ಭ್ರಷ್ಟ ಜಯಲಲಿತಾ ಯಾವೆಲ್ಲದರ ಫಲಿತಾಂಶ?

ಅಧಿಕೃತವಾಗಿ ತನ್ನ ಸ್ವಂತದವರೆಂದು ಹೇಳಿಕೊಳ್ಳಲು ಮತ್ತೊಂದು ಜೀವ ಜೊತೆಗಿರದ ಜಯಲಲಿತಾ ಇವೆಲ್ಲವನ್ನೂ ಮಾಡಿಟ್ಟಿದ್ದು ಯಾಕಾಗಿ? ತನ್ನ ನೆಲದ ಬಡ ಜನರಿಗೆ ರೂಪಾಯಿಗೊಂದು ಇಡ್ಲಿ, ಕುಡಿಯುವ ನೀರು, ಸೂರು ಎಂದೆಲ್ಲ ಜನಪರ – ಜನಪ್ರಿಯ ಯೋಜನೆಗಳನ್ನು ರೂಪಿಸಿದ ಜಯಲಲಿತಾ ಅದೇ ಜನರ ತೆರಿಗೆ ಹಣವನ್ನು ನುಂಗಿ ಕೂತಿರುವುದು ಯಾಕೆ? ನಿಜಕ್ಕೂ ಈ ಪರಿಯ ಹಪಾಹಪಿ ಅವರಲ್ಲಿದೆಯೇ? ತುಸು ಜಂಭದ, ಆದರೆ ಅಪ್ರಮಾಣಿಕತೆ ಕಾಣದ ಅವರ ಮುಖ ಹಾಗೂ ನಿಲುವಿನಲ್ಲಿ ಮೋಸವಿದೆಯೇ? ಇಂದು ನಾವು ನೋಡುತ್ತಿರುವ ಭ್ರಷ್ಟ ರಾಜಕಾರಣಿ ಜಯಲಲಿತಾ ರೂಪುಗೊಂಡಿದ್ದು ಹೇಗೆ?

ಬದುಕನ್ನು ಗಂಡು – ಹೆಣ್ಣೆಂಬ ಭೇದ ಮೀರಿದ ದೃಷ್ಟಿಕೋನದಿಂದ ನೋಡಬೇಕೆನ್ನುವುದು ನಿಜವಾದರೂ ಅದರ ಹೊರಳಾಟಗಳನ್ನು ನೋಡುವಾಗ ಈ ಭೇದದ ಊರುಗೋಲು ಅಗತ್ಯವಾಗಿಬಿಡುತ್ತದೆ. ಏಕೆಂದರೆ, ಬದುಕು ಒಂದೇ ಆದರೂ ಅದನ್ನು ಹೆಣ್ಣು ಎದುರುಗೊಳ್ಳುವ ಬಗೆಯೇ ಬೇರೆ ಮತ್ತು ಗಂಡು ಒಳಗೊಳಿಸಿಕೊಳ್ಳುವ ಬಗೆ ಬೇರೆ. ಏಕೆಂದರೆ, ನಾಗರಿಕತೆಯ ಆರಂಭಕಾಲದಿಂದಲೂ ಗಂಡು ಹೆಣ್ಣಿಗೆ ಕೊಡಲಾಗಿರುವ ಅವಕಾಶಗಳು ಹಾಗಿವೆ.

