ಆಲೂರು ದೊಡ್ಡನಿಂಗಪ್ಪ ಜೊತೆ ನಾಲ್ಕು ಮಾತು…

 `ಕವಿತೆ ಯಾಕೆ ಬರೆಯುತ್ತಿದ್ದೀರಾ?’ ಎಂಬ ಪ್ರಶ್ನೆಗೆ ಉತ್ತರಗೊತ್ತಿದ್ದೂ ಹೇಳಲಾಗದ ಮುಜುಗರದಿಂದಾಗಿ ಕವಿಗೋಷ್ಠಿಗಳಿಂದ ದೂರು ಉಳಿಯುತ್ತಿದ್ದೆ ಎನ್ನುವ ಕವಿ ಆಲೂರು ದೊಡ್ಡ ನಿಂಗಪ್ಪ. ನಾಲ್ಕನೇ ತರಗತಿಗೆ ಶಾಲೆ ಬಿಟ್ಟು, ನೇಕಾರಿಕೆ, ಎಳನೀರು ವ್ಯಾಪಾರ, ಒಂಟಿತನ, ಅಲೆಮಾರಿತನಗಳಿಂದ ಮಾಗಿದ ಇವರು ಮತ್ತೆ ಅಕ್ಷರಗಳನ್ನು ತಮ್ಮದೇ ಆದ ರೀತಿಯಲ್ಲಿ ಕಲಿಯುತ್ತಾ, ಗ್ರಹಿಸುತ್ತಾ ಬೆಳೆದವರು. ಈ ಜೀವನಾನುಭವ ಇವರ ಕವಿತೆಗಳ ಮೂಲಕ ಓದುಗನಿಗೆ ದಾಟುತ್ತದೆ. ತಾಯಿ, ಮಗು ಹಾಗೂ ಕರುಳ ಬಳ್ಳಿಯಂತೆ ಓದುಗನನ್ನು ತಟ್ಟುತ್ತವೆ. ಅಖಂಡ ನೋವುಂಡು ಜನ್ಮ ನೀಡುವ ತಾಯಿ, ಕಿಲಕಿಲ ನಗುವಿನ ಬೆಳಕು ಹೊತ್ತ ಮಗು, ಇವೆರಡನ್ನೂ ಬೆಸೆಯುವ ಕರುಳಬಳ್ಳಿ ಬಿಸುಪು ಆಲೂರು ಅವರ ಕವಿತೆಗಳ ಓದಿನಿಂದ ದಕ್ಕುವ ಅನುಭವ. ಕತ್ತಲೆ ಜಗತ್ತಿನ ಕವಿ ನಾನು ಹೇಳುತ್ತಲೆ, `ತೇಲಿ ತೇಲಿ ಬರಲಿ/ ಚಂದಿನ ಚೂರು/ ನಮ್ಮ ಕೇರಿಗೂ’ ಎಂಬ ಸಣ್ಣ ಬೆಳಕಿನ ಕಿಡಿಗಾಗಿ ಧ್ಯಾನಿಸುವ ಸಂವೇದನಶೀಲ ನಿಂಗಪ್ಪ ಅವರು `ನೇಕಾರ’ ಎಂಬ ಸಂಕಲನ ಮೂಲಕ ಕಾವ್ಯಾಸಕ್ತರ ನಡುವೆ ನಿಂತಿದ್ದರು. ಈಗ `ಮುಟ್ಟು’ ಸಂಕಲನದೊಂದಿಗೆ ಕವಿ ಮನಸ್ಸು ಮುಟ್ಟುತ್ತಿದ್ದಾರೆ. ಇವರು ಸದ್ಯ ರಂಗಾಯಣದಲ್ಲಿ ಉದ್ಯೋಗಿ.

ನಿಮ್ಮನ್ನು ರೂಪಿಸಿದ ಅಸ್ತ್ರವೆಂದರೆ ಕಾವ್ಯವೆನ್ನುತ್ತೀರಿ, ಹೇಗೆ?

ಕಾವ್ಯದ ಜಗತ್ತು ಒಂದು ಪಕ್ಷ ದೊರಕದಿದ್ದರೆ ನನ್ನೊಳಗಿದ್ದ ಅಸೂಯೆ, ಸಂಕಟ, ನೋವು, ತಲ್ಲಣಗಳು ನನ್ನನ್ನು ಬಲಿತೆಗೆದುಕೊಡು ಬಿಡುತ್ತಿತ್ತೇನೋ? ಹಾಗಾಗಿ ಕಾವ್ಯದ ಜಗತ್ತು ನನ್ನ ಕಣ್ತೆರೆಸಿದ ಅಸ್ತ್ರವಾಗಿದೆ. ಓದಿದ್ದು ಕಡಮೆಯಾದರೂ ನನ್ನೊಳಗಿದನ್ನು ಹೇಳಿಕೊಳ್ಳೋಕೆ ಹೇಗೆ ಸಾಧ್ಯವಾಯಿತು ಎಂದು ನನಗೆ ಸೋಜಿಗವಾಗಿದೆ. ನೇಯ್ದು ಬಂದ ನನಗೆ ಜೋಗುಳ ಹಾಡಿದ ತತ್ವಪದಕಾರರು, ವಚನಕಾರರು ಬದುಕಿನ ಹಲವು ಮಗ್ಗುಲು ಬಿಚ್ಚಿಟ್ಟು ಬರೆಯುವಂತೆ ಮಾಡಿದ್ದಾರೆ.

