ಊರು ಸುಟ್ಟರೂ ಹನುಮಪ್ಪ ಹೊರಗೆ! ~ ಹನುಮಂತ ಹಾಲಿಗೇರಿ ಹೊಸ ನಾಟಕ…

“ರವೀಂದ್ರ ಕಲಾಕ್ಷೇತ್ರ 150 ಸುವರ್ಣ ಸಂಭ್ರಮ ಸಮಿತಿಯವರು ನಾಟಕ ಸ್ಪರ್ಧೆ ಏರ್ಪಡಿಸಿದ್ದನ್ನು ಕೇಳಿ ಪಟ್ಟಾಗಿ ಕುಳಿತು ಒಂದು ವಾರದಲ್ಲಿಯೇ ಈ ನಾಟಕ ಬರೆದು ಪೋಸ್ಟ್ ಮಾಡಿದ್ದೆ. ಆದರೆ, ಬರೆದಾದ ಮೇಲೆ ಸುಮ್ಮನಿರಲಿಕ್ಕಾಗದೆ ಓದಿಗಾಗಿ ಗೆಳೆಯ ಮಹಾದೇವ ಹಡಪದ ಅವರಿಗೆ ಕಳಿಸಿದ್ದೆ. ಮಹಾದೇವ ಓದಿ ಇಷ್ಟಪಟ್ಟು ತಮ್ಮ ಆಟಮಾಟ ತಂಡದಿಂದಲೇ ಪ್ರದರ್ಶಿಸಲು ಏರ್ಪಾಟುಮಾಡಿಕೊಂಡಿದ್ದರು. ಇಂದು ನಾಟಕ ಗದಗಿನಲ್ಲಿ 12ನೆ ಪ್ರದರ್ಶನ ಕಾಣುತ್ತಿರುವ ಸಂದ‍ರ್ಭದಲ್ಲಿಯೇ ನಾಟಕ ಬೆಂಗ್ಳೂರು ಸಮಿತಿಯ ರಂಗಕರ್ಮಿ ಶಶಿಧರ ಭಾರಿಘಾಟ್‍ ನಾಟಕ ರಚನಾ ಸ್ಪರ್ಧೆಯಲ್ಲಿ ಬಹುಮಾನ ಪಡೆದ ಸಂಭ್ರಮದ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಸಮಿತಿಯವರೆ ನಾಟಕ ಕೃತಿಯನ್ನು ಪ್ರಕಟಿಸಿ ಬಿಡುಗಡೆ ಮಾಡುತ್ತಿರುವುದರಿಂದ ನನ್ನಿಂದ ಅತ್ಯಂತ ಕಡಿಮೆ ಶ್ರಮ ಮತ್ತು ಸಮ ತಿಂದು ಹೊರಬರುತ್ತಿರು ಕೃತಿ ಇದು” – ಎನ್ನುತ್ತಾರೆ ಹನುಮಂತ ಹಾಲಿಗೇರಿ. ಈ ನಾಟಕದ ಎರಡು ದೃಶ್ಯಗಳು ನಿಮಗಾಗಿ…. ಉಳಿದವನ್ನ ಮಾತ್ರ ನೀವೇ ನೋಡಿ ಆನಂದಿಸಬೇಕು!

 

ನಾಟಕದ ಒಂದು ನೋಟ

ನಾಟಕದ ಒಂದು ನೋಟ

ದೃಶ್ಯ: ೧
(ಬೆಳದಿಂಗಳ ರಾತ್ರಿ, ರಂಗಭೂ”ಯು ನಡು”ನ ಹನುಮನ ಮೂರ್ತಿಯ ಮೇಲೆ ನಿಧಾನಕ್ಕೆ ಬಿದ್ದು ಮೂರ್ತಿಯ ಮುಖ ಬೆಳಗುತ್ತದೆ. ಬೆಳಕು ಸ್ಪಷ್ಟಗೊಳ್ಳುತ್ತಾ ಹೋದಂತೆಲ್ಲ ಹನುಮನ ಮೂರ್ತಿಯ ಮುಖದಲ್ಲಿ ವ್ಯಂಗ್ಯ ಇದ್ದು ಇಲ್ಲದಂತೆ ಗೋಚರಿಸುತ್ತದೆ. ಅದರ ಪಕ್ಕದಲ್ಲಿರುವ ದೀಪಸ್ಥಂಭದ ಮೇಲೆ ದೀಪ ಉರಿತಾ ಇದೆ.
ದೇವಸ್ಥಾನದ ಮುಂದೆ ಸುತ್ತಮುತ್ತ ಯಾವದೋ ಕಾಲದಲ್ಲಿ ಕಟ್ಟಿದ ಮನೆಗಳ ಪಳಿಯುಳಿಕೆಗಳು ಕಲಾಚಿತ್ರಗಳಂತೆ ಕಾಣುತ್ತಿವೆ. ಎಡಗಡೆಗೆ ಒಂದಿಷ್ಟು ಮನೆಗಳು, ಮನೆಗಳ ಮುಂದೆ ಆಲದ ಮರದ ಕಟ್ಟೆ. ಮರಕ್ಕೆ ವಜ್ರಮಟ್ಟಿ ಎಂಬ ಬೋರ್ಡು ತೂಗು ಹಾಕಲಾಗಿದೆ. ದೇವಸ್ಥಾನದ ಬಲಗಡೆ ಅದೇ ತರಹದ ಒಂದಿಷ್ಟು ಮನೆಗಳು. ಆಲದ ಕಟ್ಟೆ. ಮರಕ್ಕೆ ಧರೆಗಟ್ಟಿ ಎಂಬ ಬೋರ್ಡು.
ದೂರದಲ್ಲೆಲ್ಲೋ ಟ್ಯಾಕ್ಟರ್ ಬಂದು ನಿಂತ ಶಬ್ದ ಕೇಳುತ್ತದೆ. ಒಬ್ಬ ಕಂಬಳಿ ಹೊದ್ದು ಅತ್ತಿತ್ತ ನೋಡುತ್ತಾ ಕಳ್ಳಹೆಜ್ಜೆ ಇಟ್ಟು ರಂಗಭೂಮಿ ಪ್ರವೇಶಿಸುತ್ತಾನೆ. ಗುಡಿಯ ಅಕ್ಕಪಕ್ಕ ಸ್ವಲ್ಪ ದೂರ ಗಮನಿಸುತ್ತಾನೆ. ತೆಂಗಿನ ಗಿಡ ಏರಿದಂತೆ ಸ್ವಲ್ಪ ದೂರ ಸ್ಥಂಭ ಏರಿ ಯಾರೂ ಇಲ್ಲ ಎಂದು ಮನಗಂಡು ಜೋರಾಗಿ ಸಿಳ್ಳು ಹೊಡೆಯುತ್ತಾನೆ.
ಕಂಬಳಿ ಹೊದ್ದ ಎಳೆಂಟು ಜನ ಅವಸರಿಸಿ ಕಳ್ಳಹೆಜ್ಜೆ ಇಡುತ್ತಾ ಬರುತ್ತಾರೆ. ಅವರಲ್ಲೊಬ್ಬ ದೇವಸ್ಥಾನದ ಬಾಗಿಲು ತೆರೆದು ಊದುಬತ್ತಿ ಬೆಳಗಿ ಎನೇನೋ ಮಂತ್ರ ಫಠಿಸುತ್ತಾ ಪೂಜೆ ಮಾಡುತ್ತಾನೆ. ಅದಾದ ಮೇಲೆ ಮೂರ್ತಿ ಸ್ಥಾಪಿಸಿದ ಕಲ್ಲುಮಂಟಪವನ್ನು ಹಾರೆ ಗುದ್ದಲಿಗಳಿಂದ ಹಡ್ಡುತ್ತಾರೆ, ‘ಸಾವಕಾಶ, ಮೂರ್ತಿ ಮುಕ್ಕಮಾಡಬ್ಯಾಡ್ರಿ’ ಎಂಬ ಕಿವಿ ಮಾತುಗಳು ಕೇಳಿ ಬರುತ್ತವೆ. ಕೊನೆಗೊಮ್ಮೆ ಆ ನಿಶಬ್ದದಲ್ಲಿ ಜೈ ಶ್ರೀ ಹನುಮಾನ್ ಎಂಬ ಉದ್ಘೋಷದೊಂದಿಗೆ ಮೂರ್ತಿ ಮೇಲೇಳುತ್ತದೆ.
‘ಸಾವಕಾಶ ತುಗೊಂಡು ಬರ್ರಿ, ಅಲ್ಲಿ ಟ್ಯಾಕ್ಟರ್‍ನೊಳಗ ಇಡೋಣು’ ಅಂತ ಗುಂಪಿನಲ್ಲಿದ್ದ ಹಿರಿಕರು ಹೇಳುತ್ತಿರುವಾಗಲೇ ಜೈ ಹನುಮ ಜೈ ಜೈ ಹನುಮ ಎಂದುಕೊಳ್ಳುತ್ತಾ ಮೂರ್ತಿಯನ್ನು ಹೊತ್ತೊಯ್ಯುತ್ತಾರೆ. ಅವರು ಹೊತ್ತೊಯ್ದ ಸ್ವಲ್ಪ ಹೊತ್ತಿನಲ್ಲೆ ಟ್ರ್ಯಾಕ್ಟರ್ ಪ್ರಾರಂಭವಾದ ಶಬ್ದ ಕೇಳುತ್ತದೆ.
ನಿಧಾನಕ್ಕೆ ಗುಡಿಯ ಅಂಗಳದಲ್ಲಿ ಬೆಳಕು ಚಲ್ಲುತ್ತದೆ. ಅಲ್ಲೊಂದು ಗೋಣಿ ಚೀಲದ ಮೇಲೆ ಹುಚ್ಚಮಲ್ಲ ಮಲಗಿದ್ದಾನೆ. ದೇವರು ಕಳ್ಳತನವಾಗೋದನ್ನು ನೋಡಿ ಜೋರಾಗಿ ನಗುತ್ತಾನೆ.)

ಹುಚ್ಚಮಲ್ಲ: ಹಹ್ಹಹ್ಹಾ, ದೇವರು ನನ್ನ ಕಾಪಾಡುತಾನು ಅನ್ಕೊಂಡು ನಾನು ಇಲ್ಲಿ ಬಂದು ಮಲಕೋತಿದ್ದಿನಿ. ಈಗ ನೋಡಿದರ ದೇವರು ತನ್ನನ್ನು ತಾನ$ ಕಾಪಾಡಿಕೊಳ್ಳಲಿಲ್ಲ. ಅಂವನ್ನ ಹೊತ್ತುಗೊಂಡು ಹೋಗಿಬಿಟ್ರು. ಹುಚ್ಚ ಸೂಳಿ ಮಕ್ಳು, ದೇವರು ಸರ್ವ ಶಕ್ತ. ನಮ್ಮನ್ನೆಲ್ಲ ಕಾಪಾಡೋನು ಅಂತ ಏನೇನಾರ ಹೇಳ್ತಾರ. ಮತ್ ಅಂವನ ಕಳ್ಳತನ ಮಾಡಾತಾರ. ಇನ್ನ ನನ್ನನ್ನು ಯಾರು ಕಾಪಾಡೋರು, ಯಾರು ಕಾಪಾಡೋರು… (ಚೀರುತ್ತಾ ಓಡಿ ಹೋಗುವನು).

