ಶಂಭೂಕನ ಮಕ್ಕಳು ಹಾಗೂ ಸೀತೆಯ ಹೆಣ್ಣುಗಳು ಕೈಜೋಡಿಸಿ ನಡೆದರೆ….

“ಅಂಕ ವಾಣಿ” ಸಾಂಸ್ಕೃತಿಕ ಪತ್ರಿಕೆ ಜುಲೈ ತಿಂಗಳ ಅಂಬೇಡ್ಕರ್‍ ವಿಶೇಷಾಂಕದಲ್ಲಿ ಪ್ರಕಟಿತ ಲೇಖನ. ~ ಋತಾ 
ಶಂಭೂಕರು ಮತ್ತು ಸೀತೆಯರನ್ನು
 ಗೋಳಾಡಿಸುವ ನೆಲಕ್ಕೆ
ನೆಮ್ಮದಿ ಮರೀಚಿಕೆ.
ರಾಮನಿಗಾಗಿ ಇಟ್ಟಿಗೆ ಹೊರುವವರಿಗೆ ತಾವು
ದೇಶದ ಗೋರಿ ಕಟ್ಟುವ ತಯಾರಿಯಲ್ಲಿರೋದು ಗೊತ್ತಿಲ್ಲವಾ?
– ಪ್ರಶ್ನೆ ಕಾಡುತ್ತದೆ. ಸಂಖ್ಯೆಯಲ್ಲಿ ಬಹಳವಿಲ್ಲದ ಒಂದು ಸಮುದಾಯ ಹೆಣ್ಣನ್ನೂ ಹಿಂದುಳಿದವರನ್ನೂ (ಹಿಂದುಳಿಸಲಾಗಿದೆ ಇವರನ್ನು) ಅಷ್ಟು ಸುಲಭವಾಗಿ ಶೋಷಿಸಿಕೊಂಡು ಬರಲು ಹೇಗೆ ಸಾಧ್ಯವಾಗಿದೆ?
ಸಿರಾಜುದ್ದೌಲನನ್ನುರಾಬರ್ಟ್‌ ಕ್ಲೈವನ ಚಿಕ್ಕ ತುಕಡಿ ಸೋಲಿಸುತ್ತದೆ. ಅನಂತರದಲ್ಲಿ ಬಂಗಾಳದ ಮುಖ್ಯ ಬೀದಿಯಲ್ಲಿ ಪಥ ಸಂಚಲನ ಮಾಡುತ್ತದೆ. ಜನರೆಲ್ಲ ಬಾಗಿಲ ಹಿಂದೆ ಅವಿತು ನೋಡುತ್ತಾರೆ. ಯಾರೂ ಬೀದಿಗೆ ಇಳಿಯುವ ಸಾಹಸ ಮಾಡುವುದಿಲ್ಲ. ಸ್ವತಃ ರಾಬರ್ಟ್‌ ಕ್ಲೈವನಿಗೆ ಇದು ಅಚ್ಚರಿ. ತನ್ನ ಗೆಲುವನ್ನು ಆತ ಆತನಕ ನಂಬಿಕೊಂಡಿರಲಿಲ್ಲ. ಈಗ ಖಾತ್ರಿಯಾಗುತ್ತದೆ. ಕ್ಲೈವ್‌ ತನ್ನ ಡೈರಿಯಲ್ಲಿ ಬರೆಯುತ್ತಾನೆ, “ಈ ಭಾರತದ ಜನ ಎಂಥವರಿದ್ದಾರೆ! ನಾವು ಎಲ್ಲಿಂದಲೋ ಬಂದ ಹಿಡಿಯಷ್ಟು ಸೈನಿಕರು ಅಷ್ಟು ದೊಡ್ಡ ಸಾಮ್ರಾಜ್ಯವನ್ನು ಸೋಲಿಸಿದೆವು. ನಾವು ಪಥ ಸಂಚಲನ ಮಾಡುವಾಗ ಅಲ್ಲಿನ ಮನೆಗಳಿಂದ ಒಬ್ಬೊಬ್ಬರು ಒಂದೊಂದು ಕಲ್ಲು ಬೀಸಿದರೂ ಸಾಕಿತ್ತು, ನಾವು ನಿರ್ನಾಮವಾಗುತ್ತಿದ್ದೆವು. ಈ ಜನ ಅದೆಷ್ಟು ಮೂಢರಿದ್ದಾರೆ!”  ವಾಸ್ತವದಲ್ಲಿ ಆ ಯುರೋಪಿಯನ್ನರೇನೂ ಬುದ್ಧಿವಂತರಿರಲಿಲ್ಲ. ಶೂರರೂ ಆಗಿರಲಿಲ್ಲ. ಅವರಿಗಿದ್ದುದು ಮೈಬಣ್ಣ ಮತ್ತು ಕುಟಿಲ ಬುದ್ಧಿಗಳಷ್ಟೆ. ಅವುಗಳನ್ನೆ ಮುಂದಿಟ್ಟುಕೊಂಡು ಜಗತ್ತಿನ ಇತರ ಭಾಗಗಳ ಜನರಲ್ಲಿ ಕೀಳರಿಮೆ ಮೂಡುವಂತೆ ಮಾಡಿ ಬಾವುಟ ನೆಟ್ಟರು.