ಹತ್ತು ವರ್ಷಗಳ ನಂತರ ಎರಡನೇ ಸಂಕಲನ `ಮುಟ್ಟು’ ಬರುತ್ತಿದೆ. ಈ ಹತ್ತು ವರ್ಷ ಕವಿತೆ ಎಲ್ಲಿತ್ತು? ಹೇಗಿತ್ತು?

ಇದುವರೆಗೂ ನನ್ನೊಳಗೆ ಮುಕ್ಕಾಗದಂತೆ ಕಾಪಾಡಿಕೊಂಡಿದ್ದೆ. ಸುಂದರ ಗಾಜಿನ ಬೊಂಬೆಯಂತೆ..

ಅಖಂಡ ವೇದನೆ ಮತ್ತು ಬೆಳಕು ನಿಮ್ಮ ಎಲ್ಲ ಕವಿತೆಗಳನ್ನು ಆವರಿಸಿಕೊಂಡಿವೆ. ನೋವು ಎಂಥದ್ದು? ಬೆಳಕು ಯಾವುದು?

ನನ್ನ ನೋವಿನ ಬಗ್ಗೆ ಮಾತನಾಡಬೇಕು ಎಂದರೆ ಬಹಳ ಹಿಂದಕ್ಕೆ ಹೋಗಿ ಮಾತನಾಡಬೇಕು ಎಂಬ ಮುಜಗರ. ನಾನು ಕತ್ತಲೆ ಜಗತ್ತಿನಿಂದ ಬಂದವನಾಗಿರುವುದರಿಂದ ಬೆಳಕಿನಷ್ಟೇ ಕತ್ತಲೆಗೂ ಮಹತ್ವ ಕೊಡುತ್ತೇನೆ. ಹಾಗಾಗಿ ಮುಟ್ಟು ಕವನ ಸಂಕಲನದಲ್ಲಿ ಇವೆರಡೂ ಆವರಿಸಿರುವುದು ಸಹಜವಿರಬಹುದು.
ಈ ಹೊತ್ತಿನ ಕವಿತೆಗಳಲ್ಲಿ ಅಂತರಾಳವೇ ಇಲ್ಲ ಎನ್ನುವುದು ಆರೋಪ ನೀವೇನಂತೀರಿ..
 
ಕವಿತೆ ಹುಟ್ಟೋದೇ ಅಂತರಾಳದಿಂದ ಈ ಹೊತ್ತಿನ ಕವಿತೆಗಳಲ್ಲಿ ಅಂತರಾಳವೇ ಇಲ್ಲ ಎಂದು ಹೇಳಲಾಗದು. ಒಳಗಿನಿಂದ ಹುಟ್ಟಿದ್ದೂ ಮಾತ್ರ ಕಾವ್ಯ ಎನ್ನಿಸಿಕೊಳ್ಳುತ್ತೆ. ಚೆನ್ನಾಗಿದೆ ಎನಿಸಿಕೊಂಡ ಕಾವ್ಯ ಒಳಗಿನಿಂದಲೇ ಬಂದಿರುತ್ತದೆ. ಅಂತರಾಳದಿಂದ ಬರೆಯುತ್ತಿರುವ ಸವಿತಾ ನಾಗಭೂಷಣ, ಎಸ್. ಮಂಜುನಾಥ್, ಅಂಕೂರ್, ಎನ್.ಕೆ.ಹನುಮಂತಯ್ಯ, ಸುಬ್ಬು ಹೊಲೆಯಾರ್, ಹೆಚ್.ಆರ್. ರಮೇಶ್. ಇವರ ಕವಿತೆಗಳಲ್ಲಿ ಇರುವ ತೀವ್ರತೆ ಅದರ ಅಂತಃಶಕ್ತಿಯನ್ನು ಸಾರುತ್ತದೆ.
ನೀವು ಕವಿತೆಯ ಕೈ ಹಿಡಿದ ನಂತರ ಇನ್ನೆಂದೂ ಮರೆಯಲಾಗದು ಎಂಬ ಸಂದರ್ಭ..
 
ನನ್ನ ಕವನ ಸಂಕಲನಕ್ಕೆ ದೇವನೂರು ಮಹಾದೇವ ಅವರು ಬೆನ್ನುಡಿ ಬರೆದದ್ದು ಮತ್ತು ನನಗೆ ರಂಗಾಯಣದಲ್ಲಿ ನೌಕರಿ ದೊರೆತು ಮೈಸೂರಿನಲ್ಲಿ ನೆಲೆಯೂರಿದ್ದು.
ನಿಮ್ಮ ಬದುಕನ್ನು ಕಾವ್ಯದ ಹಾಗೆ ನೋಡುವುದಾದರೆ, ಅದರ ಬಗ್ಗೆ ನಾಲ್ಕು ಮಾತು..
ನಾನು ಬೆಳೆದ ಪರಿಸರದಿಂದ ನನ್ನೊಳಗೆ ಮಾಗಿದ ನೆನಪುಗಳು ಕವಿತೆಗಳಾಗಿವೆ. ನನ್ನ ಕವಿತೆಗಳಲ್ಲಿ ವ್ಯಕ್ತವಾಗುವ ತಣ್ಣನೆಯ ಭಾವನೆಗಳಂತೆಯೇ ನನ್ನ ಬದುಕಿದೆ.
(ಕೃಪೆ:   ‘ಅಲೆಮಾರಿ’  ಕುಮಾರ್)