ದೃಶ್ಯ: ೨

(ನಿಧಾನಕ್ಕೆ ತೆರೆ ಕೆಂಪುಗಾಗುತ್ತಾ ಸೂರ್ಯನ ಉದಯವನ್ನು ಸಾರುತ್ತದೆ. ಹಕ್ಕಿಗಳ ಚಿಲಿಪಿಲಿ, ಅದರ “ಂದೆಯೇ “ಏಳು ಏಳಯ್ಯಾ ಶ್ರೀ ಮಾರುತೇಶಾ, ಶ್ರೀ ಹನುಮದೇವಾ ಏಳಯ್ಯಾ” ಎಂಬ ಹಾಡು ಕೇಳಿ ಬರುತ್ತದೆ. ವಜ್ರಗಟ್ಟಿಯಲ್ಲಿ ಮ”ಳೆಯರು ತಂಬಿಗೆ ತುಗೊಂಡು ಇದ್ದಿಲು ತಿಕ್ಕುತ್ತಾ ಹೊರಗಡೆ ಹೋಗುವರು, ಕೆಲವರು ಅಂಗಳ ಕಸ ಗೂಡಿಸುತ್ತಿರುವರು. ಎಳೆ ಮಕ್ಕಳು ನಿದ್ದೆಗಣ್ಣಲ್ಲಿ ಎದ್ದು ಉಚ್ಚೆ ಹೊಯ್ಯುತ್ತಿರುವರು. ಒಂದಿಷ್ಟು ಮಂದಿ ಅಂಗಳದಲ್ಲಿ ಉರಿ ಕಾಸಿಕೊಳ್ಳುತ್ತಿದ್ದಾರೆ.
ತೋಯ್ದ ಮೈಯಲ್ಲಿರುವ ಪೂಜಾರಿ ಹಿತ್ತಾಳೆ ಕೊಡ ಹೊತ್ತು ಮಂತ್ರ ಮಣಮಣಿಸುತ್ತಾ ಇವರ ನಡುವೆ ದಾರಿ ಮಾಡಿಕೊಂಡು ದೇವಸ್ಥಾನದ ಕಡೆ ಹೊಗುತ್ತಾನೆ. ದೇವಸ್ಥಾನದಲ್ಲಿ ದೇವರು ಇಲ್ಲದಿರುವುದು ಗಮನಕ್ಕೆ ಬಂದೊಡನೆ ಹೊತ್ತ ಕೊಡವನ್ನು ಒಗೆದು “ಗುಡಿಯಾನ ಹನುಮಪ್ಪ ಕಳುವಾಗ್ಯಾನಪೋ’ ಅಂತ ಜನರ ಮಧ್ಯೆ ಹಾಯ್ದು ಓಡಿಬರುತ್ತಾನೆ. ಜನರೂ ಅವನನ್ನು ಬೆನ್ನಟ್ಟುತ್ತಾರೆ. ಈ ಗುಂಪು ರಂಗಭೂಮಿಯನ್ನು ಒಂದು ಸುತ್ತು ಹಾಕುತ್ತದೆ. ಗುಂಪು ಮತ್ತೆ ಪ್ರವೇಶಿಸುವ ಮುಂಚೆಯೇ ವಜ್ರಮಟ್ಟಿಯ ಆಲದ ಮರದ ಕಟ್ಟೆಯ ಮೇಲೆ ಗೌಡರು ಆಸೀನರಾಗಿದ್ದಾರೆ. ಗುಂಪು ಸಭೆಯಾಗಿ ಮಾರ್ಪಡುತ್ತದೆ. ಪೂಜಾರಿ ಇನ್ನು ರೊಯ್ಯ ಅಂತ ಅಳ್ಳುತ್ತಲೇ ಇದ್ದಾನೆ.)
ಗೌಡ: ರೀ ಪುಜಾರ್ರೆ, ಬಾ ಮುಚ್ರಿ ಸಾಕು (ಪೂಜಾರಿ ಬಾ ಮುಚ್ಚಿಕೊಂಡು ದುಖಿಃಸುವುನು)
ಗಂಗ್ಯಾ: ನೀವು ಏನಾದ್ರೂ ತುಡುಗ ಮಾಡಿರೇನ್ರಿ.
(ಪುಜಾರಿ ಬಾ ಮುಚ್ಚಿಕೊಂಡೆ ದುಖಿಸುತ್ತಾ ಇಲ್ಲವೆಂದು ಗೋಣು ಹಾಕುವನು)
ಗೌಡ: ಮತ್ಯಾಕ ಹೆದರಕೊಂಡು ಅಳ್ಳಾಕ
(ಪುಜಾರಿ ಬಾ ಮುಚ್ಚಿಕೊಂಡೆ ಜೋರಾಗಿ ಸೌಂಡು ಮಾಡುವನು)
ಗೌಡ: ರ್ರಿ ಏನಾತು ಅಂತ ಬೊಗಳ್ರಿ, ಯಾಕ ಬಾ ಮುಚ್ಚಕೊಂಡು ಒಂದೆ ಅಂತಿರಿ
ಪುಜಾರಿ: ನೀವು ಬಾ ಮುಚ್ಚಿ ಅಂದಿದ್ರೆಲ್ಲ, ಅದಕ್ಕ ಮುಚ್ಚಿದ್ದೆ.
ಗೌಡ: ತುಗೊರೆಪಾ, ನಮಗ ಎಂಥ ಪುಜಾರಿ ಗಂಟ ಬಿದ್ದಾನ ನೋಡ್ರಿ, ರಿ ಇದ್ದದ್ದ ಇದ್ದಂಗ ಹೇಳಿದ್ರಿ ಪಾಡಾತು. ಇಲ್ಲಂದ್ರ ನೀವು ತುಡುಗ ಮಾಡಿರಿ ಅಂತ ಕೇಸ್ ಜಡದ ಬಿಡ್ತೇನು.
ಪೂಜಾರಿ: ಯಪ್ಪಾ ಗೌಡ್ರ ಯಾವ ಮಾತಂತ ಆಡತಿರಿ, ಒಳ್ತು ಅನ್ರಿ. ದಿನಾ ಅಂವನ ಮೈ ತೊಳದು ಹೂ ಎರಿಸಿ ಸ್ವಂತ ಮಗನ್ನ ಜ್ವಾಪಾನ ಮಾಡಿದಂಗ ಮಾಡತಿದ್ದೆ. ಈಗ ನೋಡಿದರ ಅಂವನ ಇಲ್ಲ. ಪುಜಾರಿ ಮತ್ತೆ ರೊಂಯ್ಯ ಅಂತ ಅಳ್ಳಲು ಶುರುಹಚ್ಚಿಕೊಳ್ಳುವಷ್ಟರಲ್ಲೆ ಗೌಡ ಸಿಟ್ಟಿಲೇ ನೋಡಿದ್ದರಿಂದ ತೆಪ್ಪಗಾಗುವನು)
ಗೌಡ: (ಚಿಂತಿತನಾಗಿ) ಈ ಮನುಷ್ಯ ಜೀವ ಯಾದಕ್ಕ ಹುಟ್ಟೇತಿ. ತಪ್ಪು ಮಾಡಾಕ ಹುಟ್ಟೇತಿ. ಪರಪಂಚದಾಗ ನನ್ನೂ ಸೇರಿಸಿಕೊಂಡು ರಗಡ ಜನಾ ತೆಪ್ಪು ಮಾಡ್ತಿವಿ. ತೆಪ್ಪ ಮಾಡಿದಾಗ ನಾನು ಇದೊಮ್ಮೆ ಹೊಟ್ಯಾಗ ಹಾಕ್ಕೋ ಹನುಮಪ್ಪ ಅಂತ ಕೈ ಮುಗಿತಿದ್ದೆ. ಅಷ್ಟಕ್ಕ ಅದು ಮಾಫ್ ಆಕ್ಕಿತ್ತು. ಆಮ್ಯಾಲ ಯಥಾ ಪ್ರಕಾರ ಮುಂದಿನ ತೆಪ್ಪ ಮಾಡಾಕ ದಾರಿ ಆಕ್ಕಿತ್ತು. ಈಗ ಹನುಮಪ್ಪ ಗುಡಿಯಾಗ ಇಲ್ಲ ಅಂದ್ರ ಮುಂದಿನ ತೆಪ್ಪು ಮಾಡಾಕ ದಾರಿನೆ ಇಲ್ಲ. ಎಲ್ಲ ಊರ ಗುಡಿಯಾಗ ದೇವರು ಇರೋದ್ಯಾವುದಕ್ಕ, ಆ ಊರ ಮಂದಿ ಮಾಡೋ ತೆಪ್ಪಗಳನ್ನು ಹೊಟ್ಯಾಗ ಹಾಕ್ಕೊಳುದಕ್ಕ. ನಮ್ಮಂಥ ನರಮನುಷ್ಯರ ತೆಪ್ಪಗಳನ್ನು ಹೊಟ್ಯಾಗ ಹಾಕ್ಕೊಳು ಆ ದೇವರ$ ಈಗ ಕಳುವಾಗ್ಯಾನಂದ್ರ ಎಂಥ ಕಾಲ ಬಂತು ಅಂತ…
(ಪುಜಾರಿ ಮತ್ತೆ ಅಳು ಜೋರು ಮಾಡುವನು)
ಗಪ್ ಇರು, ಈಗಾರ ಸ್ವಲ್ಪ ಸುಮ್ಮನಾಗಿ ಏನಾಗೇತಿ ಅಂತ ಹೇಳು
ಪೂಜಾರಪ್ಪ: (ಅಳ್ಳುತ್ತಾ) ದಿನಾ ಹೊದಂಗ ಗುಡಿಗೆ ಹ್ವಾದ್ನಿರಿ. ಆದ್ರ ಅಲ್ಲಿ ಹನುಮಪ್ಪನ ಇರಲಿಲ್ಲ. ನಮ್ಮನ್ನೆಲ್ಲ ಕಾಪಾಡೋ ಆ ದೇವರನ್ನು ನಾವು ಕಾಪಾಡಲಿಲ್ಲಲಾ ಅಂತ ನನಗ ಅಳೂ ಬಂತ್ರಿ. ಹಂಗ ಓಡಿ ಬಂದ ಬಿಟ್ನಿ. (ಮುಸಿ ಮುಸಿ ಅಳ್ಳುತ್ತಾ)
ಭರಮ್ಯಾ: ಅವರೌರ ಆದರೆಗಟ್ಟಿ ಮಂದಿನ ನಮ್ಮ ದೇವರನ್ನು ಹೊತ್ತುಗೊಂಡು ಹೋಗ್ಯಾರ್ರಿ ಗೌಡ್ರ.
ಗೌಡ: ಅದೆಂಗ ಹೇಳ್ತಿ?
ಭರಮ್ಯಾ: ನಾನು ನಿನ್ನೆ ರಾತ್ರಿ ಗುಡಿ ಹಿಂದಿನ ಹೊಲದಾಗ ಕಬ್ಬಿಗೆ ನೀರು ಬಿಟ್ಟಿದ್ನಿ. ಆಗ ಧರೆಗಟ್ಟಿ ಕಡೆಂದ ಡರ್‌ರ್‌ರರ್ ಅಂತ ಟ್ಯಾಕ್ಟರ್ ಬಂತರಿ. ಬಂದವರ ಹನುಮಪ್ಪಗ ಪೂಜಿ ಮಾಡಿ ಹಾರಿ ಗುದ್ದಲಿಂದ ಮಂಟಪ ಒಡ್ದು ಹನುಮಪ್ಪನ್ನ ಅನಾಮತ್ತಾಗಿ ಎತ್ತಿಕೊಂಡು ಟ್ಯಾಕ್ಟರ್‌ಗೆ ಹಾಕ್ಕೊಂಡು ಹೋಗಿಬಿಟ್ರು. ಪಾಪ, ನಮ್ಮ ಹನುಮಪ್ಪ ತಂಡ್ಯಾಗ ನಡುಗಕೋತ ದೇವರಂಗ ಟ್ಯಾಕ್ಟರ್‌ನ್ಯಾಗ ಸುಮ್ಮನ ಕುಂತಿದ್ದ.
ಗೌಡ: ನಿನೇನ್ ಮಾಡ್ತಿದ್ಯೋ ಅಲ್ಲಿ. ಅವರನ್ನ ನಿನ್ನ ಜೀವ ಕೊಟ್ಟಾದ್ರೂ ತಡಿಬೇಕಿತ್ತು.
ಭರಮ್ಯಾ: ಎಪ್ಪಾ, ನಾ ಉಳದ್ರ ಮುಂದ ದೇವರು ದಿಂಡರು ಎಲ್ಲ, ನಾನ ಹೋಗಿಬಿಟ್ರ ಏನು ಮಾಡೂದೈತಿ ಅನಕೊಂಡು ಸುಮ್ಮನ ಕುಂತಿದ್ನಿರಿ.
ರವಿ: ಅಪ್ಪಾ. ಭರಮಪ್ಪ ಹೇಳೂದ್ರಲ್ಲಿ ಖರೆ ಐತಿ. ಈ ಕಾಲದಲ್ಲಿ ಕಲ್ಲು ದೇವರ ಬಗ್ಗೆ ನಾವಿಷ್ಟು ತಲೆ ಕೆಡಿಸಿಕೊಳ್ಳಬಾರದು ಅನಿಸುತ್ತೆ. ಅದು ಹೋದರೆ ಹೋಗಲಿ ಬೇರೆ ಮೂರ್ತಿ ತಂದು ಪ್ರತಿಷ್ಠಾಪಿಸೋಣು.
ಗೌಡ: ಅಬಬಾಬಾ, ನೋಡ್ರೆಪಾ, ಮಗ ನನಗೆ ಬುದ್ಧಿ ಹೇಳಾಕ ಬಂದ. ನೋಡು ಮಗನೆ ನೀನು ಪ್ಯಾಟ್ಯಾಗ ಓದಿಕೊಂಡು ಬಂದಿ. ನಿನಗ ಇದೆಲ್ಲ ತಿಳಿದುಲ್ಲ, ಸ್ವಲ್ಪ ಸುಮ್ಮನ ಮುಚ್ಚಕೊಂಡು ಕೂಡು. (ಜನರತ್ತ ತಿರುಗಿ) ಮುಂದ ಏನು ಮಾಡೂದು ಅಂತಿರಿ?
ಒಬ್ಬ: ಸೀಮೆಹನುಮಪ್ಪನ ಕಳ್ಳತನ ಮಾಡಬೇಕಂತ ಧರೆಗಟ್ಟಿ ಹುಂಬರು ಬಾಳ ಸಲ ಪ್ರಯತ್ನ ಮಾಡ್ತಾ ಇದ್ರು. ಈ ಸಲ ಗೆದ್ದುಬಿಟ್ಟಾರ. ಸೀಮೆ ಹನುಮಪ್ಪನ ಮ್ಯಾಲ ಅವರಿಗೆ ಎಷ್ಟು ಹಕ್ಕು ಇದೆಯೋ ಅಷ್ಟ ಹಕ್ಕು ನಮಗೂ ಐತಿ. ನಾವು ಸುಮ್ಮನಿರಬಾರದು ಇನ್ನ.
ಇನ್ನೊಬ್ಬ: ನಾವೇನು ಬಳಿ ತೊಟ್ಟಿಲ್ಲ, ಕೊಡ್ಲಿ ಕುಡಗೋಲು ತುಗೊರಿ, ಸೀವಿ ಹನುಮಪ್ಪನ ಹೊತಗೊಂಡು ಬರೂಣು,
ಒಬ್ಬ: ಸಮಾಧಾನ, ಮೊದಲು ಸರಳ ರೀತಿಯೊಳಗ ಕೇಳಿ ನೋಡೂಣು. ಆಮ್ಯಾಲ ಇದ್ದ ಐತೆಲ್ಲ ದಂಡಂ ದಶಗುಣಂ.
ಮತ್ತೊಬ್ಬ: ನಾವು ದಂಡ ತುಗೊಂಡಾಗ ಅವರೆನೂ ಸುಮ್ಮನ ನಿಂತಿರೂದಿಲ್ಲ. ಈಗ ಅದೆಲ್ಲ ನಡೆಯೋದಿಲ್ಲ. ಕಾನೂನು ಕೈಗೆ ತುಗೊಳ್ಳೋದು ಸರಿಯಲ್ಲ. ಪೊಲೀಸ್ ಕಂಪ್ಲೇಂಟ್ ಕೊಡೋದು ಒಳ್ಳೆದಂತ ಕಾಣಿಸತೈತಿ.
ರವಿ: ನಾನೊಂದು ಹೇಳ್ಲಾ, ನನ್ನ ಮಾತು ನೀವು ಕಿವಿಯಾಗ ಹಾಕ್ಕೊಳಂಗಿಲ್ಲ. ಆದ್ರೂ ಹೇಳೂದು ನನ್ನ ಕರ್ಮ. ತನ್ನನ್ನು ತಾನ ರಕ್ಷಿಸಿಕೊಳ್ಳಲಾಗದ ಕಲ್ಲು ದೇವರಿಗಾಗಿ ಯಾಕ ಇಷ್ಟೊಂದು ತೆಲಿ ಕೆಡಿಸಿಕೋತಿರಿ. ಅದರ ಬದ್ಲಿ ಇನ್ನೊಂದು ಕಲ್ಲ ತಂದು ಇಟ್ಟರ ಮುಗಿತು.
ಇನ್ನೊಬ್ಬ: ರವಿಗೌಡ್ರ ನೀವು ಊರ ಗೌಡ್ರ ವಂಶದವರಾಗಿ ಊರು ಕಾಯೋ ಕೆಲಸ ಮಾಡಬೇಕು. ಅದು ಬಿಟ್ಟು ದೇವರಿಗೆ ಕಲ್ಲು ಮಣ್ಣು ಅಂತಿರಲ್ರಿ. ಇದು ಬೇಸಿ ಅಲ್ಲ ನೋಡ್ರಿ.
ಒಬ್ಬ: ಜಾಸ್ತಿ ಸಾಲಿ ಓದಿದ್ರ ಹಿಂಗ ಆಗೋದು, ಸಣ್ಣಗೌಡ್ರೆ ದೇವರನ್ನ ಹಿಂಗ ಆಡಕೊಂಡ್ರ, ಮುಂದ ಊರ ಉಡಾಳ ಹುಡ್ರು ಇನ್ನೆಷ್ಟು ಆಡಕೋಬಾರದು. ದೇವರು, ದೊಡ್ಡವರು ಸಡ್ಲ ಆಗಿ ಮಾತಾಡಬಾರದು. ಈಗಿನ ಹುಡುಗರಿಗೆ ಒಟ್ಟ ಗೌರವ ಇಲ್ಲ.
ತುಳಸಿ: ಅಣ್ಣ ನೀ ಸುಮ್ನ ಕೂಡ್ರು. ನಿನಗ ಏನು ಗೊತ್ತಾಗಂಗಿಲ್ಲ. ಒಳಗ ಹೋಗಿ ಓದಕೋ ಹೂಗು, ನಿನ್ನ ಪುಸ್ತಕ ಕರಿಯಾಕ ಹತ್ಯಾವು, ಹೋಗು.
ಹುಚ್ಚಮಲ್ಲ: (ಚೀರುತ್ತಾ ಬಂದು) ದೇವರು ಹ್ವಾದ. ಇನ್ನ ನಮ್ಮನ್ನ ಯಾರು ಕಾಪಾಡೋರಿಲ್ಲ, ನಮ್ಮನ್ನು ನಾವು ಕಾಪಾಡಕೋಬೇಕು. ಅಯ್ಯಯ್ಯೋ ದೇವರು ಸತ್ತ. ದೇವರು ಸತ್ತ.
ಜನರು: ಏ ಆ ಹುಚ್ಚ ನನ್ನ ಮಗ ಇಲ್ಲಿಗ್ಯಾಕ ಬಂದ. ಆ ಕಡೆ ಒದ್ದ ಕಳಿಸ್ರೋ ಅವನ್ನ. (ಒಂದಿಷ್ಟು ಜನ ಅವನನ್ನು ನೂಕಲು ಬರುವರು.)
ಹುಚ್ಚಮಲ್ಲ: (ಕೊಸರಿಕೊಂಡು) ಏ ಕೈ ಬಿಡ್ರೋ, ನಂದೊಂದು ಪ್ರಶ್ನಿ ಐತಿ. ಅದಕ್ಕ ಉತ್ತರ ಕೊಟ್ರ ನಾ ಸುಮ್ಮಕ ಹೊಕ್ಕಿನಿ
(ಜನರು ಅವಕ್ಕಾಗಿ ನೋಡುವರು)
ಹುಚ್ಚಮಲ್ಲ: ದೇವರು ಸರ್ವ ಶಕ್ತ ಹೌದಿಲ್ಲೋ?
ಜನ: ಹೌದು.
ಹುಚ್ಚ: ಸಕಲ ಪಂಡಿತ ಹೌದಲ್ಲೋ?
ಜನ: ಹೌದು.
ಹುಚ್ಚ: ಭೂತ, ಭವಿಷತ್ತು, ವರ್ತಮಾನಗಳನ್ನು ಅರಿತವ ಹೌದಲ್ಲೋ?
ಜನ: ಏ ಮುಂದ ಹೇಳಲೇ
ಹುಚ್ಚ: ದುಷ್ಟ ಶಿಕ್ಷಕ ಶಿಷ್ಟ ರಕ್ಷಕ ಹೌದಲ್ಲೋ?
ಜನ: ಹೌದು ಹೌದು ಹೌದು, ಮುಂದ ಹೇಳ್ತಿಯೋ ಏನ್( ಹೊಡೆಯಲು ಹೋಗುವರು)
ಗೌಡ: ಏ ಅಂವ ಹೇಳಿ ಕೇಳಿ ಹುಚ್ಚ. ಅಂವನ ಮಾತ ಏನ್ ಕೇಳ್ತಿರಿ ಕಳಿಸ್ರಿ ಅಂವನ್ನ
ಹುಚ್ಚ: ತಡಿರಿ ಗೌಡ್ರ, ಈಗ ಬಂತು ಪ್ರಶ್ನೆ, ಪ್ರಶ್ನೆ ಕೇಳಿದ್ರ ನಿಮ್ಮದು ಹಂಗ ಅಳಗಾಡಬೇಕು.
(ಜನ ಹೋ ಎಂದು ಕೈ ಮಾಡುವರು)
ಹುಚ್ಚ: ಸಬ್‌ಕೋ ಗಪಚುಪ್( ಎಲ್ಲರೂ ಮೌನ) ಸರ್ವಶಕ್ತ, ಸಕಲ ಪಾರಂಗತ, ದುಷ್ಟ ಶಿಕ್ಷಕ ಶಿಷ್ಟ ರಕ್ಷಕನಾದ ದೇವರು ಅಲಿಯಾಸ್ ಹನುಮಪ್ಪನ್ನನ್ನು ಕದ್ದು ಹೊತ್ತುಗೊಂಡ ಹ್ವಾದ್ರು ಯಾಕ್ ಸುಮ್ಮನಿದ್ದ? ದೇವರು ತನ್ನನ್ನು ತಾನು ರಕ್ಷಣೆ ಮಾಡಕೊಳ್ಳಬೇಕೋ ಬೇಡೋ, ಕಳ್ಳತನ ಮಾಡೋ ದುಷ್ಟರಿಗೆ ಶಿಕ್ಷಾ ಕೋಡಬೇಕೋ ಬ್ಯಾಡೋ?
ಗೌಡ: ಏ ಹುಚ್ಚ ಸೂಳಿ ಮಗನ್ನ ಕೂಡ ಏನ್ ಮಾತಾಡಿತಿರೋ. ಊರ ಹನುಮಪ್ಪ ಕಳುವಾಗಿರೋದು ಮರ್‍ಯಾದಿ ಪ್ರಶ್ನಿ ಐತಿ. ಮೊದಲ ಅಂವನ್ ಹುಡುಕೋ ಕೆಲಸ ಮಾಡೋನು
ಹುಚ್ಚ: ಗೌಡ್ರ, ಮೊದಲು ಆ ನಿಮ್ಮ ದೇವರಿಗೆ ಮರ್‍ಯಾದಿಲ್ಲ. ಕಳ್ಳರ ಹೆಗಲ ಮ್ಯಾಲ ಕುಂತುಗೊಂಡು ಓಡಿ ಹ್ವಾದ. ಇನ್ನ ಊರ ಮರ್‍ಯಾದಿ ಪ್ರಶ್ನಿ ಎಲ್ಲಿಂದ ಬಂತು. ಇಲ್ಲಿ ನೀವು ಭಕ್ತರು ಪೇಚಾಡಕ ಹತ್ತಿರಿ. ಅಲ್ಲಿ ಅಂವ ಒಂಕ ಮೋತಿ ಹನುಮಪ್ಪ ಕಳ್ಳರ ಕೂಡ ಸುಮ್ಮನ ಕುಂತಿರ್‍ತಾನ. ಅಂತ ದೇವರು ನಮಗ ಬೇಕಾ. ಹೋಗಲಿ ಬಿಟ್ಟ ಬಿಡ್ರಿ ಅಂವನ, ಅಂವನೌನ.
ಗೌಡ: (ಸಿಟ್ಟಿಗೆದ್ದು) ಏ ಮುಖ ಏನ್ ನೋಡ್ತಿರಿ, ಒದ್ದು ಓಡಿಸರಲೇ ಅಂವನ್ನ (ಜನ ಎಲ್ಲ ಮುಗಿ ಬಿಳುವರು ಕಳ್ಳನನ್ನು ಹೊಡೆಯುವರು.) ರವಿಗೌಡ ಬಿಡಿಸುವನು. ಹುಚ್ಚ ಜೋರಾಗಿ ಇವರಿಗೆ ಬೈಯುತ್ತಾ ಓಡಿ ಹೋಗುವನು.)
ರವಿಗೌಡ: ಇದ್ದುದು ಹೇಳಿದ್ರ ಎದ್ದು ಬಂದು ಎದಿಗೆ ಒದ್ರಂತ. ಪಾಪ, ಅಂವ ಖರೆನ ಹೇಳ್ಯಾನ. ಅಂವ ಶುದ್ಧ ಅದಾನ. ನೀವೆಲ್ಲ ಹುಚ್ಚ ಇದ್ದಿರಿ. ಅಂವಗ ಇರುವಷ್ಟು ಬುದ್ದಿ ನಿಮಗ ಇಲ್ಲ.
ಜನ: ಗೌಡ್ರ, ಸಣ್ಣಗೌಡ್ರ ಸುಮ್ಮನಿರಾಕ ಹೇಳ್ರಿ, ನಿಮ್ಮ ಮುಖ ನೋಡ್ಕೊಂಡು ಅವರನ್ನು ಬಿಟ್ಟಿ”. ಇಲ್ಲಂದ್ರ ಹುಚ್ಚಗ ಬಿದ್ದಂಗ ಇವರಿಗೂ ಹೊಡ್ತ ಬಿಳ್ತಾವು.
ಗೌಡ್ರು: ಏ ಹೋಗ್ಲಿ ಬಿಡ್ರ್ಯೋ. ಆ ಹುಡುಗಂದೂ ತೆಲಿಗೆ ಹಚಗೋಬ್ಯಾಡ್ರಿ. ಮುಂದ ಏನು ಮಾಡೋದು ಅಷ್ಟ ಹೇಳಿ.
ಮತ್ತೊಬ್ಬ: ನಾವು ಯಾಕ ಎಂಎಲ್ಲೆಎಗೆ ಒಂದು ಮಾತು ಕೇಳಬಾರದು. ಎರಡು ಊರಿಗೂ ಸಂಬಂಧಪಡತಾರು ಅವರು.
ಗೌಡ್ರು: ಇದು ಒಳ್ಳೆ ಐಡಿಯಾ(ಮೊಬೈಲ್ ತೆಗೆದು ಫೋನ್ ಮಾಡುವರು)ಸಾಹೆಬರ ನಮಸ್ಕಾರ, ನಾನು ವಜ್ರಮಟ್ಟಿ ದಾನಪ್ಪಗೌಡ.
ಎಂಎಲ್ಲೆ: ಓಹೋ ವಜ್ರಮಟ್ಟಿ ಗೌಡ್ರು, ಈಗಷ್ಟ ನಿಮ್ಮೂರಲ್ಲಿ ಕೊಳವೆಬಾ” ತೆಗೆಸೋದ್ರ ಬಗ್ಗೆ ಜಡ್‌ಪಿ ಸಿಇಓಗೆ ಫೊನ್ ಹಚ್ಚಿದ್ದೆ. ಈಗ ನೋಡಿದ್ರ ನಿಮ್ಮ ಫೋನ್ ಬಂತು. ಹೇಳ್ರಿ ಎನ್ “ಷಯ?
ಗೌಡ: ಇಲ್ಲೊಂದು ಪ್ರಾಬ್ಲಂ ಆಗೇತ್ರಿ ಸಾಹೆಬ್ರ, ನಮ್ಮೂರು ಸೀ” ಹನುಮಪ್ಪನ್ನ ದರೆಗಟ್ಟಿ ಜನ ಕಳ್ಳತನ ಮಾಡಕೊಂಡು ಹೋಗ್ಯಾರ. ನಿಮಗ ಗೊತ್ತಲ, ನಮ್ಮೂರು ಹುಡ್ರು ಬಾಳ ಬೆರಕಿ, ಕೊಡ್ಲಿ ಕುಡಗೋಲು ಅನ್ನಾಕ ಹತ್ಯಾರ. ಅದಕ್ಕ ನೀವ ಸ್ವಲ್ಪ ಬಂದು ಬಗಿಹರಿಸಬೇಕಿತ್ತು.
ಎಂಎಲ್ಲೆ: (ಗಾಬರಿಯಾಗಿ) ಏನು, ಗುಡಿಯಾನ ಹನುಮಪ್ಪನ ತುಡುಗು ಮಾಡಕೊಂಡು ಹೋಗ್ಯಾರಾ? ಅವಕ್ಕೇನು ದೆವ್ವ ಬಡಿದೈತ್ರಿ ಗೌಡ್ರ. ಯಾಕಂತ?
ಗೌಡ: ನಿಮಗ ಗೊತ್ತು ಇರೂದ ಐತೆಲ್ಲ. ಸೀಮೆ ಹನುಮಪ್ಪ ಜಗಳ.
ಎಂಎಲ್ಲೆ ಹೌದೌದು, ತಡ್ರಿ ತಡ್ರಿ, ಧರೆಗಟ್ಟಿಯೊಳಗ ನಮ್ಮ ಪಕ್ಷದ ಮುಖಂಡ ಇದ್ದಾನಲ್ಲ ಪಡದಯ್ಯ. ಅಂವಗ ಹೇಳ್ತಿನಿ. ಅವರ ಊರು ಹುಡ್ರುಗೆ ಬುದ್ದಿ ಮಾತು ಹೇಳಿಸಿ ದೇವರನ್ನು ಹೊಳ್ಳಿ ತಂದು ಕೊಡುವಂಗ ಮಾಡ್ತೇನಿ.
ಗೌಡ: ಅಷ್ಟ ಮಾಡಿ ಪುಣ್ಯ ಕಟಕೋರಿ.
ಎಂಎಲ್ಲೆ: ಅಂದಂಗ ಅದು ಸೀಮಿ ಹನುಮಪ್ಪನ ಗುಡಿ ಹಳಿದಾಗೈತೆಲ್ಲ.
ಗೌಡ: ಹೌದ್ರಿ ಸಾಹೆಬ್ರ, ನಿಮಗ ಒಂದು ಅರ್ಜಿ ಕೊಟ್ಟಿದ್ದಿವು. ಜೀರ್ಣೋದ್ಧಾರ ಮಾಡಿಸಬೇಕು ಅಂತ. ನೀವು ಸ್ವಲ್ಪ ಮನಸ್ಸು ಮಾಡಿದ್ರ ದೇವರಿಗೆ ಚಲೋತಂಕ ನೆಳ್ಳ ಮಾಡಬಹುದಿತ್ತು.
ಎಂಎಲ್ಲೆ: ನಾನು ಅದನ್ನ ಹೇಳೋನಾಂತಿದ್ದೆ. ಗುಡಿನ ಭರ್ಜರಿಯಾಗಿ ರಿಪೇರಿ ಮಾಡಿಸಿ ಅದಕ್ಕ ಒಪ್ಪುವಂಥ ಹೊಸ ಮೂರ್ತಿ ತಂದು ಪ್ರತಿಷ್ಠಾಪನಾ ಮಾಡೋಣು. ಸುಮ್ಮನೆ ಯಾಕ ಜಗಳ. ಆ ಧರೆಗಟ್ಟಿ ಹುಡುಗರು ಅಷ್ಟ ಸರಿ ಇಲ್ಲ. ಗಾಳಿ ಗುದ್ದಿ ಯಾಕ ಮೈ ನೂಸುಕೊಳ್ಳೋದು ಅಂತ.
ಗೌಡ: ಸಾಹೇಬ್ರ ಇದೊಂದು ಬಿಟ್ಟು ಬೇಕಾದ್ದು ಕೇಳ್ರಿ, ನಮಗ ಮೂಲ ದೇವರು ಆಗಬೇಕು, ಇಲ್ಲಂದ್ರ ನಿಮ್ಮೂರಿಗೆ ಕಂಟಕ ಐತಿ ಅಂತ ಸ್ವಾಮಿಗೊಳು ಹೇಳಿಕಿ ಹೇಳ್ಯಾರ.
ಎಂಎಲ್ಲೆ: ಹಂಗಾರ, ಆತು ತೊಗೋರಿ, ಅವರನ್ನು ಒಂದು ಮಾತು ಕೇಳಿ ಹೇಳ್ತಿನಿ. ಇವತ್ತು ಅಲ್ಲಿಗೆ ಹೋಗಿ ವಿಚಾರಿಸ್ತಿನಿ. ನೋಡೂಣು ಏನಾಗತ್ತಂತ. (ಫೋನ್ ಕಟ್ಟ ಆಗುವುದು)
ಗೌಡ: ಎಂಎಲ್ಲೆ ಎಲ್ಲ ಸರಿ ಮಾಡ್ತಿನಿ ಅಂತ ಹೇಳ್ಯಾರ. ನೋಡೂನು ಏನಾಗತ್ತಂತ, ರಂಗ್ಯಾ ನೀನು ಭರ್‍ಮಪ್ಪನ ಕರಕೊಂಡು ಧರೆಗಟ್ಟಿಯೊಳಗ ಏನ್ ಪರಿಸ್ಥಿತಿ ಐತಿ ಅಂತ ನೋಡಕೊಂಡು ಬಾ.
ರಂಗ: ಆತ್ರಿ.
(ಎಲ್ಲರೂ ಗುಸು ಗುಸು ಮಾತಾಡುತ್ತಾ ಸಭೆಂದ ನಿರ್ಗಮಿಸುವರು. ರವಿ ಅಲ್ಲೆ ಕುಳಿತಿದ್ದಾನೆ. ಎಲ್ಲ ಹೋದ ಮೇಲೆ ಎದ್ದು ಬಂದು)
ರವಿ: ಈ ಹಾಳಾದ ಜನರಿಗೆ ಯಾವತ್ತು ಬುದ್ದಿ ಬರುತ್ತೋ. ಪಾಪ, ಸತ್ಯ ಮಾತಾಡಿದ ಆ ಮಲ್ಲಂಗೂ ಹುಚ್ಚಮಲ್ಲ ಅಂದು ಹೊಡ್ದು ಕಳಿಸಿದ್ರು. ಒಂದು ಕಲ್ಲು ಮೂರ್ತಿಗೆ ಇಷ್ಟೊಂದು ಜಗಳ ಮಾಡೋದು ನೋಡಿದ್ರ ನಮ್ಮ ದೇಶದ ಭವಿಷ್ಯದ ಬಗ್ಗೆ ಭಯವಾಗುತ್ತೆ. ಬುದ್ಧ ಬಸವಣ್ಣ ಚಾರ್ವಾಕರು ಹುಟ್ಟಿ ಬಂದ ನಾಡಿನಲ್ಲಿಯೆ ಸ್ಥಾವರಗಳು ಇಷ್ಟೊಂದು ವಿಜೃಂಭಿಸುತ್ತಿವೆ ಎಂದರೆ ಅವರು ಹುಟ್ಟದಿದ್ದರೆ ಇನ್ನೇನು ಗತಿ ಇತ್ತೋ,. ಏನು ಮಾಡುವುದು, ಕಾಯುತ್ತಿದ್ದೇನೆ ಕಾಲ ಮಾಗುವುದಕ್ಕಾಗಿ. ಕಾಯುತ್ತಲೇ ಇರುತ್ತೇನೆ…

