ಕುರಿ ಕಾಯೊ ರಂಗನ ಕತೆ~ 1

ಟಿ.ಎಸ್.ಗೊರವರ ಹೊಸತಲೆಮಾರಿನ ಭರವಸೆಯ ಕಥೆಗಾರರಲ್ಲಿ ಒಬ್ಬರು. ಇವರದು ಬಹುತೇಕ ಗ್ರಾಮ ಕೇಂದ್ರಿತ ಕಥಾವಸ್ತು. ಅನುಭವದಿಂದ ಗಟ್ಟಿಗೊಂಡ ಇವರ ಕಥೆಗಳಲ್ಲಿಯೂ ಆ ದಟ್ಟತೆಯನ್ನು ಕಾಣಬಹುದು. ಇವರು ಕಟ್ಟಿಕೊಡುವ ವಿವರಗಳಲ್ಲಿ ನಮಗೆ ಪರಿಚಯವಿಲ್ಲದೊಂದು ಜೀವನಕ್ರಮದ ಕಲ್ಪನೆ ತಕ್ಕಮಟ್ಟಿಗೆ ಸಾಧ್ಯವಾಗುವುದು ನಿಜ. ಹೀಗೇಕೆ ಹೇಳುತ್ತೇನೆಂದರೆ, ನಾವು ನಮ್ಮ ಅಜ್ಞಾನವನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುವುದಾದರೆ, ಕಂಫರ್ಟ್ ಜೋನಿನಲ್ಲೇ ಇರುವ ನಮ್ಮ ಬಹುತೇಕರಿಗೆ ಖಂಡಿತ ಊರಾಚೆಗಿನ, ನಮ್ಮ ಸೀಮೆಯಾಚೆಗಿನ ಜನರ ಬಗ್ಗೆ ತಿಳಿಯುವ ವ್ಯವಧಾನವಾಗಲೀ ಕುತೂಹಲವಾಗಲೀ ಇಲ್ಲ. ಹಾಗೆ ಎಲ್ಲರಿಗೂ ಎಲ್ಲವೂ ಗೊತ್ತಿರಲೇಬೇಕೆಂಬ ನಿಯಮವೇನೂ ಇಲ್ಲವಾದ್ರಿಂದ ತಪ್ಪೇನೂ ಇಲ್ಲ ಸರಿ, ಆದರೂ ಬರೀ ಓದಿನ ಸುಖದಾಚೆಗೂ ಸಾಹಿತ್ಯ ಚಾಚಿಕೊಳ್ಳಬೇಕೆಂದರೆ ನಮ್ಮ ವ್ಯಾಪ್ತಿ ವಿಸ್ತರಣೆ ಅಗತ್ಯವಾಗುತ್ತದೆ. ಕನ್ನಡದ್ದೇ ಬೇರೆ ಬೇರೆ ಬಗೆಗಳನ್ನು ಅರಿಯುವ, ನಮ್ಮಾಚೆಗಿನ ವ್ಯವಹಾರಗಳನ್ನೂ ತಿಳಿಯುವ ಇಂತಹ ಪ್ರಯತ್ನ ಒಳ್ಳೆಯ ಕಥೆಯ ಮೂಲಕ ನೆರವೇರುವುದಾದರೆ ಅದಕ್ಕಿಂತ ಒಳ್ಳೆಯದು ಮತ್ತೇನಿದ್ದೀತು!?

ಭಾಗ- ೧

ಕಾರಬಾರಿ ಮಲ್ಲಪ್ಪನ ಎರಿ ಹೊಲದಾಗ ಹಾಕಿದ್ದ ಕುರಿಗಾರ ಭೀಮಪ್ಪನ ಕುರಿ ಹಟ್ಟಿಯ ಸುತ್ತ ಕತ್ತಲು ಗಸ್ತು ಹೊರಟಿತ್ತು.

