿಗೂ ಸಮಾನ ಲಾಭಾಂಶವನ್ನು ನೀಡುತ್ತ ಉಳಿಯುತ್ತದೆ. ಈ ಮೇಲಿನ ಪರಿಸ್ಥಿತಿಯಲ್ಲಿ “ಮಾನವತಾವಾದಿ ಸಮಾಜದಲ್ಲಿ ನೆಮ್ಮದಿ ನೆಲೆಗೊಂಡಾಗ ಮತ್ತು ಸ್ವಾತಂತ್ರ್ಯ ತಾಂಡವವಾಡುವಾಗ, ಸಾಧಾರಣ ಗಂಡಸೊಬ್ಬನು ತಾನು ತನ್ನ ಸಹಬಾಳ್ವೆಯ ನಡುವೆ ಮಹತ್ವಪೂರ್ಣವಾದ್ದನ್ನು ನಿರ್ವಹಿಸದಿದ್ದಲ್ಲಿ, ಆ ಜನಜಾತ್ರೆಯ ಕಣ್ಣಲ್ಲಿ ಆತ ‘ತಾಯಿ’ಯಾದವಳಿಗಿಂತ ಕೆಳಮಟ್ಟದ ಜೀವಿಯಾಗಿ ಪರಿಗಣಿಸಲ್ಪಡುತ್ತಾನೆ” ಎಂದು ಭಾವಿಸುವುದು ವಿಚಿತ್ರತರವಾದ ಅನುಮಾನವಾಗುತ್ತದಲ್ಲವೆ?

ಸಮಾಜವಾದಿ ಸಮಾಜಕ್ಕೂ ಮೊದಲಿನ ಹಂತದ ಈ ಸ್ಥಿತಿಯಲ್ಲೂ ಹೆಣ್ಣು ತನ್ನ ಕರ್ತವ್ಯವನ್ನು ನೆರವೇರಿಸುವುದು ಕಷ್ಟವೇನಲ್ಲ. ತನ್ನ ಸಾಹಸಪೂರ್ಣಕೆಲಸಕಾರ್ಯಗಳ ಜೊತೆಜೊತೆಗೆ ಆಕೆ ಭವಿಷ್ಯದ ಬಗ್ಗೆ ಮುಂದಾಲೋಚನೆಯುಳ್ಳವಳಾಗಬೇಕು. ಮನಸ್ಸಿನ ಕೀಳರಿಮೆಯನ್ನು ಕಿತ್ತೊಗೆಯುತ್ತಾ ಆಕೆ ಆತ್ಮಗೌರವವನ್ನು ವೃದ್ಧಿಪಡಿಸಿಕೊಳ್ಳಬೇಕು ಮತ್ತು ತನ್ನ ಶಾರೀರಿಕ ಪರಿಣಾಮಗಳನ್ನೇ ಮುಂದೊಡ್ಡಿ ಅವುಗಳಾನ್ನೆಲ್ಲ ಒಲ್ಲದ ಗಂಡಿನ ಮೇಲೆ ಹೇರಲು ಯತ್ನಿಸಬಾರದು. ತಮ್ಮ ಪ್ರಿಯಕರರಾದವರು ತಮ್ಮನ್ನು ಮದುವೆಯಾಗಲು ಒಪ್ಪದಿದ್ದ ಸಂದರ್ಭದಲ್ಲಿ ಕೂಡ- ಕೊನೆಯಪಕ್ಷ ನಮ್ಮ ವಿದ್ಯಾವಂತ ಹಾಗೂ ಮುಂದುವರಿದ ಮಹಿಳೆಯರಲ್ಲಿ ಕೆಲವರಾದರೂ, ತಾವು ಮಕ್ಕಳಾನ್ನು ಹಡೆಯಲು ಹಿಂದೆಗೆಯದಿರುವುದನ್ನು ಮತ್ತು ಸಾರ್ವಜನಿಕವಾಗಿಯೇ ಆ ಹಸುಳೆಗಳ ಲಾಲನೆಪಾಲನೆಗಳಲ್ಲಿ ತೊಡಗುವುದನ್ನು ಕಣ್ಣಾರೆ ಕಾಣಬೇಕೆಂದು ನಾನು ಸದಾ ಕುತೂಹಲಿಯಾಗಿ ಇದ್ದೇನೆ. ಇಲ್ಲವೆ, ಈ ನೀತಿಹೀನ ಜಗತ್ತಿಗೆ ಆಘಾತವನ್ನುಂಟು ಮಾಡುವ ಸಲುವಾಗಿಯಾದರೂ ಒಂದು ಹೆಣ್ಣು ಮದುವೆಯಾಗಲು ಒಪ್ಪದೆ, ಮಗುವನ್ನು ಹಡೆದು, ತನ್ನ ಬದುಕಿನ ಪುನಶ್ಚೈತನ್ಯಕ್ಕಾಗಿ ಗಾಂಭೀರ್ಯ ಹಾಗೂ ಅಸಾಧಾರಣ ವೈಶಿಷ್ಟ್ಯಗಳಿಂದ ಬದುಕಬೇಕು. ಆ ಬಗೆಯ ಹೆಂಗಸು ತನ್ನ ದೃಢಸಂಕಲ್ಪ ಶಕ್ತಿಯ ಒತ್ತಾಯದಿಂದಲೇ ಯವತ್ತೋ ಒಂದು ದಿನ ಸಾರ್ವಜನಿಕ ಜೀವನದಲ್ಲಿನ ಉನ್ನತ ಮಟ್ಟದ ಮಹಿಳೆ, ಸಚಿವೆ, ಲೇಖಕಿ ಅಥವಾ ವಿಜ್ಞಾನಿಯಾಗಿ ಕಾಣಿಸಿಕೊಂಡಾಗ- ನಮ್ಮ ಈ ಒಳ್ಳು ‘ನೈತಿಕ’ ಪದ್ಧತಿಗಳನ್ನೆಲ್ಲ ಗಾಳಿಗೆ ತೂರುವ ಕೆಲಸ ಪೂರ್ಣಗೊಳ್ಳುತ್ತದೆ. ಈ ಹೆಣ್ಣನ್ನು ನಾನು ಹೊಸಮಹಿಳೆಯೆಂದು ಕರೆಯುತ್ತೇನೆ. ಆಕೆಗಾಗಿ ಆಂದೋಲನ ನಡೆಸುವ ಆತುರದಲ್ಲಿ ನಾನಿದ್ದೇನೆ. ನಮ್ಮ ಕೆಲವು ಸಮರ್ಥ ಸಮಾಜವಾದಿ ಮಹಿಳೆಯರಾದರೂ ಈ ಜಾಡು ಹಿಡಿಯಬಲ್ಲರೆ?

ಆದ್ಯತೆ ಅನ್ನುವ ಪದವೇ ಪ್ರತಿಭಟನೆಗೆ ಒಳಗಾಗಬೇಕು!

ಬಹಳ ದಿನಗಳಿಂದ ಬಹಳ ಜನ ಕಿಷನ್ ಪಟ್ನಾಯಕರ ‘ಹೆಣ್ಣಿಗೇನು ಬೇಕು: ಸ್ವಾತಂತ್ರ್ಯವೋ? ಸಮಾನತೆಯೋ?’ ಲೇಖನ ಓದಿದ್ದೀರಾ ಕೇಳ್ತಿದ್ದರು. ಇಲ್ಲ, ಇಲ್ಲವೆನ್ನುತ್ತಲೇ ಇದ್ದಾಗೆ ಗೆಳೆಯರೊಬ್ಬರು ತಾವೇ ಅದರ ಪ್ರತಿಯನ್ನು ಕಳುಹಿಸಿಯೂ ಕೊಟ್ಟರು. ಅದರಲ್ಲೇನಿದೆ ಎಂದು ನೋಡಿದಾಗ….

(ಕಿಷನ್ ಪಟ್ನಾಯಕರ ಈ ಲೇಖನವು ಬಹಳ ಹಿಂದೆ ಆಂಗ್ಲ ಭಾಷೆಯಲ್ಲಿ, ಮ್ಯಾನ್ ಕೈಂಡ್ ಪತ್ರಿಕೆಯಲ್ಲಿ ಪ್ರಕಟಗೊಂಡಿದ್ದಾಗಿದೆ.  ಕನ್ನಡಾನುವಾದವನ್ನು ‘ಪ್ರೀತಿ ಮತ್ತು ನಿರ್ಭೀತಿ’ಯಿಂದ ಎತ್ತಿಕೊಂಡುದಾಗಿದೆ.)

ಹೆಣ್ಣಿಗೇನು ಬೇಕು: ಸ್ವಾತಂತ್ರ್ಯವೋ? ಸಮಾನತೆಯೋ?

ಹೆಣ್ಣಿನ ನಿಜವಾದ ಸಮಸ್ಯೆಯು ಆಕೆಯ ಸ್ವಾತಂತ್ರ್ಯದ ಸಮಸ್ಯೆಯೇ ಆಗಿದೆ. ಸಾದೃಶ್ಯ (ಆಕೆ ಇದನ್ನೇ ಸಮಾನತೆ ಅನ್ನುತ್ತಾಳೆ)ದ ಬಗೆಗಿನ ಅವಳ ಗೀಳು ನಗೆಗೀಡಾಗಿದೆ. ಹೆಣ್ಣಿನ ಸ್ವಾತಂತ್ರ್ಯ ಅಂದರೆ ಮೂಲತಃ ಅವಳ ಲೈಂಗಿಕ ಸ್ವಾತಂತ್ರ್ಯ.

ಸ್ತ್ರೀಯರ ರಾಜಕೀಯ, ಸಾಮಾಜಿಕ ಮತ್ತು ಮಾನಸಿಕ ಅಸಮಾನತೆಯ ವಿರುದ್ಧದ ಕೆಲವರ ಉತ್ಕಟೇಚ್ಛೆ ನಿಜಕ್ಕೂ ಸ್ತುತ್ಯರ್ಹ. ಆದರೆ, ಅವರ ಈ ಆತಂಕವು ಹೆಣ್ಣಿನ ಗುಲಾಮಗಿರಿಯ ಮೂಲಸ್ಥಾನಕ್ಕೇ ಮತ್ತೆ ಮೊರೆಯಿಡುವಂತಾಗಿದೆ. ಹೆಂಗಸರ ಮೇಲಿನ ತಮ್ಮ ಹಿಡಿತ ಸಡಿಲಗೊಳ್ಲದಂತೆ ಗಂದಸರು ಹುಟ್ಟುಹಕಿರುವ ಸಾಮಾಜಿಕ ಮೌಲ್ಯಗಳನ್ನೇ ಹೆಣ್ಣು ಎತ್ತಿಹಿಡಿಯುವುದದಲ್ಲಿ- ಸ್ತ್ರೀಸಮಾನತೆಯ ಆಕ್ರಂದನದ ಜೊತೆಯಲ್ಲೇ ಸುಳಿದಾಡುವ ವ್ಯಂಗ್ಯಕ್ಕೆ ಇಲ್ಲಿ ಹೆಚ್ಚಿನ ಒತ್ತು ಬೀಳುತ್ತದೆ.

ಹೆಂಗಸರಿಗೆ ನೀಡಲಾಗುವ ವಿಶೇಷಾದ್ಯತೆಯ ನಡಾವಳಿಯ ಪ್ರಶ್ನೆಯಲ್ಲಿನ ಪ್ರಾಸಂಗಿಕ ಆಕ್ಷೇಪವೊಂದರ ಬಳಿಕ ನಾನು ಮುಖ್ಯ ವಿಷಯಕ್ಕೆ ಹಿಂದಿರುಗುತ್ತೇನೆ. ‘ಆದ್ಯತೆ’ ಅನ್ನುವ ಪದವೇ ಪ್ರತಿಭಟನೆಗೆ ಒಳಗಾಗಬೇಕು.
ಅದರಲ್ಲಿ ಸ್ವಲ್ಪಮಟ್ಟಿಗೆ ಕನಿಕರ ಭಾವ ತುಂಬಿರುತ್ತದೆ. ಕನಿಕರವು ಅತ್ಯಾಚಾರದಷ್ಟೇ ಹೇಸಿಗೆ ಹುಟ್ಟಿಸುವಂಥದ್ದು. ಅತ್ಯಾಚಾರದಿಂದ ನೀವು ಇನ್ನೊಬ್ಬರ ಸ್ವಂತದ ಘನತೆಯನ್ನು ನಾಶ ಮಾಡುತ್ತೀರಿ. ಕನಿಕರದಿಂದ ನೀವು ಮತ್ತೊಬ್ಬರ ಆತ್ಮಗೌರವವನ್ನು ನಾಶ ಮಾದುತ್ತೀರಿ. ಒಂದು ವೇಳೆ ಅದು ಆತ ಅಥವಾ ಆಕೆಯಲ್ಲಿ ಇದ್ದಾಗ ಆತ್ಮಗೌರವವು ಸ್ವಂತದ ಘನತೆಗಿಂತ ಹೆಚ್ಚು ಬೆಲೆಯುಳ್ಳದ್ದು. ಆದ್ದರಿಂದ ಕನಿಕರವು ಅತ್ಯಾಚಾರಕ್ಕಿಂತ ಹೀನಾಯವಾದದ್ದು ಮತ್ತು ಪ್ರತಿ ಮಹಿಳೆಯೂ ಕನಿಕರದೊಂದಿಗೆ ಸೆಣೆಸಬೇಕು. ಅದು ಸಾಮಾಜಿಕವಾಗಿ ರೂಪುಗೊಂಡಿರುವ ಧಾರ್ಮಿಕ ಸಂಘಸಂಸ್ಥೆಗಳ ರೂಪದಲ್ಲಿರಲಿ, ಇಲ್ಲಾ ವೈಯಕ್ತಿಕವಾಗಿ ಅಭಿವ್ಯಕ್ತಿಗೊಂಡ  ಉದಾರ ಮನಸ್ಕರ ಭಾವನೆಯಾಗಿರಲಿ, ಪುರುಷರವತಿಯಿಂದ ಬರುವ ಸಜ್ಜನಿಕೆಯ ಹಾರೈಕೆಗಳು, ಸಮಾಜದ (ಅಂದರೆ ಗಂಡಸಿನ) ಕ್ರೌರ್ಯದಿಂಡ ಹೆಂಗಸರನ್ನು ಪಾರುಗೊಳಿಸುವ ಹಾದಿಯಲ್ಲಿ ಸ್ವಲ್ಪಮಟ್ಟಿಗೆ ಏಳಿಗೆಯನ್ನು ಸಾಧಿಸಬಲ್ಲವು. ಇಂಡಿಯಾದಂಥ ದೇಶಗಳಲ್ಲಿನ ಸ್ತ್ರೀಯರ ಅಭದ್ರತೆಯ ಸಮಸ್ಯೆಗೆ ಇರುವ ಏಕೈಕ ಪರಿಹಾರವೆಂದರೆ- ಎಂದೂ ಹತ್ತಿಕ್ಕಲಾಗದ ಆತ್ಮಗೌರವದ ವಿವೇಕವನ್ನು ಅವರಲ್ಲಿ ಅರಳಿಸುವುದೇ ಆಗಿದೆ. ಅತ್ಯಾಚರಕ್ಕೆ ಒಳಗಾದ ಮಹಿಳೆಗೆ ನನ್ನ ಹಿತವಚನ ಇಷ್ಟೆ: “ಹತಾಶಲಾಗಬೇಡ! ನಿನ್ನ ಘನತೆಯ ಮೇಲೆ ದಾಳಿ ನಡೆದಾಗ ಕೂಡ ಆತ್ಮಗೌರವವನ್ನು ಕಾಯ್ದಿಟ್ಟುಕೋ”. ಎಲ್ಲ ಧರ್ಮಿಕ ಸಂಘಸಂಸ್ಥೆಗಳು ಸ್ತ್ರೀಸಂಕುಲವನ್ನು ವಿಮೋಚನೆಗೊಳಿಸುತ್ತವೆನ್ನುವುದು ಬೂಟಾಟಿಕೆ. ಅವು ಏನನ್ನೂ ಸಾಧಿಸಲಾರವು. ಆದರೆ, ಅವು ಕೀಳರಿಮೆಯ ಸ್ಥಿತಿಯನ್ನು ಇಮ್ಮಡಿಗೊಳಿಸುತ್ತವೆ. ಮತ್ತು ಸಾಮಾಜಿಕ ಹಾಗೂ ವೈಯಕ್ತಿಕ ವಕ್ರತೆಯನ್ನು ನಾಲ್ಮಡಿಗೊಳಿಸುತ್ತವೆ. ಹೆಣ್ಣಿನ ಜೊತೆ ಇರಬೇಕಾದ ರಕ್ಷಣಾಸ್ತ್ರ ಯಾವುದೆಂದರೆ, ಉಗುರುಗಳೋ ಹಲ್ಲುಗಳೋ ಅಲ್ಲ, ಪಿಸ್ತೂಲು ಕೂಡ ಅಲ್ಲ, ಆಕೆಯ ಬಳಿ ಇರಬೇಕಾದ್ದು ಅತ್ಯಂತ ತೀಕ್ಷ್ಣವಾದ ಆತ್ಮಗೌರವದ ಪ್ರಜ್ಞೆ. ಮಿಕ್ಕಿದ್ದೆಲ್ಲ ಅವಳಿಗೆ ತಂತಾನೇ ಸ್ಪಷ್ಟಗೊಳ್ಳುತ್ತದೆ. ಹೆಣ್ಣು ತನ್ನ ಹಕ್ಕುಗಳಿಗಾಗಿ ಹೋರಾಡಬೇಕು; ಅವಳ ಆಶ್ರಯದಾತರು ಆಕೆಯನ್ನು ಹೇಳಿದಂತೆ ಕೇಳುವ ಸ್ಥಿತಿಗೆ ನೂಕಿದ್ದಾರೆ.