ತೆರೆ ಬೀಳುವುದು

 

ವಿಮುಖ ~ ಸೌಮ್ಯಾ ಕಲ್ಯಾಣ್‌ಕರ್‌

ವಿಜಯ ನೆಕ್ಸ್ಟ್‌ ಯುಗಾದಿ ಕಥಾ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪಡೆದ ಕಥೆ ಇದು. ಮೊದಲ ಪ್ರಯತ್ನದಲ್ಲೆ ಯಶಸ್ವಿಯಾದ ಸೌಮ್ಯಾ ಕಲ್ಯಾಣ್‌ಕರ್‌ ಗೆ ಅಭಿನಂದನೆಗಳು. 

ಕಲ್ಕತ್ತಾದಿಂದ ಎರಡುವರ್ಷದ ಹಿಂದೆ ಬಂದಿದ್ದ ವಿಮುಖ ದಾಸ್ ಗೆ ಈಗಬೆಂಗಳೂರು ಅಪರಿಚಿತವಾಗಿಯೇನೂ ಉಳಿದಿರಲಿಲ್ಲ. ತನ್ನ ರಾಜಾಜಿನಗರದರಾಮಮಂದಿರದ ಬಳಿಯಿರುವ ರೂಮಿನಿಂದ ಇಂದಿರಾ ನಗರದ ನೂರಡಿಯರಸ್ತೆಯಲ್ಲಿರುವ ಆಫೀಸನ್ನು ಮುಟ್ಟುವಷ್ಟರಲ್ಲಿ ನಡುವೆ ಬರುವ ಎಲ್ಲಾ ಸ್ಟಾಪ್ಗಳನ್ನೂ ಬಸ್ಸಿನ ಕಿಟಕಿ ರಾಡಿಗೆ ತಲೆಯೊರಗಿಸಿಕೊಂಡು ಕಣ್ಣುಮುಚ್ಚಿಯೇಹೇಳಬಲ್ಲವನಾಗಿದ್ದ. ಅದೂ ಅಲ್ಲದೇ ವಾರಕ್ಕೋ ಎರಡು ವಾರಕ್ಕೋ ಒಮ್ಮೆ ಎಂಬಂತೆ ಆಫೀಸಿನಿಂದ ಬೇಗ ಹೊರಟು ಬಸ್ ನಿಲ್ದಾಣಕ್ಕೆ ಬಂದು ಸಿಕ್ಕಿದ ಬಸ್ಸು ಹತ್ತಿ, ಎಲ್ಲೋ ಇಳಿದು, ಎಲ್ಲೋ ತಿರುಗಿ ನಡುರಾತ್ರಿ ಮನೆ ಮುಟ್ಟುತ್ತಿದ್ದದ್ದೂ ಉಂಟು. ಹಾಗಾಗಿ ಬೆಂಗಳೂರಿನ ಸಾಕಷ್ಟು ಏರಿಯಾಗಳು ಅವನಿಗೆ ಗೊತ್ತಿದ್ದವು. ಇಂದಿರಾನಗರದಲ್ಲೇ ಮನೆ ಹುಡುಕಬಹುದಾಗಿದ್ದರೂ ಅವನ ಬಸ್ಸು ಪ್ರಯಾಣದ ಪ್ರೀತಿ, ಮನೆಯ ಬಳಿಯಿರುವ ಅವನಿಷ್ಟದ ರಾಮಮಂದಿರ ಮತ್ತು ಇಂದಿರಾನಗರದ ದುಬಾರಿ ಬಾಡಿಗೆ ಅವನನ್ನು ರಾಜಾಜಿನಗರದಲ್ಲೇ ಉಳಿಯುವಂತೆ ಮಾಡಿದ್ದವು.

ಬಾಲ್ಯದಲ್ಲೇ ತಾಯಿಯ ಬೆಚ್ಚಗಿನ ಆಶ್ರಯ ಬಿಟ್ಟು ಬೋರ್ಡಿಂಗ್ ಸ್ಕೂಲಲ್ಲೇಬೆಳೆದಿದ್ದ ವಿಮುಖ. ಆಗಾಗ ಹೊಸ ಹೊಸ ಮನುಷ್ಯರೊಂದಿಗೆ ಬರುತ್ತಿದ್ದಅವನು ‘ಅಮ್ಮು’ ಎಂದು ಕರೆಯುತ್ತಿದ್ದ ಅವನ ತಾಯಿಯನ್ನು ನೋಡುವಾಗಲೆಲ್ಲಾ ಅವನಿಗೆ ಅವಳ ಕಣ್ಣು, ಮೂಗು, ಹುಬ್ಬು ಎಂದೂ ಕಣ್ಣಿಗೆ ಬಿದ್ದದ್ದೇ ಇಲ್ಲ. ಬದಲು ಅವಳ ಕೆಂಪು ದೊಡ್ಡ ಬಿಂದಿ, ಅದಕ್ಕಿಂತ ಕೆಂಪಾಗಿತುಟಿಗೆ ಢಾಳಾಗಿ ಬಳಿದಿದ್ದ  ಬಣ್ಣ, ಅವೆರಡಕ್ಕೂ ಜೊತೆಯಾಗುವಂತೆ ಬೈತಲೆತುಂಬ ಮೆತ್ತಿಕೊಂಡ ರಕ್ತಗೆಂಪು ಸಿಂಧೂರವೇ ಕಾಣುತ್ತಿದದ್ದು. ಅವನಿಗೆಅಮ್ಮು ಎಂದಾಕ್ಷಣ ತಲೆಯಲ್ಲಿ ಬರುತ್ತಿದ್ದದ್ದು ಸಿಗ್ನಲ್ಲಿನ ಕೆಂಪು ದೀಪ. ಸ್ಕೂಲುಮುಗಿದ ಮೇಲೂ ತನ್ನ ಮುಂದಿನ ಶಿಕ್ಷಣವನ್ನು ಹಾಸ್ಟೆಲಿನ ಗೋಡೆಗಳನಡುವೆಯೇ ಕಳೆದುಬಿಟ್ಟ. ಯಾರೊಂದಿಗೂ ಬೆರೆಯದ ವಿಮುಖನಿಗೆ ಹೊಸಜನರನ್ನು ಕಾಣುವುದೂ, ಮಾತನಾಡುವುದೂ ಎಲ್ಲಿಲ್ಲದತಳಮಳ,ಸಂಕಟಗಳನ್ನು ಹುಟ್ಟಿ ಹಾಕುತ್ತಿತ್ತು. ಪದವಿ ಮುಗಿಸಿದ ಕೂಡಲೇಅಮ್ಮುವಿಗೆ ಒಂದೂ ಮಾತೂ ಹೇಳದೇ ಅವನು ಬಂದ ಸಮಯಕ್ಕೆ ಸರಿಯಾಗಿ ಸ್ಟೇಶನ್ ಅಲ್ಲಿ ನಿಂತಿದ್ದ ಹೌರಾ-ಯಶವಂತಪುರ ಟ್ರೇನ್ ಹತ್ತಿ ಬೆಂಗಳೂರಿಗೆ ಬಂದು ಬಿಟ್ಟಿದ್ದ. ಅಮ್ಮು ಕೊಡಿಸಿದ್ದ ಬಟ್ಟೆ, ಅವಳು ಕೊಟ್ಟು, ಇವನು ಖರ್ಚು ಮಾಡದೇ ಕೂಡಿಟ್ಟ ದುಡ್ಡು ಅವನನ್ನು ಸರಿ ಸುಮಾರು ಎರಡೂವರೆ ತಿಂಗಳು, ಕಾಪಾಡಿದ್ದವು. ಯಾವಾಗ ಕೆಲಸ ಸಿಕ್ಕಿತೋ, ಆ ಕ್ಷಣದಿಂದ ಬೆಂಗಳೂರಿನ ಜನಸಾಗರದ ನಡುವೆ ಒಂದು ಉಪ್ಪಿನ ಕಣದಂತೆ ವಿಮುಖ ಬೆರೆತುಹೋಗಿದ್ದ.

ಅವನು ಕೆಲಸ ಮಾಡುತ್ತಿದ್ದದು ಗಾಜಿನ ವಿವಿಧ ವಿನ್ಯಾಸದ, ಆಕಾರದ ವಿಸ್ಕಿ,ವೈನ್ ಗ್ಲಾಸ್ ಗಳನ್ನು ಮಾರಾಟ ಮಾಡುತ್ತಿದ್ದ ಕಂಪೆನಿಯೊಂದಕ್ಕೆ. ಅವರಿಗೆಬರುತ್ತಿದ್ದ ಪಾರ್ಸೆಲ್ ಗಳ ಲೆಕ್ಕ ಬರೆಯುವುದು, ಅದನ್ನು ತೆಗೆದುಕೊಂಡುಹೋಗುವ ಅಂಗಡಿಗಳ ಹೆಸರು, ಅವರೊಂದಿಗಿನ ವ್ಯವಹಾರ, ಲೆಕ್ಕಾಚಾರಇವಿಷ್ಟು ವಿಮುಖನ ಕೆಲಸಗಳು. ಕೆಲಸಕ್ಕೆ ಸೇರಿದ ಕೆಲದಿನಗಳಲ್ಲೇ ವಿಮುಖ ತೊಂದರೆ ಎದುರಿಸಬೇಕಾಯಿತು. ಅಲ್ಲಿ ಕೆಲಸ ಮಾಡುತ್ತಿದ್ದ ಮೇಲ್ ರಿಸೆಪ್ಷನಿಸ್ಟ್ ಕೆಲಸ ಬಿಟ್ಟುಬಿಟ್ಟ, ಹಾಗಾಗಿ ಆಫೀಸಿಗೆ ಬರುತ್ತಿದ್ದ ಫೋನುಕರೆಗಳಿಗೆ ಇವನೇ ಉತ್ತರಿಸಬೇಕಾಯಿತು. ವಿಮುಖನ ಇಂಗ್ಲೀಷ್ ಕೂಡಬೆಂಗಾಲಿ ಉಚ್ಚಾರದಲ್ಲಿ ಇದ್ದದ್ದರಿಂದ ಎಷ್ಟೇ ಸಲ ವಿವರಿಸಿದರೂ ಫೋನಿನ ಆತುದಿಯ ವ್ಯಕ್ತಿಗೆ ಇವನೇನು ಅನ್ನುತ್ತಿದ್ದಾನೆ ಎಂಬುದೇ ತಿಳಿಯುತ್ತಿರಲಿಲ್ಲ.ವಿಮುಖನ ದಕ್ಷತೆ, ಪ್ರಾಮಾಣಿಕತೆಗೆ ಅದರ ಮಾಲೀಕ ಪುಟ್ಟಸ್ವಾಮಿ ಇಡೀ ಆಫೀಸಿನ ಲೆಕ್ಕಾಚಾರವನ್ನು ಈತನಿಗೊಪ್ಪಿಸಿ ತನ್ನ ಇನ್ನೊಂದು ಕಸುಬಾದರಿಯಲ್ ಎಸ್ಟೇಟ್ ದಂಧೆಗೆ ಕೈ ಹಾಕಾಗಿತ್ತು. ಅವನಿಗೆ ಈ ಸಮಸ್ಯೆಯ ಬಗ್ಗೆ ಹೇಳಿದರೆ ಅರ್ಥ ಮಾಡಿಕೊಳ್ಳುವ ಪ್ರಯತ್ನವೇ ಮಾಡುತ್ತಿರಲಿಲ್ಲ. ಆ ಪುಟ್ಟಆಫೀಸಿನಲ್ಲಿ ಇದ್ದ ಉಳಿದ ಮೂವರೂ ಹೆಚ್ಚು ಓದಿಕೊಂಡವರೇನಲ್ಲ , ಬರೇಪಾರ್ಸಲ್ ತರುವುದು, ಕೊಡುವುದು, ಲೆಕ್ಕ ಹೇಳುವುದನ್ನಷ್ಟೇಮಾಡಿಕೊಂಡಿದ್ದವರು, ಕನ್ನಡವನ್ನಷ್ಟೇ ಮಾತನಾಡುತ್ತಿದ್ದರು. ಒಂದು ದಿನವಂತೂ ಸೂಪರ್ ಮಾರ್ಕೇಟ್ ಒಂದರಿಂದ ಸುಮಾರು ಎಂಭತ್ತು ಸಾವಿರ ರೂಪಾಯಿ ಮೌಲ್ಯದ ವೈನ್ ಗ್ಲಾಸುಗಳು ತಾವು ಕೇಳಿದ ಆಕಾರ, ಗಾತ್ರದಲ್ಲಿಲ್ಲವೆಂದು ವಾಪಾಸಾದವು.

ಮರುದಿನ ಎರಡು ಪ್ರಮುಖ ಸಂಗತಿಗಳು ಜರುಗಿದವು. ‘ಲೋಕಲ್ಲ್ಯಾಂಗ್ವೇಜ್’ ಎಂದು ದೂರವೇ ಇರಿಸಿದ್ದ ಕನ್ನಡವನ್ನು ವಿಮುಖ ಕಲಿಯಲೇಬೇಕಾಯ್ತು ಹಾಗೂ ಗಂಡಸರೇ ಇದ್ದ ಆ ಆಫೀಸಿಗೆ ಸುಂದರ ಹೆಣ್ಣೋರ್ವಳಆಗಮನವಾಯಿತು. ಹಾಗೆ ಬಂದವಳೇ ಮಂಜನಿ ಜೋಸ್, ಮಲಯಾಳಿಹುಡುಗಿ. ಪುಟ್ಟಸ್ವಾಮಿಯೇ ಅವಳನ್ನು ಕರೆದುಕೊಂಡು ಬಂದಿದ್ದ. ನೋಡಿದ ಕೂಡಲೇ ಕಣ್ಸೆಳೆಯುವ ರೂಪದ ಮುಖ, ಅದಕ್ಕೆ ಸರಿಯಾದ ಮೇಕಪ್ಪಿನೊಂದಿಗೆ ಮಂಜನಿ ಬಂದಾಗ ಅಲ್ಲಿದ್ದ ಎಲ್ಲರೂ ಹುಬ್ಬೇರಿಸಿದ್ದರು.ಬೇರೆ ಯಾರೂ ಸಿಗಲಿಲ್ಲವೇ, ಅದೂ ಹೋಗಿ ಹೋಗಿ ಮಲೆಯಾಳಿ ಬೇರೆ,ಇಂಗ್ಲೀಷ್ ಮಾತಾಡಿದರೆ ಮಲಯಾಳಂ ಮಾತಾಡಿದಂತಿರುತ್ತದೆ ಎಂದುವಿಮುಖನನ್ನು ಬಿಟ್ಟು ಉಳಿದ ಮೂವರು ಮಾತನಾಡಿಕೊಂಡಾಗಿತ್ತು.  ಆದರೆಇರುವ ನಾಲ್ಕೂ ಜನರ ಮನಸ್ಸನ್ನೂ ತನ್ನ ಶುದ್ಧ ಇಂಗ್ಲೀಷ್, ಕನ್ನಡ, ಹಿಂದಿಹೀಗೆ ಮೂರೂ ಭಾಷೆಗಳಷ್ಟೇ ಅಲ್ಲದೇ ನಗು, ಮಾತುಗಳನ್ನೂ ಸೇರಿಸಿ ಆಕೆಎಲ್ಲರ ಮನಸ್ಸನ್ನೂ ಗೆದ್ದಿದ್ದಳು.

