ಕುರಿ ಕಾಯೊ ರಂಗನ ಕತೆ~ 2

ಟಿ.ಎಸ್.ಗೊರವರ ಅನುಭವಗಳಿಂದ ಗಟ್ಟಿಗೊಂಡ ಕಥೆಗಾರ. ಸಾಮಾನ್ಯ ಜನಜೀವನ ಹಾಗೂ ಹಾಗೂ ಗ್ರಾಮೀಣ ಹಿನ್ನೆಲೆಯ ಕಥೆಗಳನ್ನು ಇವರು ಮನಮುಟ್ಟುವ ಹಾಗೆ ಕಥೆಯಲ್ಲಿ ತರುತ್ತಾರೆ. ಈಗಾಗಲೇ ಕೆಲವು ಕಥಾಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಪಡೆದಿರುವ ಗೊರವರ ಅವರ ‘ಕುರಿ ಕಾಯೋ ರಂಗನ ಕಥೆ’ ಕೂಡ ಸಂಕ್ರಾಂತಿ ಕಥಾ ಸ್ಪರ್ಧೆಯಲ್ಲಿ ಮೆಚ್ಚುಗೆ ಬಹುಮಾನಕ್ಕೆ ಪಾತ್ರವಾಗಿದೆ.

ಭಾಗ- ೨

ರಂಗ ಊರು ತಲುಪಿದಾಗ ಅದು ಕತ್ತಲ ಚಾದರ ಹೊದ್ದು ಕೊಂಡಿತ್ತು. ಅಲ್ಲೊಂದು ಇಲ್ಲೊಂದು ಮೆನಯಲ್ಲಿ ಬುಡ್ಡಿ ಚಿಮಣಿ ಪಿಳಿ ಪಿಳಿ ಕಣ್ಣು ಬಿಡತೊಡಗಿದ್ದವು. ಅದ್ಯಾರದೋ ಮನೆಯ ರೇಡಿಯೊದಲ್ಲಿ ರಾಜಕುಮಾರ ಹಾಡತೊಡಗಿದ್ದ. ಕುಡಿದ ವ್ಯಕ್ತಿಯೊಂದು ಜೋಲಿ ಹೊಡೆಯುತ್ತಾ, ಇಳಿಜಾರಿನಲ್ಲಿ ಬ್ರೇಕು ತಪ್ಪಿದ ಗಾಡಿಯಂತೆ ಬರತೊಡಗಿದ್ದ. ಹುಚ್ಚು ಹಿಡಿದ ಮುದುಕಿಯೊಂದು ತಿಪ್ಪೆಯ ನೆತ್ತಿಯ ಮ್ಯಾಲೆ ಕುಂತು ಅದೇನನ್ನೋ ಬಯ್ಯತೊಡಗಿತ್ತು. ರಂಗ ಹೊಸ ಲೋಕದೊಳಗೆ ಕಾಲಿಟ್ಟಂತೆ ಆ ಕಡೆ ಈ ಕಡೆ ದೃಷ್ಟಿ ಬೀರುತ್ತಾ ಮನೆ ತಲುಪಿದ.

ಮನೆಯಂದರೆ ಅದು ತೊಲೆಗಂಬದ ಮಡಿಗೆ ಮನೆಯಲ್ಲ. ಮ್ಯಾಲೆ ತಗಡು ಹೊದೆಸಿ ಸುತ್ತಲೂ ಗೋಡೆಯಂತೆ ನುಗ್ಗೆ ಕಟ್ಟಿಗೆಯ ತಡಿಕೆ ಹೆಣೆದು, ಅದಕ್ಕೆ ಸೆಗಣಿಯನ್ನು ಅಳಕು ಮಾಡಿ ಮೆತ್ತಿ, ಅದರ ಮ್ಯಾಲೆ ನೀಟಾಗಿ ಸುಣ್ಣ ಬಳೆದ ಮನೆಯದು.

ಒಳಗೆ ರಂಗನ ಅವ್ವ ದ್ಯಾಮವ್ವ ಒಲೆ ಊದುತ್ತಿರುವ ಸದ್ದು ಕೇಳಿಸತೊಡಗಿತ್ತು. ಹೊರಗಡೆ ಅದ್ಯಾರೊ ಮಾತಾಡುತ್ತಿರುವ ದನಿ ಕೇಳಿ ದ್ಯಾಮವ್ವ ಊದುಗೋಳಿ ಇಟ್ಟು ಎದ್ದು ಹೊರ ಬಂದಳು. ಕೌದಿ ಹೊದ್ದುಕೊಂಡಿರುವವನನ್ನು ನೋಡಿ ಭಯಗೊಂಡ ದ್ಯಾಮವ್ವ ಚಿಟ್ಟಿಕ್ಕು ಚೀರಿದಳು. ರಂಗ ಮೈ ಮ್ಯಾಲಿನ ಕೌದಿ ಸರಿಸಿ ಮುಖ ತೋರಿದ. ದ್ಯಾಮವ್ವನ ಎದೆಯಾಗ ಹೆದರಿಕೆಯ ಬಿರುಗಾಳಿ ಬೀಸಿದಂಗಾತು. ಮಗನಿಗೆ ಅದೇನಾಗಿದೆಯೊ ಎಂದು ಕಣ್ಣಲ್ಲಿ ನೀರು ತಂದುಕೊಂಡಳು. ಅವನ ಮೈ ಮುಟ್ಟಿ ನೋಡಿದಳು. ಎಳ್ಳು ಸಿಡಿಯುವಷ್ಟು ಬೆಚ್ಚಗಿತ್ತು. ದ್ಯಾಮವ್ವನಿಗೆ ಆತಂಕವಾಗಿ ದೊಡ್ಡ ಮಸೂತಿ ಹತ್ತಿರದ ಆರ್‌ಎಂಪಿ ಡಾಕ್ಟರ್ ಎಸ್.ಎಲ್.ಉಕ್ಕಿಸಲ ಅವರ ದವಾಖಾನಿಗೆ ತೋರಿಸಲು ಕರಕೊಂಡು ಹೋದಳು.

ಡಾಕ್ಟರು ರಂಗನನ್ನು ಚೆಕ್ಕು ಮಾಡಿ ಯಾಡು ಸೂಜಿ ಚುಚ್ಚಿ ಕ್ಷಣ ಹೊತ್ತು ಅಲ್ಲೇ ಮಲಗಿಸಿ ರೆಸ್ಟು ಮಾಡಲು ಹೇಳಿದರು. ದ್ಯಾಮವ್ವ ರಂಗನಿಗೆ ಒಂದೀಟು ತಡೆದು ಬರಲು ಹೇಳಿ, ತಾನು ಅಡಗಿ ಮಾಡುವುದಾಗಿ ಹೇಳಿ ಮನೆಗೆ ಬಂದಳು.

ಒಂದೀಟು ಹೊತ್ತಿನ ನಂತರ ಮೈ ಬಿಸಿ ಕಡಿಮೆ ಆದಂಗಾಗಿ ಆರಾಮೆನಿಸಿ ಡಾಕ್ಟರು ಕೊಟ್ಟ ಗುಳಿಗೆ ತಗೊಂಡು ಮನೆ ಕಡೆ ಹೆಜ್ಜೆ ಬೆಳೆಸಿದ.

ದವಾಖಾನಿಯಿಂದ ತಮ್ಮ ಮನೆಗೆ ಹೋಗುವ ದಾರಿ ಸಿಗದೆ ರಂಗ ಅಗಸಿವಾರಿ ಹತ್ತಿರದ ಹಾಲಿನ ಕೇಂದ್ರದ ಮುಂದೆ ಅತ್ತ ಇತ್ತ ನೋಡುತ್ತಾ ಜಾತ್ರೆಯೊಳಗೆ ಕಳೆದುಕೊಂಡ ಹುಡುಗನಂತೆ ಅಸಹಾಯಕನಾಗಿ ನಿಂತಿದ್ದ.

ಅದ್ಯಾರದೊ ಮನೆಗೆ ಪೇಸೆಂಟು ನೋಡಲು ಹೋಗಿದ್ದ ಡಾಕ್ಟರು ರಂಗನನ್ನು ನೋಡಿ ಸಿಟ್ಟಾಗಿ ” ರೆಸ್ಟು ಮಾಡೋ ಮಾರಾಯ. ನೀನಿಲ್ಲೆ ನಿಂತು ಆಗಲೇ ಚೈನಿ ಹೊಡಿಯಾಕತ್ತಿ ಅಲ…’ ಎಂದರು.

ರಂಗನಿಗೆ ಏನು ಹೇಳಬೇಕೆನ್ನುವುದೇ ತಿಳಿಯಲಿಲ್ಲ. ನಿರ್ವಾ ಇಲ್ಲದೆ ” ಸಾಹೆಬ್ರ, ನಮ್ಮ ಮನಿ ದಾರಿ ಯಾಕಡೆ ಅಂತ ಸ್ವಲ್ಪ ಹೇಳ್ರಿ. ನಾನು ಬಾಳ ದಿನ ಆತ್ರಿ, ಊರಿಗೆ ಬಂದೇ ಇಲ್ಲ. ಅದಕ್ಕ ನಮ್ಮನಿ ಯಾಕಡೆ ಅಂತ ಗೊತ್ತಾಗವಲ್ದು….’ ಎಂದ.

ರಂಗನ ಕಾಡುತನಕ್ಕೆ ಡಾಕ್ಟರು ಅಚ್ಚರಿಗೊಂಡರು. ಪಾಪ ಅನಿಸಿ ದಾರಿ ತೋರಿಸಿದರು. ಆ ಓಣಿಯ ದಾರಿ ಹಿಡಿದು ಮನೆಗೆ ಬಂದಾಗ ಅವರವ್ವ ಕರಸಿದ್ದಪ್ಪನ ಅಂಗಡಿಯಿಂದ ತಂದಿದ್ದ ಅಕ್ಕಿಯ ಬಿಸಿ ಅನ್ನ ಮಾಡಿ ಇಟ್ಟಿದ್ದಳು. ನಿತ್ಯ ಜ್ವಾಳದ ಸಂಕಟಿ ಉಣ್ಣುತ್ತಿದ್ದ ಅಂವ ಅನ್ನ ಉಂಡು ಅದೆಷ್ಟೋ ದಿನವಾಗಿತ್ತು. ಅವ್ವ ಬಡಿಸಿದ ಅನ್ನ, ತೊಗರಿ ಬ್ಯಾಳಿ ಸಾರು, ಅದ್ಯಾರದೊ ಮನೆಯಿಂದ ಇಸಕೊಂಡು ಬಂದಿದ್ದ ಹುಂಚಿ ಟಕ್ಕು ಸೀಪುತ್ತಾ ಊಟ ಮುಗಿಸಿ, ಗುಳಿಗೆ ತಗೊಂಡು ನಿದ್ದೆಗೆ ಜಾರಿದ.

********

ಮುಂಜಾನೆದ್ದು ರಂಗ ಅನತಿ ದೂರದ ತಿಪ್ಪೆಯಲ್ಲಿ ಉಚ್ಚೆ ಹೋದ. ಅವು ಹಳದಿ ಬಣ್ಣಕ್ಕೆ ತಿರುಗಿದ್ದವು. ರಂಗನಿಗೆ ಗಾಬರಿ ಅನಿಸಿತು. ಅದ್ಯಾವುದೋ ದೊಡ್ಡ ಜಡ್ಡು ಇದೆ ಎಂದು ಭಾವಿಸಿದ. ರಾತ್ರಿ ಡಾಕ್ಟರು ಹೇಳಿದ ಮಾತು ನೆಪ್ಪಾಗಿ ಇದು ಗುಳಿಗೆ ಮಹಿಮೆ ಎಂದುಕೊಂಡು ನಿರಮ್ಮಳನಾದ.

ಈಗ ತುಸು ಜ್ವರ ಕಡಿಮೆಯಾಗಿ ಮೈ ಹಗುರ ಅನಿಸತೊಡಗಿತ್ತು. ಮನಿ ಮುಂದೆ ಲೈಟಿನ ಕಂಬಕ್ಕಿಂತ ಎತ್ತರ ಬೆಳೆದು ನಿಂತಿದ್ದ ಬೇನಗಿಡದ ಕೊಂಗಲಿ ಮುರಕೊಂಡು ಹಲ್ಲು ತಿಕ್ಕಿದ. ಅವ್ವ ಕಾಸಿ ಕೊಟ್ಟ ಡಿಕಾಸಿ ಚಾ ಕುಡಿದ. ಬ್ಯಾರೆ ಕೆಲಸ ಇಲ್ಲದಂತಾಗಿ ಮನಿ ಕಟ್ಟಿ ಮ್ಯಾಲೆ ಕುಂತು ಆ ಕಡೆ ಈ ಕಡೆ ಹೋಗರ‍್ನ ಬರೋರ‍್ನ ಕಣ್ಣು ತುಂಬಿಕೊಂಡು, ಅವರ ಬಟ್ಟೆಬರೆ ದಿಟ್ಟಿಸಿ ವಿಸ್ಮಯಗೊಳ್ಳುತ್ತಾ ಕುಳಿತ.

ಕಾಲೇಜಿಗೆ ಹೊರಟಿದ್ದ ಹುಡುಗಿಯನ್ನು ದಿಟ್ಟಿಸಿದ. ಅದು ಚಿಕ್ಕವಳಿದ್ದಾಗಿ ಎತ್ತಿ ಆಡಿಸಿ, ಗಲ್ಲಕ್ಕೆ ಬೆಲ್ಲ ಕೊಡುತ್ತಿದ್ದ ಮಗ್ಗುಲ ಮನೆಯ ಮಂಜುಳಾ. ಆಕೆಯನ್ನು ನೋಡಿ ತುಸು ಹೊತ್ತು ಕಣ್ಣಿಗೆ ಚಕ್ರ ಬಂದಾಗಾತು. ಮೈ ಕೈ ತುಂಬಾ ಹರೆಯ ತುಂಬಿಕೊಂಡು, ನೀಟಾಗಿ ಬೈತಲೆ ತಕ್ಕೊಂಡು ಜೋಡು ಜಡೆ ಬಿಟ್ಟಿದ್ದ, ಕಡು ನೀಲಿ ಚೂಡಿದಾರ ಧರಿಸಿದ್ದ ಮಂಜುಳಾಳನ್ನು ಮತ್ತೆ ಮತ್ತೆ ನೋಡಬೇಕೆನಿಸಿತು.

ಮಾಮ ಎಂದು ಬೆನ್ನು ಬೀಳುತ್ತಿದ್ದ ಹುಡುಗಿ ಈಗ ಕ್ಯಾರೆ ಎನ್ನದೆ ಅಪರಿಚಿತಳಂತೆ ಹೋಗುತ್ತಿರುವುದನ್ನು ನೋಡಿ ಸೋಜಿಗವೆನಿಸಿತು. ಕುರಿ ಮೇಸಲು ಗುಡ್ಡಕ್ಕೆ ಹೋದಾಗ ಅಲ್ಲಿಗೆ ಕಟ್ಟಿಗೆಗೆ ಬರುತ್ತಿದ್ದ ದಾವಣಿ ಲಂಗದ ಲಂಬಾಣಿ ಹುಡುಗಿಯರನ್ನು ಮಾತ್ರ ನೋಡಿದ್ದ ರಂಗನಿಗೆ ಮಂಜುಳಾ ಜಾತ್ರೆಯಲ್ಲಿ ಆಡುತ್ತಿದ್ದ ನಾಟಕದ ಹುಡುಗಿಯಂತೆ ಮೋಹಕವಾಗಿ ತೋರಿದಳು.

ಅವಳ ಹಿಂದೆ ತಾನು ಬಸ್‌ಸ್ಟಾಂಡ್ ಕಡೆ ಹೋದ. ಅಲ್ಲಿ ಕಾಲೇಜಿಗೆ ಹೋರಡಲು ಜಮೆಯಾಗಿದ್ದ ಹುಡುಗ, ಹುಡುಗಿಯರ ದೊಡ್ಡ ಗುಂಪು ನೆರೆದಿತ್ತು. ರಂಗನಿಗೆ ತಾನು ಅದ್ಯಾವುದೋ ಮಾಯಕದ ಜಗತ್ತಿನೊಳಗೆ ಬಂದಿರುವ ಡೌಟು ಕಾಡಿತು. ಹುಡುಗಿಯರ ಗುಂಪು ದಿಟ್ಟಿಸಿದ. ಜಾತ್ರೆಯೊಳಗಿನ ತರಹೇವಾರಿ ಬಣ್ಣದ ಗೊಂಬೆಗಳಂತೆ ಕಂಡರು. ಬಣ್ಣ ಮೆತ್ತಿಕೊಂಡು ರಂಗುಗೊಂಡಿದ್ದ ಮೋಹಕ ತುಟಿ, ಅವರ ಕಣ್ಣೊಳಗಿನ ಬುಡ್ಡಿ ಚಿಮಣಿಯ ಬೆಳಕು, ಚೂಡಿದಾರದ ಎದೆಗೆ ಒದೆಯುತ್ತಿರುವ ಮೊಲೆ ರಂಗನೊಳಗೆ ಹಲಗೆ ಬಾರಿಸತೊಡಗಿದ್ದವು.

ರಂಗನ ಮಗ್ಗುಲ ನಿಂತಿದ್ದ ಕಾಲೇಜು ಹುಡುಗನೊಬ್ಬ ಮೊಬೈಲಿನ ವಿಡಿಯೋ ದಿಟ್ಟಿಸತೊಡಗಿದ್ದ. ರಂಗ ಅಚ್ಚರಿಗೊಂಡ. ಅವನೊಳಗೆ ಹುಚ್ಚಾಳಂಬೆಯಂತೆ ಪುದು ಪುದು ನೂರೆಂಟು ಪ್ರಶ್ನೆಗಳು ಎದ್ದವು. ಜೇಬಿನಲ್ಲಿಟ್ಟುಕೊಳ್ಳುವ ಟಿ.ವಿ. ಎಂದು ಭಾವಿಸಿ ಆ ಹುಡುಗನನ್ನು, ಮೊಬೈಲನ್ನು ಇನ್ನಿಲ್ಲದ ಕೂತುಹಲದಿಂದ ದಿಟ್ಟಿಸತೊಡಗಿದ.

ಕನ್ನಡ ಸಾಲೆಯ ಟೀಚರು ನಡಿಗೆಗೆ ಅವಸರ ತುಂಬಿ ರಂಗನ ಮುಂದೆ ಸುಳಿದು ಬಸ್ ಹತ್ತಲು ಹೋದರು. ಆ ಟೀಚರ್ ಮೈಯಿಂದ ಹೊರಟ ಸೇಂಟಿನ ಘಮ ರಂಗನ ಮೂಗಿನ ಹೊಳ್ಳೆ ಅರಳಿಸಿ ಸೋಜಿಗಗೊಂಡ. ಕುರಿ ಉಚ್ಚೆಯ ಗಬ್ಬು ನಾತಕ್ಕೆ ಒಗ್ಗಿ ಹೋಗಿದ್ದ ರಂಗ ಟೀಚರ್ ಮೈಯಿಂದ ಬಂದ ಘಮ ಅವರೊಳಗೆ ಅದ್ಹೇಗೆ ಬಂದಿರಬಹುದು ಎಂದು ಊಹಿಸಲು ಅಸಾಧ್ಯವೆನಿಸಿ ಮನೆಯ ದಾರಿ ತುಳಿದ.

******

ಊರಿಗೆ ಹೋಗಿ ಬಂದಾಗಿನಿಂದ ಕುರಿ ಕಾಯುವಾಗ ರಂಗನ ಮನಸು ಮೊದಲಿನಂತಿರದೆ ಅದ್ಯಾಕೊ ಒಳಗೊಳಗೆ ಭೋರಿಟ್ಟು ಅಳುತ್ತಿದೆ. ಮುಂಜಾನೆಯಾದರೆ ಸಾಕು. ಬಸ್‌ಸ್ಟ್ಯಾಂಡಿನ ಕಡೆ ಹೋಗಬೇಕೆನಿಸುತ್ತದೆ. ಬಣ್ಣದ ಗೊಂಬೆಯಂತ ಹುಡುಗಿಯರು, ಜೇಬಿನಲ್ಲಿಟ್ಟುಕೊಳ್ಳುವ ಟಿವಿ, ಟೀಚರ್ ಮೈ ಘಮ, ತಾನು ಗಲ್ಲಕ್ಕೆ ಬೆಲ್ಲ ಕೊಟ್ಟಿದ್ದ ಹುಡುಗಿ ಕನಸಾಗಿ ಕಾಡಿ ಜೀವ ಹಿಂಡತೊಡಗಿದ್ದವು.

