ರಾಜಕಾರಣ ಯಾವತ್ತೂ ನನ್ನಲ್ಲೊಂದು ಭಯ, ಕುತೂಹಲ ಮತ್ತು ಅಸಹ್ಯಗಳನ್ನು ಮೂಡಿಸಿರುವ ಕ್ಷೇತ್ರ. ಅದರ ದೂರವಿರುತ್ತಲೇ ಹತ್ತಿರುವಿರುವಂಥ ಸೆಳೆತ. ವಾರಾಂತ್ಯ ಮಧ್ಯಾಹ್ನದ ಮಂಪರಿನಲ್ಲಿ ಹೀಗೊಂದು ಸ್ವಗತ ಹರಟಿದಾಗ…..
ತಾಪಮಾನದಲ್ಲಿ ಹೆಚ್ಚಳವಾಗಿರೋದು ಬೇಸಗೆಯ ಕಾವಿಂದಲೋ ಚುನಾವಣೆಯ ಕಾವಿಂದಲೋ ಅನ್ನುವಷ್ಟು ಗೊಂದಲ.
ಅದ್ಯಾಕೋ ಈ ಸಲದ ಚುನಾವಣೆಯಲ್ಲಿ ಗೆಲ್ಲುವ ಕುದುರೆಗಳೇ ಹೆಚ್ಚು ಬೆವರುತ್ತಿರುವಂತೆ ಅನ್ನಿಸುತ್ತಿದೆ. ಹ್ಯಾಟ್ರಿಕ್ ಹೀರೋಗಳು ಮೇಲಿಂದ ಮೇಲೆ ‘ಈ ಸಲವೂ ನಾನೇ’ ಅನ್ನುತ್ತಿದ್ದರೂ ‘ಆಪ್’ ಕ್ರಾಂತಿ ಎಲ್ಲಿ ಸೆಡ್ಡು ಹೊಡೆಯುವುದೋ ಅನ್ನುವ ಅಳುಕು ಇದ್ದಂತಿದೆ.
ಚಾಯ್ ಪೆ ಚರ್ಚಾ ಪರ್ ಚರ್ಚಾ ನಡೆಸಿ ಮೋದಿ ಸುಸ್ತಾಗಿದ್ದಾರೆ. ಅವರ ಹೆಸರಿಗಂಟಿದ ಕಲೆ ತೊಳೆಯಲು ಇನ್ನೂ ಯಾವ ತೀರ್ಥವೂ ಉದ್ಭವವಾಗಿಲ್ಲ. ಬಹುಶಃ ಆ ಭಯದಿಂದಲೇ ಎರಡೆರಡು ಕಡೆಯಿಂದ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ.
ರಾಹುಲ್ ಗಾಂಧಿ ಭಾಷಣಗಳನ್ನು ಉರುಹೊಡೆದೇ ಮುಗಿದಿಲ್ಲವೆಂಬಂತೆ ಅನ್ನಿಸುತ್ತೆ.
ತೃತೀಯ ರಂಗ ಪ್ರತಿ ಚುನಾವಣೆ ಸಮಯದಲ್ಲಿ ಎದ್ದು ಮೈಕೊಡವಿ, ಹಾವು – ಏಣಿ ಆಡಿ ಮತ್ತೆ ದೀರ್ಘ ನಿದ್ದೆಗೆ ಜಾರುತ್ತೆ. ಈ ಸಲವೂ ಅದು ಪೋಷಕ ಪಾತ್ರಕ್ಕೆ ಸಿದ್ಧತೆ ನಡೆಸುತ್ತಿದೆ.
ಜೊತೆಗೆ ‘ಕ್ರೇಜೀವಾಲ್’ ಅಂತ ಕರೆಸಿಕೊಳ್ತಿರುವ ಕೇಜ್ರೀವಾಲ್, ತಮ್ಮ ಕ್ರೇಜೀತನದಿಂದಲೇ ಸ್ಥಾಪಿತ ಪಕ್ಷಗಳಲ್ಲಿ ಆತಂಕ ಹುಟ್ಟಿಸಿದ್ದಾರೆ. ಎಲ್ಲಿ ಏನು ಬೇಕಾದರೂ ಫಲಿತಾಂಶ ಬರಬಹುದು ಅನ್ನುವ ಆತಂಕ ಅದು.