ಮೊದಲ ಅಂತಸ್ತಿನಲ್ಲಿದ್ದ ಆ ಆಫೀಸಿನ ಕೆಳಭಾಗದಲ್ಲಿದ್ದದ್ದು ಅದರ ಮಾಲೀಕ, ಓರ್ವ ಮಿಲಟರಿ ಮನುಷ್ಯ, ಪೊನ್ನಪ್ಪ. ಆವಾಗಾವಾಗ ತಮ್ಮ ಲ್ಯಾಬ್ರಡಾರ್ ಜಾತಿಯ ನಾಯಿ ಶ್ಯಾಡೋದೊಂದಿಗೆ ಬರುತ್ತಿದ್ದ ಆ ಸುರದ್ರೂಪಿ ಅಜ್ಜ ಇವನು ಮಾತಾಡಲೀ ಬಿಡಲಿ ಬೆನ್ನು ತಟ್ಟಿ, “ ನೊಮೊಸ್ಕಾರ್, ಬೆಂಗಾಲಿ ಬಾಬು, ತುಮಿ ಕೆಮೋನ್ ಅಚ್ಚೋ” ಎಂದು ತನಗೆ ಬರುತ್ತಿದ್ದ ಒಂದೇ ಒಂದು ಬೆಂಗಾಲಿ ಸಾಲನ್ನು ಹೇಳುತ್ತಿದ್ದರು. ಮೊದ ಮೊದಲು ಕಾಟಾಚಾರಕ್ಕಷ್ಟೇ, ಅನಂತರ ತನಗಲ್ಲವೇ ಅಲ್ಲ ಎಂಬಂತೆ, ತದನಂತರ ಅವರ ನಿರ್ಮಲ ನಗು, ವಿಶ್ವಾಸಕ್ಕೆ ಕಟ್ಟು ಬಿದ್ದು ವಿಮುಖನೂ ನಕ್ಕು ತನ್ನ ಅರೆಬರೆ ಕನ್ನಡದಲ್ಲೇ ಉತ್ತರಿಸುತ್ತಿದ್ದ. ದಿನಗಳುರುಳಿದಂತೆ ಅವರ ಮಧ್ಯೆ ಹೆಚ್ಚಿನ ಸ್ನೇಹವಿರದಿದ್ದರೂ ಅವರ ಮುಖ ಹಾಗೂ ಶ್ಯಾಡೋವನ್ನು ನೋಡಿದರೆ ಏನೋ ಖುಷಿಯ ಅನುಭೂತಿ ಅವನಿಗೆ. ಅವರನ್ನು ದಾದು ಎಂದು ಕರೆಯಲಾರಂಭಿಸಿದ್ದ ಹಾಗೂ ಆ ಸಂಭೋದನೆ ಪೊನ್ನಪ್ಪನವರಿಗೂ ಅಸಾಧ್ಯ ಖುಷಿ ಕೊಡುತ್ತಿತ್ತು ಎಂಬುದನ್ನು ಅವರ ನಗುಮುಖವೇ ಸಾರುತ್ತಿತ್ತು. ದಿನೇ ದಿನೇ ಅಡ್ಡಡ್ಡ ಬೆಳೆಯುತ್ತಿದ್ದ ಶ್ಯಾಡೋವಾದರೂ ಇವನನ್ನು ನೋಡಿದಾಗಲೆಲ್ಲಾ ಬಾಲವನ್ನಾಡಿಸಿ, ನೆಕ್ಕಿ, ಮೈ ಮೇಲೆ ಹಾರಿ ತನ್ನ ಪ್ರೀತಿ ತೋರಿಸುತ್ತಿತ್ತು. ದಾದು, ಶ್ಯಾಡೋ ಇಬ್ಬರೂ ಒಂದೇ, ಅವರೀರ್ವರ ಭಾವವೂ ಒಂದೇ ಎಂದೆನಿಸುತ್ತಿತ್ತು ವಿಮುಖನಿಗೆ. ಆದರೆ ಮಂಜನಿಯ ಜೊತೆ ಮಾತು ಹೋಗಲಿ, ಅವಳು ಮಾತನಾಡಿದರೂ ಅವಳತ್ತ ನೋಡದೇ ಹೋಗಿ ಬಿಡುತ್ತಿದ್ದರು ದಾದು. ದಾದೂನಂತೆ ಶ್ಯಾಡೋ ಕೂಡಾ ಅವಳತ್ತ ಸ್ನೇಹವನ್ನು ತೋರದೆ ತನ್ನ ಚೂಪು ಹಲ್ಲುಗಳನ್ನು ಪ್ರದರ್ಶಿಸುತ್ತಿತ್ತು. ಎಲ್ಲರೊಂದಿಗೂ ನಕ್ಕು ಮಾತನಾಡುವ ಮಂಜನಿಯೂ ಅವರಿಬ್ಬರನ್ನು ಕಂಡರೆ ಸಪ್ಪಗಾಗುತ್ತಿದ್ದಳು.

ಅದೊಂದು ಶನಿವಾರ. ಪ್ರತೀ ಶನಿವಾರ ಮಧ್ಯಾಹ್ನ ಅಫೀಸು ಮುಗಿಸಿ ಸಮೀಪದ ಕಲ್ಕತ್ತಾ ವಿಕ್ಟೋರಿಯಾ ಚಾಟ್ ಗೆ ಹೋಗಿ ತನ್ನಿಷ್ಟದ ಅಲೂ ಪರಾಟಾ, ಚನಾ ಸಬ್ಜಿ ಮತ್ತು ಮನಸ್ಸು ತುಂಬುವವರೆಗೆ ತನ್ನ ಪ್ರೀತಿಯ ಜಿಲೇಬಿ ತಿಂದು ರಾಜಾಜಿನಗರದ ಕಡೆಗಿನ ಬಸ್ಸು ಹತ್ತುತ್ತಿದ್ದ ವಿಮುಖ. ಆ ದಿನ ಕಾರಣವಿಲ್ಲದೆಯೇ ಮಂಜನಿಯನ್ನೂ ಊಟಕ್ಕೆ ಕರೆಯೋಣ ಅನಿಸಿತು ಅವನಿಗೆ. ಮರುಕ್ಷಣವೇ ತನಗೆ ಹಾಗನಿಸಿದ್ದರ ಬಗ್ಗೆ ಅಚ್ಚರಿಯೂ ಹುಟ್ಟಿತು, ಕೂತು ಅವಳನ್ನು ಯಾಕೆ ಕರೆಯಬೇಕು ಎಂದು ಯೋಚಿಸಿದ, ಊಹೂಂ, ಕಾರಣ ಹೊಳೆಯಲಿಲ್ಲ. ಸರಿ ಅನಿಸಿತಲ್ಲ, ಕೇಳೋಣ ಎಂದು ತನ್ನ ಸೀಟಿನಿಂದ ಎದ್ದು ನಿಂತ. ಆದರೆ ಅವಳ ಹತ್ತಿರ ಹೋಗಲು ಧೈರ್ಯ ಸಾಲದೇ, ಕಾರಣವಿಲ್ಲದಿದ್ದರೂ ರೆಸ್ಟ್ ರೂಮಿಗೆ ಹೋಗಿ ಕನ್ನಡಿಯಲ್ಲಿ ಇಣುಕಿದ. ಇಷ್ಟು ವರ್ಷಗಳಿಂದ ಚಿರಪರಿಚಿತನಾಗಿ ಕಾಣುತ್ತಿದ್ದ ವಿಮುಖ ಅವನಿಗೆ ಕನ್ನಡಿಯಲ್ಲಿ ಕಾಣಸಿಗಲಿಲ್ಲ. ಗಲಿಬಿಲಿಯಾಯಿತು ಅವನಿಗೆ. ಹೋದ ತಪ್ಪಿಗೆ ಸುಮ್ಮನೇ ಫ಼್ಲಶ್ ಮಾಡಿ ಹೊರಬಂದು ಫೋನಿನಲ್ಲಿ ನಗುತ್ತಾ ಹರಟುತ್ತಿದ್ದ ಮಂಜನಿಯನ್ನೇ ಕಣ್ಣೂ ಮುಚ್ಚದೇ ದಿಟ್ಟಿಸಿದ. ಅರೆ, ಹೌದಲ್ಲಾ! ಯಾವಾಗಲೂ ಅವಳನ್ನು ಹತ್ತಿರದಿಂದ ನೋಡಿದ್ದೇ ಇಲ್ಲ, ಆ ಗಾಜಿನ ಪುಟ್ಟ ಕ್ಯಾಬಿನ್ ಒಳಗಷ್ಟೇ ನೋಡಿದ್ದು. ಹತ್ತಿರ ಹೋಗಿ ಮಾತನಾಡಿಸುವ ಅವಕಾಶಗಳು ಬಂದಿದ್ದರೂ ಇರುವ ಮೂವರನ್ನೇ ಕರೆದು ಅವರಿಗೇ ಮಾತನಾಡುವಂತೆ ತಿಳಿಸುತ್ತಿದ್ದ ಹೊರತು ತಾನಾಗಿಯೇ ಮಾತೇ ಆಡಿಲ್ಲವಲ್ಲ ಎಂದೆನಿಸಿತು. ಆ ಗಾಜಿನ ಕ್ಯಾಬಿನ್ನಿನಲ್ಲಿ ಮಂಜನಿ ಶೋಕೇಸಿನ ಪುಟ್ಟ ಗೊಂಬೆಯಂತೆ ಕಾಣಿಸುತ್ತಿದ್ದಳು.

ಯಾಕೋ ಆ ಗಳಿಗೆಗೆ ತನ್ನ ಅಮ್ಮುವಿನ ನೆನಪು ಹಾರಿಬಂತು ಅವನಿಗೆ. ತನ್ನ ಸೀಟಿಗೆ ಬಂದು ಕೂತರೂ ಯಾವ ಕೆಲಸವನ್ನೂ ಮಾಡಲಾಗದೇ ಕೈಗೆ ಸಿಕ್ಕಿದ ಹಾಳೆಯ ಮೇಲೆ ಗೀಚಲಾರಂಭಿಸಿದ.  ಆ ಸಮಯಕ್ಕೆ ಬಂದ ದಾದು ಅವನ ಬೆನ್ನು ತಟ್ಟಿದವರು ಇನ್ನೇನು ಮಾತನಾಡಬೇಕು, ಅಷ್ಟರಲ್ಲಿಯೇ ಇಷ್ಟು ದಿನಗಳಲ್ಲಿ ಎಂದೂ ಇನ್ನೊಂದು ಮಾತನ್ನು ಹೇಳದಿರುವವರು, ಇವತ್ತು, “ ಬೇಡ ಬಾಬು, ನೋವಾಗುತ್ತದೆ ನಿನಗೆ“ ಎಂದು ತಮ್ಮದಲ್ಲವೇ ಅಲ್ಲದ ಗೊಗ್ಗರು ಸ್ವರದಲ್ಲಿ ಉದ್ಗರಿಸಿ ದುರ್ದಾನ ತೆಗೆದುಕೊಂಡವರಂತೆ ನಡೆದು ಬಿಟ್ಟರು. ಶ್ಯಾಡೋ ಸುಮ್ಮನೆ ಅವನನ್ನರೆಗಳಿಗೆ ನೋಡಿ ದಾದುವನ್ನು ಹಿಂಬಾಲಿಸಿತು. ಯಾಕೆ ದಾದು ಹೀಗೆ ವರ್ತಿಸಿದರೆಂದು ದಿಗ್ಬ್ರಾಂತನಾಗಿ ಕೂತವನಿಗೆ ಅದರುತ್ತರ ಹೊಳೆದದ್ದು ತನ್ನ ಕೈಲಿರುವ ಹಾಳೆಯನ್ನು ನೋಡಿದ ಮೇಲೆಯೇ. ಇಡೀ ಹಾಳೆಯ ತುಂಬಾ ಗೀಚಿಹಾಕಿದ್ದ ಹೆಸರು ‘ಮಂಜನಿ’. ತನ್ನ ಕೈ ಮೀರಿ ಆದ ಅಚಾತುರ್ಯಕ್ಕೆ ಮೈ ಒಂದು ಕ್ಷಣ ನಡುಗಿದರೂ ಸಾವರಿಸಿಕೊಂಡು ಆ ಕಾಗದವನ್ನೆತ್ತಿ ಚೂರು ಚೂರಾಗಿ ಹರಿದು ಕಾಲಿನಡಿಯಿಟ್ಟಿದ್ದ ಕಸದಬುಟ್ಟಿಗೆ ಎಸೆದುಬಿಟ್ಟ. ಟೇಬಲ್ ಮೇಲಿಟ್ಟಿದ್ದ ನೀರು ಎತ್ತಿ ಗಟಗಟ ಕುಡಿದವನು ತನ್ನ ಎದೆಯಬಡಿತ ಸ್ಥಿಮಿತಕ್ಕೆ ತಂದುಕೊಳ್ಳಲು ಒದ್ದಾಡಿಹೋದ. ಏನೂ ಮಾಡಿದರೂ ಸರಿಯಾಗದಾಗ ಮೇಜಿನ ಮೇಲಿದದ್ದನ್ನೆಲ್ಲಾ ಒಂದು ಮೂಲೆಗೆ ಸರಿಸಿ ಅದರ ಮೇಲೆ ತಲೆಯನ್ನಾನಿಸಿ ಮಲಗಿಬಿಟ್ಟ.

ಎಷ್ಟು ಹೊತ್ತು ಹಾಗೇ ಮಲಗಿದನೋ ಗೊತ್ತಿಲ್ಲ, ಯಾರೋ ಮೈಮುಟ್ಟಿ ಎಚ್ಚರಿಸಿದಂತಾಗಿ ಕಣ್ಣು ಬಿಟ್ಟರೆ ಅತೀ ಹತ್ತಿರದಲ್ಲಿ ನಿಂತಿದ್ದಾಳೆ ಮಂಜನಿ! ಎಂದೂ ಅವಳನ್ನು ಇಷ್ಟು ಹತ್ತಿರದಿಂದ ನೋಡದವನಿಗೆ ಸಂಪೂರ್ಣ ಕಕರು ಮಕರು ಹಿಡಿದಂತಾಯಿತು. ಮೊದಲು ಅವನರಿವಿಗೆ ಬಂದಿದ್ದು ಉಸಿರುಗಟ್ಟಿಸುವಷ್ಟು ಘಾಟು ವಾಸನೆಯ ಸುಗಂಧ. ನಂತರ ಅವಳನ್ನೇ ನಿರುಕಿಸಿದವನಿಗೆ ಕಂಡದ್ದು ವರುಷಾನುಗಟ್ಟಲೇ ನೋಡಿದ್ದ ರಕ್ತಗೆಂಪು ಸಿಂಧೂರ, ಹಣೆಯ ಕುಂಕುಮ ಹಾಗೂ ರಕ್ತದಲ್ಲೇ ಅದ್ದಿ ತೆಗೆಯಲಾಗಿವೆಯೋ ಅನ್ನುವ ತುಟಿಗಳು. ಏನೂ ಮಾತನಾಡಲಾಗದೇ ಸುಮ್ಮನಿದ್ದ ವಿಮುಖನನ್ನು ಮತ್ತೆ ಮೈಮುಟ್ಟಿ ಎಚ್ಚರಿಸಿದ ಮಂಜನಿ ಬೀಗದ ಕೈಯನ್ನು ಅವನ ಟೇಬಲ್ ಮೇಲಿಟ್ಟು ಹಾರುತ್ತಿದ್ದಾಳೋ ಎಂಬಂತೆ ಓಡಿ ಧಡಬಡ ಮೆಟ್ಟಿಲಿಳಿದದ್ದೂ ಆಯಿತು. ಯಾಕೋ ಕುತೂಹಲವುಕ್ಕಿ ಕಿಟಕಿಯ ಬಳಿ ಬಂದು ನಿಂತ ವಿಮುಖನಿಗೆ ಕೆಳಗಡೆ ಕಂಡಿದ್ದು ಹೆಗಲ ಮೇಲೆಯೇ ನಿದ್ದೆ ಹೋದ ನಾಲ್ಕೈದು ವರ್ಷದ ಮಗುವನ್ನೆತ್ತಿಕೊಂಡು ನಿಂತಿದ್ದ ಓರ್ವ ಹಿರಿಯ ಹೆಂಗಸು. ಮಂಜನಿ ಹೋದವಳೇ ಮಗುವಿನ ಹಣೆ ಮುಟ್ಟಿ ನೋಡಿ, ಆ ಮಗುವನ್ನು ತಾನೆತ್ತಿಕೊಂಡಳು. ಅವರೀರ್ವರು ಕಿಟಕಿಗೆ ಬೆನ್ನು ಹಾಕಿ ನಡೆದಂತೆ ವಿಮುಖನಿಗೆ ಮಲಗಿದ್ದ ಆ ಮಗುವಿನ ಮುಖ ಸ್ಪಷ್ಟವಾಗಿ ಕಾಣಿಸಲಾರಂಭಿಸಿತು. ಜ್ವರದ ತಾಪಕ್ಕೆ ಕೆಂಪಾಗಿ ಬಾಡಿದಂತಿದ್ದ ಆ ಮಗುವಿನ ಮುಖ ಸಾಕಷ್ಟು ಚಿರಪರಿಚಿತ ಅನಿಸಲಾರಂಭಿಸಿತು.

ತಿರುಗುತ್ತಿದ್ದ ಫ್ಯಾನು, ಲೈಟು ಎಲ್ಲವನ್ನೂ ಅದರದರ ಪಾಡಿಗೇ ಬಿಟ್ಟು ವಿಮುಖ ತನ್ನಿಂದಾದಷ್ಟು ಸಾಧ್ಯವಾದ ವೇಗದಲ್ಲಿ ಕೆಳಗಿಳಿದು ಬಂದ. ರಸ್ತೆ ದಾಟಲೆಂದು ಕಾದು ನಿಂತಿದ್ದ ಮಂಜನಿಯನ್ನು ಕರೆದ, ಅವಳಿಗದು ಕೇಳಿಸಲಿಲ್ಲ. ತನ್ನ ಜೀವಮಾನದಲ್ಲೇ ಮೊದಲ ಬಾರಿಗೆ ವಿಮುಖ ಗಟ್ಟಿಯಾಗಿ ಹೆಸರು ಹಿಡಿದು ಕೂಗಿದ. ನಿಂತು ತಿರುಗಿದ ಮಂಜನಿಯ ಬಳಿಸಾರಿ, ಅವಳ ಕಂದು ಕಪ್ಪು ಕಣ್ಣುಗಳನ್ನೇ ನೋಡಿ ತನ್ನ ಅರೆ ಬರೆ ಕನ್ನಡದಲ್ಲಿ “ ಬೇಬಿಗೆ ಹುಷಾರಿಲ್ಲ?, ನಾನೂ ಹೆಲ್ಪ್ ? “ ಎಂದ. ಮಂಜನಿ ಮಗುವನ್ನು ನಿಧಾನವಾಗಿ ಅವನ ಹೆಗಲಿಗೆ ವರ್ಗಾಯಿಸಿದಳು, ಮೂವರೂ ರಸ್ತೆ ದಾಟಿದರು.