*****

ಹಟ್ಟಿಯ ಸುತ್ತ ಕತ್ತಲು ಕಳ್ಳಬೆಕ್ಕಿನಂತೆ ಹೆಜ್ಜೆ ಇಡತೊಡಗಿತ್ತು. ರಂಗ ಮೈ ಮುಟ್ಟಿ ನೋಡಿಕೊಂಡ. ಜ್ವರ ಬಂದಂತೆನಿಸಿತು. ಖುಷಿಯಾಗಿ ಕೌದಿ ಹೊದ್ದು, ಕುರಿ ಮೇಸಲು ಹೋದ ಜೊತೆಗಾರರು ಬರುವ ದಾರಿ ನಿರುಕಿಸುತ್ತ ಕುಳಿತ.

– ಟಿ.ಎಸ್.ಗೊರವರ

ಆ ದಶಕದ ಸುತ್ತ… ~ ಅಕ್ಷತಾಳ ಹೊಸ ಪ್ರಯೋಗ

‘ಆ ದಶಕ’ ಬಿಡುಗಡೆಯಾಗಿದೆ. ನಿತ್ಯವೂ ಒಂದಲ್ಲ ಒಂದು ಹೊಸ ಪುಸ್ತಕ ಬಿಡುಗಡೆಯಾಗುವ ಈ ದಿನಗಳಲ್ಲಿ ಯಾಕೆ ಇದಕ್ಕೆ ಇಷ್ಟೊಂದು ಜಾಹೀರಾತು ಅಂದುಕೊಳ್ಳುತ್ತೀರೇನೋ? ಇದಕ್ಕೆ ಕೊಡಬಹುದಾದ  ಕಾರಣಗಳು ಮೂರು. ಮೊದಲನೆಯದಾಗಿ, ನಮಗೆ ದೊರೆಯುವ ಮಾಹಿತಿಯ ಮೇಲೆ ನಾವು ಅವಲಂಬಿತರಾಗಿರುವುದು; ಎರಡನೆಯದು ಈ ಪುಸ್ತಕದ ಮಹತ್ವ ಮತ್ತು ಕರ್ನಾಟಕ ಕಂಡ ಮಹತ್ವದ ಚಳವಳಿಯೊಂದರ ಏಳು ಬೀಳುಗಳ ಬಗ್ಗೆ ಅದರಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ವ್ಯಕ್ತಿಯೊಬ್ಬನ ಲೇಖನ ಹಾಗೂ ಪತ್ರಗಳ ಮುಖಾಂತರ ತಿಳಿದುಕೊಳ್ಳುವ ಸದವಕಾಶ; ಮೂರನೆಯದಾಗಿ ಇದು ಚಳವಳಿಗಳ ಬಗ್ಗೆ, ಹಿಂದಿನ ದಿನಗಳ ಚಳವಳಿಗಾರರ ಬಗ್ಗೆ ಏನೂ ಅರಿತಿಲ್ಲದ ಹೊಸತಲೆಮಾರಿಗೆ ಇದು ಸ್ವಾರಸ್ಯ ಧಾಟಿಯಲ್ಲೇ ಕೆಲವಷ್ಟು ಮಾಹಿತಿಗಳನ್ನು ಸಫಲವಾಗಿ ದಾಟಿಸಬಲ್ಲಂತಿದೆ ಎನ್ನುವುದು.

ಈ ಪುಸ್ತಕದ ಬೆಲೆ ಕೇವಲ 75ರುಪಾಯಿಗಳು. ಬೆಂಗಳೂರಿನಲ್ಲಿ- ಧಾರಿಣಿ, 17/18-2, ಮೊದಲನೆ ಮುಖ್ಯ ರಸ್ತೆ, ಮಾರೇನ ಹಳ್ಳಿ, ವಿಜಯನಗರ- ಇಲ್ಲಿ ದೊರೆಯುತ್ತದೆ.

ಇಲ್ಲೀಗ, ಅಹರ್ನಿಶಿಯ ಪರವಾಗಿ, ‘ಆ ದಶಕ’ ಪುಸ್ತಕದಲ್ಲಿ ಅಕ್ಷತಾ ಹೇಳಿಕೊಂಡಿರುವ ಮಾತುಗಳನ್ನು ನೀಡಲಾಗಿದೆ.

ಆ ದಶಕದ ಸುತ್ತ…

:ಮುಖಪುಟ ವಿನ್ಯಾಸ~ ಅಪಾರ:

‘ಆ ದಶಕ ಇದೊಂದು ಪ್ರಯೋಗ. ಒಂದು ದಶಕವನ್ನು ಆ ಸಂದರ್ಭದಲ್ಲಿ ಕ್ರಿಯಾಶೀಲವಾಗಿದ್ದ ವ್ಯಕ್ತಿತ್ವಗಳ ಮತ್ತು ಬರಹಗಳ ಮೂಲಕ ಕಟ್ಟಿಕೊಡುವ ಒಂದು ಪ್ರಯತ್ನ. ಇದೊಂದು ಪರಿಪೂರ್ಣ ಪ್ರಯೋಗ ಎಂದು ಹೇಳಲಾರೆ.
ಆದರೆ ನಾವು ಇದ್ದ ದಶಕದಲ್ಲಿ, ನಾವು ಹುಟ್ಟಿದ ದಶಕದಲ್ಲಿ, ನಾವಿನ್ನೂ ಹುಟ್ಟೇ ಇರದ ದಶಕದಲ್ಲಿ ಈ ಎಲ್ಲ ಚಳುವಳಿಗಳು, ಹೋರಾಟಗಳು, ವಾಗ್ವಾದ, ತಾತ್ವಿಕ ಸಂಘ?, ಕ್ಷುಲ್ಲಕ ಜಗಳ, ತಪ್ಪು ತಿಳುವಳಿಕೆಗಳು ಸಂಭವಿಸಿದ್ದವು ಎಂದು ಇಲ್ಲಿನ ಬರಹಗಳು ವಿವಿಧ ತಲೆಮಾರುಗಳಿಗೆ ನಿರೂಪಿಸುತ್ತಾ, ಆ ಸಂದರ್ಭದ ಸೊಬಗನ್ನು ಕಾಣಿಸುತ್ತವೆ ಎಂಬುದರಲ್ಲಿ ಅನುಮಾನವಿಲ್ಲ.

ದಿನಪತ್ರಿಕೆಗಳ ಕೃಷಿ ಪುರವಣಿ ಮತ್ತು ವಾಚಕರ ವಾಣಿಗಳಿಗೆ ಸಹ ಕಂಪ್ಯೂಟರ್‌ನಲ್ಲಿ ಟೈಪ್ ಮಾಡಿ ಮೇಲ್ ಮಾಡಿದರೆ ಮಾತ್ರ ಪರಿಗಣಿಸುತ್ತೇವೆ ಎಂಬ ‘ಈ ದಶಕದಲ್ಲಿ ನಾವು ಎಂಬತ್ತರ ದಶಕದ ಕಡೆ ಕಣ್ಣಾಡಿಸಿದಾಗ ‘ಆ ದಶಕದ ದೊಡ್ಡ ಸೊಬಗಾಗಿ ಕಾಣುವುದು ಕಡಿದಾಳು ಶಾಮಣ್ಣ ಎಂಬ ಹಳ್ಳಿಗಾಡಿನ (ಇವತ್ತಿಗೂ ಇವರಿರುವ ಭಗವತಿಕೆರೆ ಎಂಬ ಹಳ್ಳಿಗೆ ಓಡಾಡುವುದು ಒಂದೇ ಬಸ್. ಅದು ಸಹ ದಿನಕ್ಕೆ ಎರಡೇ ಟ್ರಿಪ್. ದಿನಪತ್ರಿಕೆ ಸಹ ಕೈಗೆ ಸಿಗುವುದು ಬೆಳಿಗ್ಗೆ ೯ ಗಂಟೆಗೆ. ಅದೂ ಬಸ್ಸಿನ ಡ್ರೈವರ್ ಕೃಪೆ ತೋರಿಸಿದರೆ. ಇಲ್ಲದಿದ್ದರೆ ಆ ದಿನದ ದಿನ ಪತ್ರಿಕೆ ಇಲ್ಲ. ಇವರ ಮನೆಯ ಸ್ಥಿರದೂರವಾಣಿ ತಿಂಗಳಲ್ಲಿ ೨೦ ದಿನ ದುರಸ್ತಿಯಲ್ಲೇ ಇರುತ್ತದೆ.)

ರೈತ, ರೈತ ಹೋರಾಟಗಾರರೊಬ್ಬರು ಆ ಸಂದರ್ಭದ ಜನಪ್ರಿಯ ಪತ್ರಿಕೆಯೊಂದಕ್ಕೆ ತಾವು ಕಂಡದ್ದನ್ನು, ತಮ್ಮ ಹೋರಾಟವನ್ನು, ತಮ್ಮ ಪರಿಸರದಲ್ಲಿ ಗ್ರಹಿಸಿದ್ದನ್ನು ಎಲ್ಲವನ್ನು ಕುರಿತು ತಮ್ಮ ಹಳ್ಳಿಯಲ್ಲೇ ಕುಳಿತೇ ನಿಯಮಿತವಾಗಿ ಬರೆಯುತ್ತಿದ್ದುದು ಮತ್ತು ಅತ್ಯುತ್ತಮವಾದ ಒಳನೋಟಗಳನ್ನುಳ್ಳ ಸಂಪಾದಕ ಲಂಕೇಶ್ ‘ಎಲ್ಲರ ವ್ಯಕ್ತಿತ್ವಗಳ ಅಭಿವ್ಯಕ್ತಿ ಇಲ್ಲಿ ಆಗಬೇಕಾಗಿದೆ ಎಂಬ ಆಶಯದೊಂದಿಗೆ ಆ ಬರಹಗಳನ್ನು ವಿಶೇಷ ಆಸ್ಥೆಯೊಂದಿಗೆ ಪ್ರಕಟಿಸುತ್ತಿದ್ದುದು.

ಈ ಪುಸ್ತಕವು ಲೇಖನ, ಸಂದರ್ಶನ, ಪತ್ರಗಳನ್ನು ಒಳಗೊಂಡಿದ್ದು, ಪ್ರಕಾರಗಳಿಗೆ ಅನುಗುಣವಾಗಿ ವಿಭಾಗಿಸದೇ ಅನುಕ್ರಮವಾಗಿ (ದಿನಾಂಕ ತಿಂಗಳು ವರ್ಷದ ಆಧಾರದಲ್ಲಿ) ಜೋಡಿಸಲಾಗಿದೆ. ಬರಹದ ಮಧ್ಯದಲ್ಲಿ ಪತ್ರವಿದೆ, ಪತ್ರದ ಮಧ್ಯದಲ್ಲಿ ದುತ್ತೆಂದು ಬರಹ ಎದಿರಾಗುತ್ತದೆ. ಪರಸ್ಪರ ಪೂರಕ, ಪ್ರೇರಕ ಮತ್ತು ಪ್ರತಿಕ್ರಿಯಾತ್ಮಕವಾಗಿ ಇಲ್ಲಿನ ಬಹುತೇಕ ಬರಹಗಳು ಪರಸ್ಪರ ಬೆಸೆದಿರುವುದರಿಂದ ಹೀಗೆ ಮಾಡಲಾಗಿದೆ.

ಮೊದಲಿಗೆ ತೇಜಸ್ವಿಗೆ ಬರೆದ ಪತ್ರ ಮತ್ತು ಲಂಕೇಶ್ ಪತ್ರಿಕೆಯಲ್ಲಿ ಪ್ರಕಟವಾದ ಶಾಮಣ್ಣನವರ ಪತ್ರಗಳಲ್ಲಿ ಎದ್ದು ಕಾಣುವ ಉತ್ಸಾಹವಿದೆ, ‘ರೈತ ಚಳುವಳಿಯ ಸೆಡ್ಡಿಗೆ ಸೆಡ್ಡು ವೃತ್ತಾಂತ ಲೇಖನ ತಲುಪಿದ ಕೂಡಲೇ ಮತ್ತು ಅದನ್ನು ಪ್ರಕಟಿಸಿದ ನಂತರದಲ್ಲಿ
ಲಂಕೇಶರು ಬರೆದ ಪತ್ರಗಳು ಮತ್ತು ಆ ಲೇಖನದಲ್ಲಿ ಸೂಚಿತವಾಗಿರುವಂತೆ ಸಂಘಟಿತ ಶಕ್ತಿಯಾಗಿ ರೈತಸಂಘ ತಲುಪಿದ ಉಚ್ಛ್ರಾಯ ಸ್ಥಿತಿಯ ದರುಶನವಿದೆ. ಆದರೆ ೧೯೮೬ರ ಹೊತ್ತಿಗೆ ‘ರೈತಸಂಘ: ಮತ್ತೆ ಚಿಗುರಿದ ಆಸೆ ಎಂದು ಶಾಮಣ್ಣ ಬರೆಯತ್ತಾರೆ. ೧೯೮೯ ರಲ್ಲಿ ರೈತಸಂಘ ಏಕಾಂಗಿಯಾಗಿ ರಾಜಕೀಯ ಶಕ್ತಿಯಾಗಲು ಸಾಧ್ಯವೇ ಇಲ್ಲ ಎಂದು ಶಾಮಣ್ಣನವರೇ ತಮ್ಮ ಸಂದರ್ಶನದಲ್ಲಿ ಹೇಳುತ್ತಾರೆ. ಶಾಮಣ್ಣನವರ ಸಂದರ್ಶನಕ್ಕೆ ತೇಜಸ್ವಿ ಮತ್ತು ಕಟ್ಟಿಮನಿಯವರ ಪತ್ರರೂಪದ ಮೌಲ್ವಿಕವಾದ ಪ್ರತಿಕ್ರಿಯೆಗಳು ಜೊತೆಗೆ ಸಂದರ್ಶನದಲ್ಲಿ ಶಾಮಣ್ಣನವರು ಆಡಿರುವ ಮಾತು ಪಥ್ಯವಾಗದೇ ರೈತಸಂಘದಿಂದ ಅವರನ್ನು ಹೊರಗೆ ಹಾಕಲು ಮಾಡಿದ ಠರಾವು ಪಾಸಿನ ಪತ್ರವೂ ಇದೆ. ಘಟನಾವಳಿಗಳ ಸರಿಯಾದ ಚಿತ್ರಣ ಲಭ್ಯವಾಗುವ ದೃಷ್ಟಿಯಿಂದಲೂ ಕಾಲಾನುಕ್ರಮದಲ್ಲಿ ಬರಹಗಳನ್ನು ಇಡಲಾಗಿದೆ.

‘ಕಡಿದಾಳು ಶಾಮಣ್ಣ ಅವರ ೮೦ರ ದಶಕದ ಬರಹ ಮತ್ತು ಪತ್ರಗಳನ್ನು ಒಳಗೊಂಡಿರುವ ಈ ಪುಸ್ತಕದ ಪ್ರಕಟಣೆಯ ಮೂಲಕ ಈಗಾಗಲೇ ‘ಮತ್ತೆ ಮತ್ತೆ ಸೀರೀಸ್ ಮೂಲಕ ಪಂಪ ಮತ್ತು ಬ್ರೆಕ್ಟ್ ಕಾವ್ಯವನ್ನು ಕೊಡುಗೆ ನೀಡಿದ (ಆ ಕೃತಿಗಳ ಲೇಖಕರಾದ ಜಿ.ಹೆಚ್. ನಾಯಕ್ ಮತ್ತು ಯು.ಆರ್. ಅನಂತಮೂರ್ತಿಯವರಿಗೆ ನಾವು
ಆಭಾರಿಗಳು) ‘ಅಹರ್ನಿಶಿ ಮತ್ತೊಂದು ಪ್ರಯತ್ನಕ್ಕೆ ಕೈ ಹಾಕಲಿದೆ. ರಾಜ್ಯದಲ್ಲಿ ನಡೆದ ಜನಪರ ಚಳುವಳಿ, ಆ ಸಂದರ್ಭದ ಮಹತ್ವದ ವ್ಯಕ್ತಿತ್ವಗಳು, ವಿದ್ಯಮಾನಗಳ ಮೂಲಕ ಆಯಾ ದಶಕವನ್ನು (೬೦, ೭೦, ೯೦ರ ದಶಕ ಹೀಗೆ) ಕಟ್ಟಿಕೊಡುವ ಆಲೋಚನೆ ನಮ್ಮದು. ‘ಆ ದಶಕ ಸೀರೀಸ್‌ನಲ್ಲಿ ಈ ಪುಸ್ತಕಗಳು ಪ್ರಕಟವಾಗುತ್ತವೆ.