ಆದರೆ ಈ ಸಮಾನತೆಯ ಗೀಳು, ನಿಜವಾದ ವ್ಯತ್ಯಾಸಗಳನ್ನು ಅರಿಯುವ ದಿಕ್ಕಿನಲ್ಲಿ ನಮ್ಮನ್ನು ಕುರುಡುಗೊಳಿಸಕೂಡದು. ‘ಶಾರೀರಿಕ ಮತ್ತು ಭೌತಿಕ ವ್ಯತ್ಯಾಸಗಳಿದ್ದೂ ಕೂಡ’ ಹೆಣ್ಣು ಗಂಡಿಗೆ ಸಾಮರ್ಥ್ಯಕ್ಕೆ ಅಳವಡಬಹುದಾದ್ದನ್ನೆಲ್ಲಾ ತಾನೂ ಮಾಡಬಲ್ಲಳು- ಎನ್ನುವುದು ಪ್ರಶ್ನಾರ್ಹವಾಗುತ್ತದೆ. ಶಾರೀರಿಕ ಮತ್ತು ಭೌತಿಕವಾದ ವ್ಯತ್ಯಾಸಗಳಿಂದಾಗಿ ಹೆಣ್ಣು ಹೆಣ್ಣೇ ಆಗಿದ್ದಾಳೆ. ಇವುಗಳಿಲ್ಲದಿದ್ದರೆ ಆಕೆ ಗಂಡೇ ಆಗಿರುತ್ತಿದ್ದಳು. ಮತ್ತು ಸಮಾನತೆಯ ಸಮಯೆಯು ತಂತಾನೇ ಪರಿಹಾರವಾಗುತ್ತಿತ್ತು. ಶಾರೀರಿಕ ಮತ್ತು ಭೌತಿಕ ವ್ಯತ್ಯಾಸಗಳನ್ನು ಒಮ್ಮೆ ಒಪ್ಪಿಕೊಂಡಲ್ಲಿ- ಈ ನಡುವೆ ಮಾನಸಿಕ ವ್ಯತ್ಯಾಸವು ಕೂಡಿಕೊಳ್ಳುತ್ತದೆ. ಮತ್ತು ಸ್ವಾಭಾವಿಕ ವ್ಯತ್ಯಾಸಗಳು ಅನಿವಾರ್ಯವಾಗಿ ಕಾಣಿಸಿಕೊಳ್ಳುತ್ತವೆ. ಹೆಣ್ಣು ಗಂಡಿಗಿಂತ ಬೇರೆಯೇ ಆಗಿದ್ದಾಳೆ. ವ್ಯತ್ಯಾಸಾತ್ಮಕ ನಡವಳಿಕೆಯು ಕೂಡ ಆಗ ತಾರ್ಕಿಕ ಪರಿಣಾಮವಾಗಿತ್ತದೆ. ಹೆಣ್ಣಿಗೆ ಸಂಬಂಧಿಸಿದ ಈ ವ್ಯತ್ಯಾಸಾತ್ಮಕ ನಡವಳಿಕೆಯು ಕೂಡ ಆಗ ತಾರ್ಕಿಕ ಪರಿಣಾಮವಾಗುತ್ತದೆ. ಹೆಣ್ಣಿಗೆ ಸಂಬಂಧಿಸಿದಂತೆ ಈ ವ್ಯತ್ಯಾಸಾತ್ಮಕ ಭಾವವು ಯಾವ ಬಗೆಯಲ್ಲಿ ರಾಜಕೀಯ ಮತ್ತು ಕಾನೂನು ಸಂಹಿತೆಗಳಲ್ಲಿ ಪ್ರತಿಫಲನಗೊಂಡಿದೆ ಎಂಬುದು ಸಂಪೂರ್ಣವಾಗಿ ಬೇರೆಯಾದ ಪ್ರಶ್ನೆಯಾಗಿದೆ; ಆದರೆ ಮೂಲಭೂತ ಸಂಗತಿ ಮಾತ್ರ ತಳ್ಳಿ ಹಾಕುವಂಥದಲ್ಲ.

ಹೆಣ್ಣು ಗಂಡಿಗಿಂತ ಬೇರೆಯಾಗಿದ್ದಾಳೆಂದು ನಾವು ಹೇಳಿದಾಗ- ಹೆಣ್ಣಿನಲ್ಲಿ ಕೀಳರಿಮೆಯ ಪ್ರಜ್ಞೆ ಮತ್ತು ಗಂಡಿನಲ್ಲಿ ಮೇಲರಿಮೆಯ ಪ್ರಜ್ಞೆ ವೃದ್ಧಿಗೊಂಡು, ವ್ಯತ್ಯಾಸವು ಗಂಡಿಗೆ ಅನುಕೂಲಕರವಾಗಿ ಹಾಗೂ ಹೆಣ್ಣಿಗೆ ಹಾನಿಕರವಾಗಿಯೂ ಪರಿಣಮಿಸಬಹುದು. ಗಂಡಿಗಿಂತ ತಾನು ಭಿನ್ನವಾಗಿರುವ ಬಗ್ಗೆ ಹೆಣ್ಣು ಏಕೆ ತಾನೆ ಗೊಣಗುಟ್ಟಬೇಕೆಂದು ನಾನು ಕೆಲವು ಸಲ ಸಿಟ್ಟಾಗಿ ಚಕಿತಗೊಂಡಿದ್ದೇನೆ! ಮಹಿಳೆಯು ನಿಜಕ್ಕೂ ತನ್ನ ಪುರುಷ ಜೋಡಿಗಿಂತಲೂ ಉತ್ತಮ ಜೀವಿಯೆಂಬುದನ್ನು ಸ್ವಲ್ಪಕಾಲಾನಂತರ ಮಾನವ ಚರಿತ್ರೆಯು ಸದ್ಯದಲ್ಲಿಯೆ ರುಜುವಾತುಪಡಿಸುತ್ತದೆ. ಯಾವ ಉತ್ಪ್ರೇಕ್ಷೆಯೂ ಇಲ್ಲದೆ ಹೇಳಬೇಕೆಂದರೆ, ತತ್ತ್ವಜ್ಞಾನಿ ಅಥವಾ ಕಲಾವಿದ ಹೀಗೆ ಕೆಲವು ವಿಷಯಗಳಲ್ಲಿ ಹೊರತಾಗಿ ಉಳಿದೆಲ್ಲ ಕಡೆಗಳಲ್ಲೂ ಗಂಡು ಹೆಣ್ಣಿಗಿಂತ ಕೆಳಮಟ್ಟದ ಜೀವಿಯಾಗಿದ್ದಾನೆಂದು ನಾನು ಈಗಾಗಲೇ ನಂಬಿದ್ದೇನೆ. ಮಿಲಿಟರಿ ಕಮ್ಯಾಂಡರ್ ಅಥವಾ ದಬ್ಬಾಳಿಕೆ ಅಧಿಕಾರಿಗಳಾಗಲು ಹೆಂಗಸರು ಹಾತೊರೆಯಬೇಕೇ? ಸಮಾಜದ ಈ ಕೀಳುಕಸುಬುಗಳಿಗೆ ಹೊಂದುವ ವಿಶೇಷ ಯೋಗ್ಯತೆಯನ್ನು ಅವರೇ ಪಡೆದಿರುವವರಾದರೆ ಇವುಗಳನ್ನು ಗಂಡುಕುಲಕ್ಕೇ ಯಾಕೆ ಬಿಟ್ಟುಕೊಡಬಾರದು? ಹೆಣ್ಣು ಔನ್ನತ್ಯದ ಗೆರೆಯನ್ನು ತಲುಪಿರುವ ತನ್ನ ಕ್ಷೇತ್ರಗಳಲ್ಲಿ, ಇನ್ನೂ ಚಿಂತನಶೀಲ ತತ್ತ್ವಶಾಸ್ತ್ರ ಮತ್ತು ನಾಟಕದ ರಚನೆಗೆ ಸಂಬಂಧಿಸಿದಂತೆ ತನ್ನ ಯೋಗ್ಯತೆಯನ್ನು ಪ್ರಕಟಿಸಿಲ್ಲ. ಈ ಸ್ಥಿತಿಯು ಅವಕಾಶದ ಕೊರತೆಯಿಂದ ಉಂಟಾದುದಲ್ಲ. ಮಹಿಳೆಯರಲ್ಲಿ ಉತ್ತಮ ಸಾಮಾಜಿಕ ಚಿಂತನಶೀಲರು ಮತ್ತು ಶ್ರೇಷ್ಠ ಕಾದಂಬರಿಕಾರ್ತಿಯರು ಇದ್ದಾರೆ. ಆದರೆ ಒಬ್ಬರಾದರೂ ಮಹಿಳಾ ತತ್ತ್ವಜ್ಞಾನಿಯನ್ನಾಗಲೀ  ಅಥವಾ ನಾಟಕಕರ್ತೃವನ್ನಾಗಲೀ ವಿಶ್ವದಾಖಲೆಯ ಮಟ್ತದಲ್ಲಿ ನೀವು ಕಾಣಲಾರಿರಿ. ಸಂಪೂರ್ಣ ವಾಸ್ತವಿಕತೆಯನ್ನು ಗ್ರಹಿಸಲಾಗದ ಹೆಣ್ಣಿನ ಮಾನಸಿಕ ಅಶಕ್ತತೆಯಿಂದಾಗಿ ಬಹುಶಃ ಈ ಸ್ಥಿತಿ ಉಂಟಾಗಿರಬಹುದು. ಆಕೆ ತನ್ನ ಚಿಂತನೆಯಲ್ಲಿ ಹೆಚ್ಚು ಸ್ವಂತದ್ದನ್ನು ಪರಿಭಾವಿಸುತ್ತಾಳೆ. ನಿಶ್ಚಯವಾಗಿಯೂ ಹೆಣ್ಣು ಗಂಡಿನೊಡನೆ ಅಸಂಗತವಾಗಿ ಸಮಾನತೆಯ ಮಾತನಾಡುತ್ತಾಳೆ. ಆಕೆಯು ತಾನು ತತ್ತ್ವಜ್ಞಾನಿ ಅಥವಾ ನಾಟಕಕರ್ತೃ ಆಗಬೇಕಾದ ಬಗ್ಗೆ ಯೋಚಿಸುವುದಿಲ್ಲ. ಆಕೆ ಕೇವಲ ಒಬ್ಬ ವ್ಯಾಪಾರಿ, ಒಬ್ಬ ದರ್ಪದ ಅಧಿಕಾರಿ, ಅಥವಾ ಒಬ್ಬ ಮಿಲಿಟರಿ ಆಫಿಸರ್ ಮಾತ್ರ ಆಗಲು ಬಯಸುತ್ತಾಳೆ! ಯಾವುದೇ ಮಹಿಳೆ ಅದನ್ನು ಅಲ್ಲಗಳೆಯಬಲ್ಲಳೆ? ಮಕ್ಕಳನ್ನು ಬೆಳೆಸುವ, ಶಾಲೆಯನ್ನು ನಡೆಸುವ ಅಥವಾ ಪ್ರನಾಳ ಪರೀಕ್ಷೆಯಂಥ ಕೆಲಸಗಳಿಗಿಂತಲೂ ಉತ್ತಮವಾದುದನ್ನು ಮಾಡಬಲ್ಲ ಸಾಮರ್ಥ್ಯವಿಲ್ಲದ ಆತ ಅಥವಾ ಆಕೆಯ ಹೊರತಾಗಿ, ಬುದ್ಧಿ ನೆಟ್ಟಗಿರುವ ಮತ್ತಾವ ಮಾನವಜೀವಿಯೂ ಈ ಬಗೆಯ ಕೆಲಸಕಾರ್ಯಗಳಿಗೆ ಆಸೆಪಡುವುದಿಲ್ಲ. ಹೆಣ್ಣು-ಗಂಡಿನ ನಡುವಣ ಮೂಲಭೂತ ವ್ಯತ್ಯಾಸಗಳನ್ನು ನಿರಾಕರಿಸುವಮಟ್ಟಿನ ಈ ಅಸಂಗತ ನಿಲುವನ್ನು ಹೆಣ್ಣಿನ ಕೇವಲ ಕೀಳರಿಮೆಯ ಪ್ರಜ್ಞೆಯು ಮಾತ್ರ ಹುಟ್ಟುಹಾಕಿದೆ.
(ಮುಂದುವರಿಯುತ್ತದೆ….)

ಹಿಚಿನ್ಸ್ ಹೇಳಿದ್ದು ಮತ್ತು ಬೀಚಿ ಭಯಾಗ್ರಫಿ- ಒಂದು ಗ್ರಹಿಕೆ

ಸುಪ್ರೀತ್ ಕೆ.ಎಸ್., ಇಂಜಿನಿಯರಿಂಗ್ ವಿದ್ಯಾರ್ಥಿ. ಈತನ ಓದು, ಗ್ರಹಿಕೆ, ನಿರೂಪಣೆ, ಚಿಂತನೆಗಳೆಲ್ಲವೂ ವಿಭಿನ್ನ ಮತ್ತು ಇವತ್ತಿಗೆ ಅಗತ್ಯವಿರುವಂತೆ ಆರೋಗ್ಯಕರ.  ಯಾವುದೊಂದು ಅತಿರೇಕದ ಹಂಗಿಲ್ಲದೆ ಓದುವವರು, ಬರೆಯುವವರು ಇಂದಿನ ತಲೆಮಾರಿಗೆ ಬೇಕಾಗಿದ್ದಾರೆ. ಈ ನಿಟ್ಟಿನಲ್ಲಿ ಹೊಮ್ಮುತ್ತಿರುವ ಬಹಳಷ್ಟು ಓದುಗ- ಬರಹಗಾರರಲ್ಲಿ ಸುಪ್ರೀತ್ ಒಬ್ಬನೆಂದು ಧಾರಾಳವಾಗಿ ಹೇಳಬಹುದು. ಈ ಹುಡುಗ ‘ಸಡಗರ’ ಎಂಬ ಪತ್ರಿಕೆಯನ್ನು ನಡೆಸುತ್ತಿದ್ದು, ಇಂದಿನ ಸಂದರ್ಭದಲ್ಲಿ ಆರಂಭಗೊಳ್ಳುವ ಎಲ್ಲ ಒಳ್ಳೆಯ ಪತ್ರಿಕೆಗಳೂ ಅಲ್ಪಾಯುಷಿಗಳು ಎಂಬುದನ್ನ ಸಾಬೀತು ಪಡಿಸಿದ್ದಾನೆ. ಅಂದರೆ- ನಿಲ್ಲಿಸಿದ್ದಾನೆ. ಪ್ರಸ್ತುತ, ಸುಪ್ರೀತ್ ಬೀಚಿಯವರ ‘ಭಯಾಗ್ರಫಿ’ ಓದಿ ಹಂಚಿಕೊಂಡ ಅನಿಸಿಕೆಗಳನ್ನ ಇಲ್ಲಿ ನೀಡಲಾಗಿದೆ.