ಆದರೆ ಈ ಭಾರತದ ಜನ ಕ್ಲೈವ್ ಅಂದುಕೊಂಡಂತೆ ಮೂಢರೇನೂ ಇರಲಿಲ್ಲ. ಅವರು ತಮ್ಮೊಳಗಲ್ಲಿ ಅವನು ಮಾಡಿದ್ದ ಕೆಲಸವನ್ನೇ ಮಾಡುತ್ತಿದ್ದರು. ತಮ್ಮ ಕೆಲವು ಗುಣಲಕ್ಷಣಗಳನ್ನೆ ಶ್ರೇಷ್ಠವೆಂಬಂತೆ ಬಿಂಬಿಸಿಕೊಂಡು ‘ಮೇಲ್ವರ್ಗ’ ಎಂಬ ಪಂಗಡವನ್ನು ಸೃಷ್ಟಿಸಿಕೊಂಡಿದ್ದರು. ಅವರ ಕುಟಿಲತೆಗೆ ಪಕ್ಕಾದ ಮುಗ್ಧ, ದುಡಿಯುವ ಸಮುದಾಯವು ತಮ್ಮನ್ನು ‘ಕೆಳ ವರ್ಗ’ ಎಂದು ಒಪ್ಪಿಕೊಂಡು ಬಾಗಿಲಾಚೆ ನಿಂತಿದ್ದರು. ಪುರುಷ ಮನಸ್ಥಿತಿ ಹೆಣ್ಣು ಮಕ್ಕಳ ಮೇಲೆ ಎಸಗಿದ್ದೂ ಇದೇ ವಂಚನೆಯನ್ನೇ. ಹೀಗೆ ಕೀಳರಿಮೆಯನ್ನು ಹೇರಿಸಿಕೊಂಡ ದಲಿತರು ಮತ್ತು ಹೆಣ್ಣು ಮಕ್ಕಳು ಈ ಹುನ್ನಾರವನ್ನೀಗ ಅರಿತಿದ್ದಾರೆ. ಕೊಂಚ ಕೊಂಚವಾಗಿ ಅದರಿಂದ ಹೊರಬಂದು ಕೈಯಲ್ಲಿ ಕಲ್ಲು ಹಿಡಿಯುವ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
~
ಹೆಣ್ಣುಮಕ್ಕಳು ಅದು ಹೇಗೆ ದಲಿತರು? ಗೆಳೆಯರು ಕೇಳುತ್ತಾರೆ. ಮುಟ್ಟಾಗಿ ಕುಳಿತ ಮೂರು ದಿನವನ್ನು ಇಂದಿಗೂ ‘ಹೊಲೆ’ ಎಂದು ಕರೆಯುವವರು ಇಲ್ಲವೆ? ಅದಿರಲಿ, ನನ್ನ ಪ್ರಕಾರ ಯಾರ ಮೇಲೆ ಸಹಜ ಬದುಕಿಗೆ ನಿಷೇಧ ಹೇರಲಾಗಿರುತ್ತದೆಯೋ ಅವರು ದಲಿತರು. ಕೆಳಗೆ ತಳ್ಳಲ್ಪಟ್ಟ ಸಮುದಾಯದಲ್ಲಿ ಹುಟ್ಟಿದ್ದಾರೆ ಅನ್ನುವ ಕಾರಣದಿಂದದಲೇ ಒಂದು ವರ್ಗ ಶೋಷಣೆಗೆ ಒಳಗಾಗುತ್ತದೆಯಲ್ಲವೆ? ಹಾಗೆಯೇ ಹೆಣ್ಣುಗಳು ಕೂಡ ಅವರು ಹೆಣ್ಣಾಗಿ ಹುಟ್ಟಿದ್ದಾರೆ ಅನ್ನುವ ಕಾರಣಕ್ಕೆ ಶೋಷಣೆಗೆ ಒಳಗಾಗುತ್ತಾರೆ. ಸ್ವತಃ ನಾನೂ ಇದನ್ನು ಅನುಭವಿಸಿದ್ದೇನೆ. ನನ್ನ ದಲಿತ ಗೆಳೆಯರು ಅವರು ಮನೆ ಹುಡುಕಲು ಪಡುವ ಪಾಡನ್ನು ಹೇಳಿಕೊಳ್ಳುತ್ತಾರೆ. ಹೆಣ್ಣಾಗಿ ಸಿಂಗಲ್ ಇರುವ ಕಾರಣಕ್ಕೇ ಮನೆ ನಿರಾಕರಿಸಲ್ಪಟ್ಟ ಅನುಭವ ನನ್ನದೂ ಆಗಿದ್ದು, ಆ ಗೆಳೆಯರು ಪಟ್ಟಿರಬಹುದಾದ ನೋವು ನನ್ನನ್ನೂ ತಾಕುತ್ತದೆ. ಇಲ್ಲಿ ನಾವಿಬ್ಬರೂ ಒಂದೇ ಅನ್ನಿಸಿಬಿಡುತ್ತದೆ. . ಇದೊಂದು ತೀರ ಚಿಕ್ಕ, ಲಘುವಾದ ಉದಾಹರಣೆಯಷ್ಟೇ
ಹೇಗೆ ಈ ನನ್ನ ಸಮಾನ ಸಹ ಸಮುದಾಯಕ್ಕೆ ಅಪಚಾರವಾದರೆ, ನೋವಾದರೆ, ಅವಮಾನವಾದರೆ, ಜಾತಿ ಹೆಸರಲ್ಲಿ ದೂಷಣೆಯಾದರೆ ಅವರು ನ್ಯಾಯಾಲಯದಲ್ಲಿ ಪ್ರಶ್ನಿಸಬಹುದೋ ಹಾಗೆಯೇ ಹೆಣ್ಣೆಂಬ ಕಾರಣಕ್ಕೆ ನಡೆಯುವ ಅಪಚಾರ, ದೂಷಣೆಗಳನ್ನು ಪ್ರಶ್ನಿಸಲೂ ಅಷ್ಟೇ ಕಠಿಣವಾದ ಕಾನೂನು ಬರಬೇಕೆಂದು ಅನ್ನಿಸುತ್ತದೆ.