*
ಈ ಎಲ್ಲದರ ನಡುವೆ ಬೆವರಿನ ಜೊತೆ ಮೇಕಪ್ಪನ್ನೂ ಒರೆಸಿಕೊಂಡು ಬವಣೆ ಪಡುತ್ತಿರುವ ಗುಂಪೊಂದು ಕಾಣಿಸಿಕೊಳ್ತಿದೆ. ಕ್ರಿಕೆಟ್‌ನಲ್ಲಿ ಚೀರ್ ಗರ್ಲ್ಸ್ ಇದ್ದಂತೆ ಪೊಲಿಟಿಕ್ಸ್‌ನಲ್ಲಿ ನಟ ನಟಿಯರ ಉಪಸ್ಥಿತಿ. ಕೆಲವರು ಹಣ ಪಡೆದೇ ಪ್ರಚಾರಕ್ಕೆ ಬಂದರೆ, ಕೆಲವರು ಅಧಿಕಾರಕ್ಕಾಗಿ ಪಕ್ಷಗಳ ಜೊತೆ ಗುರುತಿಸಿಕೊಂಡಿದ್ದಾರೆ. ಇವರು ಪ್ರಚಾರಕ್ಕೆ ಹೋದಲ್ಲೆಲ್ಲ ಜನ ಮುಗಿ ಬೀಳುತ್ತಾರೆ. ವೋಟು ಹಾಕುತ್ತಾರೋ ಇಲ್ಲವೋ, ಅವರನ್ನು ನೋಡುವ, ಜೊತೆಗಿರುವ ಸಂಭ್ರಮವನ್ನು ಮಾತ್ರ ಕಳೆದುಕೊಳ್ಳೋದಿಲ್ಲ. ಇದು ಸಿನೆಮಾ ಮಾತ್ರವಲ್ಲ, ಕಿರುತೆರೆಯ ನಟ ನಟಿಯರಿಗೂ ಅನ್ವಯ. ಜನರ ಈ ಕ್ರೇಜನ್ನೇ ಬಂಡವಾಳ ಮಾಡಿಕೊಂಡು ರಾಜಕೀಯ ಪಕ್ಷಗಳು ತಮ್ಮ ತಮ್ಮ ಜಾಹೀರಾತಿಗಾಗಿ ಹಣ ತೆತ್ತು ಅವರನ್ನು ಬರಮಾಡಿಕೊಳ್ಳುತ್ತಿವೆ. ಈ ನಡುವೆ ನಿಜವಾದ ಕಳಕಳಿಯುಳ್ಳ ನಟ ನಟಿಯರು ಇಲ್ಲವೆಂದಲ್ಲ. ರಾಜಕಾರಣ ಮಾಡಲೆಂದೇ ಅಥವಾ ಜನಪರ ದನಿಯಾಗಿ ನಿಲ್ಲಲೆಂದೇ ಈ ಕ್ಷೇತ್ರಕ್ಕೆ ಕಾಲಿಟ್ಟವರೂ ಇದ್ದಾರೆ. ವಿಷಯ ಅದಲ್ಲ…. ವಿಶೇಷವಾಗಿ ಪರದೆ ಮೇಲೆ ಕಾಣಿಸಿಕೊಳ್ಳುವವರನ್ನು ನಾವು ಆದರಿಸುವ ಬಗೆ ವಿಸ್ಮಯ ಹುಟ್ಟಿಸುತ್ತದೆ.