ಬಾಪುಕುಟಿಯಲ್ಲಿ ಯುಗ ಪ್ರವರ್ತಕ ಗಾಂಧಿ

ಗಾಂಧಿ ಜಯಂತಿಯಂದೇ ನಮಗೆ ಗಾಂಧೀಜಿಯ ನೆನಪಾಗಬೇಕೆಂದೇನೂ ಇರಲಿಲ್ಲ. ಕೊನೆಯ ಪಕ್ಷ ಈ ನೆವದಲ್ಲಾದರೂ ಪೂರ್ತಿಯಾಗಿ ಈ ಮಹಾತ್ಮನ ಧ್ಯಾನದಲ್ಲಿ ಕಳೆಯುವಂತಾಗಲೆಂಬ ಉದ್ದೇಶದಿಂದಲಷ್ಟೆ ಇವತ್ತು ಈ ಲೇಖನ.
‘ಬಾಪುಕುಟಿ’ ರಜನಿ ಭಕ್ಷಿಯವರು ಆಂಗ್ಲ ಭಾಷೆಯಲ್ಲಿ ಬರೆದ journeys in rediscovery of Gandhi ಕೃತಿಯ ಕನ್ನಡಾನುವಾದ. ಕೆ.ವೆಂಕಟರಾಜು ಇದರ ಅನುವಾದಕರು. ಅಭಿನವ ಪ್ರಕಾಶನ ಇದನ್ನು ‘ಶತಮಾನದ ಚಿಂತನೆ’ ಮಾಲೆಯಲ್ಲಿ ಪ್ರಕಟಿಸಿದೆ.
“ಬಾಪು ಕುಟಿ ಪ್ರಸ್ತುತ ಸಂದರ್ಭದಲ್ಲಿ ಬೇರೆಬೇರೆ ಚಳವಳಿಗಳಲ್ಲಿ ನಿರತರಾದ ಗಾಂಧಿವಾದಿಗಳೆಂದು ಕರೆದುಕೊಳ್ಳದೆ ಅವರ ಕೆಲಸಗಳ ಮೂಲಕ ಗಾಂಧಿಚಿಂತನೆಗಳಿಗೆ ನೆಲೆಯಾದವರ ಕಥನ” ಎಂದು ಕೃತಿಯ ಆರಂಭದಲ್ಲಿ ಹೇಳಲಾಗಿದೆ.
ಸಧ್ಯಕ್ಕೆ ಇಲ್ಲಿ ಬಾಪುಕುಟಿಯ ಮೊದಲನೆ ಅಧ್ಯಾಯದಿಂದ ಒಂದು ಭಾಗವನ್ನಾಯ್ದು ಇಲ್ಲಿ ನೀಡಿದ್ದೇನೆ. ನಾವು ಸಂಪೂರ್ಣವಾಗಿ ಓದಲೇಬೇಕಾದ ಕೃತಿ ಇದು. ಹಾಗೆಯೇ, ಗಾಂಧೀ ಚಿಂತನೆಗಳ ಕುರಿತು ಮಾತನಾಡುವಾಗ ‘ಹಿಂದ್ ಸ್ವರಾಜ್’ ಪ್ರಸ್ತಾಪ ಬಾರದೆ ಇರುವುದಿಲ್ಲ. ಈ ಪ್ರಸ್ತಾಪದೊಡನೆ ಒಂದು ಮಾಹಿತಿ- ಈ ಬಾರಿಯ ಸಂಚಯ ಗಾಂಧಿ-ಹಿಂದ್ ಸ್ವರಾಜ್ ಕುರಿತು ಅತ್ಯುತ್ತಮ – ಸಂಗ್ರಹ ಯೋಗ್ಯ ಸಂಚಿಕೆಯನ್ನು ಹೊರತಂದಿದೆ ಎನ್ನುವುದು.
ಯುಗ ಪ್ರವರ್ತಕ ಗಾಂಧಿ
ದೇಹದ ಉಪಾಧಿಯಿಂದ ಬಿಡುಗಡೆ ಹೊಂದಿದ ಯುಗಪ್ರವರ್ತಕ ಗಾಂಧೀಜಿಯ ಅಸ್ತಿತ್ವ- ಕಾಲ ಮತ್ತು ಅವಕಾಶಗಳ ಸೋಪಾನದಲ್ಲಿ ಚಾಚಿಕೊಂಡಿದೆ. ಈ ‘ಇರವು’ ಯಾವುದು?
ನವದೆಹಲಿಯ ಬಿರ್ಲಾ ಹೌಸಿನಲ್ಲಿ ಗುಂಡಿಗೆ ಬಲಿಯಾದ ಗಾಂಧಿ ತನ್ನ ಅನುಯಾಯಿಗಳಿಗೆ ‘ಗಾಂಧೀವಾದ’ ಎಂಬುದು ತಲೆಯೆತ್ತಬಾರದೆಂದು ಹೇಳಿದ್ದರು. ಯಾವುದೇ ವರ್ಗ ಹುಟ್ಟುಹಾಕುವುದು ಅವರಿಗೆ ಹಿಡಿಸದ ವಿಷಯವಾಗಿತ್ತು. ‘ಯಾವುದೇ ತತ್ತ್ವ ಅಥವಾ ಸಿದ್ಧಾಂತವನ್ನು ನಾನು ಹುಟ್ಟುಹಾಕಿದೆ ಎಂದು ನಾನು ಹೇಳಲಾರೆ. ಶಾಶ್ವತ ಸತ್ಯಗಳನ್ನು ನಮ್ಮ ದಿನನಿತ್ಯದ ಬದುಕು ಮತ್ತು ಸಮಸ್ಯೆಗಳಿಗೆ ನನ್ನದೇ ಆದ ರೀತಿಯಲ್ಲಿ ಅನ್ವಯಿಸಲು ಪ್ರಯತ್ನಿಸಿದೆ’ ಎನ್ನುತ್ತಾರೆ ಗಾಂಧೀಜಿ.
ಐತಿಹಾಸಿಕ ಗಾಂಧಿ ಮಾನವಸಹಜ ದುರ್ಬಲ್ಯಗಳೊಂದಿಗೇ ವಿಶೇಷ ಸಾಮರ್ಥ್ಯಗಳನ್ನು ಹೊಂದಿದ್ದ ವ್ಯಕ್ತಿ. ಗಾಂಧೀಜಿ ಗಂಡನಾಗಿ ಮತ್ತು ತಂದೆಯಾಗಿ ವ್ಯವಹರಿಸಿದ ರೀತಿ ಟೀಕೆಗೆ ಗುರಿಯಾಗಿದೆ. ಬ್ರಿಟಿಷರೊಂದಿಗಿನ ಮಾತುಕತೆ ಅಥವಾ ಪಾಕಿಸ್ತಾನದ ಉದಯ ಸಂದರ್ಭಗಳಲ್ಲಿನ ಇವರ ರಾಜಕೀಯ ನಿಲುವುಗಳು ಪ್ರಶ್ನಿಸಲ್ಪಟ್ಟಿವೆ. ಈ ಗಾಂಧಿ ಕೇವಲ ಶೈಕ್ಷಣಿಕ ಮತ್ತು ಐತಿಹಾಸಿಕ ಆಸಕ್ತಿಯ ಕೇಂದ್ರ ಮಾತ್ರ.
ಮಾನವ ನಾಗರಿಕತೆಯಲ್ಲಿನ ವಿಕಾಸದ ದೊಡ್ಡ ನೆಗೆತಕ್ಕೆ ಕಾರಣವಾದ ಗಾಂಧೀಜಿಯ ಕನಸು ಮತ್ತು ತುಡಿತಗಳು ಬಾಪುಕುಟಿಯ ಚೇತನವಾಗಿ ರಿಂಗಣಿಸುತ್ತವೆ. ಈ ಆಶಯ ಕೇವಲ ತನ್ನದು ಮಾತ್ರವಲ್ಲ ಎಂದು ತಿಳಿಸಲು ಗಾಂಧೀಜಿ ಶ್ರಮಿಸಿದ್ದರು.
ಸರ್ವರಿಗೂ ಸಮೃದ್ಧಿ ಮತ್ತು ನ್ಯಾಯ ದೊರೆಯುವ ಕಾಣ್ಕೆ ಹೊಂದಿದ ನಾಡನ್ನು ರಾಮರಾಜ್ಯವೆಂದು ಕರೆಯಲಾಗುತ್ತಿತ್ತು. ವ್ಯಕ್ತಿಯ ಉನ್ನತಿ ಮತ್ತು ಸರ್ವರ ಅಭ್ಯುದಯಕ್ಕೆ ಸಮರ್ಪಕ ಜೀವನಂಶದ ಒದಗಿಸುವಿಕೆಯೇ ಅತ್ಯಗತ್ಯವಾದ ಅಂಶವೆಂದು ಗೌತಮ ಬುದ್ಧ ಪ್ರತಿಪಾದಿಸಿದ್ದ. ೧೯ನೆಯ ಶತಮಾನದಲ್ಲಿ ಅಮೆರಿಕನ್ ಕವಿ ಹೆನ್ರಿ ಡಿ ಥೋರೋ ಗುಲಾಮಿ ಪದ್ಧತಿಯನ್ನು ಉಳಿಸಿಕೊಂಡಿರುವ ಸ್ವತಂತ್ರ ಅಮೆರಿಕಾದ ಡಂಬಾಚಾರವನ್ನು ಪ್ರತಿಭಟಿಸಿ ಜೈಲಿಗೆ ತೆರಳಿದ್ದರು. ದೈಹ್ಕ ಶ್ರಮದ ಗೌರವವನ್ನು ಎತ್ತಿಹಿಡಿದು ಸರಳ ಬದುಕನ್ನು ಪ್ರತಿಪಾದಿಸಿದ ಜಾನ್ ರಸ್ಕಿನ್, ಮನುಷ್ಯನನ್ನು ದುರ್ಬಲಗೊಳಿಸುವ ಆಧುನಿಕ ಅರ್ಥ ವ್ಯವಸ್ಥೆಯ ಸಂಕೀರ್ಣತೆಗಳನ್ನು ಟೀಕಿಸಿದರು. ರಷ್ಯಾದಲ್ಲಿ ಕೌಂಟ್ ಲಿಯೋ ಟಾಲ್ಸ್ ಟಾಯ್ ಶ್ರೀಮಂತ ಬದುಕಿಂದ ದೂರವಿದ್ದು, ದೈಹಿಕ ಶ್ರಮ, ಕನಿಷ್ಠ ಅವಶ್ಯಕತೆ ಮತ್ತು ಅಹಿಂಸೆಗಳನ್ನು ಎತ್ತಿಹಿಡಿಯುವ ಬದುಕಿಗೆ ಆತುಕೊಂಡರು.
ಯುವಕ ಎಂ.ಕೆ.ಗಾಂಧಿ ಅರಳಿಕೊಳ್ಳುವಲ್ಲಿ ಇವೆಲ್ಲ ಪ್ರಬಲ ಸ್ಫೂರ್ತಿಗಳಾದವು. ಮೂಲತಃ ಗಾಂಧಿಯಲ್ಲಿದ್ದ ನ್ಯಾಯಯುತ ಸಮಾಜಕ್ಕಾಗಿ ತುಡಿಯುವ ಮನಸಿಗೆ ಇವು ದಿಕ್ಕು ದೆಸೆಗಳನ್ನು ನೀಡಿದವು. ಇವು ಆಧುನಿಕ ಕೈಗಾರಿಕಾ ನಾಗರಿಕತೆಯ ಲೋಪದೋಷಗಳು ಮತ್ತು ಅದರ ಮೂಲದಲ್ಲೇ ಹುದುಗಿರುವ ಹಿಂಸೆಯ ಕುರಿತು ಗಾಂಧಿ ಒಂದು ದೃಷ್ಟಿ ಹೊಂದಲು ಕಾರಣವಾದವು. ಹೀಗಾಗಿ ೧೮೯೦ರ ಪ್ಯಾರಿಸ್ ವಸ್ತುಪ್ರದರ್ಶನಕ್ಕೆ ಗಾಂಧಿ ಹೋದಾಗ ಅಲ್ಲಿ ಇಡಲಾದ ಮನ ಸೆಳೆಯುವ ವಸ್ತುಗಳಾಗಲೀ ಸಂಶೋಧನೆಗಳಾಗಲೀ ಅವರನ್ನು ಆಕರ್ಷಿಸಲಿಲ್ಲ. ‘ಐಫೆಲ್ ನ ಗೋಪುರ ಮಾನವನ ಅವಿವೇಕದ ಸ್ಮಾರಕ’ ಎಂಬ ಲಿಯೋ ಟಾಲ್ಸ್ ಟಾಯನ ಮಾತು ಸಂಪೂರ್ಣ ನಿಜವೆಂದು ಅವರಿಗೆ ಕಂಡಿತು. ಈ ಗೋಪುರ ನಾವೆಲ್ಲರೂ ಆಡಂಬರದತ್ತ ಆಕರ್ಷಿತರಾಗುವ ಮಕ್ಕಳು ಎಂಬುದಕ್ಕೆ ಉತ್ತಮ ಉದಾಹರಣೆ ಎನಿಸಿತು.
ಗಾಂಧಿ ಇಂತಹ ಆಡಂಬರಕ್ಕೆ ಬೆನ್ನು ತಿರುಗಿಸಿ, ಪೂರ್ಣತೆಯ ಬದುಕಿನ ಹಾದಿಯ ಅನ್ವೇಷಣೆಗೆ ತೊಡಗಿದರು. ಮಾನವ ನಾಗರಿಕತೆಯ ವಿಕೃತಿಯನ್ನು ಗುಣಪಡಿಸುವ ಮಾರ್ಗೋಪಾಯಗಳ ಕಡೆಗೆ ಇದು ಅವರನ್ನು ಕರೆತಂದಿತು. ಈ ವಿಭಿನ್ನ ಕಾಣ್ಕೆಗಳು ೧೯೦೮ರ ಹೊತ್ತಿಗಾಗಲೇ ಒಂದು ಆಕಾರ ಪಡೆಯತೊಡಗಿದವು. ಆಗ ಗಾಂಧೀಜಿಗೆ ೪೦ ವರ್ಷ.
ಆ ವರ್ಷ ಗಾಂಧಿ ಲಂಡನ್ನಿನ ಪ್ರತಿಯೊಬ್ಬ ಭಾರತೀಯ ಕ್ರಾಂತಿಕಾರಿಯೊಟ್ಟಿಗೂ ಸಂವಾದ ನಡೆಸುತ್ತಾ ಒಂದು ತಿಂಗಳು ಕಳೆದರು. ಅವರ ಧೈರ್ಯ ಗಾಂಧೀಜಿಯನ್ನು ಪ್ರಭಾವಿಸಿತು;ಆದರೆ ತತ್ತ್ವಗಳಲ್ಲ. ಭಾರತ ಚೇತರಿಸಿಕೊಳ್ಳಲು ಹಿಂಸೆ ಔಷಧವಲ್ಲ, ಭಾರತೀಯ ಸಂಸ್ಕೃತಿ ತನ್ನ ರಕ್ಷಣೆಗಾಗಿ ಭಿನ್ನವಾದ, ಶ್ರೇಷ್ಟವಾದ ಅಸ್ತ್ರವೊಂದನ್ನು ಬಯಸುತ್ತದೆ ಎಂಬುದು ಅವರಿಗೆ ಖಚಿತವಾಗಿತ್ತು. ದಕ್ಷಿಣ ಆಫ್ರಿಕಾಕ್ಕೆ ಹಡಗಿನಲ್ಲಿ ತೆರಳುತ್ತಿದ್ದಂತೆಯೇ ಈ ಸುದೀರ್ಘ ಯಾತ್ರೆಯ ದಿನಗಳನ್ನು ಈ ಉನ್ನತ ಅಸ್ತ್ರ ಹೇಗಿರಬೇಕೆನ್ನುವ ಕುರಿತು ತಮ್ಮ ಚಿಂತನೆಗಳನ್ನು ಬರೆಯುತ್ತ ಕಳೆದರು. ಸವಾಲೊಡ್ಡಲು ಮತ್ತು ಪ್ರತಿ ಸವಾಲೊಡ್ಡಲು ಇವರು ಪ್ರಾಚೀನ ಸಂವಾದದ ಮಾದರಿಯನ್ನು ಬಳಸಿದರು.
ಇದರ ಫಲಶ್ರುತಿಯೇ ‘ಹಿಂದ್ ಸ್ವರಾಜ್’ ಎಂಬ ಸಣ್ಣ ಪುಸ್ತಿಕೆ. ಗಾಂಧೀಜಿಯ ಶಬ್ದಗಳಲ್ಲೇ ಹೇಳುವುದಾದರೆ ‘ಈ ಪುಸ್ತಕ ಆಧುನಿಕ ನಾಗರಿಕತೆಯ ತೀವ್ರ ಹೀಗಳೆಯುವಿಕೆ’ಯಾಗಿದೆ. ‘ಭಾರತ ಬ್ರಿಟಿಷರಿಂದ ದಬ್ಬಾಳಿಕೆಗೊಳಗಾಗಿಲ್ಲ, ಆಧುನಿಕ ನಾಗರಿಕತೆಯಿಂದ ದಬ್ಬಾಳಿಕೆಗೊಳಗಾಗಿದೆ’ ಎಂದು ಗಾಂಧಿ ವಾದಿಸುತ್ತಾರೆ. ನಿಜವಾದ ನಗರಿಕತೆ ಮನುಷ್ಯ ಕರ್ತವ್ಯಾಭಿಮುಖವಾಗಿರಬೇಕೆಂದು ಸೂಚಿಸುತ್ತದೆ. ಕರ್ತವ್ಯ ನಿರವಹಣೆ ಮತ್ತು ನೈತಿಕ ಪರಿಪಾಲನೆ ಪರಸ್ಪರ ಹೊಂದುವಂತಹವುಗಳು. ನೈತಿಕತೆಯ ಪರಿಪಾಲನೆ ಎಂದರೆ ನಮ್ಮ ಮನಸ್ಸು ಮತ್ತು ಆಸೆಗಳ ಮೇಲೆ ನಿಯಂತ್ರಣ ಹೊಂದುವುದೇ ಆಗಿದೆ. ಇದಕ್ಕೆ ಬದಲಾಗಿ ಆಧುನಿಕ ನಾಗರಿಕತೆ ‘ಸಾಮರ್ಥ್ಯವೇ ಸರ್ವಸ್ವ’ ಎಂಬ ತತ್ತ್ವದ ಮೇಲೆ ನಿಂತಿದೆ. ಹೀಗಾಗಿ ವಸಾಹತುಶಾಹಿ, ಅಮೆರಿಕದ ಅಷ್ಟೂ ಬುಡಕಟ್ಟು ಜನಾಂಗದವರ ನಿರ್ನಾಮ ನಡೆಸುತ್ತಿದೆ.
ಗಾಂಧಿ ಪ್ರತಿಗಾಮಿ ಎಂಬ ಟೀಕೆಗಳು ಬಂದವು. ಇದಕ್ಕೆ ಪ್ರತಿಯಾಗಿ ಗಾಂಧಿ ಯಾಂತ್ರಿಕತೆಯನ್ನು ಹೋಗಲಾಡಿಸುವ, ಮಾನವ ಕ್ರಿಯಾತ್ಮಕತೆಯನ್ನು ಹೆಚ್ಚಿಸುವ ಯಾವುದೇ ಪ್ರಯತ್ನಗಳ ಪರವಾಗಿದ್ದರು. ಯಂತ್ರಗಳು ವ್ಯಕ್ತಿಯ ವೈಯಕ್ತಿಕತೆಯನ್ನು ಆಕ್ರಮಿಸಿದಾಗ ವ್ಯಕ್ತಿಯ ಸ್ನಾಯುಗಳನ್ನು ದುರ್ಬಲಗೊಳಿಸಿದಾಗ ಸಮಸ್ಯೆ ಉದ್ಭವಿಸುತ್ತದೆ. ಗಾಂಧಿಯವರ ಪ್ರಕಾರ, ಮನುಷ್ಯನ ದೇಹದ ಹಾಗೆ ಯಂತ್ರವು ಕೂಡಾ ಆತ್ಮೋನ್ನತಿಗೆ ಮಾತ್ರ ಉಪಯುಕ್ತ. ಜೀವನಾವಶ್ಯಕ ವಸ್ತುಗಳ ಕೊರತೆ, ಪೋಷಕಾಂಶಗಳ ಕೊರತೆಗಿಂತ ಹೆಚ್ಚಾಗಿ ಈ ಬೆಳವಣಿಗೆಗೆ ಮಾರಕವಾಗುವ ಅಮ್ಶಗಳು ಬೇರಿಲ್ಲ.
ಕಾರ್ಖಾನೆಗಳು ವ್ಯಕ್ತಿಯನ್ನು ಯಾಂತ್ರಿಕ ಕೆಲಸಗಳ ದಾಸರನ್ನಾಗಿ ಮಾಡುವ ಮತ್ತು ಮಿಲಿಯಗಟ್ಟಲೆ ಜನರಿಗೆ ಬದುಕಿನ ದಾರಿ ಮುಚ್ಚುವ ಉತ್ಪಾದನಾ ಕೇಂದ್ರಗಳು ಎಂದು ಆರ್ಥಿಕ ಸಂಸ್ಥೆಗಳಿಗೆ ಸವಾಲೊಡ್ಡಿದರು. ಇದೇ ರೀತಿಯ ಕಾಳಜಿಯನ್ನು ಇನ್ನೊಬ್ಬ ಸೃಜನಶೀಲ ದೈತ್ಯ ಚಾರ್ಲಿ ಚಾಪ್ಲಿನ್ ನಲ್ಲೂ ಗುರುತಿಸಬಹುದು. ೧೯೩೧ರಲ್ಲಿ ಲಂಡನ್ನಿನಲ್ಲಿ ಇವರಿಬ್ಬರೂ ಒಬ್ಬರನ್ನೊಬ್ಬರು ಪರಿಚಯಿಸಿಕೊಂಡದ್ದು. ಆ ಬಳಿಕ ಬಂದ ಚಾಪ್ಲಿನ್ ನ ‘ಮಾಡರ್ನ್ ಟೈಮ್ಸ್’ ಚಿತ್ರ ಯಂತ್ರಗಳ ಮೇಲೆ ಅವಲಂಬಿತವಾದ ಸಮಾಜದ ಅಸಂಗತತೆ ಮತ್ತು ಘೋರತೆಯನ್ನು ತೆರೆದಿಡುತ್ತದೆ.
ಗಾಂಧೀಜಿಯವರ ಸಲಹೆಗಾರ ಗೋಪಾಲ ಕೃಷ್ಣ ಗೋಖಲೆ ‘ಹಿಂದ್ ಸ್ವರಾಜ್’ನ್ನು “ಸರಳೀಕೃತ ಮತ್ತು ಅವಸರದಿಂದ ತೆಗೆದುಕೊಂಡ ನಿರ್ಧಾರ” ಎಂದು ನಿರಾಕರಿಸಿದರು.
೧೯೧೫ರಲ್ಲಿ ಗಾಂಧೀಜಿ ಭಾರತದಲ್ಲಿಯೇ ನೆಲೆಸುವ ಉದ್ದೇಶದಿಂದ ಮರಳಿದಾಗ ಗೋಖಲೆ ವರ್ಷವಿಡೀ ಪ್ರವಾಸ ಮಾಡುತ್ತಾ, ಗಮನಿಸುತ್ತಾ ಕಲಿಯುವಂತೆ ಗಾಂಧೀಜಿಗೆ ಆಗ್ರಹಿಸಿದರು. ಇದು ಹಿಂದ್ ಸ್ವರಾಜ್ ನಲ್ಲಿ ವ್ಯಕ್ತವಾದ ಗಾಂಧೀಜಿಯ ದೃಷ್ಟಿಕೋನವನ್ನು ಬದಲಿಸುತ್ತದೆ ಎಂದವರು ಬಲವಾಗಿ ನಂಬಿದ್ದರು. ಆದರೆ ಗಾಂಧೀಜಿಯ ಭಾರತ ಯಾತ್ರೆಯ ಅನುಭವ ಗೋಖಲೆಯ ನಂಬಿಕೆಗೆ ತದ್ವಿರುದ್ಧವಾಗಿತ್ತು.
ಆ ಸಮಯದಲ್ಲಿ ವಿವೇಕರಹಿತ ಕೈಗಾರಿಕೀಕರಣ ಮತ್ತು ವ್ಯಾಪಾರೀ ಸ್ಪರ್ಧೆಗಳು ಮೊದಲನೆ ಮಹಾಯುದ್ಧದ ಅಮಾನುಷ ಹಿಂಸೆಯಲ್ಲಿ ಕೊನೆಗೊಂಡಿದ್ದವು. ಬಳಿಕ ಎರಡನೆ ಮಹಾಯುದ್ಧ ಮತ್ತು ಹಿರೊಷಿಮಾ ನಾಗಸಾಕಿಗಳ ಪರಮಾಣು ದುರಂತ ಆಧುನಿಕ ಪಾಶ್ಚಿಮಾತ್ಯ ನಾಗರಿಕತೆಯ ಮೂಲಕ ಗಾಂಧಿಯವರ ಟೀಕೆಗೆ ಸಮರ್ಥನೆ ಒದಗಿಸಿದವು. ಹೀಗಾಗಿ, ಹಿಂದ್ ಸ್ವರಾಜ್ ನಿಜ ಅರ್ಥದಲ್ಲಿ ವಿಶ್ವ ಸ್ವರಾಜ್. ಇದರ ಕಾಳಜಿ ಭಾರತಕ್ಕೆ ಸೀಮಿತವಾಗಿರದೇ ಇಡೀ ಮನುಕುಲವನ್ನು ಆವರಿಸುವಂಥದ್ದು.
೧೯೪೭ರಲ್ಲಿ ಸ್ವಾತಂತ್ರ್ಯ ದೊರೆತ ಸಂದರ್ಭದಲ್ಲಿ ‘ಹಿಂದ್ ಸ್ವರಾಜ್’ ಬರೆದ ೪೦ ವರ್ಷಗಳ ಬಳಿಕ ಗಾಂಧಿ ಜವಹರ್ ಲಾಲ್ ನೆಹರೂಗೆ ಬರೆಯುತ್ತಾರೆ:
‘ಭಾರತ ಮತ್ತು ಭಾರತದ ಮೂಲಕ ಜಗತ್ತು ನಿಜವಾಗಿ ಸ್ವತಂತ್ರವಾಗಬೇಕಾದರೆ ನಾವು ಇನ್ನು ಮುಂದಾದರೂ ಗ್ರಾಮಗಳಲ್ಲಿ ವಾಸ ಮಾಡಬೇಕು ಎಂದು ನಾನು ನಂಬುತ್ತೇನೆ. ನಾವು ಗುಡಿಸಲುಗಳಲ್ಲಿ ವಾಸಿಸಬೇಕು, ಅರಮನೆಗಳಲ್ಲಲ್ಲ. ಹಲವು ಕೋಟಿಗಳಷ್ಟು ಜನರು ನಗರಗಳಲ್ಲಿ ಸಂತೋಷದಿಂದ ಮತ್ತು ಶಾಂತಿಯಿಂದ ನೆಲೆಸಲಾರರು’.

