‘ನಾನೂ ನಿಮ್ಮ ಹಾಗೆ ಅನ್ನ ತಿನ್ನುವ ನರ ಮನುಷ್ಯ’!

೯ ಮೇ, ೨೦೦೭ರ ಲಂಕೇಶ್ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಪೂರ್ಣಚಂದ್ರ ತೇಜಸ್ವಿ ಸಂದರ್ಶನದ ಮುಂದುವರಿದ ಭಾಗ. ಹಿಂದಿನ ಪ್ರಶ್ನೋತ್ತರಕ್ಕೆ ಇಲ್ಲಿ ಭೇಟಿ ನೀಡಿ.

ಪ್ರಶ್ನೆ: ವಿಜ್ಞಾನದ ವಿದ್ಯಾರ್ಥಿಯಲ್ಲದ ನೀವು ವಿಜ್ಞಾನದ ವಿಸ್ಮಯಗಳಿಗೆ ಗಂಟುಬಿದ್ದಿದ್ದು ಹೇಗೆ?

ಪೂಚಂತೇ: ವಿಜ್ಞಾನದ ವಿಸ್ಮಯಗಳಿಗೆ ನಾನು ಗಂಟು ಬಿದ್ದಿದ್ದೀನನ್ನೋದು ಸಂಪೂರ್ಣ ತಪ್ಪು. ಅಲ್ಲಯ್ಯ! ತನ್ನ ಪಾಡಿಗೆ ತಾನಿರುವ, ಇದ್ದುದನ್ನು ಇದ್ದ ಹಾಗೆ, ಕಂಡುದನ್ನು ಕಂಡ ಹಾಗೆ ನೋಡುವ ಮತ್ತು ಹೇಳುವ ಮನುಷ್ಯ ಇರಬೇಕಾದುದೇ ಹೀಗಲ್ಲವೆ? ಬೋಗಸ್ ಜನಿವಾರ, ಉಡುದಾರ, ಶಿವದಾರಗಳನೆಲ್ಲ ಮಹಾಮಹಾ ಸಂಕೇತಗಳೆಂದು ಕತೆ ಬರೆಯುವವರಿಗೆ ಬೇಕಿದ್ದರೆ ಗಂಟುಬಿದ್ದವರೆಂದು ಹೇಳು. ನಾನು ನಿನ್ನ ಹಾಗೇ ಅನ್ನ ತಿನ್ನುವ ನರ ಮನುಷ್ಯ. ನನ್ನ ಅನುಭವಗಳನ್ನೂ, ನನ್ನ ಅನುಭವಕ್ಕೆ ನಿಲುಕಿದ ಸತ್ಯಗಳನ್ನೂ ನಿನಗೆ ಹೇಳುತ್ತಿದ್ದೇನಷ್ಟೇ ಹೊರತು, ನನ್ನ ಬರವಣಿಗೆಗೆ ಒಂದು ಹಣೆಪಟ್ಟಿ ಖಂಡಿತ ಅನವಶ್ಯಕ. ನಾನು ವೈಜ್ಞಾನಿಕ ಬರಹಗಾರನಂತೂ ಅಲ್ಲ. ನನ್ನಂಥ ಕಥೆಗಾರನೊಬ್ಬ ಮಿಸ್ಸಿಂಗ್ ಲಿಂಕ್ ನಂಥ ಮಾನವಶಾಸ್ತ್ರದ ಪುಸ್ತಕವನ್ನಾಗಲೀ ವಿಸ್ಮಯದಂಥ ಇಕಾಲಜಿ ಮೇಲಿನ ಪುಸ್ತಕವಾಗಲೀ ಬರೆಯಬೇಕಾಗಿ ಬಂದದ್ದು ಕನ್ನಡ ಸಾಹಿತ್ಯದ ದುರಂತ ಪರಿಸ್ಥಿತಿಯನ್ನು ತೋರಿಸುತ್ತದೆ. ಆಯಾ ಕ್ಷೇತ್ರಗಳಲ್ಲಿರುವ ಪ್ರತಿಭಾವಂತರಿಗೆ ತಮ್ಮ ಕ್ಷೇತ್ರದ ಜ್ಞಾನವನ್ನು ಇತರರೊಡನೆ ಹಂಚಿಕೊಳ್ಳಬೇಕೆಂಬ ದೊಡ್ಡತನ ಇಲ್ಲ. ಅವರ ತಲೆಯೆಲ್ಲಾ ಹೇಗಾದರೂ ಮಾಡಿ ವೀಸಾ ಗಿಟ್ಟಿಸಿ ವಿದೇಶಕ್ಕೆ ಹೋಗಿ ನೆಲೆಸುವುದರ ಕಡೆಗೇ ಇರುತ್ತದೆ. ಹೀಗಾಗಿ ಅವರಂತೂ ಪುಸ್ತಕ ಬರೆಯುವುದಿಲ್ಲ. ಮಿಕ್ಕ ಎರಡನೇ ಮೂರನೇ ದರ್ಜೆಯವರಿಗೆ ಅವರಿಗೇ ಅವರ ವಿಷಯಗಳಾಲ್ಲಿ ಆಸಕ್ತಿ ಇರುವುದಿಲ್ಲ. ಇನ್ನು ಇತರರಿಗೆ ಆಸಕ್ತಿ ಹುಟ್ಟುವಂತೆ ಹೇಗೆ ತಾನೆ ಅವರು ಬರೆಯುತ್ತಾರೆ? ಇದರಿಂದಾಗಿಯೇ ಕೆಟ್ಟ ವೈಜ್ಞಾನಿಕ ಪುಸ್ತಕಗಳ ಗೊಬ್ಬರದ ಗುಂಡಿಯೇ ನಮ್ಮಲ್ಲಿ ನಿರ್ಮಾಣವಾಗಿದೆ. ಸರ್ಕಾರಿ ಸ್ಕೀಮುಗಳು, ಬಲ್ಕ್ ಪರ್ಚೇಸ್‌ಗಳು, ಇಲ್ಲಿಗೆ ಇವನ್ನೆಲ್ಲ ಸುರಿದು ಅಧಿಕಾರಿಗಳೂ ಪ್ರಕಾಶಕರೂ ಕೊಳ್ಳೆ ಹಂಚಿಕೊಳ್ಳುತ್ತಾ ಕಾಲಾಯಾಪನೆ ಮಾದುತ್ತಿದ್ದಾರೆ. ಈ ಲೋಫರ್‌ಗಳ ಬಳಗಕ್ಕೆ ಸೇರುವುದರ ಬದಲು ಹಸ್ತ ಸಾಮುದ್ರಿಕ, ಪಂಚಾಂಗ ಬರೆದು ಬದುಕುವುದು ಒಳಿತು.