ಹೀಗೆ ನಮಗೆ ಅನ್ಯಾಯವಾಗುತ್ತಿದೆಯೆಂದೂ ಅದನ್ನು ಪ್ರಶ್ನಿಸಲು, ಸರಿ ಪಡಿಸಲು ಕಾನೂನು ಬರಬೇಕೆಂದೂ ಅಂದುಕೊಳಳುವಷ್ಟು ನಮ್ಮೊಳಗೆ ಸಾಮರ್ಥ್ಯವನ್ನು ತುಂಬಿದವರು ಯಾರು? ಅನ್ಯಾಯದ ಅರಿವು ಮತ್ತು ಬಂಡಾಯ ದೌರ್ಜನ್ಯ ಹುಟ್ಟಿಕೊಂಡ ಕಾಲದಿಂದಲೂ ಪ್ರಮಾಣವ್ಯತ್ಯಯದ ನಡುವೆಯೂ ಚಾಲ್ತಿಯಲ್ಲಿದೆ. ಆದರೆ ಕಾನೂನಿನ ಮಾತು ಕೇಳಿಬರುತ್ತಿದ್ದು ಬಹಳ ಬಹಳ ಕಡಿಮೆ. ದಲಿತರಲ್ಲಾಗಲೀ ಹೆಣ್ಣುಗಳಲ್ಲಾಗಲೀ  ಸಾಮಾಜಿಕ ಹಕ್ಕು, ಆರ್ಥಿಕ ಹಕ್ಕು, ಆಸ್ತಿ ಹಕ್ಕು ಇತ್ಯಾದಿಗಳ ಚಿಂತನೆ ಮೂಡಿ ವ್ಯಾಪಕಗೊಂಡಿದ್ದು ಅಂಬೇಡ್ಕರರಿಂದಲೇ ಅನ್ನುವುದು ಬಹುಶಃ ಯಾರೂ ಅಲ್ಲಗಳೆಯಲಾರದ ಮಾತು. ಹೆಣ್ಣು ಮತ್ತು ತಳಸಮುದಾಯಗಳ ಕುರಿತು ಆತ್ಯಂತಿಕವಾಗಿ ಚಿಂತಿಸಿ ಅದಕ್ಕೊಂದು ಸಂವಿಧಾನಾತ್ಮಕ ಕಾನೂನು ಚೌಕಟ್ಟು ಒದಗಿಸಿಕೊಟ್ಟವರು ಅಂಬೇಡ್ಕರ್. ಭಾರತ ಬ್ರಿಟಿಷ್ ಆಡಳಿತದಿಂದ ಮುಕ್ತಗೊಳ್ಳುವ ಸಂದರ್ಭದಲ್ಲಿ ಅಂಬೇಡ್ಕರ್‌ ಇಲ್ಲದಿದ್ದರೆ ಬಹುಶಃ ಈ ದೇಶದ ತಳ ಸಮುದಾಯಗಳು ಹಾಗೂ ಮಹಿಳೆಯರಿಗೆ ಸ್ವಾತಂತ್ರ‍್ಯ ದೊರೆಯುವುದು ಇನ್ನೂ ಒಂದು ಶತಮಾನದಷ್ಟು ಕಾಲ ವಿಳಂಬವಾಗುತ್ತಿತ್ತೇನೋ. ಇಷ್ಟೆಲ್ಲ ಕಾನೂನು, ಹಕ್ಕುಗಳ ನಡುವೆಯೂ ಈ ಎರಡು ವರ್ಗ ಶೋಷಣೆಯಲ್ಲಿ ನರಳುತ್ತಿವೆ. ಇಂದಿಗೂ ಕಾಪ್‌ ಪಂಚಾಯ್ತಿಗಳಲ್ಲಿ ದಲಿತರು ಮತ್ತು ಹೆಣ್ಣು ಮಕ್ಕಳಿಗೆ ವಿಧಿಸಲಾಗುತ್ತಿರುವ ಶಿಕ್ಷೆಗಳ ಕ್ರೌರ್ಯ ನೆನೆದರೆ ಆತಂಕವಾಗುತ್ತದೆ. ಅಕಸ್ಮಾತ್‌ ಅಂಬೇಡ್ಕರ್‌ ಈ ಎರಡು ಸಮುದಾಯಗಳಿಗೆ ರಕ್ಷಣೆ ಒದಗಿಸುವ, ಬದುಕುವ ಹಕ್ಕು ನೀಡುವ ಕಾನೂನುಗಳನ್ನು ಅಳವಡಿಸದೆ ಹೋಗಿದ್ದಿದ್ದರೆ, ಈ ದೇಶದ ನೆಲದ ತುಂಬೆಲ್ಲ ಕಾಪ್‌ ಪಂಚಾಯ್ತಿಗಳ ಅಟ್ಟಹಾಸವೇ ಇರುತ್ತಿತ್ತಲ್ಲವೆ?
