ತೇಜಸ್ವಿ ಚಿಂತನೆಗಳು

ಪೂರ್ಣಚಂದ್ರ ತೇಜಸ್ವಿ, ಇಂದಿನ ತಲೆಮಾರಿನ ಬಹುತೇಕ ಬರಹಗಾರರ ಹಾಗೇ ಓದುಗರ ಅತ್ಯಂತ ಪ್ರೀತಿಯ ಲೇಖಕ. ಸುಮ್ಮನೆ ಅಲ್ಲ, ಈ ಜನಪ್ರೀತಿಗೆ ಅವರು ತಕ್ಕವರು ಕೂಡ. ತೇಜಸ್ವಿ ಚಿಂತನೆಗಳು, ನೇರವಂತಿಕೆ, ಜೀವನೋತ್ಸಾಹ, ಪ್ರಯೋಗಶೀಲತೆ, ಬರಹದ ಧಾಟಿ- ಎಲ್ಲವೂ ವಿಶಿಷ್ಟ ಮತ್ತು ಆಪ್ತ. ಭಾರೀ ಭಾರೀ ಶಬ್ದಗಳ ವಜೆಯಿಲ್ಲದೆ ಸಾಮಾನ್ಯರಿಗೂ ಸುಲಭವಾಗಿ ಅರ್ಥವಾಗಬಲ್ಲಷ್ಟು ಸರಾಗ.

ತೇಜಸ್ವಿ ಲೇಖನಗಳು ಹಾಗೂ ಸಂದರ್ಶನಗಳ ಸಂಕಲನ ‘ವಿಮರ್ಶೆಯ ವಿಮರ್ಶೆ’ ಓದುವಾಗ, ಅದರಲ್ಲಿನ ಕೆಲ ಭಾಗಗಳನ್ನು ಇಲ್ಲಿ ಹಾಕಿದರೆ ಚೆನ್ನ ಎನಿಸಿತು.  ಅದರಲ್ಲೂ ಸಂದರ್ಶನದ ಭಾಗಗಳನ್ನು. ಸಾಹಿತ್ಯ ಎಂದರೆ, ಸಾಹಿತಿ ಎಂದರೆ ಕೇವಲ ಕಥೆ- ಕವನಗಳ ಓದು ಮತ್ತು ಬರಹವಲ್ಲ ಅನ್ನೋದು ನನ್ನ ಆಲೋಚನೆ. ಸಮಾಜಮುಖಿಯೂ ಪ್ರಗತಿಶೀಲವೂ ಆಗಿರುವ ಕಳಕಳಿಯುಳ್ಳ ಸಾಹಿತ್ಯ ದೀರ್ಘಕಾಲ ಬಾಳುತ್ತದೆ ಮತ್ತು ಅಂಥ ಸಾಹಿತಿ ದೀರ್ಘಾಯುಷಿಯಾಗಿರುತ್ತಾನೆ. ನಮ್ಮ ನಮ್ಮ ಓದಿನ ಸುಖಕ್ಕೆ, ಆ ಹೊತ್ತಿನ ಸಂತೋಷಕ್ಕೆ ಬರೆದುಕೊಳ್ಳುವುದು ತಪ್ಪೇನಲ್ಲ. ಆದರೆ, ಅದರ ಒಟ್ಟಾರೆ ಕೊಡುಗೆ ಬಹಳ ದಿನ ಉಳಿಯುವಂಥದಲ್ಲ ಎಂದೆಲ್ಲ ಚಿಂತಿಸುವ ಈ ಭಾಷಣ ಒತ್ತಟ್ಟಿಗಿರಲಿ, ತೇಜಸ್ವಿಯವರ ಸಂದರ್ಶನದ ಈ ಭಾಗವನ್ನೋದಿ. ಕಂತುಗಳಲ್ಲಿ ಇದರ ಪೂರ್ಣ ಪಾಠವನ್ನು ಹಾಕಲಾಗುವುದು.