ಎಂಜಿಆರ್ ಜೊತೆ

ಎಂಜಿಆರ್ ಜೊತೆ

ಸದ್ಯದ ಭಾರತೀಯ ರಾಜಕಾರಣದ ಮುಖ್ಯಧಾರೆಯಲ್ಲಿರುವ ಐವರು ಹೆಣ್ಣುಗಳ ಬದುಕು ಮತ್ತು ಸಾಧನೆಗಳು ವಿಶಿಷ್ಟವೇ. ಅವರ ಹಗರಣಗಳೂ ಕೂಡಾ. ಭ್ರಷ್ಟಾಚಾರದ ವಿಷಯಕ್ಕೆ ಬಂದಾಗ ಅಲ್ಲಿ ಕೂಡ ಲಿಂಗ ತಾರತಮ್ಯ ಇರುವುದಿಲ್ಲ. ವಿಚಾರಣೆ, ಶಿಕ್ಷೆ, ಪರಿಣಾಮಗಳಿಗೆ ಸಂಬಂಧಿಸಿದಂತೆ ಅದನ್ನು ತರತಮವಿಲ್ಲದೆಯೇ ನೋಡಬೇಕಾಗುತ್ತದೆ. ಈ ಸಾಮಾಜಿಕ ಆಯಾಮವನ್ನು ಮೀರಿ, ಮಾನಸಿಕ ಸ್ತರದಲ್ಲಿ ನೋಡುವಾಗ, ಮಾನವೀಯ ಚಿಂತನೆಗೆ ಹಚ್ಚಿ ನೋಡುವಾಗ ಬಿಚ್ಚಿಕೊಳ್ಳುವ ದೃಶ್ಯಗಳೂ ಬೇರೆಯೇ ಇರುತ್ತವೆ. ಅಲ್ಲಿ ಮಾಯಾವತಿಯ ಮೂರ್ತಿಗಳಿಗೆ, ಚಿನ್ನದ ಕತ್ತಿಗಳಿಗೆ ಬೇರೆಯೇ ಅರ್ಥ ಕಾದಿರುತ್ತದೆ. ಹಿಂಜಿಹೋದ ಕಾಟನ್‌ ಸೀರೆಯನ್ನಷ್ಟೆ ಉಡುವ ಮಮತಾ ಬ್ಯಾನರ್ಜಿಯ ಹೆಸರು ಯಾಕೆ ಚೀಟಿ ವ್ಯವಹಾರದಂಥದರಲ್ಲಿ ಕಾಣಿಸುತ್ತದೆ ಎಂಬುದರ ಅರಿವಾಗುತ್ತದೆ. ಯಾಕೆ ಉಮಾ ಭಾರತಿ ಹಾಗೆ ರಚ್ಚೆ ಹಿಡಿದ ಮಗುವಿನಂತಾಡುತ್ತಾರೆ ಎಂದರೆ ಅವರ ಸೋತ ಹೃದಯದ ನೋವು ಕೇಳಿಸುತ್ತದೆ. ಸೋನಿಯಾರ ನಗುವಿಲ್ಲದ ಮುಖವೂ ಅವರ ಪರಿವಾರದೊಂದಿಗೆ ಹೆಣೆದುಕೊಂಡ ಹಗರಣಗಳು, ಹಣದ ವ್ಯವಹಾರಗಳು ಮತ್ತೊಂದೇ ಕಥೆ ಹೇಳತೊಡಗುತ್ತವೆ. ಈ ಎಲ್ಲವನ್ನು ಆ ಎಲ್ಲರ ಅಪರಾಧಗಳ ಸಮರ್ಥನೆಗಾಗಿ ಖಂಡಿತ ಬಳಸಬಾರದು. ಆದರೆ ಅರ್ಥೈಸಿಕೊಳ್ಳಲು ಮತ್ತು ನಮ್ಮನಮ್ಮ ಸ್ತರಗಳಲ್ಲಿ ಅವನ್ನು ಅನ್ವಯಿಸಿಕೊಂಡು ನೋಡಲು ಇವು ಬೇಕಾಗುತ್ತವೆ.
ಜಯಲಲಿತಾ ಬೇಲ್‌ಗೆ ಅರ್ಜಿ ಹಾಕಿಕೊಂಡು ಕೂತಿದ್ದಾರೆ. ಅವರ ಚಪ್ಪಲಿ ಸಂಖ್ಯೆಗಳ, ಸೀರೆಗಳ, ಚಿನ್ನ ಭಂಡಾರದ ಚರ್ಚೆ ನಡೆಯುತ್ತ ಆಕೆಯ ಭ್ರಷ್ಟತೆಯ ಚರ್ಚೆ ಸಾಗುತ್ತಿದೆ. ಇವುಗಳಾಚೆ ಜಯಲಲಿತ ಸಾವಿರಾರು ಎಕರೆ ಭೂಮಿ, ಸ್ಥಿರ – ಚರಾಸ್ತಿಗಳನ್ನು ಮಾಡಿಟ್ಟುಕೊಂಡಿದ್ದಾರೆ. ಅಧಿಕೃತವಾಗಿ ತನ್ನ ಸ್ವಂತದವರೆಂದು ಹೇಳಿಕೊಳ್ಳಲು ಮತ್ತೊಂದು ಜೀವ ಜೊತೆಗಿರದ ಜಯಲಲಿತಾ ಇವೆಲ್ಲವನ್ನೂ ಮಾಡಿಟ್ಟಿದ್ದು ಯಾಕಾಗಿ? ತನ್ನ ನೆಲದ ಬಡ ಜನರಿಗೆ ರೂಪಾಯಿಗೊಂದು ಇಡ್ಲಿ, ಕುಡಿಯುವ ನೀರು, ಸೂರು ಎಂದೆಲ್ಲ ಜನಪರ – ಜನಪ್ರಿಯ ಯೋಜನೆಗಳನ್ನು ರೂಪಿಸಿದ ಜಯಲಲಿತಾ ಅದೇ ಜನರ ತೆರಿಗೆ ಹಣವನ್ನು ನುಂಗಿ ಕೂತಿರುವುದು ಯಾಕೆ? ನಿಜಕ್ಕೂ ಈ ಪರಿಯ ಹಪಾಹಪಿ ಅವರಲ್ಲಿದೆಯೇ? ತುಸು ಜಂಭದ, ಆದರೆ ಅಪ್ರಮಾಣಿಕತೆ ಕಾಣದ ಅವರ ಮುಖ ಹಾಗೂ ನಿಲುವಿನಲ್ಲಿ ಮೋಸವಿದೆಯೇ? ಇಂದು ನಾವು ನೋಡುತ್ತಿರುವ ಭ್ರಷ್ಟ ರಾಜಕಾರಣಿ ಜಯಲಲಿತಾ ರೂಪುಗೊಂಡಿದ್ದು ಹೇಗೆ?
~