ರುಜುವಾತು ಪಡಿಸಲು ಸಾಕಷ್ಟು ಸಾಕ್ಷಿಗಳು ಇಲ್ಲದ ಸಂದರ್ಭದಲ್ಲಿಯೂ ಒಂದು ಸಂಗತಿಯನ್ನು ಗಾಢವಾಗಿ ನಂಬುವುದಕ್ಕೆ ಶ್ರದ್ಧೆ ಎನ್ನುವರು. ಕೃಷ್ಣ ಎನ್ನುವ ಹತ್ತು ವರ್ಷದೊಳಗಿನ ಬಾಲಕ ತನ್ನ ಕಿರು ಬೆರಳಿನಲ್ಲಿ ಗೋವರ್ಧನ ಎನ್ನುವ ಹೆಸರಿನ ಬೆಟ್ಟವನ್ನು ಎತ್ತಿದ. ಅದರಡಿಯಲ್ಲಿ ಇಡೀ ಯಾದವರ ಊರು ಆಶ್ರಯವನ್ನು ಪಡೆದಿತ್ತು. ಈ ಪುರಾಣದ ಕತೆಯನ್ನು ಮನುಷ್ಯನ ಅದ್ಭುತ ಕಲ್ಪನೆಯ ಸೃಷ್ಟಿಯಾಗಿ, ಒಂದು ಪ್ರತಿಮೆಯಾಗಿ, ಸಂಕೇತವಾಗಿ ಒಪ್ಪಿಕೊಳ್ಳುವುದರಲ್ಲಿ ಯಾವ ತಪ್ಪೂ ಇಲ್ಲ. ಆದರೆ ಇದನ್ನು ಅಕ್ಷರಶಃ ಸತ್ಯವೆಂದು ಯಾವ ಸಾಕ್ಷಿಯೂ ಇಲ್ಲದೆ ನಂಬುವುದು ಶ್ರದ್ಧೆ ಎನ್ನಿಸಿಕೊಳ್ಳುತ್ತದೆ.

 ನಮ್ಮ ಬಹುಪಾಲು ಧಾರ್ಮಿಕ ನಂಬಿಕೆಗಳು ಇಂಥವೇ. ಧರ್ಮ, ದೇವರ ಬಗೆಗೆ ‘ಗಾಡ್ ಈಸ್ ನಾಟ್ ಗ್ರೇಟ್’ ಎಂಬ ಪುಸ್ತಕ ಬರೆದಿರುವ ಕ್ರಿಸ್ಟೋಫರ್ ಹಿಚಿನ್ಸ್ ಒಂದು ಕಡೆ ಹೀಗನ್ನುತ್ತಾನೆ. “ಒಳ್ಳೆಯ ಜನರು ಒಳ್ಳೆಯ ಕೆಲಸಗಳನ್ನು ಮಾಡುತ್ತಾರೆ. ಕೆಟ್ಟವರು ಕೆಟ್ಟ ಕೆಲಸಗಳನ್ನು ಮಾಡುತ್ತಾರೆ. ಆದರೆ ಒಳ್ಳೆಯವ ಜನರ ಕೈಲಿ ಕೆಟ್ಟ ಕೆಲಸವನ್ನು ಮಾಡಿಸಲಿಕ್ಕೆ ಧರ್ಮ ಬೇಕು”.

ಈ ವಿಷಯ ನೆನಪಿಸಿಕೊಳ್ಳಲಿಕ್ಕೆ ಕಾರಣವಾದದ್ದು ನಾನು ಇತ್ತೀಚೆಗೆ ಓದುತ್ತಿರುವ ಬಿಚಿಯವರ ಆತ್ಮಕತೆ ‘ನನ್ನ ಭಯಾಗ್ರಫಿ’ಯಲ್ಲಿನ ಒಂದು ಘಟನೆ. ಬೀಚಿಯವರ ಹೆಂಡತಿ ಸಂಪ್ರದಾಯಬದ್ಧವಾದ ಮಾಧ್ವ ಬ್ರಾಹ್ಮಣರ ಮನೆಯ ಹೆಣ್ಣು. ಬೀಚಿ ತುಂಬಾ ಚಿಕ್ಕ ವಯಸ್ಸಿನಲ್ಲೇ ದೇವರು, ದಿಂಡಿರು, ಜಾತಿಗಳ ಗೊಡವೆಯನ್ನು ತೊರೆದವರು. ಬೀಚಿಯವರ ಮನೆಗೆ ವಾರನ್ನಕ್ಕಾಗಿ ಒಬ್ಬ ಹುಡುಗ ಬರುತ್ತಿರುತ್ತಾನೆ. ಒಮ್ಮೆ ಆತ ಮನೆಗೆ ಬಂದಾಗ ಜ್ವರವಿರುವುದನ್ನು ಕಂಡು ಆತನನ್ನು ತಮ್ಮ ಮನೆಯಲ್ಲಿ ಹದಿನೈದು ದಿನಗಳ ಕಾಲ ಇಟ್ಟುಕೊಂಡು ಆರೈಕೆ ಮಾಡುತ್ತಾರೆ. ಆತ ಬ್ರಾಹ್ಮಣರಲ್ಲೇ ಸ್ಮಾರ್ತ ಪಂಗಡದ ಹುಡುಗ ಎಂದು ತಿಳಿದಾಗ ಅದುವರೆಗೆ ಅತಿ ಮಮತಾಮಯಿಯಾಗಿದ್ದ ಬೀಚಿಯವರ ಹೆಂಡತಿ ಸಿಡಿಮಿಡಿಗುಟ್ಟುತ್ತಾರೆ. ಆ ಹುಡುಗನ ತಂದೆ ತೀರಿಕೊಂಡಾಗ ಆತ ಬೀಚಿಯವರಿಗೆ ಪತ್ರವೊಂದನ್ನು ಬರೆದು ‘ಇನ್ನು ತನಗೆ ನೀವೇ ತಂದೆ’ ಎಂದು ಹೇಳಿದ್ದನ್ನು ಓದಿದಾಗ ಬೀಚಿ ಹಾಗೂ ಅವರ ಮಡದಿ ಇಬ್ಬರೂ ಕಣ್ಣೀರು ಸುರಿಸುತ್ತಾರೆ. ಆದರೆ ಮರುಘಳಿಗೆಯೇ ಬೀಚಿಯವರ ಮಡದಿ, “ಆ ಹುಡುಗ ಕರ್ಮ ಮಾಡಿ ಸೀದ ನಮ್ಮ ಮನೆಗೆ ಬಂದರೆ ಹ್ಯಾಗ್ರೀ? ಉತ್ತರಕ್ರಿಯೆ ಮಾಡಿದವರು ವರ್ಷದ ತನಕ ಬರಬಾರದು” ಎನ್ನುತ್ತಾರೆ. ಬೀಚಿ: “ಬಂದರೇನಾಗ್ತದೆ?” “ಬಂದರೇನಾಗ್ತದೆ! ಮಕ್ಕಳೂ, ಮರಿ ಇರೋ ಮನಿ, ನಮಗೆ ಅರಿಷ್ಟ ಬಡೀತದೆ” “ನಿನಗೆ ಬುದ್ಧಿ ಇದೆಯೇ? ನೀನು ಮನುಷ್ಯಳೇನೆ? ತಂದೆ ಸತ್ತ ಹುಡುಗ, ಮೇಲೆ ನಿರ್ಗತಿಕ, ನೀವೇ ತಂದೆ ಎಂದು ಬರೆದಾನೆ, ನಾನವನ್ನ ಹೋಗೂ ಅನ್ನಲಾ? ಅವನು ಎಲ್ಲಿಗೆ ಹೋಗಬೇಕು?” “ಬ್ಯಾರೆ ಇನ್ಯಾರ ಮನಿಗಾದರೂ ಹೋಗಲಿ. ನಮಗೇನು ಬಂಧು ಅಲ್ಲ, ಬಳಗ ಅಲ್ಲ. ನಮಗೂ ಎರಡು ಮಕ್ಕಳಿವೆ. ಅವಕ್ಕೇನಾದರೂ ಕಂಣೇ ನೋಯಲಿ, ಮೂಗೇ ನೋಯಲಿ…”

ಈ ಘಟನೆಯನ್ನು ಅವಲೋಕಿಸಿದರೆ ಬೀಚಿಯವರ ಮಡದಿ, ತಾಯಿಯೊಬ್ಬಳಿಗೆ ಸಹಜವಾದ ಮುತುವರ್ಜಿಯನ್ನು ತೋರಿದ್ದು ಕಾಣುತ್ತದೆ. ತನ್ನ ಮಕ್ಕಳ ನೆಮ್ಮದಿಯನ್ನು, ರಕ್ಷಣೆಯನ್ನು ಆಕೆ ಪ್ರಥಮ ಆದ್ಯತೆಯಾಗಿ ಕಂಡಿದ್ದು ಕಾಣುತ್ತದೆ. ಆದರೆ, ಸಾಮಾನ್ಯವಾಗಿ ಮಮತಾಮಯಿಯಾದ, ಪರರ ಕಷ್ಟಕ್ಕೆ ಕಣ್ಣೀರುಗರೆಯುವ, ತನ್ನ ಕೈಲಾದ ನೆರವನ್ನು ನೀಡಲು ಸಿದ್ಧಳಾದ ಹೆಣ್ಣು ತನ್ನ ಶ್ರದ್ಧೆಯಿಂದಾಗಿ ಹಠಮಾರಿಯಾಗುವುದು, ಕೆಲವು ಅತಿರೇಕದ ಘಟನೆಗಳಲ್ಲಿ ಸ್ಕೀಝೋಫ್ರೇನಿಕ್ ಆಗಿ ವರ್ತಿಸುವುದು – ಇವಕ್ಕೆಲ್ಲಾ ಧಾರ್ಮಿಕ ಶ್ರದ್ಧೆಯೇ ಕಾರಣ.

ಇದೇ ಘಟನೆಯ ಮುಂದುವರೆದ ಭಾಗದಲ್ಲಿ ಒಂದು ಸಣ್ಣ ತಿರುವು ಎದುರಾಗುತ್ತದೆ. ತಂದೆಯಿಲ್ಲದ ಮಗನನ್ನು ಮನೆಯವರೆಲ್ಲರ ವಿರೋಧದ ನಡುವೆಯೂ ತಮ್ಮ ಜೊತೆ ಇಟ್ಟುಕೊಂಡು ಬೀಚಿ ಸಾಕುತ್ತಾರೆ. ಒಮ್ಮೆ ಆ ಹುಡುಗ ಮನೆಗೆ ಹೋಗುವ ಹಿಂದಿನ ದಿನ ರೇಷನ್ ಅಂಗಡಿಯಿಂದ ತನ್ನ ಊರಿಗೆ ಒಯ್ಯುವುದಕ್ಕಾಗಿ ಕೆಲವು ಸಾಮಾನುಗಳನ್ನು ತಂದಿಟ್ಟುಕೊಂಡಿರುತ್ತಾನೆ, ಬೀಚಿಯವರ ಪೆನ್ನು, ಪುಸ್ತಕಗಳು, ಅವರ ಮ್ಮಕಳ ಶೂಗಳನ್ನೆಲ್ಲ ಕದ್ದು ತನ್ನ ಬ್ಯಾಗಿನಲ್ಲಿ ತುಂಬಿಸಿಕೊಂಡಿರುತ್ತಾನೆ. ಆ ಹುಡುಗನ ಕಳ್ಳತನ ಬೆಳಕಿಗೆ ಬಂದಾಗ ಬೀಚಿಯವರು ನಿರ್ದಾಕ್ಷಿಣ್ಯವಾಗಿ ಆತನನ್ನು ಮನೆಯಿಂದ ಹೊರಗೆ ಹಾಕುತ್ತಾರೆ. “ಮಗನಂತೆ ನಿನ್ನನ್ನು ನೋಡಿಕೊಂಡು ಈಗ ಮಗನನ್ನು ಮನೆಯಿಂದ ಹೊರಗೆ ಹಾಕಿದಂತೆಯೇ ಹಾಕುತ್ತಿರುವೆ” ಎಂದು ಕಡ್ಡಿ ತುಂಡು ಮಾಡಿದಂತೆ ಹೇಳುತ್ತಾರೆ. ಆದರೆ ಆಗ ಅವರ ಮಡದಿ ಹುಡುಗನ ಅಪರಾಧವನ್ನು ಕ್ಷಮಿಸುವಂತೆ ಬೀಚಿಯವರಿಗೆ ವಿನಂತಿಸುತ್ತಾರೆ. ಸಣ್ಣ ಹುಡುಗ ಮಾಡಿದ ತಪ್ಪು, ಮರೆತು ಬಿಡಿ, ಅವನನ್ನು ಮನೆಯಿಂದ ಹೊರಗೆ ಹಾಕಿದರೆ ಆತ ಎಲ್ಲಿಗೆ ಹೋದಾನು ಎಂದು ಕನಿಕರಿಸುತ್ತಾರೆ! ಅವರ ತಾಯಿ ಹೃದಯ ಸಹಜವಾಗಿ ಆ ಹುಡುಗನಿಗಾಗಿ ಮಿಡಿಯುತ್ತದೆ.

ನಿಜ, ಹಿಚಿನ್ಸ್ ಗಮನಿಸಿದ್ದು ಸರಿ ಎನ್ನಿಸುತ್ತದೆ!

ಡಿ.ಆರ್.ಪರಿಚಯಿಸಿದ ರೂಮಿ

ಬಹಳ ದಿನಗಳಾಯ್ತು ಡಿ.ಆರ್.ರನ್ನು ನೆನೆಸಿಕೊಳ್ಳದೆ. ಈಗ ರೂಮಿಯೊಂದಿಗೆ ಮತ್ತೆ ಅವರನ್ನು ಓದಿಕೊಳ್ಳುವ ಉಮ್ಮೇದು. ಇಲ್ಲಿದನ್ನು ‘ಸಂಸ್ಕೃತಿ ಕಥನ’ದಿಂದ ಎತ್ತಿ ತರಲಾಗಿದೆ. ಮೂಲತಃ ಲಂಕೇಶ್ ಪತ್ರಿಕೆಗಾಗಿ ಬರೆದ ಲೇಖನವಿದು. ಅಂದ ಹಾಗೆ, ಈ ಲೇಖನದ ಮುಂದುವರಿಕೆಯಾಗಿ ‘ಅಲೆಮಾರಿಯ ಹಂಬಲ’ ಎನ್ನುವ ರೂಮಿ ಪದ್ಯದ ಅನುವಾದವೂ ಇದೆ. ಅದನ್ನು ಮುಂದೆ ಪ್ರಕಟಿಸಲಾಗುವುದು.

ಬೆತ್ತಲಾಗು ನೀನು ಎಂದ ಜಲಾಲುದ್ದೀನ ರೂಮಿ

~ ಡಿ.ಆರ್. ನಾಗರಾಜ್

ಜಗತ್ತಿನ ಅತ್ಯಂತ ದೊಡ್ಡ ಕವಿಗಳಲ್ಲಿ ಒಬ್ಬನಾದ ಜಲಾಲುದ್ದೀನ್ ರೂಮಿ ಕ್ರಿ.ಶ. 1207ರಲ್ಲಿ ಬಾಲ್ಕ್ ಎಂಬಲ್ಲಿ ಹುಟ್ಟಿದವನು. ಈಗ ಅದು ಆಫ್ಘಾನಿಸ್ಥಾನದ ಗಡಿ ಪ್ರದೇಶ. ಏಶ್ಯಾಟಿಕ್ ಟರ್ಕಿಯಲ್ಲಿ 1273ರಲ್ಲಿ ಸತ್ತ.  ಸಾಯುವ ಹೊತ್ತಿಗೆ ಪರ್ಶಿಯನ್ ನಗರಿಕತೆಯ ಅತ್ಯುತ್ತಮ ಕವಿ ದರ್ಶನಿಕರಲ್ಲಿ ಒಬ್ಬನಾಗಿದ್ದ.