ಆಲೂರು ದೊಡ್ಡನಿಂಗಪ್ಪ ಜೊತೆ ನಾಲ್ಕು ಮಾತು…

 `ಕವಿತೆ ಯಾಕೆ ಬರೆಯುತ್ತಿದ್ದೀರಾ?’ ಎಂಬ ಪ್ರಶ್ನೆಗೆ ಉತ್ತರಗೊತ್ತಿದ್ದೂ ಹೇಳಲಾಗದ ಮುಜುಗರದಿಂದಾಗಿ ಕವಿಗೋಷ್ಠಿಗಳಿಂದ ದೂರು ಉಳಿಯುತ್ತಿದ್ದೆ ಎನ್ನುವ ಕವಿ ಆಲೂರು ದೊಡ್ಡ ನಿಂಗಪ್ಪ. ನಾಲ್ಕನೇ ತರಗತಿಗೆ ಶಾಲೆ ಬಿಟ್ಟು, ನೇಕಾರಿಕೆ, ಎಳನೀರು ವ್ಯಾಪಾರ, ಒಂಟಿತನ, ಅಲೆಮಾರಿತನಗಳಿಂದ ಮಾಗಿದ ಇವರು ಮತ್ತೆ ಅಕ್ಷರಗಳನ್ನು ತಮ್ಮದೇ ಆದ ರೀತಿಯಲ್ಲಿ ಕಲಿಯುತ್ತಾ, ಗ್ರಹಿಸುತ್ತಾ ಬೆಳೆದವರು. ಈ ಜೀವನಾನುಭವ ಇವರ ಕವಿತೆಗಳ ಮೂಲಕ ಓದುಗನಿಗೆ ದಾಟುತ್ತದೆ. ತಾಯಿ, ಮಗು ಹಾಗೂ ಕರುಳ ಬಳ್ಳಿಯಂತೆ ಓದುಗನನ್ನು ತಟ್ಟುತ್ತವೆ. ಅಖಂಡ ನೋವುಂಡು ಜನ್ಮ ನೀಡುವ ತಾಯಿ, ಕಿಲಕಿಲ ನಗುವಿನ ಬೆಳಕು ಹೊತ್ತ ಮಗು, ಇವೆರಡನ್ನೂ ಬೆಸೆಯುವ ಕರುಳಬಳ್ಳಿ ಬಿಸುಪು ಆಲೂರು ಅವರ ಕವಿತೆಗಳ ಓದಿನಿಂದ ದಕ್ಕುವ ಅನುಭವ. ಕತ್ತಲೆ ಜಗತ್ತಿನ ಕವಿ ನಾನು ಹೇಳುತ್ತಲೆ, `ತೇಲಿ ತೇಲಿ ಬರಲಿ/ ಚಂದಿನ ಚೂರು/ ನಮ್ಮ ಕೇರಿಗೂ’ ಎಂಬ ಸಣ್ಣ ಬೆಳಕಿನ ಕಿಡಿಗಾಗಿ ಧ್ಯಾನಿಸುವ ಸಂವೇದನಶೀಲ ನಿಂಗಪ್ಪ ಅವರು `ನೇಕಾರ’ ಎಂಬ ಸಂಕಲನ ಮೂಲಕ ಕಾವ್ಯಾಸಕ್ತರ ನಡುವೆ ನಿಂತಿದ್ದರು. ಈಗ `ಮುಟ್ಟು’ ಸಂಕಲನದೊಂದಿಗೆ ಕವಿ ಮನಸ್ಸು ಮುಟ್ಟುತ್ತಿದ್ದಾರೆ. ಇವರು ಸದ್ಯ ರಂಗಾಯಣದಲ್ಲಿ ಉದ್ಯೋಗಿ.

ನಿಮ್ಮನ್ನು ರೂಪಿಸಿದ ಅಸ್ತ್ರವೆಂದರೆ ಕಾವ್ಯವೆನ್ನುತ್ತೀರಿ, ಹೇಗೆ?

ಕಾವ್ಯದ ಜಗತ್ತು ಒಂದು ಪಕ್ಷ ದೊರಕದಿದ್ದರೆ ನನ್ನೊಳಗಿದ್ದ ಅಸೂಯೆ, ಸಂಕಟ, ನೋವು, ತಲ್ಲಣಗಳು ನನ್ನನ್ನು ಬಲಿತೆಗೆದುಕೊಡು ಬಿಡುತ್ತಿತ್ತೇನೋ? ಹಾಗಾಗಿ ಕಾವ್ಯದ ಜಗತ್ತು ನನ್ನ ಕಣ್ತೆರೆಸಿದ ಅಸ್ತ್ರವಾಗಿದೆ. ಓದಿದ್ದು ಕಡಮೆಯಾದರೂ ನನ್ನೊಳಗಿದನ್ನು ಹೇಳಿಕೊಳ್ಳೋಕೆ ಹೇಗೆ ಸಾಧ್ಯವಾಯಿತು ಎಂದು ನನಗೆ ಸೋಜಿಗವಾಗಿದೆ. ನೇಯ್ದು ಬಂದ ನನಗೆ ಜೋಗುಳ ಹಾಡಿದ ತತ್ವಪದಕಾರರು, ವಚನಕಾರರು ಬದುಕಿನ ಹಲವು ಮಗ್ಗುಲು ಬಿಚ್ಚಿಟ್ಟು ಬರೆಯುವಂತೆ ಮಾಡಿದ್ದಾರೆ.

ಹತ್ತು ವರ್ಷಗಳ ನಂತರ ಎರಡನೇ ಸಂಕಲನ `ಮುಟ್ಟು’ ಬರುತ್ತಿದೆ. ಈ ಹತ್ತು ವರ್ಷ ಕವಿತೆ ಎಲ್ಲಿತ್ತು? ಹೇಗಿತ್ತು?

ಇದುವರೆಗೂ ನನ್ನೊಳಗೆ ಮುಕ್ಕಾಗದಂತೆ ಕಾಪಾಡಿಕೊಂಡಿದ್ದೆ. ಸುಂದರ ಗಾಜಿನ ಬೊಂಬೆಯಂತೆ..

ಅಖಂಡ ವೇದನೆ ಮತ್ತು ಬೆಳಕು ನಿಮ್ಮ ಎಲ್ಲ ಕವಿತೆಗಳನ್ನು ಆವರಿಸಿಕೊಂಡಿವೆ. ನೋವು ಎಂಥದ್ದು? ಬೆಳಕು ಯಾವುದು?

ನನ್ನ ನೋವಿನ ಬಗ್ಗೆ ಮಾತನಾಡಬೇಕು ಎಂದರೆ ಬಹಳ ಹಿಂದಕ್ಕೆ ಹೋಗಿ ಮಾತನಾಡಬೇಕು ಎಂಬ ಮುಜಗರ. ನಾನು ಕತ್ತಲೆ ಜಗತ್ತಿನಿಂದ ಬಂದವನಾಗಿರುವುದರಿಂದ ಬೆಳಕಿನಷ್ಟೇ ಕತ್ತಲೆಗೂ ಮಹತ್ವ ಕೊಡುತ್ತೇನೆ. ಹಾಗಾಗಿ ಮುಟ್ಟು ಕವನ ಸಂಕಲನದಲ್ಲಿ ಇವೆರಡೂ ಆವರಿಸಿರುವುದು ಸಹಜವಿರಬಹುದು.
ಈ ಹೊತ್ತಿನ ಕವಿತೆಗಳಲ್ಲಿ ಅಂತರಾಳವೇ ಇಲ್ಲ ಎನ್ನುವುದು ಆರೋಪ ನೀವೇನಂತೀರಿ..
 
ಕವಿತೆ ಹುಟ್ಟೋದೇ ಅಂತರಾಳದಿಂದ ಈ ಹೊತ್ತಿನ ಕವಿತೆಗಳಲ್ಲಿ ಅಂತರಾಳವೇ ಇಲ್ಲ ಎಂದು ಹೇಳಲಾಗದು. ಒಳಗಿನಿಂದ ಹುಟ್ಟಿದ್ದೂ ಮಾತ್ರ ಕಾವ್ಯ ಎನ್ನಿಸಿಕೊಳ್ಳುತ್ತೆ. ಚೆನ್ನಾಗಿದೆ ಎನಿಸಿಕೊಂಡ ಕಾವ್ಯ ಒಳಗಿನಿಂದಲೇ ಬಂದಿರುತ್ತದೆ. ಅಂತರಾಳದಿಂದ ಬರೆಯುತ್ತಿರುವ ಸವಿತಾ ನಾಗಭೂಷಣ, ಎಸ್. ಮಂಜುನಾಥ್, ಅಂಕೂರ್, ಎನ್.ಕೆ.ಹನುಮಂತಯ್ಯ, ಸುಬ್ಬು ಹೊಲೆಯಾರ್, ಹೆಚ್.ಆರ್. ರಮೇಶ್. ಇವರ ಕವಿತೆಗಳಲ್ಲಿ ಇರುವ ತೀವ್ರತೆ ಅದರ ಅಂತಃಶಕ್ತಿಯನ್ನು ಸಾರುತ್ತದೆ.
ನೀವು ಕವಿತೆಯ ಕೈ ಹಿಡಿದ ನಂತರ ಇನ್ನೆಂದೂ ಮರೆಯಲಾಗದು ಎಂಬ ಸಂದರ್ಭ..
 
ನನ್ನ ಕವನ ಸಂಕಲನಕ್ಕೆ ದೇವನೂರು ಮಹಾದೇವ ಅವರು ಬೆನ್ನುಡಿ ಬರೆದದ್ದು ಮತ್ತು ನನಗೆ ರಂಗಾಯಣದಲ್ಲಿ ನೌಕರಿ ದೊರೆತು ಮೈಸೂರಿನಲ್ಲಿ ನೆಲೆಯೂರಿದ್ದು.
ನಿಮ್ಮ ಬದುಕನ್ನು ಕಾವ್ಯದ ಹಾಗೆ ನೋಡುವುದಾದರೆ, ಅದರ ಬಗ್ಗೆ ನಾಲ್ಕು ಮಾತು..
ನಾನು ಬೆಳೆದ ಪರಿಸರದಿಂದ ನನ್ನೊಳಗೆ ಮಾಗಿದ ನೆನಪುಗಳು ಕವಿತೆಗಳಾಗಿವೆ. ನನ್ನ ಕವಿತೆಗಳಲ್ಲಿ ವ್ಯಕ್ತವಾಗುವ ತಣ್ಣನೆಯ ಭಾವನೆಗಳಂತೆಯೇ ನನ್ನ ಬದುಕಿದೆ.
(ಕೃಪೆ:   ‘ಅಲೆಮಾರಿ’  ಕುಮಾರ್)

ಸನ್ನಿಧಾನದಲ್ಲಿ ಜಗದೀಶ್ ಕೊಪ್ಪ

1942ರಲ್ಲಿ ನಮ್ಮೂರು ಕೊಪ್ಪದಲ್ಲಿ ಪೊಲೀಸ್ ಸ್ಟೇಷನ್ ಆರಂಭವಾಗಿದ್ದು. ಇದುವರೆಗೂ ಅಲ್ಲಿ ಜಾತಿ ಹೆಸರಿನಲ್ಲಿ ಗಲಾಟೆ, ಸಂಘರ್ಷ ಅಂತ ಒಂದು ಕೇಸೂ ದಾಖಲಾಗಿಲ್ಲ. ನನ್ನೂರಿನ ಜನ ಜಾತಿ, ಧರ್ಮ ಎಲ್ಲ ಮರೆತು ಬೆರೆತು ಬದುಕುತ್ತಿರುವವರು’
ಅಂಥ ಸಾಮರಸ್ಯ, ಸೌಹಾರ್ದತೆಯ ವಾತಾವರಣದಲ್ಲಿ ಬೆಳೆದೆ ಎಂದು ಕವಿ, ಲೇಖಕ ಜಗದೀಶ್ ಕೊಪ್ಪ ನೆನಪಿಸಿಕೊಳ್ಳುತ್ತಾರೆ. ಇದೇ ಕಾರಣಕ್ಕೆ ಇವರ ಸಂವೇದನೆ ಮನುಷ್ಯತ್ವವನ್ನು ಹುಡುಕಾಡುತ್ತದೆ. ಪ್ರೀತಿಯೊಂದೇ ಎಲ್ಲವನ್ನು ಬೆಸೆಯುತ್ತದೆ ಎಂದು ಪ್ರತಿಪಾದಿಸುತ್ತದೆ. ಕಾಶ್ಮೀರದ ಹಾಡುಗಳು, ಉಮರ್ ಖಯ್ಯಾಮನ ಪದ್ಯಗಳು, ಮಿಜರ್ಾ ಗಾಲಿಬ್ ಕಥನ-ಕಾವ್ಯ ಕೃತಿಗಳು ಅಂಥದ್ದೇ ಪ್ರಯತ್ನದ ಫಲ. ಗ್ರಾಮಗಳು ಮಾತ್ರ ಎಲ್ಲ ಎಲ್ಲೆಯನ್ನು ಮೀರಿ ನಿಲ್ಲುತ್ತವೆ ಎಂದು ನಂಬಿರುವ ಕೊಪ್ಪ ಅಕ್ಷರ ಕಲಿತವರ ಸಂಕುಚಿತತೆಯ ಬಗ್ಗೆ ಬೇಸರ ವ್ಯಕ್ತಪಡಿಸುತ್ತಾರೆ. ಕೊಪ್ಪ ಅವರ ಕೊಪ್ಪರಿಗೆ ತುಂಬಾ ತುಂಬಿರುವ ಸಮಾಜಮುಖಿ ಸಂವೇದನೆಯ ಬಗ್ಗೆ, ಕವಿತೆಗಳ ಬಗ್ಗೆ ನಾಲ್ಕು ಮಾತು…

ನೀವೇಕೆ ಬರೆಯುತ್ತೀರಿ?
ಬರವಣಿಗೆಯಿಂದ ಜಗತ್ತೇ ಬದಲಾಗಬಲ್ಲದು ಎಂಬ ಭ್ರಮೆ ನನಗಿಲ್ಲ. ಆದರೆ ಸಮಾನ ಮನಸ್ಕ ಓದುಗರೊಂದಿಗೆ ಆಪ್ತ ಸಂವಾದ ಸಾಧ್ಯ ಎಂದು ನಂಬಿದವನು.

ಇಷ್ಟು ದಿನಗಳಿಂದ ಬರೆಯುತ್ತಿದ್ದೀರಿ. ಆಗಾಗ್ಗೆ ನೆನಪಾಗುವ ಹಾಗೂ ಇಂದಿಗೂ ಕಾಡುತ್ತಲೇ ಇರುವ ಒಂದು ಘಟನೆ?
ಅದು 1986ರ ಜುಲೈ ತಿಂಗಳು. ವಾರ ಪತ್ರಿಕೆಯೊಂದರ ಉಪಸಂಪಾದಕನಾಗಿದ್ದೆ. ಅಹಮದಾಬಾದ್ ನಗರದ ರಥಯಾತ್ರೆಯ ಸಂದರ್ಭದಲ್ಲಿ ಕೋಮುಗಲಭೆ ಸಂಭವಿಸಿ 17 ಮಂದಿ ಗೋಲಿಬಾರ್ನಲ್ಲಿ ಮೃತಪಟ್ಟಿದ್ದರು. ಒಂದು ವಾರ ವಿಧಿಸಿದ ನಿಷೇಧಾಜ್ಞೆಯಲ್ಲಿ ನಾನು ಸಿಕ್ಕಿಕೊಂಡಿದ್ದೆ. ಅಲ್ಲಿನ ರಿಪ್ಲಿಕಾ ರಸ್ತೆಯೊಂದರ ಹನುಮಾನ್ ದೇವಸ್ಥಾನದ ಬಳಿ ಎಣ್ಣೆ ತುಂಬಿದ ಮಣ್ಣಿನ ಹಣತೆ ಮತ್ತು ಬತ್ತಿ ಮಾರುತ್ತಿದ್ದ ಮುಸ್ಲಿಂ ವೃದ್ಧನನ್ನು ಪೊಲೀಸರು ಹೊಡೆದು ಓಡಿಸುತ್ತಿದ್ದರು. ಆ ಸಂದರ್ಭದಲ್ಲಿ ಪೊಲೀಸರನ್ನು ತಡೆದು, ಗಲಭೆಯ ವೇಳೆಯಲ್ಲಿ ಇಂಥ ಸಾಹಸವೇಕೆ ಎಂದು ನಾನು ಆ ವೃದ್ಧನನ್ನು ಪ್ರಶ್ನಿಸಿದೆ, ಆತ ಕೊಟ್ಟರ ಉತ್ತರ ಹೀಗಿತ್ತು:
`ಸಾಬ್ ಇಡೀ ನನ್ನ ಕುಟುಂಬ ತಲೆ ತಲಾಂತರಗಳಿಂದ ಈ ದೇವಸ್ಥಾನದ ಬಳಿ ಎಣ್ಣೆ, ಬತ್ತಿ ಮಾರಿ ಬದುಕುಕಟ್ಟಿಕೊಂಡಿದೆ. ಐದು ದಿನಗಳಿಂದ ಮನೆಯಲ್ಲಿ ಒಲೆ ಹಚ್ಚಿಲ್ಲ. ಬಾಣಂತಿ ಮಗಳಿದ್ದಾಳೆ. ಇವುಗಳನ್ನು ಇಲ್ಲಿ ಮಾರಬೇಡವೆಂದರೆ ನಾನು ಎಲ್ಲಿಗೆ ಹೋಗಲಿ?’. 23 ವರ್ಷಗಳ ಹಿಂದೆ ಆತ ಕೇಳಿದ ಪ್ರಶ್ನೆಗೆ ನಾನು ಇನ್ನೂ ಉತ್ತರ ಕಂಡುಕೊಂಡಿಲ್ಲ.

ಧರ್ಮದ ಬಗ್ಗೆ, ಜಾತಿಯ ಬಗ್ಗೆ ಮಾತನಾಡುವುದು ಅಪಮಾನಕರ ಎಂಬ ಕ್ಷಣಗಳಲ್ಲಿದ್ದೇನೆ ಎಂದು ನಿಮ್ಮ ಕೃತಿಯೊಂದರಲ್ಲಿ ಹೇಳಿಕೊಂಡಿದ್ದೀರಿ. ಇಂಥ ಹೊತ್ತಲ್ಲಿ ಉಮರ್ ಖಯ್ಯಾಮ್, ಮಿಜರ್ಾ ಗಾಲಿಬ್ ಅನುವಾದ ಮಹತ್ವ ಏನು?
ಸದ್ಯದ ಸ್ಥಿತಿಯಲ್ಲಿ ಜಾತಿ ಮತ್ತು ಧರ್ಮಕ್ಕೂ, ಮಾರಾಟದ ಸರಕುಗಳಿಗೂ ಅಂಥ ವ್ಯತ್ಯಾಸಗಳಿಲ್ಲ. ಮನುಷ್ಯನ ವಿಕಾರ ಮತ್ತು ವಿಕೃತಿಗಳಿಗೆ ಇವು ಈಗ ಗುರಾಣಿಯಾಗಿವೆ. ಇಂಥ ಸ್ಥಿತಿಯಲ್ಲಿ ಧರ್ಮ ಮತ್ತು ಜಾತಿಯ ಗಡಿರೇಖೆಯನ್ನು ಉಲ್ಲಂಘಿಸಿದ ಉಮರ್ ಖಯ್ಯಾಮ್, ಮಿರ್ಜಾ ಗಾಲಿಬ್, ಇವರ ಮೂಲಕ ಧರ್ಮದಾಚೆಗೂ ಕೂಡ ಬದುಕಬಹುದಾದ ಅರ್ಥಪೂರ್ಣ ಬದುಕಿದೆ ಎಂಬುದನ್ನು ಕಂಡುಕೊಳ್ಳುವ ಪ್ರಯತ್ನವೇ ಈ ಅನುವಾದ.

ಉಪಮೆ, ರೂಪಕಗಳಿಂದ ಕೂಡಿದ ಕಾವ್ಯ ಎಲ್ಲದಕ್ಕೂ ಉತ್ತರವಾಗಬಲ್ಲದೆ? ನಿಮಗೆ ಹಾಗನ್ನಿಸುವುದೇ?
ಕವಿ ಮಿತ್ರ ಪೀರ್ ಬಾಷಾನ ಕವಿತೆಯ ಈ ಸಾಲುಗಳು ನಿಮ್ಮ ಪ್ರಶ್ನೆಗೆ ಉತ್ತರವಾಗಬಲ್ಲದು…
ಅಕ್ಕ ಸೀತಾ ನಿನ್ನಂತೆ ನಾನು ಶಂಕಿತನೆ
ನೀನು ಪಾತಿವ್ರತ್ಯಕ್ಕೆ, ನಾನು ದೇಶ ಭಕ್ತಿಗೆ
ಪ್ರತಿ ದಿನ ಇಲ್ಲಿ ಕೊಂಡ ಹಾಯಬೇಕು..

ಸದ್ಯದ ಪದ್ಯಗಳ ಬಗ್ಗೆ ನಿಮ್ಮ ಮಾತು..
ಭಾಷೆಯ ಬೇಧವಿಲ್ಲದೆ ವರ್ತಮಾನದ ತಲ್ಲಣಗಳಿಗೆ ಪರಿಣಾಮಕಾರಿಯಾಗಿ ಪ್ರತಿಕ್ರಿಯಿಸುತ್ತಿರುವ ಸಾಹಿತ್ಯದ ಪ್ರಕಾರಗಳಲ್ಲಿ ಕಾವ್ಯ ಮುಂಚೂಣಿಯಲ್ಲಿದೆ. ಯಾಕಂದ್ರೆ ಕಾವ್ಯ ಅತಿ ಬೇಗ, ಅತ್ಯಂತ ಪರಿಣಾಮಕಾರಿಯಾಗಿ ಸ್ಪಂದಿಸುತ್ತದೆ.