ಗಾಂಧಿ ಜಯಂತಿಯಂದೇ ನಮಗೆ ಗಾಂಧೀಜಿಯ ನೆನಪಾಗಬೇಕೆಂದೇನೂ ಇರಲಿಲ್ಲ. ಕೊನೆಯ ಪಕ್ಷ ಈ ನೆವದಲ್ಲಾದರೂ ಪೂರ್ತಿಯಾಗಿ ಈ ಮಹಾತ್ಮನ ಧ್ಯಾನದಲ್ಲಿ ಕಳೆಯುವಂತಾಗಲೆಂಬ ಉದ್ದೇಶದಿಂದಲಷ್ಟೆ ಇವತ್ತು ಈ ಲೇಖನ.

‘ಬಾಪುಕುಟಿ’ ರಜನಿ ಭಕ್ಷಿಯವರು ಆಂಗ್ಲ ಭಾಷೆಯಲ್ಲಿ ಬರೆದ journeys in rediscovery of Gandhi ಕೃತಿಯ ಕನ್ನಡಾನುವಾದ. ಕೆ.ವೆಂಕಟರಾಜು ಇದರ ಅನುವಾದಕರು. ಅಭಿನವ ಪ್ರಕಾಶನ ಇದನ್ನು ‘ಶತಮಾನದ ಚಿಂತನೆ’ ಮಾಲೆಯಲ್ಲಿ ಪ್ರಕಟಿಸಿದೆ.  “ಬಾಪು ಕುಟಿ ಪ್ರಸ್ತುತ ಸಂದರ್ಭದಲ್ಲಿ ಬೇರೆಬೇರೆ ಚಳವಳಿಗಳಲ್ಲಿ ನಿರತರಾದ ಗಾಂಧಿವಾದಿಗಳೆಂದು ಕರೆದುಕೊಳ್ಳದೆ ಅವರ ಕೆಲಸಗಳ ಮೂಲಕ ಗಾಂಧಿಚಿಂತನೆಗಳಿಗೆ ನೆಲೆಯಾದವರ ಕಥನ” ಎಂದು ಕೃತಿಯ ಆರಂಭದಲ್ಲಿ ಹೇಳಲಾಗಿದೆ.

ಸಧ್ಯಕ್ಕೆ ಇಲ್ಲಿ ಬಾಪುಕುಟಿಯ ಮೊದಲನೆ ಅಧ್ಯಾಯದಿಂದ ಒಂದು ಭಾಗವನ್ನಾಯ್ದು ಇಲ್ಲಿ ನೀಡಿದ್ದೇನೆ. ನಾವು ಸಂಪೂರ್ಣವಾಗಿ ಓದಲೇಬೇಕಾದ ಕೃತಿ ಇದು. ಹಾಗೆಯೇ, ಗಾಂಧೀ ಚಿಂತನೆಗಳ ಕುರಿತು ಮಾತನಾಡುವಾಗ ‘ಹಿಂದ್ ಸ್ವರಾಜ್’ ಪ್ರಸ್ತಾಪ ಬಾರದೆ ಇರುವುದಿಲ್ಲ. ಈ ಪ್ರಸ್ತಾಪದೊಡನೆ ಒಂದು ಮಾಹಿತಿ- ಈ ಬಾರಿಯ ಸಂಚಯ ಗಾಂಧಿ-ಹಿಂದ್ ಸ್ವರಾಜ್ ಕುರಿತು ಅತ್ಯುತ್ತಮ – ಸಂಗ್ರಹ ಯೋಗ್ಯ ಸಂಚಿಕೆಯನ್ನು ಹೊರತಂದಿದೆ ಎನ್ನುವುದು.

ಸೋಗೆಮನೆ

ಸೋಗೆಮನೆ

ಯುಗ ಪ್ರವರ್ತಕ ಗಾಂಧಿ

ದೇಹದ ಉಪಾಧಿಯಿಂದ ಬಿಡುಗಡೆ ಹೊಂದಿದ ಯುಗಪ್ರವರ್ತಕ ಗಾಂಧೀಜಿಯ ಅಸ್ತಿತ್ವ- ಕಾಲ ಮತ್ತು ಅವಕಾಶಗಳ ಸೋಪಾನದಲ್ಲಿ ಚಾಚಿಕೊಂಡಿದೆ. ಈ ‘ಇರವು’ ಯಾವುದು?

ನವದೆಹಲಿಯ ಬಿರ್ಲಾ ಹೌಸಿನಲ್ಲಿ ಗುಂಡಿಗೆ ಬಲಿಯಾದ ಗಾಂಧಿ ತನ್ನ ಅನುಯಾಯಿಗಳಿಗೆ ‘ಗಾಂಧೀವಾದ’ ಎಂಬುದು ತಲೆಯೆತ್ತಬಾರದೆಂದು ಹೇಳಿದ್ದರು. ಯಾವುದೇ ವರ್ಗ ಹುಟ್ಟುಹಾಕುವುದು ಅವರಿಗೆ ಹಿಡಿಸದ ವಿಷಯವಾಗಿತ್ತು. ‘ಯಾವುದೇ ತತ್ತ್ವ ಅಥವಾ ಸಿದ್ಧಾಂತವನ್ನು ನಾನು ಹುಟ್ಟುಹಾಕಿದೆ ಎಂದು ನಾನು ಹೇಳಲಾರೆ. ಶಾಶ್ವತ ಸತ್ಯಗಳನ್ನು ನಮ್ಮ ದಿನನಿತ್ಯದ ಬದುಕು ಮತ್ತು ಸಮಸ್ಯೆಗಳಿಗೆ ನನ್ನದೇ ಆದ ರೀತಿಯಲ್ಲಿ ಅನ್ವಯಿಸಲು ಪ್ರಯತ್ನಿಸಿದೆ’ ಎನ್ನುತ್ತಾರೆ ಗಾಂಧೀಜಿ.

ಐತಿಹಾಸಿಕ ಗಾಂಧಿ ಮಾನವಸಹಜ ದುರ್ಬಲ್ಯಗಳೊಂದಿಗೇ ವಿಶೇಷ ಸಾಮರ್ಥ್ಯಗಳನ್ನು ಹೊಂದಿದ್ದ ವ್ಯಕ್ತಿ. ಗಾಂಧೀಜಿ ಗಂಡನಾಗಿ ಮತ್ತು ತಂದೆಯಾಗಿ ವ್ಯವಹರಿಸಿದ ರೀತಿ ಟೀಕೆಗೆ ಗುರಿಯಾಗಿದೆ. ಬ್ರಿಟಿಷರೊಂದಿಗಿನ ಮಾತುಕತೆ ಅಥವಾ ಪಾಕಿಸ್ತಾನದ ಉದಯ ಸಂದರ್ಭಗಳಲ್ಲಿನ ಇವರ ರಾಜಕೀಯ ನಿಲುವುಗಳು ಪ್ರಶ್ನಿಸಲ್ಪಟ್ಟಿವೆ. ಈ ಗಾಂಧಿ ಕೇವಲ ಶೈಕ್ಷಣಿಕ ಮತ್ತು ಐತಿಹಾಸಿಕ ಆಸಕ್ತಿಯ ಕೇಂದ್ರ ಮಾತ್ರ.

ಮಾನವ ನಾಗರಿಕತೆಯಲ್ಲಿನ ವಿಕಾಸದ ದೊಡ್ಡ ನೆಗೆತಕ್ಕೆ ಕಾರಣವಾದ ಗಾಂಧೀಜಿಯ ಕನಸು ಮತ್ತು ತುಡಿತಗಳು ಬಾಪುಕುಟಿಯ ಚೇತನವಾಗಿ ರಿಂಗಣಿಸುತ್ತವೆ. ಈ ಆಶಯ ಕೇವಲ ತನ್ನದು ಮಾತ್ರವಲ್ಲ ಎಂದು ತಿಳಿಸಲು ಗಾಂಧೀಜಿ ಶ್ರಮಿಸಿದ್ದರು.

ಸರ್ವರಿಗೂ ಸಮೃದ್ಧಿ ಮತ್ತು ನ್ಯಾಯ ದೊರೆಯುವ ಕಾಣ್ಕೆ ಹೊಂದಿದ ನಾಡನ್ನು ರಾಮರಾಜ್ಯವೆಂದು ಕರೆಯಲಾಗುತ್ತಿತ್ತು. ವ್ಯಕ್ತಿಯ ಉನ್ನತಿ ಮತ್ತು ಸರ್ವರ ಅಭ್ಯುದಯಕ್ಕೆ ಸಮರ್ಪಕ ಜೀವನಂಶದ ಒದಗಿಸುವಿಕೆಯೇ ಅತ್ಯಗತ್ಯವಾದ ಅಂಶವೆಂದು ಗೌತಮ ಬುದ್ಧ ಪ್ರತಿಪಾದಿಸಿದ್ದ. ೧೯ನೆಯ ಶತಮಾನದಲ್ಲಿ ಅಮೆರಿಕನ್ ಕವಿ ಹೆನ್ರಿ ಡಿ ಥೋರೋ ಗುಲಾಮಿ ಪದ್ಧತಿಯನ್ನು ಉಳಿಸಿಕೊಂಡಿರುವ ಸ್ವತಂತ್ರ ಅಮೆರಿಕಾದ ಡಂಬಾಚಾರವನ್ನು ಪ್ರತಿಭಟಿಸಿ ಜೈಲಿಗೆ ತೆರಳಿದ್ದರು. ದೈಹ್ಕ ಶ್ರಮದ ಗೌರವವನ್ನು ಎತ್ತಿಹಿಡಿದು ಸರಳ ಬದುಕನ್ನು ಪ್ರತಿಪಾದಿಸಿದ ಜಾನ್ ರಸ್ಕಿನ್, ಮನುಷ್ಯನನ್ನು ದುರ್ಬಲಗೊಳಿಸುವ ಆಧುನಿಕ ಅರ್ಥ ವ್ಯವಸ್ಥೆಯ ಸಂಕೀರ್ಣತೆಗಳನ್ನು ಟೀಕಿಸಿದರು. ರಷ್ಯಾದಲ್ಲಿ ಕೌಂಟ್ ಲಿಯೋ ಟಾಲ್ಸ್ ಟಾಯ್ ಶ್ರೀಮಂತ ಬದುಕಿಂದ ದೂರವಿದ್ದು, ದೈಹಿಕ ಶ್ರಮ, ಕನಿಷ್ಠ ಅವಶ್ಯಕತೆ ಮತ್ತು ಅಹಿಂಸೆಗಳನ್ನು ಎತ್ತಿಹಿಡಿಯುವ ಬದುಕಿಗೆ ಆತುಕೊಂಡರು.

ಯುವಕ ಎಂ.ಕೆ.ಗಾಂಧಿ ಅರಳಿಕೊಳ್ಳುವಲ್ಲಿ ಇವೆಲ್ಲ ಪ್ರಬಲ ಸ್ಫೂರ್ತಿಗಳಾದವು. ಮೂಲತಃ ಗಾಂಧಿಯಲ್ಲಿದ್ದ ನ್ಯಾಯಯುತ ಸಮಾಜಕ್ಕಾಗಿ ತುಡಿಯುವ ಮನಸಿಗೆ ಇವು ದಿಕ್ಕು ದೆಸೆಗಳನ್ನು ನೀಡಿದವು. ಇವು ಆಧುನಿಕ ಕೈಗಾರಿಕಾ ನಾಗರಿಕತೆಯ ಲೋಪದೋಷಗಳು ಮತ್ತು ಅದರ ಮೂಲದಲ್ಲೇ ಹುದುಗಿರುವ ಹಿಂಸೆಯ ಕುರಿತು ಗಾಂಧಿ ಒಂದು ದೃಷ್ಟಿ ಹೊಂದಲು ಕಾರಣವಾದವು. ಹೀಗಾಗಿ ೧೮೯೦ರ ಪ್ಯಾರಿಸ್ ವಸ್ತುಪ್ರದರ್ಶನಕ್ಕೆ ಗಾಂಧಿ ಹೋದಾಗ ಅಲ್ಲಿ ಇಡಲಾದ ಮನ ಸೆಳೆಯುವ ವಸ್ತುಗಳಾಗಲೀ ಸಂಶೋಧನೆಗಳಾಗಲೀ ಅವರನ್ನು ಆಕರ್ಷಿಸಲಿಲ್ಲ. ‘ಐಫೆಲ್ ನ ಗೋಪುರ ಮಾನವನ ಅವಿವೇಕದ ಸ್ಮಾರಕ’ ಎಂಬ ಲಿಯೋ ಟಾಲ್ಸ್ ಟಾಯನ ಮಾತು ಸಂಪೂರ್ಣ ನಿಜವೆಂದು ಅವರಿಗೆ ಕಂಡಿತು. ಈ ಗೋಪುರ ನಾವೆಲ್ಲರೂ ಆಡಂಬರದತ್ತ ಆಕರ್ಷಿತರಾಗುವ ಮಕ್ಕಳು ಎಂಬುದಕ್ಕೆ ಉತ್ತಮ ಉದಾಹರಣೆ ಎನಿಸಿತು.

ಗಾಂಧಿ ಇಂತಹ ಆಡಂಬರಕ್ಕೆ ಬೆನ್ನು ತಿರುಗಿಸಿ, ಪೂರ್ಣತೆಯ ಬದುಕಿನ ಹಾದಿಯ ಅನ್ವೇಷಣೆಗೆ ತೊಡಗಿದರು. ಮಾನವ ನಾಗರಿಕತೆಯ ವಿಕೃತಿಯನ್ನು ಗುಣಪಡಿಸುವ ಮಾರ್ಗೋಪಾಯಗಳ ಕಡೆಗೆ ಇದು ಅವರನ್ನು ಕರೆತಂದಿತು. ಈ ವಿಭಿನ್ನ ಕಾಣ್ಕೆಗಳು ೧೯೦೮ರ ಹೊತ್ತಿಗಾಗಲೇ ಒಂದು ಆಕಾರ ಪಡೆಯತೊಡಗಿದವು. ಆಗ ಗಾಂಧೀಜಿಗೆ ೪೦ ವರ್ಷ.

ಆ ವರ್ಷ ಗಾಂಧಿ ಲಂಡನ್ನಿನ ಪ್ರತಿಯೊಬ್ಬ ಭಾರತೀಯ ಕ್ರಾಂತಿಕಾರಿಯೊಟ್ಟಿಗೂ ಸಂವಾದ ನಡೆಸುತ್ತಾ ಒಂದು ತಿಂಗಳು ಕಳೆದರು. ಅವರ ಧೈರ್ಯ ಗಾಂಧೀಜಿಯನ್ನು ಪ್ರಭಾವಿಸಿತು;ಆದರೆ ತತ್ತ್ವಗಳಲ್ಲ. ಭಾರತ ಚೇತರಿಸಿಕೊಳ್ಳಲು ಹಿಂಸೆ ಔಷಧವಲ್ಲ, ಭಾರತೀಯ ಸಂಸ್ಕೃತಿ ತನ್ನ ರಕ್ಷಣೆಗಾಗಿ ಭಿನ್ನವಾದ, ಶ್ರೇಷ್ಟವಾದ ಅಸ್ತ್ರವೊಂದನ್ನು ಬಯಸುತ್ತದೆ ಎಂಬುದು ಅವರಿಗೆ ಖಚಿತವಾಗಿತ್ತು. ದಕ್ಷಿಣ ಆಫ್ರಿಕಾಕ್ಕೆ ಹಡಗಿನಲ್ಲಿ ತೆರಳುತ್ತಿದ್ದಂತೆಯೇ ಈ ಸುದೀರ್ಘ ಯಾತ್ರೆಯ ದಿನಗಳನ್ನು ಈ ಉನ್ನತ ಅಸ್ತ್ರ ಹೇಗಿರಬೇಕೆನ್ನುವ ಕುರಿತು ತಮ್ಮ ಚಿಂತನೆಗಳನ್ನು ಬರೆಯುತ್ತ ಕಳೆದರು. ಸವಾಲೊಡ್ಡಲು ಮತ್ತು ಪ್ರತಿ ಸವಾಲೊಡ್ಡಲು ಇವರು ಪ್ರಾಚೀನ ಸಂವಾದದ ಮಾದರಿಯನ್ನು ಬಳಸಿದರು.

ಇದರ ಫಲಶ್ರುತಿಯೇ ‘ಹಿಂದ್ ಸ್ವರಾಜ್’ ಎಂಬ ಸಣ್ಣ ಪುಸ್ತಿಕೆ. ಗಾಂಧೀಜಿಯ ಶಬ್ದಗಳಲ್ಲೇ ಹೇಳುವುದಾದರೆ ‘ಈ ಪುಸ್ತಕ ಆಧುನಿಕ ನಾಗರಿಕತೆಯ ತೀವ್ರ ಹೀಗಳೆಯುವಿಕೆ’ಯಾಗಿದೆ. ‘ಭಾರತ ಬ್ರಿಟಿಷರಿಂದ ದಬ್ಬಾಳಿಕೆಗೊಳಗಾಗಿಲ್ಲ, ಆಧುನಿಕ ನಾಗರಿಕತೆಯಿಂದ ದಬ್ಬಾಳಿಕೆಗೊಳಗಾಗಿದೆ’ ಎಂದು ಗಾಂಧಿ ವಾದಿಸುತ್ತಾರೆ. ನಿಜವಾದ ನಗರಿಕತೆ ಮನುಷ್ಯ ಕರ್ತವ್ಯಾಭಿಮುಖವಾಗಿರಬೇಕೆಂದು ಸೂಚಿಸುತ್ತದೆ. ಕರ್ತವ್ಯ ನಿರವಹಣೆ ಮತ್ತು ನೈತಿಕ ಪರಿಪಾಲನೆ ಪರಸ್ಪರ ಹೊಂದುವಂತಹವುಗಳು. ನೈತಿಕತೆಯ ಪರಿಪಾಲನೆ ಎಂದರೆ ನಮ್ಮ ಮನಸ್ಸು ಮತ್ತು ಆಸೆಗಳ ಮೇಲೆ ನಿಯಂತ್ರಣ ಹೊಂದುವುದೇ ಆಗಿದೆ. ಇದಕ್ಕೆ ಬದಲಾಗಿ ಆಧುನಿಕ ನಾಗರಿಕತೆ ‘ಸಾಮರ್ಥ್ಯವೇ ಸರ್ವಸ್ವ’ ಎಂಬ ತತ್ತ್ವದ ಮೇಲೆ ನಿಂತಿದೆ. ಹೀಗಾಗಿ ವಸಾಹತುಶಾಹಿ, ಅಮೆರಿಕದ ಅಷ್ಟೂ ಬುಡಕಟ್ಟು ಜನಾಂಗದವರ ನಿರ್ನಾಮ ನಡೆಸುತ್ತಿದೆ.