ಅಮ್ಮನ ಜೊತೆ ಪುಟ್ಟ ಜಯಲಲಿತಾ

ಅಮ್ಮನ ಜೊತೆ ಪುಟ್ಟ ಜಯಲಲಿತಾ

ಜಯಲಲಿತಾ ಅಪ್ಪಟ ಜೀವನ ಪ್ರೀತಿಯ ಹೆಣ್ಣಾಗಿದ್ದವರು. ಬಿಷಪ್‌ ಕಾಟನ್ಸ್‌ನಲ್ಲಿ ಓದುತ್ತಿದ್ದ ಕಾಲಕ್ಕೆ ಬಹಳ ಬುದ್ಧಿವಂತೆ ಮತ್ತು ಪಠ್ಯೇತರ ಪುಸ್ತಕಗಳನ್ನೂ ಓದುವ ಆಸಕ್ತಿ ಇದ್ದವರು. ಹಾಡು, ನೃತ್ಯ, ಆಟ ಎಲ್ಲದರಲ್ಲು ಸದಾ ಪುಟಿಯುವ ಉತ್ಸಾಹ. ಅವತ್ತಿನ ಕ್ರಿಕೆಟಿಗ ಪಟೌಡಿಯ ಮೇಲೆ ಕ್ರಶ್ ಬೆಳೆಸಿಕೊಂಡಿದ್ದ ಜಯಾ, ಅವರನ್ನ ನೋಡಲಿಕ್ಕೆಂದೇ ಕ್ರಿಕೆಟ್‌ಗೆ ಹೋಗ್ತಿದ್ದರಂತೆ!
ಅವರಮ್ಮ ಸಂಧ್ಯಾ ನಟಿಯಾಗಿ ಮಗಳನ್ನು ಸಲಹುತ್ತಿದ್ದ ಕಾಲಕ್ಕೆ ಒಮ್ಮೆ ಜಯಲಲಿತಾ ಸುಮ್ಮನೆ ಮೇಕಪ್‌ ಬಾಕ್ಸಿನಿಂದ ಏನೆಲ್ಲ ತೆಗೆದು ಮುಖಕ್ಕೆ ಹಚ್ಚಿಕೊಂಡಿದ್ದರಂತೆ. ಆಗ ಅವರಮ್ಮ “ನನ್ನದಂತೂ ಹೀಗಾಯಿತು, ನೀನು ಮಾತ್ರ ಇದನ್ನೆಲ್ಲ ಮಾಡೋದು ಬೇಡ” ಅಂದಿದ್ದರಂತೆ. ಆದರೆ ಇದೇ ಅಮ್ಮ ಕೆಲವೇ ವರ್ಷಗಳ ನಂತರ ಮಗಳನ್ನು ನಟನೆಗೆ ಒತ್ತಾಯಿಸಬೇಕಾಗಿ ಬಂದಿದ್ದು ದುರಂತ. ಆ ಹೊತ್ತಿಗೆ ಜಯಾ ಶಾಲೆಯಲ್ಲಿ ಒಳ್ಳೆಯ ಅಂಕ ಪಡೆದು ಮುಂದಿನ ಓದಿಗೆ ಸ್ಕಾಲರ್‌ಶಿಪ್ಪನ್ನೂ ಪಡೆದಿದ್ದರು. ಆದರೆ ಕುಟುಂಬ ಹೊರೆಯುವ ಅನಿವಾರ್ಯತೆ ಅವರನ್ನ ನಟನೆಗೆ ನೂಕಿತ್ತು. ವಿ.ವಿ.ಗಿರಿಯವರ ಮಗ ತೆಗೆದ ಇಂಗ್ಲಿಶ್‌ ಸಿನೆಮಾ ಒಂದರಲ್ಲಿ ಅಭಿನಯಿಸುವ ಮೂಲಕ ಭರ್ಜರಿ ಓಪನಿಂಗ್ ಶುರು ಮಾಡಿದರು ಜಯಲಲಿತಾ. ಆಗ ಅವರಿಗೆ ಕೇವಲ ಹದಿನೈದು ವರ್ಷ ವಯಸ್ಸು.
ಮುಂದೆ ತೆಲುಗು, ತಮಿಳು, ಕನ್ನಡ, ಒಂದೆರಡು ಹಿಂದಿ ಚಿತ್ರಗಳು ಎಂದೆಲ್ಲ ಹಿಟ್‌ ಸಿನೆಮಾಗಳಲ್ಲಿ ಅಭಿನಯಿಸಿ ಅಕ್ಷರಶಃ ಚಿತ್ರರಂಗವನ್ನು ಆಳತೊಡಗುತ್ತಾರೆ. ಕೇವಲ ಸೌಂದರ್ಯವಷ್ಟೆ ಅಲ್ಲ, ಬುದ್ಧಿವಂತಿಕೆಯೂ ಇದ್ದ ಈ ಹುಡುಗಿ ಅವತ್ತಿನ ದಕ್ಷಿಣ ಭಾರತದ ಸೂಪರ್‌ ಸ್ಟಾರ್‌ ಎಂಜಿಆರ್‌ ಕಣ್ಣು ಕುಕ್ಕಲಿಕ್ಕೆ ಹೆಚ್ಚಿನ ಸಮಯ ಬೇಕಾಗುವುದಿಲ್ಲ. ಮೆಲ್ಲಗೆ ರಾಜಕಾರಣದಲ್ಲೂ ತೊಡಗಿಸಿಕೊಳ್ಳುತ್ತಿದ್ದ ಎಂಜಿಆರ್‌ ಜಯಲಲಿತಾರಿಗೆ ತಮ್ಮ ಜೊತೆ ನಟಿಸಲು ಅವಕಾಶ ಕೊಡುತ್ತ, ತಮ್ಮೊಡನೆಯೇ ಇರಿಸಿಕೊಂಡು ಪ್ರಮೋಟ್ ಮಾಡುತ್ತಾರೆ. ಆಕೆಯ ಆಕರ್ಷಕ ವ್ಯಕ್ತಿತ್ವ, ಸ್ನೇಹಪರತೆ ಮತ್ತು ಮಾತುಗಾರಿಕೆ ತನಗೆ ಲಾಭವಾಗುತ್ತದೆಂದು ಪಕ್ಷದೊಳಕ್ಕೂ ಬಿಟ್ಟುಕೊಳ್ತಾರೆ. ಅಲ್ಲಿಂದ ಮುಂದೆ ಜಯಲಲಿತಾ ಎಂಜಿಆರ್‌ ಚಿತ್ರಗಳ ಖಾಯಂ ನಾಯಕಿ ಎಂದಾಗಿಬಿಡುತ್ತದೆ.