ಕವಿತೆ ಅಂದರೆ ನಿಮ್ಮ ಪಾಲಿಗೆ…
ಹೃದಯದ ಗಾಯಕ್ಕೆ ತಣ್ಣನೆಯ ಮುಲಾಮು…
*****

ಆಯ್ದ ಸಾಲುಗಳು…

ನಿಜ ಹೇಳಬೇಕೆಂದರೆ
ನಾನು ಮಸೀದಿಗೆ ಬಂದದ್ದು
ದೇವರ ಪ್ರಾರ್ಥನೆಗಲ್ಲ
ಇಲ್ಲಿಂದ ಕದ್ದೊಯ್ದಿದ್ದ
ಹಾಸುಗಂಬಳಿ ಈಗ
ಹಳತಾಗಿದೆ ಅದಕೆ..
(ಉಮರ್ ಖಯ್ಯಾಮ್)

ದಯಾಮಯನಾದ
ಓ ಸೃಷ್ಟಿಕರ್ತನೆ
ನೀನು ಕುಡಿಯಲಿಲ್ಲ
ಇತರರಿಗೂ ಕುಡಿಸಲಿಲ್ಲ
ಸ್ವರ್ಗ ಲೋಕದಲ್ಲಿರುವ
ನಿನ್ನ ಮಧುರಸಕ್ಕೆ
ಪಾವಿತ್ರ್ಯತೆ ಎಲ್ಲಿಂದ ಬಂತು?
(ಗಾಲಿಬ್)

(ಇದು ಅಲೆಮಾರಿಯ ಸನ್ನಿಧಾನದಿಂದ ಹೆಕ್ಕಿ ತಂದ ಸಂದರ್ಶನ)

‘ಅಕ್ಷರ ದೀಪ’ದಲ್ಲಿ ಸಂದೀಪ ನಾಯಕ

ಇವತ್ತಿನ, ನಮ್ಮ ಜತೆಯ ಬರಹಗಾರರ ಪರಿಚಯ ನಾನು ಮಾಡಿಕೊಳ್ಳಬೇಕನ್ನುವ ಇಚ್ಚೆಯಿಂದ, ಸಾಧ್ಯವಾದ ಮಟ್ಟಿಗೆ ಎಷ್ಟು ಸಿಗುತ್ತದೋ ಅಷ್ಟು ಒಳ್ಳೆಯ ಸಾಹಿತ್ಯ, ಸಾಹಿತಿಗಳನ್ನ ಕೈಗೆಟಕುವ ಜಾಲತಾಣದಲ್ಲೂ ದಾಖಲಿಸಬೇಕೆನ್ನುವ ಉದ್ದೇಶದಿಂದ ‘ಹೊಸ ತಲೆಮಾರು’ ಬ್ಲಾಗ್ ಆರಂಭಿಸಿದ್ದು ನಿಮಗೆ ಗೊತ್ತೇ ಇದೆ. ಈ ಆಶಯಕ್ಕೆ ಪೂರಕವಾಗಿ ಕಂಡುಬಂದಿದ್ದು ‘ಒಳಗೂ-ಹೊರಗೂ’ ಬ್ಲಾಗ್.  ಇದರ ಬಗ್ಗೆ ಹಿಂದೆ ಬರೆಯಲಾಗಿದೆ. ಇಲ್ಲಿದೆ, ಈ ಬಾರಿಯ ‘ಸನ್ನಿಧಾನ’ದ ವಿಶೇಷ. ಕಥೆಗಾರ ಸಂದೀಪ್ ನಾಯಕ್ ಅವರ ಸಂದರ್ಶನ….

ವಾಚಾಳಿಯಾಗಿಸಬಹುದಾದ `ಕತೆ’, ಮಾತುಮರೆಸುವ ಕವಿತೆ; ಇವುಗಳ ನಡುವೆ ಸಂಯಮದ ಉತ್ಸಾಹಿ ಸಂದೀಪ ನಾಯಕ. ಅವಸರದ ಸಾಹಿತ್ಯ ಸೃಷ್ಟಿಸುವ ಪತ್ರಕರ್ತನ ವೃತ್ತಿಯಲ್ಲಿದ್ದು ಒಳತೋಟಿಗಳಿಗೆ, ಸೂಕ್ಷ್ಮಗಳಿಗೆ ಸ್ಪಂದಿಸುವಷ್ಟು ಸಂವೇದನೆ ಉಳಿಸಿಕೊಂಡಿರುವ ಕತೆಗಾರ, ಕವಿ. ರೇಜಿಗೆ ಹುಟ್ಟಿಸುವಷ್ಟು ಅಕ್ಷರಲೋಕದಲ್ಲಿ ಮುಳುಗೇಳುತ್ತಿದ್ದರೂ, ಇವರ ಕತೆ, ಕವಿತೆಗಳಲ್ಲಿ ಅಪ್ಪಟ ಶಿರಸಿಯ ದಟ್ಟ ಕಾಡು, ಮಳೆ, ನೀರು ಪಸೆಪಸೆಯಾಗಿ ಓದುಗನನ್ನು ಆದ್ರ್ರಗೊಳಿಸುತ್ತದೆ. `ಕಾವ್ಯ ಮುಟ್ಟಿ ಮಾತಾಡಿಸಿದರೆ ಫಲ ಕೊಡುವ ಮಾಂತ್ರಿಕ ವೃಕ್ಷ’ ಎಂದೇ ನಂಬಿರುವ ಸಂದೀಪ, `ಅಗಣಿತ ಚಹರೆ’ ಎಂಬ ಕವಿತೆಗಳ ಸಂಕಲನವನ್ನು, `ಗೋಡೆಗೆ ಬರೆದ ನವಿಲು’ ಎಂಬ ಕಥಾ ಸಂಕಲನವನ್ನು ಪ್ರಕಟಿಸಿದ್ದಾರೆ. ಎರಡು ಭಿನ್ನ ಸಾಹಿತ್ಯ ಪ್ರಕಾರಗಳಲ್ಲಿ ಕ್ರಿಯಾಶೀಲರಾಗಿರುವ ಸಂದೀಪ ಇವತ್ತಿನ ಸನ್ನಿಧಾನದಲ್ಲಿ…

ಪತ್ರಕರ್ತ, ಕವಿ, ಕತೆಗಾರ, ಎಲ್ಲೆಡೆ ಅಕ್ಷರ ಸಾಂಗತ್ಯ. ಇದು ಹೇಗೆ ಶುರುವಾಯ್ತು?

ನಾನು ಅಕ್ಷರದ ಸೆಳೆತಕ್ಕೆ ಸಿಕ್ಕಿದ್ದು ಬಹಳ ಹಿಂದೆ. ಬಹುಶಃ ಹೈಸ್ಕೂಲಿನಲ್ಲಿದ್ದಾಗ ಎಂದು ಕಾಣುತ್ತದೆ. ಆಗಲೇ ನಾನು `ಚಂದಮಾಮ’ದ ಕಥೆಗಳಿಂದ ಪ್ರಭಾವಿತನಾಗಿ, ಅವುಗಳನ್ನು ಅನುಕರಿಸಿ ಕಥೆಗಳನ್ನು ಬರೆಯುತ್ತಿದ್ದೆ. ಆಮೇಲಷ್ಟೇ ಪ್ರಬಂಧ, ಕವಿತೆಗಳನ್ನು ಬರೆಯಲು ಶುರುಮಾಡಿದ್ದು, ಆನಂತರ ಕಥೆಗಳನ್ನು ಬರೆಯಲು ಶುರುಮಾಡಿದ್ದು ಇತ್ತೀಚೆಗಷ್ಚೇ. ಪ್ರೀತಿ, ಹರೆಯ ಹೇಗೆ ಶುರುವಾಯಿತು ಎಂದು ಹೇಳಲು ಸಾಧ್ಯವಿಲ್ಲವೋ ಹಾಗೆಯೇ ಅಕ್ಷರದ ಮೋಡಿಗೆ ಸಿಲುಕಿಕೊಂಡದ್ದನ್ನು ಹೇಳುವುದು ಅಸಾಧ್ಯ.
ಒಂದು ಹಂತ ದಾಟಿದ ಮೇಲೆ ಬರವಣಿಗೆ ಎನ್ನುವುದು ಅನಿವಾರ್ಯವಾಗುತ್ತದೆ. ಅದರ ಹಿಡಿತದಿಂದ ಬಿಡಿಸಿಕೊಳ್ಳುವುದು ಕಷ್ಟ. ಬರವಣಿಗೆ ಖುಷಿಗೆ ತಮ್ಮನ್ನು ಕೊಟ್ಟುಕೊಂಡ ಎಲ್ಲ ಲೇಖಕರ ಪಾಡು ಕೂಡ ಬಹುಷಃ ಇದೇ.

ವ್ಯವಧಾನವೇ ಇಲ್ಲದ ವೃತ್ತಿ, ಧ್ಯಾನಬಯಸುವ ಪ್ರವೃತ್ತಿ, ಇವುಗಳ ನಡುವೆ ನಿಮ್ಮನ್ನು ನೀವು ಹೇಗೆ ಕಾಣುತ್ತೀರಿ?

ಸಂತೆಯಲ್ಲಿ ಸಂತನಾಗುವುದೆಂದರೆ ಇದೇ ಇರಬೇಕು! ತೀವ್ರ ಚಡಪಡಿಕೆಯ ಮನಸ್ಥಿತಿ ಇದ್ದಾಗಲೇ ನಿಮಗೆ ಒಳ್ಳೆಯದನ್ನು ಬರೆಯಲು ಸಾಧ್ಯ. ವ್ಯವಧಾನ ಇಲ್ಲದ ಈ ವೃತ್ತಿಯ ನಡುವೆಯೇ ನನ್ನದೇ ಆದ ಸ್ಪೇಸ್ ಅನ್ನು, ಜಗತ್ತನ್ನು, ಸಮಯವನ್ನು ಕಲ್ಪಿಸಿಕೊಳ್ಳುವುದೇ ಧ್ಯಾನಸ್ಥನಾಗುವುದಕ್ಕೆ ಒಳ್ಳೆಯ ದಾರಿ, ಉಪಾಯ ಎಂದು ನನಗನಿಸುತ್ತದೆ. ಹಾಗೆಂದು ಪೂರ್ತಿ ಬಿಡುವು ಸಾಕಷ್ಟು ಸಮಯ ನಿಮಗಿದೆ ಎಂದರೂ ಬರೆಯಲು ಸಾಧ್ಯವಾಗುತ್ತದೆಯೇ ಎಂಬುದು ನನಗೆ ಅನುಮಾನ. ದೈನಿಕದ ಕೆಲಸಗಳ ನಡುವೆಯೇ ಬೇರೆ ಏನನ್ನೂ ಮೂಡಿಸಲು ಪ್ರಯತ್ನಿಸುವುದು ಒಬ್ಬ ಪತ್ರಕರ್ತನ ವೃತ್ತಿಯಲ್ಲಿರುವ ಬರಹಗಾರನಿಗೆ ಸಾಧ್ಯವಾಗಬೇಕು. ಹಾಗಿದ್ದಾಗಲೇ ಬದುಕಿನಿಂದ ಹೊರತಾಗಿರುವ ಸಾಹಿತ್ಯ ಬರುತ್ತದೆ

ನಿಮ್ಮ ಕವಿತೆಗಳನ್ನು ಓದುವಾಗ ಮುಖಕ್ಕೆ ಮಂಜು ಮುತ್ತಿದ ಹಿತ. ಅಷ್ಟೊಂದು ಆದ್ರ್ರತೆಗೆ ಕಾರಣವೇನು?

ನನ್ನ ಕವಿತೆ ನನ್ನ ಹಾಗೆ ಎನ್ನಬಹುದು. ಅಂಥ ನಿದರ್ಿಷ್ಟ ಕಾರಣವೇನೂ ಇಲ್ಲ, ನಾನು ಕವಿತೆಗಳಲ್ಲಿ ಪ್ರಯೋಗಗಳನ್ನು ನಡೆಸುತ್ತಿದ್ದಾಗ ನೀವು ಹೇಳುವ ಆದ್ರ್ರತೆ ಎನ್ನುವುದು ಕವಿತೆಗಳ ಒಂದು ಲಕ್ಷಣವಾಗಿ ಬಂದಿರಬಹುದೇನೋ.

ಕವಿತೆ ಒಂದು ರೂಪಕ ಅನ್ನೋದಾದರೆ, ಕತೆ ಏನು ಅನ್ನಿಸುತ್ತೆ?

ಕವಿತೆಯನ್ನು ಕೇವಲ ರೂಪಕ್ಕೆ ಸೀಮಿತಗೊಳಿಸುವುದು ಬೇಡ. ಆದರೂ ಕವಿತೆ ಜಗತ್ತಿಗೆ ರೂಪಕವಾದರೆ, ಕಥೆ ಎನ್ನುವುದು ಬದುಕಿಗೆ ಪ್ರತಿಮೆ ಎನ್ನಬಹುದು.

ಕನ್ನಡ ಕತೆಗಳಲ್ಲಿ ಏನಾದರೂ ಹೊಸತನ ಕಾಣಿಸುತ್ತಿದೆಯೇ?

ಕನ್ನಡ ಕಥೆಗಳಲ್ಲಿ ಅಂಥ ಹೊಸತನ ನನಗೆ ಕಾಣುತ್ತಿಲ್ಲ. ಏಕೆಂದರೆ, ಸರಳವಾಗಿ ಹೇಳಬೇಕಂದರೆ ಈ ಕಥೆಗಳಲ್ಲಿ ಬೇರೆಯ ಅನುಭವದ ಜಗತ್ತಿದೆ. ಇದನ್ನು ಓದದಿದ್ದರೆ ಬೇರೆ ಏನನ್ನೂ ಕಳೆದುಕೊಳ್ಳುತ್ತೇನೆ ಎಂಬಂಥ ತೀವ್ರವಾಗಿ ಓದಲೇ ಬೇಕೆನಿಸುವ ಹೊಸಕಥೆಗಳು ನನಗೆ ಕಾಣುತ್ತಿಲ್ಲ. ಹೊಸತನ ಎನ್ನುವುದು ಬೇರೆಯದೇ ಆದ ಅನುಭವದ ಮಂಡನೆ, ಅಭಿವ್ಯಕ್ತಿ ಕ್ರಮದಿಂದ ಬರುತ್ತದೆ ಎಂದುಕೊಂಡಿದ್ದೇನೆ. ಈಗಲೂ ನಾನು ಓದುವುದು ಮಾಸ್ತಿ, ಚಿತ್ತಾಲ, ಲಂಕೇಶ್, ತೇಜಸ್ವಿ, ಶಾಂತಿನಾಥ ದೇಸಾಯಿ, ಜಯಂತ ಕಾಯ್ಕಿಣಿ ಈ ಲೇಖಕರನ್ನೇ. ಅಂದರೆ ಈಗಲೂ, ಪ್ರತಿ ಬಾರಿ ಓದಿದಾಗಲೂ ಈ ಲೇಖಕರು ಮಂಡಿಸುವ ಲೋಕ ಹೊಸತಾಗಿಯೇ ನನಗೆ ಕಾಣುತ್ತದೆ. ಆದರೆ ಇತ್ತೀಚಿನ ಲೇಖಕರ ಕಥೆಗಳು ಇತ್ತೀಚೆಗೆ ಬರೆದವು ಎನ್ನುವುದನ್ನು ಬಿಟ್ಟರೆ ಹೊಸತಾಗೇನೂ ಕಂಡಿಲ್ಲ.

ಇವತ್ತಿನ ಬರಹಗಾರರನ್ನು ತೀವ್ರವಾಗಿ ಕಾಡುವ ಸಂಗತಿ ಯಾವುದಿರಬಹುದು?

ಯಾವ ಯಾವ ಲೇಖಕರಿಗೆ ಏನೇನು ಕಾಡುತ್ತದೆ ಎಂಬುದನ್ನು ನಾನು ಹೇಗೆ ಹೇಳುವುದು! ಎಲ್ಲರಿಗೂ ಅವರಿಗೆ ಪ್ರೀತಿಯುಂಟು ಮಾಡುವಂಥದ್ದು ಈ ಒಂದೇ ಬದುಕಿನಲ್ಲಿ ಕಾಡುವಂಥಾಗಲಿ, ಅದನ್ನು ತಮ್ಮ ಬರಹಗಳ ಮೂಲಕ ನಮ್ಮಂಥ ಓದುಗರಿಗೆ ಅವರು ಹೇಳುವಂತಾಗಲಿ.

ನಿಮ್ಮ ಕತೆ, ಕವಿತೆಗಳಲ್ಲಿ ಮಾರ್ದನಿಸುವ ಒಂದು ದನಿ…

ನನ್ನ ಕಥೆ ಕವಿತೆಗಳಲ್ಲಿ ಮಾರ್ದನಿಸುವ ಒಂದೇ ದನಿ ಯಾವುದೆಂದು ಹೇಳುವುದು ಸದ್ಯಕ್ಕೆ ಕಷ್ಟವಾಗುತ್ತದೆ. ಏಕೆಂದರೆ ಅವನ್ನೆಲ್ಲ ನಾನು ಒಟ್ಟಾಗಿ ಓದಿಲ್ಲದಿರುವುದರಿಂದ ಈ ಪ್ರಶ್ನೆಗೆ ಅವುಗಳನ್ನು ಓದಿ ಉತ್ತರ ಹೇಳಬೇಕಾಗುತ್ತದೆನೋ!

ಥಟ್ಟನೆ ಕತೆ ಎಂದರೆ ಏನು ನೆನಪಾಗುತ್ತೆ? ಕವಿತೆ ಎಂದರೆ ಯಾರು ನೆನಪಾಗುತ್ತಾರೆ?

ಕಥೆ ಎಂದರೆ… ಪಾತಿ ದೋಣಿ, ಹೊಳೆ ದಾಟುವ ತಾರಿ, ಬೇಣ, ಹಕ್ಕಲು, ಅಂಕೋಲೆ ಬಂಡಿಹಬ್ಬ, ಊರಿನ ಓಣಿಗಳು, ಮೀನು, ಪೇಟೆ, ಗನರ್ಾಲು ಸಾಹೇಬ, ಹೆದ್ದಾರಿಯಲ್ಲಿ ಹಾಯುತ್ತಲೇ ಇರುವ ವಾಹನಗಳು, ಮಳೆಗಾಲದಲ್ಲಿ ರುಮುಗುಡುವ ಸಮುದ್ರ ಜನರ ಮಾತೇ ಕೇಳಿಸದ ಮನೆಗಳು ಇನ್ನೂ ಏನೇನೋ ನೆನಪಾಗುತ್ತದೆ. ಕವಿತೆ ಎಂದೊಡನೆ ದಿನಕರ ದೇಸಾಯಿ, ಗಂಗಾಧರ ಚಿತ್ತಾಲ, ಜಯಂತ ಕಾಯ್ಕಿಣಿ ನೆನಪಾಗುತ್ತಾರೆ.

ತುಂಬಾ ಇಷ್ಟಪಡುವ ನಿಮ್ಮದೇ ಪದ್ಯ..

ಈವರೆಗೆ ಬರೆದವುಗಳಲ್ಲಿ ಬಹುಶಃ ಯಾವುದೂ ಇಲ್ಲ ಎಂದು ಕಾಣುತ್ತದೆ. ಮುಂದೆ ನಾನು ಬರೆಯಲಿರುವ ಕವಿತೆಯೇ ನನಗೆ ಇಷ್ಚವಾಗಬಹುದಾದ ಕವಿತೆ. ಅಂದರೆ, ನನಗೆ ಪ್ರಿಯವಾಗುವ ಕವಿತೆ ಭವಿಷ್ಯದಲ್ಲಿದೆ.

ಒಳಗೂ ಹೊರಗೂ ‘ಮಲ್ಲಿನಾಥನ ಧ್ಯಾನ’

“ಬೊಗಸೆ ತುಂಬಾ ನೋವ ಹೂವು / ನೆನಪುಗಳು ಬೇಕು ನಡೆಯುವುದ ನಿಲ್ಲಿಸಿ ನಿರಾಳವಾಗಲು./ ಚಿಂತೆಯಾಗಿ, ಚಿತೆಯಾಗಿ ಕಾಡಿ / ಕೊನೇ ಪಕ್ಷ ಸಾವಿಗೆ ಶರಣಾಗಲು.”