ರೂಮಿಯ ಜೀವನ ಅನೇಕ ತಲ್ಲಣಗಳಿಂದ, ಎದೆಯೊಡೆಯುವ ಹುಡುಕಾಟಗಳಿಂದ ಕೂಡಿದೆ. ಮೂವತ್ತಮೂರನೆ ವಯಸಿಗೆ ಅತ್ಯಂತ ದೊಡ್ಡ ದಾರ್ಶನಿಕ, ಅಧ್ಯಾಪಕನೆಂದು ಕೀರ್ತಿ ಗಳಿಸಿದ್ದ ವ್ಯಕ್ತಿ ರೂಮಿ. ದೊರೆಗಳು, ವರ್ತಕರು, ಪ್ರತಿಷ್ಟಿತರೆಲ್ಲ ಅವನ ಉಪನ್ಯಾಸಗಳಿಗೆ ಹತೊರೆಯುತ್ತಿದ್ದರು. ಈ ಎಲ್ಲ ಕೀರ್ತಿ ಅವನಿಗೆ ಒಮ್ಮೆಲೆ ವಾಕರಿಕೆ ತರಿಸಿತು. ಮೂವತ್ತೆಂಟನೆ ವಯಸಿನಲ್ಲಿ ತನ್ನೆಲ್ಲ ಕೀರ್ತಿ, ಗೌರವಗಳ ವಿರುದ್ಧವೇ ತಿರುಗಿಬಿದ್ದ. ತನ್ನ ಪ್ರಸಿದ್ಧಿಯ ಭಾರವೇ ಅವನಿಗೆ ತಡೆಯಲಾಗದೆ ಹೋಯಿತು. ಸಾಂಪ್ರದಾಯಿಕ ಮೌಲ್ಯಗಳ ಚೌಕಟ್ಟಲ್ಲೆ ವಿಜೃಂಭಿಸುವುದರಿಂದ ಮಾತ್ರ ತನ್ನ ಸುತ್ತ ಕೀರ್ತಿಯ ಜೇಡರಬಲೆ ಹಬ್ಬುತ್ತಿದೆ ಎಂದು ಅವನಿಗೆ ಖಾತ್ರಿಯಾಯ್ತು. ಕೀರ್ತಿ ಸುತ್ತ ಬೆಳೆದಷ್ಟು ಆತ ಒಳಗೊಳಗೆ ದಿಗ್ಭ್ರಾಂತನಾದ. ಅತೃಪ್ತಿಯಿಂದ ಕುದಿಯತೊಡಗಿದ. ಸಾಂಪ್ರದಯಿಕ ಜೀವನದಲ್ಲಿ ಮುಳುಗುವುದೇ ಮೃತ್ಯು ಎನಿಸಿ ಅದರಾಚೆಗೆ ಹಾರಲು ಒದ್ದಾಡತೊಡಗಿದ. ಅಧ್ಯಯನ, ಅಧ್ಯಾಪನಗಳಿಂದ ಕ್ರಿಯೆ ಮತ್ತು ಅನುಭವಗಳು ಅವನಿಗೆ ವಿಶೇಷ ಆಕರ್ಷಣೆಯಾಗಿ ಕಾಣತೊಡಗಿದವು. ಒಬ್ಬ ಅತ್ಯುತ್ತಮ ದಾರ್ಶನಿಕ- ಅಧ್ಯಾಪಕ ತನ್ನ ಕಸುಬಿನಿಂದಲೇ ತಪ್ಪಿಸಿಕೊಳ್ಳಬಯಸಿದ.

                                       :sOgemane:
 

 

 

ಈ ಹುಡುಕಾಟದಲ್ಲಿ ಅವನ ಆಂತರಿಕ ಜೀವನ ಕೂಡ ಪೂರಾ ಬದಲಾಗಿಬಿಟ್ಟಿತು. ಆತ ತನ್ನ ಅದುವರೆಗಿನ ಶಿಕ್ಷಣ ಮತ್ತು ಸಾಧನೆಗಳ ವಿರುದ್ಧವೇ ಬಂಡೆದ್ದ. ಸೂಫಿ ಅನುಭವಕ್ಕಾಗಿ ಅನೇಕ ಪ್ರಯಾಣಗಳನ್ನು ಮಡಿ ವಾಪಸಾದ. ಈ ಗೊಂದಲದ, ತೀವ್ರ ಹುಡುಕಾಟದ ದಿನಗಳಲ್ಲೇ ಒಬ್ಬ ಸೂಫಿ ಗುರು ಶಂಸ್ ತಬೀಜ್ ಎಂಬಾತನನ್ನು ಭೇಟಿಯಾದ. ಆ ಭೇಟಿ ಒಂದು ಮಹಾನ್ ಸಂಬಂಧದ ಯಾತ್ರೆಯಾಗಿಬಿಟ್ಟಿತು. ದಟ್ಟ ಪ್ರೇಮದ, ದಟ್ಟ ಜ್ಞಾನದ, ದಟ್ಟ ಯಾತನೆಯ, ದೊಡ್ಡ ಸಂಭ್ರಮ ಅದು. ಒಂದು ಮತ್ಟದಲ್ಲಿ ತಬ್ರೀಜ್- ರೂಮಿಯ ಸಂಬಂಧ ಎಲ್ಲ ದೊಡ್ಡ ಸಂಬಂಧಗಳ ಪ್ರತೀಕ. ಅದು ಅಂತಿಮವಾಗಿ ಲಿಂಗ ವ್ಯತ್ಯಾಸಗಳು ಮರೆಯಾಗುವ ರೀತಿಯದು. ಈ ರೀತಿಯ ಸಂಬಂಧಕ್ಕೆ ಮುಜುಗರಪಟ್ಟುಕೊಂಡರೆ ಇದನ್ನು ಸಾಂಪ್ರದಾಯಿಕ ಅರ್ಥದ ಗಮ್ಡು- ಹೆಣ್ಣಿನ ಸಂಬಂಧ ಎಂದರೂ ನಡೆದೀತು. ತನ್ನ ಪ್ರೇಮಿ- ಗುರುವಿನ ಮೇಲೆ ರೂಮಿ 2,500 ಪದ್ಯಗಳ ದಿವಾನ್- ಎ- ಶಂಸ್ ಎಂಬ ಕೃತಿಯನ್ನೇ ಬರೆದ. ಪ್ರೇಮ- ಜ್ಞಾನಗಳೆರಡೂ ಒಂದೇ ಆಗುವ ಸಂಬಂಧ ಅದು. ಆ ಬಗ್ಗೆ ರೂಮಿ ಹೀಗೆ ಹೇಳಿದ- “ನನ್ನ ಒಳ ಮನಸ್ಸಿನ ಸಮುದ್ರದಿಂಡ ತಬ್ರೀಜ್ (ಶಂಸ್‌ನವನು) ನನ್ನನ್ನು ಹೊರಗೆಳೆದ. ಆಗ ಬೆಳಕಿನ ಮಹಾ ಶರೀರವೆದ್ದಿತು. ಶಾಂಸ್‌ನ ತಬ್ರೀಜ್ ಕಣ್ಣಿನ ಬೆಳಕಾದ. ತರ್ಕದ ಸ್ಪಷ್ಟತೆಯಾದ. ಆತ್ಮದ ಪ್ರಖರ ಕಾಂತಿಯಾದ. ಆತ ನನ್ನ ಎಲ್ಲ ಸಂತೋಷಗಳ ಅಂತಿಮ ರೂಪವಾದ.

ಇದರಿಂದ ಉನ್ಮತ್ತನಾದ ರೂಮಿ, ಗೌರವಾರ್ಹ ಪ್ರಾಧ್ಯಾಪಕ ರೂಮಿ, ‘ಸಮಾ’ ಎಂಬ ಕುಣಿತ, ಹಾಡುಗಳ ಕೂಟವನ್ನೇ ಕಟ್ಟಿದ. ತಾಪಸರು ತಪಗುಟ್ಟಿ ಜಿನುಗಿದರೆ ಜನ ಸಹಿಸಬಲ್ಲರು. ಜ್ಞಾನಿಗಳು ಹಾಗೆಯೇ ಇರಬೇಕು. ಆದರೆ ಹುಚ್ಚು ಹರೆಯದವರ ಹಾಗೆ ಒಬ್ಬ ಮಧ್ಯವಯಸ್ಕ ಗುರು ಕುಣಿದರೆ? ಆದರೂ ಹಳೆಯ ಗೌರವದಿಂದ ಸುಮ್ಮನಿದ್ದರು. ಆದರೆ, ತಬ್ರೀಜನ ಸ್ನೇಹದಿಂದ ಉಳಿದ ಲೋಕದಿಂದ ರೂಮಿ ದೂರವಾಗತೊಡಗಿದ. ಇದಕೆಲ್ಲ ತಬ್ರೀಜ್ ಕಾರಣ ಎಂದು ರೂಮಿಯ ಹಳೆಯ ಅಭಿಮಾನಿ ಗಣ ಉರಿದುಬಿದ್ದಿತು. ಅವರ ಕೋಪ ಶಂಸ್‌ನ ಮೇಲೆ ತಿರುಗಿತು. ಒಂದು ದಿನ ಶಂಸ್ ತಬ್ರೀಜ್ ಕಾಣೆಯಾದ. ರೂಮಿಗೆ ತನ್ನ ಪ್ರೇಮ ಮೂಲ ಕಣ್ಮರೆಯಾದಂತೆ, ಜ್ಞಾನ ಮೂಲ ಕಣ್ಮರೆಯಾದಂತೆ ಅನಿಸಿ ಅನಾಥನಾಗಿಬಿಟ್ಟ. ದುಃಖಮೂಲ ಮಾತ್ರ ಉಳಿದು ಹಗಲು ರಾತ್ರಿಗಳು ಹಾಡಿದ, ಕುಣಿದ, ಹುಚ್ಚನಂತಾದ. ತಬ್ರೀಜ್‌ನನ್ನು ಹುಡುಕುತ್ತ ಎಲ್ಲವನ್ನು ಬಿಟ್ಟು ಕಣ್ಮರೆಯಾದ. ತಬ್ರೀಜ್ ಡೆಮಾಸ್ಕಸ್‌ನಲ್ಲಿದ್ದಾನೆಂದು ಹುಡುಕುತ್ತ ಅಲ್ಲಿಗೂ ಹೋದ. ಆದರೆ, ತಬ್ರೀಜ್ ಎಲ್ಲ ಘನ ಪ್ರೇಮದ ಹಾಗೆ ಅಲೆಮಾರಿಯ ಪ್ರತೀಕ. ರೂಮಿ ತನ್ನ ಸೃಜನಶೀಲ ತೀವ್ರತೆಗಳ ಶಿಖರ ಮುಟ್ಟೀದ್ದು ಈ ದಿನಗಳಲ್ಲೇ.

ಅಲೆಮಾರಿಗಾಗಿ ಹಂಬಲಿಸಿ ವಿಹ್ವಲನಾಗಿ ತನ್ನ ಅತ್ಯುತ್ತಮ ಕಾವ್ಯವನ್ನು ರೂಮಿ ಸೃಷ್ಟಿಸಿದ. ಇದರಲ್ಲಿ ಪ್ರೇಮವೆಂಬ ಬೆಂಕಿ ಎಷ್ಟು? ದಾರ್ಶನಿಕ ಅನುಭವವೆಂಬ ಬೆಳಕು ಎಷ್ಟು? ಎಂದು ಬಿಡಿಸಿ ಹೇಳುವುದೇ ಕಷ್ಟ. ಸಂಪ್ರದಾಯವೆಂಬ ಗೋಡೆ ಹಾರಲು ತವಕಿಸುವ ಮನಸುಗಳಿಗೆ ಇದೊಂದು ರೆಕ್ಕೆ. ಎಲ್ಲ ದೊಡ್ಡ ಮಧುರ ಪ್ರೇಮದ ಗರ್ಭದಲ್ಲೇ ಕಟುವಿರಹವೂ ಇರುತ್ತದೆಂಬ ಅನುಭವವನ್ನು ಈ ಕವಿತೆಗಳು ಹೃದಯಸ್ಪರ್ಶಿಯಾಗಿ ಹೇಳುತ್ತವೆ ಮತ್ತು ಅಂತಿಮವಾಗಿ ಆ ಪ್ರಯಾಣದಲ್ಲಿ ದೊಡ್ಡ ಜ್ಞಾನವೂ ಹುಟ್ಟುತ್ತದೆ.

ಕಾರಂತ, ಸಾಂಕೃತ್ಯಾಯನ ಮತ್ತು ದಿಲ್ಲಿ ರಾಜಕೀಯ!

ಕಾರಂತರಹುಚ್ಚು ಮನಸ್ಸಿನ ಹತ್ತು ಮುಖಗಳುಕೃತಿಯನ್ನು ನಾನು ಆಗೀಗ ಮತ್ತೆ ಮತ್ತೆ ತಿರುವಿ ಹಾಕೋದಿದೆ. ಮಹಾಪ್ರತಿಭೆಯ ಜೀವನ ವಿವರಗಳೇ ಎಷ್ಟೋ ಬಾರಿ ಹುಮ್ಮಸ್ಸು ತುಂಬುತ್ತವೆ. ಹೀಗೆ ಮೊನ್ನೆ ಕೊನೆಪುಟಗಳಿಂದ ಓದತೊಡಗಿದಾಗ ನನ್ನನ್ನು ಹಿಡಿದಿಟ್ಟಿದ್ದು ರಾಹುಲ ಸಾಂಕೃತ್ಯಾಯನರು. ನನ್ನ ಹದಿವಯಸಿನ ದಿನಗಳಲ್ಲಿ ಯೋಚನಾಕ್ರಮವನ್ನೇ ಬದಲಿಸಿದ, ಪ್ರಾಶ್ನಿಕ ಬುದ್ಧಿಯನ್ನು ಮೊನಚುಗೊಳಿಸಿದವರು ಸಾಂಕೃತ್ಯಾಯನರು, ಅವರ ವೋಲ್ಗಾ ಗಂಗಾ ಮೂಲಕ. ಇಡಿಯ ಕೃತಿಯ ಕಥನಕ್ರಮ, ಧಾಟಿ, ಪ್ರತಿ ವಾಕ್ಯದಲ್ಲೂ ಕ್ರಾಂತಿಕಾರಿ ಚಿಂತನೆಗಳಿವೆ. ಬಿಡಿಬಿಡಿಯಾಗಿ ಪ್ರತ್ಯೇಕ ಕಥೆಗಳನ್ನು ಒಳಗೊಂಡ ಕೃತಿ ಇಡಿಯಾಗಿ ಒಂದು ಕಾದಂಬರಿಯಂತೆ, ಅವೆಲ್ಲ ಅದರ ಅಧ್ಯಾಯಗಳೆನ್ನುವಂತೆಯೂ ಇದೆ.

ಇರಲಿ. ಇಲ್ಲಿ ಪ್ರಸ್ತುತ ಪಡಿಸಹೊರಟಿರೋದು ಕಾರಂತರು ಸಾಂದರ್ಭಿಕವಾಗಿ ದಿಲ್ಲಿ ರಾಜಕೀಯದ ಬಗ್ಗೆ ಮಾತನಾಡುತ್ತ ಸಾಂಕೃತ್ಯಾಯನರ ಬಗ್ಗೆ ಹೇಳಿರೋದನ್ನ. ಅದು ಹೀಗಿದೆ….