ಶೋಭನ್ ಬಾಬು ಜೊತೆ

ಶೋಭನ್ ಬಾಬು ಜೊತೆ

ಆದರೆ ಎಂಜಿಆರ್‌ ಏಳು ಕೆರೆಯ ನೀರು ಕುಡಿದವರು. ಜಯಲಲಿತಾ ಅವರಿಗೊಂದು ಆಯ್ಕೆ ಅಷ್ಟೇ. ಹಾಗೆಂದೇ ಇದ್ದಕ್ಕಿದ್ದಂತೆ ತಮ್ಮ ಒಂದು ಸಿನೆಮಾಕ್ಕೆ ಬೇರೆ ನಾಯಕಿಯನ್ನ ಹಾಕಿಕೊಳ್ತಾರೆ. ಜಯಲಲಿತಾರ ಸ್ವಾಭಿಮಾನ ಹಾಗೂ ಆತ್ಮಗೌರವದ ಪರಿಚಯ ಆಗೋದು ಆವಾಗಲೇ. ಹೆಚ್ಚೂಕಡಿಮೆ ತನ್ನನ್ನು ಪ್ರೇಯಸಿಯಂತೆಯೇ ನಡೆಸಿಕೊಳ್ತಿದ್ದ ಎಂಜಿಆರ್‌ ವಿರುದ್ಧ ಸಿಡಿದು ಬೀಳುವ ಜಯಾ ತೆಲುಗಿನತ್ತ ಮುಖ ಮಾಡುತ್ತಾರೆ. ಅಲ್ಲಿನ ಸೂಪರ್‌ ಸ್ಟಾರ್‌ ಶೋಭನ್‌ ಬಾಬುವಿನ ಜೊತೆ ನಟಿಸತೊಡಗುತ್ತಾರೆ. ಅವರೊಂದಿಗೆ ಲಿವ್‌ಇನ್‌ ಬದುಕು ಆರಂಭಿಸುವ ಜಯಲಲಿತಾ ಅವರನ್ನು ಇನ್ನಿಲ್ಲದಂತೆ ಪ್ರೇಮಿಸುತ್ತಾರೆ ಕೂಡಾ. ಬಹುಶಃ ಜಯಾ ಬದುಕಿನ ಮೊದಲ ಮತ್ತು ಕೊನೆಯ ಪ್ರೇಮ ಅದೊಂದೇ. ಎಂಜಿಆರ್‌ ಜೊತೆ ಅವರಿಗೆ ಇದ್ದದ್ದು ಮುಲಾಜು ಮಾತ್ರ.

ಇದೇ ಮುಲಾಜು ಮತ್ತೆ ಅವರಿಬ್ಬರನ್ನು ಒಂದುಗೂಡಿಸುತ್ತದೆ. ಎಂಜಿಆರ್‌ ಜಯಲಲಿತಾರನ್ನು ಪುಸಲಾಯಿಸಿ ಮತ್ತೆ ತಮ್ಮತ್ತ ಸೆಳೆದುಕೊಳ್ಳುತ್ತಾರೆ. ಅವರ ಪಕ್ಷಕ್ಕೆ ಕೆಲಸ ಮಾಡುತ್ತ ಪುನಃ ಎಂಜಿಆರ್‌ ಕಡೆ ವಾಲುವ ಜಯಾ ಶೋಭನ್‌ ಬಾಬುವನ್ನು ಶಾಶ್ವತವಾಗಿ ಕಳೆದುಕೊಳ್ಳುತ್ತಾರೆ.