 ಜರಿಯಾಗಿ ಸುರಿಯತೊಡಗಿದ್ದ ಕತ್ತಲೊಳಗೆ ಧ್ಯಾನಸ್ಥವಾಗಿ ಗಾಳಿ ಮೆಲ್ಲಗೆ ತನ್ನ ಸೆರಗು ಬೀಸತೊಡಗಿತ್ತು. ಆಗೊಂದು ಈಗೊಂದು ಮಿಂಚು, ಗುಡುಗು ಕಣ್ಣಗಲಿಸಿ ಕುರಿ ಹಟ್ಟಿಯ ನೋಡಿ ಕಣ್ತುಂಬಿಕೊಂಡು ಮಾಯವಾಗುತ್ತಿದ್ದವು. ಹಟ್ಟಿಯೊಳಗೆ ಕುರಿಗಳು ಮೆಲಕು ಹಾಕುತ್ತಾ ಅದೇನನ್ನೊ ಧ್ಯಾನಿಸುತ್ತಾ ಮಲಗಿದ್ದವು. ಹಟ್ಟಿಯೂ ಆ ಧ್ಯಾನದೊಳಗೆ ಮಗ್ನವಾದಂತೆ ತೋರತೊಡಗಿತ್ತು.

ಕ್ಷಣ ಹೊತ್ತು ಕಳೆದಿರಬಹುದು. ಬೆದೆ ಬಂದ ಕುರಿಯನ್ನು ಟಗರು ಬೆನ್ನು ಹತ್ತಿ ಹಟ್ಟಿಯ ತುಂಬಾ ಅಲೈ ಬುಲೈ ಆಡಿಸತೊಡಗಿತ್ತು. ಹಟ್ಟಿಗೆ ಜೀವ ಬಂದಂಗಾತು. ಕತ್ತಲೊಳಗೆ ಕುರಿ ಚಹರೆ ಸರಿಯಾಗಿ ತೋರದಿದ್ದರೂ ಎದೆಯಾಗಿನ ವಿರಹದುರಿಗೆ ಗಾಳಿ ಬೀಸಿದಂಗಾಗಿ ಅದು ಮತ್ತಷ್ಟು ಹೊತ್ತಿಕೊಂಡು ತಡೆದುಕೊಳ್ಳದ ಟಗರು ಕುರಿಗೆ ತುಟಿಮುತ್ತು ಕೊಡಲು ಹವಣಿಸತೊಡಗಿತ್ತು. ಕುರಿಯ ದುಬ್ಬದ ಮ್ಯಾಲೆ ಟಗರು ಕಾಲು ಹಾಕಿದಂತೆಲ್ಲಾ ಕುರಿ ತಪ್ಪಿಸಿಕೊಳ್ಳುವುದು ನಡದೇ ಇತ್ತು. ಇವೆರಡರ ಅಪ್ಪ, ಅವ್ವನ ಆಟದಿಂದಾಗಿ ಆದೆಷ್ಟೋ ದಿನದಿಂದ ಮಾತು ಕಳೆದುಕೊಂಡವನಿಗೆ ಮತ್ತೆ ಮಾತು ಮರುಕಳಿಸಿದ ಗೆಲವು ಹಟ್ಟಿಯೊಳಗೆ ಮೂಡತೊಡಗಿತ್ತು.

ಹಟ್ಟಿಯ ಸುತ್ತ ಕಾವಲು ಕಾಯಲು ಅಲ್ಲೊಬ್ಬರು ಇಲ್ಲೊಬ್ಬರು ಕುರಿ ಕಾಯುವ ಆಳುಗಳು ಮಲಗಿ ಗೊರಕೆ ತೆಗೆದಿದ್ದರು. ಕುರಿಗಳ ಗದ್ದಲದ ಬ್ಯಾ ಎನ್ನುವ ದನಿ ಆಳು ರಂಗನ ಕಿವಿಗಪ್ಪಳಿಸಿ ಬೆಚ್ಚಿಬಿದ್ದ. ತ್ವಾಳ ಬಂದಿರಬಹುದೆಂದು ಮನದಲ್ಲಿ ಎಣಿಕೆ ಹಾಕಿದ. ಗಾಳಿ ಸಣ್ಣಗೆ ಸೆರಗು ಬೀಸತೊಡಗಿದ್ದರೂ ಕುದಿಗೊಂಡ. ಕುರಿ ಮಾಲಕನ ಮೈ ತುಂಬಾ ಬಾಸುಂಡೆ ಏಳುವಂತೆ ಹೊಡೆಯುವ ಹೊಡೆತ, ಸೊಂಟದ ಕೆಳಗಿನ ಅವಾಚ್ಯ ಬೈಯ್ಗಳ ನೆಪ್ಪಾಗಿ ಮೈಯೆಲ್ಲಾ ಬೆವತು ನಡುಗತೊಡಗಿದ. ರಂಗನ ಕಣ್ಣೊಳಗಿನ ನಿದ್ದೆ ಆಗಲೇ ಮಾರು ದೂರ ಓಟಕಿತ್ತಿತ್ತು. ಕಂದೀಲ ಬುಡ್ಡಿಯನ್ನು ತುಸು ಎತ್ತರಿಸಿ ಹಟ್ಟಿಯೊಳಗೆ ಬೆಳಕು ಮಾಡಿ ಇಣುಕಿ ನೋಡಿದ. ರಂಗನ ನಿರೀಕ್ಷೆ ಹುಸಿಗೊಂಡಿತ್ತು. ಅವನ ಮುಖದ ಮ್ಯಾಲೆ ಹೊನ್ನಂಬರಿ ಹೂವಿನಂತ ನಗೆ ಅರಳಿ ಲಾಸ್ಯವಾಡಿತು. ತ್ವಾಳ ಬಂದಿರಬಹುದೆಂದು ಭಾವಿಸಿ ಭಯಗೊಂಡು ನಿದ್ದೆ ಕೊಡವಿಕೊಂಡು ಎದ್ದ ರಂಗನಿಗೆ ಹೋದ ಜೀವ ಬಂದಂಗಾಗಿ ನಿರಾಳವೆನಿಸಿ ಮತ್ತೆ ಕೌದಿಯೊಳಗೆ ತೂರಿಕೊಂಡು ಮೈ ಚಾಚಿದ.