(9 ಮೇ, 2007ರ ಲಂಕೇಶ್ ಪತ್ರಿಕೆಯಲ್ಲಿ ಪ್ರಕಟವಾದ ಸಂದರ್ಶನ)

ಪ್ರ: ಕಾರಂತರ ಜೀವನ, ‘ಕುವೆಂಪು ಕಲಾ ಸೃಷ್ಟಿ’, ಲೋಹಿಯಾರ ತತ್ತ್ವ ಚಿಂತನೆ- ಈ ಮೂರು ನಿಮ್ಮ ಬರವಣಿಗೆಗೆ ಸಹಾಯಕವಾಗುವ ದಿಕ್ಸೂಚಿಗಳು ಅಂದಿದ್ದೀರಿ. ಇವತ್ತಿಗೂ ಈ ಅಂಶಗಳನ್ನು ಸಮರ್ಥಿಸುತ್ತೀರ?

ಪೂಚಂತೇ: ಕಾರಂತರ ಜೀವನದ ಪ್ರಯೋಗಶೀಲತೆ, ಕುವೆಂಪುರವ್ರ ಕಲಾ ಸೃಷ್ಟಿ, ಲೋಹಿಯಾ ತತ್ತ್ವ ಚಿಂತನೆ. ಇವು ಮೂರೂ ನನ್ನ ಮುಂದಿನ ಬರವಣಿಗೆಯ ದಿಕ್ಸೂಚಿಗಳೆಂದು ಅವತ್ತು ನಾನು ಹೇಳಿದ್ದು. ಈ ಮೂರು ಅಂಶಗಳ ಪ್ರಭಾವ ನನ್ನ ಬರವಣಿಗೆಯಲ್ಲೂ, ಬದುಕಿನಲ್ಲೂ ಇವತ್ತಿಗೂ ನೀವು ಕಾಣಬಹುದಲ್ಲವೆ? ಭಾರತದ ತತ್ತ್ವಶಾಸ್ತ್ರ ಪರಂಪರೆ ಆಯಾ ಜಾತಿಯಲ್ಲ್ ಮತ್ತು ಮಠಗಳ ದೆಸೆಯಿಂದ ಬಹು ಹಿಂದೆಯೇ ಕೊನೆಯುಸಿರೆಳೆದವು. ರಾಧಾಕೃಷ್ಣನ್, ಹಿರಿಯಣ್ಣಯ್ಯ ಇವರನ್ನೆಲ್ಲ ತತ್ತ್ವಜ್ಞಾನಿಗಳೆಂದು ಹೊಗಳುತ್ತಾರೆ. ಇವರನ್ನೆಲ್ಲ ಬಾಷ್ಯಕಾರರೆಂದು ಕರೆಯಬಹುದೆ ವಿನಾ ತತ್ತ್ವ ಮೀಮಾಂಸಕರೆಂದು ಕರೆಯಲು ಸಾಧ್ಯವಿಲ್ಲ. ಭಾರತದ ಈಚಿನ ವರ್ಷಗಳಲ್ಲಿ ಸೃಷ್ಟಿಸಿದ ಒರಿಜಿನಲ್ ತತ್ತ್ವ ಮೀಮಾಂಸಕ ಎಂದರೆ ಲೋಹಿಯಾ ಎಂದೇ ನನ್ನ ಭಾವನೆ. ಗಾಂಧೀಜಿಯ ಧ್ಯೇಯ ಧೋರಣೆಗಳನ್ನು ತಾತ್ತ್ವಿಕ ದೃಷ್ಟಿ ಕೋನದಿಂದ ಚರ್ಚಿಸಿ ಅದಕ್ಕೊಂದು ಸೈದ್ಧಾಂತಿಕ ದೃಷ್ಟಿಕೋನ ನೀಡಿದ್ದೇ ಲೋಹಿಯಾ. ನಮ್ಮ ದೇಶದ ಕಳ್ಳ ಗಾಂಧೀವಾದಿಗಳನ್ನೇ ಗಾಂಧೀ ವಕ್ತಾರರೆಂದು ತಿಳಿದಿದ್ದ ನನಗೆ ಲೋಹಿಯಾ ಓದುವವರೆಗೂ ಗಾಂಧಿ ಬಗ್ಗೆ ಅಪಾರ ತಿರಸ್ಕಾರವೇ ಇತ್ತು. ಹಾಗಾಗಿ ಗಾಂಧಿ ಬಗ್ಗೆ ಇವತ್ತು ಮಾಯಾವತಿಯಾಗಲೀ ಕಾನ್ಶೀರಾಮ್ ಆಗಲೀ ತಿರಸ್ಕಾರದ ಮಾತಾಡಿದರೆ ಅದು ಸಹಜವೇ ಅನಿಸುತ್ತದೆ.

(ಮುಂದುವರೆಯುವುದು…)