ಗಾಂಧಿ ಪ್ರತಿಗಾಮಿ ಎಂಬ ಟೀಕೆಗಳು ಬಂದವು. ಇದಕ್ಕೆ ಪ್ರತಿಯಾಗಿ ಗಾಂಧಿ ಯಾಂತ್ರಿಕತೆಯನ್ನು ಹೋಗಲಾಡಿಸುವ, ಮಾನವ ಕ್ರಿಯಾತ್ಮಕತೆಯನ್ನು ಹೆಚ್ಚಿಸುವ ಯಾವುದೇ ಪ್ರಯತ್ನಗಳ ಪರವಾಗಿದ್ದರು. ಯಂತ್ರಗಳು ವ್ಯಕ್ತಿಯ ವೈಯಕ್ತಿಕತೆಯನ್ನು ಆಕ್ರಮಿಸಿದಾಗ ವ್ಯಕ್ತಿಯ ಸ್ನಾಯುಗಳನ್ನು ದುರ್ಬಲಗೊಳಿಸಿದಾಗ ಸಮಸ್ಯೆ ಉದ್ಭವಿಸುತ್ತದೆ. ಗಾಂಧಿಯವರ ಪ್ರಕಾರ, ಮನುಷ್ಯನ ದೇಹದ ಹಾಗೆ ಯಂತ್ರವು ಕೂಡಾ ಆತ್ಮೋನ್ನತಿಗೆ ಮಾತ್ರ ಉಪಯುಕ್ತ. ಜೀವನಾವಶ್ಯಕ ವಸ್ತುಗಳ ಕೊರತೆ, ಪೋಷಕಾಂಶಗಳ ಕೊರತೆಗಿಂತ ಹೆಚ್ಚಾಗಿ ಈ ಬೆಳವಣಿಗೆಗೆ ಮಾರಕವಾಗುವ ಅಂಶಗಳು ಬೇರಿಲ್ಲ.

ಕಾರ್ಖಾನೆಗಳು ವ್ಯಕ್ತಿಯನ್ನು ಯಾಂತ್ರಿಕ ಕೆಲಸಗಳ ದಾಸರನ್ನಾಗಿ ಮಾಡುವ ಮತ್ತು ಮಿಲಿಯಗಟ್ಟಲೆ ಜನರಿಗೆ ಬದುಕಿನ ದಾರಿ ಮುಚ್ಚುವ ಉತ್ಪಾದನಾ ಕೇಂದ್ರಗಳು ಎಂದು ಆರ್ಥಿಕ ಸಂಸ್ಥೆಗಳಿಗೆ ಸವಾಲೊಡ್ಡಿದರು. ಇದೇ ರೀತಿಯ ಕಾಳಜಿಯನ್ನು ಇನ್ನೊಬ್ಬ ಸೃಜನಶೀಲ ದೈತ್ಯ ಚಾರ್ಲಿ ಚಾಪ್ಲಿನ್ ನಲ್ಲೂ ಗುರುತಿಸಬಹುದು. ೧೯೩೧ರಲ್ಲಿ ಲಂಡನ್ನಿನಲ್ಲಿ ಇವರಿಬ್ಬರೂ ಒಬ್ಬರನ್ನೊಬ್ಬರು ಪರಿಚಯಿಸಿಕೊಂಡದ್ದು. ಆ ಬಳಿಕ ಬಂದ ಚಾಪ್ಲಿನ್ ನ ‘ಮಾಡರ್ನ್ ಟೈಮ್ಸ್’ ಚಿತ್ರ ಯಂತ್ರಗಳ ಮೇಲೆ ಅವಲಂಬಿತವಾದ ಸಮಾಜದ ಅಸಂಗತತೆ ಮತ್ತು ಘೋರತೆಯನ್ನು ತೆರೆದಿಡುತ್ತದೆ.

ಗಾಂಧೀಜಿಯವರ ಸಲಹೆಗಾರ ಗೋಪಾಲ ಕೃಷ್ಣ ಗೋಖಲೆ ‘ಹಿಂದ್ ಸ್ವರಾಜ್’ನ್ನು “ಸರಳೀಕೃತ ಮತ್ತು ಅವಸರದಿಂದ ತೆಗೆದುಕೊಂಡ ನಿರ್ಧಾರ” ಎಂದು ನಿರಾಕರಿಸಿದರು.

೧೯೧೫ರಲ್ಲಿ ಗಾಂಧೀಜಿ ಭಾರತದಲ್ಲಿಯೇ ನೆಲೆಸುವ ಉದ್ದೇಶದಿಂದ ಮರಳಿದಾಗ ಗೋಖಲೆ ವರ್ಷವಿಡೀ ಪ್ರವಾಸ ಮಾಡುತ್ತಾ, ಗಮನಿಸುತ್ತಾ ಕಲಿಯುವಂತೆ ಗಾಂಧೀಜಿಗೆ ಆಗ್ರಹಿಸಿದರು. ಇದು ಹಿಂದ್ ಸ್ವರಾಜ್ ನಲ್ಲಿ ವ್ಯಕ್ತವಾದ ಗಾಂಧೀಜಿಯ ದೃಷ್ಟಿಕೋನವನ್ನು ಬದಲಿಸುತ್ತದೆ ಎಂದವರು ಬಲವಾಗಿ ನಂಬಿದ್ದರು. ಆದರೆ ಗಾಂಧೀಜಿಯ ಭಾರತ ಯಾತ್ರೆಯ ಅನುಭವ ಗೋಖಲೆಯ ನಂಬಿಕೆಗೆ ತದ್ವಿರುದ್ಧವಾಗಿತ್ತು.

ಆ ಸಮಯದಲ್ಲಿ ವಿವೇಕರಹಿತ ಕೈಗಾರಿಕೀಕರಣ ಮತ್ತು ವ್ಯಾಪಾರೀ ಸ್ಪರ್ಧೆಗಳು ಮೊದಲನೆ ಮಹಾಯುದ್ಧದ ಅಮಾನುಷ ಹಿಂಸೆಯಲ್ಲಿ ಕೊನೆಗೊಂಡಿದ್ದವು. ಬಳಿಕ ಎರಡನೆ ಮಹಾಯುದ್ಧ ಮತ್ತು ಹಿರೊಷಿಮಾ ನಾಗಸಾಕಿಗಳ ಪರಮಾಣು ದುರಂತ ಆಧುನಿಕ ಪಾಶ್ಚಿಮಾತ್ಯ ನಾಗರಿಕತೆಯ ಮೂಲಕ ಗಾಂಧಿಯವರ ಟೀಕೆಗೆ ಸಮರ್ಥನೆ ಒದಗಿಸಿದವು. ಹೀಗಾಗಿ, ಹಿಂದ್ ಸ್ವರಾಜ್ ನಿಜ ಅರ್ಥದಲ್ಲಿ ವಿಶ್ವ ಸ್ವರಾಜ್. ಇದರ ಕಾಳಜಿ ಭಾರತಕ್ಕೆ ಸೀಮಿತವಾಗಿರದೇ ಇಡೀ ಮನುಕುಲವನ್ನು ಆವರಿಸುವಂಥದ್ದು.

೧೯೪೭ರಲ್ಲಿ ಸ್ವಾತಂತ್ರ್ಯ ದೊರೆತ ಸಂದರ್ಭದಲ್ಲಿ ‘ಹಿಂದ್ ಸ್ವರಾಜ್’ ಬರೆದ ೪೦ ವರ್ಷಗಳ ಬಳಿಕ ಗಾಂಧಿ ಜವಹರ್ ಲಾಲ್ ನೆಹರೂಗೆ ಬರೆಯುತ್ತಾರೆ:

‘ಭಾರತ ಮತ್ತು ಭಾರತದ ಮೂಲಕ ಜಗತ್ತು ನಿಜವಾಗಿ ಸ್ವತಂತ್ರವಾಗಬೇಕಾದರೆ ನಾವು ಇನ್ನು ಮುಂದಾದರೂ ಗ್ರಾಮಗಳಲ್ಲಿ ವಾಸ ಮಾಡಬೇಕು ಎಂದು ನಾನು ನಂಬುತ್ತೇನೆ. ನಾವು ಗುಡಿಸಲುಗಳಲ್ಲಿ ವಾಸಿಸಬೇಕು, ಅರಮನೆಗಳಲ್ಲಲ್ಲ. ಹಲವು ಕೋಟಿಗಳಷ್ಟು ಜನರು ನಗರಗಳಲ್ಲಿ ಸಂತೋಷದಿಂದ ಮತ್ತು ಶಾಂತಿಯಿಂದ ನೆಲೆಸಲಾರರು’.

“ನನ್ನ ಪೀಳಿಗೆಯವರ ಕೃತಿಗಳೇ ಉತ್ತರಿಸುತ್ತವೆ.” – ಆನಂದ ಋಗ್ವೇದಿ

ಈಗ ಬರೆಯುತ್ತಿರುವ ಹೊಸ ತಲೆಮಾರಿನ ಯುವಕ ಯುವತಿಯರ ತಲೆಯಲ್ಲಿ ನೂರೆಂಟು ಪ್ರಶ್ನೆಗಳು. ಕನ್ನಡ ಸಾಹಿತ್ಯದ ಬೆಳವಣಿಗೆಗೆ ಚಳುವಳಿಗಳ ಅವಶ್ಯಕತೆ ನಿಜವಾಗಿ ಇದೆಯೆ? ಹಾಗಿದ್ದರೆ ನಾವು ಅಂತಹ ಯಾವುದೇ ಚಳುವಳಿಯ ಭಾಗವಾಗಿಲ್ಲವಲ್ಲ? ನಮ್ಮ ಬರವಣಿಗೆಯನ್ನು ವಿಶ್ಲೇಷಿಸುವವರಿಗಿಂತ ತೆಗಳುವವರೆ ಹೆಚ್ಚಾಗಿದ್ದಾರಲ್ಲ? ವಿಮರ್ಶೆ ಅನ್ನುವದು ಬರೆ ಅಕಡೆಮಿಕ್ ಬರಹಸಂಸ್ಕೃತಿಯ ಭಾಗವಾಗಿ ಉಳಿದುಕೊಂಡಿದೆಯೆ? ನಾವು ಬರಬರುತ್ತ ಸಂಕೀರ್ಣವಾಗುತ್ತಿದ್ದೇವೆಯೆ ಅಥವಾ ಸತ್ವರಹಿತ ಸಾಹಿತ್ಯವನ್ನು ಬೇರೆಬೇರೆ ರೀತಿಗಳಲ್ಲಿ ಉಣಬಡಿಸುವುದರಲ್ಲಿಯೆ ಕಾಲಹರಣ ಮಾಡುತ್ತಿದ್ದೇವೆಯೆ? ಹೋಗಲಿ, ನಾವು ಬರೆಯಲು ಶುರುಮಾಡಿದ್ದಾದರು ಏಕೆ? ನಮಗೋಸ್ಕರವೆ? ಇನ್ಯಾವುದೋ ಪ್ರಭಾವದಿಂದಲೆ? ನಾವು ಗೆಳೆಯರು ಒಂದೆಡೆ ಸೇರಿದಾಗ ಇಂತಹ ಪ್ರಶ್ನೆಗಳನ್ನೆತ್ತಿಕೊಂಡು ಸುಮಾರುಸಾರಿ ಚರ್ಚೆ ಮಾಡಿದ್ದಿದೆ. ಪ್ರೊ.ರಹಮತ್ ತರೀಕೆರೆಯವರು ಸಂಪಾದಿಸಿರುವ ‘ಹೊಸ ತಲೆಮಾರಿನ ತಲ್ಲಣ‘ ಇಂತಹ ಅನೇಕ ಪ್ರಶ್ನೆಗಳನ್ನು ಹೊಸ ತಲೆಮಾರಿನ ಬರಹಗಾರರಿಗೆ ಒಡ್ಡಿ ಅವರಿಂದಲೇ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡಿರುವ ಪುಸ್ತಕ. ಆತ್ಮೀಯ ಗೆಳೆಯ ಹಾಗೂ ನಮ್ಮ ಪೀಳಿಗೆಯ ಲೇಖಕ ಡಾ.ಆನಂದ ಋಗ್ವೇದಿ ಈ ಕಾಲಘಟ್ಟದ ಸಾಹಿತ್ಯದ ಬಗ್ಗೆ ಹೊಂದಿರುವ ಅಭಿಪ್ರಾಯಗಳು ಈ ಕೆಳಗಿನ ಲೇಖನದಲ್ಲಿ ಇವೆ. ನಿಮ್ಮ ಅಭಿಪ್ರಾಯಗಳನ್ನೂ ನಮಗೆ ಈ ಲೇಖನಕ್ಕೆಂದೇ ತೆರೆಯಲಾಗಿರುವ ಕಮೆಂಟ್ ಬಾಕ್ಸಿನ ಮೂಲಕ ತಲುಪಿಸಿ.

Abstract-Paintings-Modern-001-[1]

ನನ್ನ ಪೀಳಿಗೆಯವರ ಕೃತಿಗಳೇ ಉತ್ತರಿಸುತ್ತವೆ.

ಕನ್ನಡ ಸಾಹಿತ್ಯದಲ್ಲಿ ಯುವ ಪೀಳಿಗೆಯ ನಮ್ಮ ಸಂದರ್ಭದಲ್ಲಿ ಯಾವುದೇ ಚಳುವಳಿಗಳ, ಸಾಹಿತ್ಯಿಕ ಪಂಥದ ಪ್ರಭಾವ ಮತ್ತು ತುರ್ತು ಇಲ್ಲವೆಂಬುದೇನೋ ನಿಜವೇ. ನಾನೂ ಬರಹಕ್ಕೆ ಶುರುವಿಟ್ಟ ದಿನಗಳಲ್ಲಿ ಈ ಭಾವವೊಂದು ಕೊರತೆಯಂತೆಯೇ ಭಾಸವಾಗಿದ್ದಿದೆ. ಆದರೆ ವೈಯುಕ್ತಿಕವಾಗಿ ಮತ್ತು ಸಮಕಾಲೀನ ಸೃಜನಶೀಲ ಗೆಳೆಯರ ನಡುವೆ ಅದೊಂದು ನಿರಾಶಾದಾಯಕವಾದ, ಗೊಂದಲಮಯವಾದ ವಾತಾವರಣ ನಿರ್ಮಿಸಿದೆ ಎಂದು ಅನ್ನಿಸುತ್ತಿಲ್ಲ.

ಸೃಜನಶೀಲತೆ ತನ್ನ ಸಮಕಾಲೀನ ಸಾಮಾಜಿಕ ಸ್ವರೂಪದಲ್ಲೇ ತನ್ನ ತುರ್ತು ಮತ್ತು ಸವಾಲುಗಳನ್ನು ಕಂಡುಕೊಳ್ಳುತ್ತಿರುತ್ತದೆ. ಅದು ಎಂದಿಗೂ ಚಲನಶೀಲವಾದ ಪ್ರವಾಹವೇ. ಮೇಲ್ಮಟ್ಟದಲ್ಲಿ ನಿಂತಂತೆ ತೋರುವ, ತನ್ನ ಎಂದಿನ ರಭಸವನ್ನ ಕಳೆದುಕೊಂಡಿರುವಂತಹ ನೋಟಗಳೆಲ್ಲ ಅದರೊಳಗಿನ ಆಂತರಿಕ ಚಲನೆಯನ್ನು ಗುರುತಿಸದೇ ಹೋಗಿಬಿಡುವುದೇ ಹೆಚ್ಚು. ಪ್ರತಿಯೊಂದು ಕಾಲಘಟ್ಟದಲ್ಲಿ ಸೃಜನಶೀಲತೆ ಅಂತಹುದೊಂದು ನವೀನತೆಯನ್ನ, ತಿರುವನ್ನ ತಾನೇ ಶೋಧಿಸಿಕೊಂಡಿದೆ ಎಂದು ಭಾವಿಸುತ್ತೇನೆ. ಯಾವತ್ತೂ ಒಂದು ಸಮಕಾಲೀನ ಸಾಮಾಜಿಕತೆ ತನ್ನೊಳಗೆ ಅಂತರವನ್ನು ನಿವಾರಿಸುವ, ತನ್ನ ಪರಂಪರಾಗತ ಮತ್ತು ಸಾಂದರ್ಭಿಕ ಸವಾಲುಗಳನ್ನ ಎದುರಿಸುವ ಸಲುವಾಗಿ ಬಂಡೇಳುತ್ತಲೇ ಇರುತ್ತದೆ. ಇದೊಂದು ನಿರಂತರ ವಿದ್ಯಮಾನ, ಸದ್ಯದ ವರ್ತಮಾನ ಕೂಡ. ಅಂತಹುದೇ ವರ್ತಮಾನ ಆ ಸಮಕಾಲೀನತೆಗೆ ಸ್ಪಂದಿಸುವ ಸೃಜನಶೀಲತೆಗೂ ತಾನಾಗಿಯೇ ದಕ್ಕುತ್ತದೆ. ಅಂತಹ ವರ್ತಮಾನದಲ್ಲಿಯೇ ನನ್ನ ಪೀಳಿಗೆಯ ಗೆಳೆಯರು ಬರೆಯುತ್ತಿದ್ದೇವೆ ಎಂದು ಭಾವಿಸುವಾಗ, ಯುವ ಲೇಖಕರಿಗೆ ದಿಕ್ಕು ತೋಚುತ್ತಿಲ್ಲ ಎಂಬ ಮಾತುಗಳು ಕೇವಲ ನಿರಾಶಾವಾದಿಗಳ ಹೇಳಿಕೆ ಮಾತ್ರ.

ನಿಜ, ನಮ್ಮ ಈ ವರ್ತಮಾನ ತುಂಬಾ ಸಂಕೀರ್ಣವಾದುದು. ಈ ಹೊತ್ತು ನನ್ನ ಪೀಳಿಗೆ ತನ್ನ ಓದಿನಿಂದ ಗ್ರಹಿಕೆಗಳಿಂದ ಅನುಭವದಿಂದ ಅರ್ಜಿಸಿಕೊಂಡ ತಾತ್ವಿಕತೆ ಕೊಂಚ ಗೊಂದಲ ಸ್ವರೂಪದ್ದೇ. ಆಯಾಕಾಲದ ಪ್ರಭಾವ ಪರಿಸರಗಳ ತುರ್ತಿನಿಂದಾಗಿ ಪ್ರಾರಂಭವಾದ ಚಳುವಳಿಗಳು ತಮ್ಮ ಅಬ್ಬರವನ್ನ ಕಳೆದುಕೊಂಡು ‘ಸ್ಥಗಿತ’ಗೊಂಡಿವೆ ಎಂದು ಭಾಸವಾಗುತ್ತಿರುವ ಈ ಹೊತ್ತಿನಲ್ಲಿ, ಆಯಾ ಚಳುವಳಿಗಳ ಯುಗಧರ್ಮ ಮೌಲ್ಯ ಈ ಹೊತ್ತೂ ಪ್ರಸ್ತುತವಾಗಿಯೇ ಉಳಿದಿವೆ. ಹಾಗಾಗಿಯೇ ಈ ಸಂದರ್ಭ ಏಕಕಾಲದಲ್ಲಿ ಸಾಹಿತ್ಯದ ನವೋದಯ ಪರಂಪರೆಯ ರಮ್ಯತೆಯನ್ನ, ನವ್ಯದ ವೈಚಾರಿಕತೆ, ತಂತ್ರಗಾರಿಕೆ ಮತ್ತು ವ್ಯಕ್ತಿಕೇಂದ್ರಿತ ಚಿಂತನಾ ಕ್ರಮವನ್ನ, ಬಂಡಾಯ-ದಲಿತ ಸಂದರ್ಭದ ಅಸಮಾನತೆಯ ವಿರುದ್ಧ ಮಾನವೀಯ ಗೆಲುವು ಕುರಿತಾದ ಆಶಯವನ್ನ ಜೀವಂತವಾಗಿರಿಸಿಕೊಂಡೇ ಕ್ರಿಯಾಶೀಲವಾಗಿ ಉಳಿದಿದೆ. ಈ ಸಂದರ್ಭವೇ ನನ್ನ ವಯೋಮಾನದ ಗೆಳೆಯರನ್ನ ತಮ್ಮ ಸ್ವರೂಪ ಮತ್ತು ತಾತ್ವಿಕ ನಿಲುವನ್ನ ಸ್ಪಷ್ಟಪಡಿಸಿಕೊಳ್ಳಲು ಆಗದಂತಹ ಗೊಂದಲ ಮೂಡಿಸಿರುವುದು. ಆದರೆ ಅದೊಂದು ಬಿಕ್ಕಟ್ಟು ಎಂದೇನೂ ನಮಗೆ ಭಾಸವಾಗುತ್ತಿಲ್ಲ.