ಮಲಗಿರುವ ರಂಗನಿಗೆ ಇನ್ನೂ ನಿದ್ದೆಯ ಜೊಂಪು ಹತ್ತಿರಲಿಲ್ಲ. ಮಳೆ ಹನಿ ಹನಿಯಾಗಿ ಒಂದೇ ಸಮನೆ ಹುಯ್ಯತೊಡಗಿತ್ತು. ಬಯಲನ್ನೇ ಮನೆ ಮಾಡಿಕೊಂಡಿದ್ದ ಕುರಿ ಆಳುಗಳ ಎದೆಯೊಳಗೆ ಕ್ಷಣ ಹೊತ್ತು ಆತಂಕ ಹೆಡೆಯಾಡಿತು. ಇದ್ದೊಂದ್ದು ಹಾಳಿ ಚೀಲವನ್ನು ತಲೆಯ ಮ್ಯಾಲೆ ಹೊದ್ದುಕೊಂಡು, ಅದರೊಳಗೆ ಗುಡಿಸಿಕೊಂಡು ಕುಳಿತರು. ಈಗ ಮನಸ್ಸು ನೆಮ್ಮದಿಯ ಉಸಿರು ಬಿಡತೊಡಗಿತ್ತು. ಮಳೆ ಮಾತ್ರ ಇದ್ಯಾವುದರ ಪರಿವೇ ಇಲ್ಲದೆ ಹಾಳಿ ಚೀಲದ ಮ್ಯಾಲೆ ಮನಸ್ಸಿಗೆ ಬಂದಂತೆ ಹುಯ್ಯತೊಡಗಿತು. ಹಟ್ಟಿಯೊಳಗೆ ಕುರಿಗಳು ಗುಂಪುಗೂಡಿ ಒಂದರ ಬುಡಕ್ಕೊಂದು ತಲೆ ತೂರಿ ಮಳೆಗೆ ಮೈಯೊಡ್ಡಿ ನಿಂತಿದ್ದವು.