*
ಬಹುಶಃ ಭಾರತೀಯರು ನಟರ ಬಗ್ಗೆ ಬೆಳೆಸಿಕೊಂಡಿರುವಷ್ಟು ವ್ಯಾಮೋಹವನ್ನು ಜಗತ್ತಿನ ಮತ್ತೆಲ್ಲೂ ನೋಡಲಾರೆವು. ಇಲ್ಲಿ ನಟರೆಂದರೆ ದೇವದೂತರು. ಮನೆ ಮಕ್ಕಳು. ದಕ್ಷಿಣ ಭಾರತದಲ್ಲಿ ಹಲವಾರು ನಟರು ರಾಜಕಾರಣ ಸೇರಿ ಯಶ ಪಡೆದಿದ್ದು, ಮುಖ್ಯಮಂತ್ರಿ ಗಾದಿಗೇರಿ ಆಡಳಿತ ನಡೆಸಿದ್ದೆಲ್ಲ ಈಗ ಹಳೆ ಸುದ್ದಿ. ಉತ್ತರದಲ್ಲಿಯೂ ಕೆಲವು ನಟರು ಸಕ್ರಿಯ ರಾಜಕಾರಣದಲ್ಲಿದ್ದಾರೆ. ಅವರು ಕಾಲಿಟ್ಟಲ್ಲೆಲ್ಲ ಜನ ಸಾಗರವೇ ಅವರೊಂದಿಗೆ ಹರಿಯುತ್ತ ಇರುತ್ತದೆ. ಉತ್ತರಕ್ಕಿಂತ ದಕ್ಷಿಣದಲ್ಲಿ ಇದು ಹೆಚ್ಚು.
ಭಾರತೀಯರ ಈ ವ್ಯಾಮೋಹಕ್ಕೆ ಕಾರಣವಿಲ್ಲದಿಲ್ಲ. ಹೇಳಿಕೇಳಿ ಇದು ಸಂಪ್ರದಾಯವಾದಿ ರಾಷ್ಟ್ರ. ಪ್ರೀತಿ, ಪ್ರೇಮ, ಪ್ರಣಯಗಳಿಗೆ ಇರುವ ಕಟ್ಟುಪಾಡುಗಳು, ವಿಪರೀತ ಎನ್ನಿಸುವ ನೈತಿಕ ಚೌಕಟ್ಟುಗಳು, ಆ ಎಲ್ಲವನ್ನೂ ಸಾಧ್ಯ ಮಾಡಿಕೊಳ್ಳುವ ಮಿಥ್ಯಾ ಜಗತ್ತು ಮತ್ತದರ ಪಾತ್ರಧಾರಿಗಳ ಮೂಲಕ ತಮ್ಮನ್ನು ತಾವು ನೋಡಿಕೊಳ್ಳುವಂತೆ ಮಾಡುತ್ತವೆ. ಕೇವಲ ನಟನೆ ಅಥವಾ ಸೌಂದರ್ಯಗಳೇ ಇಲ್ಲಿ ಮೆಚ್ಚುಗೆಗೆ ಮಾನದಂಡವಿರಲಾರವು. ಈ ಪರಿಯ ವ್ಯಾಮೋಹ, ಸ್ವಂತದ ಒಂದು ಎಳೆ ಬೆಸುಗೆ ಇಲ್ಲದೆ ಮೂಡುವಂಥದಲ್ಲ. ಈ ಭಾವುಕ ಕಾರಣವನ್ನು ರಾಜಕೀಯ ಪಕ್ಷಗಳು ಚೆನ್ನಾಗಿಯೇ ಬಳಸಿಕೊಳ್ತಿವೆ.