 ಇವು `ನೆನಪುಗಳು ಬೇಕು’ ಪದ್ಯದ ಸಾಲುಗಳು. ಇದೇ ರೀತಿಯ ಭಾವತೀವ್ರತೆಯ ದಟ್ಟ ಅನುಭವ, ಜಾತ್ರೆಯ ಮುದಿಮರ, ತಾಲ್ ಸೆ ತಾಲ್ ಮಿಲಾ, ಸಹಾರಾದ ಮರಳು, ಹಳ್ಳಿಯ ಚಿತ್ರಗಳೆಲ್ಲವೂ ಮಲ್ಲಿಕಾರ್ಜುನ ಗೌಡ ತೂಲಹಳ್ಳಿ ಅವರ `ಶರೀಫನ ಬೊಗಸೆ’ಯಲ್ಲಿವೆ. ಇವರ ಕವಿತೆಗಳನ್ನು ಓದುವುದೇ ಖುಷಿ. ಇಲ್ಲಿ ಕಾಣುವ ಆಪ್ತ ಪ್ರತಿಮೆಗಳು ನಮ್ಮನ್ನು ಸೆಳೆಯುತ್ತವೆ. `ಶರೀಫನ ಬೊಗಸೆ’ಯಲ್ಲಿ ಅನೇಕ ಅನುಭವಗಳನ್ನು ತುಂಬಿಕೊಂಡು ಕವಿ ಮನಸ್ಸುಗಳ ಮಧ್ಯೆ ನಿಂತವರು ಮಲ್ಲಿಕಾರ್ಜುನ. ಆ ಬೊಗಸೆ ತುಂಬಾ ನಮ್ಮನ್ನು ಕಾಡುವ ಚಿತ್ರಗಳಿವೆ. ಪಾತ್ರಗಳಿವೆ. ಕಳೆದುಕೊಂಡು ಪಡೆಯುವುದೇ ಹೆಚ್ಚಂತೆ. ಹಾಗಾದರೆ ಈ ಕವಿ ಪಡೆದುಕೊಂಡದ್ದು ಏನು? ಎಂಬ ಪ್ರಶ್ನೆಗೆ ಇವರ ಪ್ರತಿ ಪದ್ಯದ ಸಾಲುಗಳೇ ಉತ್ತರವಾಗಿ ನಿಲ್ಲುತ್ತವೆ. ಕವಿತೆಗಳನ್ನು ಅಕ್ಷರಗಳಲ್ಲಿ ಮೊಗೆಯದೇ, ಅಂತಾರಾತ್ಮದ ಚಿಲುಮೆ ಮುಂದೆ ಬೊಗಸೆ ಒಡ್ಡಿ ನಿಂತಿರುವ ಕಾವ್ಯಧ್ಯಾನ ಅವರ ಕವನಗಳಲ್ಲಿದೆ. ಸದ್ಯ ರಾಣೆಬೆನ್ನೂರು ಸಮೀಪದ ಸುಣಕಲ್ ಬಿದರಿಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮತ್ತೊಂದು ಬೊಗಸೆ ಕವಿತೆಯೊಂದಿಗೆ ಬರುವವರಿದ್ದಾರೆ. ಇದೇ ನೆಪದಲ್ಲಿ ಮಾತಿನ ಮೊಗೆತ..

 

:sOgemane:

 

ನೀವು ಕವಿಯಾಗಿದ್ದು ಹೇಗೆ? ಕವಿತೆಯೊಂದಿಗೆ ಸಂಬಂಧ ಬೆಳೆದದ್ದು ಯಾವಾಗ?

ನಾನು ಪಿಯುಸಿ ಫೇಲಾಗಿ ಮನೆಯಲ್ಲಿದ್ದಾಗ. ಅಣ್ಣ ಬಸವರಾಜ್ ಅಂಗಡಿ ವ್ಯಾಪಾರ ಮಾಡ್ತಾನೇ ಮಾರ್ಕ್ಸ್, ಏಂಗೆಲ್ಸ್, ಷೇಕ್ಸ್ ಪಿಯರ್ ಅಂತೆಲ್ಲಾ ಓದ್ತಾ ಇದ್ದ. ಕಾದಂಬರಿ ಬರೆಯೋದು, ನಾಟಕ ಆಡೋದು ಮಾಡ್ತಿದ್ದ. ಮೊದಲಿನಿಂದಲೂ ಒಂಟಿತನ ಅಂದ್ರೆ ನಂಗಿಷ್ಟ. ಹೊಲ ತಿರುಗೋದು, ಜೀರಂಗಿ ಹಿಡಿಯೋದು, ಮಾಡ್ತಾನೆ ಬೆಳಿತಿದ್ದವನಿಗೆ ಅಣ್ಣನ ಮಾತು, ಚರ್ಚೆ, ಸಾಹಿತ್ಯದ ಪುಸ್ತಕಗಳು ಆಸಕ್ತಿ ಹುಟ್ಟಿಸಿದವು. ಅಷ್ಟೊತ್ತಿಗಾಗಲೇ ಊರಲ್ಲಿ ಗ್ರಾಮಪಂಚಾಯ್ತಿ ರಾಜಕೀಯವಾಗಿ ಬಲವಾಗ್ತಿದ್ದವು. ವ್ಯವಸಾಯ ಮಾಡ್ತಲೇ ರಾಜಕೀಯದಲ್ಲಿ ತಲೆ ಹಾಕುತ್ತಿದ್ದ ಅಪ್ಪ, ಆತನ ಮೂಲಕ ಮನೆ ತನಕ, ಮನದ ತನಕ ನುಗ್ಗಿ ಬರುತ್ತಿದ್ದ ಸಮಸ್ಯೆಗಳು, ಜನರ ಕಷ್ಟಗಳು ನನ್ನನ್ನು ಕಲಕುತ್ತಿದ್ದವು. ಅನ್ಯಾಯಗಳನ್ನು ಪ್ರಶ್ನಿಸಿ, ಅಸಹಾಯಕನಾಗಿ ಒದ್ದಾಡೋದು, ಅವಮಾನ ಅನುಭವಿಸೋದು ಮನೆಯೊಳಗಿನ ಕಷ್ಟಗಳನ್ನು, ಜಗಳಗಳನ್ನೆಲ್ಲಾ ತಲೆಗೆ ತುಂಬಿಕೊಂಡು, ಒಬ್ಬನೇ ಅಳೋದು, ಹೀಗೆ ಆಗ್ತಿದ್ದಾಗ ಯಾಕೋ ಏನನ್ನೋ ಬರೆಯಬೇಕೆನಿಸಿತು. ಕತೆ ಬರ್ಯೋಕೆ ಪ್ರಯತ್ನ ಮಾಡಿದೆ. ಆಗ್ಲಿಲ್ಲ. ಪದ್ಯ ಬರೆದೆ. ಇಂಥದ್ದೇ… ಕಾಲ ಕಾಲಕ್ಕೆ ಕಾಡುವ ನೋವುಗಳು… ಕವಿತೆಗಳು..

ಫ್ಯಾಷನ್ ಟೀವಿ, ರೆಹಮಾನ್ ಹಾಡು, ಸೆಪ್ಟೆಂಬರ್ 11, ಹಿಂದಿ ಹಾಡು ಇಂಥ ಹಲವು ಚಿತ್ರಗಳು ನಿಮ್ಮ ಪದ್ಯಗಳಲ್ಲಿವೆ. ಇವು ಯಾವುದಕ್ಕೆ ಸಂವಾದಿಯಾಗಿ ನಿಮ್ಮ ಕಾವ್ಯದಲ್ಲಿ ಕಾಣಿಸಿಕೊಳ್ಳುತ್ತವೆ?

ಅಮೆರಿಕಕ್ಕೆ ನೆಗಡಿ ಬಂದರೂ ಸಾಕು ಅದೊಂದು ದೊಡ್ಡ ಸುದ್ದಿ. ಜಗತ್ತಿನ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಅಮೆರಿಕ, ಬಿನ್ ಲಾಡೆನ್ ಮಹಾ ವಿಲನ್ ಅಂತೆಲ್ಲಾ ಮಾತು. ಅದರಾಚೆಗಿನ ಸೂಕ್ಷ್ಮಗಳ ಬಗ್ಗೆ ಮಾತಾಡೋರು ಯಾರೋ ಕೆಲವರು. ಸೆಪ್ಟೆಂಬರ್ 11ರ ಘಟನೆ ಟೀವಿ, ಪತ್ರಿಕೆಗಳನ್ನು ಆವರಿಸಿಕೊಂಡಾಗ ನನ್ನನ್ನು ತೀವ್ರವಾಗಿ ಕಾಡಲಾರಂಭಿಸಿತು. ಅದರ ಬಗ್ಗೆ ಏನು ಮಾತಾಡುವುದಕ್ಕೂ ಗೊಂದಲವಾಗುತ್ತಿತ್ತು. ಅಂಥ ಅನುಭವವನ್ನು ಕವಿತೆ ಮಾಡಿದೆ. ಇನ್ನು ನೀವು ಪ್ರಸ್ತಾಪಿಸುತ್ತಿರುವ ಹಳ್ಳಿ ಅನುಭವ, ರೆಹಮಾನ್ ಸಂಗೀತ, ಫ್ಯಾಶನ್ ಟೀವಿ, ಎಂಟೀವಿ ಚಿತ್ರಗಳನ್ನು ಕಾವ್ಯದಲ್ಲಿ ತಂದಿದ್ದೀನಿ. ಅವುಗಳನ್ನು ಯಾಕ್ ತಂದಿದ್ದೀನಿ ಅನ್ನೋದನ್ನು ಒಬ್ಬ ಓದುಗ ಹೇಳಿದ್ರೆ ಚೆನ್ನಾಗಿರುತ್ತೆ. ಆ ಕವಿತೆಯಲ್ಲಿ ಹೊರನೋಟಕ್ಕೆ ತುಂಬಾ ಆಕರ್ಷಕವಾಗಿ ಕಾಣುವ ಮನೆಯೊಳಗಿನ ಸಮಸ್ಯೆಗಳು, ಅವುಗಳ ನಡುವೆ ಸಂಭ್ರಮಗಳಿಲ್ಲದೆ ಒದ್ದಾಡ್ತಾ ಇರೋ ಯುವಕ ತತ್ಕಾಲದ ಬಿಡುಗಡೆಗಾದ್ರೂ ಆಥರದ ಚಾನೆಲ್ಗಳಲ್ಲಿ ಲೀನವಾಗುವ ಮನಸ್ಥಿತಿ, ಇವುಗಳಿಗೆ ಸಂವಾದಿಯಾಗಿ ಆ ಚಿತ್ರಗಳನ್ನು ತಂದಿದ್ದೀನಷ್ಟೆ.

ನಿಮ್ಮ ಕವಿತೆಗಳಲ್ಲಿ ಕಾಣುವ, ಕಾಡುವ `ಅಪ್ಪ’ನ ಬಗ್ಗೆ ಹೇಳಿ…

ಚಿಕ್ಕವನಿದ್ದಾಗ ಪ್ರತಿ ರಾತ್ರಿ ಅಪ್ಪನ ಜೊತೇನೇ ನಾನು ಮಲಗ್ತಾ ಇದ್ದಿದ್ದು, ನನ್ನೆಲ್ಲಾ ನೋವು, ಸಂಕಟಗಳಿಗೆ, ಸುಖ ಸಂಭ್ರಮಗಳಿಗೆ ಯಾವಾಗ್ಲೂ ಸಾಕ್ಷಿಯಾಗುತ್ತಾ ಇದ್ದಿದ್ದು ಅಪ್ಪ (ಕರಿಬಸವನಗೌಡ). ಊರಲ್ಲಿ ನಡೆಯುವ ಅನ್ಯಾಯಗಳನ್ನು ಅವಡುಗಚ್ಚಿ ಪ್ರಶ್ನಿಸಿ, ಕೋರ್ಟು, ಕಚೇರಿ ಅಂತೆಲ್ಲಾ ಅಲೆದು, ದುಗುಡದಲ್ಲಿದ್ದಾಗ್ಲೂ, ನಮ್ಮ ಹೊಟ್ಟೆ ಹಸಿದ್ಹಂಗೆ ನೋಡಿಕೊಳ್ತಿದ್ದ. ನಾನು ದೊಡ್ಡವನಾಗ್ತಾ, ನನ್ನಲ್ಲೂ ಹೊಸ ರೀತಿಯ ರಾಜಕೀಯ ಪ್ರಶ್ನೆ ಮೂಡುತ್ತಿದ್ದಾಗ ಅಪ್ಪ ಒಮ್ಮೆ ಸರಿಯಾಗಿ ಕಂಡ್ರೆ ಮತ್ತೊಮ್ಮೆ ನಿಗೂಢವಾಗ್ತಿದ್ದ. ಊರಿನ ರಾಡಿನೆಲ್ಲಾ ಮೈಮೇಲೆ ಸುರ್ಕೊಂಡು, ಒದ್ದಾಡ್ತಿರೋ ಅಪ್ಪನ ಜತೆಗೆ ಅಮ್ಮನ ನಿತ್ಯ ತಕರಾರುಗಳು ಕೆಲವೊಮ್ಮೆ ಸರಿ ಅನ್ನಿಸದರೆ, ಹಲವು ಬಾರಿ ಅಪ್ಪನೇ ಸರಿ ಕಾಣಿಸ್ತಿದ್ದ. ಅಪ್ಪನ ಒಳಹೊರಗುಗಳು ಅರ್ಥ ಮಾಡಿಕೊಳ್ತಾನೇ, ನನ್ನ ಸುತ್ತಲ ಘಟನೆಗಳನ್ನು ನೋಡ್ಲಿಕ್ಕೆ ಶುರು ಮಾಡಿದೆ. ನನ್ನ ಓದಿಗೆ ಕಾಲ ಬದುಕಿರೋಲ್ಲ, ಅಂತ್ಹೇಳಿ, ಸಣ್ಣ ಮುಖ ಮಾಡಿಕೊಂಡಾಗೆಲೆಲ್ಲಾ ಭಾರವಾಗ್ತಿದ್ದ ಎದೆ ಆತನೆಡೆ ಸೆಳೆತವನ್ನು ಮತ್ತೂ ಜಾಸ್ತಿ ಮಾಡ್ತು. ಅಪ್ಪನಾಗಿ ಜೊತೆಗಿದ್ದು ಕೊಂಡೆ, ಹೊಲವನ್ನು, ಜೀರಂಗಿಯನ್ನು ಊರನ್ನ, ಅಲ್ಲಿನ ನೋವುಗಳನ್ನು ಅನ್ಯಾಯಗಳನ್ನು ರಾಜಕೀಯವನ್ನು ಎಲ್ಲ ತೋರಿಸಿದವನು ಅಪ್ಪ. ಹಾಗಾಗಿ ಕಾವ್ಯದಲ್ಲೂ ಕಾಡ್ತಾನೆ….

ನಿಮಗೆ ಯಾವಾಗ್ಲಾದ್ರೂ ಭಾವಗೀತೆ ಬರಿಬೇಕು ಅಂತಾ ಅನ್ಸುತ್ತಾ..?

ತನುವು ನಿನ್ನದು ಮನವು ನಿನ್ನದು.. ನೀ ಹಿಂಗ ನೋಡಬ್ಯಾಡ, ಅಳುವ ಕಡಿಲಿನಲ್ಲಿ, ಎಲ್ಲೋ ಹುಡುಕಿದೆ ಇಲ್ಲದ ದೇವರ ಇಂಥ ಭಾವಗೀತೆಗಳನ್ನು ಕೇಳಿ ಸುಖಿಸ್ತೀನಿ. ಜಯಂತ್ ಸಿನಿಮಾಕ್ಕೆ ಬರಿತಿರೋ ಹಾಡುಗಳನ್ನು ಕೇಳಿಯೂ ಸಂತೋಷ ಪಡ್ತೀನಿ ಅಂತಾ ಪ್ರಯತ್ನ ಮಾಡ್ಬೇಕು ಅಂತಾ ನನಗಂತೂ ಆಗಾಗ ಅನ್ನಿಸುತ್ತೆ. ಆದರೆ ನಮ್ಮನ್ನು ತಲೆ ತಿನ್ನೋವು ಇವತ್ತಿನ ವಿಷಯಗಳೇ. ಅಪ್ರಾಮಾಣಿಕ ರಾಜಕೀಯ, ನೆರೆಪೀಡಿತರ ನೋವು, ಹುಸಿ ದೇಶಾಭಿಮಾನ, ಸಾಮಾನ್ಯನ ಅಸಹಾಯಕತೆ, ವೈಯಕ್ತಿಕ ಸಂಘರ್ಷಗಳು…

ಇಂದಿನ ಕವಿಯ ಮುಂದಿನ ಸವಾಲು..

ಜನಸಾಮಾನ್ಯರ ಬದುಕಿರುವ ಪ್ರತಿಯೊಂದು ಸವಾಲುಗಳೇ ಇವತ್ತಿನ ಕವಿಗಿರುವ ಸವಾಲು ಅಂತಾ ಭಾವಿಸಿದ್ದೀನಿ… ಬದಲಾಗಿರೋ ಸಾಂಸ್ಕೃತಿಕ ಮತ್ತು ರಾಜಕೀಯ ಸನ್ನಿವೇಶದ ಈ ಹೊತ್ತಿನಲ್ಲಿ, ವ್ಯಕ್ತಿ ಮತ್ತು ಸಾಮಾಜಿಕ ಬದುಕಿನ ಒಳಸೂಕ್ಷ್ಮಗಳನ್ನ, ವ್ಯಕ್ತಿ ಮತ್ತು ಪ್ರಕೃತಿಯ ಸಂಬಂಧದ ಅಂತರಲಯಗಳನ್ನ, ಆಳವಾಗಿ ಗ್ರಹಿಸಿ ಬರೀಬೇಕು ನಾವೆಲ್ಲ. ನಮ್ಮ ಭಾಷೆ, ನುಡಿಗಟ್ಟು, ಕಾವ್ಯದ ಆಕೃತಿ, ನಮ್ಮ ಸಾಹಿತ್ಯ ಪರಂಪರೆಯಿಂದ ಶಕ್ತಿ ಪಡೆದುಕೊಳ್ತಾ ಹೊಸದಾಗಬೇಕು. ಹೊಸ ತಲೆಮಾರಿನ ನನ್ನ ಸ್ನೇಹಿತರನೇಕರಿಗೆ ಖಂಡಿತ ಈ ಶ್ರದ್ಧೆ ಇದೆ.

ನಿಮ್ಮನ್ನು ಕಾಡುವ ಕವಿ…

ಕಾವ್ಯದ ಸಮ್ಮೋಹಕತೆಯಲ್ಲಿ ಬೇಂದ್ರೆ, ಬಂಧದಲ್ಲಿ ಅಡಿಗ, ವೈಚಾರಿಕತೆಯಲ್ಲಿ ಕುವೆಂಪು. ಒಬ್ಬ ಕವಿಯನ್ನು ಗುರುತಿಸುವುದು ಕಷ್ಟ. ಆದರೆ ಇವತ್ತಿಗೂ ಕಾವ್ಯವನ್ನು ಅತಿ ಹೆಚ್ಚು ಪ್ರೀತಿಸ್ತೀನಿ ಅಂದ್ರೆ, ಅಲ್ಲಮನಿಂದಾಗಿ…

*****

ಹಗಲ ಕತ್ತಲಲಿ ನಕ್ಷತ್ರ ನಗುವುದಿಲ್ಲ

ರಾತ್ರಿಯೆಂದರೆ ಕತ್ತಲಲ್ಲ

****

ಗುಡಿಗುಂಡಾರಗಳಿಗೆ

ಕತ್ತಿಮಸೆವ

ಅಡಿಗಲ್ಲುಗಳೇ

ಬನ್ನಿ

ನಿಮ್ಮೆಲ್ಲರಿಗೆ

ಅಲ್ಲಮನ ಬಯಲು ತೋರುವೆ

****

ಲೆಕ್ಕಿಲ್ಲ, ಬುಕ್ಕಿಲ್ಲ

ಬ್ಯಾಂಕ್ನಾಗ್ ಖಾತಿಲ್ಲ

ನರ್ನ್ಯಾಗ್ ಬರೀ ಸೊನ್ನಿ ಬರೀತೀವಿ ರೀ

ಹುಡುಗೂರುಪ್ಡೀ ಕಳಿಸಿ

ತಂಗಳನ್ನ ಬೇಡೀಸಿ

ತುತ್ ತಿಂದು ಹೊತ್ತನ್ನ ನೂಕ್ತೀವಿ ರೀ

ಹಳ್ಳಿಯ ಜನ ನಾವು..

(ಬೊಗಸೆಯಿಂದ ತೆಗೆದ ಸಾಲುಗಳು)

ವಾರಗೆಯ ‘ಒಳಗೂ… ಹೊರಗೂ…’ ಬ್ಲಾಗ್ ನಿಂದ ಈ ಲೇಖನ ಕಡ ತರಲಾಗಿದೆ. ಈ ಬ್ಲಾಗ್ ಮತ್ತು ಆಗಾಗ ಅಲ್ಲಿಂದ ಇಂದಿನ ಬರಹಗಾರರ ಪರಿಚಯ- ಸಂದರ್ಶನಗಳನ್ನು ತಂದು ಬಡಿಸುವ ಬಗ್ಗೆ ಹಿಂದಿನ ಪೋಸ್ಟೊಂದರಲ್ಲಿ ಹೇಳಿದ್ದೇವೆ.

ಮೆಚ್ಚಬೇಕಾದ ಪ್ರಯತ್ನ- ಅಹರ್ನಿಶಿಯ ಮೂರನೇ ಕೊಡುಗೆ

ಶಿವಮೊಗ್ಗದ ಅಕ್ಷತ ಅಂದರೆ ಅದು ಅಹರ್ನಿಶಿ ಅಕ್ಷತಾಳೇ. ಈ ಹಿಂದೆ ಈಕೆಯ ಬಗ್ಗೆ ಹೊಸತಲೆಮಾರು ಬರೆದಿದೆ. ಈಗ ಮತ್ತೆ ಅಕ್ಷತಾ ಹೆಸರು ಎತ್ತಿರುವುದಕ್ಕೆ ಕಾರಣವಿದೆ. ಮುಂಚೂಣಿಯಲ್ಲಿರುವ ಪ್ರಕಾಶಕರೂ ಸೇರಿದಂತೆ ಬಹುತೇಕರು ಇವತ್ತಿನ ‘ಪಾಪ್ಯುಲರ್’ ಮಾದರಿಯ ಬರಹಗಳ ಪ್ರಕಟಣೆಯತ್ತಲೇ ಹೆಚ್ಚಿನ ಒಲವು ತೋರುತ್ತಿರುವಾಗ ಅಕ್ಷತಾ ಪ್ರಯತ್ನಗಳು ವಿಭಿನ್ನವೆನಿಸುತ್ತವೆ. ಈ ವೈಶಿಷ್ಟ್ಯಕ್ಕೆ ಮತ್ತೊಂದು ಗರಿ, ‘ಆ ದಶಕ’.