ತಾಸು ಹೊತ್ತು ಬಿಟ್ಟು ಬಿಡದೆ ಜಡಿದ ಮಳೆ ದಣಿವಾರಿಸಿಕೊಳ್ಳಲು ತನ್ನ ಗುಡಿಸಲ ಕಡೆ ಪಾದವ ಬೆಳೆಸಿತು. ಮಳೆ ವರಪುಗೊಂಡಿದ್ದೆ ತಡ, ಕುರಿ ಆಳುಗಳು ಖುಷಿಗೊಂಡವು. ಬೆಳಕು ಹರಿಯಲು ಇನ್ನೂ ವ್ಯಾಳೆ ಬಾಳ ಇದ್ದುದರಿಂದ ಅವರ ಹಣೆಯ ಮ್ಯಾಲೆ ಚಿಂತೆಯ ಗೆರೆಗಳು ಮೂಡಲು ಸ್ಪರ್ಧೆಗಿಳಿದವು. ಕಣ್ಣೊಳಗೆ ನಿದ್ದೆ ಸುಳಿದಿರುಗಿ ಮಲಗಲು ಮನಸು ಹಟ ಹಿಡಿಯಿತು. ಮಲಗಬೇಕೆಂದರೆ ಎರಿ ಹೊಲದ ಮಣ್ಣು ರಜ್ಜಾಗಿ ಕಿತಿ ಕಿತಿ ಅನ್ನತೊಡಗಿತ್ತು. ಬೆಳಕು ಹರಿಯುವ ತನಕ ಕುಕ್ಕರಗಾಲಲ್ಲಿ ಕುಳಿತು ಕಾಲ ಕಳೆಯುವುದನ್ನು ನೆಪ್ಪಿಸಿಕೊಂಡು ದಿಗಿಲುಗೊಂಡರು. ಮಳೆಯಿಂದಾಗಿ ಥಂಡಿ ಗಾಳಿ ಬೀಸಿ ಬಂದು ಮೈ ಸವರಿ ನಡುಗಿಸತೊಡಗಿತು. ತಲಾ ಒಂದೊಂದು ಚಪ್ಪಡಿ ಬೀಡಿ ಸೇದಿ ಎದೆ ಬೆಚ್ಚಗೆ ಮಾಡಿಕೊಂಡು ಕುಳಿತ ಭಂಗಿಯಲ್ಲಿ ತೂಕಡಿಸತೊಡಗಿದರು.ದೀಡು ತಾಸು ಕಳೆದಿರಬಹುದು. ರಂಗ ತಲೆಯ ಮ್ಯಾಲೆ ಹೊದ್ದುಕೊಂಡಿದ್ದ ಹಾಳಿ ಚೀಲ ತೆಗೆದು ಆಕಾಶ ದಿಟ್ಟಿಸಿದ. ಮೈ ತುಂಬಾ ದೀಪದ ಅಂಗಿ ತೊಟ್ಟು ಸಿಂಗಾರಗೊಂಡಿದ್ದ ಬೆಳ್ಳಿ ಚಿಕ್ಕಿ ಮೂಡತೊಡಗಿತ್ತು. ತನ್ನ ದಿನಚರಿ ನೆಪ್ಪಾಗಿ ನಿದ್ದೆ ಕೊಸರಿದ.

ಅವತ್ತು ರಂಗನದು ದಿನಪೂರ್ತಿ ಹಟ್ಟಯೊಳಗೆ ಉಳಿಯುವ ಮರಿಗಳಿಗೆ ತಪ್ಪಲು ತರುವ ಪಾಳಿ ಇತ್ತು. ಅಂವ ಕೋತ, ಕೊಡಲಿ ತಗೊಂಡು ತಪ್ಪಲು ತರಲು ಹೆಜ್ಜೆ ಬೆಳೆಸಿದ. ಗೌಡರ ಹೊಲದ ಹತ್ತಿರ ಬಂದಾಗ ಒಳಗೊಳಗೆ ದಿಗಿಲು ಮಿಸುಗಾಡತೊಡಗಿತು.”ಆಗ್ಲೆ ಬೆಳಕು ಹರಿಯಾಕತ್ತೈತಿ. ಇನ್ನೇನು ಗೌಡ್ರ ಹೊಲಕ್ಕ ಯಾರಾದ್ರೂ ಬಂದ್ರು ಬರಬಹುದು. ಅವ್ರು ಬರೋದ್ರೊಳ್ಗ ತಪ್ಪಲು ಕೊಯ್ಕೊಂಡು ಇಲ್ಲಿಂದ ಕಾಲ್ಕೀಳಬೇಕು. ತಪ್ಲ ಕೊಯ್ಯಾಗ ಏನರ ಸಿಕ್ಕ ಬಿದ್ರ ನನ್ನ ಚರ್ಮಾನ ಸುಲಿತಾರವ್ರು….’ ಎಂದು ರಂಗ ಮನಸೊಳಗೆ ಮಾತಾಡಿಕೊಂಡ.

ಬದುವಿನಲ್ಲಿ ಬೆಳೆದು ಹಚ್ಚಗೆ ನಗತೊಡಗಿದ್ದ ಬೇವಿನ ಗಿಡ, ಬನ್ನಿಗಿಡ, ಕರಿಜಾಲಿ, ಬಾರಿಗಿಡದ ತಪ್ಪಲನ್ನು ಅವಸರದಿಂದ ಕೊಯ್ದುಕೊಂಡು, ವಜ್ಜೆ ಹೊರೆಯನ್ನು ತಲೆ ಮ್ಯಾಲೆ ಹೊತ್ತು ಹಟ್ಟಿಯ ಕಡೆ ಮುಖ ಮಾಡಿದ.