ತುಸುಹೆಚ್ಚು ಕಾವ್ಯದಲ್ಲಿ, ಉಳಿದಂತೆ ಕತೆ, ಕಾದಂಬರಿ, ಲಲಿತ ಪ್ರಬಂಧ, ವೈಚಾರಿಕ ವಿಶ್ಲೇಷಣೆಗಳಲ್ಲಿ ನಿರಂತರ ಸೃಜನಶೀಲರಾಗಿರುವ ಸಮಕಾಲೀನ ಯುವ ಗೆಳೆಯರ ಒಟ್ಟು ಸಾಹಿತ್ಯವನ್ನು ಗಮನಿಸಿದಾಗಷ್ಟೇ ಈ ತಾತ್ವಿಕತೆಯ ಬಿಕ್ಕಟ್ಟು ಗಮನಕ್ಕೆ ಬರಬಹುದು. ಆದರೆ ವ್ಯಕ್ತಿಗತವಾಗಿ ಪ್ರತಿಯೊಬ್ಬ ಲೇಖಕನೂ ತನ್ನದೇ ಆದ ತಾತ್ವಿಕತೆಯನ್ನು ಮೈಗೂಡಿಸಿಕೊಂಡೇ ಇರುತ್ತಾನೆ. ಈ ತಾತ್ವಿಕತೆ ವೈಯುಕ್ತಿಕತೆಯಿಂದ ಹೊರಟು ಸಾಮಾಜಿಕವಾಗುವ ಸ್ವರೂಪವುಳ್ಳದ್ದು. ಇಂತಹ ತಾತ್ವಿಕತೆಯನ್ನು ತನ್ನ ಬಿಡಿ ಕತೆ, ಬಿಡಿ ಕವಿತೆಗಳಲ್ಲಿ ಸಮರ್ಪಕವಾಗಿ, ಜೊತೆಗೆ ತನ್ನ ಮೊದಲ ಸೂಕ್ಷ್ಮವಾಗಿ ಪರೀಶೀಲಿಸಿ ನೋಡುವ ವ್ಯವಧಾನ ವಿಮರ್ಶಕರಿಗೆ ಬೇಕಿದೆ ಎಂಬುದು ನಮ್ಮೆಲ್ಲರ ಆಶಯ. ಬರಹಕ್ಕೆ ಶುರುವಿಟ್ಟ ಮೊದಲಲ್ಲಿ ನಾವೆಲ್ಲ ಎದುರುನೋಡುವ ಈ ಅಭಿಪ್ರಾಯ, ಮೆಚ್ಚುಗೆ ಎಷ್ಟು ಜನಕ್ಕೆ ನಿಜವಾದ ನೆಲೆಗಳಿಂದ ದಕ್ಕಿದೆ ಎಂಬುದು ಪ್ರಶ್ನೆಯೆ. ಪ್ರತಿಯೊಬ್ಬ ಹಿರಿಯರೂ ನಮ್ಮನ್ನು ತಾಳೆ ನೋಡಲು ಬಳಸುವ ಪರಿಕರಗಳೂ ಈಗಾಗಲೆ ಸಿದ್ಧವಾಗಿರುವಂತಹವು ಎಂದು ಅನ್ನಿಸತೊಡಗಿದೆ. ಅವರು ನಮ್ಮನ್ನು ಹೋಲಿಸುವುದೂ ಈಗಾಗಲೇ ತಮ್ಮಲ್ಲಿ ಸಾಧ್ಯತೆಗಳನ್ನ ಬಳಸಿ ಮೆರೆದಿರುವ ಅನನ್ಯರ ಕೃತಿ ಸ್ವರೂಪಗಳೊಂದಿಗೆ! ಈಗ ಬರೆಯುತ್ತಿರುವ ಗೆಳೆಯನ ಕವಿತೆಗಳಲ್ಲಿ ಬೇಂದ್ರೆಯಂತಹವರ ಸ್ವೋಪಜ್ಞತೆಯನ್ನೊ, ಕತೆಗಳಲ್ಲಿ ಮಾಸ್ತಿ, ಟಾಲ್ ಸ್ಟಾಯ್, ದಾಸ್ತೋವಸ್ಕಿ ಮೊದಲಾದವರ ಜೀವಂತ ಪಾತ್ರಗಳನ್ನೊ ಎದುರು ನೋಡುವುದು ಒಳನೋಟಗಳಿಗಿರುವ ಮಿತಿಗಳಷ್ಟೇ ಹೊರತು ಸದ್ಯದ ಸೃಜನಶೀಲತೆಯ ಮಿತಿಗಳಲ್ಲ.

 ಮೊದಲೇ ಹೇಳಿದಂತೆ, ನಮ್ಮ ಈ ಸಂದರ್ಭ ತುಂಬಾ ಸಂಕೀರ್ಣವಾದುದು. ನಮ್ಮ ಸಾಮಾಜಿಕ ತೀವ್ರ ಸ್ವರೂಪದ ವಾಣಿಜ್ಯೀಕರಣವನ್ನ, ಮಾಹಿತಿ-ಸಂಪರ್ಕಗಳೊಡನೆ ಜಾಗತೀಕರಣವನ್ನ ಒಳಗೊಳ್ಳಲು ಪ್ರಯತ್ನ ನಡೆಸಿದೆ. ಇಲ್ಲಿ ಈ ಜಾಗತೀಕರಣ ಅವಶ್ಯವೇ ಅಲ್ಲವೇ ಎಂಬ ಪ್ರಶ್ನೆ ಅಪ್ರಸ್ತುತ. ಅದೊಂದು ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ವಿದ್ಯಮಾನ. ಇಂತಹುದೊಂದು ಜಾಗತೀಕರಣ ಪ್ರಕ್ರಿಯೆ ನಿಧಾನಗತಿಯಲ್ಲಿ ತನ್ನ ಹೆಜ್ಜೆ ಗುರುತನ್ನ ನಮ್ಮ ಸಾಮಾಜಿಕತೆಯೊಳಗೆ ಮೂಡಿಸಿಕೊಂಡೇ ಬಂದಿದೆ. ಆದರೂ ಈ ಹೊತ್ತಿನ ಅದರ ನಡೆ ರಭಸವಾದುದು. ಅಂತಹುದೊಂದು ವರ್ತಮಾನದ ವಿದ್ಯಮಾನ ನಮ್ಮೆಲ್ಲರ ಸಾಂಪ್ರದಾಯಿಕ ಚಿಂತನಾ ಕ್ರಮವನ್ನ ಅದರ ಪ್ರಸ್ತುತತೆಯನ್ನ ಪ್ರಶ್ನಿಸತೊಡಗಿದೆ. ಏನೆಲ್ಲ ಆಗಿಬಿಡುವ ಸಾಧ್ಯತೆಯೂ, ಏನನ್ನೂ ಪರಿವರ್ತಿಸಲು ಶಕ್ತವಲ್ಲದ ನೀರಸ ನಡೆಯೂ ಈ ವರ್ತಮಾನಕ್ಕಿರುವುದು ಗಮನಾರ್ಹ ಅಂಶ. ಅಂತಹುದೊಂದು ಪ್ರಕ್ರಿಯೆ ನಮ್ಮ ಸಾಮಾಜಿಕ ಪ್ರಜ್ಞೆಯ ಮೇಲೆ ಮೂಡಿಸುವ ತಲ್ಲಣಗಳು ಎಂತಹವು? ಇಂತಹ ಸೂಕ್ಷ್ಮ ಪ್ರಜ್ಞೆ ಗೊಂದಲವಾಗಿ ವರ್ತಮಾನದ ಸಾಕ್ಷಿಗಳಾದ ಯುವಲೇಖಕರಿಗೆ ಕಾಡುತ್ತಿವೆ ಎಂದೇಕೆ ಭಾವಿಸಬಾರದು?

ನನಗನ್ನಿಸುತ್ತಿದೆ, ಈ ಹೊತ್ತು ಕೊಂಚ ಮೌನ ಬೇಕಿದೆ. ಅದು ನಮ್ಮ ಸೃಜನಶೀಲತೆಯನ್ನು ವಿಮರ್ಶಿಸುವ, ಟೀಕಿಸುವ, ಛೇದಿಸುವ ಕ್ರಿಯೆಗಳಿಂದ ಹೊರತಾದ ಒಂದು ಆರೋಗ್ಯಕರ ‘ಅವಕಾಶ’ ಎಂದು ಭಾವಿಸುತ್ತೇನೆ. ಅಂತಹುದೊಂದು ಸಾಂಸ್ಕೃತಿಕ ಮೌನವೂ ಒಂದು ವಿಶಿಷ್ಟ ಸಂವೇದನೆಯನ್ನು ನಮ್ಮ ಸಹಲೇಖಕರಿಗೆ ಒದಗಿಸಬಲ್ಲುದು. ಆ ಮೌನವೇ ನಾವು ಅರ್ಜಿಸಿಕೊಂಡು ಬಂದ ಪರಂಪರಾಗತ ಸಂವೇದನೆಯೊಂದಿಗೇ ಪರಿಸರದ, ವರ್ತಮಾನದ ಸೂಕ್ಷ್ಮತೆಗಳನ್ನು ಜೀರ್ಣಿಸಿಕೊಳ್ಳಲು ಅನುವಾಗಬಲ್ಲುದು. ಈವರೆಗೆ ಹರಿದಾಡುತ್ತಲೇ ಇರುವ ನಮ್ಮ ಸೃಷ್ಟಿಶೀಲತೆಯ ಪಕ್ಕಗಳಿಗೆ ಸ್ವಂತಿಕೆ ಮತ್ತು ತಾತ್ವಿಕತೆಯ ರೆಕ್ಕೆ ಮೂಡಲು, ನಾವೊಂದಿಷ್ಟು ಕೋಶಾವಸ್ಥೆಯ ಏಕಾಂತವನ್ನ ನಮಗಾಗಿಯೆ ಕಲ್ಪಿಸಿಕೊಳ್ಳಬೇಕಿದೆ. ಹಾಗೆ ದಕ್ಕುವ ಏಕಾಂತದಲ್ಲಿ ವ್ಯಕ್ತಿಗತವಾದ ತಾತ್ವಿಕತೆಗಳನ್ನು ಸಾಮಾಜಿಕ ತಾತ್ವಿಕತೆಯಾಗಿಸುವ ನಿಟ್ಟಿನಲ್ಲಿ ನಮ್ಮ ಸಂವೇದನೆ ಹರಿಯುತ್ತದೆ ಮತ್ತು ಅದು ಕೊಂಚ ನಿಧಾನಗತಿಯಲ್ಲಾದರೂ ನಮ್ಮ ಸಮೂಹದ ಸಾಹಿತ್ಯಕೃತಿಗಳಲ್ಲಿ ಪ್ರಕಟವಾಗುತ್ತದೆ ಎಂಬ ವಿಶ್ವಾಸ ನನಗಿದೆ. ಅಂತಹ ಮೌನದ ನಂತರದ ಅಭಿವ್ಯಕ್ತಿ ತನ್ನ ಚಲನಶೀಲತೆಯ ಸಹಜ ಲಯದಲ್ಲೇ ರಭಸವನ್ನೂ, ಪ್ರತಿಭಾ ಸಂಪನ್ನತೆಯಲ್ಲಿಯೂ ದೈತ್ಯ ಪ್ರತಿಭೆಗಳನ್ನೂ ಹೊರಹೊಮ್ಮಿಸಬಹುದು. ಇಂತಹುದೊಂದು ಆಶಾಭಾವವನ್ನ ಎದೆಯಲ್ಲಿಟ್ಟುಕೊಂಡೇ ನಿರಂತರ ಸೃಜನಶೀಲರಾಗುತ್ತಿರುವ ಎಲ್ಲ ಗೆಳೆಯರ ಪರವಾಗಿಯೇ ಈ ಮಾತುಗಳನ್ನು ಹೇಳುತ್ತಿರುವೆ. ಹಾಗಾಗಿಯೇ ಈ ಹೊತ್ತು ನಮಗೆ ವೈಯುಕ್ತಿಕವಾಗಿ ಯಾವ ತಾತ್ವಿಕತೆಯಲ್ಲಿ ನನ್ನತನವನ್ನ ಕಂಡುಕೊಳ್ಳಲಿ ಎಂದೋ, ಯಾವ ಪ್ರಕಾರದಲ್ಲಿ ನನ್ನ ಅಭಿವ್ಯಕ್ತಿಯನ್ನು ಪ್ರಕಟಪಡಿಸಲಿ ಎಂದೋ ಗೊಂದಲಗಳಿಲ್ಲ. ಇರುವುದೇನಿದ್ದರೂ ವರ್ತಮಾನದ ಸವಾಲುಗಳು ಮತ್ತು ಅದಕ್ಕೆ ಪರಿಹಾರ ಕಂಡುಕೊಳ್ಳಬೇಕಾದ ಆಂತರಿಕ ತುರ್ತು ಮಾತ್ರ. ಇದಕ್ಕೆ ನನ್ನ ಪೀಳಿಗೆಯ ಗೆಳೆಯರ ಕೃತಿಗಳೇ ಉತ್ತರ ಹೇಳಬಲ್ಲವು.

ಕೃಪೆ: ’ಹೊಸ ತಲೆಮಾರಿನ ತಲ್ಲಣ’, ಸಂ.: ರಹಮತ್ ತರೀಕೆರೆ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾನಿಲಯ, ಹಂಪಿ. ಚಿತ್ರಕೃಪೆ:ಅಂತರ್ಜಾಲ

ಯುದ್ಧವೂ ಶಾಂತಿಯೂ ಇಲ್ಲದ ಗ್ರಾಮ

‘ಒಂದು ಹುಲ್ಲಿನ ಕ್ರಾಂತಿ’ಯ ಬಗ್ಗೆ ಚಿಕ್ಕದೊಂದು ಇಂಟ್ರೊಡಕ್ಷನ್ ಕಳೆದ ಪೋಸ್ಟ್ ನಲ್ಲಿದೆ. ಇಲ್ಲಿ ಈ ಕೃತಿಯ ವಿಶೇಷತೆಯನ್ನು ತಕ್ಕಮಟ್ಟಿಗೆ ಪರಿಚಯಿಸುವ ಭಾಗವೊಂದನ್ನು ನೀಡಲಾಗಿದೆ.

sOgemane

sOgemane

ಯುದ್ಧವೂ ಶಾಂತಿಯೂ ಇಲ್ಲದ ಗ್ರಾಮ

ಒಂದು ಹಾವು ಮೆಲ್ಲನೆ ಸರಿದು ಅಲ್ಲಿದ್ದ ಕಪ್ಪೆಯನ್ನು ಹಿಡಿಯುತ್ತದೆ. ಅದನ್ನು ಕಂಡು ಹುಡುಗಿಯೊಬ್ಬಳು ಚೀರುತ್ತಾಳೆ. ಅಲ್ಲಿಗೆ ಓಡಿ ಬಂದ ಧೈರ್ಯವಂತ ಹುಡುಗ ಅದಕ್ಕೆ ಕಲ್ಲೆಸೆಯುತ್ತಾನೆ. ಸುತ್ತುವರಿದ ಜನ ಅವನನ್ನು ಪ್ರೋತ್ಸಾಹಿಸುತ್ತಾರೆ. ನಾನು ಆ ಹುಡುಗನ ಕಡೆ ತಿರುಗಿ, “ನೀನು ಹೀಗೆ ಮಾಡುವುದರಿಂದ ಏನನ್ನು ಸಾಧಿಸಿದ್ದೀಯೆ?” ಎಂದು ಪ್ರಶ್ನಿಸುತ್ತೇನೆ. ಗಿಡುಗ ಹಾವನ್ನು ಬೇಟೆಯಾಡುತ್ತದೆ, ತೋಳ ಗಿಡುಗದ ಮೇಲೆ ಬೀಳುತ್ತದೆ. ಮನುಷ್ಯ ತೋಳವನ್ನು ಕೊಲ್ಲುತ್ತಾನೆ, ಮನುಷ್ಯ ಕ್ಷಯರೋಗಕ್ಕೆ ತುತ್ತಾಗಿ ಸಾಯುತ್ತಾನೆ. ಹೊಲಸಿನ ಮೇಲೆ ಆ ಬ್ಯಾಕ್ಟೀರಿಯಾಗಳೂ ಬೆಳೆಯುತ್ತವೆ. ಮರಗಳು ಬ್ಯಾಕ್ಟೀರಿಯಾ ಸಿದ್ಧಪಡಿಸಿದ ಆಹಾರವನ್ನು ತಿಂದು ಬದುಕುತ್ತವೆ. ಕೀತಗಳು ಮರದ ಮೇಲೆ ಆಕ್ರಮಣ ನಡೆಸುತ್ತವೆ. ಆಗ ಕಪ್ಪೆ ಕೀಟಗಳನ್ನು ಹಿಡಿಯುತ್ತದೆ.

ಪ್ರಾಣಿ, ಗಿಡ, ಸೂಕ್ಷ್ಮ ಜೀವಿಗಳು- ಹೀಗೆ ಎಲ್ಲವೂ ಜೀವನ ಚಕ್ರದ ಪಾತ್ರಗಳು. ಅವು ತಮ್ಮ ನಡುವಿನ ಸಮತೋಲನವನ್ನು ಕಾಯ್ದುಕೊಂಡು ಸ್ವಾಭಾವಿಕವಾಗಿ ನಿಯಂತ್ರಣಕ್ಕೊಳಪಟ್ಟ ಜೀವನವನ್ನು ಸಾಗಿಸುತ್ತವೆ. ಶಕ್ತಿಶಾಲಿಗಳು ಅಶಕ್ತರನ್ನು ನುಂಗಿಹಾಕುವ ಕ್ರಮ ಇದೆನ್ನಬಹುದು. ಹಾವು ಕಪ್ಪೆಯನ್ನು ಹಿಡಿದಾಗ ಎಲ್ಲರೂ ಕಪ್ಪೆಗೆ ಕರುಣೆ ತೋರುವವರೇ. ಇದರಿಂದ ಹಾವಿಗೆ ಸಾವು. ಕಪ್ಪೆಯ ಬಗೆಗಿನ ಈ ಕರುಣೆ ಮನುಷ್ಯರಲ್ಲೂ ಸ್ವಾಭಾವಿಕವಾದುದು. ಆದರೆ ಅದು ಸರಿಯೇ?