“ನನ್ನ ಬದುಕಲ್ಲಿ ಬಂದ ಯಾವ ಗಂಡಸೂ ನನ್ನನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ” ಎಂದು ಒಂದೆಡೆ ಹೇಳಿಕೊಳ್ಳುವ ಜಯಲಲಿತಾ ಎಂಜಿಆರ್‌ರಿಂದ ಹೊಡೆತ ತಿಂದಿದ್ದೂ ಇದೆ. ಈಕೆಯ ಹಿಂದೆ ಗೂಢಚಾರರನ್ನು ಬಿಟ್ಟು ಪ್ರತಿ ದಿನದ ಅಪ್‌ಡೇಟ್ಸ್ ತರಿಸಿಕೊಳ್ತಿದ್ದರಂತೆ ಎಂಜಿಆರ್‌. ಆ ಮನುಷ್ಯ ಈಕೆಯನ್ನು ಪ್ರಮೋಟ್‌ ಮಾಡಿದ್ದಕ್ಕಿಂತ ಗೋಳಾಡಿಸಿದ್ದೇ ಹೆಚ್ಚು. ಬಹುಶಃ ಈ ಕಾರಣದಿಂದಲೇ ಜಯಲಲಿತಾ ಶಶಿಕಲಾರನ್ನು ತಮ್ಮ ಅಂತರಂಗಕ್ಕೆ ಬಿಟ್ಟುಕೊಳ್ಳುವುದು ಮತ್ತು ತಮ್ಮ ಸಂಪೂರ್ಣ ಜವಾಬ್ದಾರಿಯನ್ನು ಅವರ ಹೆಗಲಿಗೆ ಹೊರಿಸುವುದು.
ಈಗ ಜಯಾ ಆಪ್ತ ಸಹಾಯಕಿ ಎಂದೇ ಬಿಂಬಿತವಾಗುತ್ತಿರುವ ಶಶಿಕಲಾ ಮೊದಲು ಬಂದಿದ್ದು ಈಕೆಯ ವಿರುದ್ಧ ಸ್ಪೈ ಮಾಡಲೆಂದೇ. ಸ್ವತಃ ಎಂಜಿಆರ್‌ ಆಕೆಯನ್ನು ಅದಕ್ಕಾಗಿ ಕರೆಸಿದ್ದರೆಂದು ಹೇಳಲಾಗುತ್ತದೆ.

ಶಶಿಕಲಾ...

ಶಶಿಕಲಾ…

ವಿಡಿಯೋ ಪಾರ್ಲರ್ ಒಂದನ್ನು ನಡೆಸುತ್ತಿದ್ದ ಶಶಿಕಲಾ ಏಕಾಏಕಿ ಜಯಾ ಬದುಕಿನ ಸೂತ್ರಗಳೆಲ್ಲವನ್ನು ತನ್ನ ಮುಷ್ಟಿಯಲ್ಲಿ ಹಿಡಿದು, ತಾನಿಲ್ಲದೆ ಆಕೆಯ ಕೆಲಸಗಳ್ಯಾವುದೂ ನಡೆಯದು ಎನ್ನುವ ಮಟ್ಟಕ್ಕೆ ತಂದಿಡುತ್ತಾರೆ. ಇದು ಕೇವಲ ಗೃಹಕೃತ್ಯಗಳಿಗಷ್ಟೇ ಅಲ್ಲ, ಜಯಾ ರಾಜಕಾರಣಕ್ಕೂ ಹರಡುತ್ತದೆ. ಜಯಾರಿಗಿರುವ ಶಶಿಕಲಾ ಮೇಲಿನ ಅವಲಂಬನೆ ಮತ್ತು ಅದರಿಂದಾಗುತ್ತಿರುವ ಅನಾಹುತಗಳ ಕುರಿತು ಎಚ್ಚರಿಸಿದವರನ್ನೆಲ್ಲ ದೂರ ಮಾಡುತ್ತ ಬರುತ್ತಾರೆ ಜಯಲಲಿತಾ. ಸಾಕಷ್ಟು ಸ್ನೇಹ ಸಂಪಾದಿಸಿದ ಮೇಲೆ ಒಂದು ದಿನ ಶಶಿಕಲಾ ತನ್ನ ತವರು ಮನ್ನಾರ್‌ಗುಡಿಯಿಂದ ನಲವತ್ತು ಜನರನ್ನು ಕಟ್ಟಿಕೊಂಡು ಜಯಲಲಿತಾರ ಬಂಗಲೆಯ ಮುಂದೆ ಬಂದಿಳಿಯುತ್ತಾರೆ. ಅಲ್ಲಿದ್ದವರನ್ನೆಲ್ಲ ಓಡಿಸಿ, ಅಡುಗೆಮನೆಯಿಂದ ಹಿಡಿದು ಗೇಟು ಕಾಯುವವರೆಗೆ ಎಲ್ಲ ಕಡೆಯಲ್ಲೂ ತನ್ನ ಜನರೇ ಇರುವಂತೆ ನೋಡಿಕೊಳ್ಳುತ್ತಾರೆ. ಅಧಿಕಾರದ ಆಯಕಟ್ಟಿನ ಜಾಗಗಳಲ್ಲಿ ತನ್ನ ಪರಿವಾರದವರನ್ನು ಕೂರಿಸಿ ಹಣ ದೋಚಲು ಶುರುವಿಡುತ್ತಾರೆ. ೧೯೯೬ ವೇಳೆಗೆ ಶಶಿಕಲಾ ಮಾತ್ರವಲ್ಲ, ಆಕೆಯ ವಂಶದ ಕಟ್ಟಕಡೆಯ ಸದಸ್ಯನೂ ಕೋಟ್ಯಧೀಶ್ವರನಾಗುವಂತೆ ನೋಡಿಕೊಳ್ಳುತ್ತಾರೆ ಶಶಿಕಲಾ. ಕೆಲವು ವರ್ಷಗಳ ಹಿಂದೆ ಜಯಲಲಿತಾ ಶಶಿಕಲಾ ಮತ್ತವರ ಪರಿವಾರದಿಂದ ಉಸಿರುಗಟ್ಟಿ, ಎಲ್ಲ ಕಡೆಯಿಂದಲೂ ಬುದ್ಧಿಮಾತು ಕೆಳಿ ಜ್ಞಾನೋದಯವಾದಂತಾಗಿ ಆಕೆಯನ್ನು ಹೊರಗಟ್ಟುತ್ತಾರೆ. ಪಕ್ಷದಿಂದಲೂ ಮನೆಯಿಂದಲೂ ಆಚೆ ಇಡುತ್ತಾರೆ. ಆದರೆ ಈ ಮುನಿಸು ಬಹಳ ಕಾಲ ಬಾಳಲಿಲ್ಲ. ಜಯಲಲಿತಾರ ಅನಾಥಪ್ರಜ್ಷೆ, ಅಸಹಾಯಕತೆ, ದೌರ್ಬಲ್ಯಗಳೆಲ್ಲವನ್ನು ನಿಭಾಯಿಸುತ್ತ ಆಕೆಯನ್ನು ವಶೀಕರಣ ಮಾಡಿಕೊಂಡಂತೆ ಇದ್ದ ಶಶಿಕಲಾರನ್ನು ಕೇವಲ ಒಂದೇ ವರ್ಷದಲ್ಲಿ ಮರಳಿ ಕರೆಸಿಕೊಳ್ತಾರೆ ಜಯಾ. ಬಹುಶಃ ಜಯಲಲಿತಾರ ಇಂದಿನ ಸ್ಥಿತಿಗೆ ಶಶಿಕಲಾ ಮತ್ತು ಸುಬ್ರಮಣಿಯನ್‌ ಸ್ವಾಮಿ ಹೇಳುವಂತೆ ಆಕೆಯ ಮನ್ನಾರ್‌ಗುಡಿ ಗ್ಯಾಂಗ್‌ ಮುಖ್ಯ ಕಾರಣ.
~