ತಲೆ ಮ್ಯಾಲಿನ ತಪ್ಪಲದ ಹೊರೆ ಹೆಣ ಭಾರವಾಗಿ ಹಟ್ಟಿ ಅದ್ಯಾವಾಗ ಬಂದಿತೋ ಅನಿಸತೊಡಗಿತ್ತು. ಮುಂಜಾನೆಯ ಥಂಡಿಯಲ್ಲೂ ಗಂಟಲು ಒಣಗಿ ಉಗುಳು ಅಂಟಂಟಾಗಿ ಹಿಂಸೆಯಾಗತೊಡಗಿತ್ತು. ಮೈಯಲ್ಲಿ ಬೆವರಿನ ಉಟೆ ಕೀಳತೊಡಗಿತ್ತು. ಸಣ್ಣಗೆ ತಂಗಾಳಿ ಬೀಸಿ ಬಂದು ಮೈ ಸವರಿದಾಗ ಕೊಂಚ ನೆಮ್ಮದಿಯಾಗುತ್ತಿತ್ತು. ಕಾಲಿನ ಮೀನ ಖಂಡದೊಳಗೆ ನೋವು ಪತರುಗುಟ್ಟತೊಡಗಿತ್ತು. ಉಸುಕಿನ ಹೊಲದಲ್ಲಿ ದಪ್ಪನೆಯ ಕೊಡ್ಡ ಕೆರವು ಮೆಟ್ಟಿದ್ದ ರಂಗನ ಕಾಲುಗಳು ಪಾದವ ಎತ್ತಿ ಇಡಬೇಕಾದರೆ ನಡುಗಿ ಹೋಗುತ್ತಿದ್ದವು. ದೋತರದ ಕಚ್ಚಿ ಸಡಿಲಗೊಂಡಿದ್ದರಿಂದ ಅದೆಲ್ಲಿ ಬಿಚ್ಚುವುದೋ ಎಂದು ಆತಂಕವಾಗಿತ್ತು.

ಅನತಿ ದೂರದಲ್ಲಿ ಹಟ್ಟಿ ಗೋಚರಿಸತೊಡಗಿತು. ರಂಗನೊಳಗೆ ಇದ್ದಕ್ಕಿದ್ದಂತೆ ಉತ್ಸಾಹದ ಸೆಲೆಯೊಡೆಯಿತು. ತಲೆ ಮ್ಯಾಲಿನ ಹೊರೆಯನ್ನು ಹಟ್ಟಿಯ ಹತ್ತಿರ ರಭಸದಿಂದ ಒಗೆದ. ತಪ್ಪಲು ನೋಡಿದ ಕುರಿಗಳು ದೃಷ್ಟಿಯನ್ನು ಚೂಪುಗೊಳಿಸಿದವು. ತಲೆ ಮ್ಯಾಲಿನ ಯಮಭಾರ ಹಗುರಾದಂತಾಗಿ ರಂಗನಿಗೆ ನಿರಮ್ಮಳವೆನಿಸಿತು. ಕ್ಷಣ ಹೊತ್ತು ಕಾಲು ಚಾಚಿ ಹಟ್ಟಿಗೆ ಆತುಕೊಂಡು ಕುಳಿತ. ಮೈಯೊಳಗೆ ನಿಧಾನವೆನಿಸಿತು. ತಂಬಿಗೆ ನೀರು ಕುಡಿದ. ಎದೆಯೊಳಗೆ ಖುಷಿ ಕುಣಿದಂತಾಯಿತು.