ದಿಲ್ಲಿಯ ವಿಚಿತ್ರ ಅನುಭವ (ಹುಚ್ಚು ಮನಸಿನ ಹತ್ತು ಮುಖಗಳು, ಅಧ್ಯಾಯ– 44)

ದಿಲ್ಲಿ ಚಲೋ

ಹಲವಾರು ಶತಮಾನಗಳಿಂದ ಭಾರತದಲ್ಲಿ ದೇಶದ ರಾಜಕೀಯ ಕೇಂದ್ರವಾಅಗಿ ಬಂದ ಇತಿಹಾಸ ಪ್ರಸಿದ್ಧವಾದ ಇಂದ್ರಪ್ರಸ್ಥವೇ ದಿಲ್ಲಿ. ನನ್ನ ಒಂದು ನಾಟ್ಯರೂಪ ಚಿತ್ರದಲ್ಲಿ ಅದನ್ನು ನಾನುಸಾಮ್ರಾಜ್ಯಗಳ ಮಸಣಎಂದು ಸಂಬೋಧಿಸಿದ್ದುಂಟು. 1911ರಲ್ಲಿ ನಾನು ಪ್ರಾಥಮಿಕ ಶಾಲೆಯ ಐದನೇ ತರಗತಿಯಲ್ಲಿ ಓದುತ್ತಿದ್ದಾಗ ನವೆಂಬರ್ ಹನ್ನೊಂದರಂದು ಉಪಾಧ್ಯಾಯರು ನನಗೊಂದು ನಿಕ್ಕಲ್ ಪದಕ ಕೊಟ್ಟ ನೆನಪಿದೆ. ದಿನ ದಿಲ್ಲಿಯಲ್ಲಿ ಪಂಚಮ ಜಾರ್ಜ್ ಚಕ್ರವರ್ತಿಯ ಪಟ್ಟಾಭಿಷೇಕ ನಡೆಯಿತು. ನನಗೆ ನೀಡಿದ ಪದಕ ಪಟ್ಟಾಭಿಷೇಕದ ಸ್ಮಾರಕ. ಇದನ್ನು ನಾನು ನನ್ನ ಆತ್ಮಕಥನದಲ್ಲಿ ನೆನೆದಿದ್ದೆ. ಮುಂದೆ ನಾನು ಬೆಳೆದು ದೊಡ್ಡವನಾದಂತೆ, ಒಂದಷ್ಟು ಹೆಸರೂ ಪಡೆದಂತೆ, ಒಂದಲ್ಲ ಒಂದು ನೆವದಿಂದ ದೆಲ್ಲಿಗೆ ಹೋಗಿಬರುತ್ತಿದ್ದೆ. ಅದುದಿಲ್ಲಿ ಚಲೋನೆಪ ಅಲ್ಲ. ಅಲ್ಲಿ ನಡೆಯುವ ಒಂದಲ್ಲ ಒಂದು ಕಲೆ, ಸಾಅಹಿತ್ಯ, ಸಂಸ್ಕೃತಿ ಸಂಘಗಳ ಆಮಂತ್ರಣಗಳನ್ನು ಮನ್ನಿಸಿ ಹೋಗಿಬರುತ್ತಿದ್ದೆ. ಅಲ್ಲಿನ ಎರಡು ಅಕಾಡೆಮಿಗಳು ನನಗೆ ಫೆಲೋಷಿಪ್ ನೀಡಿವೆ. ಅದೇ ದಿಲ್ಲಿ ರಾಷ್ಟ್ರಧಾನಿ ಆದಂತೆ, ವಿದೇಶಿಗಳ ಪಾಲಿಗೆ ರಾಜಕೀಯ ಕೇಂದ್ರವೂ ಆಗಿದೆ. ಅವನ್ನು ಬಣ್ಣಿಸುವುದಕ್ಕಾಗಿ ಅಧ್ಯಾಯವನ್ನು ತೊಡಗಿಲ್ಲ; ಇಲ್ಲಿನ ರಾಜಕೀಯ ಎಂಥದೆಂದು ತಿಳಿಸಲು ಅಧ್ಯಾಯವನ್ನು ಬರೆಯುತ್ತಿದ್ದೇನೆ.

 ರಾಹುಲ ಸಾಂಕೃತ್ಯಾಯನರು

ಒಂದು ದಿನ 1983 ಏಪ್ರಿಲ್ ತಿಂಗಳಲ್ಲಿ ನನ್ನನ್ನು ಸರಕಾರದ ಸಂಸ್ಕೃತಿ ಇಲಾಖೆಯವರು ದಿಲ್ಲಿಗೆ ಆಮಂತ್ರಿಸಿದರು. ಭಾರತ, ವಿಶಾಲಭಾರತ ಪ್ರಸಿದ್ಧಿಯ ರಾಹುಲ ಸಾಂಕೃತ್ಯಾಯನರ ನೂರನೇ ಜನ್ಮೋತ್ಸವದ ಸಲುವಾಗಿ ಬನ್ನಿ ಎಂದು ಕರೆದರು. ಆಮಂತ್ರಣ ನನಗೆ ವಿಸ್ಮಯವಾಗಿ ಕಾಣಿಸಿತು. ಉತ್ತರ ಭಾರತದವರ ಪಾಲಿಗೆ ರಾಹುಲ ಸಾಂಕೃತ್ಯಾಯಬರು ಅದ್ವಿತೀಯ ವಿದ್ವಾಂಸರು, ಕ್ರಾಂತಿಕಾರರು. ಅವರು ವಿಶಾಲ ಭಾರತದ ಕೀರ್ತಿಸಂಪನ್ನರು. ಉತ್ತರ ಪ್ರದೇಶದಲ್ಲಿ ಜನಿಸಿದ ಅವರು ಪುರಾತನ ಸಂಸ್ಕೃತಿಯ ಪಂಡಿತರಾಗಿದ್ದಂತೆ ಪರದೇಶೀಯ ಭಾಷೆಗಳಲ್ಲೂ ಪಂಡಿತರಾಗಿದ್ದರು. ರಾಜಕೀಯದಲ್ಲಿ ಕಾಂಗ್ರೆಸ್ಸಿನ ಒಳಗೂ ಹೊರಗೂ ಕ್ರಾಂತಿ ಎಬ್ಬಿಸಿದವರು. ಮುಂದೆ ರಷ್ಯಾದ ಮಾರ್ಕ್ಸಿಸ್ಟ್ ಪಕ್ಷದ ಧ್ವಜವನ್ನು ಎತ್ತಿ ಹಿಡಿದರು. ಮಾಸ್ಕೋದಲ್ಲೇ ಪಾಲಿ ಮತ್ತು ಸಂಸ್ಕೃತದ ಆಚಾರ್ಯರಾದರು! ಮಂಗೋಲಿಯಾ, ಟಿಬೇಟುಗಳಲ್ಲಿ ಓಡಾಡಿ, ಗಾಡಿಗಟ್ಟಲೆ ಗ್ರಂಥ ಸಂಗ್ರಹ ಮಾಡಿದರು. ಮುಂದೆ ಬೌದ್ಧ ಧರ್ಮವನ್ನು ಸ್ವೀಕರಿಸಿ, ರಾಹುಲ ಸಾಂಕ್ರುತ್ಯಾಯನರೆನಿಸಿ, ಟಿಬೇಟ್, ಮಾಸ್ಕೋ, ಲಂಕೆಗಳ ಜನಕ್ಕೆ ತಮ್ಮ ವಿದ್ವತ್ತನ್ನು ಸಾರಿದರು.

ಅವರ ಪ್ರಸಿದ್ಧಿ

ಅವರು ಬರೆದ ವೋಲ್ಗಾ ಟು ಗಂಗಾ ಎಂಬುದು ಸಾಹಿತ್ಯ ಪ್ರಸಿದ್ಧ ಗ್ರಂಥ. ಅಂಥವರ ನೂರನೇ ಜನ್ಮದಿನದ ಉತ್ಸವದಲ್ಲಿ ನಾನು ಉದ್ಘಾಟನಾ ಭಾಷಣ ಮಾಡುವುದೆಂದರೆ ಒಂದಿಷ್ಟು ಅಳುಕಿನ ವಿಷಯ. ಭಾಷಣದ ಜತೆಗೆ ಅವರ ಅಂಚೆ ಚೀಟಿಯ ಬಿಡುಗಡೆಯೂ ಇತ್ತು. ಅಲ್ಲದೆ, ಬಗ್ಗೆ ದಿಲ್ಲಿಯಲ್ಲಿ ಮೂರುದಿನಗಳ ವಿದ್ವತ್ ವಿಚಾರ ಸಂಕೀರ್ಣವೂ ಇತ್ತು. ನಾನಂತೂ ಹೋಗಿಯೇ ಹೋದೆ. ದಿಲ್ಲಿಯಲ್ಲಿ ಮೂರು ದಿನ ಕಳೆದೆ. ದಿಲ್ಲಿಯ ಮಹಿಮೆಯ ಅನುಭವವನ್ನು ಪಡೆದೆ. ದಿನದ ಉತ್ಸವ ಸಾಂಸ್ಕೃತಿಕ ಮಂತ್ರಿ ಅರ್ಜುನ್ ಸಿಂಗರ ಆಸರೆಯಲ್ಲಿ ನಡೆಯುವುದಿತ್ತು. ಅವರು ಸರಕಾರದ ಸಾಂಸ್ಕೃತಿಕ ಇಲಾಖೆ ನಡೆಸುವವರಷ್ಟೆ!ನನಗೆ ರಾಹುಲ ಸಾಂಕೃತ್ಯಾಯನರ ಪೂರ್ವ ಪರಿಚಯ ಸ್ವಲ್ಪವೇ ಇತ್ತು. ಅದು ಪತ್ರ ಮುಖೇನ. 1950 ಸುಮಾರಿಗೆ ಅವರು ನನ್ನ ಮರಳಿ ಮಣ್ಣಿಗೆ ಕಾದಂಬರಿಯನ್ನು ಹಿಂದಿಗೆ ಅನುವಾದಿಸಲು ಅಪ್ಪಣೆ ಕೇಳಿದ್ದರು. ನಾನು ಹಿಗ್ಗಿ ಒಪ್ಪಿದ್ದೆ. ಬಾಬು ರಾವ್ ಕುಮಟೀಕರ್ ಎನ್ನುವವರು ಅದರ ಅನುವಾದಕರಂತೆ. ಅವರು ಕುಮಟೆಯವರು ಎಂದ ಬಳಿಕ ಕನ್ನಡ ತಿಳಿದಿರುತ್ತದೆ ಎಂದು ಒಪ್ಪಿದೆ. ಮುಂದೆ ಒಂದು ಹಿಂದೀ ಸಂಸ್ಥೆ ಅದನ್ನು ಪ್ರಕಟಿಸಿತು. ಆದರೆ, ಅನುವಾದವು ಪ್ರಸಿದ್ಧಿ ಪಡೆಯಲಿಲ್ಲ. ಮಾತ್ರವಲ್ಲ, ಮಾರಾಟವೂ ಆಗದೆ ಉಳಿಯಿತು ಎಂಬುದೂ ಬಹಳ ವರ್ಷಗಳ ಬಳಿಕ ನನಗೆ ತಿಳಿಯಿತು! ಹಾಗೆ ಬಲುತಡವಾಗಿ ತಿಳಿದ ಕಾರಣಅನುವಾದ ಮಾಡಿದವರಿಗೆ ಕನ್ನಡ ಜ್ಞಾನ ಸಾಲದಿದ್ದುದು.

ಜನ್ಮ ಶತಾಬ್ಧಿ

ಈಗ ಉತ್ಸವದ ವಿಷಯಕ್ಕೆ ಬರುತ್ತೇನೆ. ಉತ್ಸವ ದಿಲ್ಲಿಯ ಒಂದು ವಿಶಾಲ ಮಹಡಿಯಲ್ಲಿ ನಡೆಯಿತು. ಅದಕ್ಕೆ ವಿಶೇಷ ಜನಸಂದಣಿ ಸೇರಿತ್ತು. ನನ್ನ ಬಳಿಗೆ ಅದರ ನಿರ್ದೇಶಕರು ಬಂದು, ‘ನೋಡಿ, ಉದ್ಘಾಟನಾ ಭಾಷಣವನ್ನು ದಿವಂಗತ ಪ್ರೇಮ್‌ಚಂದರ ಮಗ ಮಾಡುತ್ತಾರೆಎಂದರು. ಹಾಗೆಯೇ ಮಾಡಿದರು. ನಾನು ಸಕಾಲದಲ್ಲಿ ನನ್ನ ಭಾಷಣವನ್ನು ಓದಿದೆ. ಅರ್ಜುನ ಸಿಂಗರ ಭಾಷಣವೂ ಇತ್ತು! ನನ್ನದನ್ನೂ ನಾನು ಓದಿದೆ! ಅನಂತರ ಸಾಂಕೃತ್ಯಾಯನರ ಹೆಸರಿನ ಅಂಚೆಚೀಟಿ ಬಿಡುಗಡೆ ಮಾಡಿದೆ. ದಿನದ ಸಭೆಗೆ ಸಾಂಕೃತ್ಯಾಯನರ ಮೂರನೆ ಮಡದಿ ಬಂದಿದ್ದರು. ಜತೆಯಲ್ಲಿ ಅವರ ಒಬ್ಬಳು ಮಗಳೂ ಇದ್ದಳು. ಅವರ ಮಡದಿ ನನ್ನೊಡನೆ, ‘ಮರಳಿ ಮಣ್ಣಿಗೆ ಅನುವಾದದ ಬಗ್ಗೆ ನಾನೇ ಟೈಪು ಮಾಡಿದ್ದೆಎಂದರು. ನನಗೆ ಆಶ್ಚರ್ಯವಾಯಿತು! ಅಂದಿನ ಸಭೆಯನ್ನು ಕುರಿತು ನನಗೆ ಉಮ್ಟಾದ ಆಶ್ಚರ್ಯದ ಅರ್ಥ, ಮರುದಿನ ಬೆಳಗ್ಗೆ ಸರಿಯಾಗಿ ತಿಳಿಯಿತು. ಅಂದಿನ ಜನ್ಮಶಾತಾಬ್ದಿ ಉತ್ಸವದ ಭಾಗದೂರದರ್ಶನದಲ್ಲಿ ಕೇವಲ ಅರ್ಜುನ್ ಸಿಂಗರ ಭಾಷಣ ಮಾತ್ರವಿತ್ತು. ಉಳಿದ ಯಾವ ಅಂಶಗಳೂ ಬರಲಿಲ್ಲ. ಅದಕ್ಕೆ ಮುಖ್ಯ ಕಾರಣಅರ್ಜುನ ಸಿಂಗರು ಆಗಾಗಲೇ ದಿಲ್ಲಿ ವರಿಷ್ಠರ ಅವಕೃಪೆಗೆ ಗುರಿಯಾದುದು. ನನ್ನ ಆಶ್ಚರ್ಯ ಮರು ದಿನ ಮತ್ತೂ ಅಧಿಕವಾಯಿತು. ಮೂರು ದಿನಗಳಲ್ಲಿ ರಾಹುಲರ ಪಾಂಡಿತ್ಯವನ್ನು ಕುರಿತು ವಿಚಾರ ಸಂಕೀರ್ಣ ನಡೆದಿದ್ದರೂ, ದಿಲ್ಲಿಯ ಇಂಗ್ಲಿಷ್ ದಿನಪತ್ರಿಕೆಗಳಲ್ಲಿ ಜನ್ಮಶತಾಬ್ದಿಯ ಯಾವ ಸುದ್ದಿಯೂ ಬರಲಿಲ್ಲ!ರಾಹುಲ ಸಾಂಕೃತ್ಯಾಯನರು ತೀರಿಕೊಂಡು ಅದೆಷ್ಟೋ ವರ್ಷಗಳು ಸಂದಿರುವಾಗ, ಅವರ ವಿದ್ವಾಂಸ ಮಿತ್ರರು ಅವರನ್ನು ಕುರಿತು ಚರ್ಚಿಸಿದರೆ ಸಾಲದೇನು? ದಿಲ್ಲಿ ನಗರದ ರಾಜಕೀಯದಲ್ಲಿ ದಿವಂಗತ ರಾಹುಲರ ನೆನಪು ಉಳಿಯಬೇಕಾದ ಅವಶ್ಯಕತೆ ಯಾರಿಗೂ ಕಾಣಿಸಲಿಲ್ಲ.

 

ಸ್ತ್ರೀವಾದ – ಒಂದು ಪ್ರತಿಚಿಂತನೆ.