ಕಾಯುತ್ತಲೇ ಇದೆ ಕನ್ನಡಿ, ನಿಜದ ಮುಖ ಮರಳಿ ಬರುವುದಕ್ಕಾಗಿ...

ಕಾಯುತ್ತಲೇ ಇದೆ ಕನ್ನಡಿ,
ನಿಜದ ಮುಖ ಮರಳಿ ಬರುವುದಕ್ಕಾಗಿ…

ಜಯಲಲಿತಾ ಇಷ್ಟೆಲ್ಲ ದೂರ ಕ್ರಮಿಸಿದ್ದು ಹೂವಿನ ದಾರಿಯ ನಡಿಗೆಯಿಂದಲ್ಲ. ಎಂಜಿಆರ್‌ ಆಕೆಯನ್ನು ಬೆಳೆಸಿದಂತೆ ಕಂಡರೂ ಆತ ಆಕೆಯನ್ನು ಬಳಸಿಕೊಂಡಿದ್ದೇ ಹೆಚ್ಚು. ತನ್ನ ಪ್ರೇಮವನ್ನೂ ಮುರಿದುಕೊಂಡು ಅವರಿಗೆ ಯೀಲ್ಡ್‌ ಆದ ಜಯಲಲಿತಾ ಅದಕ್ಕೆ ತಕ್ಕ ಪ್ರತಿಫಲವನ್ನು ಬಯಸಿದರು. ಎಂಜಿಆರ್‌ ಸ್ಟ್ರೋಕ್‌ ಹೊಡೆದು ಹಾಸಿಗೆ ಹಿಡಿದಾಗ ದೆಹಲಿಗೆ ತೆರಳಿದ ಜಯಲಲಿತಾ, ಅವರ ಅಸಾಮರ್ಥ್ಯದ ಕಾರಣ ನೀಡಿ ತಮ್ಮನ್ನೆ ಮುಖ್ಯಮಂತ್ರಿಯಾಗಿ ನೇಮಿಸುವಂತೆ ಕೇಳಿಕೊಂಡಿದ್ದರು! ಇದರಿಂದ ಕೆಂಡಾಮಂಡಲರಾದ ಎಂಜಿಆರ್‌ ಆಕೆಯನ್ನು ತರಾಟೆಗೆ ತೆಗೆದುಕೊಂಡರು. ಅದಕ್ಕೆ ಜಯಾ ಕೊಟ್ಟ ಉತ್ತರ ಸ್ಪಷ್ಟವಿತ್ತು. “ಇಂದು ನಾನು ಬೆಳೆದು ನಿಂತ ಪ್ರತ್ಯೇಕ ವ್ಯಕ್ತಿ. ನನ್ನಲ್ಲಿ ರಾಜ್ಯ ನಡೆಸುವ ಸಾಮರ್ಥ್ಯವಿದೆ. ನಿಮ್ಮ ಈ ವರೆಗಿನ ಸಹಾಯಕ್ಕೆ ವೈಯಕ್ತಿಕವಾಗಿ ಕೃತಜ್ಞಳಾಗಿದ್ದೇನೆ, ಮುಂದೆಯೂ ಆಗಿರುತ್ತೇನೆ. ಆದರೆ ನನ್ನ ಬೆಳವಣಿಗೆಯ ಹಾದಿಯಲ್ಲಿ ನಾನೇ ಹೆಜ್ಜೆ ಇಡುವುದು ಅಗತ್ಯವಿದೆ”.
ಇದಾದ ನಂತರ ಎಂಜಿಆರ್‌ ಬಹಳ ವರ್ಷ ಬದುಕಲಿಲ್ಲ. ಅವರು ಇಲ್ಲವಾದ ಕಾಲಕ್ಕೆ ಅವರ ಹೆಂಡತಿ ಜಾನಕಿ ಅಧಿಕಾರಕ್ಕೆ ಬಂದರು. ಅವರ ವಿರುದ್ಧ ಸೆಟೆದುಬಿದ್ದ ಜಯಾ ಎಂಜಿಆರ್‌ ಮೇಲೆ ತಮಗಿದ್ದ ಹಕ್ಕನ್ನು ಪ್ರತಿಪಾದಿಸುತ್ತಾ ಮತ್ತೊಂದು ಬಣ ಹುಟ್ಟುಹಾಕಿದರು. ಅಪಾರ ಬೆಂಬಲಿಗರೊಂದಿಗೆ ಛಲಕ್ಕೆ ಬಿದ್ದು ಮೂರ್ನಾಲ್ಕು ವರ್ಷಗಳಲ್ಲಿ ಮುಖ್ಯಮಂತ್ರಿಯಾಗಿಯೂ ಬಿಟ್ಟರು.