ಒಬ್ಬ ಯುವಕ ಹೇಳಿದಂತೆ ಜೀವನವನ್ನು ಕೇವಲ ಶಕ್ತರು ಅಶಕ್ತರನ್ನು ನುಂಗಿಹಾಕುವ ವ್ಯವಸ್ಥೆ ಎಂದು ತಿಳಿದರೆ ಈ ಭೂಮಿ ನರಕವಾಗಿ ಬಿಡುತ್ತದೆ. ಶಕ್ತರ ಬದುಕಿಗೋಸ್ಕರ ಅಶಕ್ತರ ತ್ಯಾಗ ಅನಿವಾರ್ಯ. ಶಕ್ತರು ಗೆದ್ದು ಬದುಕುವುದು ಮತ್ತು ಅಶಕ್ತರು ಸಾಯುವುದು ಪ್ರಕೃತಿಯ ನಿಯಮ. ಲಕ್ಷಾಂತರ ವರ್ಷಗಳ ನಂತರವೂ ಇಂದು ಭೂಮಿಯ ಮೇಲೆ ಜೀವಿಸುತ್ತಿರುವ ಜೀವಗಳು ಶಕ್ತ ಮತ್ತು ಅಶಕ್ತರ ನಡುವಿನ ಬದುಕಿನ ಹೋರಾಟದಲ್ಲಿ ಗೆದ್ದು ಬಂದಂಥವು. ‘ಅರ್ಹನಿಗೇ ಉಳಿವು’ ಇದು ಪ್ರಕೃತಿಯ ವಿಧಿ.
ಮತ್ತೊಬ್ಬ ಹೇಳಿದ. “ಅವನಿಗೆ ಕಂಡ ಪ್ರಪಂಚ ಕೇವಲ ಗೆದ್ದವರ ಕಣ್ಣಿಗೆ ಕಾಣುವಂಥದು. ನನ್ನ ದೃಷ್ಟಿಯಲ್ಲಿ ಪ್ರಪಂಚ ಸಹಬಾಳ್ವೆಯ ಮತ್ತು ಪರಸ್ಪರ ಅನುಕೂಲದ ವ್ಯವಸ್ಥೆ. ಆ ಹೊಲದಲ್ಲೇ ನೋಡಿ, ಆ ಬೆಳೆ ಮತ್ತು ಇತರ ಕಳೆಗಳು ಹೇಗೆ ಪರಸ್ಪರ ಲಾಭದಾಯಕವಾಗಿ ಬದುಕುತ್ತಿವೆ. ಲತೆಗಳು ಮರಕ್ಕೆ ಸುತ್ತಿಕೊಳ್ಳುತ್ತವೆ, ಪಾಚಿ ಮತ್ತು ಬೂಸಲು ಸಸ್ಯಗಳು ಮರದ ಕೊಂಬೆಗಳ ಮೇಲೆ ಬೆಳೆಯುತ್ತವೆ. ಫರ್ನ್ ಗಿಡಗಳು ಮರಗಳ ಕೆಳಗೆ ರಕ್ಷಣೆ ಪಡೆಯುತ್ತವೆ. ಹಕ್ಕಿ, ಕಪ್ಪೆ, ಕೀಟ, ಪ್ರಾಣಿ, ಗಿಡ, ಬ್ಯಾಕ್ಟೀರಿಯಾ ಈ ಎಲ್ಲ ಜೀವಿಗಳು ತಮ್ಮ ಪಾತ್ರವನ್ನು ನಿರ್ವಹಿಸಿ ಮತ್ತೊಂದರ ಬದುಕಿಗೆ ಅವಕಾಶ ಮಾಡಿಕೊಡುತ್ತವೆ”
ಮಗದೊಬ್ಬ ಹೇಳಿದ, “ಶಕ್ತರು ಅಶಕ್ತರನ್ನು ನುಂಗಿ ಹಾಕುವುದು ಹಾಗೂ ಸಹಬಾಳ್ವೆಯು ಪ್ರಪಂಚದ ವ್ಯವಸ್ಥೆ. ಶಕ್ತಪ್ರಾಣಿಗಳು ತಮ್ಮ ಅಗತ್ಯಕ್ಕಿಂತ ಹೆಚ್ಚಿನ ಆಹಾರಕ್ಕೆ ಹೋರಾಡುವುದಿಲ್ಲ. ಇದರಿಂದಾಗಿ ಪ್ರಕೃತಿಯ ಸಮತೋಲನ ಕಾಯಲ್ಪಟ್ಟಿದೆ”

ಮೂರು ಜನರದು ಮೂರು ದೃಷ್ಟಿ. ಈ ಎಲ್ಲ ದೃಷ್ಟಿಗಳನ್ನು ನಾನು ಸಂಪೂರ್ಣವಾಗಿ ನಿರಾಕರಿಸುತ್ತೇನೆ. ಪ್ರಪಂಚ ಎಂದೂ ತಾನು ಸಹಬಾಳ್ವೆಯ ಮೇಲೆ ನಿಂತಿದ್ದೇನೆಯೋ ಅಥವಾ ಸ್ಪರ್ಧೆಯ ಮೇಲೆ ನಿಂತಿದ್ದೇನೆಯೋ ಎಂದು ಪ್ರಶ್ನಿಸಿಕೊಂಡಿಲ್ಲ. ಮನುಷ್ಯನು ತನ್ನ ಸಂಬಂಧಿತ ಬುದ್ಧಿ ವೈಶಾಲ್ಯದಿಂದ ನೋಡಿದಾಗ ಮಾತ್ರ ಶಕ್ತರು- ಅಶಕ್ತರು, ದೊಡ್ಡದು- ಚಿಕ್ಕದು ಎಂಬುದು ಕಾಣುತ್ತದೆ. ಆದರೆ ಈ ಸಾಪೇಕ್ಷ ದೃಷ್ಟಿ ತಪ್ಪು ಎನ್ನುವ ಜನರೇ ವಿರಳ. ಉದಾಹರಣೆಗೆ ದೊಡ್ಡದು- ಚಿಕ್ಕದು ಅಥವಾ ಹಳ್ಳ- ದಿಣ್ಣೆ ಎಂಬುದಿಲ್ಲ ಎಂದು ಒಪ್ಪಿಕೊಂಡರೆ ಮಾನವನ ಜೀವನ ಮೌಲ್ಯಗಳು ಹಾಗೂ ತೀರ್ಪುಗಳು ಸಾಯುತ್ತವೆ ಎಂದೆಂಬುದು ಅವರ ಅಭಿಪ್ರಾಯ.

ಈ ದೃಷ್ಟಿಯಲ್ಲಿ ಪ್ರಪಂಚವನ್ನು ನೋಡುವುದು ಬರಿದಾದ ಕಲ್ಪನೆಯೇ? ವಾಸ್ತವದಲ್ಲಿ ದೊಡ್ಡ ರಾಷ್ಟ್ರಗಳು- ಚಿಕ್ಕ ರಾಷ್ಟ್ರಗಳು, ಸುಭಿಕ್ಷೆ- ದುರ್ಭಿಕ್ಷೆ, ಶಕ್ತ- ಅಶಕ್ತ ಎಂಬುದಿದೆ. ಇದರಿಂದಾಗಿ ವ್ಯಾಜ್ಯ ಅನಿವಾರ್ಯ. ವ್ಯಾಜ್ಯ ಇದ್ದಲ್ಲಿ ಸೋಲು, ಗೆಲುವು. ಈ ಸಾಪೇಕ್ಷ ಜ್ಞಾನ ಹಾಗೂ ಅದರಿಂದ ಬರುವ ಭಾವ ಮಾನವ ಸಹಜ ಹಾಗೂ ಸ್ವಾಭಾವಿಕ. ಇವು ಕೇವಲ ಮನುಷ್ಯನಿಗೆ ದೊರೆತಿರುವ ವಿಶಿಷ್ಟವಾದ ಭಾಗ್ಯ ಎನ್ನಬಹುದೆ? ಮಿಕ್ಕ ಪ್ರಾಣಿಗಳೂ ಹೋರಾಡುತ್ತವೆ, ಆದರೆ ಯುದ್ಧ ಮಾಡುವುದಿಲ್ಲ. ಶಕ್ತ ಮತ್ತು ಅಶಕ್ತ ಎಂಬ ವಿಚಾರದ ಮೇಲೆ ನಿಂತಿರುವ ‘ಯುದ್ಧ ಮಾಡುವಿಕೆ’ ಮಾನವನ ವಿಶೇಷ ಭಾಗ್ಯ ಎಂದು ನೀವೆನ್ನುವಿರಾದರೆ, ಜೀವನ ಕೇವಲ ಪ್ರಹಸನವಾದೀತು, ಈ ಪ್ರಹಸನವೇ ಜೀವನ ವಿಧಾನವಾಗಿ ಹೋದೀತು. ಇದೇ ಮಾನವನ ಬದುಕಿನ ದೊಡ್ಡ ದುರಂತವಾದೀತು. ಭೂಮಿಯ ಮೇಲೆ ಶಾಂತಿಯುತವಾಗಿ, ದ್ವಂದ್ವವಿಲ್ಲದೆ, ವ್ಯತ್ಯಾಸ ಕಾನದೆ ಸಂತೋಷದಿಂದ ಬದುಕುವವರು ಮಕ್ಕಳು ಮಾತ್ರ. ಅವರಿಗೆ ಕತ್ತಲು-ಬೆಳಕು, ಶಕ್ತ-ಅಶಕ್ತ ಇವುಗಳ ಅರಿವಿದೆ. ಆದರೆ ಅವುಗಳ ಬಗ್ಗೆ ಭೇದವಿಲ್ಲ. ಮಗುವಿಗೆ ಹಾವು ಮತ್ತು ಕಪ್ಪೆ ಎರಡರ ಪರಿಚಯವೂ ಇದೆ. ಆದರೆ ಅವೆರಡರಲ್ಲಿ ಯಾವುದು ಬಲಶಾಲಿ ಎಂದು ಯೋಚಿಸುವುದಿಲ್ಲ. ಏಕೆಂದರೆ ಅದಕ್ಕೆ ಬದುಕಿನ ಸೌಂದರ್ಯದ ಅರಿವಿದೆ. ಆದರೆ ಸಾವಿನ ಭಯದ ಪರಿಚಯ ಇರುವುದಿಲ್ಲ.

ವಯಸ್ಕರಲ್ಲಿ ಕಾಣುವ ಪ್ರೀತಿ ಮತ್ತು ದ್ವೇಷ ಎರಡೂ ಬೇರೆ ಬೇರೆಯಲ್ಲ. ಅವು ಒಂದೇ ನಾಣ್ಯದ ಎರಡು ಮುಖಗಳು. ಪ್ರೀತಿ ದ್ವೇಷಕ್ಕೆ ಮೂಲ. ಈ ಬಣ್ಣದ ಬದುಕಿನಿಂದ ದೂರ ಹೋಗಲು ಒಂದೇ ಉಪಾಯವೆಂದರೆ ಭಾವನಾರಹಿತವಾದ ಪ್ರಪಂಚಕ್ಕೆ ಹೋಗುವುದು. ಎಲ್ಲಿಯವರೆಗೆ ಮನುಷ್ಯನಲ್ಲಿ ಅಹಂಕಾರ ಇರುವುದೋ, ಅಲ್ಲಿಯವರೆಗೆ ದ್ವೇಷ ಮತ್ತು ಪ್ರೀತಿಯಿಂದ ಬಿಡುಗಡೆ ಇಲ್ಲ. ದುಷ್ಟವಾದ ಅಹಂ ಅನ್ನು ಪ್ರೀತಿಸುವ ಹೃದಯ ಶತ್ರುವನ್ನು ಸೃಷ್ಟಿಸುತ್ತದೆ. ಮನುಷ್ಯನ ಮೊದಲ ಹಾಗೂ ದೊಡ್ಡ ವೈರಿ ಎಂದರೆ ಅವನು ಹೆಚ್ಚು ಪ್ರೀತಿಸುವ ‘ನಾನು’.

ಮನುಜರು ಆಕ್ರಮಣ ಮಾಡುವ ಮತ್ತು ರಕ್ಷಣೆಯನ್ನು ಮಾಡಿಕೊಳ್ಳೂವ ವಿಧಾನವನ್ನು ಕಲಿತುಕೊಂಡರು. ಇದರಿಂದಾಗಿ ಆಗುವ ಪರಿಣಾಮಗಳಿಗೆ ಒಬ್ಬರನ್ನೊಬ್ಬರು ಆಪಾದಿಸತೊಡಗಿದರು. ಆದರೆ ಎರಡು ಕೈ ಸೇರದೆ ಚಪ್ಪಾಳೆಯಾಗದು. ಕೋಟೆಯನ್ನು ಕಟ್ಟುವುದೇ ಮೊದಲನೆಯ ತಪ್ಪು. ಕೋಟೆ ಕಟ್ಟಿಕೊಳ್ಳುವವರು ಅದು ಕೇವಲ ತಮ್ಮ ರಕ್ಷಣೆಗಾಗಿ ಎಂಬ ಕಾರಣ ಕೊಟ್ಟರೂ ಅದು ಆಳುತ್ತಿರುವ ರಾಜನ ಇಚ್ಛೆಯಾಗಿರುತ್ತದೆ. ಅಲ್ಲದೆ ಅದು ಸುತ್ತಮುತ್ತಲಿನ ಪ್ರದೇಶಗಳ ಮೇಲೆ ಬಲಾತ್ಕಾರವಾಗಿ ತನ್ನ ಪ್ರಾಬಲ್ಯವನ್ನು ಬೀರುತ್ತಿರುತ್ತದೆ. ಆಕ್ರಮಣಗಳ ಹೆದರಿಕೆಯಿಂದ ಕೋಟೆ ಕಟ್ಟುತ್ತಿದ್ದೇನೆ ಎನ್ನುವ ಬಾಯಿಬಡುಕ ಒಳಗೇ ಯುದ್ಧ ಸಾಮಗ್ರಿಗಳ ಜಮಾವಣೆ ಮಾಡುತ್ತಿರುತ್ತಾನೆ.

ರಕ್ಷಣೆಗಾಗಿ ನಡೆಸುವ ಚಟುವಟಿಕೆಗಳೆ ಆಕ್ರಮನಗಳ ಚಟುವಟಿಕೆಗಳು. ಸ್ವರಕ್ಷಣೆಗೆ  ಯುದ್ಧೋಪಕರಣಗಳು ಎನ್ನುವುದು ಯುದ್ಧವನ್ನು ಪ್ರೇರೇಪಿಸುವವರಿಗೆ ಒಂದು ನೆಪ. ಯುದ್ಧದ ದುರ್ದೆಸೆ ಉಂಟಾಗುವುದು ನಾನು- ಇತರರು, ಶಕ್ತ-ಅಶಕ್ತ, ಆಕ್ರಮಣ-ರಕ್ಷಣೆಗಳೆಂಬ ಪೊಳ್ಳೂ ಬೇಧಗಳಿಗೆ ಹೆಚ್ಚಿಗೆ ಶಕ್ತಿ ದೊರೆತಾಗ, ಅದರ ಗಾತ್ರ ದೊಡ್ಡದಾದಾಗ. ಸಂಬಂಧಿತ ದೃಷ್ಟಿವೈಶಾಲ್ಯ ಕೋಟೆಯಿಂದ ಹೊರಬರಲು ಇರುವ ಒಂದೇ ಮಾರ್ಗವೆಂದರೆ ಹುಲ್ಲುಗಾವಲುಗಳಲ್ಲಿ ಸುತ್ತಾಡಿ, ನಿರಾಸಕ್ತವಾದ ಪ್ರಕೃತಿಯ ಹೃದಯದಲ್ಲಿ ಒಂದಾಗುವುದು. ಅಂದರೆ ಯುದ್ಧಕ್ಕೆ ಬೇಕಾದ ಕತ್ತಿಯನ್ನು ಮಸೆಯುವ ಬದಲು ವ್ಯವಸಾಯಕ್ಕೆ ಬೇಕದ ಕಡುಗೋಲನ್ನು ಹರಿತಗೊಳಿಸುವುದು.

ಅನೇಕ ವರ್ಷಗಳ ಹಿಂದೆ ರೈತರು ಶಾಂತಿಪ್ರಿಯರಾಗಿದ್ದರು. ಆದರೆ ಇಂದು ನಾವು ಆಸ್ಟ್ರೇಲಿಯಾದೊಂದಿಗೆ ಮಾಂಸಕ್ಕಾಗಿ ವಾದ ಮಾಡುತ್ತಿದ್ದೇವೆ. ರಷ್ಯಾದೊಂದಿಗೆ ಮೀನಿಗಾಗಿ ಹೋರಾಡುತ್ತಿದ್ದೇವೆ. ಗೋಧಿ ಮತ್ತು ಸೋಯಾಬೀನ್ ಗಳಿಗಾಗಿ ಅಮೆರಿಕಾವನ್ನು ಅವಲಂಬಿಸಿದ್ದೇವೆ. ಜಪಾನಿನಲ್ಲಿ ಇರುವ ನಾವು ಒಂದು ದೊಡ್ಡ ಮರದ ನೆರಳಿನಲ್ಲಿ ನಿಂತಿದ್ದೇವೆಂದು ಭಾವಿಸಿದ್ದೇವೆ. ಗುಡುಗು-ಸಿಡಿಲಿನಿಂದ ಕೂಡಿದ ಭಾರೀ ಮಳೆ ಬಿದ್ದರೆ ನಮಗಿಂತ ಹೆಚ್ಚಿನ ಅಪಾಯದಲ್ಲಿ ಯಾರೂ ಇರುವುದಿಲ್ಲ ಎಂದು ತಿಳಿದುಕೊಂಡಿದ್ದೇವೆ. ಹೀಗಿರುವಾಗ ಅಣುಶಕ್ತಿಯ ಕೆಳಗೆ ರಕ್ಷಣೆ ಪಡೆಯುವುದು ಎಲ್ಲಕ್ಕಿಂತಲೂ ಮೂರ್ಖತನ. ಮುಂದೆ ಬರುವ ಯುದ್ಧಗಳಲ್ಲಿ ಅಣುಸ್ಥಾವರಗಳೇ ಶತ್ರುಗಳ ಗುರಿ. ಇಂದು ನಾವು ಬಹಳ ಅಪಾಯಕಾರಿ ಘಟ್ಟ ತಲುಪಿದ್ದೇವೆ. ವಿಷಮ ಘಳಿಗೆ ಒಳಗಿನಿಂದಲೂ ಹೊರಗಿನಿಂದಲೂ ಆಗಮಿಸುತ್ತಿದೆ. ರೈತರು ಭೂಮಿಯ ಮೇಲೆ ಎಲ್ಲೇ ಇದ್ದರೂ ಅವರೆಲ್ಲರೂ ಒಂದೇ. ನಾವೆಲ್ಲರೂ ಒಂದಾಗಿ “ಶಾಂತಿ ಬೇಕೆ? ಹಾಗಾದರೆ ಅದನ್ನು ಪದೆಯುವ ಸೂತ್ರ ಈ ಮಣ್ಣಿಗೆ ಹತ್ತಿರವಾಗಿದೆ” ಎನ್ನೋಣ.

‘ಮರೆಯುವ ಮುನ್ನ’, ಲಂಕೇಶ್…

ಲಂಕೇಶರ ಬರಹಗಳನ್ನೋದದೆ ಕನ್ನಡದ ಓದು ಅಪೂರ್ಣ. ಇದೇ ಮಾತು ಅನ್ವಯವಾಗುವಂಥ ಲೇಖಕರು ಇನ್ನೂ ಕೆಲವರಿದಾರೆ ನಿಜ, ಆದರೆ ಲಂಕೇಶರ ಮಟ್ಟಿಗೆ ಮಾತ್ರ ಅವರನ್ನ ಓದಿದಮೇಲಷ್ಟೇ ಯಾಕೆ ಓದಲೇಬೇಕಿತ್ತು ಅನ್ನುವುದು ಗೊತ್ತಾಗೋದು. ಈವರೆಗೆ ಲಂಕೇಶರ ಸರಿಸುಮಾರು ೩೦ ಕೃತಿಗಳು ಪ್ರಕಟಗೊಂಡಿವೆ. ಲಂಕೇಶ್ ಪ್ರಕಾಶನ ಇತ್ತೀಚೆಗೆ (೨೦೦೯ರಲ್ಲಿ) ಅವರ ಪುಟ್ಟ ಪುಟ್ಟ ಟಿಪ್ಪಣಿಗಳಂತಹ ಬರಹಗಳ ‘ಮರೆಯುವ ಮುನ್ನ’ ಸಂಕಲನವನ್ನು ಹೊರತಂದಿದೆ. ಕಡಿಮೆಯೆಂದರೆ ಹತ್ತು ಸಾಲು, ಹೆಚ್ಚೆಂದರೆ ೪೦ ಸಾಲುಗಳಷ್ಟಿರುವ ಇಲ್ಲಿನ ಬರಹಗಳು ವೈವಿಧ್ಯಮಯ ವಸ್ತು ವಿಷಯಗಳಿಂದ ಗಮನ ಸೆಳೆಯುತ್ತವೆ. ಲಂಕೇಶರನ್ನು ಓದಿರದ, ಇದೀಗ ತಾನೆ ಓದಲು ಶುರುವಿಟ್ಟಿರುವ ಹೊಸತಲೆಮಾರಿನವರಿಗೆ ಅವರ ವ್ಯಾಪ್ತಿಯ ಚಿಕ್ಕ ಪರಿಚಯ ಮಾಡಿಸಿಕೊಡುವಲ್ಲಿ ಈ ಪುಸ್ತಕ ಸಫಲವಾಗಿದೆ.