~
ನನಗೆ ಅಂಬೇಡ್ಕರ್‌ ಮೊದಲ ಬಾರಿಗೆ ಪರಿಚಿತರಾಗಿದ್ದು ಯಾವಾಗ ಮತ್ತು ಹೇಗೆ? ನಾನು ಯೋಚಿಸುತ್ತೇನೆ. ನಟರಾಜ್‌ ಹುಳಿಯಾರ್‌ ಕಥೆಯೊಂದರಲ್ಲಿ ಬರೆಯುವ ಹಾಗೆ, ನಾನೂ ಮೊದಲ ಸಲ ಬಿಗು ನಗುವಿನ, ಮೇಕಪ್ ಮುಖದ, ನೇರ ಕುತ್ತಿಗೆಯ ಅಂಬೇಡ್ಕರರನ್ನು ಚೌಕಟ್ಟಿನೊಳಗೆ ನೋಡಿದ್ದೆ. ಬಹುಶಃ ಅಪ್ಪನ ಆಫೀಸಿನಲ್ಲಿ. ಆಮೇಲೆ ಸ್ಟ್ಯಾಚು ಆಟ ಆಡುವಾಗೆಲ್ಲ ಕೈಬೆರಳೆತ್ತಿಕೊಂಡುನಿಲ್ಲುತ್ತಿದ್ದ ತಮ್ಮನಿಗೆ  ‘ಅಂಬೇಡ್ಕರ್‌’ ಪೋಸ್‌’ ಅಂತ ರೇಗಿಸುತ್ತಿದ್ದೆವು. ಬಾಲ್ಯ ಕಾಲದ ಅಂಬೇಡ್ಕರ್‌ ಪರಿಚಯ ಇವಿಷ್ಟೇ. ಜೊತೆಗೆ ಪ್ರಾಥಮಿಕ ತರಗತಿಗಳಲ್ಲಿ ಕಲಿಯುತ್ತಿದ್ದ “ಸಂವಿಧಾನದ ಶಿಲ್ಪಿ” ಪಾಠಗಳು ಅವರೊಬ್ಬ ದೊಡ್ಡ ವ್ಯಕ್ತಿ ಅನ್ನುವಷ್ಟನ್ನು ತಿಳಿಸಿದ್ದವು.  ಆ ದಿನಗಳಲ್ಲಿ ಜಾತೀಯ ಮೇಲು ಕೀಳುಗಳು ಗೊತ್ತಿರದೆ ಇದ್ದುದರಿಂದಲೂ ನಾವು ಹೊರ ಜಗತ್ತಿಗೆ ಅಷ್ಟಾಗಿ ತೆರೆದುಕೊಂಡಿರದಿದ್ದರಿಂದಲೂ ಹರಿಜನ, ಹಿಂದುಳಿದವರು – ಇತ್ಯಾದಿಗಳು ಕೇವಲ ಉರು ಹೊಡೆಯುವ ಪದಗಳಷ್ಟೆ ಆಗಿದ್ದವು. ನನಗೆ ನನ್ನ ಯೌವನದ ದಿನಗಳಲ್ಲಿ ಮೊದಲ ಸಲಕ್ಕೆ ಅಂಬೇಡ್ಕರರನ್ನು ಬೇರೊಂದು ದೃಷ್ಟಿಕೋನದಲ್ಲಿ ಪರಿಚಯಿಸಿದ್ದು ನನ್ನ ಅಮ್ಮನೆಂಬ ಅದ್ಭುತ ಹೆಣ್ಣು.