ಅದೇನೇ ಇರಲಿ, ಚುನಾವಣೆಯಿಂದಲಾದರೂ ನಮ್ಮ ಜನರು ಆಗಸದ ತಾರೆಗಳನ್ನು ಕೈಯೆಟುಕಿನ ದೂರದಲ್ಲಿ ಕಾಣುವ ಭಾಗ್ಯ ಪಡೆದಂತಾಗಿದೆ. ಹಾಗೆ ಕೈಗೆ ಎಟುಕಿಸಿಕೊಳ್ಳಲು ಹೋಗಿ ಪೆಟ್ಟು ತಿಂದವರೂ ಇದ್ದಾರೆ. ಒಟ್ಟಾರೆ ಫಲಿತಾಂಶ ಏನಾಗುತ್ತೋ….. ಈ ಸಾರ್ತಿ ಜನ ಸಾಮಾನ್ಯರು ಹೆಚ್ಚು ಕುತೂಹಲದಿಂದ ಇರುವಂತೆ ಅನ್ನಿಸ್ತಿದೆ. ಕ್ರಿಕೆಟ್ ವಿಶ್ವಕಪ್‌ನಲ್ಲಿ ಭಾರತ – ಪಾಕಿಸ್ತಾನ ಫೈನಲ್ ಮ್ಯಾಚ್ ನಡೆಯುವಾಗ ಇರುವಂಥದ್ದೇ ಸಮೂಹ ಸನ್ನಿಯಂಥ ಕುತೂಹಲ, ನಿರೀಕ್ಷೆ, ಉದ್ವೇಗಗಳು ಮೊದಲ ಬಾರಿಗೆ ಕ್ರಿಕೆಟೇತರ ಸಂಗತಿಯಲ್ಲಿ ಕಾಣಿಸ್ಕೊಳ್ತಿದೆಯೆಂದರೆ, ಬಹುಶಃ ಅದು ಈ ಚುನಾವಣೆಯಲ್ಲಿಯೇ!
*
“ಯಾರು ಬಂದರೆ ನಮಗೇನು? ನಮ್ಮ ಹಣೆಬರಹ ಇಷ್ಟೇ ತಾನೆ?” ಅನ್ನುವ ಉಡಾಫೆ ಈ ಸಲದ ಚುನಾವಣೆಗೆ ಅನ್ವಯವಲ್ಲ. ಸರಿಯಾದ ಆಯ್ಕೆ ನಡೆಯದೇ ಹೋದರೆ, ನಮ್ಮ ದೇಶ ‘ಭಾರತ ಮತ್ತು ಇಂಡಿಯಾ’ ಎಂಬೆರಡು ಭಾಗಗಳಲ್ಲಿ ಮತ್ತೊಮ್ಮೆ ವಿಭಜನೆಯಾಗುವ ಆತಂಕ ಎದ್ದು ಕಾಣುತ್ತಿದೆ…..
ತುಂಬಾ ಇಷ್ಟವಾಯ್ತು ಚೇತನ.. ಒಳ್ಳೆಯ ಬರಹ
nice chetanaji
ಈ ವಿ’ಭಜನೆ’ಯನ್ನ ನಿಲ್ಲಿಸಿ. ಭಾರತ, ಇಂಡಿಯಾ ಮಾತ್ರವಲ್ಲ ಹಿಂದೂಸ್ಥಾನವೂ ಇದೆ ಜೊತೆಯಲ್ಲಿ. ಎಷ್ಟೋ ಚುನಾವಣೆಗಳು ಬಂದು ಹೋದವು, ಎಷ್ಟೋ ಮನೆ ಮುರುಕರು ಆಳಿ ಹೋದರು, ಆದರೆ ಈ ದೇಶ ಮಾತ್ರ ಭವ್ಯವಾಗಿ intact ಆಗಿ ನಿಂತಿದೆ. ಈ ಸಲದ ಚುನಾವಣೆಯಲ್ಲಿ ಧರ್ಮದ ಹೆಸರಿನಲ್ಲಿ ವೋಟು ಕೇಳುವ ಜನರಿಗೆ ಪಾಠ ಕಲಿಸಿ.
ರಾಜಕೀಯದ ಸಂಗತಿಗಳನ್ನು ಇಷ್ಟು ಸರಳವಾಗಿ ಮತ್ತು ಆಪ್ತವಾಗಿ ಹೇಳುವ ಶೈಲಿ ಚೆಂದವಿದೆ, ಉತ್ತಮ ಬರಹ ಚೇ.