ಮರೆಯುವ ಮುನ್ನದಿಂದ ಎರಡು ಬರಹಗಳು ಇಲ್ಲಿವೆ. ಈ ಆಯ್ಕೆಗೆ ಯಾವ ಮಾನದಂಡವೂ ಇಲ್ಲ. ಇದ್ದರೂ ಅದು ವೈಯಕ್ತಿಕವಾಗಿ ನನಗಿರುವ ‘ಚೆ’ಎಡೆಗಿನ ಆಕರ್ಷಣೆ ಮತ್ತು ‘ರಕ್ಷಣೆ’ಯ ಕುರಿತಾದ ಲಂಕೇಶ್ ಮಾತುಗಳು ಅವರನ್ನು ಮತ್ತೊಂದು ರೀತಿಯಲ್ಲಿ ನೋಡಲು ಸಾಧ್ಯ ಮಾಡಿಕೊಟ್ಟಿತೆಂಬ ಕಾರಣಗಳಷ್ಟೇ.

:sOgemane:

:sOgemane:

ಹೇಗೆ ಪರಿಪೂರ್ಣ

ಹೋದ ವಾರ ಈ ಚೆಗೆವೆರಾ ಬಗ್ಗೆ ಬರೆದು ಅಚ್ಚಾದ ಮೇಲೆ ಮತ್ತೆ ಕಣ್ಣಾಡಿಸಿದಾಗ…. ನಾನು ಕೇಳಿಕೊಂಡೆ. ಸಾರ್ತರ್ ಈತನನ್ನು ‘ಪರಿಪೂರ್ಣ ವ್ಯಕ್ತಿ’ ಎಂದು ಏಕೆ ಕರೆದ? ಚೆಗೆವೆರಾ ನಿಜಕ್ಕೂ ಪರಿಪೂರ್ಣನೆ? ಯಾವ ಅರ್ಥದಲ್ಲಿ?

ನನಗೆ ಈಗ ಹೊಳೆವ ಒಂದೆರಡು ವಿಚಾರ ಹೇಳುತ್ತೇನೆ. ಚೆಗೆವೆರಾ ಒಂದು ರೀತಿಯಲ್ಲಿ ಪುಸ್ತಕ ಕೀಟ. ಆದರೆ ಈ ‘ಕೀಟ’ ತನ್ನ ಮಿತಿಯನ್ನು ಮೀರಲು ಕ್ರಿಯೆಯನ್ನು ನೆಚ್ಚಿತು. ಚೆಗೆವೆರಾ ತನ್ನ ಅಂತರಾಳದ ತಿಳುವಳಿಕೆಯನ್ನು ಬಾಹ್ಯದಲ್ಲಿ ಪರೀಕ್ಷಿಸತೊಡಗಿದ. ಈತ ತನ್ನ ಜನರ ಬದುಕನ್ನು ಕಂಡು ನೊಂದುಕೊಂಡ. ಈ ನೋವನ್ನು ನಿವಾರಿಸಲು ವೈಯಕ್ತಿಕ ಮಟ್ಟದಲ್ಲಿ ಪ್ರಯತ್ನಿಸಿದ, ಆದರೆ ಅದು ಕ್ಷುಲ್ಲಕ ಪರಿಹಾರವೆನಿಸಿತು. ಜನರನ್ನು ಸಂಘಟಿಸತೊಡಗಿದ. ಕೇವಲ ಸಂಘಟನೆಯಿಂದ ಸಾಧ್ಯವಿಲ್ಲ ಎಂದು ಯುದ್ಧ ಕಲೆ ಕಲಿತ. ವಿಶ್ವವಿದ್ಯಾಲಯದ ಪುಸ್ತಕ ಭಂಡಾರದಲ್ಲಿ, ಶಾಂತಿಯಲ್ಲಿ ಶುರುವಾದ ಈತನ ಬದುಕು ರಕ್ತಪಾತದ ಹಂತ ತಲುಪಿತು. ಭ್ರಷ್ಟ ಸರ್ಕಾರಗಳ ವಿರುದ್ಧ ಹೋರಾಡಿ ಜಯಶಾಲಿಯಾದ. ಹೊಸ ವ್ಯವಸ್ಥೆಗೆ ಕಾರಣನಾದ. ಆದರೆ ಈ ಹೊಸ ವ್ಯವಸ್ಥೆ ಕೂಡ ಎಷ್ಟು ಸೀಮಿತ, ಕ್ಷುಲ್ಲಕ ಅನ್ನಿಸಿತು. ವೈಯಕ್ತಿಕ ಸಾಂತ್ವನದಿಂದ ದೇಶದ ಉದ್ಧಾರಕ್ಕಾಗಿ ಹೋದಂತೆಯೇ ಈತ ಜಾಗತಿಕ ಕ್ರಾಂತಿಗೆ ಪ್ರಯತ್ನಿಸಿದ.

ಇದೆಲ್ಲದರ ನಡುವೆ ಈತ ತನ್ನ ಆಳದ ದಾಹ ಮರೆತಿರಲಿಲ್ಲ. ಪ್ರೀತಿಸಿದ, ಮದುವೆಯಾದ, ಸಂಸಾರಿಯಾದ. ಖಾಸಗಿ ಬದುಕಿನ ಸಂತೋಷ ಮತ್ತು ಮಿತಿ, ಸಾರ್ವಜನಿಕ ಸಾಧನೆಯ ಸಾರ್ಥಕ್ಯ ಮತ್ತು ದ್ವಂದ್ವ ಅವನಿಗೆ ಗೊತ್ತಾದವು.

ಹೇಗೆ ಗೊತ್ತಾದವು? ಕ್ರಿಯೆಯಲ್ಲಿ, ಸಾವಿನಲ್ಲಿ.

ರಕ್ಷಣೆ

ನಾವು ದೇಶದ ರಕ್ಷಣೆಯ ಬಗ್ಗೆ ಕಾಳಜಿ ವಹಿಸಿ ಭಾರತದ ಮೂವತ್ತು ಸಾವಿರ ಕೋಟಿ ಹಣದಲ್ಲಿ ಕಾಲುಭಾಗವನ್ನು ಸೈನ್ಯಕ್ಕೆ ಖರ್ಚು ಮಾಡುತ್ತೇವೆ. ಫಾರಿನ ಟ್ರಿಪ್ ಎಂದರೆ ಕುಪ್ಪಳಿಸಿ ಓಡುವ ನಮ್ಮ ಜನ, ಫಾರಿನ್ ಮೇಡ್ ಮಾಲುಗಳೆಂದರೆ ಪ್ರಾಣ ಬಿಡುವ ನಮ್ಮ ಪ್ರಜೆಗಳು ಈ ದೇಶದ ಬಗ್ಗೆ ಆಳದಲ್ಲಿ ತಾತ್ಸಾರವನ್ನು ಮಾತ್ರ ಹೊಂದಿದ್ದಾರೆ. ಹಾಗಾದರೆ ಇಲ್ಲಿ ಏನನ್ನು ರಕ್ಷಿಸುವುದಕ್ಕಾಗಿ ಸೈನ್ಯ? ಬೆಳೆಯಲು ನಿರಾಕರಿಸತೊಡಗಿರುವ ನಮ್ಮ ಹೊಲಗದ್ದೆಗಳನ್ನ? ಮುಚ್ಚಿಹೋಗುತ್ತಿರುವ ಕಾರ್ಖಾನೆಗಳನ್ನ? ಈಗಾಗಲೇ ಲೂಟಿಗೆ ಒಳಗಾಗಿರುವ ನಮ್ಮ ಪ್ರಾಚೀನ ವಸ್ತುಗಳನ್ನ? ಎಪ್ಪತ್ತರ ‘ಚೆಲುವೆ’ ತನ್ನ ಮೇಲೆ ಯಾರಾದರೂ ಕೈಹಾಕಬಹುದೆಂದು ಹೆದರಿ ಅಂಗರಕ್ಷಕರ ಜೊತೆಗೆ ಓಡಾಡುವಂತೆ ಭಾಸವಾಗಿ ನಗೆ ಬರುತ್ತದೆ. ನಮ್ಮ ದೇಶದ ಜನರನ್ನೇ ಹಿಡಿದು ಕೊಲ್ಲುವ ಸೈನಿಕರನ್ನು ನೋಡಿ ಅವರ ಡ್ಯೂಟಿಯ ಒಂದು ಭಾಗ ಹೊಳೆಯುತ್ತದೆ. ಹದಿನೈದು ಲಕ್ಷ ಸೈನಿಕರು, ಶಸ್ತ್ರಾಸ್ತ್ರ ತಯಾರಕರು, ಅವೆಲ್ಲವುಗಳ ದಲ್ಲಾಳಿಗಳು, ಅವನ್ನು ನೋಡಿಕೊಳ್ಳುವ ರಾಜಕಾರಣಿಗಳು ಎಲ್ಲರ ಉದ್ಯೋಗ ನೆನೆದು- ಹೌದು, ಸೈನ್ಯದಲ್ಲಿ ಉದ್ಯೋಗಗಳಾದರೂ ದೊರೆಯುತ್ತವೆ ಅಂದುಕೊಳ್ಳುತ್ತೇನೆ.

ರಕ್ಷಣೆಯ ಅಗತ್ಯ ಇದೆಲ್ಲದ್ದಕ್ಕಿಂತ ಆಳವಾಗಿದೆ. ನಾನು ದಿಕ್ಕುದೆಸೆಯಿಲ್ಲದೆ ಸುತ್ತುತ್ತಿರುವ ಈ ಬೆಳಗ್ಗೆ, ನನ್ನನ್ನು ಮುತ್ತುತ್ತಿರುವ ಈ ಬೆಳಗ್ಗೆ, ನನ್ನನ್ನು ಮುತ್ತಿರುವ ಅಖಂಡ ಸಂತೋಷ, ನಾನು ಸುತ್ತುವುದಕ್ಕೆ ಕಾರಣವನ್ನು ಕೂಡ ಕೇಳದ ನಮ್ಮ ಜನರು- ಇವೆಲ್ಲವೂ ಸೇರಿ ಆದದ್ದು ಈ ದೇಶ. ಇಲ್ಲಿಯ ಬೆಳಕಿಗೆ, ಅದನ್ನು ಹೀರುವುದಕ್ಕೆ ಅಡ್ಡಿ ಬರುವ ಯಾವುದೇ ಪರದೇಶ ನನ್ನ ಆತ್ಮಾಭಿಮಾನಕ್ಕೆ, ನನ್ನ ವೈಯಕ್ತಿಕ ಹಾಗೂ ಸಾರ್ವಜನಿಕ ಆಯಕಟ್ಟಿಗೆ ಕೈಹಾಕುತ್ತದೆ. ಇಲ್ಲಿ ಅನೇಕ ತಪ್ಪುಗಳನ್ನು ಮಾಡುತ್ತಲೇ ಸರಿಗಳನ್ನೂ ಮಾಡುವ ಸಾಧ್ಯತೆ ಇದೆ; ಇಲ್ಲಿ ಈ ಬೆಳಗಿನಿಂದ, ಈ ಸಂಜೆಯಿಂದ, ಈ ನೆಲದಿಂದ ಸೃಷ್ಟಿಸುವ ಅವಕಾಶವಿದೆ. ಇದು ನನ್ನ ದೇಶ.

ಆಕ್ರಮಣ, ಅತ್ಯಾಚಾರ, ಸರ್ವಾಧಿಕಾರಗಳು ನಮ್ಮ ಸ್ಪಂದನವನ್ನು ನಿಲ್ಲಿಸುತ್ತವೆ, ನಮ್ಮೊಳಗಣ ಯಾವುದೋ ಜೀವ ತಂತುವನ್ನು ಕತ್ತರಿಸುತ್ತವೆ.

(‘ಮರೆಯುವ ಮುನ್ನ’- ಲಂಕೇಶ್ ಪ್ರಕಾಶನದ ಪ್ರಕಟಣೆ. ಬೆಲೆ ರೂ.೧೫೦)

೨೦೦೮ರಲ್ಲಿ ಪ್ರಕಟಗೊಂಡ ಓದಲೇಬೇಕಾದ ಪುಸ್ತಕಗಳು

 

೨೦೦೯ರ ಮುಸ್ಸಂಜೆ ಶುರುವಾಗಿದೆ. ಈ ಹೊತ್ತಲ್ಲಿ ನಿಂತು ಕಳೆದ ವರ್ಷದಲ್ಲಿ ಬಿಡುಗಡೆಯಾದ ನಮ್ಮ ಜತೆಯ ಬರಹಗಾರರ ಪುಸ್ತಕಗಳೆಡೆಗೊಮ್ಮೆ ಕಣ್ಣು ಹಾಯಿಸಬೇಕೆನಿಸಿದೆ. ಈ ಎಲ್ಲ ಪುಸ್ತಕಗಳಲ್ಲಿ ನಮ್ಮ ಓದಿಗೆ ದಕ್ಕಿರುವುದು ಅತಿ ಕಡಿಮೆ. ನಾಚಿಕೆಬಿಟ್ಟು ಹೇಳಬಹುದಾದರೆ, ಎಲ್ಲ ಪುಸ್ತಕವನ್ನೂ ಕೊಳ್ಳಲಾಗುವುದಿಲ್ಲ ಎನ್ನುವುದೂ ಒಂದು ಕಾರಣ. ಹಾಗೆಯೇ ಕೆಲವು ಬಿಡುಗಡೆಯಾದ ಪುಸ್ತಕಗಳು ಎಲ್ಲೆಡೆಯೂ ದೊರೆಯುವುದಿಲ್ಲ ಅನ್ನೋದು ಮತ್ತೊಂದು ಕಾರಣ. ಆದರೂ ಕೆಲವು ಹಿರಿಯರಲ್ಲಿ, ಆಸಕ್ತರಲ್ಲಿ ಈ ಸಂಗ್ರಹವಿರಬಹುದು. ಪರಸ್ಪರ ಕೊಡುಕೊಳ್ಳುವಿಕೆ ಸಾಧ್ಯವಾಗಬಹುದಾದರೆ…..

ಇರಲಿ. ಎಲ್ಲ ಪುಸ್ತಕವನ್ನೂ ಎಲ್ಲರೂ ಓದಲಾಗುವುದಿಲ್ಲ ಅನ್ನಬಹುದೇನೋ? ಓದಿನ ವ್ಯಸನದ ಕೆಲವರಿಗಂತೂ ಈ ಉತ್ಸಾಹವಿದ್ದೇ ಇರುವುದು ಅನಿಸುತ್ತದೆ. ಕೆಲವರಿಗಾದರೂ ‘ನಮ್ಮ ಕಾಲದ ಓದಿನ’ ಬಗ್ಗೆ ಕುತೂಹಲವಿರುತ್ತದೆ. ಅಂತಹವರಿಗಾಗಿ ಈ ಲಿಸ್ಟು. ೨೦೦೯ರ ಫೆಬ್ರವರಿ ಮಯೂರ ಸಂಚಿಕೆಯಲ್ಲಿ ಕನ್ನಡ ಕಾವ್ಯ ಹಾಗೂ ಕಥೆಗಳ ಕುರಿತು ಡಿ.ವಿ.ಪ್ರಹ್ಲಾದ್ ಹಾಗೂ ನಾಗರಾಜ ವಸ್ತಾರೆಯವರು ಬರೆದಿದ್ದ ಲೇಖನದಿಂದ ಈ ಪುಸ್ತಕಗಳನ್ನು ಆರಿಸಿ, ಪೋಣಿಸಿ ಇಲ್ಲಿ ನೀಡಲಾಗಿದೆ.

 

ಕವಿತೆ:

ಮಣ್ಣ ಬಿಸುಪು- ರೋಸಿ ಡಿಸೋಜಾ

ಕಡಲಿಗೆ ಕಳಿಸಿದ ದೀಪ- ಟಿ.ಯಲ್ಲಪ್ಪ

ಸಮುದ್ರ ಮತ್ತು ಮಳೆ- ನಾಗತಿಹಳ್ಳಿ ರಮೇಶ್

ಹುಡುಕುವ ಆಟ- ಹೇಮಾ ವೆಂಕಟ್

ಚಿತ್ತಗ್ಲಾನಿಯ ಮಾತು- ಆರ್.ತಾರಿಣಿ ಶುಭದಾಯಿನಿ

೫ನೇ ಗೋಡೆಯ ಚಿತ್ರಗಳು- ವಿ.ಆರ್ ಕಾರ್ಪೆಂಟರ್

ಒಂದು ಬಟ್ಟೆಯ ಚೂರು- ಉಗಮ ಶ್ರೀನಿವಾಸ

ಅಗ್ನಿ ದಿವ್ಯ- ಎಸ್.ಸಂಧ್ಯಾ ದೇವಿ

 

ಹಿರಿಯ ಕವಿಗಳ ಸಂಕಲನಗಳು:

ಮಗಳು ಸೃಜಿಸಿದ ಸಮುದ್ರ- ಎಸ್.ಮಂಜುನಾಥ್

ಒಂದು ಜಿಲೇಬಿ- ಜಯಂತ ಕಾಯ್ಕಿಣಿ

ಮಬ್ಬಿನ ಹಾಗೆ ಕಣಿವೆಯಾಸಿ- ಎಚ್.ಎಸ್.ಶಿವಪ್ರಕಾಶ್

ಉತ್ತರಾಯಣ ಮತ್ತು… – ಎಚ್.ಎಸ್.ವೆಂಕಟೇಶ ಮೂರ್ತಿ

ಅಗ್ನಿ ಪರ್ವ- ಜಿ.ಎಸ್.ಶಿವರುದ್ರಪ್ಪ

ಬೆಳ್ಳಕ್ಕಿ ಹಿಂಡು (ಎಕ್ಕುಂಡಿ ಸಮಗ್ರ ಕಾವ್ಯ)- ಸು.ರಂ.ಎಕ್ಕುಂಡಿ

 

ಕಥೆ:

ಬಾರಕ್ಕ ಬೆಳದಿಂಗಳೆ- ಕೇಶವರೆಡ್ಡಿ ಹಂದ್ರಾಳ

ಕಾಡುಹಾದಿಯ ಕಥೆಗಳು- ಜೋಗಿ

ಕಾಯಕ್ಕೆ ನೆಳಲಾಗಿ- ಪ್ರಹ್ಲಾದ ಅಗಸನ ಕಟ್ಟೆ

ವಾಸನೆ, ಶಬ್ದ, ಬಣ್ಣ ಇತ್ಯಾದಿ… – ಅಶೋಕ ಹೆಗಡೆ

ಹಂಪಿ ಎಕ್ಸ್ ಪ್ರೆಸ್- ವಸುಧೇಂದ್ರ

ಗಾಂಧಿ ಚಿತ್ರದ ನೋಟು- ಸುನಂದಾ ಪ್ರಕಾಶ ಕಡಮೆ

ಊರ ಒಳಗಣ ಬಯಲು- ವಿನಯಾ

ಮತಾಂತರ- ಕಲಿಗಣ ನಾಥ ಗುಡದೂರು

ಮುತ್ತಾಗದ ಮಳೆ- ವೈ.ಗ.ಜಗದೀಶ್

ಹುಡುಗಾಟ- ಬಿ.ಟಿ.ಜಾಹ್ನವಿ

ವಿಚಾರಣೆ- ಲಕ್ಷ್ಮಣ ಕೊಡಸೆ

ಮಾಗಿಯ ಮನಸ್ಸು ಮತ್ತು ಇತರ ಕಥೆಗಳು- ನವೀನ್ ಕುಮಾರ್ ತೀರ್ಥಹಳ್ಳಿ

ನೀರು ನಿಂತ ನೆಲ- ಸಂತೆಕಸಲಗೆರೆ ಪ್ರಕಾಶ್)

ಬ್ರಾಂಡಿ- ವಿ.ಎಮ್.ಮಂಜುನಾಥ್

ಭ್ರಮೆ- ಟಿ.ಎಸ್.ಗೊರವರ

ಬಾರಯ್ಯ ಬೆಳದಿಂಗಳೇ- ಸರ್ಜಾ ಶಂಕರ ಹರಳೀಮಠ

ಕಾರಂತಜ್ಜನಿಗೊಂದು ಪತ್ರ- ಸಚ್ಚಿದಾನಂದ ಹೆಗಡೆ