ಬಹುಶಃ ಅದು ಹೆಣ್ಣು ಮಕ್ಕಳಿಗೆ ಆಸ್ತಿಯಲ್ಲಿ ಇಂತಿಷ್ಟು ಪಾಲು ಸಿಗಬೇಕೆಂಬ ಕಾನೂನು ಅಧಿಕೃತಗೊಂಡ ಕಾಲಮಾನ. ಸದಾ ಸೊಂಟಕ್ಕೆ ಸೆರಗು ಸಿಕ್ಕಿಸಿಕೊಂಡೇ ಇರುತ್ತಿದ್ದ ನನ್ನಮ್ಮ ಸಂಸತ್ತಿನಿಂದ ಗ್ರಾಮ ಪಂಚಾಯ್ತಿವರೆಗೆ ನೂರಾ ಒಂದು ಮಾತಾಡಿದ್ದಳು. ಆವರೆಗೆ ಅಂಬೇಡ್ಕರ್‌ ಬರೆದ ಸಂವಿಧಾನ ಪುಸ್ತಕ ರಾಜಕಾರಣಿಗಳು ಓದಿಕೊಂಡು ರಾಜ್ಯಭಾರ ಮಾಡಲಿಕ್ಕೆ ಅಂದುಕೊಂಡಿದ್ದ ನಾನು ಮೊಟ್ಟಮೊದಲ ಬಾರಿಗೆ ಕಾನೂನು, ಹಕ್ಕು ಇತ್ಯಾದಿ ಪದಗಳನ್ನು ಜನಸಾಮಾನ್ಯಳ ಬಾಯಲ್ಲಿ ಕೇಳುತ್ತಿದ್ದೆ. ಜೊತೆಗೆ ಅಮ್ಮ ‘ಆ ಪುಣ್ಯಾತ್ಮ ಮಾಡಿದ್ದಕ್ಕೆ ಸರಿಹೋಯ್ತು, ಅದನ್ನೂ ಬ್ರಾಮಣ್ರ ಕೈಗೆ ಕೊಟ್ಟಿದ್ದಿದ್ರೆ ಮುಂಡಾ ಮೋಚ್ತಿದ್ರು’ ಅಂದಳು. ಯಾವುದು, ಎಲ್ಲಿಗೆ, ಹೇಗೆ ಲಿಂಕ್ ಆಗಿದೆ ಅನ್ನುವುದೊಂದೂ ಗೊತ್ತಾಗದೆ, ಆಕೆ ದೇವಸ್ಥಾನದಲ್ಲಿ ಪೂಜೆ ಮಾಡುವ ಸಮುದಾಯವನ್ನು ಬೈತಿದ್ದಾಳೆ ಅನ್ನುವುದೊಂದು ಗೊತ್ತಾಗಿತ್ತು. ನನ್ನ ಆ ದಿನಗಳಲ್ಲಿ ಬ್ರಾಹ್ಮಣರು ಅಂದರೆ ಪೂಜೆ ಮಾಡುವವರು ಅಂತಷ್ಟೆ ನನ್ನ ತಿಳಿವಳಿಕೆ ಇದ್ದುದು. ಅಮ್ಮ ಮತ್ತೂ ಅನ್ನುತ್ತಿದ್ದಳು…. “ಇಲ್ಲೂ ಬುದ್ಧಿ ಬಿಡೋದಿಲ್ಲ ನೋಡು! ಆ ಮನುಷ್ಯ ಸಹಜವಾಗಿ ಬುದ್ಧಿವಂತ ಇರಬಾರದಾ? ಅದಕ್ಕೂ ಯಾರೋ ಬ್ರಾಮಣ ಮೇಷ್ಟರನ್ನ ತಳಕು ಹಾಕ್ತಾರೆ. ಅವ್ರು ಸಹಾಯ ಮಾಡಿದ್ದಿರಬಹುದು ಪುಣ್ಯಾತ್ಮರು. ಇವರಲ್ಲಿ ಯೋಗ್ಯತೆ ಇದ್ದುದಕ್ಕೆ ತಾನೆ ಬೆಳೆದಿದ್ದು? ಹೆಂಗಸ್ರಿಗೆ, ಹೊಲೇರಿಗೆ ಅವರ ಬುದ್ಧಿವಂತಿಕೇಲಿ ಬೆಳೆಯುವ ಯೋಗ್ಯತೆಯೇ ಇಲ್ಲ ಅಂದುಕೊಂಡುಬಿಟ್ಟಿದಾರೆ”.