ಈ ಎಲ್ಲ ಸಂದರ್ಭಗಳಲ್ಲೂ ಅವರ ಜೊತೆಗಿದ್ದರು ಶಶಿಕಲಾ. ಅಧಿಕಾರ ಹಿಡಿದ ನಾಲ್ಕೇ ವರ್ಷಗಳಲ್ಲಿ ಹಗರಣಗಳ ಸರಮಾಲೆ ಜಯಾ ಕೊರಳನ್ನು ಸುತ್ತಿತು. ಅನಂತರದ ಚುನಾವಣೆಗಳಲ್ಲಿ ಹೇವು ಏಣಿಯಾಟ ಆಡಿದರು ಜಯಲಲಿತಾ. ಜಿದ್ದು – ಸೇಡಿನ ರಾಜಕಾರಣಗಳು ನಡೆದವು. ಇವುಗಳ ನಡುವೆ ಒಂದೂವರೆ ಲಕ್ಷ ಅಥಿತಿಗಳಿಗೆ ಉಣಬಡಿಸಿ ತಮ್ಮ ಸಾಕುಮಗನಿಗೆ ಅದ್ದೂರಿಯ ಮದುವೆ ಮಾಡಿ ಗಿನ್ನಿಸ್‌ ಪುಸ್ತಕದಲ್ಲೂ ದಾಖಲೆಯಾದರು ಜಯಲಲಿತಾ.
ವಿಧಾನ ಸಭೆಯಲ್ಲಿ ಕಿಡಿಗೇಡಿಗಳು ಆಕೆಯ ಸೀರೆ ಎಳೆದರೆಂದು ಗೌನ್‌ ಹಾಕಿಕೊಂಡು ಓಡಾಡತೊಡಗಿದರು. ಕರುಣಾನಿಧಿ ಅಧಿಕಾರಕ್ಕೆ ಬಂದಾಗ ತಮ್ಮ ಆಭರಣಗಳನ್ನು ಸೀಜ್‌ ಮಾಡಿದರೆಂದು ಕೋಪಿಸಿಕೊಂಡ ಜಯಾ ಹದಿನಾಲ್ಕು ವರ್ಷಗಳ ಕಾಲ ಆಭರಣವನ್ನ ತೊಟ್ಟಿರಲಿಲ್ಲ! ಅವರು ಮತ್ತೆ ಚಿನ್ನ ಮುಟ್ಟಿದ್ದು ಮತ್ತೆ ಅಧಿಕಾರದ ಗಾದಿ ಏರಿದಾಗಲೇ.
~
ಸ್ವಾಭಿಮಾನ, ಗರ್ವ, ಮಹತ್ವಾಕಾಂಕ್ಷೆ, ಹೊಡೆತಗಳು, ಮೇಲ್ನೋಟದ ಗೆಲುವು ಹಾಗೂ ಅಂತರಂಗದ ಸೋಲುಗಳು, ಪ್ರೇಮದ ಹಪಾಹಪಿ, ಮುಖವಾಡಗಳಲ್ಲೆ ಮುಚ್ಚಿಹೋದ ಮುಖದ ನೋವು – ಈ ಎಲ್ಲವೂ ಯಾವುದೇ ವ್ಯಕ್ತಿಯನ್ನು ವಂಚಕನನ್ನಾಗಿ ರೂಪಿಸುತ್ತದೆ. ಅದರಲ್ಲಿಯೂ ವಂಚನೆಗೊಳಗಾದ, ದಬಾವಣೆಗೊಳಪಟ್ಟ ಹೆಣ್ಣನ್ನು ಹಟಮಾರಿಯನ್ನಾಗಿಸುತ್ತದೆ. ಭ್ರಷ್ಟ ಜಯಲಲಿತಾ ಈ ಎಲ್ಲದರ ಫಲಿತಾಂಶ ಎಂದನ್ನಿಸುತ್ತದೆಯಲ್ಲವೆ?
~
ಅಂದ ಹಾಗೆ, ನಮ್ಮ ನಮ್ಮ ನೆಲೆಗೆ ಅನ್ವಯಿಸಿಕೊಂಡಾಗ ನಾವು ಎಲ್ಲೆಲ್ಲಿ ಭ್ರಷ್ಟರಾಗಿದ್ದೇವೆ? ನಮನಮಗೆ ಸಿಕ್ಕ ಅವಕಾಶಗಳಲ್ಲಿ?

15 thoughts on “ಭ್ರಷ್ಟ ಜಯಲಲಿತಾ ಯಾವೆಲ್ಲದರ ಫಲಿತಾಂಶ?

  1. ಎಂತಹ ಸ್ಪಷ್ಟ ಮಾಹಿತಿ. ನಿಜ. ನೀವು ಬರೆದಿರುವ ಪ್ರತಿ ಪದವೂ ಅರ್ಥಪೂರ್ಣವಾದವೇ ಮತ್ತು ಜಯಲಲಿತಾ ಬದುಕಿನ ಭ್ರಷ್ಟಾಚಾರಗಳನ್ನು ಬದಿಗಿರಿಸಿ ನೋಡಿದವರಿಗೆ ಇಂತಹ ಬದುಕನ್ನು ಒಬ್ಬ ವ್ಯಕ್ತಿ ತನ್ನ ಜೀವಿತದ ಅವಧಿಯಲ್ಲಿ ಅನುಭವಿಸಲು ಸಾಧ್ಯವೇ ಎನ್ನುವ ಪ್ರಶ್ನೆಯನ್ನು ಮನದಲ್ಲಿ ಹುಟ್ಟಿ ಹಾಕದೇ ಇರಲಾರದು. ಆದ್ರೆ ಕೊನೆಯಲ್ಲಿ ಮೂಡುವ ಪ್ರಶ್ನೆ ಒಂದೇ ಇಷ್ಟಲ್ಲಾ ರಿಸ್ಕ್ ಯಾಕಪ್ಪ ಅನ್ನೋದು.. ಅಲ್ವಾ

  2. ಎಲ್ಲರಿಗೂ ಗೊತ್ತಿರುವ ಹಳಸಿದ ವಿಶಯಗಳನ್ನೇ ಮೀಡಿಯಾಗಳಲ್ಲಿ ಓದಿ, ನೋಡಿ ಬೇಸರಗೊ೦ಡವರಿಗೆ ಒಂದಷ್ಟು ಹೊಸ ಮಾಹಿತಿಗಳನ್ನು ಕೊಡುವ ಚೇತೋಹಾರಿ ಲೇಖನ.

  3. “ವಿಧಾನ ಸಭೆಯಲ್ಲಿ ಕಿಡಿಗೇಡಿಗಳು ಆಕೆಯ ಸೀರೆ ಎಳೆದರೆಂದು ಗೌನ್‌ ಹಾಕಿಕೊಂಡು ಓಡಾಡತೊಡಗಿದರು”. ಎಂದು ಬರೆದಿದ್ದೀರಿ. ಆದರೆ ಅವರು ಎಲ್ ಟಿ ಟಿ ಇ ಯಿಂದ ಜೀವ ಬೆದರಿಕೆಯ ಕಾರಣ ಬುಲೆಟ್ ಪ್ರೂಫ್ ಜಾಕೆಟ್ ಹಾಕಿಕೊಳ್ಳುತ್ತಾರೆ ಎಂಬ ಮಾಹಿತಿ ಇದೆಯಲ್ಲ!

  4. ಈ ಎಲ್ಲಾದಕ್ಕೂ ಹಣವೇ ಮೂಲ, ನಿಜವಾದ ಸ್ನೇಹ ಮತ್ತು ಹಣದ ವ್ಯಾಮೋಹದ ಸ್ನೇಹದ ಎರಡರ ಅರಿವು ಅವರಿಗಾಗಿದೆ ಆದರೆ ಈಗ ಪ್ರಯೋಜನವಿಲ್ಲ ಸಿಹಿ ಇದ್ದರೆ ಇರುವೆ ಬರುವುದು ಅದರಂತೆ ನಗುವಾಗ ಎಲ್ಲರು ನಂಟರು, ಪಸ್ಚ್ಯಾತಪ್ಪ ಪಟ್ಟು ಲಾಭವಿಲ್ಲ ಬೇರೆಯವರು ಇದನ್ನು ನೋಡಿ ಕಲಿಯುವುದೊಳಿತು….

  5. ಗಮನಿಸಿ- ಅವರು ಸೀರೆ ಮೇಲೆ ಗೌನ್ ತೊಡುತ್ತಿದ್ದರು. ಈ ಕೆಲವು ವರ್ಷಗಳಿಂದ ಬಿಟ್ಟಿದ್ದಾರೆ.
    ಬುಲೆಟ್ ಪ್ರೂಫ್ ಜಾಕೆಟ್ ಬಗ್ಗೆ ನನಗೆ ಗೊತ್ತಿಲ್ಲ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s