ಚಳವಳಿಗಾರ, ಜನಪರ ಚಿಂತಕ ಕಡಿದಾಳು ಶಾಮಣ್ಣ ಅವರು ಎಂಭತ್ತರ ದಶಕದಲ್ಲಿ ಬರೆದ ಲೇಖನಗಳು ಹಾಗೂ ಪತ್ರಗಳನ್ನು ಸಂಕಲಿಸಿ ಪ್ರಕಟಿಸುತ್ತಿದ್ದಾರೆ ಅಕ್ಷತಾ. ಶಿವಮೊಗ್ಗೆಯಲ್ಲಿ,  ನವೆಂಬರ್ 29ರ ಭಾನುವಾರ ಸಂಜೆ 5:30ಕ್ಕೆ ಪುಸ್ತಕ ಬಿಡುಗಡೆ ಕಾರ್ಯಕ್ರಮ ಆಯೋಜನೆಗೊಂಡಿದೆ. ಗೆಳತಿಯ ಪರವಾಗಿ ‘ಹೊಸತಲೆಮಾರು’ ಎಲ್ಲರನ್ನೂ ಪ್ರೀತಿಯಿಂದ ಕಾರ್ಯಕ್ರಮಕ್ಕೆ ಆಹ್ವಾನಿಸುತ್ತದೆ.

ತಾಜ್‌ಮಹಲ್ ಕಟ್ಟಬೇಕು, ಗೋರಿಯ ಮೇಲಲ್ಲ!- ಆರಿಫ್ ರಾಜಾ ಅಂತರಾಳ

ಅಲೆಮಾರಿ ಎಂದು ಹೇಳಿಕೊಳ್ಳುವ ಪತ್ರಕರ್ತರೊಬ್ಬರ ಬ್ಲಾಗ್ ‘ಒಳಗೂ ಹೊರಗೂ’.  ಉತ್ತಮ ಚಿಂತನೆಗಳ, ಗ್ರಹಿಕೆಯ,  ಆರೋಗ್ಯಕರ ಮನಸಿನ ಇಂದಿನ, ನಮ್ಮ ನಡುವಿನ ಹುಡುಗ ಈತ. ಇವರು ಕನ್ನಡಪ್ರಭಕ್ಕಾಗಿ ನಡೆಸಿದ ಹೊಸತಲೆಮಾರಿನ ಬರಹಗಾರರ ಸಂದರ್ಶನಗಳನ್ನು ತಮ್ಮ ಬ್ಲಾಗ್ ನಲ್ಲಿಯೂ ಪ್ರಕಟಿಸುತ್ತಿದ್ದಾರೆ. ನಮ್ಮ ಜತೆಗಾರರ ಅಂತರಾಳವನ್ನು ಸ್ವಲ್ಪ ಮಟ್ಟಿಗಾದರೂ ಅರಿತುಕೊಳ್ಳಲು ಇದು ಬಹಳ ಉಪಯುಕ್ತ.

ಈ ಬ್ಲಾಗ್ ಈ ಬಗೆಯ ಸಂದರ್ಶನಗಳನ್ನು ಹೊತ್ತುನಿಂತ ಪ್ರತಿ ಬಾರಿಯೂ ಇಲ್ಲಿ ಮಾಹಿತಿ ನೀಡಲಾಗುವುದು. ಈ ಬಾರಿಯ ಆರಿಫ್ ರಾಜಾ ಸಂದರ್ಶನವನ್ನು ಓದಿಕೊಳ್ಳಲಿಕ್ಕೆ ಇಲ್ಲಿಗೆ ಭೇಟಿ ನೀಡಿ. ತಾಜ್ ಮಹಲ್ ಕಟ್ಟಬೇಕು, ಆದರೆ ಗೋರಿಯ ಮೇಲಲ್ಲ ಅನ್ನುವ ರಾಜಾರ ಮಾತುಗಳನ್ನು ಕೇಳಿ….

ಮತ್ತೆ ಸಿಗೋಣ.

ರಮೇಶ್ ಸೋಗೆಮನೆ- ಚಿತ್ರ, ಕಥೆ ಮತ್ತು ಕವಿತೆ

ಚಿಕ್ಕದಾಗಿ, ಅರ್ಥವತ್ತಾಗಿ, ನೇರವಾಗಿ ಹೇಳದೆಯೂ ಒಂದು ಸಂದೇಶವನ್ನಿಟ್ಟುಕೊಂಡು ಬರೆದ ಕಥೆಗಾರರ ಬಗ್ಗೆ ಹೇಳುವಾಗ ಮೊದಲಿಗೆ ನೆನಪಾಗೋದು ಸಾದತ್ ಹಸನ್ ಮಾಂಟೋ. ರಮೇಶ್ ಸೋಗೆಮನೆ ಕೂಡ ಅಂಥದೇ ಹಾದಿಯಲ್ಲಿದ್ದಾರೆ. ಈ ವರೆಗೆ ಅವರು ಕವಿತೆಗಳನ್ನು ಕೂಡ ಹಾಗೆಯೇ ಬರೆಯುತ್ತಾರೆ. ಚುಟುಕಾಗಿ, ಚಾಟಿಯಂತೆ. ಅವರು ಚಿತ್ರವನ್ನೂ ರಚಿಸುತ್ತಾರೆ. ಸಾಂಪ್ರದಾಯಿಕವಾಗಿ ಕಲಿಯದೆಯೇ ಚೆಂದವಾಗಿ ರಚಿಸುತ್ತಾರೆ ಅನ್ನುವುದು ಮತ್ತೊಂದು ಅಚ್ಚರಿ. ಹೊಸ ತಲೆಮಾರುವಿನ ಕೆಲವು ಲೇಖನಗಳಿಗೆ ಇವರ ಚಿತ್ರಗಳನ್ನು ಬಳಸಿಕೊಂಡಿರುವುದನ್ನು ಗಮನಿಸಿ. ಬರಹಕ್ಕೆ ಸ್ವಲ್ಪ ಸಮಯ ಎತ್ತಿಟ್ಟುಕೊಂಡರೆ, ಗುಟುಕು ಕಥೆಗಳನ್ನು ಕನ್ನಡದಲ್ಲಿ ಜನಪ್ರಿಯಗೊಳಿಸುವ ಎಲ್ಲ ಸಾಧ್ಯತೆಗಳೂ ಇವರಲ್ಲಿವೆ.

ಸಧ್ಯಕ್ಕೆ ಸೋಗೆಮನೆಯವರ ಚಿತ್ರ, ಎರಡು ಕಥೆ ಮತ್ತು ಕವಿತೆಗಳು ಇಲ್ಲಿವೆ…ಚಿಕ್ಕವಾದ್ದರಿಂದ, ಒಟ್ಟಿಗೇ…

ತೋಟ

ರೈತನೊಬ್ಬನಿಗೆ ತನ್ನ ತೋಟದಲ್ಲಿ ಒಂದೇ ರೀತಿಯ ಹೂ ಬಿಟ್ಟು ಬೇರೇನೂ ಬೆಳೆಯುವುದು ಇಷ್ಟವಿರಲಿಲ್ಲ. ಗೆಳೆಯರೆಲ್ಲ ತೋಟ ನೀಟಾಗಿರುವ ಬಗ್ಗೆ ಹೊಗಳಿದರು. ಹೂವಿನ ಸುಗ್ಗಿ ಬಂತು. ಆದರೆ ಆದದ್ದೇ ಬೇರೆ.ಆ ಹೂಗಳಿಗೆ ರಾತ್ರೋ ರಾತ್ರಿ ರೋಗ ತಗುಲಿತ್ತು.
ಇನ್ನೆಂದೂ ರೈತ ಒಂದೇ ರೀತಿಯ ಬೆಳೆ ಬೆಳೆಯಲಿಲ್ಲ.
( ಹೂವನ್ನು ಜನರೆಂದೂ, ತೋಟವನ್ನು ದೇಶವೆಂದು ಓದಿಕೊಳ್ಳಿ.)

~

ಅವನ ಕಥೆ

ದಖನ್ ದೇಶದಲ್ಲಿ ಬಹಳ ಹಿಂದೆ ನಡೆದ ಕಥೆ. ದರೋಡೆಕೋರನೊಬ್ಬನಿಗೆ ಹಾದಿಹೋಕರನ್ನು ದೋಚುವುದೇ ಕೆಲಸ. ತಮ್ಮಲ್ಲಿದ್ದ ಎಲ್ಲವನ್ನೂ ಅವರು ಕೊಡಬೇಕಿತ್ತು ಇಲ್ಲವೇ ಹೆಣವಾಗಬೇಕಿತ್ತು. ಒಮ್ಮೊಮ್ಮೆ ಇವರ ತಂಡ ಇಡೀ ಹಳ್ಳಿಯನ್ನೇ ದೋಚುತ್ತಿತ್ತು.
ಅಂಥ ಒಂದು ಹಳ್ಳಿಯಲ್ಲಿ ಒಬ್ಬಳು. ದರೋಡೆಕೋರ ಅವಳನ್ನು ಹೊತ್ತೊಯ್ದ. ತಣಿಯುವಷ್ಟು ಪ್ರೇಮಿಸಿದ. ಒಂದು ದಿನ ಅದೆಂಥದೋ ದೊಡ್ಡ ಕಾಯಿಲೆ ಬಡಿದು ಅವಳು ಸತ್ತುಹೋದಳು. ಅವನಿಗೆ ಹುಚ್ಚು ಹಿಡಿಯುವುದೊಂದು ಬಾಕಿ. ತಾನು ಬಚ್ಚಿಟ್ಟದ್ದನ್ನೆಲ್ಲ ದಾನ ಮಾಡಿದ. ಸುಮ್ಮನೆ ಉದ್ದಕ್ಕೆ ನಡೆಯುತ್ತ ಹೋದ. ಹಲವು ದರೋಡೆಗಳನ್ನು ತಡೆದ. ಕಂಡವರಿಗೆ ಗಂಜಿ ಬೇಯಿಸಿ ಕೊಟ್ಟ.
ಹಾದಿಯಲ್ಲಿ ನಡೆಯುತ್ತಿದ್ದವನು ಇದ್ದಕ್ಕಿದಂತೆ ಜನರ ಎದೆಯೊಳಗೆ ನಡೆಯತೊಡಗಿದ. ಶತಮಾನಗಳನ್ನು ದಾಟಿದ.

~

 

sOgemane

sOgemane

 

ಬೂಟುಗಳು

ಚಂದ ಇತಿಹಾಸವಿದೆ
ಬೂಟುಗಳಿಗೆ
ಹಾರಿದರೆ ಪುಷ್ಪಕ ವಿಮಾನ
ನಡೆದರೆ ಪಲ್ಲಕ್ಕಿ
ಕುಣಿದರೆ ನವರಂಗ
ಧಿಮಾಕಿಗೆ ದಿವಾನಖಾನೆ

ಬೂಟುಗಳಿಗೆ ನಟನೆ ಬರುತ್ತೆ
ಮಜಾ ಎಂದರೆ ಅವು
ಕತ್ತಲ ಬಳಿದು
ಮಿರ ಮಿರ ಮಿರುಗುವುದು
ಲೇಸಿನೊಂದಿಗೆ ಸೊಕ್ಕುವುದು

ಕೆಲವು ಹೋರಾಡಿ
ಕೂಗಾಡಿ ಸುಸ್ತಾಗಿ
ಸವೆದು ಹೋಗಿವೆ
ಮತ್ತಷ್ಟು ಛತ್ರಿ ಚಾಮರ ಬಯಸಿ
ಅಟ್ಟ ಏರುತ್ತಿವೆ

ಗುಲಾಮ ಬೂಟುಗಳ ಹಾಗಲ್ಲ
ಅವನ ಗುಲಾಬಿ
ಅವನೆದುರೇ ಹೊಸಕಿ ಹೋಗುತ್ತಿದೆ
ಬೂಟುಗಳಿಗೆ ತುಳಿತ ಸಣ್ಣ ಚಟವಷ್ಟೆ

~

ಆಕೆ

ಗುಂಬಜುಗಣ್ಣಿನ ಪ್ರಶಾಂತ ಮಸೀದಿ
ಮಿನಾರುಗಳ ಗೊಂಚಲು
ನಲುಮೆ ನಮಾಜು

ಹಸಿದ ಒಡಲಿಗೆ ಹುರಿದ ಕಬಾಬು
ಭಗ್ನ ಶರಾಬಿಗೇ ಹೊತ್ತಿದ ಜ್ವಾಲೆ
ಸುಡುವ ಜ್ವರ

ಬಡಿವ ತಮಟೆಗಳ ನಿನಾದ
ಝೇಂಕರಿಸುವ ಧಿಕ್ಕಾರ
ಎದೆಯಿಂದ ಹೊರ ತಗೆದ ಗುಂಡು

ಸದಾ ಸರಿವ ಮೈಲಿಗಲ್ಲು
ದಿಕ್ಕೆಡಿಸುವ ಕೈಮರ
ಪುರಾನಾ ನಗರಿಯ ಕೊನೆಯಿರದ ಬೀದಿ

‘ಅಹರ್ನಿಶಿ’ ಅಕ್ಷತಾ

ಈಕೆ ನಮ್ಮ ನೆರಕೆಯ ಹುಡುಗಿ. ಅಪ್ಪಟ ಮಲೆನಾಡಿನ ದಿಟ್ಟೆ. ಹಾಗೆಂದೇ ಪುಸ್ತಕ ಪ್ರಕಾಶನದಂತಹ ಕೆಲಸದಲ್ಲಿ ಕೈತೊಡಗಿಸಿ ಸಮರ್ಥವಾಗಿ ನಿಭಾಯಿಸ್ತಿದಾರೆ. ಅದಾಗಲೇ ಇಬ್ಬರು ಹಿರಿಯರ ಪುಸ್ತಕಗಳನ್ನೂ ಪ್ರಕಟಿಸಿದ್ದಾರೆ. ೨೦೦೭ನೇ ಸಾಲಿನ ಕನ್ನಡ ಪುಸ್ತಕ ಪ್ರಾಧಿಕಾರದ ಗೌರವಧನ ಪ್ರಶಸ್ತಿಪಡೆದು  ‘ರೆಕ್ಕೆಬಿಚ್ಚಿಆಕಾಶನೆಚ್ಚಿ’  ಕವನಸಂಕಲನ ಹೊರತಂದಿದಾರೆ. ಅದನ್ನು ಪ್ರಕಟಿಸಲಿಕ್ಕೆಂದು  ‘ಅಹರ್ನಿಶಿ’ಯನ್ನು ಹುಟ್ಟುಹಾಕಿದ ಅಕ್ಷತಾ ಅಲ್ಲಿಗೆ ಸುಮ್ಮನಾಗಲಿಲ್ಲ. ಮರುವರ್ಷದಲ್ಲೇ ಜಿ.ಎಚ್.ನಾಯಕರ ಮತ್ತೆಮತ್ತೆ ಪಂಪ ಕೃತಿಯನ್ನು ಹೊರತಂದರು. ಅನಂತರದ ಆರುತಿಂಗಳ ಅವಧಿಯಲ್ಲಿ ಪ್ರಕಟಿಸಿದ್ದು ಯು.ಆರ್.ಅನಂತಮೂರ್ತಿಯವರ ಮತ್ತೆಮತ್ತೆ ಬ್ರೆಕ್ಟ್ ಸಂಕಲನವನ್ನು. ಅವರು ಹೇಳಿಕೊಂಡಿರುವಂತೆ ಇದು  ‘ಮತ್ತೆಮತ್ತೆ ಸೀರೀಸ್ ನ ಎರಡನೆ ಕೃತಿ’.

ಅಕ್ಷತಾರ ಉತ್ಸಾಹ, ಅಕ್ಷರಪ್ರೀತಿಗಳು ಎಂದೆಂದಿಗೂ ಹೀಗೇ ಇರಲಿ ಮತ್ತು ಅವರೆಲ್ಲ ಪ್ರಯತ್ನಗಳಿಗೂ ಯಶ ದೊರೆಯಲಿ ಎಂಬ ಹಾರೈಕೆಗಳೊಂದಿಗೆ,

‘ರೆಕ್ಕೆಬಿಚ್ಚಿಆಕಾಶನೆಚ್ಚಿ’ಯ ಒಂದು ಕವಿತೆ, ನಮಗಾಗಿ…

sOgemane

sOgemane

ದಣಪೆ

ಬಿರಿದರೆ ಭೂಮಿ ಬಿರಿಯಲಿ

ಎಂದು ನಿಶ್ಚಯಿಸಿದ ನೀವೆ

ದಣಪೆ ದಾಟುವ ಹಂಬಲ

ತೋರದೆ ಹೋದಿರಿ

ಧೈರ್ಯವಿತ್ತು ಆಳದ ವಿಷಾದ

ಜೊತೆಗೆ ಆಕ್ರೋಶ

ಇಷ್ಟೆಲ್ಲ ತನ್ನೊಳಗೆ

ಮಡುಗಟ್ಟಿರುವ ನೆಲೆಯಲ್ಲಿ

ದಾಟಿದರೂ ಸಾರ್ಥಕ ಸಂಭ್ರಮವಿಲ್ಲ

ಎಂದು ಜಡವಾದಿರೇನೋ

ಕಣ್ಣಿ ಬಿಗಿದವರ ಮನಸುಗಳೆಲ್ಲ ಒಂದೆ

ಸಾಗರದ ಅಲೆಗೆ ಸೀಮಾರೇಖೆ

ಎಳೆವ ಭ್ರಮೆ ಎಂದು ತಳ್ಳಿಹಾಕುವಂತಿಲ್ಲ

ಉಕ್ಕುವ ಜೀವ ಚೈತನ್ಯ ಸೆಲೆಯು ಹಿಡಿದು

ಮುಷ್ಟಿಯಲ್ಲಿ ಅವಿಸಿದ್ದಕ್ಕೆ

ಗೋರಿ ತೋಡಿ ಪುರಾವೆ ಹುಡುಕಬೇಕಿಲ್ಲ

ಜೀವಂತ ಸಾಕ್ಷಿಗಳು ಎದುರಿಗಿವೆ.

ಕಣ್ಣಿ ಬಿಗಿಸಿಕೊಂಡವರ ಮನಃಸ್ಥಿತಿಯೇ

ಭಿನ್ನ ಕಣ್ಣಿ ಕಣ್ಣೆದುರು ಸುಳಿದಾಗಲೇ

ದೂರದಲ್ಲೆಲ್ಲೊ ಬಯಲು ಬೆಳಗುವುದು

ಆಳದಲ್ಲೆಲ್ಲೊ ಬತ್ತಲಾಗುವ ಸತ್ಯ ಮಿಂಚುವುದು

ಅಕ್ಕ ಬಯಲು ಕಂಡು ಬತ್ತಲಾಗುವುದು

ಸುಲಭವೇನೆ?

ಹೌದು ನೀವು ದಣಪೆ ದಾಟಲಿಲ್ಲ

ಎಂದು ನಾನಾದರೂ ಹೇಗೆ

ನಿರ್ಧರಿಸಿಯೇನು?

ಹೊರಜಗದ ತಾಳಕ್ಕೆ

ಲಯಬದ್ಧವಾಗಿರುವ

ನಿಮ್ಮ ಹೆಜ್ಜೆ ಗುರುತುಗಳ

ಎಣಿಕೆಯಲ್ಲಿಯೇ ಮೈಮರೆತು

ಹಾಯಬೇಡವೇ ಒಮ್ಮೆಯೂ

ಮನದೊಳಗಣ ರೂಪಕದ ಜಗಕೆ

ದಾಟಿದ ಮನಸ ಹಿಂದೆ

ಓಡಲು ದೇಹಕ್ಕೆ ಬೇಕಾಗಬಹುದೆ

ಅರೆಗಳಿಗೆ ಅಥವಾ ಅರೆ ಶತಮಾನ

ಹಾಗೊಮ್ಮೆ ಭೂಮಿ ಬಿರಿದರೂ

ಅಲ್ಲಿಯೇ ಅದೆಷ್ಟೊ ಕಾಲದಿಂದ ಇದ್ದಾಳಲ್ಲ

ಜಾನಕಿ ಕಾಯುತ್ತಾಳೆ ಎಂದಲ್ಲ

ದಾಟಿದ ನಂತರದ ಬದುಕ ಕಲಿಸುತ್ತಾಳೆ.

~ ಅಕ್ಷತಾ