ಅಮ್ಮ ಮಾತಿನ ಓಘದಲ್ಲಿ ಹೇಳಿದ ಸತ್ಯ ಮತ್ತು ಅವಳ ಸಾತ್ತ್ವಿಕ ಆಕ್ರೋಶ ನನ್ನನ್ನು ಪುರುಷ ಹಾಗೂ ಪುರೋಹಿತಷಾಹಿಯ ಪ್ರತಿ ನಡೆಯನ್ನೂ ಅನುಮಾನದಿಂದ ನೋಡಲು ಪ್ರೇರೇಪಸಿದವು. ಅಲ್ಲಿಂದ ಮುಂದೆ ನನ್ನ ಮನಸ್ಸಿನಲ್ಲಿ ಅಂಬೇಡ್ಕರ್‌ ಒಬ್ಬ ಶುದ್ಧ ಮನುಷ್ಯ ಸಂವೇದನೆಯ ಸ್ವಾಭಿಮಾನಿ ಜ್ಞಾನಿಯಾಗಿ ರೂಪುಗೊಳ್ಳತೊಡಗಿದರು. ಅವರು ಒಂದು ಸುಪ್ರಸಿದ್ಧ ಪ್ರತಿಮೆಗಿಂತಲೂ ಸಂವಿಧಾನ ಶಿಲ್ಪಿ ಅನ್ನುವುದಕ್ಕಿಂತಲೂ ಬೇರೆಯಾಗಿ, ರೂಪವನ್ನು ಮೀರಿದ ವಿಶಿಷ್ಟ ದನಿಯಾಗಿ ಕೇಳಿಸತೊಡಗಿದರು. ಅಂಬೇಡ್ಕರ್‌ ಅವರನ್ನು ನಾನು ಓದಿರುವುದು, ಅವರ ಬದುಕನ್ನು ತಿಳಿದಿರುವುದು ಅತ್ಯಂತ ಕಡಿಮೆ. ಆದರೆ ಅವರ ಸತ್ವ ಮತ್ತು ಬುದ್ಧ ದಾರಿ ತುಳಿದ ಮಾನವೀಯ ಸಂವೇದನೆ ನನ್ನಂಥ ನೂರಾರು ಹೆಣ್ಣುಗಳಲ್ಲಿ ಆತ್ಮವಿಶ್ವಾಸ ತುಂಬಿದೆ ಎಂದು ವಿನೀತಳಾಗಿ ಹೇಳಬಲ್ಲೆ. ಇಂದು ನನ್ನೊಳಗೆ ಇರುವುದು ಪ್ರತ್ಯೇಕವಾಗಿ ನನ್ನ ಅರಿವಿನ ಅಂಬೇಡ್ಕರ್. ನನ್ನೊಳಗಿನ ಈತ ಒಬ್ಬ ರಾಜನೀತಿಜ್ಞನಿಗಿಂತ, ಹೋರಾಟಗಾರನಿಗಿಂತ ಹೆಚ್ಚಾಗಿ ಸ್ತ್ರೀ ಸಂವೇದನೆಯ ಬುದ್ಧಾನುಯಾಯಿ.
~
ಮೊನ್ನೆ ಒಂದು ಚರ್ಚೆ ಏರ್ಪಟ್ಟಿತು. ಯಾಕೆ ಎಲ್ಲ ಬಂಡಾಯ ಪದ್ಯಗಳಲ್ಲೂ ರಾಮನನ್ನು ಬೈಯುತ್ತೀರಿ? ಅಂತ ಕೇಳುತ್ತಿದ್ದರು. ಎಲ್ಲಿಯವರೆಗೆ ರಾಮನನ್ನು ಭಾರತೀಯ ಸಂಸ್ಕೃತಿಯ ಐಕಾನ್ ಆಗಿ ನೋಡಲಾಗುತ್ತದೆಯೋ ಹಾಗೂ ಎಲ್ಲಿಯವರೆಗೆ ರಾಮನ ಹೆಸರು ಹೇಳಿಕೊಂಡು ಶೋಷಣೆ ಮಾಡಲಾಗುತ್ತದೆಯೋ, ಎಲ್ಲಿಯವರೆಗೆ ಆ ಪಾತ್ರವನ್ನು ಒಂದು ಆದರ್ಶವೆಂಬಂತೆ ಬಿಂಬಿಸಲಾಗುತ್ತದೆಯೋ ಅಲ್ಲಿಯವರೆಗೆ ರಾಮನನ್ನು ಪ್ರತಿಭಟಿಸುವುದು ಸಹಜ ಮತ್ತು ಅನಿವಾರ್ಯ. ಕ್ಷಾತ್ರ ಹಾಗೂ ಪುರುಷ ಮೇಲರಿಮೆಯ ರಾಮ ಹೆಣ್ಣಾದ ಸೀತೆಯನ್ನು ಕಾಡಿಗಟ್ಟುತ್ತಾನೆ. ಇದಕ್ಕೆ ಅವನು ಕೊಡುವ ಹೆಸರು ಪ್ರಜಾರಂಜನೆ. ಪ್ರಜಾರಂಜಕನೆಂದು ಹೆಸರು ಪಡೆದ ಈ ಮಹಾನುಭಾವ ಅವರನ್ನು ‘ರಂಜಿಸು’ವುದಕ್ಕೋಸ್ಕರ ಮಡದಿಯನ್ನು ಕಾಡುಪಾಲು ಮಾಡುತ್ತಾನೆ. ತನ್ನ ಪ್ರತಿಷ್ಠೆಗೆ ಸುಲಭದ ತುತ್ತಾಗಬೇಕಾದ ದಾಸಿ ಆಕೆ ಅನ್ನುವ ಮನೋಭಾವ ಅಲ್ಲಿ ಕೆಲಸ ಮಾಡುತ್ತದೆ. ಹಾಗೆಯೇ ಒಬ್ಬ ಬ್ರಾಹ್ಮಣನ ಮಗ ಅಕಾಲದಲ್ಲಿ ಸತ್ತರೆ ಅದಕ್ಕೆ ಶೂದ್ರ ತಪಸ್ವಿಯೊಬ್ಬನನ್ನು ಹೊಣೆಯಾಗಿಸಲಾಗುತ್ತದೆ. ಮತ್ತೊಮ್ಮೆ ಆತ ತನ್ನ ಪ್ರತಿಷ್ಠಗಾಗಿ ಶಂಭೂಕನ ಬಲಿ ತೆಗೆದುಕೊಳ್ಳುತ್ತಾನೆ. ಹೆಣ್ಣು ಮತ್ತು ಹಿಂದುಳಿದವರನ್ನು ರಾಮ ನಡೆಸಿಕೊಂಡ ಬಗೆ ನಮ್ಮ ಸೋ ಕಾಲ್ಡ್‌ ಸಂಸ್ಕೃತಿಗೆ ಹಿಡಿದ ಕನ್ನಡಿಯಾಗಿದೆ. ಹೀಗಿರುವಾಗ ಪ್ರತಿಭಟನೆ ಇಂದು ಹಬ್ಬಿರುವ ವಿಷವೃಕ್ಷದ ಮೂಲ ಬೀಜದ ವಿರುದ್ಧವೇ ಇರಬೇಕಾದುದು ಅಗತ್ಯವಲ್ಲವೆ?
ಈ ಪ್ರಶ್ನೆಗಳನ್ನು ಎತ್ತಲು ಮತ್ತು ಚರ್ಚಿಸಲು ನಮ್ಮಲ್ಲಿಂದು ದನಿಯಿದೆ. ಸಾಂವಿಧಾನಿಕ ಹಕ್ಕು ಕೊಡಲಾಗಿದೆ. ಅದರ ಬಳಕೆಯಾಗಬೇಕು. ಬಾಬಾ ನಮಗೆ ಹೋರಾಟಕ್ಕೊಂದು ಸರ್ವಸಮ್ಮತ ದಾರಿ ಹಾಕಿಕೊಟ್ಟಿದ್ದಾರೆ. ಆ ದಾರಿಯಲ್ಲಿ ನಡೆಯುತ್ತ ಶಂಭೂಕನ ಮಕ್ಕಳು ಹಾಗೂ ಸೀತೆಯ ಹೆಣ್ಣುಗಳು ಕೈಜೋಡಿಸಿದರೆ, ಹಿಡಿಯಷ್ಟಿರುವ ಮೇಲರಿಮೆಯ ಸಮುದಾಯದ ಮೇಲಾಟ ಕೊನೆಗೊಳ್ಳುವ ದಿನ ದೂರವೇನಿಲ್ಲ ಅನ್ನಿಸುತ್ತದೆ.