ಸ್ತ್ರೀವಾದದ ಬಗೆಗಿನ ಪುಸ್ತಕಗಳನ್ನೋದುತ್ತಿರುವಾಗ ಸಾಕಷ್ಟು ಆಸಕ್ತಿಯ, ಚಿಂತನೆಗೆ ಸವಡೊದಗಿಸುವ ಸಂಗತಿಗಳು ದೊರೆತವು. ಈ ಬಗೆಯ ಶಿಸ್ತುಬದ್ಧ ಅಧ್ಯಯನಗಳು ನಮ್ಮನ್ನು ಎಲ್ಲಬಗೆಯಲ್ಲೂ ಗಟ್ಟಿಗೊಳಿಸುತ್ತವೆನ್ನುವುದು ನಿಜ. ಆದರೆ ಸ್ತ್ರೀ ಮತ್ತು ಸ್ತ್ರೀ ಅಭಿವ್ಯಕ್ತಿಯ ಕುರಿತಾದ ನನ್ನ ಕೆಲವು ಯೋಚನೆಗಳು ಹಿಂದೆ ಪ್ರತಿಪಾದಿಸಲಾದ ಕೆಲವು ಯೋಚನೆಗಳೊಂದಿಗೆ ಢಿಕ್ಕಿ ಹೊಡೆದು ತಲೆಯೂದಿಸಿದವು. ನಾನು ನಿರಾಕರಣೆಯೊಂದಿಗೇ ಓದಿಕೊಂಡ ಕೆಲವು ಮಾತುಗಳು ಹೀಗಿವೆ:

 “ಮಹಿಳಾ ವಿಮೋಚನೆಯ ಹಾದಿಯಲ್ಲಿ ಪೂರ್ವಭಾವಿ ಸಿದ್ಧತೆಯ ಹಂತವಾಗಿ ಮಹಿಳಾವ್ಯಕ್ತಿತ್ವವನ್ನು ಗುರುತಿಸುವ ಅಗತ್ಯ ಮತ್ತು ವಿಧಾನವನ್ನು ಫ್ರಾನ್ಸ್ ಸ್ತ್ರೀವಾದಿ ಚಿಂತಕಿ ಸಿಮೋನ್ ದಿ ಬೊವಾ ತುಂಬಾ ಆಸಕ್ತಿದಾಯಕವಾಗಿ ಪ್ರತಿಪಾದಿಸಿದ್ದಾಳೆ. ಆಕೆಯ ಚಿಂತನಾ ವಿಧಾನ ಭಾರತೀಯ ಮಹಿಳೆಯರ ಪ್ರಸ್ತುತ ಸ್ಥಿತಿಗೂ ಅನ್ವಯವಾಗುವಂತಿದೆ ಎಂಬುದಂತೂ ತೀರಾ ಕುತೂಹಲಕಾರಿಯಾದುದು. ಹೆಣ್ಣಿನ ಗುಣಸ್ವಭಾವಗಳನ್ನು ಕುರಿತು ತೀರಾ ಖಚಿತವಾದ ಅಭಿಪ್ರಾಯಗಳು ಎಂದಿನಿಂದಲೂ ಪ್ರಚಲಿತದಲ್ಲಿದೆ. ಎಲ್ಲ ಹೆಣ್ಣುಗಳಿಗೂ ಇದು ಹೀಗೇ ಎಂದು ಅನ್ವಯವಾಗುವುದಿಲ್ಲ ಎಂದು ವಾದಿಸಲು ಶ್ರಮಿಸುತ್ತಾ ನಾವು, ಇವಕ್ಕೆ ವಿರುದ್ಧ ಸ್ವಭಾವಗಳ ಹೆಣ್ಣುಗಳನ್ನು ನಿದರ್ಶನಗಳೆಂದು ತೋರಿಸಬಹುದು. ಆದರೆ, ಈ ನಿದರ್ಶನಗಳು ಕೇವಲ ಅಪವಾದಗಳಂತಿದ್ದು, ಸಾಮಾನ್ಯವಾಗಿ ಎಲ್ಲ ಹೆಣ್ಣುಗಳೂ ಪ್ರಚಲಿತ ಅಭಿಪ್ರಾಯದ ಗುಣಸ್ವಭಾವದವರೇ ಆಗಿರುತ್ತಾರೆ ಎನ್ನುವುದು ಸಾಮಾನ್ಯವಾಗಿ ಕಣ್ಣಿಗೆ ರಾಚುವ ಸಂಗತಿ. ಇದೇಕೆ ಹೀಗೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಾದರೆ ಸಾಮಾನ್ಯವಾಗಿ ಹೆಂಗಸರಿಗೆ ದೊರೆಯುವ ಜೀವನ ಸಂದರ್ಭಗಳು ಯಾವ ಸ್ವರೂಪದವು ಎಂಬುದನ್ನೊಂದಿಷ್ಟು ಗಮನಿಸಬೇಕು.

 

ಶತಮಾನಗಳಿಂದಲೂ ಅವಳಿಗೆಂದೇ ನಿರ್ಮಿಸಲಾದ ಸಾಮಾಜಿಕ ಸಂದರ್ಭದಲ್ಲಿ ಅವಳ ಜೀವನ ವಿಧಾನವೂ ಚಲನಶೀಲತೆಯನ್ನೇ ಕಳೆದುಕೊಂದ ಸ್ಥಿರ ಚಿತ್ರಣದಂತಿದೆ. ಅದರ ಫಲವೆಂಬಂತೆ ಅವಳ ಸ್ವಭಾವವೂ ಸ್ಥಿರ ಮಾದರಿಯಾಗಿಬಿಟ್ಟಿದೆ. ಶತಮಾನಗಳಲ್ಲಿ ಅವಳ ಜೀವನ ಸಂದರ್ಭವೂ ಬದಲಾಗಿಲ್ಲ. ಚಂಚಲತೆ ಅನ್ನುವುದು ಅವಳ ಇನ್ನೊಂದು ಹೆಸರು, ವೈರುಧ್ಯಗಳ ಆಗರ ಅವಳು, ವಾಸ್ತವತೆ, ನಿಖರತೆ, ತರ್ಕಬದ್ಧತೆಗಳಂತಹ ಯಾವ ಬೌದ್ಧಿಕ ಅಂಶಗಳೂ ಅವಳಲ್ಲಿಲ್ಲ, ಅವಳು ಸ್ವಾರ್ಥಿ, ಕಳ್ಳಿ, ಸುಳ್ಳಿ, ನೈತಿಕ ಬಲವಿಲ್ಲದವಳು…. ಹೀಗೆ ಮುಂದುವರೆಯಬಹುದಾದ ಅಸಂಖ್ಯ ದೋಷಗಳನ್ನು ಅವಳ ಸ್ವಭಾವದಲ್ಲಿ ಕಾಣಲು ಸಾಧ್ಯ. ಆದರೆ ಈ ಯಾವುದೂ ಅವಳ ಜೀವನ ಸಹಜ ಸಂಗತಿಗಳಲ್ಲವೆಂಬುದನ್ನು ಗಮನಿಸಬೇಕು. ಸಾಮಾಜಿಕ ಸಂರಚನೆಗಳು ಅವಳ ಜೀವನ ಸಂದರ್ಭವನ್ನು ಹೇಗೆಲ್ಲ ನಿಯಂತ್ರಿಸುತ್ತದೆ ಅನ್ನುವುದನ್ನು ಈ ಹಿಂದೆ ಸಾಕಷ್ಟು ವಿವರಿಸಲಾಗಿದೆ. ಹೆಣ್ಣು ಗುಣಗಳು ವ್ಯಕ್ತವಾಗಬೇಕಾದ ಅನಿವಾರ್ಯದಲ್ಲಿ ಅವಳಿದ್ದಾಳೆಂದು ಇದನ್ನು ಯಾರೂ ಅರ್ಥೈಸುವುದಿಲ್ಲ. ಬದಲಿಗೆ ಹೆಣ್ಣಿನಲ್ಲಿ ಇವು ಜನ್ಮಜಾತ ಗುಣಗಳೆಂದು ಹೀಗಳೆಯುತ್ತಾರೆ”

(ಸ್ತ್ರೀವಾದ- ಡಾ.ಎಚ್.ಎಸ್.ಶ್ರೀಮತಿ; ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ಶತಮಾನದ ಚಿಂತನ ಮಾಲೆ ಪ್ರಕಟಣೆ)

 ನನ್ನ ಅನಿಸಿಕೆ ಇಲ್ಲಿನ ವಾಕ್ಯಗಳಿಗೆ ಪದಶಃ ವಿರೋಧವಲ್ಲ. ಒಟ್ಟಾರೆ ಇದನ್ನು ಓದುವಾಗ ಸಮಾನಾಂತರವಾಗಿ ಅನಿಸುತ್ತ ಹೋಗಿದ್ದು.

ಹೆಣ್ಣಿನ ಮೇಲೆ ಹೇರಲ್ಪಟ್ಟವೆಂದು ಹೇಳಲಾಗಿರುವ ಗುಣಗಳಲ್ಲಿ ‘ಚಂಚಲೆ, ಕಳ್ಳಿ, ಸುಳ್ಳಿ, ಸ್ವಾರ್ಥಿ’ ಇತ್ಯಾದಿಗಳನ್ನಿಲ್ಲಿ ಹೆಸರಿಸಲಾಗಿದೆ. ಮುಂದುವರಿದು, ಈ ಯಾವುದೂ ಅವಳ ಜೀವನಸಹಜ ಸಂಗತಿಗಳಲ್ಲವೆಂದೂ ಸಾಮಾಜಿಕ ಸಂದರ್ಭಗಳು ಹುಟ್ಟುಹಾಕುವ ಅನಿವಾರ್ಯತೆಯ ಪರಿಣಾಮವೆಂದೂ ಸಮಜಾಯಿಷಿ ಕೊಡಲಾಗಿದೆ. ನನಗೆ ತಕರಾರು ಇರುವುದು ಇಲ್ಲಿ. ಅವೆಲ್ಲವೂ ಹೆಣ್ಣಿನ ಸಹಜ ಗುಣಗಳೆಂದೇ ಒಪ್ಪಿಕೊಳ್ಳುವುದರಲ್ಲಿ ಯವ ದೋಷವಿದೆ? ನಾನು ಹೆಣ್ಣಿನ ಚಂಚಲತೆಯನ್ನು ವೈಶಿಷ್ಟ್ಯವೆನ್ನುತ್ತೇನೆ. ನೆಟ್ಟಲ್ಲೇ ಮನಸು ನೆಡಬಲ್ಲ ಗಂಡಸು ತನಗೆ ವಿರುದ್ಧವಾಗಿರುವ ಈ ಗುಣವನ್ನು ‘ದೋಷ’ವೆನ್ನುತ್ತಾನೆ. ಕಪಟ, ಸುಳ್ಳು, ಸ್ವಾರ್ಥಗಳು ಗಂಡು ಹೆಣ್ಣುಗಳೆರಡರಲ್ಲೂ ಸಹಜವಾಗಿಯೇ ಇವೆ. ತನ್ನಲ್ಲಿರುವುದೇ ಹೆಣ್ಣಲ್ಲೂ ಇದೆಯೆಂಬ ಮತ್ಸರದಿಂದ ಗಂಡಸು ಅವಳಲ್ಲಿ ಅದನ್ನೆಲ್ಲ ಪ್ರತ್ಯೇಕವಾಗಿ ಪಟ್ಟಿ ಮಾಡಿಟ್ಟಿದ್ದಾನೆ. ಹೀಗೆ ಧೋರಣೆಗಳನ್ನಿಟ್ಟುಕೊಂಡು ದರ್ಪ ತೋರುವುದು ಗಂಡಸಿನ ಸಹಜ ಗುಣವಷ್ಟೆ!

 

ಆದರೆ, ಈ ಎಲ್ಲ ಸ್ವಭಾವಗಳೂ ಸಾಮಾಜಿಕ ಸಂದರ್ಭಗಳ ಕೊಡುಗೆ ಎಂದು ನಾವೇಕೆ ಆರೋಪ ಹೊರಿಸಬೇಕು? ನಮ್ಮ ಈ ಸಮಜಾಯಿಷಿಯೇ ನಮ್ಮ ಕೀಳರಿಮೆಯನ್ನು ತೋರುತ್ತದೆಯಲ್ಲವೆ? ಇದೇ ರೀತಿ ಪಾತಿವ್ರತ್ಯ, ವಾತ್ಸಲ್ಯ, ಸಹನೆ ಇತ್ಯಾದಿಗಳನ್ನೂ ಹೆಣ್ಣಿನ ಗುಣಗಳೆನ್ನಲಾಗುತ್ತವೆ ಮತ್ತು ಕೆಲವರು ಇದನ್ನೂ ಕೂಡ ಹೇರಿಕೆಯೆನ್ನುತ್ತಾರೆ. ನನಗನಿಸುವಂತೆ ಪ್ರತಿಯೊಂದು ಜೀವಿಯೂ ಅದರ ಹುಟ್ಟಿನೊಂದಿಗೇ ವ್ಯಕ್ತಿತ್ವದ ಮೊಳಕೆಗಳನ್ನು ಹೊತ್ತು ಬಂದಿರುತ್ತವೆ. ಸಮಾಜದ ಕೆಲಸವೇನಿದ್ದರೂ ಅದಕ್ಕೆ ನೀರೆರೆಯುವ ಇಲ್ಲವೇ ಮುರುಟಿಸುವ ಮಾಲಿಯದ್ದು ಅಷ್ಟೆ. ಆದ್ದರಿಂದಲೇ ಸೀತೆಯಿರುವ ಕಾಲದಲ್ಲಿ, ಅದೇ ಅರಮನೆಯಲ್ಲಿ ಕೈಕೇಯಿಯೂ ಇದ್ದಳು. ಅಂಬೆ ಇದ್ದ ಸಂದರ್ಭ- ಮಾಹೋಲುಗಳಲ್ಲೇ ಅಂಬಿಕೆ, ಅಂಬಾಲಿಕೆಯರೂ ಇದ್ದರು. ಒಬ್ಬನೇ ಯಾಜ್ಞವಲ್ಕ್ಯನಿಗೆ ಕಾತ್ಯಾಯನಿ, ಮೈತ್ರೇಯಿರೆಂಬ ಭಿನ್ನ ಗುಣಗಳ ಹೆಂಡತಿಯರೂ ಇದ್ದರು. ಇತ್ತೀಚಿನ ಸಾಹಿತ್ಯದ ಸಮರ್ಥ ಉದಾಹರಣೆಯನ್ನೇ ಕೊಡಬಹುದಾದರೆ, ಗಾನ್ ವಿದ್ ದ ವಿಂಡ್. ನನಗೆ ಖುಷಿ ಕೊಟ್ಟ ಅಪ್ಪಟ ಹೆಣ್ಣಿನ ಕಾದಂಬರಿಯದು. ಅದರ ನಾಯಕಿ ಸ್ಕಾರ್ಲೆಟ್ ಒಹಾರಾ ಮಹತ್ವಾಕಾಂಕ್ಷೆ, ಚಾಲಾಕಿತನ, ಕೆಚ್ಚು, ಆತ್ಮ ವಿಶ್ವಾಸಗಳ ಪ್ರತಿರೂಪ. ಮತ್ತೊಂದು ಮುಖ್ಯ ಪಾತ್ರ ಮೆಲನಿ ಮಾರ್ದವತೆ, ವಾತ್ಸಲ್ಯ, ಮುಗ್ಧತೆಗಳ ಪ್ರತಿರೂಪ. ಇಬ್ಬರ ವಿಷಯದಲ್ಲೂ ಅದು ಅವರವರ ಸಹಜ ಸಹಜ ಗುಣಗಳೇ. ಅವರವರ ಸಂದರ್ಭದಲ್ಲಿ ಪರಿಣಾಮಕಾರಿಯಾಗಿ ವ್ಯಕ್ತಗೊಂಡಥದ್ದು.