ಜೊತೆಗಾರರು ಒಂದು ಅಳತೆಯ ಮೂರು ಕಲ್ಲನ್ನು ನೀಟಾಗಿ ಜೋಡಿಸಿ ಒಲೆ ಮಾಡಿ, ಅದರೊಳಗೆ ತೊಗರಿ ಕಟ್ಟಿಗೆ ಇಟ್ಟು ಉರಿ ಹಚ್ಚಿ ಜ್ವಾಳದ ಸಂಕಟಿ ಮಾಡಿ, ಕುರಿ ಹಾಲು ಕಾಸುತ್ತಿರುವುದನ್ನು ದಿಟ್ಟಿಸಿದ. ರಂಗನ ಹೊಟ್ಟೆ ಹಸಿದು ಕರಡಿ ಮಜಲು ಬಾರಿಸತೊಡಗಿತ್ತು. ತಲಾಗೊಂದೊಂದು ಪರಾತ ಅಗಲದ ತಾಟು ತಗೊಂಡು, ತಾಟಿನ ತುಂಬಾ ಸಂಕಟಿ ಹಾಲು ಹಾಕ್ಕೊಂಡು ಗಡದ್ದಾಗಿ ಉಂಡರು. ಮ್ಯಾಲೆ ಒಂದೊಂದು ತಾಟು ಹಾಲು ಕುಡಿದು ತೇಗು ಬಿಟ್ಟರು.

ಕುರಿ ಮೇಯಲು ಬಿಡುವ ಹೊತ್ತಾದ್ದರಿಂದ ರಂಗನ ಜೊತೆಗಾರರು ಹಟ್ಟಿಯ ತಡಿಕೆ ತೆಗೆದು ಕುರಿಗಳನ್ನು ಹೊರಗೆ ಬಿಟ್ಟರು. ಧೋತರವನ್ನು ಜೋಳಿಗೆಯಂತೆ ಮಾಡಿ ಅದರೊಳಗೆ ಬುತ್ತಿ ಇಟ್ಟುಕೊಂಡು, ಹೆಗಲಿಗೊಂದು ಕಂಬಳಿ ನೇತು ಹಾಕ್ಕೊಂಡು ಕುರಿ ಕಾಯಲು ಸಜ್ಜುಗೊಂಡು ಗುಡ್ಡದ ಕಡೆ ಹೊರಟರು.

*******

ದೂರದಲ್ಲಿ ಕೆರಗೆ ಹೋಗಿ ನೀರು ತಂದ ರಂಗ ಮರಿಗಳಿಗೆ ಕುಡಿಸಿ ಹಟ್ಟಿ ತಡಿಕೆಗೆ ತಪ್ಪಲು ನೇತು ಬಿಟ್ಟ. ತಪ್ಪಲು ತಿಂದ ಮರಿಗಳು ಹಟ್ಟಿಯೊಳಗೆ ಚಿನ್ನಾಟಿಗೆ ತೆಗೆದಿದ್ದವು. ಒಂದೊಂದು ಮರಿಗಳನ್ನು ಹಿಡಿದು ಅವುಗಳ ಮೈ ಮ್ಯಾಲೆ ಪೊದೆಯಾಗಿ ಬೆಳೆದ ಕೂದಲನ್ನು ಕತ್ತರಿಯಿಂದ ನೀಟಾಗಿ ಕತ್ತರಿಸತೊಡಗಿದ. ಕಿವಿಸಂದಿ, ತೊಡೆಸಂದಿಗಳಲ್ಲಿ ಸಂಸಾರ ಹೂಡಿದ್ದ ಉಣ್ಣೆಗಳನ್ನು ಕಿತ್ತು ಕಲ್ಲಿಗೆ ಒರೆಯುವ ಕಾಯಕ ನಡೆಸಿದ. ಒರೆದಾಗ ಉಣ್ಣೆಯ ಹೊಟ್ಟೆಯಿಂದ ಬರುವ ರಕ್ತದಿಂದ ಅಂವ ಕಲ್ಲ ಮ್ಯಾಲೆ ಎಳೆದ ಗೆರೆಗಳು ಬಿಸಿಲಿಗೆ ಒಣಗಿ ನವ್ಯ ಕಲಾಕೃತಿ ಹಾಂಗ ಗೋಚರಿಸತೊಡಗಿದ್ದವು.