 ಈ ಉದಾಹರಣೆಗಳನ್ನು ಅಪವಾದವೆನ್ನುವುದು ಜಾಣತನ. ಭಾರತದ ಸಂದರ್ಭದಲ್ಲಿ ಪ್ರತಿಮನೆಯ ಅತ್ತೆ ಸೊಸೆಯರ ಸ್ವಭಾವ ವೈರುಧ್ಯ ಇದಕ್ಕೊಂದು ಪೂರಕ ಉದಾಹರಣೆಯಾಗಬಹುದು. ಒಳ್ಳೆಯ ಸೊಸೆ ಮುಂದುವರಿದು ಪಾಪದ ಅತ್ತೆಯಾಗಿಯೇ ಉಳಿಯುವ, ಕೆಟ್ಟ ಸೊಸೆ ಘಾಟಿ ಅತ್ತೆಯಾಗುವ ಸಂಗತಿಗಳು ಸರಳ ವಿವರಣೆಯಾಗಬಹುದು. ಆದ್ದರಿಂದ, ‘ಸಾಮಾನ್ಯವಾಗಿ ಎಲ್ಲ ಹೆಣ್ಣುಗಳೂ ಪ್ರಚಲಿತ ಅಭಿಪ್ರಾಯದ ಗುಣಸ್ವಭಾವದವರೇ ಆಗಿರುತ್ತಾರೆ’ ಎನ್ನುವುದನ್ನು ಒಪ್ಪಲಾಗದು. ಚಾಲಾಕು ಹೆಣ್ಣಿನ ಜೊತೆಯೇ, ಅದೇ ಕುಟುಂಬ, ಸನ್ನಿವೇಶಗಳಲ್ಲಿಯೇ ಅತ್ಯಂತ ಮುಗ್ಧ ಸ್ವಭಾವದ ಹೆಣ್ಣೊಬ್ಬಳು ಇರಲು ಸಾಧ್ಯ. ಅಸುರಕ್ಷತೆಯ ಭಾವ ವಂಚಕತನವನ್ನು, ಸುಳ್ಳನ್ನು ಹೇರುತ್ತದೆ ಎನ್ನುವುದಾದರೆ, ಅದೇ ಸಂದರ್ಭ ಎದುರಿಸುತ್ತಿರುವ ಉಳಿದವರಲ್ಲಿ ಈ ಗುಣಗಳೇಕೆ ವ್ಯಕ್ತವಾಗುವುದಿಲ್ಲ? ಯಾರಲ್ಲಿ ಕಾಪಟ್ಯದ ಮೊಳಕೆ ಇರುತ್ತದೆಯೋ ಅವರಿಂದ ಮಾತ್ರವೇ- ಗಂಡಿರಲಿ, ಹೆಣ್ಣಿರಲಿ- ಕಪಟವು ಹೊರಡುತ್ತದೆ. ಅದಿಲ್ಲದವರು ಭೋಳೆಗಳಾಗಿ ಉಳಿಯುತ್ತಾರೆ. ಅಥವಾ ಸಜ್ಜನರ ಪರಿಭಾಷೆಯಲ್ಲಿ ಒಳ್ಳೆಯವರಾಗಿರುತ್ತಾರೆ. ಸಾಮಾಜಿಕ ಸಂದರ್ಭಗಳು ಸಹಜ ಗುಣಗಳ ಅಭಿವ್ಯಕ್ತಿಯಲ್ಲಿ ಪರಿಣಾಮ ಬೀರಬಹುದಷ್ಟೇ ಹೊರತು, ಗುಣಗಳನ್ನು ಹೇರಲಾರವು. ನಮ್ಮಲ್ಲಿ ಇರುವ ಗುಣಗಳನ್ನು ಅಭಿವ್ಯಕ್ತಪಡಿಸಲು ಒತ್ತಡ ಹೇರುವ ಸನ್ನಿವೇಶಗಳನ್ನು ದೂರುತ್ತ, ‘ಪರಿಸ್ಥಿತಿ ಹೀಗಿಲ್ಲದಿದ್ದರೆ ನಾನೂ ಒಳ್ಳೆಯವಳೇ ಆಗಿರುತ್ತಿದ್ದೆ’ ಎನ್ನುವುದು ಆಷಾಡಭೂತಿತನವಾಗುತ್ತದೇನೋ? ಇಂತಹ ಸನ್ನಿವೇಶಗಳು ಮಾತ್ರವೇ ಒಟ್ಟಾರೆ ಮನುಷ್ಯನ ಸ್ವಭಾವವನ್ನು ಎತ್ತಿ ತೋರಿಸುತ್ತವೆ ಅನ್ನುವುದು ದಾರ್ಶನಿಕರೆಲ್ಲರು ಹೇಳಿಹೋಗಿರುವ ಮಾತು.

 ಈ ನಿಟ್ಟಿನಲ್ಲಿ ಯೋಚಿಸುವ ನನಗೆ ಮೇಲೆ ನೀಡಿದ ಪಠ್ಯದ ಕೊನೆಯ ಸಾಲು- ‘ಹೆಣ್ಣು ಗುಣಗಳು ವ್ಯಕ್ತವಾಗಬೇಕಾದ ಅನಿವಾರ್ಯತೆಯಲ್ಲಿ ಅವಳಿದ್ದಾಳೆಂದು ಯಾರೂ ಅರ್ಥೈಸುವುದಿಲ್ಲ. ಬದಲಿಗೆ ಹೆಣ್ಣಿನಲ್ಲಿ ಇವು ಜನ್ಮಜಾತ ಗುಣವೆಂದು ಹೀಗಳೆಯುತ್ತಾರೆ’ ಎನ್ನುವ, ನಮ್ಮನ್ನು ಅವರು ‘ಸದ್ಗುಣಗಣಿಗಳೆಂದು’ ಅರ್ಥೈಸಿಕೊಳ್ಳಲಿ ಎಂದು ಅನುಕಂಪ ಬೇಡುವ ಮಾತುಗಳು ಇಷ್ಟವೇ ಆಗೋದಿಲ್ಲ. ಹೆಣ್ಣುಗುಣಗಳು ಜನ್ಮಜಾತವೇ ಎಂದಾದರೆ, ಅವುಗಳ ಅಭಿವ್ಯಕ್ತಿಯ ಬಗ್ಗೆ ಕೀಳರಿಮೆ ಯಾಕೆ? ಇಷ್ಟಕ್ಕೂ ಇದನ್ನೆಲ್ಲ ಯಾರಿಗೆ ಅರ್ಥ ಮಾಡಿಕೊಡಬೇಕಿದೆ? ಗಂಡಸಿಗೆ ಅರ್ಥ ಮಾಡಿಸಲು ಹೆಣಗುತ್ತ ವಾದ ಹೂಡುವುದಾದರೆ, ನಾವು ಅವನ ಪಾರಮ್ಯವನ್ನು ಒಪ್ಪಿಕೊಂಡಂತಾಗುವುದಿಲ್ಲವೆ? ಗಂಡಸು ನನ್ನ ಹಾಗೇ ಮನುಷ್ಯಕುಲಕ್ಕೆ ಸೇರಿದ, ಭಿನ್ನ ದೇಹರಚನೆಯ ಜೀವಿಯಷ್ಟೆ. ಸಹಜೀವಿಗೆ ತೊಂದರೆಯಾಗದ ಹಾಗೆ ನನ್ನತನವನ್ನು ಕಾಯ್ದಿಟ್ಟುಕೊಂಡು, ‘ನನ್ನ’ನ್ನು ರೂಪಿಸಿದ ಗುಣಗಳನ್ನು ಅಭಿವ್ಯಕ್ತಗೊಳಿಸುತ್ತ ಬದುಕಿಕೊಳ್ಳುವುದಕ್ಕೆ ಯಾರಿಗೇಕೆ ಸಮಜಾಯಿಷಿ ಕೊಡಬೇಕಿದೆ ನಾವು?

ನಮ್ಮ ಸ್ತ್ರೀವಾದವಿನ್ನೂ ಸಮಾನತೆ ಬೇಡುವ, ಪ್ರತಿಭಟಿಸುವ ಇಲ್ಲವೇ ಓಲೈಸುವ ಹಂತದಲ್ಲಿಯೇ ಉಳಿದುಕೊಂಡಿದೆಯೇ? ಅಚ್ಚರಿಯಾಗುತ್ತಿದೆ.

 (ಗಮನಿಸಿ: ಸ್ತ್ರೀವಾದ ಪುಸ್ತಕದಲ್ಲಿ, ಇಲ್ಲಿ ಆಯ್ದ ಪಠ್ಯಕ್ಕೆ ಪೂರಕವಾದ ಹಿನ್ನೆಲೆ, ಮುನ್ನೆಲೆಗಳಿವೆ. ಪ್ರತ್ಯೇಕವಾಗಿ ಆಯ್ದು ಓದಿದಾಗ ಕೊಡುವ ಅರ್ಥಕ್ಕಿಂತ ಭಿನ್ನವಾದ ಅರ್ಥವನ್ನು ಸಮಗ್ರ ಓದು ದೊರಕಿಸಿಕೊಡುತ್ತದೆ. ಇಲ್ಲಿ ನೀಡಿರುವುದು ಆಯ್ದ ಪ್ರತ್ಯೇಕ ಭಾಗಕ್ಕೆ ಪ್ರತಿಯಾಗಿ ನನ್ನ ಆಲೋಚನೆಗಳನ್ನಷ್ಟೆ)

ಎರಡು ಭಾರತಗಳು- ಡಿ.ಆರ್.ನಾಗರಾಜ್ ಮರು ಓದು

ಸಂಪೂರ್ಣವಾಗಿ ಒಳಗಿನಿಂದ ಬರೆಯುವ ಆಧುನಿಕ ಲೇಖಕನಿಗೆ ಇವೆರಡೂ ಬೇರೆ ಬೇರೆಯಾಗಿಯೇ ಉಳಿಯಬೇಕಿಲ್ಲ……….. ಚರಿತ್ರೆಯ ವರ್ತಮಾನದಲ್ಲಿ ಮಾತ್ರ ನಿಂತಿರುವವರಿಗೆ ಆತಂಕ ಸಹಜವಾದ, ಅಧಿಕೃತವಾದ ಅನುಭವ. ಚರಿತ್ರೆಯ ಭೂತದಲ್ಲಿ ಮಾತ್ರ ಹುದುಗಿಹೋಗಿರುವವರಿಗೆ ಸಹಜವಾಗಿಯೇ ಆನಂದ, ರೋಮಾಂಚನ ಅಧಿಕೃತ ಅನುಭವ. ಭೂತ ವರ್ತಮಾನಗಳೆರಡೂ ಭವಿಷ್ಯದ ಕಡೆಗೆ ನಡೆಯುವಂಥದು ಎಂದು ತಿಳಿದವರಿಗೆ ಆತಂಕ- ಆನಂದಗಳೆರಡೂ ಒಟ್ಟಿಗೆ ಹೋಗುತ್ತವೆ. ಅಂಥ ಭಾರತ ಗ್ರಹಿಕೆಗಾಗಿ ನಾವು ಕಲಿಯಬೇಕಾಗಿದೆ.

ಡಿ.ಅರ್. ನಾಗರಾಜ್ ನಾನು ಮತ್ತೆ ಮತ್ತೆ ಓದಿಕೊಳ್ಳುವ ಲೇಖಕ. ಇವರನ್ನು ನಮ್ಮ ಪೀಳಿಗೆಯ ನಾವೆಲ್ಲ ಓದಿಕೊಳ್ಳಬೇಕು, ಬಹಳಷ್ಟು ಕಾರಣಗಳಿಗೆ. ಹೆಚ್ಚು ಹೇಳಿದರೆ ನನ್ನ ಅಭಿಮಾನದ ಅಭಿಪ್ರಾಯವನ್ನು ಹೇರಿದಂತಾಗುತ್ತದೇನೋ. ಇಲ್ಲಿ ನೀಡಿರುವ ಬರಹ ಇಂದಿನ ಹೊಸ ಬರಹಗಾರರ ಪ್ರಶ್ನೆಗಳಿಗೆ ಉತ್ತರ ಕೊಡಬಹುದೆನ್ನುವುದು ಆಶಯ. ಡಿ.ಆರ್. ಬಗ್ಗೆ ಉಳಿದ ಮಾತು, ಮುಂದೆಂದಾದರೂ…

ಎರಡು ಭಾರತಗಳು

ಭರತ ಖಂಡದ ಬಗೆಗೆ ಕಳೆದ ಇನ್ನೂರು ವರ್ಷಗಳಲ್ಲಿ ಎರಡು ರೀತಿಯ ಪ್ರತಿಕ್ರಿಯೆಗಳು ಬೆಳೆದಿವೆ. ಮೊದಲನೆಯ ಪ್ರತಿಕ್ರಿಯೆ ದಿಗ್ಭ್ರಮೆ, ಭೀತಿ, ಆತಂಕ, ಅಸಹನೆಗಳಿಂದ ತುಂಬಿರುವಂಥದು. ಎರಡನೆಯದು ಆರಾಧನೆ, ಆನಂದ, ರೋಮಾಂಚನದಿಂದ ತುಂಬಿರುವಂಥದು. ಈ ಎರಡೂ ಪಂಗಡಗಳಲ್ಲಿ ರಾಜಕಾರಣಿಗಳು, ಕವಿಗಳು, ತತ್ತ್ವಜ್ಞಾನಿಗಳು, ಸಂಶೋಧಕರು, ಕಾದಂಬರಿಕಾರರು ಸಮನಾಗಿ ಹರಿದುಹಂಚಿ ಹೋಗಿದ್ದಾರೆ. ಈಗ ತಕ್ಷಣ ನೆನಪಿಗೆ ಬರುತ್ತಿರುವ ಹೆಸರುಗಳಲ್ಲಿ ಒಂದೆರಡನ್ನು ಹೇಳುತ್ತೇನೆ. ಮೊದಲನೆಯ ಗುಂಪಿನ ಸಮರ್ಥ ಪ್ರತಿನಿಧಿ ನೈಪಾಲ್. ಈಚಿನ ವರ್ಷಗಳಲ್ಲಿ ಭಾರತ ಭಜನೆದಾಸರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿಬಿಟ್ಟಿದೆ. ಹೀಗಾಗಿ ನೈಪಾಲರ ಮಟ್ಟದ ಲೇಖಕ ಭಜನೆದಾಸರಲ್ಲಿ ಯಾರೂ ಇಲ್ಲ. ಆದರೂ, ಆ ದೃಷ್ಟಿಕೋನ ಮಾಯವಾಗಿಲ್ಲ. ಸಾಯಿಬಾಬಾರಿಂದ ಹಿಡಿದು ಚಿಲ್ಲರೆ ಗುರುಗಳ ಆಶ್ರಮಗಳತನಕ ಹಬ್ಬಿರುವ ಪಶ್ಚಿಮ ಪಂಥಿಗಳೇ ಇದಕ್ಕೆ ಸಾಕ್ಷಿ. ಆದರೆ, ಒಟ್ಟಾರೆಯಾಗಿ ಈ ಗುಂಪಿನ ಪ್ರತಿನಿಧಿ ರಾಜಾರಾವ್.

ಮೊದಲನೆಯ ಆತಂಕಕೇಂದ್ರಿತರ ಬಗ್ಗೆ ಈ ನಾಡಿನಲ್ಲಿ ಸಹಜವಾಗಿ ಅಂಥ ಗೌರವವೇನೂ ಇಲ್ಲ. ಸಾರ್ವಜನಿಕವಾಗಿ ಹುಳುಕನ್ನು ಎತ್ತಿಹಿಡಿಯುವ ಮಂದಿಯನ್ನು ಯಾರು ತಾನೇ ಇಷ್ಟಪಡುತ್ತಾರೆ? ಗಾಂಧೀಜಿಯೇ ಇಂಥದೊಂದು ಪುಸ್ತಕವನ್ನು ‘ಚರಂಡಿ ಇನ್ಸ್ ಪೆಕ್ಟರರ ಪುಸ್ತಕ ಎಂದು ವರ್ಣಿಸಿದ್ದರು. ಈ ಆತಂಕಕೇಂದ್ರಿತರಿಗೆ ಭಾರತದ ವರ್ತಮಾನವೇ ಹೆಚ್ಚು ನಿಜ. ಅದರ ದೈನಂದಿನ ಜೀವನದ ಕೊಳಕುಗಳಿಂದ ಹಿಡಿದು ಉನ್ನತ ಮಟ್ಟದ ರಾಜಕೀಯ ಪ್ರಕ್ರಿಯೆಗಳ ಭಯಾನಕ ರೂಪಗಳತನಕ ಅವರ ಭೀತಿ, ಅಸಹ್ಯ ಬೆಳೆದು ನಿಲ್ಲುತ್ತದೆ. ಯಾಮಾರಿದರೆ, ತತ್ತರಿಸುವ ದೇಶ ಭಾರತ ಎಂಬುದು ಇವರ ನಂಬಿಕೆ. ವರ್ತಮಾನದ ಭಾರತೀಯರ ಬದುಕಿನ ಕುರೂಪಿ ಮುಖವನ್ನು ಕಂಡವರು, ಒಂದು ಕಾಲದಲ್ಲಿ ಇದು ಸುಂದರವಾಗಿತ್ತು, ಭವ್ಯವಾಗಿತ್ತು ಎಂದು ನಂಬುವುದು ಹೇಗೆ? ನಾವು ಕೂಡ ನಂಬುವುದಿಲ್ಲವಲ್ಲ!

ಸ್ವತಃ ಮ್ಯಾಕ್ಸ್ ಮುಲ್ಲರಿಗೂ ಸಮಕಾಲೀನ ಭಾರತದ ಬಗ್ಗೆ ಅಪಾರ ಭೀತಿಯಿತ್ತೆಂದು ಹೇಳುವ ಅನೇಕ ಪ್ರಸಂಗಗಳು ಸಿಗುತ್ತವೆ. ನಿಜವಾದ ಭಾರತ ಎಂದೋ ಸತ್ತು ಹೋಯಿತೆಂದು ತಿಳಿಸಿ, ಈಗಿನ ಭಾರತಕ್ಕೆ ಕಾಲಿಡಬರದೆಂದು ತಮ್ಮ ಶಿಷ್ಯರಿಗೆ ಅವರು ಕಟ್ಟಪ್ಪಣ್ಣೆ ಮಾಡಿದ್ದರಂತೆ! ಇಂಥ ದಂತಕಥೆಯೊಂದು ಇದೆಯೆಂದು ಆಶೀಶ್ ನಂದಿ ತಮ್ಮ ‘ಇಂಟಿಮೇಟ್ ಎನಿಮಿ’ ಪುಸ್ತಕದಲ್ಲಿ ಬರೆಯುತ್ತಾರೆ. ಹೀಗಾಗಿ, ‘ಇತ್ತು’ಗಳ ಧ್ವಜವ ಹಿಡಿದೆತ್ತಿ ನಿಲ್ಲುವ ಮಂದಿಗೂ ‘ಇದೆ’ಯ ಹೃದಯ ದ್ರಾವದ ಬಗೆಗೆ ಸಹಜವಾಗಿಯೇ ತಿರಸ್ಕಾರ, ಭಯ.

ಈ ಆತಂಕ ಕೇಂದ್ರಿತರಿಗೆ ಕಂಡಿರುವ ಭಾರತದ ರೂಪ ಎಷ್ಟರಮಟ್ಟಿಗೆ ನಿಜ, ಎಷ್ಟರಮಟ್ಟಿಗೆ ಅಧಿಕೃತ? ಇವರು ಹೇಳುವ ಶುದ್ಧ ಅತಿರೇಕದ ಕಥೆಗಳಲ್ಲಿ ಸತ್ಯದ ಮೂಲರೂಪ ಇದ್ದೇಇರುತ್ತದೆ ಅನಿಸುತ್ತದೆ. ಉದಾಹರಣೆಗೆ ಕಿಪ್ಲಿಂಗ್ ನ ‘ಕಿಮ್’ ಕಾದಂಬರಿಯ ಕೆಲವು ಪ್ರಸಂಗಗಳನ್ನೇ ಇದಕ್ಕೆ ಸಾಕ್ಷಿಯಾಗಿ ಹೆಸರಿಸಬಹುದು. ರೇಲ್ವೇ ಸ್ಟೇಷನ್ನೊಂದರಲ್ಲಿ ದೂರದೂರಿಗೆ ಟಿಕೆಟ್ ಕೊಳ್ಳುವ ಪ್ರಸಂಗ. ಟಿಕೆಟ್ ಕೊಡುವ ವ್ಯಕ್ತಿ ಜಾಣ ಅಥವಾ ಮೋಸಗಾರ (ಅಥವಾ ಭಾರತದ ಸಾಮಾಜಿಕ ಜೀವನದಲ್ಲಿ ಅನೇಕ ಸಾರಿ ಈ ಎರಡರ ನಡುವೆ ವ್ಯತ್ಯಾಸವೇ ಇರುವುದಿಲ್ಲ). ಅವನು ಮುಂದಿನ ಸ್ಟೇಷನ್ನಿಗೆ ಟಿಕೆಟ್ ಕೊಟ್ಟು ಮೋಸ ಮಾಡಲು ಪ್ರಯತ್ನಿಸುತ್ತಾನೆ. ಅನಕ್ಷರಸ್ಥ ಹಳ್ಳಿಗರಿಗೆ ಹಾಗೆ ಮಾಡಿ ಮಾಡಿ ಅಭ್ಯಾಸ. ಇಂಥ ಸಣ್ಣಪುಟ್ಟ ವಿಷಯಗಳ ಬಗೆಗೆ ಮಾತ್ರವಲ್ಲ, ಈ ಬದುಕಿನ ಮೂಲರೂಪಗಳ ಬಗೆಗೂ ಆತಂಕ. ಆತಂಕಕೇಂದ್ರಿತರು ಹೇಳುವ ಮಾತೇ ಹೆಚ್ಚು ನಿಜ, ಅಧಿಕೃತ ಎನಿಸುತ್ತದೆ.

‘ಎನ್ ಏರಿಯಾ ಆಫ್ ಡಾರ್ಕ್ ನೆಸ್’ ಮತ್ತು ‘ದಿ ವೂಂಡೆಡ್ ಸಿವಿಲೈಸೇಷನ್’ ಕೃತಿಗಳಲ್ಲಿ ನೈಪಾಲರ ಭಾರತದರ್ಶನವನ್ನು ನಮ್ಮ ದೊಡ್ಡ ಲೇಖಕರ ಸಾಮಾಜಿಕ ದರ್ಶನದ ಜತೆಗೆ ಹೋಲಿಸಿ. ಆಶ್ಚರ್ಯಕರ ಸಾಮ್ಯಗಳು ಕಾಣಿಸಿಕೊಳ್ಳುತ್ತವೆ. ಅರೆನಿರ್ಮಿತ ಆಧುನಿಕ ಸಮಾಜಗಳ ಅಸಂಬದ್ಧತೆಯನ್ನು ನೈಪಾಲ್ ವೈಚಾರಿಕವಾಗಿ ಎಷ್ಟು ಟೀಕಿಸುತ್ತಾರೋ, ಅಷ್ಟೇ ತೀವ್ರತೆಯಿಂದ ನಮ್ಮ ಲೇಖಕರೂ ಆ ಅನುಭವವನ್ನು ಸಹಿತ್ಯವಾಗಿಸುತ್ತಾರೆ. ನಾವು ಸಮಾಜವನ್ನು ನಿರ್ಮಿಸುತ್ತಿರುವ ಬಗೆಗೆ ಇಬ್ಬರದೂ ಒಂದೇ ತೀವ್ರತೆಯ ಕೋಪ. ಜಾತಿಪದ್ಧತಿ ನಮ್ಮ ಗ್ರಹಿಕೆಯನ್ನು ಮೌಲ್ಯ ಕಲ್ಪನೆಯನ್ನು ಆಳವಾಗಿ ತಿರುಚಿರುವ ಬಗೆಗೆ ನೈಪಾಲ್ ಹೇಳುವ ಒಳನೋಟಗಳನ್ನು ನಮ್ಮ ಆಧುನಿಕ ಸಾಹಿತ್ಯ ಕೃತಿಗಳು ವಿಸ್ತರಿಸುತ್ತವೆ. ಅದರಲ್ಲೂ ತೇಜಸ್ವಿ, ಲಂಕೇಶರ ಬರವಣಿಗೆಗಳು ನೈಪಾಲರ ರೀತಿಯ ನೈತಿಕ ಕೋಪವನ್ನೇ ತೋರಿಸುತ್ತವೆ. ‘ಅವನತಿ’, ‘ಕುಬಿ ಮತ್ತು ಇಯಾಲ’, ‘ತಬರನ ಕಥೆ’ ಮುಂತಾದವುಗಳ ವ್ಯಗ್ರತೆ, ವಿಷಾದ ಮೂಲತಃ ಆತಂಕಕೇಂದ್ರಿತವೇ. ರಮ್ಯ ಚಿತ್ರಗಳಿಂದ ಪುರಾಣಗಳಿಂದ ಮೋಸ ಹೋಗದ ಸೂಕ್ಷ್ಮ ಮನಸ್ಸಿನ ಚಿತ್ರಣ ಕ್ರಮ ಇದು.

ಆದರೆ, ಆರಾಧಕರ ಭಾರತ ಬಹುಮಟ್ಟಿಗೆ ವರ್ತಮಾನಕ್ಕೇ ಮುಖ ತಿರುಗಿಸುವಂಥದು. ಇಲ್ಲಿ ಸಾಮಾನ್ಯವಾಗಿ ಬಡತನ ಒಂದು ಸಮಸ್ಯೆಯೇ ಅಲ್ಲ. ಅಥವಾ ಬಡತನವನ್ನು ಕೂಡ ಇಲ್ಲಿ ಆಧ್ಯಾತ್ಮೀಕರಿಸಲಾಗುತ್ತದೆ. ನೈಪಾಲರ ಭಾರತಕ್ಕೆ ಪೂರ್ಣವಾಗಿ ವಿರುದ್ಧ ದಿಕ್ಕಿನದು ರಾಜಾರಾಯರ ಭಾರತ. ಇಲ್ಲಿ ಎಲ್ಲವೂ ಬ್ರಹ್ಮವೇ. ಗಂಗೆ ಎಂದರೆ ರೋಮಾಂಚನ, ಹಿಮಾಲಯ ಎಂದರೆ ಕಂಪನ. ಈ ಧರೆಯ ಮಣ್ಣೇ ಪವಿತ್ರ. ಭಾರತದ ಆಧ್ಯಾತ್ಮಿ೯ಕತೆಯ ಬಗ್ಗೆ ಎಷ್ಟೇ ಗೌರವವಿದ್ದರೂ ಈ ಬ್ರಹ್ಮ ಸ್ವರೂಪಿ ಬರವಣಿಗೆಯ ಭಾರವನ್ನು ತಡೆದುಕೊಳ್ಳುವುದು ಕಷ್ಟ.

ಈಗ ಸಮಸ್ಯೆ ಇರುವುದು ಈ ಎರಡೂ ಭಾರತಗಳು ಬೇರೆಯೇ ಆಗಿ ಉಳಿಯಬೇಕೇ ಎಂಬಲ್ಲಿ. ಸಂಪೂರ್ಣವಾಗಿ ಒಳಗಿನಿಂದ ಬರೆಯುವ ಆಧುನಿಕ ಲೇಖಕನಿಗೆ ಇವೆರಡೂ ಬೇರೆ ಬೇರೆಯಾಗಿಯೇ ಉಳಿಯಬೇಕಿಲ್ಲ. ಭಾರತವನ್ನು ಜಡ, ಸ್ಥಾವರ ಎಂದು ಹೀಗಳೆಯುವ ಆತಂಕಕೇಂದ್ರಿತರು ಆ ಜಡದ, ಹಿಮ್ಮುಖದ, ಸ್ಥಾವರದ ಸ್ವರೂಪವನ್ನು ಇನ್ನಷ್ಟು ಆತ್ಮೀಯತೆಯಿಂದ ಪರೀಕ್ಷಿಸಬೇಕಾದ ಅಗತ್ಯವಿದೆ. ಅದರಲ್ಲೂ ಜಾಗತಿಕ ಅಭಿವೃದ್ಧಿ ಪಥದ ವಿನಾಶಕಾರಿ ಪಥದ ಪರಿಣಾಮ ಗೊತ್ತಿರುವಂಥವರು ತಮ್ಮ ಆತಂಕದ ಮೂಲ ನೆಲೆಗಳನ್ನು ಸೂಕ್ಷ್ಮವಾದ ನೆಲೆಗಳಲ್ಲಿ ಪರೀಕ್ಷಿಸಿಕೊಳ್ಳಬೇಕಾಗಿದೆ. ನಾವು ಯಾವುದ್ಯಾವುದನ್ನು ಜಡ, ಹಿಮ್ಮುಖಿ ಎನ್ನುತ್ತೇವೆಯೋ, ಅವುಗಳಲ್ಲಿ ಮಾನವ ನಾಗರಿಕತೆಯ ಮೂಲಭೂತ ಸತ್ವಗಳಿವೆಯೇ ಎಂಬುದನ್ನು ನೋಡಬೇಕಾಗಿದೆ.

ಚರಿತ್ರೆಯ ವರ್ತಮಾನದಲ್ಲಿ ಮಾತ್ರ ನಿಂತಿರುವವರಿಗೆ ಆತಂಕ ಸಹಜವಾದ, ಅಧಿಕೃತವಾದ ಅನುಭವ. ಚರಿತ್ರೆಯ ಭೂತದಲ್ಲಿ ಮಾತ್ರ ಹುದುಗಿಹೋಗಿರುವವರಿಗೆ ಸಹಜವಾಗಿಯೇ ಆನಂದ, ರೋಮಾಂಚನ ಅಧಿಕೃತ ಅನುಭವ. ಭೂತ ವರ್ತಮಾನಗಳೆರಡೂ ಭವಿಷ್ಯದ ಕಡೆಗೆ ನಡೆಯುವಂಥದು ಎಂದು ತಿಳಿದವರಿಗೆ ಆತಂಕ- ಆನಂದಗಳೆರಡೂ ಒಟ್ಟಿಗೆ ಹೋಗುತ್ತವೆ. ಅಂಥ ಭಾರತ ಗ್ರಹಿಕೆಗಾಗಿ ನಾವು ಕಲಿಯಬೇಕಾಗಿದೆ.

ಈ ಸಮಸ್ಯೆ ರಾಜಕಾರಣದಲ್ಲೂ ಇಷ್ಟೇ ಆಳವಾಗಿ ಹಬ್ಬಿರುವಂಥದು. ಭಾರತದ ಬಗ್ಗೆ ಸಾರಾಸಗಟಾಗಿ ತಿರಸ್ಕಾರ ಹೊಂದಿರುವ ನಾಯಕರುಗಳ, ವಿಜ್ಞಾನಿಗಳ ಯುಗವಿದು. ಈ ಕತ್ತೆಗಳಿಗೆ ಪಶ್ಚಿಮದ್ದೆಲ್ಲ ಸ್ವರ್ಗವೇ. ಅದೇ ರೀತಿಯಲ್ಲಿ ಇನ್ನೊಂದು ರೀತಿಯ ಗಾರ್ದಭಗಳಿಗೆ ಭಾರತದ್ದೆಲ್ಲವೂ ಸ್ವರ್ಗಸಮಾನವೇ.

ಈ ನಾಡು ಬಹಳ ಬೇಗ ಕಂಗೆಡಿಸಿಬಿಡುತ್ತದೆ. ಸೂಕ್ಷ್ಮವಾಗಿ ಯೋಚಿಸಿದಂತೆಲ್ಲ, ಎಂಥವರೂ ದಿಗ್ಭ್ರಮೆಗೆ ಒಳಗಾಗುತ್ತಾರೆ. ಆಗ, ಅವರು ಒಂದು ಅತಿಗೆ ಹೋಗಿ ನಿಲ್ಲುತ್ತಾರೆ. ಆತಂಕ ಮತ್ತಿ ಆರಾಧನೆಗಳ ಪ್ರತ್ಯೇಕ ಲೋಕಕ್ಕೆ ಹೋಗಿ ಬೀಳುತ್ತಾರೆ.

ಈ ದೃಷ್ಟಿಯಿಂದ, ಕನ್ನಡ ನವೋದಯದ ಕುವೆಂಪು, ಕಾರಂತರಂಥವರೇ ಹೆಚ್ಚು ಗಟ್ಟಿ ನೆಲೆಯಲ್ಲಿದ್ದಾರೆ ಎನಿಸುತ್ತಿದೆ. ಉತ್ಪ್ರೇಕ್ಷಿತ ತಲ್ಲಣಗಳೂ ಇಲ್ಲ, ಹುಂಬ ಪೂಜೆಯೂ ಇಲ್ಲ. ಭಾರತದ ಚರಿತ್ರೆಯ ಬಹಿರಂಗ ಗತಿ ಮತ್ತು ಅಂತರಂಗದ ಲಯಗಳೆರಡಕ್ಕೂ ಹತ್ತಿರವಾಗಿದ್ದ ಪ್ರತಿಭೆಯ ಮುಖ್ಯ ಶಕ್ತಿ ಇದು ಎನ್ನಬಹುದು.

~ ಡಿ.ಆರ್.ನಾಗರಾಜ್

( ನಾವು- ನೀವು ವಾರಪತ್ರಿಕೆಯ ‘ಇಷ್ಟಾರ್ಥ’ ಅಂಕಣದಲ್ಲಿ ಪ್ರಕಟವಾಗಿದ್ದ ಲೇಖನ. ‘ಸಂಸ್ಕೃತಿ ಕಥನ’ ಪುಸ್ತಕದಿಂದ ಇದನ್ನು ಆಯ್ದುಕೊಳ್ಳಲಾಗಿದೆ. ಡಿ.ಆರ್. ಬರಹಗಳ ಈ ಕೃತಿಯ ಸಂಪಾದಕರು ಅಗ್ರಹಾರ ಕೃಷ್ಣಮೂರ್ತಿ)