ಮರಿಗಳ ಕರಾಪು ಮಾಡಿ ಅವುಗಳೊಗೆ ಉತ್ಸಾಹ ತುಂಬಿದ ರಂಗ ತಪ್ಪಲು ಆದಾಗೊಮ್ಮೆ ತಪ್ಪಲು ನೇತು ಬಿಡುತ್ತಾ, ನೀರು ಕುಡಿಸುತ್ತಾ ಅವುಗಳ ದೇಖರೇಖಿ ಮಾಡುವುದರೊಳಗೆ ಸಂಜೆಯ ಮುಗಿಲು ಉಣ್ಣೆಯ ರಕುತ ಬಳಿದುಕೊಂಡಿತ್ತು.ಇಡೀ ದಿನ ಉಲ್ಲಾಸದಿಂದ ಪ್ರತಿ ಕ್ಷಣಗಳನ್ನು ಮರಿಗಳ ದೇಖರೇಖಿಯಲ್ಲಿ ಕಳೆದ ರಂಗನಿಗೆ ಅದ್ಯಾಕೊ ಸುಸ್ತೆನಿಸತೊಡಗಿತ್ತು. ತಲೆಯೊಳಗೆ ಗುಡ್ಡದ ಕಲ್ಲು ಕುಂತಂಗಾಗಿ ಭಾರವೆನಿಸತೊಡಗಿತ್ತು. ಕೈ ಕಾಲುಗಳು ಸೋತಂತೆನಿಸಿ, ಬಾಯೊಳಗೆ ಉಪ್ಪುಪ್ಪು ನೀರು ಆಡತೊಡಗಿತು. ಮೈ ಮುಟ್ಟಿ ನೋಡಿಕೊಂಡ. ಅದು ಕಾದ ಹಂಚಾಗಿತ್ತು. ಮರಿಯೊಂದು ರಂಗನ ದುಬ್ಬದ ಮ್ಯಾಲೆ ಕಾಲು ಕೊಟ್ಟು ನಿಲ್ಲುವುದು, ಓಡುವುದು ಮಾಡತೊಡಗಿತ್ತು. ಕೆಂಡದ ಬಣ್ಣಕ್ಕೆ ತಿರುಗಿದ್ದ ಭಾರವಾದ ಕಣ್ಣುಗಳಿಂದ ಮರಿಯನ್ನು ದಿಟ್ಟಿಸಿ ಪ್ರೀತಿ ತೋರಿದ.

ಮೈಯೊಳಗೆ ಥಂಡಿ ಹೊಕ್ಕಂಗಾಗಿ ಮೈಯಂತ ಮೈಯೆಲ್ಲ ನಡುಗತೊಡಗಿತು. ಮೈತುಂಬಾ ಕೌದಿ ಹೊದ್ದ ಕುಳಿತ. ಕುರಿ ಮೇಸಲು ಹೋಗಿದ್ದ ಜೊತೆಗಾರರು ಕೌದಿ ಹೊದ್ದ ರಂಗನ ಅವತಾರ ನೋಡಿ ದಿಗಿಲುಗೊಂಡರು. ಇವನನ್ನು ಮನಿಗೆ ಕಳುಹಿಸಿ ಅಲ್ಲಿ ಡಾಕ್ಟರರಿಗೆ ತೋರಿಸಿದರಾಯಿತೆಂದು ಗೆಣಿಕೆ ಹಾಕಿ ಊರಿಗೆ ಕಳಿಸಲು ಜೊತೆಗಾರನೊಬ್ಬ ತಯಾರುಗೊಂಡ.ಕತ್ತಲು ಹೆಜ್ಜೆ ಹಾಕತೊಡಗಿದ್ದ ಕಳ್ಳಿದಾರಿ ಹಿಡಿದು ಇಬ್ಬರೂ ಊರ ಕಡೆ ಮುಖ ಮಾಡಿದರು. ರಂಗನ ಕಾಲುಗಳು ಕಸುವು ಕಳೆದುಕೊಂಡು ನಿತ್ರಾಣವೆನಿಸಿ ಸೋತಂತೆನಿಸತೊಡಗಿದ್ದವು. ದಾರಿಯಲ್ಲಿ ನಾಕೈದು ಸಲ ಕುಂತ. ತುಸು ಆರಾಮವೆನಿಸಿದಾಗ ಮತ್ತೆ ಪಾದ ಬೆಳೆಸಿದ. ತ್ರಾಸು ಮಾಡಿಕೊಂಡು ಊರು ತಲುಪಿದ. ರಂಗನ ಜೊತೆಗಾರನಿಗೆ ಹಟ್ಟಿಗೆ ಹೋಗಲು ಹೊತ್ತಾಗತೊಡಗಿದ್ದರಿಂದ ಅಂವ ರಂಗನನ್ನು ಊರು ಮುಟ್ಟಿಸಿ ಹಟ್ಟಿಗೆ ಹೊರಟು ಹೋದ.

(ಮುಂದುವರೆದಿದೆ….)